ಬಸವನ ನೆನೆಯುವ ತತ್ವ ಪದಗಳು....

Update: 2019-08-18 18:40 GMT

‘ಬಸವ ನೀನೇ ನನಗೆಲ್ಲ...’ ದುಂಡಪ್ಪ ರಾ. ಕೊಠಾರಿ, ಕೊಲ್ಹಾರ ಇವರ ಉತ್ತರ ಕರ್ನಾಟಕ ಶೈಲಿಯ ತತ್ವಪದಗಳ ಸಂಕಲನ. ಕೊಠಾರಿ ಅವರು ಸಾಹಿತಿಯಾಗಿ ತತ್ವಪದ ರಚನೆ ಜೊತೆಗೆ ಹಾಡುಗಾರಿಕೆಯಲ್ಲೂ ಗುರುತಿಸಿಕೊಂಡವರು. ಈ ಕೃತಿ ಲೇಖಕರ ಮೊದಲ ಕವನ ಸಂಕಲನ. ಭಕ್ತಿ ಮಾರ್ಗದಲ್ಲಿ ಹುಟ್ಟಿಕೊಂಡ ಸಾಲುಗಳು ಇವು. ಉತ್ತರ ಕರ್ನಾಟಕದ ಆಧ್ಯಾತ್ಮಿಕ ನೆಲೆಗಳನ್ನು ಕೂಡ ನಾವು ಈ ಕವನಗಳ ಸಾಲುಗಳಲ್ಲಿ ಗುರುತಿಸಬಹುದು. ಹಾಗೆಂದು ಇವುಗಳು ಕೇವಲ ಭಕ್ತಿಗಷ್ಟೇ ಸೀಮಿತವಾಗಿಲ್ಲ. ಸಮಾಜದ ಬೇರೆ ಬೇರೆ ವಸ್ತುಗಳನ್ನಿಟ್ಟು ರಂಗಗೀತೆಯ ರೂಪದಲ್ಲಿ ಪದ್ಯಗಳನ್ನು ಬರೆದಿದ್ದಾರೆ. ಕೃತಿಯಲ್ಲಿ ಬಸವಣ್ಣನನ್ನು ಕರೆಯುವ ಮೂಲಕ, ಹೇಗೆ ವರ್ತಮಾನಕ್ಕೆ ಬಸವ ತತ್ವಗಳು ಜಾರಿಗೊಳ್ಳುವ ಅಗತ್ಯವಿದೆ ಎನ್ನುವುದನ್ನು ಅವರು ಹೇಳುತ್ತಾರೆ.
‘ಕಾಯಕವೇ ಕೈಲಾಸ ಎಂದು ಹೇಳಿದ್ದಿ ಅಂದು
ಕೊಲೆ ಸುಲಿಗೆಯಿಂದ ಜಗ ತುಂಬಿದೆ ಇಂದು
ಬುದ್ಧಿ ಹೇಳಲು ಬಾರೋ ಈ ಜಗದ ಜನರಿಗೆ
ತಿದ್ದಿ ಹೇಳಲು ಬಾರೋ ಈ ಜಗದ ಜನರಿಗೆ ...’’ ಎಂದು ಸರಳವಾಗಿ ಮತ್ತು ಜನಪ್ರಿಯ ಘೋಷಣೆಯ ದಾಟಿಯಲ್ಲಿ ಇವರು ಬರೆಯುತ್ತಾರೆ ಮತ್ತು ಸಮಾಜವನ್ನು ವಿಮರ್ಶಿಸುತ್ತಾರೆ. ಉತ್ತರ ಕರ್ನಾಟಕವೆಂದರೆ ರೈತರ ಬವಣೆಯೂ ಹೌದು. ಆ ಕುರಿತಂತೆಯೂ ತಮ್ಮ ನಿಲುವುಗಳನ್ನು ಹೇಳುತ್ತಾರೆ. ರೈತನ ಗೋಳು ಪದದಲ್ಲಿ ಹೀಗೆ ಹೇಳುತ್ತಾರೆ.
‘‘ಒಂಬತ್ತು ಎಕರೆ ಹೊಲ ನಂದ ಕಬ್ಬ ಹಚ್ಚಿನಿ ಬೀಜ ನಂದ
ಕಡಿದು ಹಾಕ್ಯಾವ ಹಂದಿ ತಿಂದ ಕುಂತ ಅಳುದಾತೋ
ಬ್ಯಾಂಕಿನ ಮುಂದ ರಾತ್ರಿ ಕಂಡ ಬಾವಿ ಹಗಲು ಬೀಳುದಾತ’’
ಇಲ್ಲಿರುವ ಬಹುತೇಕ ಪದ್ಯಗಳ ದಾಟಿ ಕಂಪನಿ ನಾಟಕಗಳ ರಂಗಗೀತೆಯ ಪ್ರಭಾವದಿಂದ ಹುಟ್ಟಿದಂತಿದೆ. ಉತ್ತರ ಕರ್ನಾಟಕ ಭಾಷಾ ಸೊಗಡು ಮತ್ತು ಅಲ್ಲಿನ ನೆಲಮೂಲ ಒಗಟುಗಳನ್ನು ಬಳಸಿ ಇನ್ನಷ್ಟು ಗಟ್ಟಿಯಾದ ತತ್ವ ಪದಗಳನ್ನು ಕಟ್ಟುವ ಅವಕಾಶಗಳು ಕೊಠಾರಿ ಅವರಿಗಿದೆ. ಅನಾಮಧೇಯ ಜಾನಪದ ಗೀತೆಗಳು ತತ್ವ ಪದಗಳಿಗೆ ನೀಡಿರುವ ಅಗಾಧ ಕೊಡುಗೆಗಳನ್ನು ತಮ್ಮದಾಗಿಸಿಕೊಂಡು ಅದರ ಪ್ರಭಾವದ ಮೂಲಕ ಹೊಸ ಹೊಳಹುಗಳನ್ನು ಕವಿ ನೀಡಬೇಕಾಗಿದೆ.
‘‘ನಾರಾಯಣ ನಿ್ನ ನಾಮದ ಬೀಜವ
ನಾನೆಲ್ಲಿ ಬಿತ್ತಿ, ಬೆಳೆಯಲಿ....’ ಎಂಬ ಸಾಲುಗಳಲ್ಲಿರುವ ರೂಪಗಳು, ಅದು ನಮಗೆ ಅರಿವುಗಳನ್ನು ಕವಿ ಗಮನಿಸಬೇಕು. ವಾಚ್ಯ ಅಥವಾ ಘೋಷಣೆಗಳಂತಿರುವ ಸಾಲುಗಳು ಈ ಹಿನ್ನೆಲೆಯಲ್ಲಿ ಪದ್ಯವಾಗಿ ಮಾಗುವ ಅಗತ್ಯವಿದೆ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News