ಭಾರತದ ಪ್ರಪ್ರಥಮ ಚಿತ್ರನಟಿಯ ಕಥೆ ಹೇಳುವ ಕಮಲಾಬಾಯಿ
ಭಾರತದಲ್ಲಿ ಮೂಕಿ ಚಿತ್ರಗಳ ಆರಂಭದ ಯುಗದಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ರೆಂದರೆ ಈಗಿನ ತಲೆಮಾರಿನ ಜನರು ಅಚ್ಚರಿಪಡುವುದು ಸಹಜ. ಆದರೆ ರಂಗಭೂಮಿ ನಟಿಯರಾದ ದುರ್ಗಾಬಾಯಿ ಕಾಮತ್ ಹಾಗೂ ಅವರ ಪುತ್ರಿ ಕಮಲಾಬಾಯಿ 1913ರಲ್ಲಿ ನಿರ್ಮಾಣವಾದ ದಾದಾಬಾಯಿ ಫಾಲ್ಕೆ ನಿರ್ದೇಶನದ ಮೋಹಿನಿ ಭಸ್ಮಾಸುರದಲ್ಲಿ ನಟಿಸುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದರು. ಭಾರತದ ಪ್ರಪ್ರಥಮ ಸಿನೆಮಾನಟಿಯರೆಂಬ ದಾಖಲೆಯ ಈ ತಾಯಿ, ಮಗಳ ಪಾಲಾಯಿತು. ದಶಕಗಳು ಉರುಳಿದವು ಚಿತ್ರರಂಗ ಭಾರೀ ಬೆಳವಣಿಗೆಯನ್ನು ಕಾಣುತ್ತಿದ್ದಂತೆಯೇ ಈ ನಟಿಯರ ನೆನಪುಗಳ, ಕಾಲದ ಮರೆಗೆ ಸರಿದವು.
1980ರ ಕೊನೆಯ ವರ್ಷಗಳು. ಸಾಕ್ಷಚಿತ್ರವೊಂದನ್ನು ಪೂರ್ತಿಗೊಳಿಸಿದ ಹುರುಪಿನಲ್ಲಿದ್ದ ಜನಪ್ರಿಯ ಡಾಕ್ಯುಮೆಂಟರಿ ಚಿತ್ರಗಳ ಸಂಕಲನಕಾರಳಾದ ರೀನಾಮೋಹನ್ ಭಾರತೀಯ ಮೂಕಿ ಚಿತ್ರಗಳ ಕುರಿತು ಪುಸ್ತಕವೊಂದನ್ನು ಬರೆಯಲು ಯೋಚಿಸುತ್ತಿದ್ದರು.
ಆಗ ಅವರಿಗೆ ನೆನಪಾಗಿದ್ದು ಭಾರತೀಯ ಚಿತ್ರರಂಗದ ಪ್ರಪ್ರಥಮ ನಟಿಯರಾದ ದುರ್ಗಾಬಾಯಿ ಕಾಮತ್ ಹಾಗೂ ಕಮಲಾಬಾಯಿ ಗೋಖಲೆ (ವಿವಾಹದ ಬಳಿಕ ಗೋಖಲೆ ಉಪನಾಮ ಸೇರಿಕೊಂಡಿತು). ಪತ್ರಿಕೆಯೊಂದರಲ್ಲಿ ಬಂದ ಲೇಖನವೊಂದು. ಕಮಲಾಬಾಯಿ ಗೋಖಲೆ ಪುಣೆಯಲ್ಲಿ ನೆಲೆಸಿದ್ದರೆಂಬುದನ್ನು ಬಹಿರಂಗಪಡಿಸಿತು. ಮುಂಬೈ ನಿವಾಸಿಯಾದ ರೀನಾ ಅವರಿಗೆ ಪುಣೆ ಅಷ್ಟೇನೂ ದೂರದ ಊರಾಗಿರಲಿಲ್ಲ. ತಡಮಾಡದೆ ರೀನಾ ಅವರು ದಿಗ್ದರ್ಶಕಿ ಹಾಗೂ ಪತ್ರಕರ್ತೆ ರಾಣಿ ದೇ ಬುರ್ರಾ ಅವರನ್ನು ಸಂಪರ್ಕಿಸಿದರು. ರಾಣಿ ಬುರ್ರಾ ಅವರು ಇನ್ನೋರ್ವ ಹಿರಿಯ ನಟಿ ರೇಖಾ ಸಬ್ನಿಸ್ ಮೂಲಕ ಕಮಲಾ ಅವರ ಬಗ್ಗೆ ಮಾಹಿತಿ ಪಡೆದರು. ರೇಖಾ ಸಬ್ನಿಸ್ ಮೂಲಕ ಕಮಲಾ ಗೋಖಲೆ ಅವರ ಮೊಮ್ಮಗ,ಜನಪ್ರಿಯ ನಟ ವಿಕ್ರಮ್ ಗೋಖಲೆ ಅವರ ಪರಿಚಯವಾಯಿತು.
ಹೀಗೆ ಪುಸ್ತಕ ಬರೆಯಬೇಕೆಂದು ಯೋಚಿಸಿದ್ದ ರೀನಾ ಅವರಿಗೆ ಕಮಲಾ ಬಗ್ಗೆ ಸಾಕ್ಷಚಿತ್ರವನ್ನು ಯಾಕೆ ನಿರ್ಮಿಸಬಾರದು ಎಂಬ ಚಿಂತನೆ ಮೂಡಿಬಂದಿತು. ಇದರ ಫಲಶ್ರುತಿಯೆಂಬಂತೆ ಭಾರತದ ಅತ್ಯುತ್ತಮ ಸಾಕ್ಷಚಿತ್ರವೊಂದು ನಿರ್ಮಾಣಗೊಂಡಿತು. ಒಂದು ಕಣ್ಣು,ಕುರುಡಾಗಿರುವ, ಕುಂಟು ಕಾಲಿನ, ಹಲ್ಲುಗಳಿಲ್ಲದ ಕಮಲಾಬಾ, ಸಾಕ್ಷಚಿತ್ರದಲ್ಲಿ ಯಾವುದೇ ಕೃತಕತೆ ಇಲ್ಲದೆ ಸಹಜವಾಗಿಯೇ ತನ್ನನ್ನು ಅಭಿವ್ಯಕ್ತಿಗೊಳಿಸಿದ್ದಾರೆ.
47 ನಿಮಿಷಗಳ ಈ ಸಾಕ್ಷಚಿತ್ರವು 1988ರಲ್ಲಿ ಆರಂಭಗೊಂಡಿತು. ಈ ಸಾಕ್ಷಚಿತ್ರದ ತಯಾರಿ 1991ರಲ್ಲಿ ಪೂರ್ಣಗೊಂಡಿತು ಹಾಗೂ 1992ರಲ್ಲಿ ಚೊಚ್ಚಲ ಪ್ರದರ್ಶನ ಕಂಡಿತು. ಕಮಲಾಬಾಯಿ ಸಾಕ್ಷಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರವೂ ಲಭಿಸಿತು. ಹಲವಾರು ವರ್ಷಗಳ ಕಾಲ ಈ ಸಾಕ್ಷಚಿತ್ರವು ದೇಶ,ವಿದೇಶಗಳಲ್ಲಿ ಅನೇಕ ಪ್ರದರ್ಶನಗಳನ್ನು ಕಂಡಿತು. ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟಲ್‌ಮೆಂಟ್ಸ್ ಆಯೋಜಿಸಿದ ಅರ್ಬನ್ ಲೆನ್ಸ್ ಚಲನಚಿತ್ರೋತ್ಸವದಲ್ಲಿ ಕಮಲಾಬಾಯಿ ಮತ್ತೊಮ್ಮೆ ಪ್ರದರ್ಶಿತಗೊಂಡಿತು.
‘‘ಕಮಲಾಬಾಯಿ ಸಾಕ್ಷಚಿತ್ರವು ನನಗೊಂದು ದೊಡ್ಡ ಮಟ್ಟದ ಕಲಿಕಾ ಅನುಭವವನ್ನು ನೀಡಿತು. ಅದು ಸಂಕಲನದ ಬಗ್ಗೆ ಅಪಾರ ಜ್ಞಾನವನ್ನು ಒದಗಿಸಿದಲ್ಲದೆ, ಬದುಕು ಹೇಗೆಂಬುದನ್ನು ತೋರಿಸಿಕೊಟ್ಟಿತು. ಈ ಸಾಕ್ಷಚಿತ್ರವು ವೃದ್ಧಾಪ್ಯದ ಸಡಗರವೂ ಹೌದು’’ ಎಂದು ರೀನಾ ಮೋಹನ್ ಹೇಳುತ್ತಾರೆ.
ಕಮಲಾಬಾಯಿ ಸಾಕ್ಷಚಿತ್ರವು, ವೃದ್ಧೆ ಕಮಲಾ ಗೋಖಲೆ ಅವರು ತಾನು ಕಿರಿಯ ವಯಸ್ಸಿನವಳಾಗಿದ್ದಾಗ ತೆಗೆದಿದ್ದ ಛಾಯಾಚಿತ್ರವೊಂದನ್ನು ದಿಟ್ಟಿಸಿ ನೋಡುತ್ತಿರುವ ದೃಶ್ಯದೊಂದಿಗೆ ಆರಂಭವಾಗುತ್ತದೆ. ಆಗ ಕಮಲಾಬಾಯಿಗೆ 88 ವರ್ಷ ವಯಸ್ಸು. ಸಾಕ್ಷಚಿತ್ರದಲ್ಲಿ ಕಮಲಾ ಅವರು ತಾನು ನಟಿಸಿದ್ದ ನಾಟಕವೊಂದರ ದೃಶ್ಯವನ್ನು ಪುನರಾಭಿನಯಿಸಿದ್ದಾರೆ. ಅವರ ಅಸಾಧಾರಣ ನೆನಪಿನ ಶಕ್ತಿಯ ಆಕೆ, ತಾನು ಹಲವಾರು ದಶಕಗಳ ಹಿಂದೆ ನಾಟಕದಲ್ಲಿ ಅಡಿದ್ದ ಸಂಭಾಷಣೆಯನ್ನು ಅರಳುಹುರಿದಂತೆ ಹೇಳಿದ್ದಾರೆ.
ಕಮಲಾ ಅವರು ಪುಣೆಯ ಕೊತುರ್ಡ್ ಪ್ರದೇಶದಲ್ಲಿ ಏಕಾಂಗಿಯಾಗಿ ವಾಸವಾಗಿದ್ದಾರೆ. ಅವರ ಫ್ಲಾಟ್ ಹೊರಗಿನಿಂದ ಬೀಗ ಜಡಿಯಲಾಗುತ್ತಿದ್ದು, ಕೆಲಸದಾಳುಗಳು ಹಾಗೂ ಸಂದರ್ಶಕರ ಪ್ರವೇಶಕ್ಕಾಗಿ ನೆರಹೊರೆಯವರಿಗೆ ಜೋಡಿ ಕೀಲಿಕೈಗಳನ್ನು ನೀಡಲಾಗಿದೆ.
ಈ ಸಾಕ್ಷಚಿತ್ರವನ್ನು ನಿರ್ಮಿಸುವಾಗ ನಾವು ಹಲವಾರು ಮಿತಿಗಳೊಂದಿಗೆ ಚಿತ್ರೀಕರಣ ನಡೆಸಬೇಕಾಗಿತ್ತು. ಯಾಕೆಂದರೆ ಕಮಲಾ ಅವರಿಗೆ ಅತ್ತಿತ್ತ ಹೆಚ್ಚು ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಆಕೆ ಹೆಚ್ಚು ಸಮಯವನ್ನು ಹಾಸಿಗೆಯಲ್ಲಿ ಕುಳಿತೇ ಕಳೆಯುತ್ತಿದ್ದರು. ಹೀಗಾಗಿ ಅವರನ್ನು ಪ್ರತಿ ದಿನವೂ ಚಿತ್ರೀಕರಣದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೆಂದು ರೀನಾ ಮೋಹನ್ ನೆನಪಿಸಿಕೊಳ್ಳುತ್ತಾರೆ.
ಸಾಕ್ಷಚಿತ್ರದಲ್ಲಿ ಗೋಖಲೆ ಅವರು ಮರಾಠಿ ರಂಗಭೂಮಿ ಹಾಗೂ ಚಲನಚಿತ್ರರಂಗದಲ್ಲಿನ ತನ್ನ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಸ್ತ್ರೀಲಂಪಟ ತಂದೆಯ ನಿಂದನೆ, ಸ್ವಾವಲಂಬಿಯಾಗಿ ಬದುಕುತ್ತಿದ್ದ ತನ್ನ ತಾಯಿ ಹಾಗೂ ನಾಟಕ ಕಂಪೆನಿಗಳ ಜೊತೆಗಿನ ಪ್ರವಾಸದಲ್ಲಿ ದೊರೆಯುತ್ತಿದ್ದ ಆನಂದದ ಕ್ಷಣಗಳನ್ನು ಅವರು ನೆನಪಿಸಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದ ಪಿತಾಮಹರೆನಿಸಿದ ದಾದಾ ಸಾಹೇಬ್ ಫಾಲ್ಕೆ ಅವರು ಈ ತಾಯಿ-ಮಗಳ ಜೋಡಿಯನ್ನು 1913ರಲ್ಲಿ ಮೋಹಿನಿ ಭಸ್ಮಾಸುರ ಚಿತ್ರದಲ್ಲಿ ನಟಿಸುವಂತೆ ಮಾಡಿದರು.
ಕಮಲಾ ಗೋಖಲೆಗೆ 25 ವರ್ಷ ವಯಸ್ಸಾಗಿದ್ದಾಗ ಅವರ ಪತಿ ರಘುನಾಥರಾವ್ ನಿಧನರಾದರು. ಆಗ ಕಮಲಾ ತನ್ನ ಮೂರನೇ ಗಂಡುಮಗುವಿಗೆ ಗರ್ಭಿಣಿಯಾಗಿದ್ದರು. ಪತಿಯನ್ನು ಕಳೆದುಕೊಂಡ ಬಳಿಕವೂ ಕಮಲಾ ನಾಟಕಗಳಲ್ಲಿ ಹಾಗೂ ಸಿನೆಮಾಗಳಲ್ಲಿ ಅಭಿನಯಿಸುವುದನ್ನು ಮುಂದುವರಿಸಿದರು.. ತಾನೊಬ್ಬ ಸಾಮಾನ್ಯ ನಟಿಯಾದರೂ, ಕಲೆಯ ಬಗ್ಗೆ ಅಪಾರವಾದ ಬದ್ಧತೆಯನ್ನು ಹೊಂದಿದ್ದಾಗಿ ಕಮಲಾ ಹೇಳುತ್ತಾರೆ. ಒಂದು ಸಮಯದಲ್ಲಿ ರಂಗಮಂದಿರವೊಂದರಲ್ಲಿ ಮಹಿಳೆಯರಿಂದ ತುಂಬಿದ್ದ ಬಾಲ್ಕನಿಯು ಅತಿಯಾದ ಭಾರದಿಂದ ಕುಸಿದುಬಿದ್ದಿತಾದರೂ, ನಾಟಕ ಮಾತ್ರ ನಿಲ್ಲಲೇ ಇಲ್ಲವೆಂದು ಗೋಖಲೆ ಸ್ಮರಿಸಿಕೊಳ್ಳುತ್ತಾರೆ.
ಚಿತ್ರೀಕರಣದ ಮೊದಲ ದಿನ ಕಮಲಾ ಅವರನ್ನು ಕಂಡಾಗ ಆರಂಭದಲ್ಲಿ ಕೆಲವು ಹೊತ್ತು ತನಗೆ ಏನು ಮಾಡಬೇಕೆಂಬುದೇ ತೋಚಲಿಲ್ಲವೆಂದು ರೀನಾಮೋಹನ್ ಹೇಳುತ್ತಾರೆ. ಗೋಖಲೆ ಅವರು ಆರಂಭದಲ್ಲಿ ಸಾಕ್ಷಚಿತ್ರದ ಬಗ್ಗೆ ಯಾವುದೇ ಬದ್ಧತೆಯನ್ನು ಪ್ರದರ್ಶಿಸಲಿಲ್ಲ ಹಾಗೂ ಕೇವಲ ಕೇಳಿದ ಪ್ರಶ್ನೆಗಳಿಗೆ ಮಾತ್ರವಷ್ಟೇ ಉತ್ತರಿಸುತ್ತಿದ್ದರು. ಆದರೆ ಎರಡನೆ ದಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿತು. ಹಾಸಿಗೆಯಿಂದ ಎದ್ದುಬರುವಲ್ಲಿ ಗೋಖಲೆ ಒಪ್ಪಿಕೊಂಡರು. ಹೀಗೆ ಕಮಲಾಬಾಯಿ ಸಾಕ್ಷ ಚಿತ್ರದ ಶೂಟಿಂಗ್ ನಿಧಾನವಾಗಿ ಚುರುಕುಗೊಂಡಿತೆಂದು ರೀನಾ ಮೆಲುಕುಹಾಕುತ್ತಾರೆ.
80 ಹಾಗೂ 90ರ ದಶಕದಲ್ಲಿ ಸಾಕ್ಷಚಿತ್ರಗಳ ತಯಾರಕರು ಅರ್ಥಿಕವಾಗಿ ಮುಗ್ಗಟ್ಟನ್ನು ಎದುರಿಸುತ್ತಲೇ ಅತ್ಯುತ್ತಮ ಕಲಾಕೃತಿಗಳನ್ನು ನೀಡಿದ್ದಾರೆಂಬುದಕ್ಕೆ ಕಮಲಾದೇವಿ ಸಾಕ್ಷಚಿತ್ರ ಒಂದು ಉತ್ತಮ ನಿದರ್ಶನ. ಈ ಸಾಕ್ಷಚಿತ್ರಕ್ಕಾಗಿ ರೀನಾ ಅವರ ಸ್ನೇಹಿತರು ಹಾಗೂ ಸಹವರ್ತಿಗಳು ಕಡಿಮೆ ಮೊತ್ತದ ಸಂಭಾವನೆ ಪಡೆದು ಇಲ್ಲವೇ ಉಚಿತವಾಗಿ ದುಡಿದು ಪ್ರಾಜೆಕ್ಟ್ ಸುಗಮವಾಗಿ ಸಾಗುವಲ್ಲಿ ಕೊಡುಗೆ ನೀಡಿದ್ದರು.
‘‘80ರ ದಶಕದ ಆನಂತರದಲ್ಲಿ ನಾವು ಪರಸ್ಪರ ಉಚಿತವಾಗಿ ಕೆಲಸ ಮಾಡುತ್ತಿದ್ದೆವು ಅಥವಾ ಪರಸ್ಪರ ಹಣ ಪಡೆದು ಕೆಲಸ ಮಾಡುತ್ತಿದ್ದೆವು ಎಂದು ರೀನಾ ಹೇಳುತ್ತಾರೆ.ಚಿತ್ರ ನಿರ್ಮಾಣದ ಸಮಯದಲ್ಲಿ ಯಾವುದೇ ಧಾವಂತವಿಲ್ಲ, ಯಾವುದೇ ಎರಡನೆ ಪಾಳಿಯಿರಲಿಲ್ಲ. ಚಿತ್ರೀಕರಣದ ಅವಧಿಯುದ್ದಕ್ಕೂ ನಾವು ಒಂದೇ ಫ್ಲಾಟ್‌ನಲ್ಲಿ ಉಳಿದುಕೊಂಡಿದ್ದೆವು.
ರೀನಾ ಮೋಹನ್ ಅವರು ಆಗಷ್ಟೇ ಮಂಜಿರಾ ದತ್ತಾ ನಿರ್ದೇಶನದ ‘ಬಾಬುಲವಾಲ್ ಭೂಯಾ’ (1987) ಸಾಕ್ಷಚಿತ್ರದ ಸಂಕಲನದಿಂದ ದೊರೆತ ಹಣವನ್ನು ಕಮಲಾಭಾಯಿಗೆ ಹೂಡಿಕೆ ಮಾಡಿದ್ದರು ಕಮಲಾಭಾಯಿ ಚಿತ್ರ ಪೂರ್ಣಗೊಂಡ ಹೊತ್ತಿಗೆ ಮೋಹನ್ ಸುಮಾರು 4 ಲಕ್ಷ ಅಧಿಕ ಹಣವನ್ನು ತನ್ನದೇ ಕೈಯಿಂದ ಖರ್ಚು ಮಾಡಬೇಕಾಯಿತು. ಕಮಲಾಭಾಯಿ ಸಾಕ್ಷಚಿತ್ರದಲ್ಲಿ ಅಳವಡಿಸಿಕೊಳ್ಳುವುದಕ್ಕಾಗಿ ಫಾಲ್ಕೆಯವರ ಕಾಲದ ಮೂಕಿ ಚಿತ್ರಗಳ ಕೆಲವು ದೃಶ್ಯಗಳ ಕ್ಲಿಪ್ಪಿಂಗ್‌ಗಳನ್ನು ಪಡೆಯುವುದಕ್ಕಾಗಿ ಅವರು 50 ಸಾವಿರ ರೂಪಾಯಿಗಳನ್ನು ಸಿನೆಮಾಛಾಯಾಗ್ರಾಹಕ ಅನಿಲ್ ಮೆಹ್ತಾ ಅವರಿಂದ ಸಾಲವಾಗಿ ಪಡೆಯಬೇಕಾಯಿತು.
ಚಿತ್ರನಿರ್ಮಾಪಕ ಆನಂದ್‌ಪಟವರ್ಧನ್‌ರಿಂದ ಪಡೆದ ಸಾಲದಿಂದ 16 ಎಂಎಂ ಕ್ಯಾಮರಾದಿಂದ ಕಮಲಾಬಾಯಿಯನ್ನು ಚಿತ್ರೀಕರಿಸಲಾಗಿತ್ತು.
ಕಮಲಾಬಾಯಿ ಸಾಕ್ಷಚಿತ್ರದ ಮೊದಲ ಪ್ರದರ್ಶನದ ಬಳಿಕ ಥಿಯೇಟರ್‌ನಲ್ಲಿದ್ದ ಪ್ರೇಕ್ಷಕರಲ್ಲಿ ದೀರ್ಘವಾದ ವೌನ ನೆಲೆಸಿತ್ತು ಎಂದು ರೀನಾ ಮೋಹನ್ ಸ್ಮರಿಸಿಕೊಳ್ಳುತ್ತಾರೆ. ಚಿತ್ರದ ಕುರಿತ ವಿಮರ್ಶೆ ಅತ್ಯಂತ ನಕಾರಾತ್ಮಕವಾಗಿತ್ತು. ಆದರೆ ಮೇಲ್ನೋಟಕ್ಕೆ ಅದೊಂದು ಕಮಲಾಬಾಯಿ ಅವರ ಸಂದರ್ಶನವೆಂಬಂತೆ ಭಾಸವಾಗುತ್ತಿತ್ತು. ಈ ಸಾಕ್ಷಚಿತ್ರದಲ್ಲಿ ಲವಲವಿಕೆ ಮಾಯವಾಗಿ ರುವುದು ಎದ್ದುಕಾಣುತ್ತಿತ್ತು.
ಕೊನೆಗೂ ಒಂದು ನಿರ್ಧಾರಕ್ಕೆ ಬಂದ ರೀನಾ ಮೋಹನ್ ಇನ್ನಷ್ಟು ಹಣವನ್ನು ಸಾಲ ಪಡೆದು, ಪುಣೆಗೆ ವಾಪಸಾದರು. ಕಮಲಾಬಾಯಿ ಸಾಕ್ಷ ಚಿತ್ರವನ್ನು ಅವರು ಇನ್ನೊಮ್ಮೆ ಮರು ಚಿತ್ರೀಕರಣ ನಡೆಸಿದರು. ಈ ಸಲ ಮಾತ್ರ ಕಮಲಾ ಗೋಖಲೆ ಅತ್ಯಂತ ತನ್ಮಯತೆ ಹಾಗೂ ಉತ್ಸಾಹದೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಕಮಲಾ ಅವರಲ್ಲಿ ಈ ಸಲ ತುಂಬಾ ‘ಮುದ್ದುತನ’ ಕಂಡುಬರುತ್ತಿತ್ತು ಎಂದು ರೀನಾ ನೆನಪಿಸಿಕೊಳ್ಳುತ್ತಾರೆ. ಸಾಕ್ಷಚಿತ್ರಕ್ಕಾಗಿ ರೀನಾ ಅವರು ಚಂದ್ರಕಾಂತ್ ಸೇರಿದಂತೆ ಕಮಲಾ ಅವರ ಇಬ್ಬರು ಪುತ್ರರು ಹಾಗೂ ವಿಕ್ರಮ್ ಗೋಖಲೆಯವರ ತಂದೆಯನ್ನು ಕೂಡಾ ಸಂದರ್ಶಿಸಿದರು.
ಆದಾಗ್ಯೂ ಈ ಸಾಕ್ಷಚಿತ್ರವು ಪೂರ್ಣಗೊಳ್ಳುವುದೆಂಬ ದೃಢವಿಶ್ವಾಸ ಗೋಖಲೆ ಕುಟುಂಬಕ್ಕೆ ಇರಲಿಲ್ಲ. ಆದರೆ ರೀನಾ ಅವರು ಅದನ್ನು ಸಾಧಿಸಿಯೇ ಬಿಟ್ಟರು. 1992ರಲ್ಲಿ ರಾಷ್ಟ್ರೀಯ ಸಿನೆಮಾ ಪುರಸ್ಕಾರವನ್ನು ಗಳಿಸಿದ ಬಳಿಕ ಕಮಲಾಬಾಯಿ, ದೂರದರ್ಶನ ಹಾಗೂ ಬಿಐ ಟಿವಿಯಲ್ಲಿ ಪ್ರದರ್ಶನಗೊಂಡಿತು. ದಿನದಿಂದ ದಿನಕ್ಕೆ ಕಮಲಾಬಾಯಿ ಸಾಕ್ಷಚಿತ್ರದ ಜನಪ್ರಿಯತೆ ಏರುತ್ತಲೇ ಹೋಯಿತು. ಹಲವು ಬಾರಿ ಪ್ರದರ್ಶನ ಕಂಡ ಈ ಸಾಕ್ಷಚಿತ್ರದಿಂದ ದೊರೆತ ಆದಾಯದಿಂದ ರೀನಾ ಅವರಿಗೆ ಹಾಕಿದ ಬಂಡವಾಳ ವಾಪಸ್ ಪಡೆಯಲು ಹಾಗೂ ಅವರ ನಿಸ್ವಾರ್ಥಿ ಚಿತ್ರತಂಡಕ್ಕೆ ಬಾಕಿಯಿದ್ದ ಹಣವನ್ನು ಪಾವತಿಸಲು ಸಾಧ್ಯವಾಯಿತು.
ಕಮಲಾಬಾಯಿ ಗೋಖಲೆ 1997ರಲ್ಲಿ ನಿಧನರಾದರು. ಆಗ ರೀನಾ ಅವರು, ತನ್ನ ಸ್ಕಿನ್ ಡೀಪ್ ಚಿತ್ರದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ. ಇಳಿವಯಸ್ಸಿನಲ್ಲೂ ಕಮಲಾಬಾಯಿ ಅವರ ತಾಳ್ಮೆ, ಉತ್ಸಾಹ ಹಾಗೂ ದಿಟ್ಟತನವು ನನ್ನನ್ನು ಅಪಾರವಾಗಿ ಸೆಳೆದಿತ್ತು ಎಂದು ರೀನಾ ಹೇಳುತ್ತಾರೆ. ‘‘ಕಮಲಾಬಾಯಿ ನಾನು ನಿರ್ದೇಶಿಸಿದ ಚೊಚ್ಚಲ ಸಾಕ್ಷಚಿತ್ರವಾಗಿತ್ತು. ಹೀಗಾಗಿ ನಾನು ಅದನ್ನು ಅಪಾರವಾಗಿ ಹಚ್ಚಿಕೊಂಡಿದ್ದೇನೆ. ಈ ಸಾಕ್ಷಚಿತ್ರವು ನನಗೆ ಬಹಳಷ್ಟನ್ನು ಕಲಿಸಿಕೊಟ್ಟಿದೆ. ಈ ಸಾಕ್ಷಚಿತ್ರವು ನನ್ನಲ್ಲಿ ಹೆಚ್ಚಿನ ಅರಿವನ್ನು ಮೂಡಿಸಿತು. ಒಟ್ಟಿನಲ್ಲಿ ಕಮಲಾಬಾಯಿ ನನಗೊಂದು ದಾರಿದೀಪ ವಾಯಿತು ಎಂದು ರೀನಾ ಭಾವುಕರಾಗಿ ಹೇಳುತ್ತಾರೆ.