2 ತಿಂಗಳಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ಒದಗಿಸಿ: ಹೈಕೋರ್ಟ್ ಆದೇಶ

Update: 2019-08-28 16:32 GMT

ಬೆಂಗಳೂರು, ಆ.28: ಪ್ರಸಕ್ತ 2019-20ನೆ ಶೈಕ್ಷಣಿಕ ವರ್ಷದಲ್ಲಿ ಆರ್‌ಟಿಇ ಕಾಯ್ದೆ ವ್ಯಾಪ್ತಿಗೊಳಪಡುವ ಶಾಲಾ ಮಕ್ಕಳಿಗೆ ಎರಡನೇ ಜೊತೆ ಹೊಲಿದ ಸಮವಸ್ತ್ರಗಳನ್ನು 2 ತಿಂಗಳಲ್ಲಿ ಪೂರೈಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಈ ಕುರಿತು ಕೊಪ್ಪಳ ಜಿಲ್ಲೆ ಕಿನ್ನಾಳ ಗ್ರಾಮದ ದೇವಪ್ಪ ಬಸಪ್ಪ ಹರಿಜನ ಎಂಬುವರ 8 ವರ್ಷ ಪುತ್ರ ಮಾಸ್ಟರ್ ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಶಾಲೆಗಳು ಪ್ರಾರಂಭವಾಗಿ ಈಗಾಗಲೇ 3 ತಿಂಗಲಾಗಿದ್ದು, ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಬರೀ ಒಂದು ಜೊತೆ ಸಮವಸ್ತ್ರವನ್ನು ನೀಡಿದೆ. ಇದೇ ಬಟ್ಟೆಯನ್ನು 5 ರಿಂದ 6 ದಿನ ಹಾಕುವುದೆಂದರೆ ಏನು ಅರ್ಥ ಎಂದು ಪ್ರಶ್ನಿಸಿದ ನ್ಯಾಯಪೀಠವು, ಮಕ್ಕಳಿಗೆ ಎರಡು ತಿಂಗಳಲ್ಲಿ ಎರಡನೆ ಜತೆ ಸಮವಸ್ತ್ರ ನೀಡಬೇಕು. ಹಾಗೂ ಕೊಪ್ಪಳದ ವಿದ್ಯಾರ್ಥಿ ಮಾಸ್ಟರ್ ಮಂಜುನಾಥ್‌ಗೆ ಎರಡು ವಾರದಲ್ಲಿ ಹೊಲಿದ ಸಮವಸ್ತ್ರ, ಒಂದು ಜತೆ ಶೂ ಹಾಗೂ ಎರಡು ಜತೆ ಸಾಕ್ಸ್ ಒದಗಿಸಬೇಕೆಂದು ನಿರ್ದೇಶಿಸಿತು.

ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ ಎಂಬುದನ್ನೆ ನೆಪಮಾಡಿಕೊಂಡು ಮಕ್ಕಳಿಗೆ ಎರಡನೆ ಜತೆ ಸಮವಸ್ತ್ರವನ್ನು ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ನ್ಯಾಯಪೀಠವು ಮಕ್ಕಳಿಗೆ ಸಮವಸ್ತ್ರವನ್ನು ನೀಡುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News