ವನ್ಯಲೋಕ ಪ್ರಿಯ ಅಂಕಲ್ ಮನಮೋಹನ್
ಶ್ಯಾಮಲಾ ಮಾಧವ, ಮುಂಬೈ
ಅಂಕಲ್ ಮನಮೋಹನ್ ಎಂದೊಡನೆ ನಮ್ಮ ಮನದಲ್ಲಿ ಮೂಡುವುದು ಮೈಸೂರು ಮೃಗಾಲಯ, ಅರಮನೆ, ಮಹಾ ರಾಜರು ಹಾಗೂ ಖೆಡ್ಡಾದ ಚಿತ್ರ. ಅರಣ್ಯಾಧಿಕಾರಿಯಾಗಿ ಮೂವತ್ತೈದು ವರ್ಷಗಳ ಕಾಲ ದುಡಿದು ನಿವೃತ್ತರಾದ ಮನಮೋಹನ್ ಅಂಕಲ್ ಕಾಡನ್ನು ಪ್ರೀತಿಸಿ ನಾಡಿಗಿಂತ ಕಾಡಿನಲ್ಲೇ ಹೆಚ್ಚು ಸಮಯ ಕಳೆದಿದ್ದ ನಿಸ್ಪಹ ಅಧಿಕಾರಿ. ನಿಸರ್ಗ ಪ್ರೇಮಿ. ವನ್ಯ ಸಂಪತ್ತು, ವನ್ಯಜೀವಿಗಳ ಬಗ್ಗೆ ಅವರ ಕಾಳಜಿ ಅಪಾರ. ಫಾರೆಸ್ಟರ್ ಆಗಿದ್ದ ತಮ್ಮ ಮಾವನೊಡನೆ ಸುತ್ತಿದ ಅನುಭವ ದಿಂದ ಅವರ ಹೆಜ್ಜೆಯಲ್ಲೇ ನಡೆಯ ಬಯಸಿದವರು, ಅಂಕಲ್ ಮನಮೋಹನ್. ಮಂಗಳೂರಿನ ಅಲೋಶಿಯಸ್ ಕಾಲೇಜ್‌ನಲ್ಲಿ ಇಂಟರ್‌ಮೀಡಿಯೆಟ್ ಮುಗಿಸಿ, ಫಾರೆಸ್ಟರ್ ಹುದ್ದೆಗೆ ಆಯ್ಕೆಯಾಗಿ 1945ರಲ್ಲಿ ಸುಳ್ಯದಲ್ಲಿ ವೃತ್ತಿನಿರತ ರಾದರು. ಮುಂದೆ ಫಾರೆಸ್ಟ್ ರೇಂಜ್ ಆಫೀಸರ್ಸ್ ಟ್ರೈೇನಿಂಗ್‌ಗಾಗಿ ಕೊಯಮತ್ತೂರಿನ ಮದ್ರಾಸ್ ಫಾರೆಸ್ಟ್ ಕಾಲೇಜ್ ಸೇರಿದರು. ತರಬೇತಿಯ ಬಳಿಕ 1953ರಲ್ಲಿ ಮದುಮಲೈಯಲ್ಲಿ, ನಂತರ 1956ರಲ್ಲಿ ಕಾಕನಕೋಟೆಯಲ್ಲಿ ಪೋಸ್ಟಿಂಗ್ ಆಗಿ ಕಾಡನ್ನೇ ಉಸಿರಾಡಿದರು.
ಅವರ ಕಾಡಿನ ಅನುಭವಗಳು, ಮೈಸೂರು ಮಹಾರಾಜರೊಡನೆ ಬೇಟೆಯ ಅನುಭವಗಳು, ಮೈಸೂರು ಖೆಡ್ಡಾದ ಅನುಭವಗಳು ಬಹು ಅಮೂಲ್ಯವಾದವು. 1965ರಿಂದ 1972ರ ವರೆಗೆ ಅವರು ಫಾರೆಸ್ಟ್ ವೈಲ್ಡ್ ಲೈಪ್ ಆಫೀಸರ್ ಆಗಿ ಮೈಸೂರು ಮಹಾರಾಜರ ಹುಲಿಬೇಟೆ, ಆನೆಬೇಟೆಗಳಲ್ಲಿ ಸಹಾಯಕರಾಗಿದ್ದರು. ಕಾಕನಕೋಟೆಯ ದಟ್ಟ ಕಾಡು! ಫಾರೆಸ್ಟ್ ವಿಭಾಗದ ಈ ಕ್ವಾರ್ಟರ್ಸ್ ಮನೆ ಬಿಟ್ಟರೆ ದೂರದಲ್ಲಿ ಒಂದೆರಡು ಕುರುಬರ ಮನೆಗಳು. ಸರಿರಾತ್ರಿಯಲ್ಲಿ ಮಡದಿಗೆ ಹೆರಿಗೆ ಬೇನೆ ಆರಂಭ ವಾಯ್ತು. ಜೊತೆಯಲ್ಲಿರಲು ಊರಿನಿಂದ ಬಂದಿದ್ದ ತಂಗಿ ಚಂದ್ರಿ ಚಿಕ್ಕಮ್ಮನ ಬಳಿ ಮಡದಿ ಮತ್ತು ಎಳೆಯ ಮಕ್ಕಳನ್ನು ಬಿಟ್ಟು, ಸೂಲಗಿತ್ತಿಯನ್ನು ಕರೆತರಲು ಆ ನಟ್ಟಿರುಳಿನಲ್ಲಿ ಕಬಿನಿ ನದಿ ದಡದ ಮಾಸ್ತಿಗುಡಿಯಾಚೆ ಅಂಕಲ್ ಧಾವಿಸಿದರು. ಸುತ್ತಲೂ ಆನೆಗಳು ಘೀಳಿಡುವ, ನರಿಗಳು ಊಳಿಡುವ ಸದ್ದು; ಅಂಕಲ್ ಕೊನೆಗೂ ಸೂಲಗಿತ್ತಿಯೊಡನೆ ಮನೆ ತಲುಪಿ, ಮಗು ಭುವಿಗಿಳಿದು ಬಂದಾಗ, ಅದರ ಮೊದಲ ಅಳು ಸನಿಹದಲ್ಲೇ ಧ್ವನಿಸಿದ ಮೃಗದ ಘರ್ಜನೆಯೊಡನೆ ಮೇಳವಿಸಿ, ಅಂಕಲ್ ಮಗುವನ್ನು ವನಜಾ ಎಂದೇ ಹೆಸರಿಸಿದರು. ಮನೆಯಲ್ಲಿ ಕುಡಿವ ನೀರಿನ ಬಾವಿಯೇನೂ ಇರದೆ, ಆಳುಗಳು ದೂರದಿಂದ ನೀರು ಹೊತ್ತು ತರುತ್ತಿದ್ದ ದಿನಗಳು. ಅಮ್ಮ ಬಟ್ಟೆ ಒಗೆಯಲು ಹೊಳೆಗೆ ಹೋಗುವಾಗ ಮಕ್ಕಳೂ ಜೊತೆಗೆ. ಹೊಳೆಗೆ ನೀರು ಕುಡಿಯಲು ಬರುತ್ತಿದ್ದ ಆನೆಗಳು; ಸುತ್ತ ಹುಲ್ಲು ಮೇಯುವ ಜಿಂಕೆಗಳೊಡನೆ ಆಡಿ ಬೆಳೆದ ಮಕ್ಕಳು. ಒಂದಿನ ಅಂಕಲ್, ಪತ್ನಿ, ಮಕ್ಕಳು ಸುಧಾ, ಪ್ರಶಾಂತ್, ಜ್ಯೋತಿಯರೊಡನೆ ಬೆತ್ತದ ತೆಪ್ಪದಲ್ಲಿ ಕಬಿನಿ ಹೊಳೆಯಲ್ಲಿ ವಿಹಾರ ಹೊರಟಾಗ, ಇದ್ದಕ್ಕಿದ್ದಂತೆಯೇ ನದಿಯಲ್ಲಿ ಸೆಳೆತವೇರಿ ಏರಿದ ಹರಿವಿನಲ್ಲಿ ನಿಯಂತ್ರಿಸಲಾಗದೆ, ತೆಪ್ಪವು ನಾಲ್ಕೈದು ಮೈಲು ದೂರ ಸಾಗಿ ಭೀತ ಮಕ್ಕಳ ಬೊಬ್ಬೆ, ಅಳುವಿನೊಂದಿಗೆ ಕೊನೆಗೂ ದಡವೊಂದನ್ನು ಸೇರಿದ್ದು ಆ ಮಕ್ಕಳ ಮನದಲ್ಲಿ ಅಳಿಯದ ನೆನಪು.
ಮತ್ತೊಂದು ದಿನ ಮಧ್ಯಾಹ್ನ ಊಟದ ಹೊತ್ತಿಗೆ ಮನೆಗೆ ಮರಳಿದ ಅಂಕಲ್, ಕಿಟಿಕಿಯೇರಿ ಒಳನುಸುಳಲಿದ್ದ ಕೃಷ್ಣಸರ್ಪ ವನ್ನು ಕಂಡು, ಒಳಗಿದ್ದ ಮಕ್ಕಳನ್ನು ನೆನೆದು, ಅಯಾಚಿತವಾಗಿ ಕೋವಿಯೆತ್ತಿ ಗುರಿಯಿಟ್ಟಾಗ ಸಿಡಿದ ಗುಂಡಿಗೆ ಈಡಾದ ಆ ಕೃಷ್ಣಸರ್ಪವು ಹೆಡೆಯೆತ್ತಿ ಪ್ರಾಣ ಬಿಟ್ಟಿತ್ತು. ಮತ್ತೆ ಗಂಧದ ಕೊರಡಿನ ಚಿತೆಯಲ್ಲಿ ಸರ್ಪಸಂಸ್ಕಾರವೂ ನಡೆದಿತ್ತು. ಮೊದಲ ಮಗು ಸುಧಾ ಊರಲ್ಲಿ ಜನಿಸಿದರೆ, ಪ್ರಶಾಂತ್ ಕಾರ್ಕಳದಲ್ಲೂ, ಜ್ಯೋತಿ ಬೇಗೂರಲ್ಲೂ, ಕಾಕನಕೋಟೆಯ ವನಜಳ ಬಳಿಕ ಕೊನೆಯವಳು ಸಂಧ್ಯಾ ಮುಂಬೈಯಲ್ಲೂ ಜನಿಸಿದರು. ಅರಣ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ತರಬೇತು ಪಡೆದಿದ್ದ ಅಂಕಲ್ ಮನಮೋಹನ್, ಆನೆಗಳ ತರಬೇತಿ, ಟಿಂಬರ್ ಸಾಗಣೆೆ, ಸರ್ವೆ, ಗಿಡ ನೆಟ್ಟು ಬೆಳೆಸುವುದು ಹೀಗೆ ಎಲ್ಲದರಲ್ಲೂ ಪರಿಣತರಾಗಿದ್ದರು. ಈಗ ಇತಿಹಾಸ ಸೇರಿರುವ ಜಗತ್ಪ್ರಸಿದ್ಧ ಮೈಸೂರು ಖೆಡ್ಡಾದ ಮೂರು ಪ್ರದರ್ಶನಗಳಲ್ಲೂ ಗೇಮ್ ಆಫೀಸರ್ ಆಗಿ ಪ್ರಮುಖ ಪಾತ್ರ ವಹಿಸಿದ್ದರು. ಖೆಡ್ಡಾದ ಆರಂಭದಲ್ಲಿ ಬಂಡೀಪುರ, ಕಲ್ಗೆರೆ, ಬಾನೂರುಗಳಿಂದ ಬೇಗೂರು ಕಾಡಿಗೆ ಬರುವ ಆನೆಗಳ ಹಿಂಡನ್ನು ಕಬಿನಿ ನದಿ ದಾಟಿಸಿ, ಅತ್ತಿತ್ತ ಚದುರದಂತೆ ಬೆಂಕಿರೇಖೆಯ ಕಾವಲಲ್ಲಿ ಕಾಕನಕೋಟೆ ಕಾಡು ಸೇರುವಂತೆ ಮಾಡಿ ಅಲ್ಲಿ ಮೊದಲೇ ಸಿದ್ಧಪಡಿಸಿಟ್ಟ ಖೆಡ್ಡಾದೊಳಗೆ ಬೀಳುವಂತೆ ಮಾಡುವುದು ಅಪಾರ ಬುದ್ಧಿಶಕ್ತಿ, ಕೆಚ್ಚೆದೆ ಒಂದಾದ ಮಹಾ ಸಾಹಸಗಾಥೆ. ಆನೆಗಳ ಹಿಂಡಿನ ನಾಯಕನಾದ ಒಂಟಿಸಲಗವು ಬಹಳ ಅಪಾಯಕಾರಿಯಾಗಿದ್ದರೂ, ಅಂತಹ ಮೂರು ಗಂಡಾನೆ ಗಳನ್ನು 1968ರ ಖೆಡ್ಡಾದಲ್ಲಿ ಬಂಧಿಸಲಾಗಿತ್ತು. ಅವೇ ಭೀಷ್ಮ, ದ್ರೋಣ ಮತ್ತು ಕೃಪ. ಖ್ಯಾತ ಸಿನೆಮಾ ನಿರ್ದೇಶಕ ಎಂ.ಎಸ್.ಸತ್ಯು ಅವರು, ರಶ್ಯನ್ ಸಹಭಾಗಿತ್ವದಲ್ಲಿ ಅಲೆಕ್ಸಾಂಡರ್ ಜಗುರ್ಡಿ ಅವರೊಡನೆ ನಿರ್ದೇಶಿಸಿದ ಚಲನಚಿತ್ರ ‘ಕಾಲಾ ಪರ್ವತ್ - ದ ಬ್ಲಾಕ್ ವೌಂಟನ್’ 1969ರಲ್ಲಿ ಕಾಕನಕೋಟೆ ಕಾಡಿನಲ್ಲಿ ಚಿತ್ರೀಕರಿಸಲ್ಪಟ್ಟಿತು. ಅಂಕಲ್ ಮನಮೋಹನ್ ವಾಸವಾಗಿದ್ದ ಮನೆಯಲ್ಲೇ ಇದ್ದ ಫಾರೆಸ್ಟರ್ ಪ್ರಭಾಕರನ್ ಮತ್ತವರ ಸಂಸಾರ ಚಿತ್ರದಲ್ಲಿ ಪಾತ್ರಧಾರಿಗಳಾಗಿತ್ತು. ಚಿತ್ರದಲ್ಲಿ ನೀರಿನ ಅಭಾವದಿಂದ ಸ್ಥಿಮಿತ ಕಳಕೊಂಡ ಆನೆಯೊಂದು ಮಗುವೊಂದನ್ನು ತುಳಿಯುವ ದೃಶ್ಯವೊಂದನ್ನು ಚಿತ್ರೀಕರಿಸಬೇಕಿತ್ತು. ಭೀತ ಜನರ ಓಟದ ದೃಶ್ಯದ ನಡುವೆ ಮಗುವಿನ ಬದಲಿಗೆ ಬೊಂಬೆಯೊಂದನ್ನು ಇರಿಸಿದರೂ, ಬಳಿಸಾರಿದ ಆನೆ ಮಗುವಿನಂತೇ ಕಾಣುತ್ತಿದ್ದ ಆ ಬೊಂಬೆಯನ್ನು ತುಳಿವಂತೆ ಮಾಡುವ ಯತ್ನ ಸಫಲವಾಗಲೇ ಇಲ್ಲ. ಎಷ್ಟೋ ರೀಟೇಕ್‌ಗಳಾದರೂ ಅದು ನಡೆಯದಾಗ, ಆನೆಯ ಪಾದವನ್ನು ಸ್ಟಪ್ ಮಾಡಿ ತಯಾರಿಸಿದ್ದ ಪೀಠವನ್ನು ತರಿಸಿ ಆ ಪಾದವನ್ನು ಮಾತ್ರ ತುಳಿವ ಕಾಲಿನಂತೆ ತೋರಿ ಚಿತ್ರೀಕರಣ ಮಾಡಬೇಕಾಗಿ ಬಂದುದು ಮರೆಯಲಾಗದ ಘಟನೆ. ಕಳೆದ ಆ ಸ್ಮರಣೀಯ ದಿನಗಳ ಬಗ್ಗೆ ಮಾತನಾಡುವಾಗ, ಈ ಘಟನೆಯನ್ನು ನೆನೆದು, ಆ ಚಿತ್ರೀಕರಣವನ್ನು ಅಂಕಲ್‌ನ ಮಕ್ಕಳೊಡನೆ ಕಣ್ಣಾರೆ ಕಂಡಿದ್ದ, ಆಗ ಎಂಎಸ್ಸಿ. ಕಲಿಯಲೆಂದು ಮೈಸೂರಲ್ಲಿ ಅಂಕಲ್ ಮನೆಯಲ್ಲಿದ್ದ ಗೆಳತಿ ದಯಾ. 1972ರಲ್ಲಿ ನಡೆದ ಕೊನೆಯ ಖೆಡ್ಡಾ ನೋಡಲು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್, ರಶ್ಯದ ನಾಯಕ ಬುಲ್ಗಾನಿನ್, ಶ್ರೀಲಂಕಾದ ಅಧ್ಯಕ್ಷೆ ಸಿರಿಮಾವೋ ಬಂಡಾರನಾಯಕೆ, ಮೈಸೂರು ಮಹಾರಾಜರು, ಕಾಮರಾಜ ನಾಡಾರ್ ಅವರು ಮುಂತಾದ ದೇಶವಿದೇಶಗಳ ಗಣ್ಯರು ನೆರೆದಿದ್ದರು. ಕಬಿನಿ ಹೊಳೆಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಖೆಡ್ಡಾ ನಡೆಯುತ್ತಿದ್ದ ಜಾಗ ಮುಳುಗಡೆಯಾಯ್ತು. ಅಂತಹ ಇನ್ನೊಂದು ಸ್ಥಳವನ್ನರಸುವ ಯತ್ನ ಸಫಲವಾಗದೆ ವಿಶ್ವವಿಖ್ಯಾತ ಮೈಸೂರು ಖೆಡ್ಡಾ ಇತಿಹಾಸದ ಬಸಿರಲ್ಲಿ ಹುದುಗಿ ಹೋಯ್ತು. ಮೈಸೂರು ಮೃಗಾಲಯದಲ್ಲಿ ಅಸಿಸ್ಟೆಂಟ್ ಕನ್ಸರ್ವೇಟರ್ ಆಫ್ ಫಾರೆಸ್ಟ್ಸ್ ಆಗಿ ನೇಮಕ ಗೊಂಡ ಅಂಕಲ್‌ಗೆ ಮೃಗಾಲಯದ ಎಲ್ಲ ಪ್ರಾಣಿ, ಪಕ್ಷಿಗಳೊಡನೆ ಆತ್ಮೀಯ ಬಂಧವಿತ್ತು. ಮೈಸೂರಿನ ಮನೆಯಲ್ಲಿದ್ದ ಸಿನಿ ಎಂಬ ಕಾಡುಕುರಿ, ರಾಮು ಎಂಬ ಮಲಬಾರ್ ಸ್ಕ್ವಿರಿಲ್, ಮತ್ತೆರಡು ನವಿಲುಗಳು ಅವರ ಮನೆಯ ಸದಸ್ಯರಂತೇ ಇದ್ದುವು. ನಿವೃತ್ತಿಯ ಬಳಿಕ ಫಾರೆಸ್ಟ್ ಪ್ಲಾಂಟೇಶನ್ ಕಾರ್ಪೊರೇಶನ್‌ನಲ್ಲಿ ಅದೇ ಹುದ್ದೆಯಲ್ಲಿ ಮುಂದುವರಿದ ಅಂಕಲ್, 1980ರಲ್ಲಿ ವೃತ್ತಿಗೆ ವಿದಾಯ ಹೇಳಿದರು. ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಗೇಮ್ ಆಫೀಸರ್ ಆಗಿ ಅರಮನೆಯಲ್ಲಿ ನಿಯುಕ್ತರಾದ ಅಂಕಲ್ ಮನಮೋಹನ್, ಮಹಾರಾಜರ ಒಳ್ಳೆಯತನದ ಬಗ್ಗೆ ಹೃದಯ ಬಿಚ್ಚಿ ನುಡಿಯುತ್ತಿದ್ದರು. ನಿಷ್ಣಾತ ಬೇಟೆಗಾರರಾದ ಮಹಾರಾಜರ ಗುರಿ ಎಂದೂ ತಪ್ಪುತ್ತಿರಲಿಲ್ಲವೆಂದೂ, ಬೇಟೆಯ ನಿಯಮಗಳನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರೆಂದೂ, ಬೇಟೆಯ ಸಾಮಗ್ರಿಗಳ ಬಗ್ಗೆ ಅವರ ಜ್ಞಾನ ಅಪಾರವೆಂದೂ ಅವರನ್ನುತ್ತಿದ್ದರು. ನಾಲ್ಕೂವರೆ ಅಡಿ ಉದ್ದದ ದಂತ ಇರುವ ಬಲು ಅಪಾಯಕಾರಿ ಒಂಟಿ ಸಲಗಗಳನ್ನು ಮಾತ್ರ ಬೇಟೆಯಾಡುತ್ತಿದ್ದರು, ಮಹಾರಾಜರು. ಪತ್ನಿ ರೇವತಿ, ಮಕ್ಕಳು ಸುಧಾ, ವನಜಾ, ಪ್ರಶಾಂತ್, ಜ್ಯೋತಿ, ಸಂಧ್ಯಾರ ಸಂತೃಪ್ತ ಕುಟುಂಬವದು. ಮೈಸೂರಲ್ಲಿದ್ದಾಗ ಅವರ ಮನೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ಸಮೀಪ ಬಂಧುಗಳಿಗೆ ಪ್ರೀತಿಯ ಆಶ್ರಯತಾಣವಾಗಿತ್ತು. ಅಂಕಲ್ ಹೆಚ್ಚಾಗಿ ಟೂರ್‌ನಲ್ಲೇ ಇರುತ್ತಿದ್ದುದರಿಂದ ಮನೆ, ಮಕ್ಕಳ ಜವಾಬ್ದಾರಿಯೆಲ್ಲ ಪತ್ನಿ ರೇವತಿ ಚಿಕ್ಕಮ್ಮನ ಮೇಲಿತ್ತು. ಕಾಡನ್ನೂ, ವನ್ಯಜೀವಿಗಳನ್ನೂ ಪ್ರೀತಿಸಿದ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಯಾಗಿದ್ದ ಅಂಕಲ್ ಮನಮೋಹನ್ ಸರಳ ಜೀವನವನ್ನು ಬಾಳಿದವರು. ಅವರ ಸೇವೆಗೆ ಮೆಚ್ಚಿ ಮಹಾರಾಜರು ಚಾಮುಂಡಿ ಬೆಟ್ಟದ ತಪ್ಪಲಲ್ಲಿ 28 ಎಕ್ರೆ ಭೂಮಿಯನ್ನು ಇನಾಮಾಗಿ ನೀಡಿದ್ದರು. ಆ ಭೂಮಿಯಲ್ಲಿ ರೇಷ್ಮೆ ಕೃಷಿ, ತೆಂಗು, ದ್ರಾಕ್ಷಿ ಬೆಳೆಯುತ್ತಿದ್ದ ಅಂಕಲ್, ದ್ರಾಕ್ಷಿ ಬೆಳೆಯ ಲಾಭ, ನಷ್ಟದ ಬಗ್ಗೆ, ಬಂದರೆ ದ್ರಾಕ್ಷಿ, ಹೋದರೆ ರುದ್ರಾಕ್ಷಿ, ಎಂದನ್ನುತ್ತಿದ್ದರು. ನಿವೃತ್ತಿಯ ಬಳಿಕ ಅಂಕಲ್ ಬೆಂಗಳೂರಿಗೆ ಬಂದು ನೆಲೆಸಿದರು. ರೇವತಿ ಚಿಕ್ಕಮ್ಮ ವಿಧಿವಶರಾದ ಮೇಲೆ ಒಂಟಿಯಾಗೇ ಜೀವಿಸಿದ್ದು, ಒಂದು ಪ್ರಾತಃಕಾಲದ ವಾಯುವಿಹಾರದಲ್ಲಿ ಪ್ರಕೃತಿಯ ಮಡಿಲಲ್ಲೇ ಹೃದಯಾಘಾತಕ್ಕೆ ಈಡಾಗಿ ನಮ್ಮನ್ನು ಅಗಲಿದರು. ಅವರು ಬರೆಯುತ್ತಿದ್ದ ಪತ್ರಗಳೂ, ಮಾಸಿಹೋದ ಅಮೂಲ್ಯ ಫೋಟೊಗಳೂ ಅವರ ಸ್ಮತಿಸಂಚಯವಾಗಿ ನನ್ನಲ್ಲುಳಿದಿವೆ.