ನಾಗರಿಕ ಸಮಾಜದ ಅನಾಗರಿಕ ಮುಖ

Update: 2019-08-25 18:41 GMT

ನಾಗರಿಕ ಸಮಾಜದ ಅನಾಗರಿಕ ಸ್ವಭಾವವೇ ದಲಿತರ ಒಂದು ವಿಶಿಷ್ಟ ಸವಾಲಾಗಿದೆ. ಆದ್ದರಿಂದ ದಲಿತರಿಗೆ ನಾಗರಿಕ ಹಾಗೂ ಸಾಂವಿಧಾನಿಕ ಹಕ್ಕುಗಳು ದೊರಕಬೇಕು ಹಾಗೂ ಅನುಷ್ಠಾನಿಸಲ್ಪಡಬೇಕು ಎಂಬಷ್ಟಕ್ಕೇ ದಲಿತ ವಾಗ್ವಾದ ನಿಲ್ಲದೆ, ಅದು ಈ ಹಂತವನ್ನು ಮೀರಿ ಹೋಗಬೇಕಾಗಿದೆ. ದಲಿತರ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವೈಫಲ್ಯವನ್ನು, ಸೋಲನ್ನು ಒಪ್ಪಿಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

‘‘ನಿಮ್ಮ ಜುಲೈ ನಾಲ್ಕನೇ ತಾರೀಕು ಎಂದರೆ ಅಮೆರಿಕದ ಗುಲಾಮನಿಗೆ ಏನು ಗೊತ್ತೆ? ನಾನು ಉತ್ತರಿಸುತ್ತೇನೆ: ವರ್ಷದ ಇತರ ಎಲ್ಲ ದಿನಗಳಿಗಿಂತ ಮಿಗಿಲಾಗಿ, ಆತ ಸತತವಾಗಿ ಯಾವ ಅನ್ಯಾಯ ಮತ್ತು ಕ್ರೌರ್ಯಕ್ಕೆ ಬಲಿಪಶುವಾಗಿದ್ದಾನೋ’ ಅದನ್ನು ಜ್ಞಾಪಿಸುವ ತಾರೀಕು ಅದು. ಅವನಿಗೆ ನಿಮ್ಮ ಸಮಾರಂಭ ಎಂಬುದು ಒಂದು ಮೋಸ, ಕಪಟ ನಾಟಕ. ನೀವು ಜಂಭ ಕೊಚ್ಚಿ ಕೊಳ್ಳುವ ಸ್ವಾತಂತ್ರ ಒಂದು ಅಪವಿತ್ರ ಪರವಾನಿಗೆ ನಿಮ್ಮ ರಾಷ್ಟ್ರೀಯ ಶ್ರೇಷ್ಠತೆ, ಒಂದು ದೊಡ್ಡ ಪ್ರದರ್ಶನ ನಿಮ್ಮ ಸಂತೋಷ ಸಂಭ್ರಮದ ಕೂಗುಗಳು ಶೂನ್ಯ ಮತ್ತು ಹೃದಯಹೀನ.. ಈಗ, ಅಮೆರಿಕದ ಜನರಿಗಿಂತ ಹೆಚ್ಚು ಆಘಾತಕಾರಿಯಾದ ಹಾಗೂ ಹಿಂಸಾತ್ಮಕವಾದ ಆಚರಣೆಗಳನ್ನು ಆಚರಿಸುತ್ತಿರುವವರು ಈ ಭೂಮಿಯ ಮೇಲೆ ಬೇರೆ ಎಲ್ಲಿಯೂ ಇಲ್ಲ’’
ಇವುಗಳು 1852ರ ಜುಲೈ 4ರಂದು ನ್ಯೂಯಾರ್ಕ್‌ನಲ್ಲಿ ಫ್ರೆಡರಿಕ್‌ಡಗ್ಲಾಸ್ ಮಾಡಿದ ಭಾಷಣದ ಕೆಲವು ಸಾಲುಗಳು. ಓರ್ವ ಗುಲಾಮನಾಗಿದ್ದು, ಬಳಿಕ ಗುಲಾಮಗಿರಿಯ ನಿರ್ಮೂಲನಕ್ಕಾಗಿ ಹೋರಾಡಿದವರ ಓರ್ವ ರಾಷ್ಟ್ರೀಯ ನಾಯಕನಾದ ವ್ಯಕ್ತಿ ಡಗ್ಲಾಸ್. ಅಮೆರಿಕದ ದಕ್ಷಿಣ ರಾಜ್ಯಗಳಲ್ಲಿ ಗುಲಾಮಗಿರಿ ರದ್ದಾಗುವ ಹತ್ತು ವರ್ಷಗಳ ಮೊದಲು ಆತ ಮಾಡಿದ ಭಾಷಣ ಇದು.


30ಕ್ಕೂ ಹೆಚ್ಚು ವರ್ಷಗಳ ನಂತರ, 1935ರ ಆಗಸ್ಟ್ 14ರಂದು, ಕೊಲಂಬಿಯಾ ವಿಶ್ವವಿದ್ಯಾನಿಲಯ ಹಾಗೂ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ ಪದವೀಧರ ಮತ್ತು ಅದಾಗಲೇ ಭಾರತದಲ್ಲಿ ದಮನಿತರ ಹಾಗೂ ಶೋಷಿತರ ಚಳವಳಿಯನ್ನು ಮುನ್ನಡೆಸುತ್ತಿದ್ದ ಡಾ. ಭೀಮರಾವ್ ಅಂಬೇಡ್ಕರ್ ಮೊತ್ತ ಮೊದಲ ಬಾರಿಗೆ ಮಹಾತ್ಮಾಗಾಂಧಿಯನ್ನು ಭೇಟಿಯಾದರು.
‘‘ಗಾಂಧೀಜಿ ನನಗೆ ನನ್ನ ಮಾತೃ ಭೂಮಿ ಇಲ್ಲ. ಯಾವನೇ ಒಬ್ಬ ಅಸ್ಪಶ್ಯ ಕೂಡ ಈ ದೇಶದ ಬಗ್ಗೆ ಹೆಮ್ಮೆಪಡಲಾರರು’’ ಅಂಬೇಡ್ಕರ್ ಗಾಂಧಿಗೆ ಹೇಳಿದರು. ನಿರೀಕ್ಷಿಸಿದಂತೆಯೇ ಅಂದು ಭಾರತದಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದ ಜಾತಿ(ವರ್ಣ) ಮನೋಧರ್ಮವು ಅಂಬೇಡ್ಕರ್‌ರವರ ಆಪಾದನೆಗೆ ಕಿವಿಕೊಡಲಿಲ್ಲ.
ಕಾಲ ಮತ್ತು ದೇಶದ ದೃಷ್ಟಿಯಿಂದ ತುಂಬ ಅಂತರವಿದೆಯಾದರೂ, ಡಗ್ಲಾಸ್ ಮತ್ತು ಅಂಬೇಡ್ಕರ್‌ರವರ ಮಾತುಗಳಲ್ಲಿ ಒಂದೇ ರೀತಿಯ ವೇದನೆ ಮತ್ತು ಸಿಟ್ಟು ಕಾಣಿಸುತ್ತದೆ. ಬಣ್ಣ ಅಥವಾ ಜಾತಿಯ ಕಾರಣಕ್ಕಾಗಿ ವ್ಯಕ್ತಿಗಳನ್ನು ಮನುಷ್ಯರ ಹಾಗೆ ಯಾಕೆ ನಡೆಸಿಕೊಳ್ಳುವುದಿಲ್ಲ? ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ಇಬ್ಬರೂ ಕೂಡ ತಮ್ಮ ಕಾಲದಲ್ಲಿ ಪ್ರಬಲವಾಗಿದ್ದ ಯೋಚನಾಕ್ರಮಕ್ಕೆ, ದೃಷ್ಟಿಕೋನಕ್ಕೆ ಸವಾಲೊಡ್ಡುತ್ತಾರೆ.

ವಸಾಹತು ಶಾಹಿಯ ನೊಗದಿಂದ ಭಾರತ ಬಿಡಿಸಿಕೊಂಡು 72 ವರ್ಷಗಳು ಕಳೆಯುತ್ತಿರುವಾಗ ಈ ಪ್ರಶ್ನೆ ಈಗಲೂ ನಮ್ಮನ್ನು ಕಾಡುತ್ತದೆ. 1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ರವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಭಾರತವನ್ನು ‘‘ಬದುಕು ಮತ್ತು ಸ್ವಾತಂತ್ರ’’ಕ್ಕೆ ಎಚ್ಚೆತ್ತ ಹಾಗೂ ಒಂದು ಹೊಸ ಯುಗವನ್ನು ಆರಂಭಿಸುತ್ತಿರುವ ದೇಶವೆಂದು ಘೋಷಿಸಿದ್ದರು.

ನಿಜ, ನಿಸ್ಸಂದೇಹವಾಗಿಯೂ ಭಾರತದ ದಲಿತರ ಜೀವನ ಜಗತ್ತು ಕಳೆದ 72 ವರ್ಷಗಳಲ್ಲಿ ತುಂಬ ಬದಲಾಗಿದೆ. ಅರ್ಥಶಾಸ್ತ್ರಜ್ಞ ಹಾಗೂ ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ತನ್ನ ‘‘ದಲಿತ್ಸ್ ಇನ್ ಇಂಡಿಯಾ; ಸರ್ಚ್ ಫಾರ್ ಎ ಕಾಮನ್ ಡೆಸ್ಟಿನಿ’’ಯಲ್ಲಿ ಹೇಳುವಂತೆ, ದೇಶದ ಪರಿಶಿಷ್ಟ ಜಾತಿಗಳ 17 ಶೇ. ಮಂದಿ ಕೃಷಿ ಮಾಡುತ್ತಿದ್ದಾರೆ; ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 12 ಶೇ. ಹಾಗೂ ನಗರ ಪ್ರದೇಶಗಳಲ್ಲಿ 28% ಮಂದಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ.57ಶೇ. ಮಂದಿ ಅಕ್ಷರಸ್ಥರಾಗಿದ್ದಾರೆ; ಎಸ್ಸಿ ಸಮುದಾಯಗಳಲ್ಲಿ ನಿರುದ್ಯೋಗ ಕಡಿಮೆಯಾಗಿದೆ; ಮತ್ತು ಸರಕಾರಿ ನೌಕರಿಗಳಲ್ಲಿ ಅವರ ಪಾಲು ಹೆಚ್ಚಳ ಕಂಡಿದೆ. ಆದರೂ ಕೂಡ, ಈ ಸುಧಾರಣೆಗಳು ಭಾರತದಲ್ಲಿ ಇಂದು ದಲಿತರ ಬದುಕಿನ ನಿಜವಾದ ವಾಸ್ತವಗಳನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತವೆಯೇ? ಇಲ್ಲ; ಇಂದಿಗೂ ಕೂಡ ಸಾಮಾಜಿಕ ಅನ್ಯಾಯ ಮುಂದುವರಿದಿದೆ ಮತ್ತು ಇದು ‘‘ಜಾತಿ ಎಂಬ ರಾಕ್ಷಸ’’ ಬೆಳೆಯುತ್ತಲೇ ಇರಲು ಕಾರಣವಾಗಿದೆ. ಅಂಬೇಡ್ಕರ್ ಸರಿಯಾಗಿಯೇ ಹೇಳಿದ್ದರು; ‘‘ನೀವು ಯಾವುದೇ ದಿಕ್ಕಿಗೆ ತಿರುಗಿದರೂ, ನಿಮ್ಮ ಹಾದಿಗೆ ಅಡ್ಡಬರುವ ರಾಕ್ಷಸನೆಂದರೆ ಜಾತಿ. ನೀವು ಈ ರಾಕ್ಷಸನನ್ನು ಕೊಲ್ಲದೆ ನಿಮಗೆ ರಾಜಕೀಯ ಸುಧಾರಣೆ, ಆರ್ಥಿಕ ಸುಧಾರಣೆ ಲಭ್ಯವಾಗುವುದಿಲ್ಲ.’’
ಉದಾಹರಣೆಗೆ, ಭಾರತದಲ್ಲಿ ಹಸಿವಿನ ಸಮಸ್ಯೆಯನ್ನು ತೆಗೆದುಕೊಳ್ಳಿ, ಹಲವಾರು ವಿಶ್ಲೇಷಕರು ಹೇಳುವಂತೆ, ಹಸಿವಿನಿಂದ ಮುಕ್ತವಾಗುವ ಅತ್ಯಂತ ಮೂಲಭೂತವಾದ ಸ್ವಾತಂತ್ರವನ್ನೇ ನೀಡಲು ಭಾರತ ವಿಫಲವಾಗಿದೆ. ಹಸಿವಿನಿಂದ ಮಾಪಕದಲ್ಲಿ ಭಾರತವು ಕಿನ್ಯಾ, ಮಲಾವಿ ಹಾಗೂ ಯುದ್ಧ ಪೀಡಿತವಾದ ಇರಾಕ್‌ಗಿಂತಲೂ ಹಿಂದೆ ಇದೆ. ಪಾಕಿಸ್ತಾನ ಹೊರತುಪಡಿಸಿ, ಭಾರತದ ಎಲ್ಲ ನೆರೆಯ ರಾಷ್ಟ್ರಗಳು-ನೇಪಾಲ, ಬಾಂಗ್ಲಾದೇಶ, ಚೀನಾ, ಶ್ರೀಲಂಕಾ ಮತ್ತು ಮ್ಯಾನ್ಮಾರ್-ಹಸಿವಿನ ಮಾಪಕದಲ್ಲಿ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿವೆ.
ಇದಕ್ಕಿಂತ ಹೆಚ್ಚು ಆತಂಕದ ವಿಷಯವೆಂದರೆ, ಜನಿಸಿ ಒಂದು ವರ್ಷವಾಗುವ ಮೊದಲೇ 20 ಮಕ್ಕಳಲ್ಲಿ ಒಂದು ಮಗು ಹಸಿವಿನಿಂದಾಗಿ ಸಾಯುತ್ತಿರುವಾಗಲೂ ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗದೇ ಇರುವುದು. ಹಾಗೆಯೇ, ಸರಕಾರವೇ ಒಪ್ಪಿಕೊಂಡಿರುವಂತೆ ಭಾರತದಲ್ಲಿ ಇಂದಿಗೂ ಕೈಗಳಿಂದಲೇ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ, ತಲೆ ಮೇಲೆ ಮಲ ಹೊರುವ ಪದ್ಧತಿ (ಮ್ಯಾನ್ಯುವಲ್ ಸ್ಕಾವೆಂಜಿಂಗ್) ಮುಂದುವರಿಯುತ್ತಲೇ ಇದೆ. ಈ ರೀತಿ ಮಲವಿಲೇವಾರಿ ಮಾಡುವ ಕೆಲಸದಲ್ಲಿ ಸುಮಾರು ಎಂಟು ಲಕ್ಷ ಮಂದಿ ತೊಡಗಿದ್ದಾರೆ. ಇವರಲ್ಲಿ 99ಶೇ. ಮಂದಿ ದಲಿತರು; ಇವರಲ್ಲಿ 95ಶೇ. ಮಂದಿ ಮಹಿಳೆಯರು.
ಮ್ಯಾನ್ಯುವಲ್ ಸ್ಕಾವೆಂಜಿಂಗ್ ಮುಂದುವರಿಯಲು ನೀರಿನ ಮತ್ತು ಇತರ ಸೌಕರ್ಯಗಳ ಕೊರತೆಯೇ ಕಾರಣವೆಂದು ನಮ್ಮನ್ನು ನಂಬಿಸಲು ಸರಕಾರಿ ಏಜನ್ಸಿಗಳು ಪ್ರಯತ್ನಿಸುತ್ತಿವೆ. ಆದರೆ ಇದೇ ನಿಜವಾದ ಕಾರಣವಲ್ಲ. 2015ರಲ್ಲಿ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ ಪ್ರಕಟಿಸಿದ ‘ದಿ ರಿಸೋರ್ಸ್ ಹ್ಯಾಂಡ್‌ಬುಕ್ ಟು ಎಂಡ್ ಮ್ಯಾನ್ಯುವಲ್ ಸ್ಕಾವೆಂಜಿಂಗ್’ ಇದಕ್ಕಿಂತ ಹೆಚ್ಚು ನಿಖರವಾದ ಕಾರಣವನ್ನು ವಿವರಿಸುತ್ತದೆ ‘‘ಜಾತಿ ಮಾಲಿನ್ಯ ಹಾಗೂ ಪರಿಶುದ್ಧತೆಯ ಕುರಿತಾಗಿ ಇರುವ ಸಾಂಸ್ಕೃತಿಕ ಪರಿಕಲ್ಪನೆಗಳ ಮುಂದುವರಿಕೆ ಹಾಗೂ ಜನ್ಮವನ್ನು ಆಧರಿಸಿ ಜನರಿಗೆ ಈ ಕೆಲಸ ವಹಿಸುವುದೇ’’ ನಿಜವಾದ ಕಾರಣ. ಆದ್ದರಿಂದ ಜಾತಿಯ ಅಸಮಾನತೆಗಳು ಮತ್ತು ಈ ಅಸಮಾನತೆಗಳೊಂದಿಗೆ ಜೋಡಿಸಲಾಗಿರುವ ಲಿಂಗ ತಾರತಮ್ಯವನ್ನೇ ನಾವು ಈ ಅನಿಷ್ಟ ಪದ್ಧತಿಯ ಮುಂದುವರಿಕೆಗೆ ದೂರಬೇಕಾಗಿದೆ.
1950ರ ಜನವರಿ 26ರಂದು ಭಾರತ ಒಂದು ಗಣರಾಜ್ಯವಾದಾಗ ರದ್ದುಗೊಳಿಸಲಾದ ಸಾಮಾಜಿಕ ಅನಿಷ್ಟಗಳಲ್ಲಿ ಅಸ್ಪಶ್ಯತೆಯೂ ಒಂದು. ಆದರೂ ಕೂಡ ದೇಶದಾದ್ಯಂತ ಹಲವಾರು ರೂಪಗಳಲ್ಲಿ ಇಂದಿಗೂ ಅಸ್ಪಶ್ಯತೆ ಮುಂದುವರಿದಿದೆ. ಭಾರತೀಯರಲ್ಲಿ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚು ಮಂದಿ ತಾವು ಮನೆಯಲ್ಲಿ ಅಸ್ಪಶ್ಯತೆಯನ್ನು ಆಚರಿಸುತ್ತೇವೆ ಎಂದಿದ್ದಾರೆ ಎಂದು ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆ ಬಹಿರಂಗಪಡಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಪ್ರಕಾರ ಪ್ರತಿ ಹದಿನಾರು ನಿಮಿಷಗಳಿಗೆ ದಲಿತನೊಬ್ಬನ ವಿರುದ್ಧ ದಲಿತನಲ್ಲದವನೊಬ್ಬ ಒಂದು ಅಪರಾಧ ಎಸಗುತ್ತಾನೆ; ದಲಿತ, ದಲಿತ ಮಹಿಳೆಯ ಮೇಲೆ ಪ್ರತಿದಿನ ನಾಲ್ಕು ಅತ್ಯಾಚಾರ ಹಾಗೂ ಪ್ರತಿವಾರ 13 ದಲಿತರ ಹತ್ಯೆಗಳು ನಡೆಯುತ್ತವೆ. ದಲಿತರನ್ನು ಅವಮಾನಿಸುವ, ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸುವ, ಬಲವಂತವಾಗಿ ಮಲ ತಿನ್ನಿಸುವ, ಅವರಿಂದ ಅವರ ಜಮೀನನ್ನು ಕಿತ್ತುಕೊಂಡು ಸಾಮಾಜಿಕ ಬಹಿಷ್ಕಾರ ಹಾಕುವ ಪ್ರಕರಣಗಳು ಈ ಅಂಕಿಸಂಖ್ಯೆಗಳಲ್ಲಿ ಸೇರಿಲ್ಲ. ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳು ಕೂಡ ಇಂತಹ ತಾರತಮ್ಯ ನೀತಿಯಿಂದ ಮುಕ್ತವಾಗಿಲ್ಲ. ಮುಂಬೈಯ ಆಸ್ಪತ್ರೆಯೊಂದರಲ್ಲಿ ಓರ್ವ ಬುಡಕಟ್ಟು ಮುಸ್ಲಿಂ ಮಹಿಳೆ ‘‘ಮೇಲ್ಜಾತಿಯ’’ ಹಿರಿಯ ವೈದ್ಯರಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ/ಕೊಲೆಯಾದ ಪ್ರಕರಣವೇ ಇದಕ್ಕೆ ಉದಾಹರಣೆ. ಇಂತಹ ಹಲವು ಘಟನೆಗಳು ನಡೆದಿವೆ.
‘‘ಕೊನೆಯದಾಗಿ, ಕೀಜವೆನ್ಮುಣಿಯ ನೆರಳು ಇನ್ನೂ ಯಾಕೆ ಸ್ವಾತಂತ್ರೋತ್ತರ ಭಾರತದ ಮೇಲೆ ಬೀಳುತ್ತಲೇ ಇದೆ. 1968ರ ಡಿಸೆಂಬರ್ 25ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯ ಕೀಜವೆನ್ಮಣಿ ಎಂಬ ಹಳ್ಳಿಯಲ್ಲಿ ದಲಿತರ ವಿರುದ್ಧ ಮೊದಲ ಸಾಮೂಹಿಕ ಹತ್ಯೆ ನಡೆಯಿತು. ದಲಿತ ಕಾರ್ಮಿಕರು ಕಮ್ಯುನಿಷ್ಟರ ನೇತೃತ್ವದಲ್ಲಿ, ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಮುಷ್ಕರ ಹೂಡಿದ್ದರು. ಅವರ ಬೇಡಿಕೆ ಅಲ್ಲಿಯ ಪ್ರಬಲ ಜಾತಿಗಳನ್ನು ಕೆರಳಿಸಿತು. ಅವರು ವಾಹನಗಳಲ್ಲಿ ಹಳ್ಳಿಗೆ ಬಂದು ಅವರನ್ನು ಹತ್ಯೆಗೈದರು. ಆದರೆ ‘‘ಮೇಲ್ಜಾತಿ’’ಗೆ ಸೇರಿದವರಾದ ಅವರು ಹಾಗೆಲ್ಲ ನಡೆದುಕೊಂಡು ಬಂದಿದ್ದರು. ಬಂದು ದಲಿತರನ್ನು ಹತ್ಯೆಗೈದಿದ್ದರೆಂಬುದನ್ನು ನಂಬಲು ಸಾಧ್ಯವಿಲ್ಲ ಎಂಬ ವಾದದ ನೆಲೆಯಲ್ಲಿ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.
ಇಂತಹ ಘಟನೆಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗದ ಹಿನ್ನೆಲೆಯಲ್ಲಿ ಇಂತಹ ಘಟನೆಗಳು 1978ರಲ್ಲಿ ವಿಲ್ಲುಪುರಂನಲ್ಲಿ, 1991ರಲ್ಲಿ ಆಂಧ್ರದ ಟಿಸುಂದೂರ್‌ನಲ್ಲಿ, 1992ರಲ್ಲಿ ರಾಜಸ್ಥಾನದ ಕುಮ್ಹರ್‌ನಲ್ಲಿ, 1996 ಹಾಗೂ 1997ರಲ್ಲಿ ಬಿಹಾರದಲ್ಲಿ ಪುನರುತ್ಪತ್ತಿಯಾದವು. ದಲಿತರ ವಿರುದ್ಧ ನಡೆಯುವ ಇಂತಹ ಅಪರಾಧಗಳು ಒಂದು ಅಪರಾಧವಲ್ಲ, ಒಂದು ಸಾಮಾನ್ಯ ನಿಯಮವೇ ಆಗಿದೆ.
25 ವರ್ಷಗಳ ಬಳಿಕ ರಾಜಸ್ಥಾನದಲ್ಲಿ ಮಹಿಳಾ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಓರ್ವ ಸಾಥಿನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭನ್ವಾರಿ ದೇವಿಯ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೂ ಕೂಡ ಆಪಾದಿತರನ್ನು ದೋಷಮುಕ್ತಗೊಳಿಸಲು ಪುನಃ ಅದೇ ತರ್ಕವನ್ನು ಬಳಸಿದರು; ‘‘ ಅತ್ಯಾಚಾರವೆಂಬುದು ಸಾಮಾನ್ಯ’’ ಮತ್ತು ‘‘ಮೇಲ್ಜಾತಿ’’ಯ ಗಂಡಸರು ‘‘ಕೆಳ’’ಜಾತಿಯ ಹೆಂಗಸೊಬ್ಬಳ ಮೇಲೆ ಅತ್ಯಾಚಾರ ನಡೆಸಿ ತಮ್ಮನ್ನು ತಾವೇ ‘‘ಅಪವಿತ್ರಗೊಳಿಸಿಕೊಂಡಿರಲಾರರು’’ ಎಂಬುದು ಆ ನ್ಯಾಯಾಧೀಶರ ತರ್ಕವಾಗಿತ್ತು.
ನಾಗರಿಕ ಸಮಾಜದ ಪರಿಕಲ್ಪನೆ ನಮಗೆ ಇದೆಯಾದರೂ, ದಲಿತರ ಅಥವಾ ದಮನಿತರಾದ ಇತರರ ಬಗ್ಗೆ ಮಾತಾಡುವಾಗ, ಸರಕಾರವಾಗಲಿ ಅದರ ಅಂಗಸಂಸ್ಥೆಗಳಾಗಲೀ ಅಥವಾ ಸಮಾಜದ ಇತರ ಸಮುದಾಯಗಳಾಗಲೀ ಒಟ್ಟಾಗಿ ದನಿ ಎತ್ತುವುದಿಲ್ಲ. ಪರಿಶಿಷ್ಟ ಜಾತಿಗಳ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆಯುವ ಕುರಿತಾದ ರಾಷ್ಟ್ರೀಯ ಮಾನವ ಹಕ್ಕು ಆಯೋಗ 2004ರಲ್ಲಿ ಸಿದ್ಧಪಡಿಸಿದ ವರದಿಯು ನಾಗರಿಕ ಸಮಾಜ ನಡೆದು ಕೊಳ್ಳುವ ರೀತಿಯನ್ನು ವಿವರಿಸಿದೆ. ನಾಗರಿಕ ಸಮಾಜವು ಬಹುತೇಕ ಸಂದರ್ಭಗಳಲ್ಲಿ ದಲಿತರ ವಿರುದ್ಧ ನಡೆಯುವ ದೌರ್ಜನ್ಯದ ಪರವಾಗಿಯೇ ನಿಲ್ಲುತ್ತದೆ. ಯಾಕೆಂದರೆ, ಆ ವರದಿ ಹೇಳುವಂತೆ, ಸ್ವತಃ ನಾಗರಿಕ ಸಮಾಜವೇ ಜಾತಿ ಆಧಾರಿತ ವ್ಯವಸ್ಥೆಯ ಫಲಾನುಭವಿಯಾಗಿದೆ ಮತ್ತು ಹಾಗಾಗಿ ಈಗ ಅಸ್ತತ್ವದಲ್ಲಿರುವ ಮತ್ತು ಅಸಮಾನವಾದ ಸಾಮಾಜಿಕ ಕ್ರಿಯೆಗಳನ್ನು ಮತ್ತು ಪ್ರಕ್ರಿಯೆಗಳನ್ನು ಅದು ಮುಂದುವರಿಸಿಕೊಂಡು ಹೋಗುತ್ತದೆ.
ನಾಗರಿಕ ಸಮಾಜದ ಅನಾಗರಿಕ ಸ್ವಭಾವವೇ ದಲಿತರ ಒಂದು ವಿಶಿಷ್ಟ ಸವಾಲಾಗಿದೆ. ಆದ್ದರಿಂದ ದಲಿತರಿಗೆ ನಾಗರಿಕ ಹಾಗೂ ಸಾಂವಿಧಾನಿಕ ಹಕ್ಕುಗಳು ದೊರಕಬೇಕು ಹಾಗೂ ಅನುಷ್ಠಾನಿಸಲ್ಪಡಬೇಕು ಎಂಬಷ್ಟಕ್ಕೇ ದಲಿತ ವಾಗ್ವಾದ ನಿಲ್ಲದೆ, ಅದು ಈ ಹಂತವನ್ನು ಮೀರಿ ಹೋಗಬೇಕಾಗಿದೆ. ದಲಿತರ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವೈಫಲ್ಯವನ್ನು, ಸೋಲನ್ನು ಒಪ್ಪಿಕೊಂಡು ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಭಾರತದಲ್ಲಿ ಸಾಂವಿಧಾನಿಕ ತತ್ವಗಳು ಮತ್ತು ಅವುಗಳ ಅನುಷ್ಠಾನದ ನಡುವೆ ಬಹಳ ದೊಡ್ಡ ಒಂದು ಅಂತರವಿದೆ. ಇದರಿಂದಾಗಿ ನಮ್ಮ ಸಾಂವಿಧಾನಿಕ ತತ್ವಗಳಿಗೆ ಸಂಪೂರ್ಣ ವಿರುದ್ಧವಾದ ಒಂದು ಆದರ್ಶವು ದೇಶದ ನೈತಿಕ ಸ್ತರದಲ್ಲಿ ಸ್ಥಾಯಿಯಾಗಿದೆ.
ಪರಿಶುದ್ಧತೆ ಮಡಿ/ಮೈಲಿಗೆ, ಮಾಲಿನ್ಯದ ಪರಿಕಲ್ಪನೆಯು ಅಸಮಾನತೆಯನ್ನು ಸಮರ್ಥಿಸುತ್ತದೆಂಬುದನ್ನು ಪ್ರತಿಯೊಬ್ಬರೂ ಮನಗಾಣಿಸಬೇಕಾಗಿದೆ. ಜೊತೆಗೆ ಅದು ಈ ಅಸಮಾನತೆಯನ್ನು ಸಕ್ರಮಗೊಳಿಸುತ್ತದೆ ಕೂಡ. ಬೇರೆ ಮಾತಿನಲ್ಲಿ ಹೇಳುವುದಾದರೆ, ಭಾರತದಲ್ಲಿ ಅಸಮಾನತೆಯನ್ನು ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಹಾಗೂ ಆಚರಣೆಯ ಮಟ್ಟದಲ್ಲಿ ಕೂಡ ಒಪ್ಪಿಕೊಳ್ಳಲಾಗಿದೆ. ಆದ್ದರಿಂದ ಕಾನೂನು ಬದ್ಧವಾದ ಒಂದು ಸಂವಿಧಾನವು ಜಾತಿ ಆಧಾರಿತ ಸಮಾಜಗಳ ನೈತಿಕ ಬುನಾದಿಯ ಮೇಲೆ ಯಾವುದೇ ಪರಿಣಾಮ ಬೀರಲು ಸಮರ್ಥವಾಗುವುದಿಲ್ಲ.
ಒಂದು ‘ರಾಜಕೀಯ ಪ್ರಜಾಪ್ರಭುತ್ವ’ ಮತ್ತು ಒಂದು ಸಾಮಾಜಿಕ ಪ್ರಜಾಪ್ರಭುತ್ವದ ನಡುವೆ ವ್ಯತ್ಯಾಸವಿದೆ ಎಂದು ಹೇಳಿದಾಗ ಅಂಬೇಡ್ಕರ್‌ರವರಿಗೆ ಇದು ತಿಳಿದಿತ್ತು. ‘ಒಬ್ಬ ವ್ಯಕ್ತಿಗೆ ಒಂದು ಮತ’ ಎಂಬ ನಾಮ ಮತ್ತು ‘ಒಬ್ಬ ವ್ಯಕ್ತಿಗೆ ಒಂದು ವೌಲ್ಯ’ ಎಂಬ ಗುರಿಯನ್ನು ಪ್ರತ್ಯೇಕಿಸುವುದು ಇದೇ ವ್ಯತ್ಯಾಸ.
ಕೃಪೆ: newsclick.in

Writer - ಸುಭಾಷ್ ಗಟಾಡೆ

contributor

Editor - ಸುಭಾಷ್ ಗಟಾಡೆ

contributor

Similar News

ಜಗದಗಲ
ಜಗ ದಗಲ