ನಿಮಗರಿವಿಲ್ಲದೆಯೇ ಸೈಬರ್ ಕ್ರೈಮ್ ಜಾಲಕ್ಕೆ ಬೀಳಬಹುದು!: ಡಾ. ಅನಂತ್ ಪ್ರಭು
ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ನಾವಿಂದು ಕೈಯಲ್ಲಿ ಆ್ಯಂಡ್ರಾಯ್ಡಾ ಮೊಬೈಲ್‌ಗಳಿಲ್ಲದೆ ಜೀವನ ಸಾಗಿಸುವುದೇ ಸಾಧ್ಯ ಇಲ್ಲ ಎಂಬಂತಾಗಿದೆ. ಆದರೆ ನಾವು ಉಪಯೋಗಿಸುವ ಆನ್‌ಲೈನ್ ಡಾಟಾದಿಂದ ಕೂಡಿದ ಈ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಟ್ಯಾಬ್‌ಗಳು ಬಹುತೇಕವಾಗಿ ಸುರಕ್ಷಿತವಾಗಿರುವುದಿಲ್ಲ ಎಂಬ ಪರಿಜ್ಞಾನವೇ ನಮಗಿರುವುದಿಲ್ಲ.
ಇಂತಹ ಸಂದರ್ಭದಲ್ಲಿ ಈ ಸೈಬರ್ ಅಪರಾಧಗಳಿಗೆ ನಾವು ಬಲಿಪಶುಗಳಾಗುವುದರಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳುವುದು ಎಂಬುದೇ ಬಹು ಮುಖ್ಯ ಎನ್ನುವುದು ಸೈಬರ್ ಕಾನೂನು ತಜ್ಞ ಡಾ. ಅನಂತ್ ಪ್ರಭು ಜಿ. ಅವರ ಅಭಿಪ್ರಾಯ. ಸೈಬರ್ ಕ್ರೈಮ್ ಬಗ್ಗೆ ಜನಸಾಮಾನ್ಯರಿಗೆ ಸರಳವಾಗಿ ಮಾಹಿತಿ ನೀಡುವ ಉದ್ದೇಶದಿಂದಲೇ ಡಾ. ಅನಂತ್‌ರವರು ತಮ್ಮ ಸಂಗಡಿಗರ ಜತೆ ಸೇರಿ, ‘ಬೇಟಿ ಬಚಾವೊ, ಸೈಬರ್ ಕ್ರೈಮ್ ಸೆ’ ಎಂಬ ಟ್ಯಾಗ್‌ಲೈನ್‌ನಡಿ ‘ಸೈಬರ್ ಸೇಫ್ ಗರ್ಲ್’ ಎಂಬ ಆನ್‌ಲೈನ್ ಕೃತಿಯನ್ನು ರೂಪಿಸಿದ್ದರು. ಇದೀಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಡಾ. ಅನಂತ್‌ರವರು ಈ ಕೃತಿಯಡಿ ಆನ್‌ಲೈನ್ ಸರ್ಟಿಫಿೇಟ್ ಕೋರ್ಸ್‌ಗೆ ಅಡಿಪಾಯ ಹಾಕಿದ್ದಾರೆ.
ಸಾಫ್ಟ್ಟ್‌ವೇರ್ ಇಂಜಿನಿಯರ್ ಆಗಿರುವ ಡಾ. ಅನಂತ್ ಪ್ರಭು ಜಿ.ಯವರು ಎಂಬಿಎ, ಎಂಟೆಕ್, ಡಿಸಿಎಲ್ ಜತೆಗೆ ಪಿಎಚ್‌ಡಿ ಪದವೀಧರರು. ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರೊಫೆಸರ್ ಆಗಿರುವ ಇವರು, ಕರ್ನಾಟಕ ನ್ಯಾಯಾಂಗ ಅಕಾಡಮಿ ಮತ್ತು ಕರ್ನಾಟಕ ಪೊಲೀಸ್ ಅಕಾಡಮಿ ಹಾಗೂ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಸೈಬರ್ ಸುರಕ್ಷತೆಗಳ ಕುರಿತಂತೆ ನುರಿತ ತರಬೇತುದಾರರು. ಜನಸಾಮಾನ್ಯರಿಗೆ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಕುರಿತಂತೆ ಇವರು ಆರಂಭಿಸಿರುವ ‘ಸೈಬರ್ ಸೇಫ್ ಗರ್ಲ್’ ಸರ್ಟಿಫಿಕೇಟ್ ಕೋರ್ಸ್ ಬಗ್ಗೆ ‘ವಾರ್ತಾಭಾರತಿ’ ಜತೆ ನಡೆಸಿರುವ ಸಂದರ್ಶನ ಇಲ್ಲಿದೆ.
ಏನಿದು ಸೈಬರ್ ಸೇಫ್ ಗರ್ಲ್ 2.0?
ಡಾ. ಅನಂತ್ ಪ್ರಭು: 2018ರಲ್ಲಿ ನಾನು ನನ್ನ ಸ್ನೇಹಿತರ ತಂಡ ಎಡಿಜಿಪಿ ಸಂಜಯ್ ಸಹಾಯ್ ಅವರ ನೇತೃತ್ವದಲ್ಲಿ ಈ ಸೈಬರ್ ಸೇಫ್ ಗರ್ಲ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದೆವು. 15 ಸಾಮಾನ್ಯ ಸೈಬರ್ ಅಪರಾಧಗಳನ್ನು ಇದರಲ್ಲಿ ಪಟ್ಟಿ ಮಾಡಿ ಪುಸ್ತಕ ರೂಪದಲ್ಲಿ ಹೊರತರಲಾಗಿತ್ತು. ಆದರೆ ಒಂದೇ ವರ್ಷದಲ್ಲಿ ಮತ್ತೆ 10 ಹೆಚ್ಚುವರಿ ಸೈಬರ್ ಕ್ರೈಮ್‌ಗಳು ಸೇರ್ಪಡೆಯಾಯಿತು. ಅದಕ್ಕಾಗಿ ನಾವು ಸೈಬರ್ ಸೇಫ್ ಗರ್ಲ್ ವರ್ಶನ್ 2.0 ಎಂಬ ಹೊಸ ಪುಸ್ತಕವನ್ನು ಹೊರತರಲಾಗಿದೆ.
ಈ ಬಾರಿ ಎಡಿಜಿಪಿ ಸಂಜಯ್ ಸಹಾಯ್ ಹಾಗೂ ಐಜಿಪಿ ಎಸ್. ಮುರುಗನ್ ಅವರು ಕೇವಲ ಪುಸ್ತಕ ನೀಡಿದರೆ ಅಷ್ಟೇನೂ ಪರಿಣಾಮ ಬೀರದು, ಇದನ್ನು ನಿರಂತರ ಕಲಿಕಾ ಕ್ರಮವಾಗಿಸಬೇಕೆಂಬ ಸಲಹೆಯ ಮೇರೆಗೆ www.cybersafegirl.com ಮೂಲಕ ಆನ್‌ಲೈನ್ ಕೋರ್ಸ್ ಆರಂಭಿಸಿದ್ದೇವೆ.
ಕೋರ್ಸ್ ಅಂದರೆ ಹೇಗೆ?
ಡಾ. ಅನಂತ್ ಪ್ರಭು: ನಮ್ಮ ಆನ್‌ಲೈನ್ ಪುಸ್ತಕದಲ್ಲಿ ನಾವು ಹೇಳಿರುವ 25 ಸೈಬರ್ ಅಪರಾಧಗಳೊಂದಿಗೆ ನಾವು ಹೇಗೆ ಸುರಕ್ಷಿತವಾಗಿರುವುದು? ಅಪರಾಧಗಳ ಕುರಿತಂತೆ ವೀಡಿಯೊ ಉಪನ್ಯಾಸ, ಮಾಹಿತಿ ಹಾಗೂ ಮುಂಜಾಗೃತಾ ಕ್ರಮಗಳನ್ನು ಅಳವಡಿಸಿ ಪಠ್ಯವನ್ನಾಗಿಸಲಾಗಿದೆ. 25 ಪಠ್ಯಗಳನ್ನು ಪೂರೈಸಿದವರು 30 ನಿಮಿಷಗಳ ಆನ್‌ಲೈನ್ ಪರೀಕ್ಷೆಯನ್ನು ಪಡೆಯಬಹುದು. ಇದನ್ನು ಯಶಸ್ವಿಯಾಗಿ ಪೂರೈಸಿದವರಿಗೆ ‘ನಾನು ಸೈಬರ್ ಸೇಫ್ ಗರ್ಲ್’ ಅಥವಾ ಬಾಯ್ ಎಂಬ 2 ವರ್ಷಗಳ ಅವ ಧಿಯ ಸರ್ಟಿಫಿಕೇಟ್ ನೀಡಲಾಗುತ್ತದೆ.
ಸರ್ಟಿಫಿಕೇಟ್ ಯಾವ ರೀತಿಯಲ್ಲಿ ಉಪಯೋಗ?
ಡಾ. ಅನಂತ್ ಪ್ರಭು: ಸೈಬರ್ ಅಪರಾಧಗಳಿಂದ ಸುರಕ್ಷತೆಗೆ ಈ ಸರ್ಟಿಫಿಕೇಟ್ ಅಧಿಕೃತ ಸುರಕ್ಷಾ ಪ್ರಮಾಣ ಪತ್ರ ಎಂದು ಹೇಳಲಾಗದು. ಆದರೆ ನಾವು ಹೇಗೆ ವಾಹನ ಚಾಲನೆಗಾಗಿ ಡಿಎಲ್ ಪಡೆಯುತ್ತೇವೆಯೋ, ಹಾಗೆಯೇ ಸೈಬರ್ ಕಾನೂನಿನ ಅರಿವು, ಮಾಹಿತಿಯನ್ನು ನಾವು ಹೊಂದಿರುವುದಕ್ಕೆ ಹಾಗೂ ಇಂಟರ್‌ನೆಟ್ ಬಳಕೆಗೆ ಇದೊಂದು ಪ್ರಮಾಣ ಪತ್ರವಿದ್ದಂತೆ. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾನೂನುಗಳನ್ನು ನಾವು ತಿಳಿದುಕೊಂಡಿದ್ದೇವೆ ಎನ್ನುವುದಕ್ಕೆ ಇದು ಸಹಕಾರಿ. ಶಾಲಾ ಕಾಲೇಜುಗಳಲ್ಲಿ ಸೈಬರ್ ಅಪರಾಧ- ಕಾನೂನು ಪಠ್ಯವಾಗಿ ಕಲಿಸಬೇಕಾಗಿದೆ. ಈ ಬಗ್ಗೆ ಸಾಕಷ್ಟು ಮನವಿಯನ್ನು ಮಾಡಲಾಗಿದೆ. ಇಂದಿನ ದಿನಗಳಲ್ಲಿ ಇದು ಅತೀ ಅಗತ್ಯ. ಪ್ರಧಾನಿ ನರೇಂದ್ರ ಮೋದಿಯವರು ‘ಬೇಟಿ ಪಢಾವೊ ಬೇಟಿ ಬಚಾವೊ’ ಎಂಬ ಸಾಮಾಜಿಕ ಕಳಕಳಿಯ ಯೋಜನೆ ಆರಂಭಿಸಿದಾಗ ಅದು ಕಾರ್ಪೊರೇಟ್ ಕಂಪೆನಿಗಳಿಂದಲೂ ಮೆಚ್ಚುಗೆ ಪಡೆಯಿತು. ನಿಜ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ಸೈಬರ್ ಕ್ರೈಮ್‌ನಲ್ಲಿಯೂ ಹೆಣ್ಣು ಮಕ್ಕಳು ತೊಂದರೆಗೊಳಗಾಗುವುದು ಹೆಚ್ಚು. ಆ ನಿಟ್ಟಿನಲ್ಲಿ ‘ಬೇಟಿ ಬಚಾವೊ ಸೈಬರ್ ಕ್ರೈಮ್ ಸೆ’ ಎಂಬ ಟ್ಯಾಗ್ ಲೈನ್ ನೀಡಲಾಗಿದೆ.
ಸೈಬರ್ ಕ್ರೈಮ್‌ಗೆ ಹೆಣ್ಣು ಮಕ್ಕಳೂ ಪ್ರಮುಖ ಟಾರ್ಗೆಟ್ ಹೇಗೆ?
ಡಾ. ಅನಂತ್ ಪ್ರಭು: ಫೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳನ್ನು ಹೆಣ್ಣು ಮಕ್ಕಳು ಅಪ್‌ಲೋಡ್ ಮಾಡುತ್ತಾರೆ. ಅತ್ಯಂತ ಉತ್ಕೃಷ್ಟವಾದ ಕ್ಯಾಮರಾಗಳಿಂದ ಕೂಡಿದ ಮೊಬೈಲ್ ಫೋಟೋಗಳನ್ನು ಕೂಡಾ ಇಂದು ಹ್ಯಾಕರ್‌ಗಳು, ಕ್ರಿಮಿನಲ್‌ಗಳಿಗೆ ಮೋರ್ಫಿಂಗ್ ಮಾಡುವುದು ಸುಲಭ. ಇಂತಹ ದುರ್ಬಳಕೆಯನ್ನು ಎದುರಿಸುವುದು ಆ ಹೆಣ್ಣಿಗೆ ತುಂಬಾ ಕಷ್ಟ. ಆದರೆ ಇದು ಕೇವಲ ಹೆಣ್ಣು ಮಕ್ಕಳು ಮಾತ್ರ ಟಾರ್ಗೆಟ್ ಅಲ್ಲ. ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಯಾರೂ ಆಗಬಹುದು. ಸೆಬರ್ ಸುರಕ್ಷತೆ ಎಲ್ಲರಿಗೂ ಅಗತ್ಯ.
ಕೋರ್ಸ್‌ಗೆ ಯಾರು ಅರ್ಹರು?
ಡಾ. ಅನಂತ್ ಪ್ರಭು: ಕೋರ್ಸ್‌ಗೆ ಯಾವುದೇ ವಯೋಮಿತಿ, ಲಿಂಗದ ಭೇದವಿಲ್ಲ. ಯಾರೆಲ್ಲಾ ಮೊಬೈಲ್ ಅಥವಾ ಇಂಟರ್‌ನೆಟ್ ಉಪಯೋಗಿಸುತ್ತಾರೆ. ಅವರೆಲ್ಲರೂ ಈ ಕೋರ್ಸ್ ಪಡೆಯಬೇಕು. ಈ ಕೋರ್ಸ್ ಪಡೆದ ಬಳಿಕ ಯಾರೇ ಆಗಿದ್ದರೂ ಅವರು ಇಂಟರ್‌ನೆಟ್ ಬಳಸುವ ವಿಧಾನವೇ ಬದಲಾಗಲಿದೆ. ಆದರೆ ಸದ್ಯ ಈ ಕೋರ್ಸ್ ಆನ್‌ಲೈನ್‌ನಲ್ಲಿ ಆಂಗ್ಲ ಭಾಷೆಯಲ್ಲಿದೆ. ಹಾಗಾಗಿ ಆಂಗ್ಲ ಭಾಷೆ ತಿಳಿದಿರಬೇಕಾಗುತ್ತದೆ. ಮುಂದೆ ಇದನ್ನು ಕನ್ನಡ, ಗುಜರಾತಿ, ತಮಿಳಿನಲ್ಲಿ ಭಾಷಾಂತರಿಸಲು ಮುಂದೆ ಬಂದಿದ್ದಾರೆ. ಶೀಘ್ರದಲ್ಲೇ ಇದನ್ನು ವಿವಿಧ ಭಾಷೆಗಳಲ್ಲಿ ಜನಸಾಮಾನ್ಯರಿಗೆ ಒದಗಿಸಲಾಗುವುದು. ಈ ಕೋರ್ಸ್ ಎಲ್ಲರಿಗೂ ಮುಕ್ತ ಹಾಗೂ ಉಚಿತ.
ಇತ್ತೀಚೆಗೆ ಮೊಬೈಲ್‌ನಲ್ಲಿ ಸಾಮಾನ್ಯವಾಗಿ ಇದೊಂದು ವಿಶೇಷ ಸಂದೇಶ. ಇದನ್ನು ನೀವು 10 ಜನರಿಗೆ ಕಳುಹಿಸಬೇಕು. ಫಾರ್ವರ್ಡ್ ಮಾಡಿದರೆ ಗುಡ್‌ಲಕ್, ಮಾಡದಿದ್ದರೆ ತೊಂದರೆಯಾಗುತ್ತೆ ಎಂಬೆಲ್ಲಾ ಭಾವನಾತ್ಮಕವಾಗಿ ಗೊಂದಲ ಪಡಿಸುವ ಸಂದೇಶಗಳು ಫಾರ್ವರ್ಡ್ ಆಗುತ್ತೆ. ಅದರ ಜತೆ ಫೋಟೊಗಳನ್ನು ಕಳುಹಿಸಲಾಗುತ್ತೆ. ಇಂತಹ ಸಂದೇಶ ಬಂದಾಗ ತಕ್ಷಣ ಡಿಲೀಟ್ ಮಾಡಿ. ಸ್ಟೆಗ್ನೋಗ್ರಾಫಿ ಎಂಬ ಕಾನ್ಸೆಪ್ಟ್ ಈ ಸಂದೇಶದಲ್ಲಿ ಅಡಗಿರುತ್ತದೆ. ಒಸಾಮಾ ಬಿನ್ ಲಾದೆನ್ ವರ್ಲ್ಡ್ ಟ್ರೇಡ್ ಸೆಂಟರ್‌ಗೆ ದಾಳಿ ನಡೆಸಿದ ಸಂದರ್ಭ ಈ ತಂತ್ರಜ್ಞಾನ ಬಳಕೆಯಾಗಿತ್ತು. ಕಳುಹಿಸಿದ ಸಂದೇಶ ಗುಪ್ತಚರ ಇಲಾಖೆಗೆ ಗೊತ್ತಾಗದಂತೆ ಫೋಟೋದ ರೂಪದಲ್ಲಿ ಕಳುಹಿಸಲಾಗುತ್ತದೆ. ಅದೇ ತಂತ್ರಜ್ಞಾನ ಬಳಸಿ ಹ್ಯಾಕರ್‌ಗಳು, ಇಮೇಜ್‌ನೊಳಗೆ ಸಾಫ್ಟ್‌ವೇರ್ ಅಳವಡಿಸುತ್ತಾರೆ. ಅದನ್ನು ಮಾಲ್‌ವೇರ್ ಅನ್ನುತ್ತೇವೆ. ಅದನ್ನು ಫಾರ್ವರ್ಡ್ ಮಾಡಲಾಗುತ್ತದೆ. ಅದನ್ನು ಡೌನ್ ಲೋಡ್ ಮಾಡಿದಾಗ ಮಾಲ್‌ವೇರ್ ನಮ್ಮ ಮೊಬೈಲ್‌ನಲ್ಲಿ ಆ್ಯಂಟಿವೈರಸ್ ಇಲ್ಲದಾಗ, (ಒಂದೂವರೆ ಲಕ್ಷದ ಮೊಬೈಲ್ ಖರೀದಿಸಿದರೂ ಸುಮಾರು 800 ರೂ. ಬೆಲೆಯ ಆ್ಯಂಟಿ ವೈರಸ್ ಹಾಕುವುದೇ ಅಪರೂಪ. ಶೇ. 99ರಷ್ಟು ಮಂದಿಯ ಮೊಬೈಲ್‌ಗಳಲ್ಲಿ ಆ್ಯಂಟಿ ವೈರಸ್ ಇರುವುದಿಲ್ಲ) ಮಾಲ್‌ವೇರ್ ಮೊಬೈಲ್ ಬ್ಯಾಕ್‌ಗ್ರೌಂಡ್‌ನಲ್ಲಿ ಇನ್‌ಸ್ಟಾಲ್ ಆಗುತ್ತೆ. ಕೆಲವರಿಗೆ ಬಾತ್‌ರೂಂಗೂ ಮೊಬೈಲ್ ತೆಗೆದುಕೊಂಡು ಹೋಗುವ ಅಭ್ಯಾಸವಿರುತ್ತದೆ. ಆ್ಯಂಟಿವೈರಸ್ ಇಲ್ಲದೆ ಈ ಮಾಲ್‌ವೇರ್ ಇನ್‌ಸ್ಟಾಲ್ ಆದರೆ ಮೊಬೈಲ್‌ನ ಫ್ರಂಟ್ ಮತ್ತು ಬ್ಯಾಕ್ ಕ್ಯಾಮರಾವನ್ನು ಆನ್ ಅಥವಾ ಆಫ್ ಮಾಡುವ ಅವಕಾಶ ಆ ಮಾಲ್‌ವೇರ್‌ಗೆ ಇರುತ್ತದೆ. ಕಳುಹಿಸಿದವರು ಎಲ್ಲೇ ಇದ್ದರೂ ಆ ಮಾಲ್‌ವೇರ್ ಮೂಲಕ ಮೊಬೈಲ್ ಕ್ಯಾಮರಾ ಅಪರೇಟ್ ಮಾಡಬಹುದು. ಗುಪ್ತವಾಗಿ ವೀಡಿಯೊ ರೆಕಾರ್ಡಿಂಗ್ ಮಾಡಿ ಅಪ್‌ಲೋಡ್ ಮಾಡಿ, ಬ್ಲ್ಲಾಕ್‌ಮೇಲ್ ಕೂಡ ಮಾಡಲು ಸಾಧ್ಯ. ಇಂತಹ ಕೃತ್ಯಗಳ ಬಗ್ಗೆ ಹಲವು ದೂರುಗಳಿವೆ.
-ಡಾ. ಅನಂತ್ ಪ್ರಭು