ಮಾನವ ಹಕ್ಕುಗಳ ಹೋರಾಟಗಾರ ಶಮ್ನಾಡ್ ಬಶೀರ್

Update: 2019-08-18 06:52 GMT

               ಮೆಹ್ತಾಬ್ ಆಲಂ

ಕಳೆದ 15 ವರ್ಷಗಳಲ್ಲಿ, ಅಂದರೆ 2000ದ ಬಳಿಕ, ಸುಪ್ರೀಂ ಕೋರ್ಟ್‌ನಲ್ಲಿ ಕೇವಲ ಒಬ್ಬ ದಲಿತ ವಕೀಲ ಮಾತ್ರ ಹಿರಿಯ ವಕೀಲನಾಗಿ ಹಾಗೂ ಕೇವಲ ಇಬ್ಬರು ಮುಸ್ಲಿಮರು ಮಾತ್ರ ಹಿರಿಯ ವಕೀಲರಾಗಿ ನಿಯುಕ್ತರಾಗಿದ್ದಾರೆ. ಉತ್ತರ ಪ್ರದೇಶ, ಛತೀಸ್‌ಗಡ, ಜಾರ್ಖಂಡ್ ಅಥವಾ ಬಿಹಾರದಂತಹ ಹಿಂದುಳಿದ ರಾಜ್ಯಗಳಿಂದ ಒಬ್ಬನೇ ಒಬ್ಬ ವಕೀಲ ಈ ಹುದ್ದೆಯನ್ನು ಪಡೆದಿಲ್ಲ. ಗ್ರಾಮೀಣ ಹಿನ್ನೆಲೆಯ ವಕೀಲರುಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದ ವರದಿಯೊಂದನ್ನು ಉಲ್ಲೇಖಿಸಿದ್ದ ಶಮ್ನಾಡ್ ಈ ನಿಟ್ಟಿನಲ್ಲಿ ತನ್ನ ಶಕ್ತಿಮೀರಿ ಅಂತಹ ವಕೀಲರಿಗೆ ನ್ಯಾಯ ದೊರಕಿಸಲು ಶ್ರಮಿಸಿದ್ದರು.

ಪ್ರೊಫೆಸರ್ ಶಮ್ನಾಡ್ ಬಶೀರ್‌ರವರ ಅಕಾಲಿಕ ಸಾವು ನಮ್ಮಲ್ಲಿ ಹಲವರಿಗೆ ಸಿಡಿಲುಬಡಿದಂತೆ ಬಂದೆರಗಿದ ಆಘಾತವಾಗಿತ್ತು. ಗೆಳೆಯನೊಬ್ಬನ ನಷ್ಟವಲ್ಲದೆ, ದೇಶವು ತನ್ನ ಅತ್ಯುತ್ತಮ ಕಾನೂನು ತಜ್ಞನೊಬ್ಬನನ್ನೂ ಕಳೆದುಕೊಂಡ ಹಾಗಾಯಿತು. ಇಂಟಲೆಕ್ಚುವೆಲ್ ಪ್ರಾಪರ್ಟಿರೈಟ್ಸ್ (ಐಪಿಆರ್) ಅಥವಾ ಬೌದ್ಧಿಕ ಹಕ್ಕುಗಳಲ್ಲಿದ್ದ ವಿಶೇಷ ಪರಿಣತಿಗಾಗಿ ಜಾಗತಿಕವಾಗಿ ಪ್ರಸಿದ್ಧರಾಗಿದ್ದ ಶಮ್ನಾಡ್ ಕರ್ನಾಟಕದ ಚಿಕ್ಕಮಗಳೂರಿನ ಬಾಬಾಬುಡಾನ್‌ಗಿರಿ ಸಮೀಪ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ದಿಢೀರ್ ಸಾವು ವಿಶ್ವದಾದ್ಯಂತ ಶಿಕ್ಷಣರಂಗಕ್ಕೆ ಹಾಗೂ ಕಾನೂನಿನ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಕಾನೂನು ಹಾಗೂ ಕಾನೂನಿನ ವೃತ್ತಿಯಲ್ಲಿ ಸಮಾಜದ ಅಂಚಿನಲ್ಲಿರುವವರ ಪರವಾಗಿ ನಿರಂತರ ಹೋರಾಟ ನಡೆಸಿದವರು ಶಮ್ನಾಡ್.

ನನ್ನ ಮಟ್ಟಿಗೆ ಶಮ್ನಾಡ್ ಜಾಗತಿಕವಾಗಿ ಪ್ರಸಿದ್ಧರಾದ ಐಪಿಆರ್ ತಜ್ಞನಿಗಿಂತ ಮಿಗಿಲಾಗಿ ಓರ್ವ ಸಾಮಾಜಿಕ ನ್ಯಾಯ ಸೈನಿಕ. ಮೊದಲ ಬಾರಿ 2009ರಲ್ಲಿ ಅವರ ಬಗ್ಗೆ ನನಗೆ ತಿಳಿಯಿತು. ಆಗ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜುರವರು ನ್ಯಾಯಾಲಯದಲ್ಲಿ, ಗಡ್ಡವಿದ್ದ ಯುವಕನೊಬ್ಬನನ್ನು ತಾಲಿಬಾನ್‌ನ ಉಗ್ರಗ್ರಾಮಿಯೊಂದಿಗೆ ಹೋಲಿಸಿ ಮಾತಾಡಿದ್ದರು. ತನ್ನ ಕಾನ್ವೆಂಟ್ ಶಾಲೆಯಲ್ಲಿ ತನಗೆ ಗಡ್ಡಧರಿಸಲು ಅವಕಾಶ ನೀಡುವಂತೆ ಅನುಮತಿ ಕೊಡಬೇಕೆಂದು ಆ ವಿದ್ಯಾರ್ಥಿ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದ. ಆತನ ವಿನಂತಿಯನ್ನು ತಿರಸ್ಕರಿಸಿದ್ದ ಕಾಟ್ಜುರವರು ‘‘ನಾಳೆ ವಿದ್ಯಾರ್ಥಿಣಿಯೊಬ್ಬಳು ಬಂದು ತನಗೆ ಬುರ್ಖಾಧರಿಸಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಬಹುದು. ನಾವು ಅದಕ್ಕೆ ಅನುಮತಿ ನೀಡಲು ಸಾಧ್ಯವೇ?’’ ಎಂದು ಹೇಳಿದ್ದರು. ‘‘ಅವರ ಮಾತುಗಳು ಬೇಜವಾಬ್ದಾರಿಯ, ಸೂಕ್ಷ್ಮತೆ ಇಲ್ಲದ ಮಾತುಗಳು. ಅವರು ಓರ್ವ ನಿಷ್ಪಕ್ಷಪಾತದ ನ್ಯಾಯಾಧೀಶರಾಗಲು ಅನರ್ಹ’’ ಎಂದು ಶಮ್ನಾಡ್ ತನ್ನ ಬ್ಲಾಗ್‌ನಲ್ಲಿ ಬರೆದಿದ್ದರು. ವರ್ಷಗಳು ಉರುಳಿದವು. ಅವರು ಬರೆಯುತ್ತಿದ್ದ ಒಳನೋಟ ಗಳಿಂದ ಕೂಡಿದ ಲೇಖನಗಳನ್ನು ನಾನು ಓದುತ್ತಾ ಹೋದೆ. ಅವರು ಕಾನೂನು, ಸರಕಾರದ ನೀತಿ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಬರೆಯುತ್ತಿದ್ದರು. ಅವರು ಕಾನೂನು ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸಿ ವಿವಿಧತೆಯನ್ನು ಹೆಚ್ಚಿಸುವುದು. ಇನ್‌ಕ್ರೀಸಿಂಗ್ ಡೈವರ್ಸಿಟಿ ಬೈ ಇನ್‌ಕ್ರೀಸಿಂಗ್ ಆಕ್ಸೆಸ್ ಟು ಲೀಗಲ್ ಎಜುಕೇಶನ್ ( ಐಡಿಐಎ)ಯ ಹಿಂದಿನ ಚಾಲಕ ಶಕ್ತಿಯಾಗಿದ್ದರು. ಹಾಗೆಯೇ ಭಾರತದಲ್ಲಿ ಮುಸ್ಲಿಮರಿಗೆ ಕಾನೂನು ಶಿಕ್ಷಣದ ಅವಕಾಶವನ್ನು ಹೆಚ್ಚಿಸುವುದು (ಆಕ್ಸೆಸ್ ಟು ಲೀಗಲ್ ಎಜುಕೇಶನ್ ಫಾರ್ ಮುಸ್ಲಿಮ್ಸ್ ಇನ್ ಇಂಡಿಯಾ) (ಎಎಲ್‌ಇಎಮ್ ಇಂಡಿಯಾ) ಕೂಡ ಅದರ ಕಾಳಜಿಯ ಕ್ಷೇತ್ರವಾಗಿತ್ತು. ಐಡಿಐಎ ದೇಶದ ಮೂಲೆ ಮೂಲೆಗಳನ್ನೂ ತಲುಪುವಂತೆ ಮಾಡುವುದು ಹೇಗೆ? ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಪಡೆಯುವುದು ಹೇಗೆ? ಎಲ್ಲಿಂದ? ಎಂದು ಅವರು ಸದಾ ಹುಡುಕಾಟ ನಡೆಸುತ್ತಿದ್ದರು.

ಬೌದ್ಧಿಕ ಆಸ್ತಿ ಹಕ್ಕುಗಳ ಸಮಿತಿಯ ಚರ್ಚಾಕೂಟದಲ್ಲಿ ಪಾಲ್ಗೊಂಡಿದ್ದ ಶಮ್ನಾಡ್ ಬಶೀರ್

ಕಳೆದ 15 ವರ್ಷಗಳಲ್ಲಿ, ಅಂದರೆ 2000ದ ಬಳಿಕ, ಸುಪ್ರೀಂ ಕೋರ್ಟ್‌ನಲ್ಲಿ ಕೇವಲ ಒಬ್ಬ ದಲಿತ ವಕೀಲ ಮಾತ್ರ ಹಿರಿಯ ವಕೀಲನಾಗಿ ಹಾಗೂ ಕೇವಲ ಇಬ್ಬರು ಮುಸ್ಲಿಮರು ಮಾತ್ರ ಹಿರಿಯ ವಕೀಲರಾಗಿ ನಿಯುಕ್ತರಾಗಿದ್ದಾರೆ. ಉತ್ತರ ಪ್ರದೇಶ, ಛತೀಸ್‌ಗಡ, ಜಾರ್ಖಂಡ್ ಅಥವಾ ಬಿಹಾರದಂತಹ ಹಿಂದುಳಿದ ರಾಜ್ಯಗಳಿಂದ ಒಬ್ಬನೇ ಒಬ್ಬ ವಕೀಲ ಈ ಹುದ್ದೆಯನ್ನು ಪಡೆದಿಲ್ಲ. ಗ್ರಾಮೀಣ ಹಿನ್ನೆಲೆಯ ವಕೀಲರುಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಹೇಳಿದ್ದ ವರದಿಯೊಂದನ್ನು ಉಲ್ಲೇಖಿಸಿದ್ದ ಶಮ್ನಾಡ್ ಈ ನಿಟ್ಟಿನಲ್ಲಿ ತನ್ನ ಶಕ್ತಿಮೀರಿ ಅಂತಹ ವಕೀಲರಿಗೆ ನ್ಯಾಯ ದೊರಕಿಸಲು ಶ್ರಮಿಸಿದ್ದರು. ಅಂತಹ ಯುವ ವಕೀಲರಿಗೆ, ವೈಯಕ್ತಿಕ ವಾಗಿಯೂ ಕೋಚಿಂಗ್ ನೀಡುತ್ತಿ ದ್ದರು. ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ತನ್ನ ಮನೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿ ಸ್ಪರ್ಧಾತ್ಮಕ ಕಾನೂನು ಪರೀಕ್ಷೆಗೆ (ಸಿಎಲ್‌ಎಟಿ) ಅವರನ್ನು ಸಿದ್ಧಗೊಳಿಸಿದ್ದರು.ಆದರೆ ರಾಷ್ಟ್ರೀಯ ಕಾನೂನು ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದಷ್ಟೇ ಅವರ ಗುರಿಯಾಗಿರಲಿಲ್ಲ; ಅಥವಾ ಯಶಸ್ವೀ ವಕೀಲರುಗಳನ್ನು ಅಣಿಗೊಳಿಸುವುದಷ್ಟೇ ಆಗಿರಲಿಲ್ಲ. ಸಮರ್ಥರಾದ, ಆದರೆ ಅಷ್ಟೇ ಸಾಮಾಜಿಕ ಬದ್ಧತೆಯುಳ್ಳ ಯುವ ಮನಸ್ಸುಗಳನ್ನು ತಯಾರು ಮಾಡುವುದು ಅವರ ಉದ್ದೇಶವಾಗಿತ್ತು, ಬಯಕೆಯಾಗಿತ್ತು. ಯೋಗೇಂದ್ರ ಯಾದವ್‌ರಂತಹ ಕಾನೂನು ತಜ್ಞರನ್ನು ಸಿದ್ಧಪಡಿಸಿ ದೇಶಕ್ಕೆ ನೀಡಿದ ಕೀರ್ತಿ ಶಮ್ನಾಡ್‌ರವರಿಗೆ ಸಲ್ಲುತ್ತದೆ. ಜಾರ್ಖಂಡ್‌ನ ಕೂಲಿ ಕಾರ್ಮಿಕನೊಬ್ಬನ ಮಗನಾದ ಯಾದವ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು ಈಗ ರಾಂಚಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಓರ್ವ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿರುವವರಿಗಷ್ಟೇ ಅಲ್ಲದೇ ಜೀವನದ ಹಲವು ರಂಗಗಳಲ್ಲಿ ದುಡಿಯುತ್ತಿರುವ ಗಣ್ಯರಿಗೆ ಐಡಿಐಎಯ ವಿದ್ವಾಂಸರನ್ನು ಪರಿಚಯಿಸುವಲ್ಲಿ ಕೂಡ ಶಮ್ನಾಡ್ ತುಂಬ ಕಾಳಜಿ ವಹಿಸುತ್ತಿದ್ದರು. 2017ರಲ್ಲಿ ಅವರು ನನ್ನ ಮೂಲಕ ಸಫಾಯಿ ಕರ್ಮಚಾರಿ ಆಂದೋಲನದ ಕಾರ್ಯನಿರ್ವಾಹಕ ಬೆಜವಾಡ ವಿಲ್ಸನ್‌ರವರನ್ನು ಐಡಿಐಎ ಅಧಿವೇಶನಕ್ಕೆ ಆಹ್ವಾನಿಸಿ ಅವರಿಂದ ದಿಕ್ಸೂಚಿ ಭಾಷಣ ಕಾರ್ಯಕ್ರಮ ಏರ್ಪಡಿಸಿದ್ದರು. ಶಮ್ನಾಡ್ ಆ ಬಳಿಕ ಹೇಳಿದಂತೆ, ಬೆಜವಾಡರ ಭಾಷಣ ಯುವಕರನ್ನು ‘‘ಬಡಿದೆಬ್ಬಿಸುವಂತಹ’’ ಭಾಷಣವಾಗಿತ್ತು.

ಕಳೆದ ಜುಲೈಯಲ್ಲಿ ಅವರು ನನಗೆ ಕಳುಹಿಸಿದ ಇಮೈಲ್, ಶೀರ್ಷಿಕೆ ಹೀಗಿತ್ತು ‘‘ತುಂಬಾ ನಿರಾಶಾದಾಯಕ ಸುದ್ದಿ: 7 ಮಂದಿ ಐಡಿಐಎ ವಿದ್ವಾಂಸರಿಗೆ/ ವಿದ್ಯಾರ್ಥಿಗಳಿಗೆ ಇನ್ನೂ ದಾನಿಗಳು ಸಿಕ್ಕಿಲ್ಲ!’’ ‘‘12 ಮಂದಿ ಐಡಿಐಎ ವಿದ್ಯಾರ್ಥಿಗಳಲ್ಲಿ ಈ ವರ್ಷ ಪ್ರತಿಷ್ಠಿತ ಕಾನೂನು ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆದವರ ಪೈಕಿ, 5 ಮಂದಿಗೆ ಮಾತ್ರ ದಾನಿಗಳ ಬೆಂಬಲ ದೊರಕಿದೆ. ಅಂದರೆ ನಮ್ಮ ಏಳು ಮಂದಿ ಮಕ್ಕಳಿಗೆ ದಾನಿಗಳನ್ನು ಪಡೆಯುವುದು ಒಂದು ಹೋರಾಟವಾಗಲಿದೆ’’ ಎಂದು ಅವರು ಬರೆದಿದ್ದರು. ಇದೇ ಅವರು ನನಗೆ ಕಳುಹಿಸುವ ಕೊನೆಯ ಇಮೈಲ್ ಆಗುತ್ತದೆಂದು ನಾನು ತಿಳಿದಿರಲಿಲ್ಲ. ಈಗ ಶಮ್ನಾಡ್ ನಮ್ಮ ಜತೆ ಇಲ್ಲ. ಅವರು ಆರಂಭಿಸಿದ್ದ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ಕೃಪೆ: thewire.in

Writer - ಮೆಹ್ತಾಬ್ ಆಲಂ

contributor

Editor - ಮೆಹ್ತಾಬ್ ಆಲಂ

contributor

Similar News