ತಂತ್ರಾಂಕಣದಲ್ಲಿ ನುಡಿ ಬೇಸಾಯ

Update: 2019-08-17 18:33 GMT

ಸಮಕಾಲೀನ ಸಾಂಸ್ಕೃತಿಕ ಸಂದರ್ಭದಲ್ಲಿ ಕೃತಿ, ಕೃತಿಕಾರ ಮತ್ತು ಸಹೃದಯರನ್ನು ಒಂದೆಡೆ ಸೇರಿಸುವ ವಿನೂತನ ಪ್ರಯತ್ನವನ್ನು ಮೂಲ ಆಶಯವನ್ನಾಗಿಸಿಕೊಂಡಿರುವ ಯೋಜನೆ ‘ಬುಕ್ ಬ್ರಹ್ಮ’.
ಜಾಗತಿಕ ಭಾಷೆಗಳಲ್ಲಿ ಕನ್ನಡವನ್ನು ಒಳಗೊಂಡಂತೆ ಎಲ್ಲಾ ಭಾಷೆಗಳಲ್ಲಿಯೂ ಸಾಹಿತ್ಯಿಕ ಕೃಷಿ ಭರದಿಂದ ಸಾಗಿದೆ. ಇಂದಿನ ಯುವ ತಲೆಮಾರು ಆಧುನಿಕ ಶಿಕ್ಷಣದ ಉತ್ಪನ್ನವಾಗಿರುವುರಿಂದ ವೃತ್ತಿಯೊಂದಿಗೆ, ಬಹುತೇಕರು ಬರಹವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಎಲ್ಲಾ ಸಮುದಾಯ, ವರ್ಗ, ಅಭಿವೃದ್ಧಿಯ ಜನರು ಇಂದು ಬರಹಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಪರಸ್ಪರ ಆಲೋಚನೆ, ಚಿಂತನೆ, ಸಾತ್ವಿಕತೆ, ತಾತ್ವಿಕತೆ, ಪ್ರಶ್ನೆ, ಸಂವಾದ, ಇವೆಲ್ಲವುಗಳ ವಿನಿಮಯವಾಗುವ ಅಗತ್ಯವಿದ್ದು ಅದಕ್ಕೊಂದು ಸೂಕ್ತ ವೇದಿಕೆ ತಾಂತ್ರಿಕ ಕ್ಷೇತ್ರದ ಸಮಾನ ಮನಸ್ಸಿನ ಜನರ ತಂಡವೊಂದು ‘ಬುಕ್ ಬ್ರಹ್ಮ’ ಎನ್ನುವ ಕಾರ್ಯಯೋಜನೆಯನ್ನು ಸಿದ್ಧಪಡಿಸಿದೆ. ಇದರ ಮೂಲ ಉದ್ದೇಶ ಎಲ್ಲರ ಬರಹಗಳನ್ನು, ಎಲ್ಲರಿಗೂ ಹಂಚುವುದು.
ಕನ್ನಡ ಭಾಷೆ ಕನ್ನಡ ಸಾಹಿತ್ಯಿಕ ಪರಿಸರಕ್ಕೆ ಪೂರಕವಾಗಿ ಆರಂಭಿಸಲಾಗಿರುವ ‘ಬುಕ್ ಬ್ರಹ್ಮ’ ಯೋಜನೆಯು ಯುವ ತಲೆಮಾರನ್ನು ಒಳಗೊಂಡಂತೆ ಸಮಸ್ತರಲ್ಲಿಯೂ ಓದುವ ಅಭಿರುಚಿಯನ್ನು ಉಂಟು ಮಾಡುವ ನಿಲುವನ್ನು ಹೊಂದಿದೆ. ಕಥೆ, ಕವಿತೆ, ವಿಮರ್ಶೆ, ಭಾಷಾಶಾಸ್ತ್ರ, ವ್ಯಾಕರಣ, ನಿಘಂಟು, ರಂಗಭೂಮಿ, ಸಿನೆಮಾ, ಮಾಧ್ಯಮ, ವಿಜ್ಞಾನ, ತಂತ್ರಜ್ಞಾನ, ಧಾರ್ಮಿಕ, ಅಧ್ಯಾತ್ಮ, ಗ್ರಂಥ, ಪ್ರವಾಸ ಕಥನ, ಆತ್ಮ ಚರಿತ್ರೆ, ಮಕ್ಕಳ ಸಾಹಿತ್ಯ, ಜನಪದ, ವೈಚಾರಿಕ ಲೇಖನ, ಪ್ರಬಂಧ, ಅನುವಾದ, ಸಂಶೋಧನೆ, ಇತ್ಯಾದಿ ಆಧುನಿಕ ಕನ್ನಡ ಸಾಹಿತ್ಯ ಪ್ರಕಾರಗಳಲ್ಲದೇ ಕನ್ನಡ ಪ್ರಾಚೀನ ಸಾಹಿತ್ಯಿಕ ರೂಪಗಳಾದ ಚಂಪೂ, ರಗಳೆ, ಷಟ್ಪದಿ, ಸಾಂಗತ್ಯ, ತ್ರಿಪದಿಗಳನ್ನು ಒಳಗೊಂಡಂತೆ ಶಾಸನ ಸಾಹಿತ್ಯವನ್ನು ಸಹ ಅತ್ಯಂತ ಸುಲಭ ಮಾರ್ಗದಲ್ಲಿ ಆಸಕ್ತರಿಗೆ ಮಾಹಿತಿ ಒದಗಿಸುವ ಕಾರ್ಯವನ್ನು ಈ ಯೋಜನೆ ಮಾಡುತ್ತಿದೆ.

ಸ್ಥಳೀಯ ಭಾಷೆಗಳು ಅವಸಾನದ ಅಂಚಿನಲ್ಲಿರುವ ಸಂದರ್ಭ ದಲ್ಲಿ ಅವುಗಳಲ್ಲಿರುವ ಅಕ್ಷರ ಸಂಪತ್ತನ್ನು ಪ್ರಧಾನವಾಗಿರಿಸಿಕೊಂಡು ಜಾಗತಿಕ ಭಾಷೆಯೊಂದಿಗೆ ಸ್ಪರ್ಧೆಯೊಡ್ಡುತ್ತಿರುವುದು ಅವುಗಳ ಉಳಿವಿನ ಸಾಧನೆಯ ವ್ಯಾಪ್ತಿಯನ್ನು ಈ ಯೋಜನೆ ವಿಸ್ತರಿಸಿದೆ. ತನ್ಮೂಲಕ ಸ್ಥಳೀಯ ಭಾಷೆಯೊಂದರ ಸೊಗಡು ಮತ್ತು ಸೊಬಗು ಎರಡನ್ನೂ ಭಾಷಿಕ ವಲಯಕ್ಕೆ ಪಸರಿಸುವ ಯೋಜನೆಯ ಈ ಉದ್ದೇಶ ಸ್ವಾಗತಾರ್ಹವಾಗಿದ್ದು ಕನ್ನಡ ಭಾಷೆಗೆ ಸಂಬಂಧಿಸಿದಂತೆ ಬುಕ್ ಬ್ರಹ್ಮ ಯೋಜನೆಯು ಈಗಾಗಲೇ ಸಾಕಷ್ಟು ಶ್ರಮಿಸಿದ್ದು ಕನ್ನಡ ಸಾಹಿತ್ಯ ವಿಷಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಅಲ್ಲದೇ ಕನ್ನಡ ಸಾಹಿತ್ಯ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗುವವರಿಗೂ ಈ ಯೋಜನೆಯ ನಿಖರವಾದ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ.


‘ಬುಕ್ ಬ್ರಹ್ಮ’ ಯೋಜನೆಯಲ್ಲಿ ಯಾವೊಬ್ಬ ಉದ್ಯೋಗಿಯೂ ತಾವು ಮಾಡುವ ಕೆಲಸದಲ್ಲಿ ಬೇಸರ ಅಥವಾ ನಿರಸನ ಉಂಟಾಗಲು ಕಾರಣವಿಲ್ಲ. ಸಾಹಿತ್ಯಿಕ ಹಿನ್ನೆಲೆ ಅಥವಾ ಒಲವಿದ್ದರಂತೂ ಇಲ್ಲಿನ ಕೆಲಸ ಮತ್ತಷ್ಟು ಹಿತವೆನಿಸುತ್ತದೆ.
ನಿರಂತರ ಅಧ್ಯಯನದಲ್ಲಿ ನಿರತವಾಗುವುದ ರೊಡನೆ ಅಕ್ಷರ ಲೋಕದ ಜೊತೆಗೆ ಅವಿನಾಭಾವ ಸಂಬಂಧ ಬೆಳೆಯುತ್ತದೆ. ಬದುಕನ್ನು ಗ್ರಹಿಸುವ ವಿಧಾನ ಬದಲಾಗುತ್ತದೆ. ಬೌದ್ಧಿಕ ವಿಕಾಸಕ್ಕೆ ಬಹಳ ದೊಡ್ಡ ಪೌಷ್ಟಿಕ ಆಹಾರ ಇದರುದ್ದಕ್ಕೂ ಹರಡಿದೆ.
ಮಾತೃಭಾಷೆಯೊಂದರ ಅಧಿಕೃತ ಅನುಷ್ಠಾನದಲ್ಲಿ ತೊಡಗಿರುವ ಹೆಮ್ಮೆಯಿರುವಾಗ ಒತ್ತಡ, ಬೇಸರ, ಶ್ರಮ, ದಣಿವು, ಆಯಾಸ, ಹಸಿವು ಇದಾವ ಪದಗಳಿಗೂ ‘ಬುಕ್ ಬ್ರಹ್ಮ’ ನಿಘಂಟಿನಲ್ಲಿ ಅರ್ಥವೇ ಇರುವುದಿಲ್ಲ.
‘ಬುಕ್ ಬ್ರಹ್ಮ’ ಯೋಜನೆ ವಿಶ್ವದಾದ್ಯಂತ ಪಸರಿಸುವಂತಾಗಲು ವರ್ಬಿಂಡೆನ್ ಸಂಸ್ಥೆ ಕಾರಣ. ಸತೀಶ್ ಚಪ್ಪರಿಕೆ, ಗಿರೀಶ್ ಕೆರೋಡಿ, ವಿನಯ್ ಕುಮಾರ್ ಈ ಸಂಸ್ಥೆಯ ಸಂಸ್ಥಾಪಕರು. ವರ್ಬಿಂಡೆನ್ ಸಂಸ್ಥೆಯು ಪುಸ್ತಕದ ಆಸಕ್ತಿಯನ್ನು ಮನೆ - ಮನಗಳೆರಡರಲ್ಲಿಯೂ ತಲುಪಿಸುವುದಕ್ಕೆ ಪ್ರಮುಖ ಪಾತ್ರ ವಹಿಸುತ್ತಿದೆ. ದೇವು ಪತ್ತಾರ್ ಈ ಯೋಜನೆಯ ಸಂಪಾದಕ.
ಈ ಎಲ್ಲಾ ಕಾರಣಗಳಿಂದ ‘ಬುಕ್ ಬ್ರಹ್ಮ’ ಯೋಜನೆಯು ಈಗಾಗಲೇ ಯಶಸ್ಸಿನತ್ತ ದಾಪುಗಾಲು ಇಟ್ಟಿದೆ. ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ಜನರನ್ನು ಒಳಗೊಳ್ಳುವ ಮೂಲಕ ಈ ನಾಡಿನಲ್ಲಿ ಮತ್ತೊಂದು ಅಕ್ಷರ ಕ್ರಾಂತಿಗೆ ವೇದಿಕೆ ಕಲ್ಪಿಸುವ ಸಾಧ್ಯತೆಗಳಿವೆ. 

Writer - ಸುಮನ ನಾರಾಯಣ್

contributor

Editor - ಸುಮನ ನಾರಾಯಣ್

contributor

Similar News

ಜಗದಗಲ
ಜಗ ದಗಲ