ದನಕ್ಕಿಂತಲೂ ನಮ್ಮ ಪ್ರಾಣದ ಬೆಲೆ ಕಡಿಮೆಯೇ?

Update: 2019-08-23 18:31 GMT
 ಲೇಖಕರಿಗೆ ಘಟನೆಯ ಬಗ್ಗೆ ವಿವರಿಸುತ್ತಿರುವ ಶಾಂತಾಬೆನ್

ದುರ್ಬಲ ಆದಿವಾಸಿಗಳು, ದಲಿತರು ಹಾಗೂ ಮುಸ್ಲಿಮರನ್ನು ಪೊಲೀಸರು ಥಳಿಸಿದ ಘಟನೆಗಳು ಹೊಸದೇನೂ ಅಲ್ಲ. ಆದರೆ ಈ ಹಿಂದೆ ಅವುಗಳು ಪೊಲೀಸ್ ಠಾಣೆಯ ಗೋಡೆಗಳ ನಡುವೆ ನಡೆಯುತ್ತಿತ್ತು. ಆದರೆ ಪೊಲೀಸರು ಸಾರ್ವಜನಿಕರ ಎದುರೇ ವ್ಯಕ್ತಿಯೊಬ್ಬನನ್ನು ಸಾಯುವಂತೆ ಬಡಿದಿರುವುದರ ಅಪರೂಪದ ಘೋರ ನಿದರ್ಶನ ಇದಾಗಿದೆ. ಗೋವಿನ ಹತ್ಯೆಯ ಆರೋಪವನ್ನು ಹೊತ್ತ ವ್ಯಕ್ತಿಯನ್ನು ಸಾರ್ವಜನಿಕರ ಎದುರೇ ಬರ್ಬರವಾಗಿ ಥಳಿಸಿರುವುದು ದುರುದ್ದೇಶಪೂರ್ವಕ ಕೃತ್ಯವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಗೋವಿನ ಹೆಸರಿನಲ್ಲಿ ನಡೆದಿರುವ ಗುಂಪು ದಾಳಿಗಳಿಗೆ ಬಹುತೇಕ ಮಂದಿ ಮುಸ್ಲಿಮರು ಹಾಗೂ ಇನ್ನು ಕೆಲವು ಪ್ರಕರಣಗಳಲ್ಲಿ ದಲಿತರು ಗುರಿಯಾಗಿದ್ದಾರೆ. ಗುಜರಾತ್‌ನಲ್ಲಿ ನಡೆದ ಗುಂಪು ದಾಳಿಯ ಘಟನೆಯು ದುರಂತ ಕಥೆಯಾಗಿ ತಿರುವು ಪಡೆದುಕೊಂಡಿತು. ಇಲ್ಲಿ ಗುಂಪು ದಾಳಿ ನಡೆಸಿದವರು ತಥಾಕಥಿತ ಗೋರಕ್ಷಕರಲ್ಲ, ಬದಲಿಗೆ ಪೊಲೀಸರೇ ಸ್ವತಃ ದಾಳಿಕೋರ ಗುಂಪಿನಂತೆ ವರ್ತಿಸಿದ್ದಾರೆ.

 ಅಂದು ಮೇ 2, 2017. ಗುಜರಾತ್‌ನ ಸಬರಕಾಂತ ಜಿಲ್ಲೆಯ ಕೋಟದ್‌ಘಡಿ ಬಡವರೇ ಹೆಚ್ಚಾಗಿರುವ ಒಂದು ಪುಟ್ಟ ಬುಡಕಟ್ಟು ಗ್ರಾಮವಾಗಿದೆ. ಈ ಗ್ರಾಮದಲ್ಲಿ ದನವೊಂದನ್ನು ಹತ್ಯೆಗೈಯಲಾಗಿದೆ ಎಂದು ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದರು ಹಾಗೂ ಅಲ್ಲಿ ಐದು ಮಂದಿಯ ಗುಂಪೊಂದು ಗೂಳಿಯೊಂದರ ಕಳೇಬರದ ಸುತ್ತಲೂ ಜಮಾಯಿಸಿರುವುದನ್ನು ಕಂಡರೆಂದು ಪೊಲೀಸರು ದಾಖಲಿಸಿದ ವರದಿಯು ತಿಳಿಸಿದೆ.

  ಎಫ್‌ಐಆರ್‌ನಲ್ಲಿ ಪೊಲೀಸರು ಗೂಳಿಯನ್ನು ಗೋವಂಶಕ್ಕೆ ಸೇರಿದ ಪ್ರಾಣಿಯೆಂದು ಉಲ್ಲೇಖಿಸಿದ್ದರು. ಹತ್ಯೆಗೀಡಾದ ಗೂಳಿಯ ಕುತ್ತಿಗೆಯನ್ನು ಸೀಳಲಾಗಿತ್ತು ಹಾಗೂ ಕೊಂಬನ್ನು ಕತ್ತರಿಸಲಾಗಿತ್ತು. ಅದರ ದೇಹವನ್ನು ಎರಡು ಭಾಗಗಳಾಗಿ ಕತ್ತರಿಸಲಾಗಿತ್ತು ಮತ್ತು ಅದರ ದೇಹದ ಅರ್ಧಭಾಗದಷ್ಟು ಚರ್ಮವನ್ನು ಸುಲಿಯಲಾಗಿತ್ತು. ಕಳೇಬರದ ಸುತ್ತಲೂ ರಕ್ತದ ಕೋಡಿಯೇ ಹರಿದಿತ್ತು... ಹೀಗೆ ಪೊಲೀಸರು ತಮ್ಮ ಎಫ್‌ಐಆರ್‌ನಲ್ಲಿ ಗೋಹತ್ಯೆಯ ಬಗ್ಗೆ ಆಕ್ರೋಶಭರಿತ ಧ್ವನಿಯಲ್ಲಿ ವಿವರಿಸಿದ್ದರು. ಗೂಳಿಯ ಕಳೇಬರದ ಸಮೀಪದಲ್ಲೇ ತಕ್ಕಡಿ, ಚೂರಿಗಳು ಪತ್ತೆಯಾಗಿದ್ದವು. ಪೊಲೀಸರನ್ನು ಕಂಡಕೂಡಲೇ ಅಲ್ಲಿದ್ದವರು ಕಾಲ್ಕಿತ್ತರು. ಪೊಲೀಸರು ಅವರನ್ನು ಬೆನ್ನಟ್ಟಿದರೂ ಅವರಲ್ಲಿ ನಾಲ್ವರು ಪರಾರಿಯಾದರು.

ಆದಾಗ್ಯೂ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಸಫಲರಾಗಿದ್ದರು. ಆತ ಲೇಬಾಭಾಯ್ ಭಾಮ್‌ಭಿಭಾಯ್ ಎಂಬ ಹೆಸರಿನ ದಲಿತನಾಗಿದ್ದ. ಗೋಹತ್ಯೆಯ ಆರೋಪವನ್ನು ಆತನ ಮೇಲೆ ಹೊರಿಸಲಾಗಿತ್ತು. ತಾನು ಗೂಳಿಯನ್ನು ಕೊಂದಿಲ್ಲವೆಂದು ಲೇಬಾಭಾಯ್ ಗೋಗರೆದು ಹೇಳಿದ. ಅಲ್ಲದೆ ತಾನು ಗೋವುಗಳನ್ನು ಹತ್ಯೆಗೈಯುವುದಾಗಲಿ ಅಥವಾ ಅದರ ಮಾಂಸದ ಮಾರಾಟವನ್ನಾಗಲಿ ಮಾಡಿಲ್ಲ. ತಾನು ಬಾಲ್ಯದ ದಿನಗಳಿಂದಲೇ ಮೃತ ಗೋವುಗಳ ಚರ್ಮವನ್ನು ಮಾತ್ರ ಸುಲಿಯುವ ಕೆಲಸದಲ್ಲಿ ತೊಡಗಿದ್ದೇನೆ, ಅದು ನನ್ನ ಜಾತಿ ನಿರ್ಧರಿತ ವೃತ್ತಿಯಾಗಿತ್ತು ಎಂದು ಆತ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆ ದಿನದಂದು ನಾನು ಆಗಲೇ ಸತ್ತು ಬಿದ್ದಿದ್ದ ಗೂಳಿಯ ಚರ್ಮವನ್ನು ಸುಲಿದು ಕೊಟ್ಟಿದ್ದೆ. ಆದರೆ ತಾನು ಸುಳ್ಳುಹೇಳುತ್ತಿದ್ದೇನೆಂದು ಪೊಲೀಸರು ತನ್ನನ್ನು ಬರ್ಬರವಾಗಿ ಥಳಿಸಿದರು ಎಂದು ಲೇಬಾಭಾಯ್ ತಿಳಿಸಿದ್ದಾರೆೆ. ಆನಂತರ ಕೋರ್ಟ್‌ಗೆ ನೀಡಿದ ದೂರಿನಲ್ಲಿ ಆತ ತಾನು ಜೀವಸಹಿತ ಉಳಿಯಬೇಕಿದ್ದರೆ ಮತ್ತು ತನ್ನನ್ನು ಬಿಡುಗಡೆ ಮಾಡಬೇಕಿದ್ದರೆ 2 ಲಕ್ಷ ರೂ. ನೀಡಬೇಕೆಂದು ಬೆದರಿಕೆ ಹಾಕಿದ್ದರು. ಆದರೆ ಆತನ ಕುಟುಂಬಕ್ಕೆ 1 ಲಕ್ಷ ರೂ.ನಷ್ಟು ಹಣವನ್ನು ಕೂಡಿಹಾಕಲು ಮಾತ್ರವೇ ಸಾಧ್ಯವಾಗಿತ್ತು. ಆದರೆ ಅಷ್ಟು ಹಣ ಸಾಕಾಗಲಿಲ್ಲ

  ಆನಂತರ ಪೊಲೀಸರು, ಕೊದರ್‌ಭಾಯ್ ಗಾಮಾರ್ ಎಂಬ 55 ವರ್ಷ ವಯಸ್ಸಿನ ಆದಿವಾಸಿ ಕೃಷಿಕ ಹಾಗೂ ಇಮಾಮ್ ಭಾಯ್ ಮತ್ತು ಶಬ್ಬೀರ್ ಭಾಯ್ ಎಂಬ ಇಬ್ಬರು ಮುಸ್ಲಿಮರನ್ನು ವಶಕ್ಕೆ ತೆಗೆದು ಕೊಂಡರು. ಈ ಮೂವರನ್ನು ಪೊಲೀಸರು ನಿರ್ದಯವಾಗಿ ಥಳಿಸಿದರು. ಅವರ ಪೈಕಿ ಕೊದರ್‌ಭಾಯ್ ಥಳಿತದಿಂದಾಗಿಯೇ ಸಾವನ್ನಪ್ಪಿದ್ದನು.

‘ದಿ ಕಾರವಾನ್’ ಪತ್ರಿಕೆಯ ವರದಿಗಾರರ ತಂಡವೊಂದು ಕೊದರ್‌ಭಾಯ್ ವಿಧವಾ ಪತ್ನಿ ಶಾಂತಾಬೆನ್‌ರನ್ನು ಆಕೆಯಿದ್ದ ಮಣ್ಣಿನ ಗುಡಿಸಲಿನಲ್ಲೇ ಸಂದರ್ಶಿಸಿತು. ತನ್ನ ಪತಿ ಮುಂಜಾನೆ ಹೊಲದಲ್ಲಿ ನಿದ್ರಿಸುತ್ತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡರೆಂದು ಶಾಂತಾ ಬೆನ್ ನಡೆದ ಘಟನೆಯನ್ನು ವಿವರಿಸಿದರು. ಅರ್ಧಡಜನ್‌ನಷ್ಟಿದ್ದ ಪೊಲೀಸರು ತನ್ನ ಪತಿಯನ್ನು ಎಳೆದುಕೊಂಡು ಮನೆಗೆ ಕರೆತಂದರು ಹಾಗೂ ನಿರ್ದಯವಾಗಿ ಆತನನ್ನು ಥಳಿಸಿದರೆಂದು ಆಕೆ ಹೇಳುತ್ತಾರೆ. ಪತಿಯನ್ನ್ನು ಬಿಟ್ಟುಬಿಡುವಂತೆ ಪೊಲೀಸರನ್ನು ಶಾಂತಾಬೆನ್ ಗೋಗರೆದಾಗ, ಕೇಳದ ಆವರು ಆಕೆಯ ತೋಳನ್ನು ಜೋರಾಗಿ ಎಳೆದರು. ಕಟ್ಟಕಡೆಯ ಬಾರಿಗೆ ಪತಿಯ ಮುಖವನ್ನು ನೋಡುವಂತೆ ಆಕೆ ಹೇಳಿದರು. ಆತನ ಅಂತಿಮಕ್ರಿಯೆಗೆ ಸಿದ್ಧತೆ ನಡೆಸುವಂತೆಯೂ ಆಕೆಗೆ ತಿಳಿಸಿದರು.

ಆನಂತರ ಕೊದರ್‌ಭಾಯ್‌ನನ್ನು ಮನೆಯಿಂದ ಹೊರಗೆಳೆದು ಕೊಂಡು ಹೋದ ಪೊಲೀಸರು ತಮ್ಮ ಬೆಲ್ಟ್ ಹಾಗೂ ಬೆತ್ತಗಳಿಂದ ಹಿಗ್ಗಾಮಗ್ಗಾ ಥಳಿಸುತ್ತಲೇ ಆತನನ್ನು ಗ್ರಾಮದ ಕೇಂದ್ರ ಸ್ಥಳಕ್ಕೆ ಕರೆ ತಂದರು. ಜನರ ಗುಂಪು ನೋಡನೋಡುತ್ತಿದ್ದಂತೆಯೇ ಪೊಲೀಸರು ಆತನನ್ನು ಮನಬಂದಂತೆ ಹೊಡೆದರೆಂದು, ಕೊದರ್‌ಭಾಯ್‌ನ ಪ್ರಾಪ್ತ ವಯಸ್ಕ ಮಕ್ಕಳು ಹಾಗೂ ಇತರ ಗ್ರಾಮಸ್ಥರು ತಿಳಿಸಿದ್ದಾರೆ. ಪೊಲೀಸರ ಥಳಿತದ ನೋವನ್ನು ಸಹಿಸಲಾಗದೆ ಕೊದರ್‌ಭಾಯ್ ಉಟ್ಟಬಟ್ಟೆಯಲ್ಲಿಯೇ ಮಲಮೂತ್ರ ಮಾಡಿದ. ಆನಂತರ ಆತನನ್ನು 20 ಕಿ.ಮೀ. ದೂರದಲ್ಲಿರುವ ಇನ್ನೊಂದು ಗ್ರಾಮಕ್ಕೆ ಜೀಪಿನಲ್ಲಿ ಕೊಂಡೊಯ್ದರು. ಅಲ್ಲಿಯೂ ಗ್ರಾಮದ ಚೌಕದ ಮುಂದೆ ಕೊದರ್‌ಭಾಯ್‌ರನ್ನು ಎಳೆದುತಂದು ಮತ್ತೊಮ್ಮೆ ಆತನನ್ನು ಮಾರಣಾಂತಿವಾಗಿ ಥಳಿಸಿದರು.

ದುರ್ಬಲ ಆದಿವಾಸಿಗಳು, ದಲಿತರು ಹಾಗೂ ಮುಸ್ಲಿಮರನ್ನು ಪೊಲೀಸರು ಥಳಿಸಿದ ಘಟನೆಗಳು ಹೊಸದೇನೂ ಅಲ್ಲ. ಆದರೆ ಈ ಹಿಂದೆ ಅವುಗಳು ಪೊಲೀಸ್ ಠಾಣೆಯ ಗೋಡೆಗಳ ನಡುವೆ ನಡೆಯುತ್ತಿತ್ತು. ಆದರೆ ಪೊಲೀಸರು ಸಾರ್ವಜನಿಕರ ಎದುರೇ ವ್ಯಕ್ತಿಯೊಬ್ಬನನ್ನು ಸಾಯುವಂತೆ ಬಡಿದಿರುವುದರ ಅಪರೂಪದ ಘೋರ ನಿದರ್ಶನ ಇದಾಗಿದೆ. ಗೋವಿನ ಹತ್ಯೆಯ ಆರೋಪವನ್ನು ಹೊತ್ತ ವ್ಯಕ್ತಿಯನ್ನು ಸಾರ್ವಜನಿಕರ ಎದುರೇ ಬರ್ಬರವಾಗಿ ಥಳಿಸಿರುವುದು ದುರುದ್ದೇಶಪೂರ್ವಕ ಕೃತ್ಯವಾಗಿದೆ. ಸಾರ್ವಜನಿಕರ ಎದುರೇ ಆರೋಪಿಯನ್ನು ಪೊಲೀಸರು ಥಳಿಸಿದ ಘಟನೆಯು, ಗುಂಪು ಹಲ್ಲೆಗೆ ಸರಿಸಮಾನವಾದುದಾಗಿದೆ. ಇಲ್ಲಿ ದ್ವೇಷಭರಿತ ಗುಂಪುಗಳ ಬದಲಾಗಿ ಸಮವಸ್ತ್ರಧಾರಿ ಪೊಲೀಸರು ಕಾನೂನು ಉಲ್ಲಂಘಿಸಿ ನಡೆಸಿರುವುದಷ್ಟೇ ಈ ಘಟನೆಯಲ್ಲಿ ಕಂಡುಬಂದಿರುವ ವ್ಯತ್ಯಾಸವಾಗಿದೆ.

ಆನಂತರ ಕೊದರ್‌ಭಾಯ್‌ರನ್ನು ಪೊಲೀಸರು ಠಾಣೆಗೆ ಎಳೆ ದೊಯ್ದರು. ಅಂದು ಸಂಜೆ ಕೊದರ್‌ಭಾಯ್, ತನ್ನ ಮಗನೊಂದಿಗೆ ಮಾತನಾಡುವುದಕ್ಕಾಗಿ ಪೊಲೀಸ್ ಠಾಣೆಯಿಂದ ತನ್ನ ನೆರೆಮನೆ ಯಾತನಿಗೆ ಕರೆ ಮಾಡಿದರು. ದೂರವಾಣಿಯಲ್ಲಿ ಅಳುತ್ತಾ ತನ್ನ ಪುತ್ರ ನೊಂದಿಗೆ ಮಾತನಾಡಿದ ಆತ, ‘‘ನನ್ನನ್ನು ಬರ್ಬರವಾಗಿ ಥಳಿಸಲಾಗಿದೆ. ನನಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ನಾನು ತೀವ್ರ ಅಸ್ವಸ್ಥನಾಗಿದ್ದೇನೆ. ನನ್ನ ತಲೆಗೆ ಅವರು ಬೆಲ್ಟ್‌ನಿಂದ ಹೊಡೆದಿದ್ದಾರೆ. 4 ಲಕ್ಷ ಕೊಟ್ಟರೆ ಮಾತ್ರವೇ ನನ್ನನ್ನು ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ನಮ್ಮ ಭೂಮಿಯನ್ನು ಅಡವಿಟ್ಟು, ಅದರಲ್ಲಿ ದೊರೆಯುವ ಹಣವನ್ನು ಹಿಡಿದುಕೊಂಡು ಸಾಧ್ಯವಿದ್ದಷ್ಟು ಬೇಗನೇ ಪೊಲೀಸ್ ಠಾಣೆಗೆ ಬಾ. ಇಲ್ಲದಿದ್ದಲ್ಲಿ ನಾನು ಬದುಕುಳಿಯುವುದಿಲ್ಲ’’ ಎಂದು ಹೇಳಿದ್ದರು.

ಭಯಾನಕ ಕಥನ

ತಮ್ಮ ತಂದೆಯನ್ನು ಪೊಲೀಸರ ವಶದಿಂದ ಬಿಡಿಸಿಕೊಳ್ಳುವುದಕ್ಕಾಗಿ, ಕೊದರ್‌ಭಾಯ್‌ನ ಪುತ್ರರು ತಮ್ಮ ಜಮೀನನ್ನು ನೆರೆಮನೆಯ ಶ್ರೀಮಂತ ಭೂಮಾಲಕನೊಬ್ಬನಿಗೆ ಅಡವಿಟ್ಟಿದ್ದರು. ಮಾರನೆ ದಿನದ ರಾತ್ರಿ ಅವರ ನೆರೆಮನೆಯಾತನಿಗೆ ಇನ್ನೊಂದು ದೂರವಾಣಿ ಕರೆ ಬಂದಿತ್ತು. ಈ ಬಾರಿ ಆ ಕರೆಯನ್ನು ಪೊಲೀಸರು ಮಾಡಿದ್ದರು. ಕೊದರ್‌ಭಾಯ್‌ರನ್ನು ಅಹ್ಮದಾಬಾದ್‌ನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆಯೆಂದು ಪೊಲೀಸರು ಆತನಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಗ್ರಾಮಸ್ಥರ ಗುಂಪೊಂದು ಟ್ಯಾಕ್ಸಿಯೊಂದನ್ನು ಗೊತ್ತು ಮಾಡಿ, ಆಸ್ಪತ್ರೆಗೆ ಧಾವಿಸಿತು. ಆಗ ಕೊದರ್‌ಭಾಯ್ ಪರಿಸ್ಥಿತಿ ಗಂಭೀರವಾಗಿತ್ತು. ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿತ್ತು. ಮಾರನೆಯ ದಿನವೇ ಆತ ಕೊನೆಯುಸಿರೆಳೆದರು.

ತನ್ನ ಪತಿಯು ಗೋವುಗಳನ್ನು ವಧಿಸುವುದಾಗಲಿ ಅಥವಾ ಮೃತ ಗೋವುಗಳ ಚರ್ಮಸುಲಿಯುವ ಕೆಲಸವನ್ನಾಗಲಿ ಎಂದೂ ಮಾಡಿರಲಿಲ್ಲವೆಂದು ಪತ್ನಿ ಶಾಂತಾಬೆನ್ ಹೇಳುತ್ತಾರೆ. ತಮ್ಮಲ್ಲಿ ಎರಡು ದನಗಳಿದ್ದು, ಅವುಗಳಿಂದ ದೊರೆಯುವ ಹಾಲು, ತಮಗೆ ಚಹಾಕುಡಿಯುವುದಕ್ಕೆ ಸಾಕಾಗುತ್ತದೆ. ಆತ ತನ್ನ ಹೊಲದಲ್ಲಿ ದುಡಿಯುತ್ತಾರೆ ಮತ್ತು ವರ್ಷವಿಡೀ ಕೂಲಿಕಾರ್ಮಿಕನಾಗಿಯೂ ಕೆಲಸ ಮಾಡುತ್ತಾರೆ.

 ಪೊಲೀಸರು ಯಾಕೆ ತನ್ನ ಪತಿಯ ವಿರುದ್ಧ ಗೋಹತ್ಯೆಯ ಆರೋಪವನ್ನು ಹೊರಿಸಿದರು ಹಾಗೂ ಅದಕ್ಕಾಗಿ ಆತನನ್ನು ಯಾಕೆ ಕೊಂದರೆಂದು ತನಗೆ ತಿಳಿಯುತ್ತಿಲ್ಲವೆಂದು ಆಕೆ ಹೇಳುತ್ತಾರೆ. ತನ್ನ ಪತಿಯು 11 ಮಕ್ಕಳನ್ನು ಅಗಲಿ ಹೋಗಿದ್ದು, ಅವರಲ್ಲಿ ಕಿರಿಯ ಮಗನಿಗೆ ಕೇವಲ ಐದು ವರ್ಷ ವಯಸ್ಸು ಮತ್ತು ಹಿರಿಯಾತನಿಗೆ 30 ವರ್ಷ. ಈ ಜಗತ್ತಿನಲ್ಲಿ ಏಕಾಂಗಿಯಾಗಿ ತನ್ನ ಮಕ್ಕಳನ್ನು ಹೇಗೆ ಬೆಳೆಸಬೇಕೆಂದೇ ತನಗೇ ತೋಚುತ್ತಿಲ್ಲವೆಂದು ಶಾಂತಾಬೆನ್ ವಿಷಾದಭರಿತರಾಗಿ ಹೇಳುತ್ತಾರೆ.

 ದನಕ್ಕಿಂತಲೂ ನಮ್ಮ ಬದುಕಿಗೆ ಕಡಿಮೆ ಬೆಲೆಯೇ ಎಂದು ಆಕೆ ಗೋಳಿಡುತ್ತಾರೆ. ನಮ್ಮ ಬಾಳು ನಾಯಿಪಾಡಾಗಿದೆಯೆಂದು ಶಾಂತಾಬೆನ್ ನೋವಿನಿಂದ ಹೇಳುತ್ತಾರೆ.

          ಈ ಘಟನೆಯು ನೈತಿಕತೆಯ ವಿಡಂಬನೆಯಾಗಿದೆ. ಓರ್ವಆದಿವಾಸಿ, ಓರ್ವ ದಲಿತ ಹಾಗೂ ಇಬ್ಬರು ಮುಸ್ಲಿಮರ ವಿರುದ್ಧ ಪೊಲೀಸರು ಗೋಹತ್ಯೆಯ ಆರೋಪ ಹೊರಿಸಿದ್ದರು. ಆದರೆ ಹತ್ಯೆಗೀಡಾದ ಪ್ರಾಣಿಯು ಗೂಳಿಯಾಗಿತ್ತೇ ಹೊರತು ದನವಲ್ಲ. ಈ ನಾಲ್ವರನ್ನು ಪೊಲೀಸರು ಬರ್ಬರವಾಗಿ ಥಳಿಸಿದ್ದರು. ಜೀವಂತವಾಗಿ ಉಳಿಯುವುದಕ್ಕಾಗಿ ಪೊಲೀಸರಿಗೆ ಒತ್ತೆ ಹಣವನ್ನು ಕೂಡಾ ಅವರು ನೀಡಿದ್ದರು. ಈ ನಾಲ್ವರಲ್ಲಿ ಓರ್ವನನ್ನು ಪೊಲೀಸರು ಗುಂಪು ದಾಳಿಯ ರೀತಿಯಲ್ಲೇ ಸಾರ್ವಜನಿಕವಾಗಿ ಅವಮಾನಿಸಿದ್ದರು ಹಾಗೂ ಆತನನ್ನು ಅಮಾನುಷವಾಗಿ ಥಳಿಸಿದ್ದರು. ಆ ಹೊಡೆತದ ತೀವ್ರತೆಯಿಂದಾಗಿ ಆತ ಸಾವನ್ನಪ್ಪಬೇಕಾಯಿತು.

  ಖಂಡಿತವಾಗಿಯೂ ಇಂದಿನ ಸನ್ನಿವೇಶದಲ್ಲಿ ಆದಿವಾಸಿಗಳು, ದಲಿತರು ಹಾಗೂ ಮುಸ್ಲಿಮರ ಪ್ರಾಣಗಳಿಗೆ ಇರುವ ಬೆಲೆ ದನಕ್ಕಿಂತಲೂ ಕಡಿಮೆ ಎಂಬುದಕ್ಕೆ ಈ ಘಟನೆಯೇ ನಿದರ್ಶನವಾಗಿದೆ.

ಕೃಪೆ: scroll.in

Writer - ಹರ್ಷ ಮಂದರ್

contributor

Editor - ಹರ್ಷ ಮಂದರ್

contributor

Similar News

ಜಗದಗಲ
ಜಗ ದಗಲ