ನಾವು ವಿರಮಿಸದೆ ಮುಂದೆ ಸಾಗಬೇಕಾಗಿದೆ

Update: 2019-08-30 04:42 GMT

ಬೆೀಲಾಸಿಸ್ ರೋಡ್ ಇಂಪ್ರೂವ್‌ಮೆಂಟ್ ಟ್ರಸ್ಟ್ ಹತ್ತಿರದ ವಠಾರಕ್ಕೆ ಹೊಂದಿಕೊಂಡಂತಿರುವ ಮೈದಾನ ರವಿವಾರ ಅಕ್ಟೋಬರ್ 8. 1932ರ ರಾತ್ರಿ 10:30ರ ಹೊತ್ತಿಗೆ ಸಾವಿರಾರು ಮಹಿಳೆ, ಪುರುಷರಿಂದ ತುಂಬಿಹೋಗಿತ್ತು. ಸೋಷಿಯಲ್ ಸರ್ವಿಸ್ ಲೀಗ್‌ನ ಪ್ರಮುಖ ಕಾರ್ಯಕರ್ತ ಬಾಪುಸಾಹೇಬ ಸಹಸ್ರಬುದ್ಧೆ ಅಂದಿನ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವುದಕ್ಕೆ ನೀಡಿದ ಗೌರವಾದರಕ್ಕೆ ಪ್ರತಿಯಾಗಿ ಅವರು, ಸಭೆಗೆ ಕೃತಜ್ಞತೆ ಸಲ್ಲಿಸಿ, ಡಾ. ಅಂಬೇಡ್ಕರ್ ಅವರು ತಮ್ಮ ವಿದ್ವತ್ತು, ಅಚಲ ಮನೋಧೈರ್ಯ ಮತ್ತು ಅದ್ವಿತೀಯ ಪರಾಕ್ರಮದಿಂದ ಇಡೀ ಜಗತ್ತಿನಲ್ಲಿ ಪ್ರಸಿದ್ಧರಾಗಿದ್ದಾರೆ. ಅಂತಹ ವ್ಯಕ್ತಿ ನೀಡುವ ಉಪನ್ಯಾಸ ಕಾರ್ಯಕ್ರಮಕ್ಕೆ ನನ್ನಂತಹ ಸರಳ ಸಮಾಜಸೇವಕನಿಗೆ ಅಧ್ಯಕ್ಷತೆ ವಹಿಸಿಕೊಳ್ಳುವುದು ಸರಿಯಾಗುವುದಿಲ್ಲ ಎನ್ನಿಸುತ್ತದೆ ಎಂದು ಒಂದಿಷ್ಟು ಮಾತುಗಳನ್ನು ಆಡಿ ತಮ್ಮ ಮಾತಿಗೆ ವಿರಾಮ ನೀಡಿದರು.

ಪುಣೆ ಒಪ್ಪಂದ ಬೆಂಬಲಿಸಿ ನಿರ್ಣಯ ಪಾಸು ಮಾಡುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ಪುಣೆ ಒಪ್ಪಂದಕ್ಕೆ ಸಹಿ ಹಾಕಿದ್ದ ಶಿವತರಕರ್ ಅವರಿಗೆ ಸಭೆಯ ಎದುರು ನಿರ್ಣಯ ಮಂಡಿಸುವುದಕ್ಕೆ ಸೂಚಿಸಲಾಯಿತು. ಡಾ.ಅಂಬೇಡ್ಕರ್ ಮತ್ತು ಹಿಂದೂ ನಾಯಕರ ಮಧ್ಯೆ ಮಾತುಕತೆ ನಡೆಯುತ್ತಿದ್ದ ವೇಳೆ ಶಿವತರಕರ್ ಅವರೂ ಪುಣೆಯಲ್ಲಿದ್ದರು. ಒಪ್ಪಂದದ ಬಗ್ಗೆ ಅತ್ಯುತ್ತಮ ಭಾಷಣ ಮಾಡಿದರು. ಇದಾದ ಬಳಿಕ ರಾ.ಬ. ಬೋಲೆ ಅವರಿಗೆ ಸಂಬಂಧಿಸಿದ ಮಸೂದೆ ಬೆಂಬಲಿಸುವ ನಿರ್ಣಯವನ್ನು ವನಮಾಲಿ ಮಂಡಿಸಿದರು. ಮುಂಬೈನ ಮುನ್ಸಿಪಲ್ ಕಾರ್ಪೊರೇಷನ್ ನಡೆಸುವ ಶಾಲಾ ಆಡಳಿತ ಮಂಡಳಿಯಲ್ಲಿ ಅಸ್ಪಶ್ಯ ಪ್ರತಿನಿಧಿ ಬೇಕು ಎನ್ನುವುದನ್ನು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಈ ನಿರ್ಣಯಕ್ಕೂ ಸಭೆಯಲ್ಲಿ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಕೂಡ ಅಂಗೀಕಾರವಾಯಿತು.

ಆತುರ ಮತ್ತು ಉತ್ಸುಕತೆಯಿಂದ ಯಾವ ಘಳಿಗೆಗಾಗಿ ಕಾಯುತ್ತಿದ್ದರೋ ಆ ಘಳಿಗೆ ಪ್ರೇಕ್ಷಕರಿಗೆ ಬಂದಿತು. ಡಾ. ಅಂಬೇಡ್ಕರ್ ಭಾಷಣಕ್ಕೆ ಎದ್ದು ನಿಲ್ಲುತ್ತಿದ್ದಂತೆಯೇ ಸಾವಿರಾರು ಪ್ರೇಕ್ಷಕರ ಕರತಾಡನ ಅವರಿಗೆ ಸ್ವಾಗತ ಕೋರಿತು.

ಡಾ. ಅಂಬೇಡ್ಕರ್‌ರವರ ಭಾಷಣದಲ್ಲಿ ನಾಟಕೀಯ ಹಾವಾಭಾವಗಳಿರಲಿಲ್ಲ. ಅದರೂ ಉಚ್ಚರಿಸಿದ ಪ್ರತಿಯೊಂದು ಮಾತು ಚಿತ್ತಾಕರ್ಷಕವಾಗಿದ್ದವು. ವಿಚಾರ ಮಂಡನೆಯಲ್ಲಿ ಡಾಂಭಿಕ ಶಬ್ದಗಳ ಭಂಡಾರ ಇರಲಿಲ್ಲ. ಪ್ರತಿಯೊಂದು ವಿಚಾರ ಸರಣಿ ಸರಳ ಶಬ್ದಗಳಲ್ಲಿ ಹಿಡಿದಿಡಲ್ಪಟ್ಟಿತ್ತು. ಆಬಾಲ ವೃದ್ಧರಿಂದ ಹಿಡಿದು ಹಳ್ಳಿಯ ಮಗ್ಧನಲ್ಲೂ ಸ್ಪಷ್ಟ ಅರಿವು ಮೂಡಿಸುವಂತಿದ್ದವು ಆ ಮಾತುಗಳು. ಇಷ್ಟೇ ಅಲ್ಲ ಶ್ರೇಷ್ಠ ಕಾನೂನು ಪಂಡಿತ ಯಾವ ರೀತಿ ಪ್ರತಿಯೊಂದು ಶಬ್ದ, ವಿಚಾರಗಳನ್ನು ಮಂಡಿಸುತ್ತಾನೋ ಅದೇ ರೀತಿ ಡಾ. ಅಂಬೇಡ್ಕರ್ ತಮ್ಮ ವಿಚಾರ ಸರಣಿಯನ್ನು ಸಭಿಕರ ಎದುರು ಇರಿಸುತ್ತಿದ್ದರು. ಕೊಲೆ ಆಪಾದನೆಗೆ ನೇಣುಗಂಬ ಏರುವ ಆರೋಪಿಯೊಬ್ಬನ ಪರ ಕುಶಾಗ್ರಮತಿಯ ನ್ಯಾಯವಾದಿ ಮಂಡಿಸುವ ವಾದದಂತೆ ಡಾ. ಅಂಬೇಡ್ಕರ್ ಮಂಡಿಸುತ್ತಿದ್ದ ವಿಚಾರ ಸರಣಿ ಎಂತಹ ಮುಗ್ಧ ಶ್ರೋತೃವಿಗೂ ಅರ್ಥವಾಗುವಂತಿತ್ತು. ಅವರು ತಮ್ಮ ಭಾಷಣದಲ್ಲಿ ಹೇಳಿದ್ದಿಷ್ಟು:

 ‘‘ಸಾವಿನ ನಂತರದ ಮೋಕ್ಷಕ್ಕಾಗಿ ಪರಿತಪಿಸುವ ಇಲ್ಲವೇ ನಂದನವನದಂತಹ ಕಾಲ್ಪನಿಕ ಸ್ವರ್ಗದತ್ತ ದೃಷ್ಟಿ ನೆಟ್ಟು ಕುಳಿತುಕೊಳ್ಳುವುದು ಆತ್ಮವಂಚನೆಯಾಗುತ್ತದೆ. ಇಹಲೋಕದಲ್ಲಿನ ಕಠಿಣ ಬದುಕು ಇಂತಹ ಕಲ್ಪನೆಯಿಂದಾಗಿ ಇನ್ನಷ್ಟು ದುಸ್ತರವಾಗಿದೆ. ಸ್ವಶಕ್ತಿಯ ಮೇಲೆ ಆಹಾರ ಸಂಪಾದನೆ, ಜ್ಞಾನಾರ್ಜನೆಯ ಸಾಧನ ಪಡೆಯುವಲ್ಲಿ ವೈಫಲ್ಯ ಮತ್ತು ಜೀವನವನ್ನು ಇನ್ನಷ್ಟು ಸುಖಮಯಗೊಳಿಸುವ ಸಂಗತಿಗಳಿಂದ ಬಹುಜನ ಸಮಾಜ ವಿಮುಖವಾಗಿರುವ ಕಾರಣ ಇಡೀ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನುವುದು ನಿತ್ಯ ಜೀವನದ ಜಂಜಾಟಗಳಿಂದ ಸಾಬೀತು ಆಗಿದೆ. ಕೊರಳಲ್ಲಿನ ತುಳಸಿ ಮಾಲೆ ನಿಮ್ಮನ್ನು ಮಾರವಾಡಿ ಅಡಕತ್ತರಿಯಿಂದ ಬಿಡುಗಡೆಯಾಗುವುದಕ್ಕೆ ನೆರವಾಗುವುದಿಲ್ಲ. ಇಲ್ಲವೇ ನೀವು ರಾಮನಾಮ ಜಪಿಸುತ್ತೀರಿ ಎನ್ನುವ ಕಾರಣಕ್ಕೆ ಮನೆ ಮಾಲಕ ಬಾಡಿಗೆಯಲ್ಲಿ ರಿಯಾಯಿತಿ ನೀಡಲಾರ. ಪಂಢರಪುರದ ವಿಠಲನ ವಾರಕರಿವರೆಂದ ಮಾತ್ರಕ್ಕೆ ನಿಮ್ಮ ಯಜಮಾನ ವೇತನ ಹೆಚ್ಚಿಸುವುದಿಲ್ಲ. ಸಮಾಜ ಬಹುಮುಖ್ಯ ಘಟಕ ಇಂತಹ ಕಲ್ಪನೆಯಲ್ಲಿ ಮುಳುಗಿರುವುದರಿಂದ ಕೆಲವೇ ಸ್ವಾರ್ಥಿಗಳು ತಮ್ಮ ಕೆಲಸ ಸಾಧಿಸಿಕೊಳ್ಳುವುದಕ್ಕೆ ನಿಮ್ಮ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿಗಳು ರೂಪಿಸುವ ತಂತ್ರಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಎಚ್ಚರದಿಂದ ಇರಬೇಕಾಗುತ್ತದೆ. ಇಂದಿನ ನಮ್ಮ ಸ್ಥಿತಿ ಬದಲಿಸಿಕೊಳ್ಳುವುದಕ್ಕೆ ಲಭಿಸಿರುವ ರಾಜಕೀಯ ಅಧಿಕಾರ ನಿರ್ಲಕ್ಷಿಸಿದಲ್ಲಿ ಅಥವಾ ಈಗ ಸಿಕ್ಕಿರುವ ರಾಜಕೀಯ ಅಧಿಕಾರದ ಸೂಕ್ತ ಉಪಯೋಗವಾಗದಿದ್ದಲ್ಲಿ ನಿಮ್ಮ ದುಸ್ಥಿತಿ ಹಾಗೇ ಮುಂದುವರಿಯುವುದರಲ್ಲಿ ಸಂಶಯವಿಲ್ಲ. ಇಂದು ಜಾಗೃತಿಯತ್ತ ಹೆಜ್ಜೆ ಹಾಕುತ್ತಿರುವ ನಾವು ವಿರಮಿಸಲು ಕಾರಣವಿಲ್ಲ. ಯಾವ ಗುಲಾಮಗಿರಿಯ ನಿರ್ಮೂಲನೆಗೆ ನಾವು ಹೋರಾಟ ಮಾಡಿದ್ದೇವೆಯೋ ಅಂತಹ ಗುಲಾಮಗಿರಿಯ ಟೋಪಿ ಮತ್ತೆ ನಮ್ಮ ತಲೆಯ ಮೇಲೆ ಇರಬಾರದು ಅಲ್ಲವೇ?

ಇಂದಿನವರೆಗೆ ವೈಷ್ಣವ ಪಂಥದ ಸಂತರು ನಿಮ್ಮನ್ನು ಸಮಾನತೆಯ ಮೆಟ್ಟಿಲ ಮೇಲೆ ತರುವ ಕೆಲಸ ಮಾಡಿದ್ದಾರೆ. ಆದರೆ ಅವರ ಪ್ರವಚನ ಕೇವಲ ಆಧ್ಯಾತ್ಮಿಕ ಸ್ವರೂಪದ್ದು. ಅಲ್ಲದೆ ಅವರು ಸ್ವತಃ ಐಹಿಕ ಸುಖ ಸಂತೋಷಗಳಿಂದ ದೂರ ಇರುವ ಕಾರಣ ಅವರು ತಮ್ಮ ಸಮುದಾಯದ ಶ್ರೇಷ್ಠತೆ ಹೆಚ್ಚಿಸಿ ಕೊಂಡಿಲ್ಲ. ಅವರ ಪ್ರವಚನಗಳಿಂದ ನಿಮ್ಮ ಗುಲಾಮಗಿರಿಯಲ್ಲಿ ಏನೇನೂ ಬದಲಾಗಿಲ್ಲ. ಭಾರತದ ಬಹುಜನ ಸಮಾಜ ರಾಜಕಾರಣದಿಂದ ದೂರ ಇದ್ದಿದ್ದಕ್ಕೆ ದೇಶ ಇಂದು ಇಂತಹದ್ದೊಂದು ಪರಿಸ್ಥಿತಿಯಲ್ಲಿ ನರಳಬೇಕಾಗಿದೆ. ಆದಾಗ್ಯೂ ಈ ತಪ್ಪನ್ನು ಮತ್ತೆ ಪುನರಾವರ್ತಿಸುವ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇರಿಸಬೇಕಿದೆ. ಶಿಕ್ಷಣ ಮತ್ತು ಅಸ್ಪಶ್ಯರ ಉನ್ನತಿಯಲ್ಲಿ ಸಂಬಂಧ ಹೇಗಿದೆ ಎಂದರೆ ಮುಂಬೈನಲ್ಲಿ ಸುಮಾರು ಎರಡು ಲಕ್ಷ ಅಸ್ಪಶ್ಯರಿದ್ದಾರೆ. ಮುಂಬೈ ಮಹಾನಗರದಲ್ಲಿನ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಯನ್ನು ಮಹಾನಗರ ಪಾಲಿಕೆಯ ಸ್ಕೂಲ್ ಕಮಿಟಿ ನೋಡುತ್ತದೆ. ಈ ಕಮಿಟಿಗೆ ಪ್ರತಿ ವರ್ಷ ಸರಿಸುಮಾರು 30-32 ಲಕ್ಷ ರೂಪಾಯಿ ಅನುದಾನ ಲಭಿಸುತ್ತದೆ. ಇಷ್ಟು ಮೊತ್ತದ ಅನುದಾನದಲ್ಲಿ ಅಸ್ಪಶ್ಯರಿಗೆ ಸೌಲಭ್ಯ ನೀಡಲಾಗಿದೆಯೋ ಇಲ್ಲವೋ ಸೇರಿದಂತೆ ಅಸ್ಪಶ್ಯರ ಹಿತಾಸಕ್ತಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳಿವೆ. ಇಂತಹ ವಿಷಯಗಳ ಅನುಷ್ಠಾನ ಯಾವ ರೀತಿ ಆಗುತ್ತಿದೆ ಎನ್ನುವುದನ್ನು ನೋಡುವುದಕ್ಕೆ ಕಮಿಟಿಯಲ್ಲಿ ಕನಿಷ್ಠ ಒಬ್ಬ ಅಸ್ಪಶ್ಯ ಪ್ರತಿನಿಧಿಯ ಅವಶ್ಯಕತೆ ಇದೆ. ಇಂತಹ ಸಣ್ಣ ಬೇಡಿಕೆಗಳಿಗೂ ಬೇರೆಯವರಿಂದ ಏಕೆ ವಿರೋಧ ವ್ಯಕ್ತವಾಗುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಕೆಲವು ದಿನಗಳ ಹಿಂದೆ ಕಾನೂನು ಮಂಡಳಿ ಎಂದು ಪ್ರಸ್ತಾಪಿಸಿರುವ ಗ್ರಾಮ ಪಂಚಾಯತ್ ಮಸೂದೆಯಲ್ಲಿ ಚಿಕ್ಕಪುಟ್ಟ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳ ವಿಚಾರಣೆ ಮತ್ತು ನ್ಯಾಯದಾನ ನೀಡುವುದಕ್ಕೆ ಗ್ರಾಮ ಪಂಚಾಯತ್‌ಗಳಿಗೆ ಅಧಿಕಾರ ನೀಡುವ ಕುರಿತು ಪ್ರಸ್ತಾಪಿಸಿಲಾಗಿದೆ. ಜನಮತದಿಂದ ಆಯ್ಕೆಯಾಗುವಂತಹ ಈ ಪಂಚಾಯತ್ ಸದಸ್ಯರ ನಿಷ್ಟಕ್ಷಪಾತ ಧೋರಣೆ ಬಗ್ಗೆ ನನಗೆ ಸಂಶಯ ಇದೆ. ಏಕೆಂದರೆ ಪ್ರತಿಯೊಂದು ಹಳ್ಳಿಯಲ್ಲಿರುವ ಅಸ್ಪಶ್ಯರು ಮತ್ತು ಅಲ್ಪಸಂಖ್ಯಾತರು ಬಡತನದ ಕರಿನೆರಳು ಮತ್ತು ಪರಾವಲಂಬಿಯಾಗಿ ಬದುಕುತ್ತಿದ್ದಾರೆ. ಗ್ರಾಮ ಪಂಚಾಯತ್ ಸಂವಿಧಾನದಲ್ಲಿ ಅಸ್ಪಶ್ಯರಿಗೆ ಸ್ವಸಂರಕ್ಷಣೆಯ ನಿಯಮಗಳಿರದೆ ಈ ಬಡ ಸಮಾಜಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಈಗಾಗಲೇ ವರಲಿಯಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಪ್ರಕಟಿಸಿದಂತೆ ಸಂಘಟನೆ ಕಾರ್ಯ ಕೈಗೆತ್ತಿಕೊಳ್ಳುವುದಕ್ಕೆ ಕೇಂದ್ರೀಕೃತ ಸಂಘಟನೆಯ ಸ್ಥಾಪನೆಯ ಅಗತ್ಯವಿದೆ. ಎಲ್ಲೋ ಒಂದು ಕಡೆ ಅಸ್ಪಶ್ಯರ ಮೇಲೆ ಮರಾಠಿಗರು ಹಲ್ಲೆ ಮಾಡಿದರು. ಇಲ್ಲವೇ ಅವರ ಮಕ್ಕಳಿಗೆ ತೊಂದರೆ ಮಾಡಿದರು. ಇಲ್ಲವೇ ಅವರ ವತನದಾರಿ ಜಪ್ತಿ ಮಾಡಿಕೊಳ್ಳಲಾಯಿತು ಇಂತಹ ಅನೇಕ ದೂರುಗಳಿವೆ. ಒಂದು ಹಳ್ಳಿಯಲ್ಲಿ ಇಂತಹದ್ದೆ ಒಂದು ಕಾರಣಕ್ಕೆ ಮಹಾರ್‌ರಿಗೆ ವಹಿಸಿದ್ದ ಸರಕಾರಿ ಕೆಲಸದ ಜವಾಬ್ದಾರಿಯನ್ನು ಮಾಮಲೇದಾರ ಕಿತ್ತುಕೊಂಡು ಮಹಾರ್‌ರು ಸರಕಾರಿ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿ ಸುಳ್ಳು ದೂರನ್ನು ಹಿರಿಯ ಅಧಿಕಾರಿಗಳಲ್ಲಿ ಮಾಡಿದ್ದ. ಆದರೆ ಮಹಾರ್‌ರು ಎಂದಿಗೂ ಸರಕಾರಿ ಕೆಲಸ ಮಾಡುವುದಕ್ಕೆ ನಿರಾಕರಿಸಿರಲಿಲ್ಲ. ಮಹಾರ್‌ರು ಕೂಡ ಸರಿಯಾಗಿ ಉತ್ತರ ನೀಡಿದ್ದರೂ ಮಾಮಲೇದಾರ ಅದಕ್ಕೆ ವಿರುದ್ಧವಾಗಿ ಲಿಖಿತ ಉತ್ತರ ಬರೆದು ವತನದಾರಿ ಜಪ್ತಿಗೆ ಶಿಫಾರಸು ಮಾಡಿದ್ದ. ಹಿರಿಯ ಅಧಿಕಾರಗಳದ್ದು ಇದೇ ಹಣೆಬರಹ. ಮಹಾರ್‌ರ ಹೇಳಿಕೆ ಕೇಳಿಸಿಕೊಳ್ಳುವವರು ಯಾರು ಇಲ್ಲ. ಅಂತಿಮವಾಗಿ ಕೆಲವು ವರ್ಷಗಳ ಮಟ್ಟಿಗೆ ಜಪ್ತಿ ಆಯಿತು. ಇದರಿಂದಾಗಿ ಮಹಾರ್‌ರು ಸಾವಿರಾರು ರೂಪಾಯಿ ನಷ್ಟ ಅನುಭವಿಸಬೇಕಾಯಿತು. ಇಂತಹ ದೂರುಗಳು ಬಂದ ಬಳಿಕ ಒಬ್ಬ ವಕೀಲನನ್ನು ಅಲ್ಲಿಗೆ ಕಳುಹಿಸಿಕೊಡಬೇಕು. ಇನ್ನಷ್ಟು ವಿಚಾರಣೆ ನಡೆಯಬೇಕೆಂದರೆ ಹಣ ಬೇಕು. ಹಣದ ಕೊರತೆಯಿಂದಾಗಿ ಇದು ಅಸಾಧ್ಯದ ಸಂಗತಿಯಾಗಿ ಪರಿಣಮಿಸಿದೆ. ಇಂತಹ ಕೆಲಸಗಳಿಗಾಗಿ ನಿಧಿ ಕ್ರೋಡೀಕರಿಸದೇ ಗತ್ಯಂತರವಿಲ್ಲ. ಈ ರೀತಿ ಅನ್ಯಾಯ ನಡೆಯುತ್ತಿದ್ದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ ಎನ್ನುವ ಸಂದೇಶ ಸರಕಾರಿ ಮಾಮಲೇದಾರರಿಗೆ ಮುಟ್ಟುವಂತಾಗಬೇಕು.’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News