‘ಸಾಹಿತ್ಯದಲ್ಲಿ ಪ್ರಗತಿ’ ಗೋಕಾಕರು ಕಂಡಂತೆ...

Update: 2019-08-29 18:45 GMT

ಅಡಿಗರಿಗಿಂತ ಮೊದಲು ಕನ್ನಡದಲ್ಲಿ ನವ್ಯ ಸಾಹಿತ್ಯದ ಪ್ರಸ್ತಾಪವನ್ನು ಮಾಡಿದವರು ವಿ. ಕೃ. ಗೋಕಾಕ್. ಕನ್ನಡ ಸಾಹಿತ್ಯ ಕಂಡ ಅಪರೂಪದ ಕವಿ, ಚಿಂತಕ, ಶಿಕ್ಷಣ ತಜ್ಞ, ತತ್ವಶಾಸ್ತ್ರಜ್ಞ. ಕಾವ್ಯದ ಮೂಲಕ ಗುರುತಿಸಲ್ಪಡುವ ಗೋಕಾಕ್ ಗದ್ಯದಲ್ಲೂ ಸಾಕಷ್ಟು ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಹೊಸತಲೆಮಾರು ಗೋಕಾಕರ ಸಾಹಿತ್ಯ, ವಿಚಾರಗಳಿಗೆ ವಿಶೇಷ ಆದ್ಯತೆಗಳನ್ನು ನೀಡುತ್ತಿಲ್ಲ. ಅತಿ ಬೌದ್ಧಿಕವಾಗಿರುವುದು ಅದಕ್ಕೆ ಒಂದು ಕಾರಣವಾಗಿರಬಹುದು ಎನ್ನುವುದು ವಿಮರ್ಶಕರ ಅಂಬೋಣ. ಈ ನಿಟ್ಟಿನಲ್ಲಿ ಅಭಿವನ ಪ್ರಕಾಶನ ಬೆಂಗಳೂರು ವಿ. ಕೃ. ಗೋಕಾಕರ ಕೃತಿಗಳನ್ನು ಪ್ರಕಟಿಸಲು ಮುಂದಾಗಿದೆ. ‘ಸಾಹಿತ್ಯದಲ್ಲಿ ಪ್ರಗತಿ’ ಅದರ ಭಾಗವಾಗಿ ಹೊರಬಂದಿರುವ ಕೃತಿ. ಈ ಕೃತಿಯ ಉದ್ದೇಶವನ್ನು ಕವಿ ಗೋಕಾಕರೇ ವಿವರಿಸುತ್ತಾರೆ. ಸಾಹಿತ್ಯದಲ್ಲಿ ‘ಪ್ರಗತಿ’ ಹಾಗೂ ‘ಮಹೋನ್ನತಿ’ ಇಲ್ಲವೆ ‘ಶ್ರೇಷ್ಠತೆ’ಗಳನ್ನು ಕುರಿತು ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಅದನ್ನು ಏಕಸೂತ್ರವಾಗಿ ಜನರೆದುರುಗಡೆ ಇಡುವವರು ಈ ಸಂಕಲನವನ್ನು ತಂದಿದ್ದಾರೆ.
‘‘ಹಳತು ಹೊಸತನ್ನೂ ಮೂಡಣ-ಪಡುವಣದ ದರ್ಶನ ಗಳನ್ನೂ ಬೆರೆಸಿ ಮಾತ್ರ ನವೀನ ಸಂಸ್ಕೃತಿಯೊಂದನ್ನು ನಾವು ಕಟ್ಟುವುದು ಸಾಧ್ಯವಿದೆ. ಈ ನಾವೀನ್ಯವು ನಮ್ಮ ಅರ್ಥ-ರಾಜಕಾರಣ-ಸಾಹಿತ್ಯ-ಕಾಮ-ಧರ್ಮ ಮೊದಲಾದ ಎಲ್ಲ ಜೀವನರಂಗಗಳಲ್ಲಿ ಬರಬೇಕಾಗಿದೆ. ಈ ದೃಷ್ಟಿಯಿಂದ ಪರಿಪೂರ್ಣವಾದ ಜೀವನದಲ್ಲಿ ಸಾಹಿತ್ಯಕ್ಕೆ ಯಾವ ಸ್ಥಾನವಿರಬಹುದು? ಇಂಥ ಜೀವನವನ್ನು ನಾಡಿನಲ್ಲಿ ತರಬೇಕಾದರೆ ಸಾಹಿತ್ಯವು ಯಾವ ಹಾದಿಯನ್ನು ಹಿಡಿಯಬೇಕಾಗಬಹುದು? ಇವೇ ಮೊದಲಾದ ವಿಷಯಗಳ ವಿವೇಚನೆಯು ಇಲ್ಲಿದೆ’’ ಎಂದು ಸ್ವತಃ ಗೋಕಾಕರೇ ಹೇಳಿಕೊಳ್ಳುತ್ತಾರೆ. ಇಲ್ಲಿ ಒಟ್ಟು 7 ಲೇಖನಗಳಿವೆ. ವಿಮರ್ಶೆಯ ರೀತಿ ನೀತಿಗಳು, ಕಾವ್ಯದ ದ್ವಾದಶ ಸೂತ್ರಗಳು, ಕಾವ್ಯದಲ್ಲಿ ಮಹೋನ್ನತಿ, ರಾಷ್ಟ್ರೀಯ ಸಾಹಿತ್ಯ ನಿರ್ಮಾಣದ ರೂಪರೇಷೆ, ಸಾಹಿತ್ಯದಲ್ಲಿ ಪ್ರಗತಿ, ಕಾವ್ಯದ ಎರಡು ಮಾದರಿಗಳು, ್ರಗತಿಪರ ಕವಿ ಶೆಲ್ಲಿ.
  
‘ವಿಮರ್ಶೆಯ ರೀತಿ-ನೀತಿಗಳು’ ವಿಮರ್ಶೆಯ ಉನ್ನತ ಉದ್ದೇಶವನ್ನು, ವಿಮರ್ಶಕನ ಹೊಣೆಗಾರಿಕೆಗಳನ್ನು ಹೇಳುತ್ತದೆ. ವಿಮರ್ಶೆಯೆನ್ನುವುದು ಸಾಹಿತ್ಯದ ಒರೆಗಲ್ಲು ಮಾತ್ರವಲ್ಲ, ಸಾಹಿತ್ಯದ ಒಂದು ಭಾಗವೇ ಆಗಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ವಿಮರ್ಶಕನನ್ನು ಅಪ್ರಿಯ ಸತ್ಯವಾದಿ ಎಂದು ಅವರು ಕರೆಯುತ್ತಾರೆ. ‘ಕಾವ್ಯದ ದ್ವಾದಶ ಸೂತ್ರಗಳು’ ಲೇಖನದಲ್ಲಿ ಕವಿ ಮತ್ತು ಕಾವ್ಯ ಒಳಗೊಳ್ಳುವ ಬಗೆಯನ್ನು ವಿವರಿಸುತ್ತಾರೆ. 12 ಸೂತ್ರಗಳನ್ನು ಅವರಿಲ್ಲಿ ನೀಡುತ್ತಾರೆ. ಕವಿಯ ಶಕ್ತಿಗಳು ಪ್ರಗತಿಪರವಾಗಿರುತ್ತೆ. ಜಗತ್ತಿನ ಕವಿಗಳೆಲ್ಲ ವಾಡಿಕೆಯಾಗಿ ಸಾಯುವವರೆಗೂ ತಮ್ಮ ಕೃತಿಗಳನ್ನು ತಿದ್ದುತ್ತಾ ನಡೆದರು, ತಿದ್ದುತ್ತಾ ಮುಂದುವರಿಯಬೇಕು ಎಂದು ಅವರು ಬಯಸುತ್ತಾರೆ. ‘ಕಾವ್ಯದಲ್ಲಿ ಮಹೋನ್ನತಿ’ ಬರಹದಲ್ಲಿ, ಮಹೋನ್ನತಿಯನ್ನು ಸ್ಥಾಯಿಯಾಗಿ ನಿಲ್ಲಿಸಿದ ಉದ್ಗ್ರಂಥವೇ ಮಹಾಕಾವ್ಯ ಎಂದು ಅಭಿಪ್ರಾಯ ಪಡುತ್ತಾರೆ. ಕಾವ್ಯದ ಕುರಿತಂತೆ ಗೋಕಾಕರ ನಿಲುವುಗಳು ಈ ಕಾಲಘಟ್ಟದಲ್ಲಿ ಅಪ್ರಸ್ತುತ ಎಂದೆನಿಸುತ್ತದೆ. ಮಹಾಕಾವ್ಯಗಳನ್ನು ಮಹೋನ್ನತ ಕಾವ್ಯವೆಂದು ಪರಿಗಣಿಸುವ ವರ್ತಮಾನದಲ್ಲಿ ನಾವಿಲ್ಲ. ಗೋಕಾಕರ ಕಾಲದ ಘಟ್ಟದ ‘ಶ್ರೇಷ್ಠತೆಯ ವ್ಯಸನ’ಕ್ಕೆ ಈ ಕೃತಿ ಕನ್ನಡಿ ಹಿಡಿಯುತ್ತದೆ. ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಈ ಕೃತಿ ಮಹತ್ವವೆನಿಸಬಹುದು. ಅಭಿನವ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 96. ಮುಖಬೆಲೆ 100 ರೂ. ಆಸಕ್ತರು 94488 04905 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News