ಶಿವಮೊಗ್ಗದಲ್ಲಿ ಕಡಿಮೆಯಾದ ಪ್ರವಾಹ ಸ್ಥಿತಿ: ಬೀದಿಗೆ ಬಂದ ಬಡ ಕುಟುಂಬಗಳ ಬದುಕು

Update: 2019-08-11 16:30 GMT

ಶಿವಮೊಗ್ಗ, ಆ. 11: ಭಾರೀ ಮಳೆ, ತುಂಗಾ ನದಿಯ ಪ್ರವಾಹ, ರಾಜಕಾಲುವೆ, ಚರಂಡಿಗಳು ಉಕ್ಕಿ ಹರಿದಿದ್ದರಿಂದ ಶನಿವಾರ ಸಂಪೂರ್ಣ ಜಲಾವೃತವಾಗಿದ್ದ ಶಿವಮೊಗ್ಗ ನಗರದ ಹಲವು ಬಡಾವಣೆಗಳು ಭಾನುವಾರ ಸಹಜ ಸ್ಥಿತಿಗೆ ಮರಳುತ್ತಿವೆ. ವಿವಿಧೆಡೆ ಸ್ಥಗಿತಗೊಂಡಿದ್ದ ಸಂಚಾರ ವ್ಯವಸ್ಥೆ ಪುನಾರಂಭಗೊಂಡಿದೆ. ಆದರೆ ಪ್ರವಾಹವು ಹಲವು ಬಡ ಕುಟುಂಬಗಳನ್ನು ಬೀದಿ ಪಾಲಾಗುವಂತೆ ಮಾಡಿದೆ.

ಶನಿವಾರ ರಾತ್ರಿಯಿಂದ ನಗರದಲ್ಲಿ ಮುಂಗಾರು ಮಳೆ ಆರ್ಭಟ ಕಡಿಮೆಯಾಗಿದೆ. ಭಾನುವಾರ ಕೂಡ ವರ್ಷಧಾರೆಯ ಅಬ್ಬರ ಸಂಪೂರ್ಣ ಕಡಿಮೆಯಾಗಿದೆ. ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಉಳಿದಂತೆ ಒಣ ಹವೆಯಿದೆ. ಮತ್ತೊಂದೆಡೆ ಗಾಜನೂರಿನ ತುಂಗಾ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ಕೂಡ ಕಡಿಮೆಯಾಗಿದೆ. ಇದರಿಂದ ನಗರದಲ್ಲಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಸಿದ್ದ ತುಂಗಾ ನದಿಯು ಶಾಂತ ಸ್ಥಿತಿಗೆ ಮರಳುತ್ತಿದೆಯಾದರೂ, ಹರಿವು ಕಡಿಮೆಯಾಗಿಲ್ಲ. ಮಂಜುನಾಥ ಟಾಕೀಸ್ ಚಿತ್ರಮಂದಿರ ಸುತ್ತಮುತ್ತಲಿನ ಬಡಾವಣೆಗಳಲ್ಲಿ ರಸ್ತೆಗಳ ಜಲಾವೃತ ಸ್ಥಿತಿ ಮುಂದುವರಿದಿದೆ. 

ನಗರದ ವಿವಧೆಡೆ 15 ನೆರೆ ಸಂತ್ರಸ್ತರ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಭಾನುವಾರ ಕೂಡ ಸಾವಿರಾರು ಜನರು ಈ ಕೇಂದ್ರಗಳಲ್ಲಿ ತಂಗಿದ್ದಾರೆ. ಸಂತ್ರಸ್ತರಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಮುಂದುವರಿಸಲಾಗಿದೆ.

ಜಲಾವೃತವಾಗಿದ್ದ ಪ್ರದೇಶಗಳು: ಕಳೆದ ಕೆಲ ದಿನಗಳಿಂದ ಹಾಗೂ ಶನಿವಾರ ಪ್ರಮುಖವಾಗಿ ವಿದ್ಯಾನಗರ, ಶಾಂತಿನಗರ, ಶಾಂತಮ್ಮ ಲೇಔಟ್, ಟಿಪ್ಪುನಗರ, ಹರಕೆರೆ, ಬಾಪೂಜಿನಗರ, ಗುಂಡಪ್ಪ ಶೆಡ್, ನಿಸರ್ಗ ಲೇಔಟ್, ಹಳೇ ಮಂಡ್ಲಿ, ಸವಾಯಿ ಪಾಳ್ಯ, ಭಾರತಿ ಕಾಲೋತಿ, ಕುಂಬಾರ ಬೀದಿ, ಮಂಡಕ್ಕಿ ಬಟ್ಟಿ, ಲಾಲ್ ಬಂದಕೇರಿ, ಟಿ.ಎಸ್. ರಸ್ತೆ, ರವಿವರ್ಮ ಬೀದಿ, ಸಿದ್ದಯ ರಸ್ತೆ, ಕುಂಬಾರ ಗುಂಡಿ, ಜಿ.ಪಿ.ಎನ್ ಶಾಲೆ, ವಂದನಾ ಟಾಕೀಸ್, ಬಿ.ಬಿ ಸ್ಟ್ರೀಟ್ ನದಿ ಪಕ್ಕದ ಮನೆಗಳು, ಪೆನ್ಷನ್ ಮೊಹಲ್ಲಾ, ಅಪ್ಪಾಜಿ ರಾವ್ ಕಾಂಪೊಂಡ್, ಹಳೇ ಗುಂಡಪ್ಪ ಶೆಡೆ, ಶೇಷಾದ್ರಿಪುರಂ, ಚೌಡೇಶ್ವರಿ ಕಾಲೋನಿ, ಟ್ಯಾಂಕ್ ಮೊಹಲ್ಲಾ, ಬಾಪೂಜಿ ನಗರ, ಸಿದ್ದೇಶ್ವರ ನಗರ, ವಿದ್ಯಾನಗರ ಕೆಳಭಾಗ, ಸುಭಾಷ್ ನಗರ, 

ಪ್ರಿಯಾಂಕ ಬಡಾವಣೆ, ಆರ್. ಟಿ. ಬಡಾವಣೆ, ರಾಮಯ್ಯ ಬಡಾವಣೆ, ಜ್ಞಾನ ವಿಹಾರ ಬಡಾವಣೆ, ಹೇಮಶ್ರೀ ಬಡಾವಣೆ, ಮೆಹಬೂಬ್ ನಗರ, ಮದಾರಿ ಪಾಳ್ಯ, ಪುಟ್ಟಪ್ಪ ಕ್ಯಾಂಪ್, ಇಮಾಮ್‍ಬಾಡಾ, ಸಿಗೇಹಟ್ಟಿ, ಗಾಂಧಿಬಜಾರ್ ಸುತ್ತಮುತ್ತಲಿನ ಕೆಲ ರಸ್ತೆಗಳಲ್ಲಿ ಜಲಾವೃತವಾಗಿದ್ದವು. ಪ್ರಸ್ತುತ ಈ ಪ್ರದೇಶಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ನೀರು ನುಗ್ಗಿದ್ದ ಕಾರಣದಿಂದ ಸಂತ್ರಸ್ತ ಹಾಗೂ ಇತರೆಡೆ ತಂಗಿದ್ದ ಕೆಲ ಬಡಾವಣೆಗಳ ನಿವಾಸಿಗಳು ಭಾನುವಾರ ಮನೆಗೆ ಆಗಮಿಸುತ್ತಿದ್ದಾರೆ. 

ಈ ನಡುವೆ ಮನೆಗೆ ಮರಳುತ್ತಿರುವ ನಾಗರೀಕರಿಗೆ ಮಹಾನಗರ ಪಾಲಿಕೆ ಆಡಳಿತ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ. ಮಳೆ ನಿಂತಿದೆ ಎಂದು ಮನೆಗಳಿಗೆ ತೆರಳಬಾರದು. ಸಂಪೂರ್ಣ ಸ್ಥಿತಿ ಹತೋಟಿಗೆ ಬಂದ ನಂತರ ಜನರು ಮನೆಗಳಿಗೆ ಹಿಂದಿರುಗುವಂತೆ ನಾಗರೀಕರಿಗೆ ಸಲಹೆ ಸಲಹೆ ನೀಡಲಾಗಿದೆ. 

ಭಾರೀ ನಷ್ಟ: ಭಾರೀ ಮಳೆ ಹಾಗೂ ಪ್ರವಾಹದಿಂದ ಶಿವಮೊಗ್ಗ ನಗರದಲ್ಲಿ ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ನಷ್ಟವಾಗಿದೆ. ಭಾರೀ ಸಂಖ್ಯೆಯ ಮನೆ, ವಾಣಿಜ್ಯ ಮಳಿಗೆಗಳು, ಕಟ್ಟಡಗಳಿಗೆ ನೀರು ನುಗ್ಗಿದ್ದರಿಂದ ನಷ್ಟದ ಅಂದಾಜು ಹೆಚ್ಚಾಗುವಂತೆ ಮಾಡಿದೆ. ಹಾಗೆಯೇ ನೂರಾರು ಮನೆಗಳು ಕುಸಿದು ಬಿದ್ದಿದ್ದು, ಹಲವು ಬಡ ಕುಟುಂಬಗಳು ಬೀದಿ ಪಾಲಾಗುವಂತೆ ಮಾಡಿದೆ. 

ಹಲವೆಡೆ ಜಲಾವೃತವಾದ ಮನೆಗಳಲ್ಲಿದ್ದ ದವಸ-ಧಾನ್ಯ, ಸರಕು-ಸರಂಜಾಮು, ಎಲೆಕ್ಟ್ರಾನಿಕ್ ವಸ್ತುಗಳು, ನಗನಾಣ್ಯ ಸೇರಿದಂತೆ ಹಲವು ವಸ್ತುಗಳು ಹಾನಿಯಾಗಿವೆ. ಮಳೆ ಹಾಗೂ ಪ್ರವಾಹ ಸೃಷ್ಟಿಸಿದ ಅವಾಂತರಕ್ಕೆ ಬಡ, ಮಧ್ಯಮ ವರ್ಗದವರು ಸಂಕಷ್ಟ ಪಡುವಂತಾಗಿದೆ. ಕಷ್ಟಪಟ್ಟು ಸಂಪಾದಿಸಿದ್ದು ಹಾನಿಯಾಗಿದ್ದರಿಂದ ಕಣ್ಣೀರಿಡುತ್ತಿದ್ದಾರೆ. 

ಬದುಕು ಕಟ್ಟಿಕೊಡುವತ್ತ ಆಡಳಿತ ಗಮನಹರಿಸಲಿ
ಶಿವಮೊಗ್ಗ ನಗರದ ಹಲವು ಬಡಾವಣೆಗಳಲ್ಲಿ ನೂರಾರು ಮನೆಗಳು ಉರುಳಿಬಿದ್ದಿವೆ. ಜಲಾವೃತದಿಂದ ಮನೆ, ವಾಣಿಜ್ಯ ಮಳಿಗೆಗಳಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ಭಾರೀ ನಷ್ಟವಾಗಿದೆ. ನೆರೆ ಸಂತ್ರಸ್ತರಿಗೆ ಸಮರೋಪಾದಿಯಲ್ಲಿ ಪರಿಹಾರ ಕಲ್ಪಿಸುವ ಕಾರ್ಯದತ್ತ ಆಡಳಿತ ವ್ಯವಸ್ಥೆ ಗಮನಹರಿಸಬೇಕಾಗಿದೆ. 

ನೆರೆ ಸಂತ್ರಸ್ತರಿಗೆ ನೆರವಾಗುವ ಕಾರ್ಯದಲ್ಲಿ ಆಡಳಿತ ಉತ್ತಮವಾಗಿ ಸ್ಪಂದಿಸಿದೆ. ಅದೇ ರೀತಿಯಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಂದಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಕಾಲಮಿತಿಯಲ್ಲಿ ಪುನರ್ವಸತಿ ಹಾಗೂ ಪರಿಹಾರದ ಸೌಲಭ್ಯಗಳನ್ನು ಕಲ್ಪಿಸಿ, ಸಂತ್ರಸ್ತರು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿದೆ. 

ಮಣ್ಣು-ತ್ಯಾಜ್ಯದ ರಾಶಿ!
ರಾಜಕಾಲುವೆ, ಚರಂಡಿ ಹಾಗೂ ತುಂಗಾ ನದಿ ಉಕ್ಕಿ ಹರಿದಿದ್ದರಿಂದ ಶಿವಮೊಗ್ಗ ನಗರದ ಹಲವು ಬಡಾವಣೆಗಳ ಮನೆ, ವಾಣಿಜ್ಯ ಮಳಿಗೆ, ಕಟ್ಟಡ ಹಾಗೂ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದವು. ಇದೀಗ ಜಲಾವೃತ ಸ್ಥಿತಿ ಕಡಿಮೆಯಾಗಿದೆ. ಆದರೆ ನೀರು ತುಂಬಿದ್ದ ರಸ್ತೆ ಹಾಗೂ ಮನೆಗಳಲ್ಲಿ ಮಣ್ಣು, ಕಸದ ರಾಶಿಯೇ ಕಂಡುಬರುತ್ತಿದೆ. ನಿವಾಸಿಗಳು ಮನೆ-ಕಟ್ಟಡಗಳಲ್ಲಿ ತುಂಬಿಕೊಂಡಿರುವ ತ್ಯಾಜ್ಯವನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ತಲ್ಲೀನವಾಗಿರುವುದು ಕಂಡುಬರುತ್ತಿದೆ.

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News