ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ- ರೈತ ಸಂಘದ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಂದ ಧರಣಿ

Update: 2019-08-26 18:36 GMT

ಚಿಕ್ಕಮಗಳೂರು, ಆ.26: ಅತಿವೃಷ್ಟಿಯಿಂದ ಭೂ ಕುಸಿತ ಉಂಟಾಗಿರುವ ಗ್ರಾಮಗಳು ವಾಸಯೋಗ್ಯವಾಗಿಲ್ಲ. ಇಲ್ಲಿನ ಸಂತ್ರಸ್ತರಿಗೆ ಮನೆ, ಭೂಮಿ ನೀಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ದುರ್ಗದಹಳ್ಳಿ ಹಾಗೂ ಮಧುಗುಂಡಿ ಗ್ರಾಮಗಳ ನಿರಾಶ್ರಿತರು ಸೋಮವಾರ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಧರಣಿ ನಡೆಸಿದರು.

ಈ ವೇಳೆ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಬಿ.ಆರ್.ದುಗ್ಗಪ್ಪಗೌಡ, ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂ ಕುಸಿತ ಹಾಗೂ ನದಿಗಳ ಪ್ರವಾಹದಿಂದಾಗಿ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ಹಾಗೂ ಮನೆ, ಸಾರ್ವಜನಿಕರ ಆಸ್ತಿಗಳಿಗೆ ಹಾನಿಯಾಗಿದೆ. ಅತಿವೃಷ್ಟಿಯಿಂದಾಗಿ 3,500 ಕೋಟಿ ರೂ. ಹಾನಿಯಾಗಿದೆ. ಸರಕಾರಿ ಮಾರ್ಗಸೂಚಿಯಂತೆ ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರ್ ಗೆ 18 ಸಾವಿರ, ಭತ್ತದ ಬೆಳೆಗೆ ಹೆಕ್ಟೇರ್ ಗೆ 13,500 ರೂ. ನೀಡಲಾಗುತ್ತಿದೆ. ಇದು ಅವೈಜ್ಞಾನಿಕವಾಗಿದ್ದು, ಬೆಳೆ ನಷ್ಟ ಹೊಂದಿದ ರೈತರಿಗೆ ಸರಕಾರ ಭಿಕ್ಷೆ ನೀಡಿದಂತಾಗಿದೆ ಎಂದು ಟೀಕಿಸಿದ ಅವರು, ಕೃಷಿ ಬೆಳೆಗಳ ಉತ್ಪಾದನ ವೆಚ್ಚಕ್ಕೆ ಸಮನಾಗಿ ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.

ಭೂ ಕುಸಿತ ಸಂಭವಿಸಿದ ಗ್ರಾಮಗಳು ಸದ್ಯ ಜನವಸತಿಗೆ ಯೋಗ್ಯವಾಗಿಲ್ಲ. ಗ್ರಾಮಗಳಿಗೆ ತಲುಪಲು ಇದ್ದ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಕೃಷಿ ಜಮೀನುಗಳು ಸಂಪೂರ್ಣವಾಗಿ ನಾಶವಾಗಿವೆ. ಮನೆಗಳು ಮಣ್ಣುಪಾಲಾಗಿವೆ ಎಂದ ಅವರು, ಮೂಡಿಗೆರೆ ತಾಲೂಕಿನ ಆಲೇಕಾನ್ ಹೊರಟ್ಟಿ, ಮಲೆಮನೆ, ದುರ್ಗದಹಳ್ಳಿ, ಹಲಗಡಕ, ಬಲಿಗೆ, ಚೆನ್ನಡ್ಲು, ದೇವರಗುಡ್ಡ ಮತ್ತಿತರ ಗ್ರಾಮಗಳು ಭೂ ಕುಸಿತದಿಂದ ಅಪಾಯದ ಸ್ಥಿತಿಯಲ್ಲಿರುವದರಿಂದ ಭವಿಷ್ಯದಲ್ಲಿ ಮತ್ತೆ ಭೂ ಕುಸಿತ ಸಂಭವಿಸುವ ಅಪಾಯ ಜನರನ್ನು ಕಾಡುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಈ ಗ್ರಾಮಗಳ ಸಂತ್ರಸ್ತರಿಗೆ ಬೇರೆಡೆ ಜಾಗ, ಮನೆ, ನಿವೇಶನ ಒದಗಿಸಿ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಅತಿವೃಷ್ಟಿಯಿಂದ ಭೂಮಿ, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣಕ್ಕೆ ಸದ್ಯ ನೀಡುತ್ತಿರುವ ಪರಿಹಾರ, ಸಹಾಯಧನ ಅವೈಜ್ಞಾನಿಕವಾಗಿರುವುದರಿಂದ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ 20 ಲಕ್ಷ ರೂ. ನೀಡಬೇಕು ಹಾಗೂ ಮನೆ ನಿರ್ಮಾಣ ಆಗುವರೆಗೂ ಬಾಡಿಗೆ ಮನೆಯಲ್ಲಿರಲು ಸರಕಾರ ನೀಡುವ 5 ಸಾವಿರ ಬದಲಾಗಿ ತಿಂಗಳಿಗೆ 10 ಸಾವಿರ ರೂ. ನಂತೆ ವರ್ಷಕ್ಕೆ 1ಲಕ್ಷ 20 ಸಾವಿರ ನೀಡಬೇಕು. ಇದರೊಂದಿಗೆ ಸಂತ್ರಸ್ತರಿಗೆ ಮುಂಗಡವಾಗಿ 50 ಸಾವಿರ ರೂ. ನೀಡಬೇಕು, ಕಾಫಿ, ಅಡಿಕೆ ತೋಟಗಳ ಕೃಷಿ ಮಾಡಲು ಎಕರೆಗೆ 20 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿದ ದುಗ್ಗಪ್ಪಗೌಡ ತಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು.

ಇದೇ ವೇಳೆ ಅತಿವೃಷ್ಟಿ ಸಂತ್ರಸ್ತರ ಸುದ್ದಿ ತಿಳಿದು ಧರಣಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಕುಮಾರ್, ಧರಣಿ ನಿರತರ ಬೇಡಿಕೆಗಳನ್ನು ಸರಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಚರ್ಚೆ ನಡೆಸಿದ ಬಳಿಕ ಅಗತ್ಯ ಕ್ರಮಕೈಗೊಳ್ಳಲಾಗುವುದು. ಸದ್ಯ ಸಂತ್ರಸ್ತರಿಗೆ ಅಗತ್ಯ ತುರ್ತು ನೆರವು ನೀಡಲು ಸರಕಾರ, ಜಿಲ್ಲಾಡಳಿತ ಅಗತ್ಯ ನೆರವು ಕೈಗೊಂಡಿದೆ ಎಂದು ತಿಳಿಸಿದ ಅವರು, ಧರಣಿ ಕೈಬಿಡುವಂತೆ ಮನವಿ ಮಾಡಿದರು.

ಈ ವೇಳೆ ಬಿದರಹಳ್ಳಿ ನಿರಾಶ್ರಿತರ ಕೇಂದ್ರದಲ್ಲಿರುವ ದುರ್ಗದಹಳ್ಳಿ, ಮಧುಗುಂಡಿ ಗ್ರಾಮದ ಸಂತ್ರಸ್ತರು ಮಾತನಾಡಿ, ಗಂಜಿಕೇಂದ್ರದಲ್ಲಿ ಸರಿಯಾದ ಊಟದ ವ್ಯವಸ್ಥೆ ಇಲ್ಲ. ಭೂಕುಸಿತದಿಂದ ಮನೆ, ಮಠ ಕಳೆದುಕೊಂಡಿದ್ದರೂ ಅಧಿಕಾರಿಗಳು ಸದ್ಯ ಮಳೆ ನಿಂತಿದ್ದು, ಗ್ರಾಮಗಳಿಗೆ ಹೋಗಬಹುದು ಎಂದು ಹೇಳುತ್ತಿದ್ದಾರೆ. ಗಂಜಿ ಕೇಂದ್ರದಲ್ಲಿದ್ದ ಕೆಲವರನ್ನು ಈಗಾಗಲೇ ಗ್ರಾಮಕ್ಕೆ ಹಿಂದಿರುಗಿ ಕಳಿಸಲಾಗಿದೆ. ವಾಸಿಸಲು ಮನೆಯೂ ಇಲ್ಲ, ಗ್ರಾಮಕ್ಕೆ ಹೋಗಲು ದಾರಿ ಇಲ್ಲದಂತಾಗಿರುವ ಪರಿಸ್ಥಿತಿಯಲ್ಲಿ ಗ್ರಾಮಕ್ಕೆ ಹಿಂದಿರುಗುವುದಾದರೂ ಹೇಗೆಂದು ಅಪರ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.

ಸಂತ್ರಸ್ತರ ಅಳಲು, ದೂರು ಆಲಿಸಿದ ಅಪರ ಜಿಲ್ಲಾಧಿಕಾರಿ ಸಮಸ್ಯೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿ, ಸಂತ್ರಸ್ತರ ಮನವಿ ಪಡೆದು ಸ್ಥಳದಿಂದ ಕದಲಿದರು. ನಂತರ ಧರಣಿ ನಿರತರು ಆಝಾದ್ ಪಾರ್ಕ್ ವೃತ್ತದಲ್ಲಿ ಧರಣಿ ಮುಂದುವರಿಸಿದ್ದರು. ರೈತಸಂಘ ಹಾಗೂ ಹಸಿರು ಸೇನೆಯ ಮುಖಂಡರಾದ ದಯಾಕರ್, ನಾಗರಾಜ್, ಎಂ.ಮಹೇಶ್ ಧರಣಿ ನೇತೃತ್ವ ವಹಿಸಿದ್ದರು. ಮಧುಗುಂಡಿ, ದುರ್ಗದಹಳ್ಳಿ ಗ್ರಾಮಗಳ ಸಂತ್ರಸ್ತರು ಹಾಗೂ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗಂಜಿಕೇಂದ್ರದ ಸಂತ್ರಸ್ತರು ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News