ಸಂತ್ರಸ್ತರನ್ನು ಗಂಜಿ ಕೇಂದ್ರದಿಂದ ಹೊರಹಾಕಲು ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಸಂಚು: ಆರೋಪ

Update: 2019-08-28 17:46 GMT

ಚಿಕ್ಕಮಗಳೂರು, ಆ.28: ಅತಿವೃಷ್ಟಿಯಿಂದ ಸಂತ್ರಸ್ತರಾಗಿ ಗಂಜಿ ಕೇಂದ್ರ ಸೇರಿದ್ದವರನ್ನು ಕೆಲ ರಾಜಕಾರಣಿಗಳು ಅಧಿಕಾರಿಗಳ ಮೂಲಕ ಒತ್ತಡ ಹೇರಿ ಒಂದಿಷ್ಟು ಪರಿಹಾರ ನೀಡಿ ಹಾನಿಗೊಳಗಾದ ಗ್ರಾಮಗಳಿಗೆ ಹಿಂದೆ ಕಳುಹಿಸುತ್ತಿದ್ದಾರೆ. ಸರಕಾರ ನೀಡುತ್ತಿರುವ 5 ಸಾವಿರ ರೂ. ಪರಿಹಾರ ಪಡೆದು ಗ್ರಾಮಕ್ಕೆ ಹಿಂದಿರುಗಿ, ಇಲ್ಲದಿದ್ದರೇ ಆ ಪರಿಹಾರ ಧನವೂ ಸಿಗುವುದಿಲ್ಲ ಎಂದು ಹೆದರಿಸಿ ಹಾನಿಗೊಳಗಾಗಿ ಜನವಸತಿ ಸಾಧ್ಯವಿಲ್ಲದ ಗ್ರಾಮಗಳಿಗೆ ಕಳುಹಿಸುತ್ತಿದ್ದಾರೆ. ಮಂಗಳವಾರ ಹಾನಿ ಪ್ರದೇಶಗಳ ವೀಕ್ಷಣೆಗೆ ಬಂದಿದ್ದ ಸಿಎಂ ಯಡಿಯೂರಪ್ಪ ಸೌಜನ್ಯಕ್ಕದಾರೂ ಗಂಜಿ ಕೇಂದ್ರಗಳಲ್ಲಿರುವ ಸಂತ್ರಸ್ತರನ್ನು ಭೇಟಿಯಾಗದೇ ಹಿಂದಿರುಗಿದ್ದಾರೆಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ಹಾನಿಯಾದ ಸಾವಿರಾರು ಮಂದಿ ಜಿಲಾಡಳಿತದ ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಸದ್ಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯಲ್ಲಿರುವ ಒಂದು ಗಂಜಿ ಕೇಂದ್ರದಲ್ಲಿ ಮಧುಗುಂಡಿ ಗ್ರಾಮದ ಸಂತ್ರಸ್ತರು ಉಳಿದುಕೊಂಡಿದ್ದಾರೆ. ಮಧುಗುಂಡಿ ಗ್ರಾಮ ಸಂಪೂರ್ಣವಾಗಿ ನಾಶವಾಗಿದ್ದು, ಜನವಸತಿ ಸಾಧ್ಯವೇ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸಂತ್ರಸ್ತರನ್ನು ಹೆದರಿಸಿ ಗ್ರಾಮಕ್ಕೆ ಕಳಿಸಲು ಒತ್ತಡ ಹೇರುತ್ತಿದ್ದಾರೆ. ಮಧುಗುಂಡಿ ಗ್ರಾಮದ ಸಂತ್ರಸ್ತರಯ ತಮಗೆ ಬೇರೆಡೆ ಪುನರ್ವಸತಿ ಕಲ್ಪಿಸಿ ಎಂದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕೇವಲ ಭರವಸೆ ನೀಡುತ್ತಿದ್ದಾರೆಯೇ ಹೊರತು ಪುನರ್ವಸತಿಗೆ ಭೂಮಿ ಗುರುತಿಸುವ ಕೆಲಸಕ್ಕೆ ಕೈ ಹಾಕಿಲ್ಲ. ರಾಜಕಾರಣಿಗಳು ಜಾಗ ಗುರುತಿಸಲಾಗುತ್ತದೆ ಎಂದು ಸುಳ್ಳು ಹೇಳಿಕೆ ನೀಡುತ್ತಾ ಬಿದರಹಳ್ಳಿ ಗಂಜಿ ಕೇಂದ್ರದಲ್ಲಿರುವ ಮಧುಗುಂಡಿ ಗ್ರಾಮದ ಸಂತ್ರಸ್ತರನ್ನು ಹಿಂದಕ್ಕೆ ಕಳಿಸಲು ಸಂಚು ರೂಪಸಿದ್ದಾರೆಂದು ದುಗ್ಗಪ್ಪಗೌಡ ಆರೋಪಿಸಿದರು.

ಮೂಡಿಗೆರೆ ಸುತ್ತಮುತ್ತಲ ಗ್ರಾಮಗಳಾದ ಬಾಳೂರು, ಮಧುಗುಂಡಿ, ಮಲೆಮನೆ, ದುರ್ಗದಹಳ್ಳಿ, ಹಲಗಡಕ, ಹಿರೇಬೈಲು,  ಚನ್ನಹಡ್ಲು,  ದೇವರಗುಡ್ಡ ಕಾರ್ಗದ್ದೆ ಭಾಗದಲ್ಲಿ ನೂರಾರು ಜನರು ಮನೆ, ಜಮೀನನ್ನು ಕಳೆದುಕೊಂಡಿದ್ದಾರೆ. ಅಲ್ಲಿ ವಾಸಿಸಲು ಸಾಧ್ಯವೇ ಇಲ್ಲದಂತಾಗಿದೆ. ಈ ಭಾಗದ ಜನರು ಬೇರೆ ಸ್ಥಳದಲ್ಲಿ ಜಮೀನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಅಧಿಕಾರಿಗಳು ಇದುವರೆಗೂ ಜಾಗ ಗುರುತಿಸುವ ಕೆಲಸ ಮಾಡಿಲ್ಲ ಎಂದ ಅವರು, ಜನರು ಕಷ್ಟದಲ್ಲಿದ್ದರೂ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿರಾಶ್ರಿರತರಿಗೆ ಸದ್ಯ 5 ಸಾವಿರ ಮನೆ ಬಾಡಿಗೆ ಪರಿಹಾರ ನೀಡಲಾಗುತ್ತಿದೆ. ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ಸರಕಾರ ಎನ್‍ಡಿಆರ್‍ಎಫ್ ನಿಯಮಾವಳಿಯಂತೆ ಪರಿಹಾರ ನೀಡಲು ಮುಂದಾಗಿದೆ. ಆದರೆ ಈ ಪರಿಹಾರ ಧನ ಅವೈಜ್ಞಾನಿಕವಾಗಿದ್ದು, ಸರಕಾರ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಅಲ್ಲದೇ ಪುನರ್ವಸತಿ ಕಲ್ಪಿಸದೇ ಗಂಜಿ ಕೇಂದ್ರದಿಂದ ಮೂರು ಕಾಸಿನ ಪರಿಹಾರ ನೀಡಿ ಹಿಂದಿರುಗಿ ಕಳಿಸಲು ಸಂಚು ರೂಪಿಸಲಾಗುತ್ತಿದೆ. ಜಿಲ್ಲಾಡಳಿತದ ಈ ಕ್ರಮ ಖಂಡಿಸಿ ಇತ್ತೀಚೆಗೆ ಸಂತ್ರಸ್ತರೊಂದಿಗೆ ಧರಣಿ ನಡೆಸಲಾಗಿತ್ತು. ಈ ವೇಳೆ ಸಂತ್ರಸ್ತರೇ ಅಪರ ಜಲ್ಲಾಧಿಕಾರಿ ಬಳಿ ಸಮಸ್ಯೆ ಹೇಳಿಕೊಂಡ ಸಂತ್ರಸ್ತರು, ತಮ್ಮನ್ನು ಒತ್ತಾಯ ಪೂರ್ವಕವಾಗಿ ಗಂಜಿ ಕೇಂದ್ರದಿಂದ ಹೊರಹಾಕುವ ಸಂಚಿನ ಬಗ್ಗೆ ಆರೋಪಿಸಿದ್ದಾರೆ. ಅಲ್ಲದೇ ಸೂಕ್ತ ಪರಿಹಾರ, ಪುನರ್ವಸತಿಗೆ ಆಗ್ರಹಿಸಿದ್ದಾರೆ. ಈ ವೇಳೆ ಅಪರ ಜಿಲ್ಲಾಧಿಕಾರಿ ಕುಮಾರ್, ಸಿಎಂ ಬೇಟಿ ವೇಳೆ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು, ಸಮಸ್ಯೆಗಳನ್ನು ಅವರೊಂದಿಗೆ ಚರ್ಚಿಸುವಂತೆ ಭರವಸೆ ನೀಡಿದ್ದರು. ಎಸ್ಪಿ ಅವರೂ ಸಿಎಂ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಹೇಳಿದ್ದರು. 

ಆದರೆ ಮಂಗಳವಾರ ಸಿಎಂ ಜಿಲ್ಲೆಗೆ ಬೇಟಿ ನೀಡಿದ್ದರೂ ಅಧಿಕಾರಿಗಳು ತಮ್ಮನ್ನು ಹಾಗೂ ಬಿದರಹಳ್ಳಿ ಗಂಜಿಕೇಂದ್ರದ ಸಂತ್ರಸ್ತರ ದಿಕ್ಕು ತಪ್ಪಿಸಿ ಸಿಎಂ ಭೇಟಿಗೆ ಅವಕಾಶವೇ ಕಲ್ಪಿಸಲಿಲ್ಲ. ಸಂತ್ರಸ್ತರು ಸಿಎಂಗಾಗಿ ಕಾದು ಕಾದು ಹೈರಾಣಾದರೇ ಹೊರತು ಸಿಎಂ ಕಾಟಾಚಾರಕ್ಕೆ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿ ಹಿಂದಿರುಗಿದ್ದಾರೆ. ಅಧಿಕಾರಿಗಳು ಸಂತ್ರಸ್ತರಿಗೆ ಯಾವುದೇ ಪುನರ್ವಸತಿ ಕಲ್ಪಿಸದೇ ಗ್ರಾಮಕ್ಕೆ ಹಿಂದುರುಗಿ ಕಳುಹಿಸಲು ಸಂಚು ರೂಪಿಸಿದ್ದಾರೆಂದು ದುಗ್ಗಪ್ಪಗೌಡ ಆರೋಪಿಸಿದರು.

ಜಿಲ್ಲೆಯಲ್ಲಿ ಉಂಟಾಗಿರುವ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ನಿರಾಶ್ರಿತರಿಗೆ ಸೂಕ್ತ ಜಾಗದಲ್ಲಿ ಜಮೀನು ನೀಡಬೇಕು. ಅಡಿಕೆ, ಕಾಫಿ, ಕಾಳು ಮೆಣಸು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡಬೇಕು. ಹೋಮ್ ಸ್ಟೇ ಗಳಿಗೆ ಕಡಿವಾಣ ಹಾಕಬೇಕು. ರೈತರ ಸಾಲಮನ್ನಾ ಮಾಡಬೇಕು. ಕಂದಾಯ ಇಲಾಖೆ ಕಾರ್ಯದರ್ಶಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಿಯೋಗ ರಚಿಸಿ ಅತೀವಷ್ಟಿ ಪ್ರದೇಶಗಳಿಗೆ ಕಳಿಸಿ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕೆಂದು ದುಗ್ಗಪ್ಪಗೌಡ ಇದೇ ವೇಳೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತಸಂಘದ ಕಡೂರು ತಾಲೂಕು ಅಧ್ಯಕ್ಷ ನಿರಂಜನಮೂರ್ತಿ, ಮಧುಗುಂಡಿ ಗ್ರಾಮದ ಸಂತ್ರಸ್ತರಾದ ಎನ್.ಸಿ.ಸುರೇಶ್, ಎಂ.ಆರ್.ಸಚಿನ್, ಎಂ.ಬಿ.ಶಿವಕುಮಾರ್, ಎಂ.ಎಲ್.ಉದ್ದೇಶ್ ಉಪಸ್ಥಿತರಿದ್ದರು.

ಬಿದರಹಳ್ಳಿ ಗಂಜಿಕೇಂದ್ರದಲ್ಲಿ ನನ್ನ ಕುಟುಂಬದ 7 ಮಂದಿ ಇದ್ದಾರೆ.  ತನ್ನ ಕುಟುಂಬದವರೂ ಸೇರಿದಂತೆ ಮದುಗುಂಡಿ ಗ್ರಾಮದವರೇ 125 ಮಂದಿ ಗಂಜಿ ಕೇಂದ್ರದಲ್ಲಿದ್ದಾರೆ. ಗಂಜಿ ಕೇಂದ್ರಕ್ಕೆ ನೋಡಲ್ ಅಧಿಕಾರಿ ಸರಿಯಾಗಿ ಭೇಟಿ ನೀಡಿ ಸಮಸ್ಯೆ ಆಲಿಸುವುದಿಲ್ಲ. ಸರಿಯಾಗಿ ಊಟ, ನೀರು ಪೂರೈಸುತ್ತಿಲ್ಲ. ಕಳೆದ ಸೋಮವಾರ ಬಿದರಹಳ್ಳಿ ಗಂಜಿ ಕೇಂದ್ರದ ನೋಡಲ್ ಅಧಿಕಾರಿಯೊಬ್ಬರು, 5 ಸಾವಿರ ಮನೆ ಬಾಡಿಗೆ ಪರಿಹಾರ ಧನ ಪಡೆದು, ಇಲ್ಲವೇ ಏಕಗಂಟಿನಲ್ಲಿ 50 ಸಾವಿರ ಬಾಡಿಗೆ ಹಣ ಪಡೆದು ತೋಟಗಳ ಲೈನ್ ಮನೆಗಳಲ್ಲಿ ವಾಸ ಮಾಡಿ, ಇಲ್ಲದಿದ್ದರೇ ಈ ಪರಿಹಾರ ಧನವೂ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಮಧುಗುಂಡಿಯಲ್ಲಿ ವಾಸ ಮಾಡಲು ಸಾಧ್ಯವಿಲ್ಲ. ಬಾಡಿಗೆ ಮನೆಗಳೂ ಸಿಗುವುದಿಲ್ಲ. ಸರಕಾರದ ಪರಿಹಾರ ಧನವೂ ಸಾಲುವುದಿಲ್ಲ. ಆದ್ದರಿಂದ ಸರಕಾರ ಸೂಕ್ತ ಪುನರ್ವಸತಿ ಕಲ್ಪಿಸಬೇಕು. ಮನೆಗಳ ನಿರ್ಮಾಣಕ್ಕೆ ಭೂಮಿ, ಮನೆಕಟ್ಟಲು ಹಣ, ಕೃಷಿ ಮಾಡಲು ಜಮೀನು ನೀಡಬೇಕು. ಅಲ್ಲಿಯವರೆಗೂ ಗಂಜಿಕೇಂದ್ರದಿಂದ ನಮ್ಮನ್ನು ಒತ್ತಾಯಪೂರ್ವಕವಾಗಿ ಎಲ್ಲಿಗೂ ಕಳಿಸಬಾರದು.
- ಎಂ.ಎಲ್.ಉದೇಶ್, ಮಧಗುಮಡಿ ಗ್ರಾಮದ ಸಂತ್ರಸ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News