ಅರಸರದು ಇನ್‌ಕ್ಲೂಸಿವ್ ಪಾಲಿಟಿಕ್ಸ್ -ಪ್ರೊ. ವಿ.ಕೆ. ನಟರಾಜ್
ಅರಸರು ಮೇಲ್ಜಾತಿಗೆ ಸೇರಿದವರಲ್ಲ. ಅವರ ಸಮುದಾಯದವರ ಸಂಖ್ಯೆಯೂ ಅಧಿಕವಿಲ್ಲ. ಆದರೆ ಭೂ ಮಾಲಕರು ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಒಕ್ಕಲಿಗರೇ ಆಗಿದ್ದರು. ಅದು ಬಿಟ್ಟರೆ ಮೇಲ್ಜಾತಿಯ ಬ್ರಾಹ್ಮಣರು ಮತ್ತು ಆರ್ಯವೈಶ್ಯರಾಗಿದ್ದರು. ಇವರನ್ನು ಎದುರಿಸುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಆದರೆ ಈ ಭೂ ಮಾಲಕರ ಬಳಿ ಕೂಲಿ ಮಾಡಿಕೊಂಡಿದ್ದ ಎಲ್ಲ ಜಾತಿಯ ಬಡವರು ದೇವರಾಜ ಅರಸರ ಪರವಾಗಿದ್ದರು. ಅರಸರ ಭೂ ಸುಧಾರಣೆ ಕಾಯ್ದೆಯಿಂದ ಇವರೆಲ್ಲ ಭೂ ಮಾಲಕರಾದರು. ಆರ್ಥಿಕವಾಗಿ ಸಬಲರಾದರು. ಶಕ್ತಿವಂತರಾದರು.
ಗ್ರಾಮೀಣ ಪ್ರದೇಶಕ್ಕೆ ಆದ್ಯತೆ
ಉನ್ನತ ವ್ಯಾಸಂಗದ ನಂತರ ಉದ್ಯೋಗ ಅರಸಿ ಇಂಗ್ಲೆಂಡ್, ಮುಂಬೈಗಳನ್ನೆಲ್ಲ ಸುತ್ತಾಡಿದ ಮೇಲೆ, 1970ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾಗಿ ಕೆಲಸಕ್ಕೆ ಸೇರಿದೆ. ಆಗ ದೇವರಾಜ ಅರಸರ ಸಂಬಂಧಿ ಡಿ.ವಿ.ಅರಸು ಮೈಸೂರು ವಿವಿಯ ವೈಸ್ ಚಾನ್ಸಿಲರ್ ಆಗಿದ್ದರು. ಡಿ.ವಿ. ಅರಸರ ಜೊತೆ ನನಗೆ ನಿಕಟ ಸಂಪರ್ಕವಿದ್ದು, ಪ್ರತಿದಿನ ಯಾವುದಾದರೊಂದು ವಸ್ತು, ವಿಷಯ ಕುರಿತು ಚರ್ಚಿಸುವುದು ಮಾಮೂಲಾಗಿತ್ತು. ಆ ಸಂದರ್ಭದಲ್ಲಿ, 1972ರಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಆಗಲೇ ಅವರನ್ನು ನಾನು ಮೊದಲು ಕಂಡಿದ್ದು, ಮಾತನಾಡಿಸಿದ್ದು. ದೇವರಾಜ ಅರಸರ ಮಾತು ಮುಖ್ಯವಾಗಿ ಗ್ರಾಮೀಣ ಪ್ರದೇಶ ಮತ್ತು ಬಡವರನ್ನು ಕೇಂದ್ರವಾಗಿಟ್ಟುಕೊಂಡಿತ್ತು. ಹಾಗಂತ ನಗರ ಪ್ರದೇಶದ ಜನರನ್ನು, ಶ್ರೀಮಂತರನ್ನು ಕಡೆಗಣಿಸುತ್ತಿದ್ದರು ಅಂತಲ್ಲ. ವಿದ್ಯಾವಂತರನ್ನು ಕಂಡರೆ ಬಹಳ ಗೌರವವಿತ್ತು. ಮರ್ಯಾದೆ ಕೊಟ್ಟು ಮಾತನಾಡಿಸುತ್ತಿದ್ದರು. ಆದರೆ ಎಷ್ಟೇ ಗೌರವ, ಮರ್ಯಾದೆ ಕೊಟ್ಟರೂ, ರಾಜಕೀಯವಾಗಿ ಮುಖ್ಯವೆಂದು ಪರಿಗಣಿಸುತ್ತಿರಲಿಲ್ಲ.
ಮೈಸೂರು, ಚಾಮರಾಜನಗರ, ಕಲ್ಲಹಳ್ಳಿಯ ಕಡೆಗೆ ಬಂದು ಹೋಗುವ ಸಂದರ್ಭದಲ್ಲಿ ದೇವರಾಜ ಅರಸರು ವೈಸ್ ಚಾನ್ಸಿಲರ್ ಡಿ.ವಿ.ಅರಸರಿಗೆ ಸುದ್ದಿ ಮುಟ್ಟಿಸುತ್ತಿದ್ದರು. ಅವರು ಅರಸರು ಉಳಿದುಕೊಳ್ಳುವ ಸಮಯ ನೋಡಿಕೊಂಡು, ಭೇಟಿ ಮಾಡುತ್ತಿದ್ದರು. ಅಂತಹ ಒಂದು ಭೇಟಿಯಲ್ಲಿ ನಾನೂ ಅವರೊಂದಿಗೆ ಹೋಗಿದ್ದೆ. ಅರಸು ಅವರು ಹೀಗೆಯೇ ಮಾತನಾಡುತ್ತಿದ್ದಾಗ, ‘‘ನೋಡಿ, ನಾವು ನಿಮ್ಮ ಥರ ಅಲ್ಲ, ನೀವು ಮಾಡುವುದೂ ಸರಕಾರಿ ಕೆಲಸವನ್ನೇ, ನಾವು ಮಾಡುವುದೂ ಸರಕಾರಿ ಕೆಲಸವನ್ನೇ. ಆದರೆ ನಾವು ಜನ ಇರು ಅಂದರೆ ಇರಬೇಕು, ಹೋಗು ಅಂದರೆ ಹೋಗಬೇಕು. ನಿಮ್ಮದು ಹಾಗಲ್ಲ, ಯಾರು ಬಂದರೂ-ಹೋದರೂ ನೀವು ಇದ್ದೇ ಇರ್ತಿರಾ’’ ಎಂದರು. ನನ್ನ ಕಡೆಯಿಂದ ಮಾತಿಲ್ಲ. ಅವರೇ ಮುಂದುವರಿಸಿ, ‘‘ನಿಮ್ಮ ಓಟು ನನಗೇನು ಬರಲ್ಲ ಬಿಡಿ, ಬೇರೆ ಜನ ಇದ್ದಾರೆ ನನಗೆ’’ ಎಂದರು. ಅಂದರೆ ನೇರವಾಗಿ, ತಮಗನ್ನಿಸಿದ್ದನ್ನು ಮುಲಾಜಿಲ್ಲದೆ ಹೇಳಿಬಿಡುತ್ತಿದ್ದರು. ಆಗಿನ ಕಾಲದಲ್ಲಿ ಓದಿದವರ, ವಿದ್ಯಾವಂತರ ಸಂಖ್ಯೆ ಬಹಳ ಕಡಿಮೆ ಇತ್ತು. ಅವರನ್ನು ಗೌರವಿಸುತ್ತಲೇ, ಗ್ರಾಮೀಣ ಪ್ರದೇಶದ ಅವಿದ್ಯಾವಂತರ, ಬಡವರ ಬಗ್ಗೆ ಕಾಳಜಿ ವ್ಯಕ್ತವಾಗುತ್ತಿತ್ತು. ಸರಕಾರದ ಸವಲತ್ತುಗಳು, ಯೋಜನೆಗಳು, ಕಾರ್ಯಕ್ರಮಗಳು ಬೇಕಾಗಿರುವುದು ಅವರಿಗೆ ಎಂಬುದು ಅರಸರ ದೃಢ ನಿಲುವಾಗಿತ್ತು. ಅದರಲ್ಲಿ ಅವರಿಗೆ ಗೊಂದಲಗಳಿರಲಿಲ್ಲ.
ಉತ್ತಮ ಓದುಗ ಮತ್ತು ವಿಜ್ಞಾನಿ
ಮೈಸೂರು ಯುನಿವರ್ಸಿಟಿಯ ಒಂದು ಸಮಾರಂಭಕ್ಕೆ, ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್‌ನ ಅಧ್ಯಕ್ಷರಾಗಿದ್ದ ಡಾ.ರಾಜಾ ರಾಮಣ್ಣರು ಬಂದಿದ್ದರು. ಅವರು ಆ ಕಾರ್ಯಕ್ರಮ ಮುಗಿಸುವಷ್ಟರಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಚೇರಿಯಿಂದ, ಮುಖ್ಯಮಂತ್ರಿಗಳು ರಾಜಾ ರಾಮಣ್ಣ ಅವರನ್ನು ಭೇಟಿ ಮಾಡಬೇಕಂತೆ ಎಂದು ಫೋನ್ ಬಂತು. ನಾನೇ ಅವರನ್ನು ಕರೆದುಕೊಂಡು ಮುಖ್ಯಮಂತ್ರಿಗಳ ಭೇಟಿಗೆ ಹೋದೆ. ಅರಸರಿಗೆ ನಾನೇ ರಾಜಾ ರಾಮಣ್ಣನವರನ್ನು ಪರಿಚಯ ಮಾಡಿಸಿದೆ. ಇಬ್ಬರೂ ಹಲವು ವಿಷಯಗಳ ಕುರಿತು ಮಾತನಾಡಿದರು. ಮಾತಿನ ಮಧ್ಯೆ ರಾಜಾರಾಮಣ್ಣನವರು, ‘‘ಈಗಿನ ಸರಕಾರಗಳಿಗೆ ಸೈನ್ಸ್ ಎಂದರೆ ಒಂದು ಲಕ್ಷುರಿ. ಸೈನ್ಸ್ ಈಸ್ ಎ ಪಾರ್ಟ್ ಆಫ್ ಅವರ್ ಎವರಿಡೇ ಲೈಫ್ ಅನ್ನುವುದೇ ಗೊತ್ತಿಲ್ಲ’’ ಎಂದರು. ದೇವರಾಜ ಅರಸರು ತಕ್ಷಣ, ‘‘ಈಸ್ ಇಟ್ ರಿಯಲಿ ಟ್ರೂ ರಾಮಣ್ಣ, ದೆನ್ ಐ ಆ್ಯಮ್ ವೆರಿ ಸಾರಿ ಫಾರ್ ದಿಸ್ ಕಂಟ್ರಿ’’ ಎಂದು ಹೇಳಿದರು. ಹೀಗೆಯೇ ಅವರಿಬ್ಬರ ನಡುವೆ ಮಾತುಕತೆ ನಡೆದಿತ್ತು. ರಾಜಾ ರಾಮಣ್ಣರ ಮಾತುಗಳನ್ನು, ಅದರಲ್ಲೂ ವಿಜ್ಞಾನಕ್ಕೆ ಸಂಬಂಧಿಸಿದ ಹೊಸ ವಿಚಾರಗಳನ್ನು ಅರಸು ಕಿವಿಗೊಟ್ಟು ಕೇಳಿದರು. ಅವರಿಗೆ ಗೊತ್ತಿದ್ದ ವಿಜ್ಞಾನದ ವಿಷಯ ಕುರಿತು ಪ್ರಬುದ್ಧವಾಗಿ ಮಾತನಾಡಿದರು. ಅವರ ಆ ಮಾತುಕತೆಯಲ್ಲಿ ನನಗನ್ನಿಸಿದ್ದು, ಅರಸು ಕೇವಲ ಒಬ್ಬ ರಾಜಕಾರಣಿಯಲ್ಲ, ಉತ್ತಮ ಓದುಗ ಮತ್ತು ವಿಜ್ಞಾನಿ ಎಂದು.
ಮತ್ತೊಮ್ಮೆ ಮೈಸೂರಿನಲ್ಲಿ ಇಂಡಿಯನ್ ಇಕಾನಮಿಕ್ ಕಾನ್ಫರೆನ್ಸ್ ಆಯೋಜಿಸಲಾಗಿತ್ತು. ಆ ಕಾನ್ಫರೆನ್ಸ್‌ಗೆ ಮುಖ್ಯಮಂತ್ರಿ ದೇವರಾಜ ಅರಸು ಬರದಿದ್ದರೂ, ವೈಸ್ ಚಾನ್ಸಿಲರ್ ಡಿ.ವಿ.ಅರಸು ಅವರಿಗೆ, ‘‘ಸೆಮಿನಾರ್‌ಗೆ ಟಾಪ್ ಇಂಟಲೆಕ್ಚುಯಲ್ಸ್, ಥಿಂಕರ್ಸ್ ಯಾರ್ಯಾರು ಬಂದಿದ್ದಾರೆ, ಎಂಟುಹತ್ತು ಜನರ ಒಂದು ಲಿಸ್ಟ್ ಮಾಡಿ, ನನ್ನ ಜೊತೆ ಬ್ರೇಕ್ ಫಾಸ್ಟ್ ಅರೇಂಜ್ ಮಾಡಿ’’ ಎಂದಿದ್ದರು. ರಾಷ್ಟ್ರೀಯ ಮಟ್ಟದ ಚಿಂತಕರೆಲ್ಲ ಆ ಕಾನ್ಫರೆನ್ಸ್‌ಗೆ ಬಂದಿದ್ದರು. ಅವರಲ್ಲಿಯೇ ಕೆಲವರನ್ನು ಆರಿಸಿ, ಅವರನ್ನು ಮುಖ್ಯಮಂತ್ರಿಗಳೊಂದಿಗೆ ಬ್ರೇಕ್ ಫಾಸ್ಟ್‌ಗೆ ನಾನೇ ಕರೆದುಕೊಂಡು ಹೋಗಿದ್ದೆ. ಎಲ್ಲರೂ ತಿಂಡಿ ತಿನ್ನಲು ಕುಳಿತರು. ಅಲ್ಲಿ ವೈಸ್ ಚಾನ್ಸಿಲರ್ ಡಿ.ವಿ.ಅರಸು ಇರಲಿಲ್ಲ. ಕಾರಣಾಂತರಗಳಿಂದ ಅವರು ಬರಲಾಗಿರಲಿಲ್ಲ. ಅದನ್ನು ಗಮನಿಸಿದ ದೇವರಾಜ ಅರಸರು ನನ್ನನ್ನು ಕರೆದು, ‘‘ಎಲ್ರಿ ನಿಮ್ಮ ವೈಸ್ ಚಾನ್ಸ್ಸಿಲರ್’’ ಎಂದರು. ‘‘ಬರ್ತಾರೆ ಸರ್’’ ಅಂದೆ ನಾನು. ಅದಕ್ಕೆ ಅರಸರು, ‘‘ಅಲ್ರಿ, ನಾವು ರಾಜಕಾರಣಿಗಳು ಹತ್ತು ನಿಮಿಷ ಲೇಟಾಗಿ ಬಂದರೆ ಹೇಗೆಲ್ಲ ಮಾತನಾಡುತ್ತೀರಾ, ರಂಪ ರಾದ್ಧಾಂತ ಮಾಡುತ್ತೀರಾ, ನೀವು ಹೀಗೆ ಮಾಡಬಹುದಾ?’’ ಎಂದು ಪ್ರಶ್ನಿಸಿದರು. ನಾನು ಸುಮ್ಮನಾದೆ. ಅರಸರಲ್ಲಿ ಸಂದರ್ಭಕ್ಕೆ ತಕ್ಕಂತಹ ಹಾಸ್ಯ ಪ್ರಜ್ಞೆಯೂ ಇತ್ತು. ಜೊತೆಗೆ ಪ್ರಜ್ಞಾವಂತರೆನ್ನಿಸಿಕೊಂಡವರ ತಪ್ಪುಗಳನ್ನು ಹಾಸ್ಯದ ಧಾಟಿಯಲ್ಲಿ ಎತ್ತಿ ತೋರುವ, ಎಚ್ಚರಿಸುವ ಚಿಕಿತ್ಸಕ ಗುಣವೂ ಇತ್ತು.
ಬಡವರಿಗಾಗಿ ಕಾಯ್ದೆ
ದೇವರಾಜ ಅರಸರ ಆಡಳಿತಾವಧಿಯಲ್ಲಿ ಬಹಳ ಮುಖ್ಯವಾದ, ಜನಪರವಾದ ಕಾಯ್ದೆಗಳು ಜಾರಿಗೆ ಬಂದವು. ಅವುಗಳಲ್ಲೊಂದು ಭೂ ಸುಧಾರಣೆ ಕಾಯ್ದೆ. 1961ರ ಲ್ಯಾಂಡ್ ರಿಫಾರ್ಮ್ ಆ್ಯಕ್ಟ್‌ಗೆ ಅರಸು ತಿದ್ದುಪಡಿ ತಂದು, 1974ರಲ್ಲಿ ಜಾರಿ ಮಾಡಿದರು. ಈ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಪೂರ್ವಭಾವಿಯಾಗಿ ಹಲವು ಸಭೆ-ಸಮಾಲೋಚನೆಗಳನ್ನು ಮಾಡಿದರು. ತದನಂತರ ಜಾಯಿಂಟ್ ಸೆಲೆಕ್ಟ್ ಕಮಿಟಿ ರಚಿಸಿದರು. ಅದೇ ವರ್ಷ ಜನವರಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದವರು ಈ ಜಾಯಿಂಟ್ ಸೆಲೆಕ್ಟ್ ಕಮಿಟಿಯ ಸದಸ್ಯರನ್ನು ಮತ್ತು ದೇಶದ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ, ಎರಡು ದಿನಗಳ ಸೆಮಿನಾರ್ ವ್ಯವಸ್ಥೆ ಮಾಡಿದ್ದರು. ಆ ಸೆಮಿನಾರ್‌ಗೆ ಆಗಿನ ಕಂದಾಯ ಸಚಿವ ಹುಚ್ಚಮಾಸ್ತಿಗೌಡ, ವಿರೋಧ ಪಕ್ಷದ ನಾಯಕ ಕಾಗೋಡು ತಿಮ್ಮಪ್ಪ, ಡಿ.ಕೆ.ನಾಯ್ಕರ್ ಬಂದಿದ್ದರು. ಮದ್ರಾಸಿನಿಂದ ‘ದಿ ಹಿಂದೂ’ ಪತ್ರಿಕೆಯ ಪ್ರಸಿದ್ಧ ಪತ್ರಕರ್ತರಾದ ಎನ್.ರಾಮ್ ಕೂಡ ಬಂದಿದ್ದರು. ಬೆಂಗಳೂರಿನಿಂದ ನಮ್ಮ ತಂದೆ, ಹೆಸರಾಂತ ವಕೀಲರಾದ ಕೃಷ್ಣಮೂರ್ತಿಯವರು ಬಂದಿದ್ದು, ಸಚಿವ ಹುಚ್ಚಮಾಸ್ತಿಗೌಡರಿಗೆ ಟ್ರಿಬ್ಯೂನಲ್ಸ್ ಮುಂದೆ ಲಾಯರ್‌ಗಳು ಅಪೀಯರ್ ಆಗದ ಹಾಗೆ ನೋಡಿಕೊಳ್ಳಿ ಎಂಬ ಸಲಹೆ ನೀಡಿದ್ದರು.
ಸೆಮಿನಾರ್‌ನ ಎರಡನೆಯ ದಿನ ಮುಖ್ಯಮಂತ್ರಿ ದೇವರಾಜ ಅರಸು ಬಂದು ವಿಷಯತಜ್ಞರ, ಚಿಂತಕರ ಮಾತುಗಳನ್ನು ಮನಸ್ಸಿಟ್ಟು ಕೇಳಿಸಿಕೊಂಡರು. ಅವರು ಸೆಮಿನಾರ್‌ನಲ್ಲಿ ಕೂತಿದ್ದು ಬರೋಬ್ಬರಿ ಮೂರು ಗಂಟೆ. ಆ ಸೆಮಿನಾರ್‌ನಲ್ಲಿ ಕೈಗೊಂಡ ಬಹಳ ಮುಖ್ಯವಾದ ನಿರ್ಣಯಗಳೆಂದರೆ, ಭೂ ನ್ಯಾಯ ಮಂಡಳಿ ಎನ್ನುವುದನ್ನು ಪ್ರತಿ ತಾಲೂಕಿಗೂ ಮಾಡಬೇಕು. ಸ್ಥಳೀಯರಿಗೆ ಆದ್ಯತೆ ಮತ್ತು ಅವಕಾಶ ಕಲ್ಪಿಸಿ ಕೊಡಬೇಕು. ಆ ಮಂಡಳಿ ಮುಂದೆ ಯಾವ ವಕೀಲರು ಹಾಜರಾಗದಂತೆ ನೋಡಿಕೊಳ್ಳಬೇಕು. ಇದು ದೇವರಾಜ ಅರಸರೇ ಖುದ್ದಾಗಿ ಸೂಚಿಸಿದ ಬಹಳ ಮುಖ್ಯವಾದ ಸಲಹೆ ಸೂಚನೆಗಳಾಗಿದ್ದವು. ಏಕೆಂದರೆ, ಭೂಹೀನರು ಬಡವರೇ ಆಗಿರುತ್ತಾರೆ. ಅವರ ಬಳಿ ಹಣವಿರುವುದಿಲ್ಲ. ಜೊತೆಗೆ ವಿದ್ಯಾವಂತರೂ ಅಲ್ಲ. ಹಾಗಾಗಿ ಅವರು ಕೋರ್ಟು, ಕಚೇರಿ ಎಂದು ಓಡಾಡಲು ಆಗುವುದಿಲ್ಲ. ಆದಕಾರಣ ಇದರಲ್ಲಿ ವಕೀಲರ ಭಾಗವಹಿಸುವಿಕೆ ಇರಬಾರದು. ಭೂ ನ್ಯಾಯ ಮಂಡಳಿಯ ಸದಸ್ಯರೇ ಇದರ ಸಂಪೂರ್ಣ ಜವಾಬ್ದಾರಿ ಹೊಂದಿದ್ದು, ತೀರ್ಮಾನ ತೆಗೆದುಕೊಳ್ಳುವಂತಿರಬೇಕು ಎಂಬುದು ದೇವರಾಜ ಅರಸರ ಅಂತಿಮ ತೀರ್ಮಾನವಾಗಿತ್ತು. ಸೆಮಿನಾರ್ ಮುಗಿದ ನಂತರ ಮೈಸೂರು ಪ್ರಸಾರಾಂಗದವರು ಈ ಸೆಮಿನಾರ್‌ನ ಚರ್ಚೆಗಳನ್ನು, ಸಲಹೆ ಸೂಚನೆ ಮತ್ತು ನಿರ್ಣಯಗಳನ್ನು ಒಂದು ಕಿರುಹೊತ್ತಿಗೆಯಾಗಿ ಪ್ರಕಟಿಸಿದರು. ನನಗೆ ಇಲ್ಲಿ ಬಹಳ ಮುಖ್ಯ ಮತ್ತು ಮಹತ್ವದ್ದೆನಿಸಿದ್ದು ದೇವರಾಜ ಅರಸರ ದೃಢ ನಿರ್ಧಾರಗಳು. ಹಾಗೆ ನೋಡಿದರೆ ಅರಸರು ಮೇಲ್ಜಾತಿಗೆ ಸೇರಿದವರಲ್ಲ. ಅವರ ಸಮುದಾಯದವರ ಸಂಖ್ಯೆಯೂ ಅಧಿಕವಿಲ್ಲ. ಆದರೆ ಭೂ ಮಾಲಕರು ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಒಕ್ಕಲಿಗರೇ ಆಗಿದ್ದರು. ಅದು ಬಿಟ್ಟರೆ ಮೇಲ್ಜಾತಿಯ ಬ್ರಾಹ್ಮಣರು ಮತ್ತು ಆರ್ಯವೈಶ್ಯರಾಗಿದ್ದರು. ಇವರನ್ನು ಎದುರಿಸುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಆದರೆ ಈ ಭೂ ಮಾಲಕರ ಬಳಿ ಕೂಲಿ ಮಾಡಿಕೊಂಡಿದ್ದ ಎಲ್ಲ ಜಾತಿಯ ಬಡವರು ದೇವರಾಜ ಅರಸರ ಪರವಾಗಿದ್ದರು. ಅರಸರ ಭೂ ಸುಧಾರಣೆ ಕಾಯ್ದೆಯಿಂದ ಇವರೆಲ್ಲ ಭೂ ಮಾಲಕರಾದರು. ಆರ್ಥಿಕವಾಗಿ ಸಬಲರಾದರು. ಶಕ್ತಿವಂತರಾದರು. ಇದಕ್ಕಿಂತ ಇನ್ನೂ ಮುಖ್ಯವಾದ ಸಂಗತಿ ಎಂದರೆ, ಗ್ರಾಮೀಣ ಪ್ರದೇಶಗಳ ಜನ ನಾಯಕರಾಗಿ ಬೆಳೆಯಲಿಕ್ಕೆ ಈ ಕಾಯ್ದೆ ಪರೋಕ್ಷವಾಗಿ ವಿಪುಲ ಅವಕಾಶಗಳನ್ನು ಸೃಷ್ಟಿಸಿತು. ಇದು ರಾಜಕೀಯ ನಾಯಕನ ದೂರದೃಷ್ಟಿತ್ವವನ್ನು, ಚಾಣಾಕ್ಷತನವನ್ನು ಸಾರುತ್ತಿತ್ತು.
ಜಾತಿ ಪ್ರಾಬಲ್ಯ ಮುರಿದ ಅರಸು
ಅರಸು ಮಾಡಿದ ಇಂಥದ್ದೇ ಇನ್ನೊಂದು ಮಹತ್ವದ ಕಾಯ್ದೆ- ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಹಾವನೂರು ವರದಿ. ಕರ್ನಾಟಕದ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಾದ ಮಹತ್ತರ ಬದಲಾವಣೆಗೆ, ಈ ಕಾಯ್ದೆ ಕಾರಣ. ದೇವರಾಜ ಅರಸು ಅವರು ರಾಜಕಾರಣದಲ್ಲಿ ಬೆಳೆಯುವ ಹಂತದಲ್ಲಿದ್ದಾಗ, ದಕ್ಷಿಣ ಕರ್ನಾಟಕದ ಮೇಲ್ಜಾತಿಯ ಜನ ಬಹಳ ಕಾಟ ಕೊಟ್ಟಿದ್ದರು. ಅದೇ ರೀತಿ ರಾಣೆಬೆನ್ನೂರಿನ ಎಲ್.ಜಿ.ಹಾವನೂರು ಎಂಬ ವಕೀಲರಿಗೆ ಅಲ್ಲಿಯ ಫ್ಯೂಡಲ್‌ಗಳಾದ ಲಿಂಗಾಯತರು ಕೊಡಬಾರದ ಕಷ್ಟ ಕೊಟ್ಟಿದ್ದರು. ಅರಸರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿದ್ದಂತೆ, ಮೇಲ್ಜಾತಿಗಳ ಪ್ರಾಬಲ್ಯವನ್ನು ಮುರಿದು ಹಿಂದುಳಿದ ವರ್ಗಗಳನ್ನು ಸಂಘಟಿಸಲು ಮುಂದಾದರು. ಅರಸರ ಆ ಆಶಯಕ್ಕೆ ಅಸ್ತ್ರವಾಗಿ ಸಿಕ್ಕವರು ಎಲ್.ಜಿ.ಹಾವನೂರ್ ಎಂಬ ಮಹಾನ್ ಮೇಧಾವಿ. ಅಸಂಘಟಿತ ಸಣ್ಣ ಪುಟ್ಟ ಜಾತಿಯ ಜನರನ್ನು ಜಾಗೃತಿಗೊಳಿಸಿ ಸಂಘಟಿಸುವ, ಅವರ ಸಂಖ್ಯಾಬಲವನ್ನು ಆ ಸಮುದಾಯದ ಒಳಿತಿಗಾಗಿ ಬಳಸಿಕೊಳ್ಳುವ ಕಾರ್ಯದಲ್ಲಿ ಅರಸು ಮತ್ತು ಹಾವನೂರ್ ಅವರ ಹಿಂದುಳಿದ ವರ್ಗ ಸೃಷ್ಟಿ, ಅವತ್ತಿನ ದಿನಕ್ಕೆ ಕ್ರಾಂತಿಕಾರಿ ಯೋಚನೆಯಾಗಿತ್ತು. ಈ ಕೆಲಸಕ್ಕೆ ಕೈಹಾಕಿದ ಸ್ವತಃ ಅರಸು ಮತ್ತು ಹಾವನೂರ್, ಕ್ರಾಂತಿ ಮಾಡುತ್ತಿದ್ದೇವೆ ಎಂಬ ಇಂಪ್ರೆಷನ್ ಕ್ರಿಯೇಟ್ ಮಾಡಿದ್ದರು. ಆ ಸಂದರ್ಭದಲ್ಲಿ, ಬಹುಸಂಖ್ಯಾತ ಜಾತಿಯ ಜನರನ್ನು ಬಿಟ್ಟು ಸಣ್ಣ ಪುಟ್ಟ ಜಾತಿಯ ಜನ ಅರಸು ಮತ್ತು ಹಾವನೂರ್‌ರನ್ನು ಹಿಂದುಳಿದ ವರ್ಗದ ಚಾಂಪಿಯನ್‌ಗಳಂತೆ ನೋಡುತ್ತಿದ್ದರು. ಎಲ್ಲಿ ಹೋದರಲ್ಲಿ ಅವರ ಬಗ್ಗೆಯೇ ಮಾತು-ಕತೆ.
ದೇವರಾಜ ಅರಸು ಮುಖ್ಯಮಂತ್ರಿಯಾಗುತ್ತಿದ್ದಂತೆ ಎಲ್. ಜಿ. ಹಾವನೂರ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ವರದಿ ತಯಾರಿಸಲು 1972ರಲ್ಲಿಯೇ ಕಮಿಟಿ ರಚಿಸಿದರು. ಆ ಸ್ಥಾನಕ್ಕೆ ಹಾವನೂರು ಸೂಕ್ತ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ನಾನು ಅವರಿಗಿಂತ ವಯಸ್ಸಿನಲ್ಲಿ ಚಿಕ್ಕವನಾದರೂ, ಅವರ ಗೆಳೆತನ ಸಂಪಾದಿಸಿದ್ದೆ. ಅವರನ್ನು ಗುರುವಾಗಿ ಸ್ವೀಕರಿಸಿದ್ದೆ. ಅವರು ಸಣ್ಣ ಪುಟ್ಟ ಜಾತಿಯ ಜನರನ್ನು ಸಂಘಟಿಸುವ, ರಾಜ್ಯ ಸುತ್ತಾಡಿ ಅಂಕಿ ಅಂಶ ಸಂಗ್ರಹಿಸುವ ಸಂದರ್ಭದಲ್ಲಿ ಅವರೊಂದಿಗಿದ್ದು, ಅವರ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಿದ್ದೆ. ಆಗ ಅವರಿಗೆ ಕಾರು, ಡ್ರೈವರ್, ಪೆಟ್ರೋಲ್, ಟಿಎಡಿಎಗಳ ಸೌಲಭ್ಯವಿರಲಿಲ್ಲ. ಅದನ್ನು ಅವರೂ ಕೇಳಲಿಲ್ಲ. ಅವರ ಸ್ಕೂಟರಿನಲ್ಲಿಯೇ ಸುತ್ತಾಡುತ್ತಿದ್ದರು. ಆಗೆಲ್ಲ ಬಲಿಷ್ಠ ಜಾತಿಯ ಜನರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿತ್ತು. ಅಲ್ಲಿಯವರೆಗೆ ರಾಜಕಾರಣದಲ್ಲಿ ಹಿಡಿತ ಸಾಧಿಸಿದ್ದ ಮೇಲ್ಜಾತಿಯ ರಾಜಕೀಯ ನಾಯಕರು ವರದಿ ಜಾರಿಗೆ ಬರದಂತೆ ಹಲವು ಅಡೆತಡೆಗಳನ್ನು ಒಡ್ಡಿದರು. ಆದರೆ ಅದಕ್ಕೆ ಅರಸು ಮತ್ತು ಹಾವನೂರ್ ಕೇರ್ ಮಾಡಲಿಲ್ಲ. ಎಲ್ಲ ವಿರೋಧಗಳ ನಡುವೆಯೂ, 1977ರಲ್ಲಿ ಎಲ್ಲ ಜಾತಿಯ ಬಡವರಿಗೆ ಮೀಸಲಾತಿ ಕಲ್ಪಿಸುವ, ಜಾತಿಯಾಧಾರಿತ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತಂದರು. ಹಾವನೂರರು ಒಂದು ರೀತಿಯಲ್ಲಿ ಯೋಚಿಸಿದರೆ, ಅರಸು ಮತ್ತೊಂದು ರೀತಿಯಲ್ಲಿ, ತಮ್ಮ ಭವಿಷ್ಯದ ರಾಜಕಾರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಬುದ್ಧಿವಂತಿಕೆ ಬಳಸಿ ಜಾರಿಗೆ ತಂದರು.
ಇವತ್ತು ಬಂಗಾರಪ್ಪ, ವೀರಪ್ಪಮೊಯ್ಲಿ, ಧರಂಸಿಂಗ್ ಮತ್ತು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾರೆ ಎಂದರೆ, ಅದಕ್ಕೆ ಕಾರಣ ಅರಸು ಮತ್ತು ಹಾವನೂರ್. ಅವರು ಹಾಕಿದ ಭದ್ರ ಬುನಾದಿಯ ಫಲ. ಅರಸು ಆಗ ಅಧಿಕಾರ ವಿಕೇಂದ್ರೀಕರಣದ ಬಗೆ ಯೋಚಿಸಲಿಲ್ಲ. ಆದರೆ ಅದು ಅರಸರ ನಂತರ ಬಂದ ರಾಮಕೃಷ್ಣ ಹೆಗಡೆಯವರ ಸರಕಾರಕ್ಕೆ ಪರೋಕ್ಷವಾಗಿ ಅನುಕೂಲಕರ ವೇದಿಕೆಯನ್ನು ಸೃಷ್ಟಿಮಾಡಿಕೊಟ್ಟಿತ್ತು.
ತಿದ್ದಿಕೊಳ್ಳುವ-ತಿಳಿದುಕೊಳ್ಳುವ ಗುಣ
1977ರಲ್ಲಿ ಇಂಗ್ಲೆಂಡ್‌ನ ಮೈಕಲ್ ಲಿಪ್ಟನ್ ಎಂಬ ಜಾಗತಿಕ ವಿದ್ವಾಂಸನ, ‘ವೈ ಪೂರ್ ಪೀಪಲ್ ಸ್ಟೇ ಪೂರ್- ಅರ್ಬನ್ ಬಯಾಸ್ ಇನ್ ವರ್ಲ್ಡ್ ಡೆವಲಪ್‌ಮೆಂಟ್’ ಎಂಬ ಪುಸ್ತಕ ಬಂದಿತ್ತು. ದೇವರಾಜ ಅರಸರು ಅದನ್ನು ಓದಿ ಪ್ರಭಾವಿತರಾಗಿ, ಹೋದಲ್ಲಿ ಬಂದಲ್ಲಿ ಆ ಪುಸ್ತಕವನ್ನು ಕೋಟ್ ಮಾಡಿ ‘‘ನೋಡಿ, ಇನ್ನು ಮೇಲೆ ಘರ್ಷಣೆ ಅಂತ ಆದ್ರೆ ಅದು ವರ್ಗ ಸಂಘರ್ಷವಲ್ಲ, ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳ ನಡುವೆ. ಮುಂದಕ್ಕೆ ಈ ಎರಡು ಪ್ರದೇಶಗಳಲ್ಲೇ ಘರ್ಷಣೆ’’ ಎಂದು ಮಾತನಾಡುತ್ತಿದ್ದರು. ಆ ಪುಸ್ತಕವನ್ನು ನಾನೂ ಓದಿದ್ದೆ. ಅರಸರ ಭಾಷಣಗಳನ್ನೂ ಕೇಳಿದ್ದೆ. ಜೊತೆಗೆ ಆ ಲೇಖಕನ ಕೃತಿಗೆ ಬಂದ ಕ್ರಿಟಿಸಿಸಮ್‌ಗಳನ್ನೂ ಕಲೆಹಾಕಿದ್ದೆ.
1980ರಲ್ಲಿ ಅರಸರು ಅಧಿಕಾರದಿಂದ ಕೆಳಗಿಳಿದಿದ್ದರು. ಒಮ್ಮೆ ಕೆಆರ್‌ಎಸ್ ಗೆಸ್ಟ್‌ಹೌಸ್‌ನ ಭೋಜನಕೂಟದಲ್ಲಿ ದೇವರಾಜ ಅರಸರು ಆ ಪುಸ್ತಕದ ಹಿರಿಮೆ ಕುರಿತು ವ್ಯಾಖ್ಯಾನಿಸುತ್ತಿದ್ದರು. ಅದಕ್ಕೆ ನಾನು ‘‘ಸರ್, ತಾವು ಹೇಳ್ತಿರೋ ಪುಸ್ತಕ ನನಗೆ ಗೊತ್ತು, ಅದರ ಬಗ್ಗೆ ತುಂಬಾ ಕ್ರಿಟಿಸಿಸಮ್ಸ್ ಇದೆ’’ ಎಂದೆ. ಅರಸರಿಗೆ ಕೋಪ ಬಂದು ‘‘ಏನ್ರೀ, ಬಿಸಾಕ್ರಿ ಅದನ್ನು’’ ಎಂದು ಗಡುಸು ಧ್ವನಿಯಲ್ಲಿ, ಹೆದರಿಸುವ ಧಾಟಿಯಲ್ಲಿ ಹೇಳಿದರು. ಮುಂದುವರಿದು, ‘‘ಯಾರೋ ಯೂಸ್‌ಲೆಸ್ ಫೆಲೋಸ್ ಕ್ರಿಟಿಸಿಸಮ್ಸ್ ಬರೆದರೆ?’’ ಎಂದು ಪ್ರಶ್ನೆ ಹಾಕಿದರು. ಅದಕ್ಕೆ, ಅವರ ಗಡುಸು ಧಾಟಿಗೆ ಹೆದರದ ನಾನು ‘‘ಇಲ್ಲ ಸರ್, ಬಹಳ ತಿಳಿದುಕೊಂಡ ವಿದ್ವಾಂಸರು, ಟ್ಯಾಕ್ಟ್‌ಫುಲ್ ಆಗಿ ಬರೆದಿದ್ದಾರೆ’’ ಎಂದು ಅವರ ಮುಂದೆ ನಿಂತೇ ಇದ್ದೆ. ನನ್ನ ದೃಢ ನಿಲುವು ಮತ್ತು ಧೈರ್ಯದ ನುಡಿಗೆ ‘‘ಹೌದೇನ್ರಿ, ನಾನು ಓದಿಲ್ವಲ್ಲ, ನನಗೊಂದು ಕಾಪಿ ಬೇಕಲ್ಲ’’ ಎಂದರು. ಅವರೆ ಮುಂದುವರಿದು, ‘‘ನಾನು ಬೇರೆ ರಾಜಕಾರಣಿಗಳ ಥರ ಅಲ್ಲ’’ ಎಂದರು. ‘‘ಸರಿ ಸರ್, ಕಳುಹಿಸಿಕೊಡ್ತೀನಿ’’ ಎಂದೆ. ಊಟ ಮುಗಿದ ಮೇಲೆ ಅಲ್ಲಿಯೇ ಇದ್ದ ಜಯದೇವರಾಜೇ ಅರಸ್ ಅವರಿಗೆ ‘‘ರೀ ಜಯದೇವ, ನಾನು ಮುಂದಿನ ಸಲ ಮೈಸೂರಿಗೆ ಬಂದಾಗ ಒಂದು ಅಪಾಯಿಂಟ್‌ಮೆಂಟ್ ಫಿಕ್ಸ್ ಮಾಡಿ, ವಿತ್ ದಿಸ್ ಯಂಗ್ ಮ್ಯಾನ್, ನಾನು ಒಂದು ಗಂಟೆ ಕುಳಿತು ಮಾತನಾಡಬೇಕು ಮರೀಬೇಡಿ’’ ಎಂದು ಹೇಳಿದರು. ನಂತರ ನಾನು ಆ ಪುಸ್ತಕದ ಒಂದು ಪ್ರತಿಯನ್ನು ಅವರಿಗೆ ಪೋಸ್ಟ್ ಮಾಡಿದೆ. ಕೆಲವು ದಿನಗಳ ನಂತರ ಯಾರೊಂದಿಗೋ ಅವರನ್ನು ಭೇಟಿ ಮಾಡಲು ಹೋದಾಗ ‘‘ಥ್ಯಾಂಕ್ಯೂ ವೆರಿಮಚ್, ಬಂತು, ಓದಿದೆ, ಕ್ವಯಟ್ ಇಂಟರೆಸ್ಟಿಂಗ್. ಆ ವಿಚಾರ ಡಿಸ್ಕಸ್ ಮಾಡ್ತೀನಿ’’ ಎಂದರು. ನಾನು ಕಳುಹಿಸಿದ ಪುಸ್ತಕ ಓದಿ ಅದರ ಬಗ್ಗೆ ಒಬ್ಬ ಮುಖ್ಯಮಂತ್ರಿಯಾದವರು ಮಾತನಾಡಿದರಲ್ಲ ಎಂದು ಆಶ್ಚರ್ಯವಾಯಿತು. ಹಾಗೆ ನೋಡಿದರೆ, ನಾನೊಬ್ಬ ಸಾಮಾನ್ಯ ವ್ಯಕ್ತಿ, ನಮ್ಮ ವಿದ್ವತ್ ಲೋಕದಲ್ಲಿ ಅಂತಹ ಪುಸ್ತಕಗಳು, ಕ್ರಿಟಿಸಿಸಮ್‌ಗಳು ಕೂಡ ಕಾಮನ್. ಆದರೆ ತಮ್ಮ ತಪ್ಪನ್ನು ತಿದ್ದಿಕೊಳ್ಳುವ, ಹೊಸ ವಿಷಯಗಳನ್ನು ವಿನಯದಿಂದ ತಿಳಿದುಕೊಳ್ಳುವ ಗುಣವಿತ್ತಲ್ಲ, ಅದು ಅವರ ಮೇರು ವ್ಯಕ್ತಿತ್ವಕ್ಕೊಂದು ಸಾಕ್ಷಿ.
ನೇರ, ಸರಳ, ಅಪರೂಪ
ತನ್ನ ಜನಪರ ನಿಲುವುಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ, ಎಡಪಂಥೀಯ ವಿಚಾರಗಳಿಗೆ ಒತ್ತು ಕೊಡುವ, ಮಾಧ್ಯಮ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ, ‘ಎಕಾನಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ ಪತ್ರಿಕೆಗಾಗಿ ದೇವರಾಜ ಅರಸರ ಮೇಲೊಂದು ವಿಶೇಷ ಲೇಖನ ಮಾಡಬೇಕಿತ್ತು. ಆ ಕಾರಣಕ್ಕಾಗಿ 1981ರಲ್ಲಿ ಅವರನ್ನು ಭೇಟಿ ಮಾಡಿದ್ದೆ. ಬೆಂಗಳೂರು-ಮೈಸೂರು, ಎರಡೂ ಕಡೆ ಲಾಂಗ್ ಇಂಟರ್‌ವ್ಯೆ ಮಾಡಿದ್ದೆ. ನಾನು ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುತ್ತಿದ್ದರು. ಸೊಗಸಾಗಿ ಮಾತನಾಡುತ್ತಿದ್ದರು. ನಾನು, ‘‘ನೀವು ಬೆಳೆದು ಬಂದ ರೀತಿಯ ಬಗ್ಗೆ ಹೇಳಿ’’ ಎಂದಾಗ, ‘‘ರಾಜಕಾರಣಕ್ಕೆ ಬಂದ ಹೊಸದರಲ್ಲಿ ನನ್ನನ್ನು ನಿರ್ಲಕ್ಷಿಸಿದ್ದರು. ಮಂತ್ರಿ ಮಾಡಿದ ಎಸ್.ನಿಜಲಿಂಗಪ್ಪನವರು ನನ್ನ ಪೋರ್ಟ್‌ಫೋಲಿಯೋ ಚೇಂಜ್(ಕರ್ನಾಟಕ ವಿಧಾನ ಮಂಡಲದಲ್ಲಿ ದೊರಕುವ ದಾಖಲೆಗಳ ಪ್ರಕಾರ ಅರಸು ಅವರು ಜುಲೈ 2, 1962 ರಿಂದ ಜೂನ್ 6, 1965 ರತನಕ ನಿಜಲಿಂಗಪ್ಪ ಮಂತ್ರಿಮಂಡಲದಲ್ಲಿ ಸಾರಿಗೆ, ವಸತಿ ಮತ್ತು ಕಾರ್ಮಿಕ ಖಾತೆ ಸಚಿವರಾಗಿದ್ದರು; ಜೂನ್ 7, 1965ರಿಂದ ಆಗಸ್ಟ್ 26, 1966 ರ ಅವಧಿಯಲ್ಲಿ ಕಾರ್ಮಿಕ, ಪ್ರವಾಸೋದ್ಯಮ ಮತ್ತು ಸಾರಿಗೆ ಖಾತೆಗಳ ಸಚಿವರಾಗಿದ್ದರು; ಆಗಸ್ಟ್ 27, 1966 ರಿಂದ 1967ರ ಚುನಾವಣೆ ನಡೆಯುವವರೆಗೆ ಹಿಂದೆ ಹೊಂದಿದ್ದ ಖಾತೆಗಳ ಜತೆಗೆ ಪೌರಾಡಳಿತ ಖಾತೆಗೂ ಸಚಿವರಾಗಿರುತ್ತಾರೆ. ಆನಂತರ ಮಾರ್ಚ್ 14, 1967ರಿಂದ ಫೆಬ್ರವರಿ 21, 1968 ರವರೆಗೆ ಪಶುಸಂಗೋಪನೆ,