ಸೊಳ್ಳೆಯೆದುರು ಶರಣಾದ ಮಾನವ

Update: 2019-08-16 18:32 GMT

ಬಹುಶಃ ಈಗಲೂ ನಾವು ಹಿಂದಿನಂತೆ ಸೊಳ್ಳೆಯನ್ನು ಕೀಳಂದಾಜು ಮಾಡುತ್ತಿದ್ದೇವೆ. ಅದು ಜಾಗತಿಕವಾಗಿ ಡಿಡಿಟಿ ಎಂಬ ಅಸ್ತ್ರವನ್ನು ಪ್ರತಿರೋಧಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಮತ್ತು ತನ್ನ ಕ್ರಿಸ್‌ಪ್ರ್ ತಂತ್ರಜ್ಞಾನವನ್ನು ವಿಫಲಗೊಳಿಸಲು ಉಪಾಯವನ್ನು ಕಂಡುಕೊಳ್ಳಬಹುದು. ಅದು ಹಾಗೆ ಬದುಕುಳಿಯುವ ಶಕ್ತಿಯನ್ನು ಹೊಂದಿದೆ ಎನ್ನುವುದನ್ನು ಇತಿಹಾಸವು ನಮಗೆ ತೋರಿಸಿದೆ. ಮಿಲಿಯಾಂತರ ವರ್ಷಗಳಿಂದ ಭೂಮಿಯನ್ನು ಆಳುತ್ತಿರುವ ಅದು ರೋಗಗಳನ್ನು ಹುಟ್ಟಿಸುವ ಮೂಲಕ ಮಿಲಿಯಾಂತರ ಜನರನ್ನು ಕೊಂದಿದೆ.

ಸೊಳ್ಳೆಗಳ ಗುಂಯ್‌ಗುಡುವಿಕೆ. ಇದು 100 ಮಿಲಿಯ ವರ್ಷಗಳಿಗೂ ಅಧಿಕ ಕಾಲದಿಂದ ಈ ಭೂಮಿಯಲ್ಲಿನ ಅತ್ಯಂತ ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತಿರುವ ಶಬ್ದಗಳಲ್ಲಿ ಒಂದಾಗಿದೆ. ಗಂಡು ಸೊಳ್ಳೆಗಳು ನಿರುಪದ್ರವಿಗಳು, ರೋಗಗಳನ್ನು ತರುವುದೇ ಹೆಣ್ಣುಸೊಳ್ಳೆಗಳು. ನಿಮಗೆ ಗೊತ್ತಿಲ್ಲದೆ ನಿಮ್ಮ ಕಣಕಾಲಿನ ಮೇಲೆ ಬಂದು ಕುಳಿತುಕೊಳ್ಳುವ ಸೊಳ್ಳೆ ತನ್ನ ಬಾಯಿಯಲ್ಲಿರುವ ಎರಡು ಗರಗಸದಂತೆ ಹಲ್ಲುಗಳುಳ್ಳ ಪುಟ್ಟ ಬ್ಲೇಡ್‌ಗಳನ್ನು ಒಳತೂರಿಸಿ ಚರ್ಮವನ್ನು ಕೊರೆಯುತ್ತದೆ ಮತ್ತು ಇತರ ಎರಡು ಮೊನಚಾದ ಅಂಗಗಳು ಹೀರುನಳಿಕೆಯು ಒಳಸೇರಲು ದಾರಿಮಾಡಿಕೊಡುತ್ತವೆ. ಈ ನಳಿಕೆಯ ಮೂಲಕ ಸೊಳ್ಳೆಯು ನಿಮ್ಮ ರಕ್ತವನ್ನು ಹೀರುತ್ತದೆ, ಇದೇ ವೇಳೆ ಆರನೇ ಸೂಜಿಯು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಆ್ಯಂಟಿಕಾಗ್ಯುಲಂಟ್‌ಅಥವಾ ಪ್ರತಿಕಾಯವನ್ನು ಒಳಗೊಂಡಿರುವ ಜೊಲ್ಲನ್ನು ಒಳಗೆ ಸೇರಿಸುತ್ತದೆ. ಇದು ಸೊಳ್ಳೆಗೆ ರಕ್ತ ಹೀರಲು ಬೇಕಾದ ಅವಧಿಯನ್ನು ಕಡಿಮೆಗೊಳಿಸುತ್ತದೆ ಮತ್ತು ನೀವು ಎಚ್ಚೆತ್ತುಕೊಂಡು ಅದನ್ನು ಕೊಲ್ಲಲು ಮುಂದಾಗುವಷ್ಟರಲ್ಲಿ ಅದು ಜಾಗ ಖಾಲಿ ಮಾಡಿರುತ್ತದೆ.

ಹೆಣ್ಣು ಸೊಳ್ಳೆಗಳಿಗೆ ಅವುಗಳ ಮೊಟ್ಟೆಗಳು ಬೆಳೆಯಲು ಮಾನವ ರಕ್ತದ ಅಗತ್ಯವಿದೆ. ಸೊಳ್ಳೆಗಳು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಇಷ್ಟಪಡುತ್ತವೆ ಎಂಬಿತ್ಯಾದಿ ತಪ್ಪುಗ್ರಹಿಕೆಗಳಿವೆ. ಆದರೆ ಸೊಳ್ಳೆ ಕೆಲವು ಆಯ್ಕೆಗಳನ್ನು ಹೊಂದಿದೆ. 'ಒ' ವರ್ಗದ ರಕ್ತವು ಅದರ ನೆಚ್ಚಿನ ಆಯ್ಕೆಯಾಗಿರುವಂತಿದೆ. ದುರ್ವಾಸನೆ ಬೀರುವ ಪಾದಗಳು ಹೊರಹೊಮ್ಮುವ ಬ್ಯಾಕ್ಟೀರಿಯಾಗಳು ಸುಗಂಧ ದ್ರವ್ಯದಂತೆ ಸೊಳ್ಳೆಗಳನ್ನು ಆಕರ್ಷಿಸುತ್ತವೆ. ತನ್ನ ಕೆಲಸ ಮುಗಿದ ನಂತರ ಸೊಳ್ಳೆಯು ವಿದಾಯದ ಉಡುಗೊರೆಯಾಗಿ ಕಚ್ಚಿದ ಜಾಗದಲ್ಲಿ ದದ್ದು ಮತ್ತು ಅದರ ಜೊಲ್ಲಿನಿಂದಾದ ತುರಿಕೆಯನ್ನು ನಮಗೆ ನೀಡುತ್ತದೆ. ಇಷ್ಟೇ ಆದರೆ ಪರವಾಗಿರಲಿಲ್ಲ, ಆದರೆ ಅದು ಮಲೇರಿಯಾ, ಝಿಕಾ, ವೆಸ್ಟ್ ನೈಲ್, ಡೆಂಗ್ ಮತ್ತು ಪೀತ ಜ್ವರದಂತಹ ಹಲವಾರು ಮಾರಕ ರೋಗಗಳ ಸೋಂಕನ್ನೂ ವಿಶೇಷ ಉಡುಗೊರೆಯಾಗಿ ನಮಗೆ ನೀಡುತ್ತದೆ.

ಸೊಳ್ಳೆಗಳು ಪರಭಕ್ಷಕ ಕೀಟಗಳಾಗಿದ್ದು, ಈ ಭೂಮಿಯಲ್ಲಿ ಮಾನವನನ್ನು ಅತ್ಯಂತ ಹೆಚ್ಚಾಗಿ ಬೇಟೆಯಾಡುವ ಅನಿಷ್ಟಗಳಾಗಿವೆ. 100 ಲಕ್ಷ ಕೋಟಿ ಅಥವಾ ಅದಕ್ಕೂ ಹೆಚ್ಚಿನ ಸೊಳ್ಳೆಗಳು ಪ್ರತಿನಿತ್ಯ ಭೂಮಿಯ ಇಂಚಿಂಚಿನಲ್ಲಿ ಮಾನವ ರಕ್ತಕ್ಕಾಗಿ ಹೊಂಚು ಹಾಕುತ್ತಿರುತ್ತವೆ ಮತ್ತು ವಾರ್ಷಿಕ ಸುಮಾರು ಏಳು ಲಕ್ಷ ಜನರನ್ನು ಬಲಿ ತೆಗೆದುಕೊಳ್ಳುತ್ತವೆ. ಎರಡು ಲಕ್ಷ ವರ್ಷಗಳಿಗೂ ಹಿಂದೆ ಭೂಮಿಯು ಅಸ್ತಿತ್ವಕ್ಕೆ ಬಂದಾಗಿನಿಂದ ವಾಸವಿದ್ದಿರಬಹುದಾದ 108 ಶತಕೋಟಿ ಜನರ ಪೈಕಿ ಅರ್ಧದಷ್ಟು ಜನರನ್ನು ಸೊಳ್ಳೆಗಳೇ ಕೊಂದಿರಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.

ಒಂಟಿಯಾಗಿ ಹಾರಾಡುವ ಸೊಳ್ಳೆ ಯಾರಿಗೂ ನೇರವಾಗಿ ಹಾನಿಯನ್ನುಂಟು ಮಾಡುವುದಿಲ್ಲ. ಅದು ಹಬ್ಬಿಸುವ ರೋಗಗಳು ಅಂತ್ಯವಿಲ್ಲದ ಸಾವಿನ ಸರಣಿಗಳಿಗೆ ಕಾರಣವಾಗುತ್ತವೆ. ಸೊಳ್ಳೆಯಿಲ್ಲದೆ ರೋಗಕಾರಕಗಳು ಮಾನವ ಶರೀರವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಸೊಳ್ಳೆಯ ಪ್ರಸ್ತಾಪವಿಲ್ಲದೆ ಮಾನವನ ಇತಿಹಾಸಕ್ಕೆ ಯಾವುದೇ ಮಾನ್ಯತೆಯಿಲ್ಲ.

ಸೊಳ್ಳೆ ಮತ್ತು ಅದು ಉಂಟು ಮಾಡುವ ರೋಗಗಳು ಈ ಜಗತ್ತಿನಲ್ಲಿ ಯಾರನ್ನೂ ಬಿಟ್ಟಿಲ್ಲ, ಅವು ವ್ಯಾಪಾರಿಗಳು, ಪ್ರವಾಸಿಗಳು, ಸೈನಿಕರು, ವಸಾಹತುಶಾಹಿಗಳು ಮತ್ತು ಅವರ ಗುಲಾಮರೊಂದಿಗೆ ವಿಶ್ವಾದ್ಯಂತ ಸಾಗಿಬಂದಿವೆ ಮತ್ತು ಯಾವುದೇ ಶಸ್ತ್ರಾಸ್ತ್ರಗಳು, ವಿಷಕಾರಿ ರಾಸಾಯನಿಕಗಳು ಇತ್ಯಾದಿಗಳಿಗಿಂತ ಹೆಚ್ಚು ಮಾರಣಾಂತಿಕವಾಗಿವೆ.

ಇಟಲಿಯ ರೋಮ್ ಸಮೀಪದ ಪೊಂಟೈನ್ ಮಾರ್ಷಸ್ ಪ್ರದೇಶದಲ್ಲಿಯ ಸೊಳ್ಳೆಗಳು ರೋಮನ್ ಸಾಮ್ರಾಜ್ಯದ ಏಳುಬೀಳುಗಳಿಗೆ ಕಾರಣವಾಗಿದ್ದವು. ವಿಸಿಗೋತ್, ಹನ್ ಮತ್ತು ವಾಂಡಾಲ್ ಜನಾಂಗಗಳು ಸೊಳ್ಳೆಗಳಿಗೆ ಹೆದರಿಕೊಂಡೇ ಆಕ್ರಮಣಗಳಿಂದ ಹಿಂದೆಗೆದಿದ್ದವು. ಆರಂಭದಲ್ಲಿ ಹೊರಗಿನಿಂದಲೇ ರೋಮ್‌ನ ರಕ್ಷಣೆಯನ್ನು ಮಾಡಿದ್ದ ಸೊಳ್ಳೆಗಳು ಅಂತಿಮವಾಗಿ ರೋಮ್ ನಗರವನ್ನು ಪ್ರವೇಶಿಸಿದ್ದವು. ಆಕ್ರಮಣಕಾರರನ್ನು ರೋಗಗಳಿಗೆ ಗುರಿಯಾಗಿಸುವ ಮೂಲಕ ಈ ಪವಿತ್ರ ಭೂಮಿಯನ್ನು ಅವರಿಂದ ರಕ್ಷಿಸಿದ್ದವು.

ಐರೋಪ್ಯ ಸೈನಿಕರನ್ನು ಮಲೇರಿಯಾ ಮತ್ತು ಪೀತಜ್ವರಗಳಿಂದ ಬಾಧಿತರನ್ನಾಗಿಸುವ ಮೂಲಕ 18ನೇ ಶತಮಾನದ ಅಂತ್ಯ ಮತ್ತು 19ನೇ ಶತಮಾನದ ಆರಂಭದಲ್ಲಿ ಅಮೆರಿಕನ್ ಕ್ರಾಂತಿ ಸಂದರ್ಭದಲ್ಲಿ ಯಾರ್ಕ್ ಟೌನ್‌ನಲ್ಲಿ ಬ್ರಿಟಿಷರ ಶರಣಾಗತಿ ಸೇರಿದಂತೆ ಹಲವಾರು ಯಶಸ್ವಿ ದಂಗೆಗಳಿಗೆ ಬಲ ತುಂಬಿದ್ದವು.

ಅಟ್ಲಾಂಟಿಕ್ ಸಾಗರದಾಚೆಗೆ ಗುಲಾಮರ ರವಾನೆಯಲ್ಲಿಯೂ ಸೊಳ್ಳೆಗಳು ಪ್ರಮುಖ ಪಾತ್ರ ವಹಿಸಿದ್ದವು. ಏಕೆಂದರೆ ಅಮೆರಿಕದಲ್ಲಿಯ ತೋಟಗಳ ಮಾಲಕರು ಸ್ಥಳೀಯ ಗುಲಾಮರು ಅಥವಾ ಒಪ್ಪಂದದ ಮೇಲೆ ಕರೆತರಲಾಗಿದ್ದ ಐರೋಪ್ಯ ಕೆಲಸದಾಳುಗಳಿಗಿಂತ ಆಫ್ರಿಕಾದ ನಿವಾಸಿಗಳು ಸೊಳ್ಳೆಗಳಿಂದ ಉಂಟಾಗುವ ರೋಗಗಳನ್ನು ಹೆಚ್ಚು ಸಹಿಸಿಕೊಳ್ಳಬಲ್ಲರು ಎಂದು ಗಟ್ಟಿಯಾಗಿ ನಂಬಿದ್ದರು. ಅಮೆರಿಕದ ನಾಗರಿಕ ಯುದ್ಧದ ಸಂದರ್ಭದಲ್ಲಿ ಒಕ್ಕೂಟ ಪಡೆಗಳು ಮಲೇರಿಯಾದ ಔಷಧಿ ಕ್ವಿನೈನ್‌ನ ಕೊರತೆಯನ್ನು ಎದುರಿಸುತ್ತಿದ್ದವು ಮತ್ತು ಸೊಳ್ಳೆಗಳು ಗುಲಾಮಿ ಪದ್ಧತಿಯ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯುವಲ್ಲಿ ನೆರವಾಗಿದ್ದವು. ಆದರೆ ಈ ಉದಾಹರಣೆಗಳು ಸೊಳ್ಳೆಯ ಐತಿಹಾಸಿಕ ಪರಿಣಾಮದ ಮೇಲ್ಮೈ ಮೇಲಿನ ಕೇವಲ ಗೀಚುಗೆರೆಗಳಾಗಿವೆ ಅಷ್ಟೇ.

ಮಲೇರಿಯಾ ಮಾನವ ಕುಲವನ್ನು ಬಿಡದ ಪಿಡುಗಾಗಿದೆ. ವಾಲ್ಟರ್ ರೀಡ್ ಆರ್ಮಿ ಮೆಡಿಕಲ್ ಸೆಂಟರ್‌ನ ಮಲೇರಿಯಾ ತಜ್ಞರಾಗಿದ್ದ ಡಾ. ಡಬ್ಲು. ಡಿ. ಟಿಗ್ರೆಟ್ ಅವರು, ಹವಾಮಾನದಂತೆ ಮಲೇರಿಯಾ ಕೂಡ ಸದಾ ಮಾನವ ಜನಾಂಗದ ಜೊತೆಯಿರುವಂತಿದೆ ಎಂದು ಹೇಳಿದ್ದರು. 'ಹವಾಮಾನ ಕುರಿತು ಮಾರ್ಕ್ ಟ್ವೇನ್ ಹೇಳಿರುವಂತೆ ಸೊಳ್ಳೆಗಳ ಪಿಡುಗಿನ ವಿರುದ್ಧವೂ ಹೆಚ್ಚೇನೂ ಮಾಡಿದಂತಿಲ್ಲ' ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದರು. ಇಂದಿಗೂ ಪ್ರತಿವರ್ಷ 2,000 ಮಿಲಿಯಕ್ಕೂ ಅಧಿಕ ನತದೃಷ್ಟರು ಮಲೇರಿಯಾಕ್ಕೆ ತುತ್ತಾಗುತ್ತಿದ್ದಾರೆ.

ಮಲೇರಿಯಾ ಕೆಲವೊಮ್ಮೆ ಮೇಳೈಸಿದ ಮತ್ತು ಪುನರಾವರ್ತಿತ ಸ್ವರೂಪಗಳ ಲಕ್ಷಣಗಳನ್ನು ಪ್ರಕಟಿಸುತ್ತದೆ. ಚಳಿ ಮತ್ತು ನಡುಕ, ಆನಂತರ ಜ್ವರ, ತಲೆನೋವು ಮತ್ತು ವಾಂತಿ, ಅಂತಿಮವಾಗಿ ಬೆವರುವಿಕೆ ಹಂತಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಕೆಲ ಕಾಲ ವಿಶ್ರಾಂತಿಯ ಬಳಿಕ ಇದು ಪುನರಾವರ್ತನೆಗೊಳ್ಳುತ್ತದೆ. ಹಲವರಲ್ಲಿ, ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಲ್ಲಿ ಮಲೇರಿಯಾ ಅಂಗಾಂಗ ವೈಫಲ್ಯ, ಕೋಮಾ ಮತ್ತು ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ.

ಸೊಳ್ಳೆಗಳು ಮಲೇರಿಯಾದ ಜೊತೆಗೆ ಡೆಂಗ್, ವೆಸ್ಟ್ ನೈಲ್, ಝಿಕಾ ಮತ್ತು ಮಿದುಳು ಜ್ವರದಂತಹ ಹಲವಾರು ರೋಗಗಳ ವೈರಸ್‌ಗಳ ವಾಹಕಗಳೂ ಆಗಿವೆ. ಈ ರೋಗಗಳು ಮನುಷ್ಯರನ್ನು ದುರ್ಬಲಗೊಳಿಸುತ್ತವೆ, ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮಾರಣಾಂತಿಕವಲ್ಲ. ಪೀತಜ್ವರವು ವೈರಸ್ ಸೋಂಕಲ್ಲ, ಅದು ಸನ್ನಿಜ್ವರ, ಯಕೃತ್ತಿಗೆ ಹಾನಿ, ಬಾಯಿ, ಮೂಗು ಮತ್ತು ಕಣ್ಣುಗಳಿಂದ ರಕ್ತಸ್ರಾವ ಹಾಗೂ ಕೋಮಾ ಸ್ಥಿತಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಸಾವನ್ನೂ ತರುತ್ತದೆ.

ಇಂದು ವಿಶ್ವದಲ್ಲಿ ಸುಮಾರು ನಾಲ್ಕು ಶತಕೋಟಿ ಜನರು ಸೊಳ್ಳೆಗಳಿಂದ ಉಂಟಾಗುವ ರೋಗಗಳ ಅಪಾಯವನ್ನೆದುರಿಸುತ್ತಿದ್ದಾರೆ. ನಮ್ಮ ಪೂರ್ವಜರು ಹೇಳಿರುವಂತೆ ಸೊಳ್ಳೆಗಳೊಂದಿಗೆ ನಮ್ಮ ಹೋರಾಟವು ಸದಾ ಸಾವು-ಬದುಕಿನ ಪ್ರಶ್ನೆಯಾಗಿದೆ. ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಏನಾದರೂ ಮಾಡಲೇಬೇಕಾದ ಅನಿವಾರ್ಯತೆ ಆರಂಭವಾಗಿದೆ. ''ಸಸ್ಯಗಳು ಮತ್ತು ಪ್ರಾಣಿಗಳ ಕುರಿತು ನಮ್ಮ ಧೋರಣೆ ಸಂಕುಚಿತವಾಗಿದೆ. ಯಾವುದೇ ಕಾರಣಕ್ಕೆ ಯಾವುದೇ ಸಸ್ಯ ಅಥವಾ ಪ್ರಾಣಿಯ ಅಸ್ತಿತ್ವವನ್ನು ನಾವು ಬಯಸದಿದ್ದರೆ ತಕ್ಷಣ ನಾವು ಅದರ ವಿನಾಶಕ್ಕೆ ಮುಂದಾಗುತ್ತೇವೆ''ಎಂದು ರಾಷೆಲ್ ಕಾರ್ಸನ್ ತನ್ನ 'ಸೈಲೆಂಟ್ ಸ್ಪ್ರಿಂಗ್'ನಲ್ಲಿ ಬರೆದಿದ್ದಾರೆ. ಆಕೆ ಈ 'ತಕ್ಷಣ' ಎನ್ನುವುದರ ಅರ್ಥಕ್ಕೆ ಇನ್ನಷ್ಟು ವೇಗ ನೀಡುವ ವಂಶವಾಹಿ ಪರಿಷ್ಕರಣೆ ತಂತ್ರಜ್ಞಾನ 'ಕ್ರಿಸ್‌ಪ್ರ್'ನ ಆಗಮನವನ್ನು ಆಗ ಖಂಡಿತ ನಿರೀಕ್ಷಿಸಿರಲಿಲ್ಲ.

2012ರಲ್ಲಿ ಆವಿಷ್ಕಾರಗೊಂಡ ಕ್ರಿಸ್‌ಪ್ರ್ ತಂತ್ರಜ್ಞಾನದಲ್ಲಿ ವಂಶವಾಹಿಯ ಡಿಎನ್‌ಎದ ಒಂದು ಭಾಗವನ್ನು ತೆಗೆದು ಬದಲಿಗೆ ಬೇರೊಂದನ್ನು ಸೇರಿಸಿ ಡಿಎನ್‌ಎ ಅನ್ನು ಖಾಯಂ ಆಗಿಬದಲಿಸಲಾಗುತ್ತದೆ. ಇದು ಮಾನವನಿಗೆ ಬೇಡವಾದ ಯಾವುದೇ ಪ್ರಾಣಿ/ಸಸ್ಯ ಜಾತಿಯನ್ನು ಅಳಿಸಿಹಾಕಲು ಅವಕಾಶ ನೀಡುವುದರಿಂದ ಇದನ್ನು 'ಅಳಿವಿನ ಯಂತ್ರ' ಎಂದು ಬಣ್ಣಿಸಲಾಗಿದೆ. ಬಂಜೆ ಸಂತಾನಗಳನ್ನು ಉತ್ಪತ್ತಿ ಮಾಡುವ ಸೊಳ್ಳೆಗಳನ್ನು ವಿನ್ಯಾಸಗೊಳಿಸಲು ಕ್ರಿಸ್‌ಪ್ರ್ ಅನ್ನು ಬಳಸಲಾಗಿದೆ. ಇಂತಹ ಸೊಳ್ಳೆಗಳನ್ನು ವನ್ಯಪ್ರದೇಶದಲ್ಲಿ ಬಿಟ್ಟರೆ ಮೂಲ ಸೊಳ್ಳೆಗಳ ಜಾತಿಯೇ ಅಳಿಸಿಹೋಗುತ್ತದೆ ಮತ್ತು ಮಾನವಕುಲಕ್ಕೆ ಇನ್ನೆಂದೂ ಸೊಳ್ಳೆ ಕಡಿತದ ಭೀತಿಯಿರುವುದಿಲ್ಲ ಮತ್ತು ವೈಜ್ಞಾನಿಕ ಕಥೆಯೊಂದು ನಿಜಕ್ಕೂ ಸಾಕಾರಗೊಂಡಂತಾಗುತ್ತದೆ.

''ನಾವು ಜೀವಗೋಳವನ್ನು, ಉಣ್ಣೆಯಿಂದ ಕೂಡಿದ ಮಹಾಗಜದಿಂದ ಹಿಡಿದು ಕಚ್ಚದ ಸೊಳ್ಳೆಗಳವರೆಗೆ, ನಮಗೆ ಬೇಕಾದಂತೆ ಮರುಸೃಷ್ಟಿಸಬಹುದು'' ಎನ್ನುತ್ತಾರೆ ಸ್ಟಾನ್‌ಫೋರ್ಡ್ ವಿವಿಯ ಸೆಂಟರ್ ಫಾರ್ ಲಾ ಆ್ಯಂಡ್ ಬಯೊಸೈನ್ಸಸ್‌ನ ನಿರ್ದೇಶಕ ಹೆನ್ರಿ ಗ್ರೀಲಿ. ''ಅದರ ಬಗ್ಗೆ ನಮಗೆ ಏನು ಅನಿಸುತ್ತದೆ? ನಾವು ನಿಸರ್ಗದಲ್ಲಿ ಬದುಕಲು ಬಯಸಿದ್ದೇವೆಯೇ ಅಥವಾ ಡಿಸ್ನಿಲ್ಯಾಂಡ್‌ನಲ್ಲೇ?'' ಎನ್ನುವುದು ಈಗ ಕಾಡುತ್ತಿರುವ ಪ್ರಶ್ನೆ.

ನಮಗಿನ್ನೂ ಪೂರ್ಣವಾಗಿ ತಿಳಿದಿಲ್ಲವಾದರೂ ನಾವು ಏನನ್ನು ಬಯಸುತ್ತಿದ್ದೇವೆ ಎಂಬ ಬಗ್ಗೆ ಎಚ್ಚರಿಕೆಯಿಂದಿರಲು ನಮಗೆ ಸಕಾರಣಗಳೂ ಇವೆ. ರೋಗಗಳಿಗೆ ಕಾರಣವಾಗುವ ಸೊಳ್ಳೆಗಳ ಜಾತಿಯನ್ನು ನಾವು ನಿರ್ನಾಮ ಮಾಡಿದರೂ ಪ್ರಕೃತಿಯಲ್ಲಿ ಅವುಗಳ ಸ್ಥಾನವನ್ನು ಇತರ ಜಾತಿಗಳ ಸೊಳ್ಳೆಗಳು ಅಥವಾ ಕೀಟಗಳು ತುಂಬುತ್ತವೆಯೇ? ಒಂದು ರೋಗದ ಬದಲಿಗೆ ಇನ್ನೊಂದು ರೋಗವು ಹುಟ್ಟಿಕೊಳ್ಳುವುದೇ? ಸೊಳ್ಳೆಗಳ (ಅಥವಾ ಯಾವುದೇ ಇತರ ಪ್ರಾಣಿಯ) ನಿರ್ನಾಮವು ಪ್ರಕೃತಿಯ ಜೈವಿಕ ಸಮತೋಲನದ ಮೆಲೆ ಯಾವ ಪರಿಣಾಮವನ್ನು ಬೀರುತ್ತದೆ?

ಬಹುಶಃ ಈಗಲೂ ನಾವು ಹಿಂದಿನಂತೆ ಸೊಳ್ಳೆಯನ್ನು ಕೀಳಂದಾಜು ಮಾಡುತ್ತಿದ್ದೇವೆ. ಅದು ಜಾಗತಿಕವಾಗಿ ಡಿಡಿಟಿ ಎಂಬ ಅಸ್ತ್ರವನ್ನು ಪ್ರತಿರೋಧಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಮತ್ತು ತನ್ನ ಕ್ರಿಸ್‌ಪ್ರ್ ತಂತ್ರಜ್ಞಾನವನ್ನು ವಿಫಲಗೊಳಿಸಲು ಉಪಾಯವನ್ನು ಕಂಡುಕೊಳ್ಳಬಹುದು. ಅದು ಹಾಗೆ ಬದುಕುಳಿಯುವ ಶಕ್ತಿಯನ್ನು ಹೊಂದಿದೆ ಎನ್ನುವುದನ್ನು ಇತಿಹಾಸವು ನಮಗೆ ತೋರಿಸಿದೆ. ಮಿಲಿಯಾಂತರ ವರ್ಷಗಳಿಂದ ಭೂಮಿಯನ್ನು ಆಳುತ್ತಿರುವ ಅದು ರೋಗಗಳನ್ನು ಹುಟ್ಟಿಸುವ ಮೂಲಕ ಮಿಲಿಯಾಂತರ ಜನರನ್ನು ಕೊಂದಿದೆ.

''ಮಾನವ ನಾಗರಿಕತೆಯ ಹಣೆಬರಹವನ್ನು 'ಸೊಳ್ಳೆ ಅಥವಾ ಮಾನವ?' ಎಂಬ ಸರಳ ಸಮೀಕರಣವು ನಿರ್ಧರಿಸುತ್ತದೆ'' ಎಂದು ಲಿವರ್‌ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್‌ನ ಪ್ರಥಮ ಡೀನ್ ಆಗಿದ್ದ ಡಾ.ರುಬರ್ಟ್ ಬಾಯ್ಸಾ ಅವರು 1909ರಲ್ಲಿಯೇ ಹೇಳಿದ್ದರು. ಶತಮಾನಗಳಿಂದಲೂ ನಾವು ನಮ್ಮ ಉಳಿವಿಗಾಗಿ 'ಅಷ್ಟೇನೂ ಸರಳವಲ್ಲದ' ಸೊಳ್ಳೆಯೊಂದಿಗೆ ಸಾವು-ಬದುಕಿನ ಹೋರಾಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಇತಿಹಾಸದುದ್ದಕ್ಕೂ ಈ ಹೋರಾಟದಲ್ಲಿ ಮೇಲುಗೈ ಸಾಧಿಸುವ ಅವಕಾಶ ನಮಗೆ ದೊರೆಯಲೇ ಇಲ್ಲ.

(ಟಿಮೋತಿ ಸಿ.ವೈನ್‌ಗಾರ್ಡ್ ಅವರ ಮುಂಬರುವ ಕೃತಿ 'ದಿ ಮಾಸ್ಕಿಟೊ:ಎ ಹ್ಯೂಮನ್ ಹಿಸ್ಟರಿ ಆಫ್ ಅವರ್ ಡೆಡ್ಲಿಯೆಸ್ಟ್ ಪ್ರಿಡೇಟರ್' ನಿಂದ ಉದ್ಧತ ಭಾಗ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ