ಮಹಿಳೆಯ ಬಟ್ಟೆ ಯ ಹಿಂದೆ ಮಾರುಕಟ್ಟೆ

Update: 2019-08-18 08:59 GMT

ಹೆಣ್ಣು , ಲೈಂಗಿಕತೆ ಇಂದು ಜಾಗತಿಕ ಕಾರ್ಪೊರೇಟುಗಳ ಬೃಹತ್ ಉದ್ಯಮವಾಗಿದೆ. ಹಾಗಾಗಿ ಎಲ್ಲವನ್ನೂ ಈ ಉದ್ಯಮಕ್ಕೆ ಪೂರಕವಾಗಿಯೇ ಕಚ್ಚಾವಸ್ತುವಾಗಿ ರೂಪಿಸಿ ಒಗ್ಗಿಸಲಾಗಿದೆ. ಗಂಡು ಹೆಣ್ಣಿನ ನಡುವಿನ ಪ್ರೀತಿಯ ಭಾಗವಾದ ಲೈಂಗಿಕತೆ ಮಾರುಕಟ್ಟೆ ಸರಕಾದ ಮೇಲೆ ಹಲವಾರು ವಿಕೃತಗಳನ್ನು ಅದಕ್ಕೆ ಜೋಡಿಸಿ ಅಸಹಜಗೊಳಿಸಿ, ವಿಕ್ಷಿಪ್ತಗೊಳಿಸಿ ವ್ಯಾಪಕಗೊಳಿಸಲಾಗಿದೆ. ಎರಡು ಮೂರು ವರುಷದ ಹಸುಳೆಯೂ ಕೂಡ ಅತ್ಯಾಚಾರಕ್ಕೆ ಈಡಾಗಿ ತಲೆ ಕಡಿಸಿಕೊಂಡು ಕೊಲೆಗೀಡಾ ಗುವಂತಹ ಪರಿಸ್ಥಿತಿ ಬಂದಿದೆ.

ಸಮಾಜ ಬೆಳವಣಿಗೆಯ ಪ್ರಕ್ರಿಯೆ ಯಲ್ಲಿ ದುಡಿದುಣ್ಣುವ, ದುಡಿಯದೇ ಉಣ್ಣುವ, ಬಡತನದಲ್ಲಿ ಇರಬೇಕಾದ, ವೈಭೋಗಗಳಲ್ಲಿ ಇರಬಹುದಾದ ಎರಡು ಪಂಗಡಗಳು ಇರುವ ಸಾಮಾಜಿಕ ವ್ಯವಸ್ಥೆಯಾಯಿತು. ದುಡಿಯದೇ ಇರುವವರದು ಆಡಳಿತ ವ್ಯವಸ್ಥೆಯಾಯಿತು. ಹೆಣ್ಣು ಪುರುಷನ ಅಧೀನ ಆಸ್ತಿ ಎಂದಾಗಿ, ಆಕೆಯ ಅಸ್ತಿತ್ವವೇ ಪುರುಷನ ಮೂಲಕವೇ ಗುರುತಿಸುವಂತೆ ಮಾಡಲಾಯಿತು. ಆಕೆ ಏನಿದ್ದರೂ ಪುರುಷನ ದೈಹಿಕ, ಮಾನಸಿಕ, ಇತರ ಸೇವೆಯ ಅಗತ್ಯಗಳಿಗೆ ಮಾತ್ರ ಎನ್ನುವಂತಹ ಸ್ಥಿತಿ ಬಂದು ಅದು ಸನಾತನ ಧರ್ಮಗಳಲ್ಲಿ ಅಡಕಗೊಂಡಿತು. ಭಾರತದಲ್ಲಿ ಅದನ್ನು ಮನುಸ್ಮತಿ ಸಧೃಡೀಕರಣಗೊಳಿಸಿದ ಬ್ರಾಹ್ಮಣ ಧರ್ಮ ಎಂದು ಗುರುತಿಸುವುದೇ ಸರಿಯಾಗಿರುತ್ತದೆ. ಮಹಿಳೆಯರಿಗೆ ಶೂದ್ರರಿಗೆ ಜೀವನ ವಿಧಾನ, ತೊಡುಗೆಯ ವಿಧಾನಗಳನ್ನು ಹೇರುತ್ತಾ ಬರಲಾಯಿತು. ಮೇಲ್ವಸ್ತ್ರಕ್ಕೆ ತೆರಿಗೆ, ಮಗುವಿಗೆ ಮೊಲೆಯೂಡಿಸಲು ತೆರಿಗೆಯಂತಹ ಪದ್ಧತಿಗಳನ್ನು ಹೇರಲಾಯಿತು. ಇವೆಲ್ಲವೂ ರಾಜಶಾಹಿ, ಪಾಳೆಗಾರಿ ಊಳಿಗಮಾನ್ಯ ವ್ಯವಸ್ಥೆಯ ಭಾಗವಾಗಿತ್ತು.

ಈಗ ಆಧುನಿಕ ಎನ್ನುವಂತಹ ಕಾಲದಲ್ಲಿ ಜಾಗತಿಕ ಕಾರ್ಪೊರೇಟ್ ಮಾರುಕಟ್ಟೆ ಶಕ್ತಿಗಳು ಎಲ್ಲವನ್ನೂ ನಿರ್ಧರಿಸುವಂತೆ ಮಹಿಳೆಯರ ಉಡುಪುಗಳನ್ನೂ ನಿರ್ಧರಿಸಿ ಆಧುನಿಕತೆಯ ಪ್ರತೀಕವೆಂದು ಬಿಂಬಿಸುವ ಕೆಲಸ ಮಾಡುತ್ತಿದೆ. ಆಕೆಯ ನಡಿಗೆ, ದೇಹ ಭಾಷೆ, ಭಾವಭಂಗಿ, ನೋಟ, ನಗು, ಅಲಂಕಾರ, ಅಳು, ಮಾತಿನ ಶೈಲಿ, ಹೀಗೆ ಎಲ್ಲವನ್ನೂ ನಿರ್ಧರಿಸುತ್ತಾ ಹೆಣ್ಣನ್ನೇ ಮಾರುಕಟ್ಟೆಯ ಬೃಹತ್ ಲಾಭ ತರುವ ಕಚ್ಚಾವಸ್ತುವನ್ನಾಗಿ ಮಾಡಿಟ್ಟಿದ್ದಾರೆ. ಈಗೀಗ ಪುರುಷರನ್ನು ಮಾರುಕಟ್ಟೆಯ ವಸ್ತುಗಳನ್ನಾಗಿ ಮಾಡುವ ಕಾರ್ಯ ಹೆಚ್ಚುತ್ತಿದೆ. ಆದರೆ ಮಹಿಳೆಯರೇ ಈಗಲೂ ಅದರ ಪ್ರಧಾನ ಆದ್ಯತೆಯಾಗಿದೆ.

ಈ ಪ್ರಧಾನ ಅಂಶವನ್ನು ಹೊರಗಿಟ್ಟು ವಸ್ತ್ರಗಳು, ಅದರ ಆಯ್ಕೆ, ಆಯ್ಕೆಯ ಸ್ವಾತಂತ್ರ, ಅದರ ತೊಡುವಿಕೆ ಹಾಗೂ ಅದರ ವಿನ್ಯಾಸಗಳ ಬಗ್ಗೆ ಮಾತ್ರ ಚರ್ಚೆ ಮಾಡಲು ಹೋದರೆ ಅದು ಒಮ್ಮುಖವಾಗಬಹುದು. ಮಹಿಳಾವಿರೋಧಿಯೂ ಆಗಬಹುದು.

ಹಳ್ಳಿಗಳಲ್ಲಿ ಹಳೆಯ ತಲೆಮಾರಿನವರು ಬಹುತೇಕರು ಬ್ರಾ ಧರಿಸುತ್ತಿರಲಿಲ್ಲ. ಈಗಲೂ ಹಾಗಿರುವವರು ಇದ್ದಾರೆ. ಅದರ ಅವಶ್ಯಕತೆ ಅವರಿಗಿರಲಿಲ್ಲ. ನಂತರ ಮಹಿಳೆಯರು ಬ್ರಾ ಧರಿಸುವಂತಹ ಮಾರುಕಟ್ಟೆ ವಿಶಾಲಗೊಳಿಸಿದ ಶಕ್ತಿಗಳೇ ಜೀನ್ಸಿನ, ಟೀಶರ್ಟಿನ, ಶರ್ಟಿನ, ಟಾಪಿನ, ಮಿಡಿಯ, ಅರ್ಧ ಪ್ಯಾಂಟಿನ, ಚಿಕ್ಕ ಸೈಜಿನ ನಿಕ್ಕರ್, ಸ್ಲಿವ್‌ಲೆಸ್, ಬ್ಯಾಕ್‌ಲೆಸ್, ಲೊನೆಕ್, ಸ್ಕಿನ್ ಟೈಟ್, ಹೀಗೆ ಹಲವಾರು ಶೈಲಿಗಳನ್ನು ವ್ಯಾಪಕಗೊಳಿಸಿದೆ. ಸೀರೆ, ಚೂಡಿ, ಪಂಜಾಬಿ ಹೀಗೆ ಹಿಂದೆ ಜನಸಾಮಾನ್ಯರ ಮಧ್ಯೆ ಸಾಮಾನ್ಯವಾಗಿದ್ದ ವಸ್ತ್ರಗಳನ್ನೂ ತಮ್ಮ ಶೈಲಿಗಳಿಗೆ ಒಗ್ಗಿಸಿ ಅವುಗಳನ್ನು ಲೈಂಗಿಕರೋಚಕತೆಗಳಿಗೆ ಇಳಿಸಿ ಹತ್ತು ಹಲವು ವಿನ್ಯಾಸಗಳೊಂದಿಗೆ ಜನಸಾಮಾನ್ಯರ ಮಧ್ಯೆ ಪಸರಿಸಿದ್ದಾರೆ.

ಅದೇ ರೀತಿ ಹೆಣ್ಣಿನ ಬಗೆಗಿರುವ ಗ್ರಹಿಕೆ ಭಾವನೆಗಳನ್ನೂ ಕೂಡ ಲೈಂಗಿಕ ರೋಚಕತೆಗೆ ಸೀಮಿತಗೊಳಿಸಿ ಇಳಿಸಿಟ್ಟಿದ್ದಾರೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ತನಗೆ ಪಾಠ ಮಾಡುವ ಶಿಕ್ಷಕಿಯನ್ನೇ ಲೈಂಗಿಕ ರೋಚಕ ಭಾವನೆಯಿಂದಲೇ ನೋಡುವಂತಹ, ತನ್ನ ತಾಯಿಯ ಇಲ್ಲವೇ ಅಕ್ಕನ ವಯಸಿನ ಮಹಿಳೆಯರನ್ನೂ ಲೈಂಗಿಕವಾಗಿ ಕಿಚಾಯಿಸುವ ಮನಸ್ಥಿತಿಗಳನ್ನು ಸೃಷ್ಟಿಸಲಾಗಿದೆ. ಆಂಟಿ ಅನ್ನುವ ಪದವೇ ಲೈಂಗಿಕ ಸೂಚಕವೆನ್ನುವಂತೆ ಮಾಡಲಾಗಿದೆ. ಆ ರೀತಿ ನೋಡುವ ಆ ವಿದ್ಯಾರ್ಥಿಯನ್ನು, ಇಲ್ಲವೇ ಪುಟ್ಟ ಮಕ್ಕಳನ್ನು ಮಾತ್ರ ಇದಕ್ಕೆಲ್ಲಾ ಹೊಣೆಗಾರನನ್ನಾಗಿ ಮಾಡಲು ಸಾಧ್ಯವೇ!?

ಯಾಕೆಂದರೆ ಹೆಣ್ಣು, ಲೈಂಗಿಕತೆ ಇಂದು ಜಾಗತಿಕ ಕಾರ್ಪೊರೇಟುಗಳ ಬೃಹತ್ ಉದ್ಯಮವಾಗಿದೆ. ಹಾಗಾಗಿ ಎಲ್ಲವನ್ನೂ ಈ ಉದ್ಯಮಕ್ಕೆ ಪೂರಕವಾಗಿಯೇ ಕಚ್ಚಾವಸ್ತುವಾಗಿ ರೂಪಿಸಿ ಒಗ್ಗಿಸಲಾಗಿದೆ. ಗಂಡು ಹೆಣ್ಣಿನ ನಡುವಿನ ಪ್ರೀತಿಯ ಭಾಗವಾದ ಲೈಂಗಿಕತೆ ಮಾರುಕಟ್ಟೆ ಸರಕಾದ ಮೇಲೆ ಹಲವಾರು ವಿಕೃತಗಳನ್ನು ಅದಕ್ಕೆ ಜೋಡಿಸಿ ಅಸಹಜಗೊಳಿಸಿ, ವಿಕ್ಷಿಪ್ತಗೊಳಿಸಿ ವ್ಯಾಪಕಗೊಳಿಸಲಾಗಿದೆ. ಎರಡು ಮೂರು ವರುಷದ ಹಸುಳೆಯೂ ಕೂಡ ಅತ್ಯಾಚಾರಕ್ಕೆ ಈಡಾಗಿ ತಲೆ ಕಡಿಸಿಕೊಂಡು ಕೊಲೆಗೀಡಾಗುವಂತಹ ಪರಿಸ್ಥಿತಿ ಬಂದಿದೆ. ಉತ್ಪಾದಕತೆ ಆಧಾರಿತ ಆರ್ಥಿಕ ಬೆಳವಣಿಗೆಗಿಂತಲೂ ಈ ರೀತಿಯ ಉತ್ಪಾದಕತೆ ರಹಿತ ಆರ್ಥಿಕತೆ ಈಗಿನ ಮುಖ್ಯ ವಿದ್ಯಮಾನವಾಗಿದೆ. ಅದರ ಜೊತೆಗೆ ತೀಕ್ಷ್ಣವಾದ ಆರ್ಥಿಕ ಬಿಕ್ಕಟ್ಟುಗಳನ್ನು ಹೊತ್ತು ತರಲಾರಂಭಿಸಿದ ಕಾಲವಿದು.

ಅದಕ್ಕೆ ಸೌಂದರ್ಯ ಸ್ಪರ್ಧೆಯಿಂದ ಹಿಡಿದು ಜಾಹೀರಾತು, ಹಾಡು, ಸಾಹಿತ್ಯ, ನೃತ್ಯ, ಮಾಧ್ಯಮ ಹೀಗೆ ಎಲ್ಲವನ್ನೂ ಬಳಸಲಾಗುತ್ತಿದೆ. ಅಂದರೆ ನೋಡುವ ಮನಸ್ಥಿತಿಗಳನ್ನೂ ಜಾಗತಿಕ ಕಾರ್ಪೊರೇಟ್ ಶಕ್ತಿಗಳೇ ನಿಯಂತ್ರಿಸುತ್ತಿವೆ. ಹಾಗಿದ್ದಾಗ ಮನಸ್ಥಿತಿ ಹೇಗೆ ತಾನಾಗೇ ಬದಲಾಗಲು ಸಾಧ್ಯ. ಮೂಲ ಹುಡುಕಿ ಅಲ್ಲಿಗೆ ಸರಿಯಾದ ಚಿಕಿತ್ಸೆ ನೀಡಿದರೆ ಮಾತ್ರ ಪರಿಹಾರ ತಾನೆ. ಇಲ್ಲಿ ಪುರುಷರಷ್ಟೇ ಅಲ್ಲ ಮಹಿಳೆಯರೂ ಇವೆಲ್ಲದರ ಪ್ರಭಾವಲಯಕ್ಕೆ ಸಿಲುಕಿಕೊಂಡಿದ್ದಾರೆ. ಸಿಲುಕಿಸಲಾಗಿದೆ ಎನ್ನುವುದನ್ನು ಗಮನಿಸಬೇಕು. ಉಡುಗೆ ತೊಡುಗೆ ಅವರವರ ಅನುಕೂಲದ ಆಯ್ಕೆ, ಅದರ ಬಗ್ಗೆ ತಕರಾರಿರಬಾರದು ಸರಿ. ಆದರೆ ಅದರ ಹಿಂದೆ ಇಷ್ಟೆಲ್ಲಾ ಇರುವಾಗ ಅವೆಲ್ಲವನ್ನೂ ನೋಡದೇ ಕಾರ್ಪೊರೇಟು ಮನಸ್ಥಿತಿಗೆ, ಪುರುಷ ಮನಸ್ಥಿತಿಗೆ, ಸಮಾಜದ ಮನಸ್ಥಿತಿಗೆ ಸೀಮಿತಗೊಳಿಸಿದಾಗ ಅದು ದಿಕ್ಕು ತಪ್ಪುವ ಸಾಧ್ಯತೆ ಇದೆ. ಪುರುಷ ಮತ್ತು ಮಹಿಳೆಯರನ್ನು ಎದುರುಬದುರಾಗಿಸಿ ಪರಸ್ಪರ ಕಚ್ಚಾಡುವ ಇಲ್ಲವೇ ಧ್ವೇಷಿಸುವ ಹಂತಕ್ಕೆ ಇಳಿಸಿಬಿಡಬಹುದು. ಆ ರೀತಿಯ ಪರಿಣಾಮಗಳು ಈಗಾಗಲೇ ಆಗತೊಡಗಿವೆ. ಇದರಿಂದ ಮಹಿಳೆ ಪುರುಷನ ಮಧ್ಯೆ ಮತ್ತಷ್ಟು ಕಂದರಗಳು ಜಾಸ್ತಿಯಾಗುತ್ತವೆ.

ಇವೆಲ್ಲದರಿಂದ ಪುರುಷರೇ ಹೆಚ್ಚಿನ ನಿರ್ಧಾರಿತ ಅನುಕೂಲಗಳನ್ನು ಪಡೆಯುತ್ತಿರುವುದು ಮೇಲ್ಮಟ್ಟದಲ್ಲಿ ನಿಜ. ಹೆಚ್ಚಿನ ಶೋಷಣೆ ನಡೆಯುವುದು ಹೆಣ್ಣಿನ ಮೇಲೆಯೇ. ಆದರೆ ಒಟ್ಟಾರೆಯಾಗಿ ತಂದೆ, ಅಣ್ಣ, ತಮ್ಮ, ಗಂಡ, ಮಗ, ಮಾವ, ಚಿಕ್ಕಪ್ಪ, ದೊಡ್ಡಪ್ಪ ಮೊದಲಾದ ಪಾತ್ರಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಪುರುಷರು ಹಾಗೂ ಮಹಿಳೆಯರ ಮೇಲೆಯೇ ಒಟ್ಟು ಶೋಷಣೆ ಆಗುತ್ತದೆ. ಹಾಗಾಗಿ ಇಂತಹ ವಿಚಾರಗಳನ್ನು ಕೇವಲ ಪುರುಷರ ಮನಸ್ಥಿತಿ ಎಂದಾಗಲೀ ಮಹಿಳಾ ಮನಸ್ಥಿತಿ ಎಂದಾಗಲೀ ಇಳಿಸಿ ನೋಡಿದರೆ ವಿಷಯದ ಆಳ ವಿಸ್ತಾರ ಗೊತ್ತಾಗುವುದಿಲ್ಲ. ಅದರ ಅನುಕೂಲ ಸಹಜವಾಗಿ ಪಟ್ಟಭದ್ರ ಹಿತಾಸಕ್ತಿಗಳಿಗೇ ಆಗುತ್ತದೆ.

ಸಮಾಜದ ಮನಸ್ಥಿತಿ ಅದು, ಅದು ಬದಲಾಗಬೇಕು ಎಂದು ಮೇಲ್ಮಟ್ಟದಲ್ಲಿ ನೋಡಿದರೂ ಪರಿಣಾಮದಲ್ಲಿ ಬದಲಾವಣೆ ಬಾರದು. ಸಮಾಜದ ಮನಸ್ಥಿತಿಯ ಹಿಂದಿನ ಕಾರಣಗಳನ್ನು ನೋಡಿ ಅದನ್ನು ಸರಿಪಡಿಸುವ ಪ್ರಯತ್ನಗಳನ್ನು ಪುರುಷರು ಮಹಿಳೆಯರು ಒಗ್ಗೂಡಿ ಚರ್ಚಿಸುತ್ತಾ, ವಿಮರ್ಶಿಸುತ್ತಾ ಸಂಘಟಿತವಾಗಿ ಮಾಡದೇ ಯಾವ ಮನಸ್ಥಿತಿಯೂ ಬದಲಾಗುವುದಿಲ್ಲ. ಹಿಂದಿನಿಂದಲೂ, ಅದು ರಾಜಶಾಹಿ, ಪಾಳೇಗಾರಿ ಪುರೋಹಿತ ಶಾಹಿ ಕೂಟ ಇರಬಹುದು; ಇಂದಿನ ಮಧ್ಯವರ್ತಿ, ಜಾಗತಿಕ ಮಾರುಕಟ್ಟೆ ಶಕ್ತಿಗಳು ಇರಬಹುದು ಈ ಆಳುವ ಶಕ್ತಿಗಳೇ ಸಮಾಜದ ಮನಸ್ಥಿತಿಯನ್ನು ನಿರ್ಧರಿಸುತ್ತಾ ಬಂದಿವೆ ಎನ್ನುವುದನ್ನು ಗಮನಿಸಬೇಕು. ಹಾಗಾಗಿ ಸಮಾಜದ ಅಂತಹ ಮನಸ್ಥಿತಿಯನ್ನು ಸಂಘಟಿತ ಪ್ರಯತ್ನ ಹಾಕಿ ಬದಲಿಸದಿದ್ದರೆ ತಾನಾಗಿ ಬದಲಾಗಲು ಸಾಧ್ಯವಿಲ್ಲ. ಮಹಿಳಾ ಸಮಾನತೆಯ ಬಗ್ಗೆ ಮಾತನಾಡುವವರಲ್ಲಿ ಬಹಳ ಜನರು ಈ ಅಂಶಗಳನ್ನು ಗಮನಿಸುವುದೇ ಇಲ್ಲವೆಂದು ಹೇಳಬೇಕಾಗಿದೆ. ಕೇವಲ ಸಮಾಜದ ಮನಸ್ಥಿತಿ ಹಾಗೂ ಪುರುಷರ ಮನಸ್ಥಿತಿ ಬದಲಾಗಬೇಕೆಂದು ಹೇಳುವ ಮಟ್ಟದಲ್ಲೇ ಪರಿಹಾರವನ್ನು ಕಾಣಹೋಗುತ್ತಾರೆ.

ಹಾಗಂತ ಹೆಣ್ಣನ್ನು ಬಟ್ಟೆ, ಬಣ್ಣ, ಆಕಾರ, ಹಳ್ಳಿ, ಪಟ್ಟಣಗಳ ಮೂಲಕ ಕೀಳಾಗಿ, ಕೇವಲವಾಗಿ, ಕ್ರೌರ್ಯವಾಗಿ ನಡೆಸಿಕೊಳ್ಳುವ, ದೌರ್ಜನ್ಯ ನಡೆಸುವ ಪುರುಷರನ್ನು, ಅಂತಹ ಸಂಘಟನೆಗಳನ್ನು ವಿರೋಧಿಸಲೇ ಬೇಕು. ಆದರೆ ಮೇಲಿನ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಹಾಗೆ ಮಾಡಿದರೆ ಆಗುವ ಸಮಸ್ಯೆ ಬಗ್ಗೆ ನಾನು ಇಲ್ಲಿ ಪ್ರಸ್ತಾಪಿಸಿದ್ದು.

Writer - ನಂದಕುಮಾರ್ ಕೆ.ಎನ್. ಕೊಪ್ಪ

contributor

Editor - ನಂದಕುಮಾರ್ ಕೆ.ಎನ್. ಕೊಪ್ಪ

contributor

Similar News