ಸಚಿವ ಸ್ಥಾನ ಅಧಿಕಾರವಲ್ಲ, ಜವಾಬ್ದಾರಿ: ನೂತನ ಸಚಿವ ಮಾಧುಸ್ವಾಮಿ

Update: 2019-08-20 18:26 GMT

ತುಮಕೂರು, ಆ.20: ಸಚಿವ ಸ್ಥಾನ ಅಧಿಕಾರವಲ್ಲ, ಜವಾಬ್ದಾರಿ ಎಂದು ಮುಖ್ಯಮಂತ್ರಿ ಬಿ.ಎಸ್.ವೈ ಸಂಪುಟದಲ್ಲಿ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಮಾಜವಾದಿ ಹಿನ್ನೆಲೆಯಿಂದ ಬಂದವನು, ಶಾಂತವೇರಿ ಗೋಪಾಲಗೌಡರ ಅನುಯಾಯಿ. ಅವರು ಸಚಿವ ಸಂಪುಟದ ತೀರ್ಮಾನಗಳು, ನಿರ್ಣಯಗಳು ಜನರಿಗೆ, ಕಾರ್ಯಕರ್ತರಿಗೆ ಅನುಕೂಲವಾಗಬೇಕು, ಆಗ ಮಾತ್ರ ಜನರು ನಮ್ಮನ್ನು ನಾಯಕರೆಂದು ಪರಿಗಣಿಸುತ್ತಾರೆ ಎಂದು ಪದೇ ಪದೇ ಹೇಳುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ಸದ್ಯದ ರಾಜ್ಯದ ಪರಿಸ್ಥಿತಿ ಸರಿಯಿಲ್ಲ. ಒಂದೆಡೆ ಬರ, ಮತ್ತೊಂಡೆ ನೆರೆ ಜನರನ್ನು ಘಾಸಿಗೊಳಿಸಿದೆ. ಕಳೆದ 25 ದಿನಗಳಿಂದಲೂ ಸಚಿವರಿಲ್ಲದೆ, ಮುಖ್ಯಮಂತ್ರಿ ಒಬ್ಬರೇ ರಾಜ್ಯದ ಪರಿಸ್ಥಿತಿ ನಿಭಾಯಿಸಲಾಗದೆ, ಜನರಿಂದ, ವಿರೋಧ ಪಕ್ಷಗಳಿಂದ ಟೀಕೆಗೆ ಒಳಗಾಗಿದ್ದಾರೆ. ಮೊದಲು ಆಡಳಿತವನ್ನು ಚರುಕುಗೊಳಿಸಬೇಕಿದೆ. ಅಲ್ಲದೆ ಮುಂಬರುವ ಜಿ.ಪಂ, ತಾ.ಪಂ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಈ ನಿಟ್ಟಿಲ್ಲಿ ಆಗಿಂದಾಗ್ಗೆ ಪಕ್ಷದ ಕಾರ್ಯಕರ್ತರು, ಮಂಚೂಣಿ ನಾಯಕರೊಂದಿಗೆ ಚರ್ಚೆ ನಡೆಸಿ, ತಳಮಟ್ಟದಲ್ಲಿ ಮತ್ತಷ್ಟು ಬಲಿಷ್ಠವಾಗಿ ಪಕ್ಷ ಸಂಘಟಿಸುವ ಕೆಲಸ ಆಗಬೇಕಾಗಿದೆ ಎಂದು ಸಚಿವ ಮಾಧುಸ್ವಾಮಿ ನುಡಿದರು.

ತುಮಕೂರು ಜಿಲ್ಲೆ ಅಭಿವೃದ್ದಿ ಕುರಿತಂತೆ ಬಹಳಷ್ಟು ಕನಸುಗಳನ್ನು ಇಟ್ಟುಕೊಂಡು ನಾನು ಸಚಿವನಾಗಿದ್ದು, ಕೆರೆಗಳಿಗೆ ನೀರು ಹರಿಸುವುದು ನನ್ನ ಮೊದಲ ಆದ್ಯತೆ. ಮುಖ್ಯಮಂತ್ರಿಗಳು ಯಾವ ಖಾತೆ ನೀಡಿದರೂ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ತುಮಕೂರು ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಮೊದಲು ಕೆರೆಗಳಿಗೆ ನೀರು ಹರಿಸುವ ಮಹದಾಸೆ ನನ್ನದು. ಜಿಲ್ಲೆಯಲ್ಲಿ ಹೇಮಾವತಿ, ಭದ್ರ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಡಿ ಮೂರು ಕಡೆ ನಾಲೆ ನಿರ್ಮಾಣವಾಗುತ್ತಿದ್ದು, ಅದರಲ್ಲಿ ಸಾಧ್ಯವಾಗುವಷ್ಟು ನೀರನ್ನು ಶೇಖರಿಸುವುದರಿಂದ ನೀರಿನ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಜಿಲ್ಲೆಯ ಜನರಿಗೆ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಜನರು ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ಹಾಗಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಹೇಮಾವತಿ ನೀರು ಈಗಾಗಲೇ ಜಿಲ್ಲೆಗೆ ಬಂದಿದ್ದು ಸಂತಸದ ವಿಷಯವಾಗಿದೆ ಎಂದರು.

ಇದೇ ವೇಳೆ ಶಾಸಕರಾದ ಬಿ.ಸಿ ನಾಗೇಶ್, ಜಿ.ಬಿ. ಜ್ಯೋತಿಗಣೇಶ್, ಜಿಪಂ ಸಿಇಓ ಶುಭಾ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಚನ್ನಬಸವಪ್ಪ, ಎಸ್.ಪಿ ಡಾ.ವಂಶಿಕೃಷ್ಣ, ಬಿಜೆಪಿ ಮುಖಂಡರಾದ ಶಿವಪ್ರಸಾದ್, ಹೆಬ್ಬಾಕ ರವಿಶಂಕರ್, ಬಾವಿಕಟ್ಟೆ ನಾಗಣ್ಣ, ಹಾಲನೂರು ಲೇಪಾಕ್ಷಿ, ಟಿ.ಎಂ.ಸಿ.ಸಿ ಅಧ್ಯಕ್ಷ ಎನ್.ಎಸ್ ಜಯಕುಮಾರ್, ಜಿ.ಪಂ ಸದಸ್ಯ ರಾಮಾಂಜನಪ್ಪ, ಮಾಧುಸ್ವಾಮಿ ಅವರ ಕುಟುಂಬ ವರ್ಗದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News