ಹಿರಿಯ ಹೋರಾಟಗಾರ ಎ.ಕೆ.ಸುಬ್ಬಯ್ಯರಿಗೆ ಭಾವಪೂರ್ಣ ವಿದಾಯ

Update: 2019-08-28 16:16 GMT

ಮಡಿಕೇರಿ, ಆ.28: ದಿಟ್ಟ ವ್ಯಕ್ತಿತ್ವದ ಹಿರಿಯ ಹೋರಾಟಗಾರ ಎ.ಕೆ.ಸುಬ್ಬಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಸ್ವಗ್ರಾಮ ಹುದಿಕೇರಿಯಲ್ಲಿನ ತಮ್ಮ ಕಲ್ಲುಗುಂಡಿ ಎಸ್ಟೇಟ್‍ನಲ್ಲಿ ನೆರವೇರಿತು. 

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು, ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು ಮರೆಯಾದ ಎ.ಕೆ.ಸುಬ್ಬಯ್ಯ ಅವರಿಗೆ ಭಾವಪೂರ್ಣ ವಿದಾಯ ಹೇಳಿದರು. “ಕಟ್ಟುವೆವು ನಾವು ಹೊಸ ನಾಡೊಂದನ್ನು.. ಹೊಸ ಬೀಡೊಂದನ್ನು” ಎಂಬ ಕ್ರಾಂತಿಗೀತೆಯನ್ನು ಹಾಡಿ ಹೋರಾಟಗಾರನಿಗೆ ವಿಶಿಷ್ಟ ರೀತಿಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.

ಸುಬ್ಬಯ್ಯ ಪಾರ್ಥಿವ ಶರೀರವನ್ನು ಬೆಳ್ಳೂರು ನಿವಾಸದಲ್ಲಿರಿಸಿದ್ದ ಸಂದರ್ಭ ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ಬೆಂಬಲಿಗರು ಗೌರವ ಸೂಚಿಸಿದರು.

ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್, ಪ್ರಮುಖರಾದ ವಿ.ಪಿ.ಶಶಿಧರ್, ವಿಧಾನ ಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಅನರ್ಹ ಶಾಸಕ ಹೆಚ್.ವಿಶ್ವನಾಥ್, ಮಾಜಿ ಸಚಿವ ಯು.ಟಿ.ಖಾದರ್, ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಸಿರಿಮನೆ ನಾಗರಾಜು, ಡಿ.ಎಸ್.ನಿರ್ವಾಣಪ್ಪ, ಸಾಹಿತಿ ದೇವನೂರ ಮಹಾದೇವ, ಜನಶಕ್ತಿ ಸಂಘಟನೆಯ ಮಲ್ಲಿಗೆ, ಡಾ. ವಾಸು, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ಕೆ.ಹಸೈನಾರ್ ಹಾಜಿ, ಕೊಡಗು ಪತ್ರಿಕಾಭವನ ಟ್ರಸ್ಟ್ ನ ಅಧ್ಯಕ್ಷ ಬಿ.ಎಸ್.ಮನುಶೆಣೈ ಹಾಗೂ ದಿಡ್ಡಳ್ಳಿ ಆದಿವಾಸಿಗಳು ಅಂತಿಮನಮನ ಸಲ್ಲಿಸಿ ಕಂಬನಿ ಮಿಡಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ಸಿರಿಮನೆ ನಾಗರಾಜು, ಅಮೀನ್ ಮೊಹ್ಸಿನ್, ಪಿ.ಕೆ.ಹಸೈನಾರ್ ಹಾಜಿ ಅವರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಕಲ್ಲುಗುಂಡಿ ಎಸ್ಟೇಟ್‍ನಲ್ಲಿ ಸುಬ್ಬಯ್ಯ ಅಂತ್ಯಕ್ರಿಯೆಯನ್ನು ಅವರ ಪತ್ನಿ ಡಾಟಿ ಅವರ ಸಮಾಧಿ ಸ್ಥಳದ ಬಳಿಯೇ ನೆರವೇರಿಸಲಾಯಿತು. ಹಿರಿಯ ಪುತ್ರ ನರೇನ್ ಕಾರ್ಯಪ್ಪ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಈ ಸಂದರ್ಭ ಸಾಮಾಜಿಕ ಹೋರಾಟಗಾರರು 'ಕಟ್ಟುವೆವು ನಾವು ಕಟ್ಟುವೆವು... ಹೊಸ ನಾಡೊಂದನ್ನು ಕಟ್ಟುವೆವು' ಎಂಬ ಕ್ರಾಂತಿಗೀತೆ ಹಾಡುವ ಮೂಲಕ ಎ.ಕೆ.ಸುಬ್ಬಯ್ಯ ಅವರಿಗೆ ಅಂತಿಮವಾಗಿ ಭಾವಪೂರ್ಣ ನಮನ ಸಲ್ಲಿಸಿದರು.

ಸಾಮಾಜಿಕ ಹೋರಾಟಗಾರರ ಸಂಘಟನೆಗಳ ಪರವಾಗಿ ಮಾತನಾಡಿದ ಹೋರಾಟಗಾರ ಕೆ.ಎಲ್.ಅಶೋಕ್, ಎ.ಕೆ.ಸುಬ್ಬಯ್ಯ ಅವರ ಕನಸುಗಳನ್ನು ನನಸಾಗಿಸುವ ಮಹತ್ತರವಾದ ಗುರಿ ಎಲ್ಲರಿಗೂ ಇದೆ. ಅದೇ ಸುಬ್ಬಯ್ಯ ಅವರಿಗೆ ನಾವೆಲ್ಲಾ ಸಲ್ಲಿಸುವ ಜವಬ್ದಾರಿಯಾಗಿದೆ ಎಂದು ಹೇಳಿದರು. 

ಕೊಡಗಿನ ದಿಡ್ಡಳ್ಳಿ ಆದಿವಾಸಿ ಜನಾಂಗದ ಹೋರಾಟಗಾರರು ನೂರಾರು ಸಂಖ್ಯೆಯಲ್ಲಿ ಸುಬ್ಬಯ್ಯ ಅವರ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದರು. ಎರಡು ವರ್ಷಗಳ ಹಿಂದೆ ತಮ್ಮನ್ನು ಮಾಲ್ದಾರೆ ಬಳಿಯ ದಿಡ್ಡಳ್ಳಿಯ ಮೀಸಲು ಅರಣ್ಯದಿಂದ ಅರಣ್ಯ ಇಲಾಖೆ ಹೊರಕಳುಹಿಸಿದಾಗ ಸುಬ್ಬಯ್ಯ ತಮ್ಮ ಪರವಾಗಿ ಹೋರಾಟ ಮಾಡಿ ಕುಶಾಲನಗರ ಬಳಿ ಅತ್ಯಾಧುನಿಕ ರೀತಿಯ ವಸತಿ ಸಂಕೀರ್ಣ ನಿರ್ಮಾಣಕ್ಕೆ ಕಾರಣವಾಗಿ ಹೊಸ ಜೀವನ ಕಲ್ಪಿಸಿದ್ದನ್ನು ನೆನಪಿಸಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News