ಭಕ್ತಿ ಸಂತರೊಬ್ಬರ ದೇವಾಲಯ ಧ್ವಂಸದ ಹಿಂದೆ...!
ಆಗಸ್ಟ್ 21ರಂದು ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯ ರವಿದಾಸಿಗಳು ಭಾಗವಹಿಸಿದ್ದರು. ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶದಿಂದ ರವಿದಾಸಿ ಸಮುದಾಯದಿಂದ ಸದಸ್ಯರು ಆಗಮಿಸಿದ್ದರು. ಅಂದು ನಡೆದ ಪ್ರತಿಭಟನಾ ಮೆರವಣಿಗೆ, ರ್ಯಾಲಿ ಏಕಕಾಲದಲ್ಲಿ ಧಾರ್ಮಿಕವೂ, ರಾಜಕೀಯವೂ ಆಗಿತ್ತು. ಅದು ದೇವಾಲಯವೊಂದನ್ನು ಮರಳಿ ಪಡೆಯಲು ಮತ್ತು ದಲಿತ ಹಕ್ಕುಗಳನ್ನು ಪಡೆಯಲು ರವಿದಾಸಿಗಳು ನಡೆಸಿದ ಒಂದು ಹೋರಾಟವಾಗಿತ್ತು.
ದಿಲ್ಲಿಯ ತುಘಲಕಾಬಾದ್‌ನಲ್ಲಿ ಜೂನ್ 20ರಂದು ಕೀರ್ತನೆಗಳನ್ನು ಹಾಡುತ್ತಿದ್ದವರು ಓರ್ವ ಮಧ್ಯಯುಗೀಯ ದಲಿತ ಸಂತ ರವಿದಾಸರ ಅತ್ಯಂತ ಪ್ರಸಿದ್ಧವಾದ ಒಂದು ರಚನೆಯನ್ನು ಹಾಡಲಾರಂಭಿಸಿದ್ದರಲ್ಲಿ ಒಂದು ವ್ಯಂಗ್ಯವಿತ್ತು. ಅವರು ಬೇಗಂಪುರದ ಬಗ್ಗೆ ಹಾಡುತ್ತಿದ್ದರು. ಬೇಗಂಪುರ ಎಂಬುದು ದುಃಖವೇ ಇಲ್ಲದ ಒಂದು ಆದರ್ಶ ಸ್ಥಳವನ್ನು ವರ್ಣಿಸಲು ರವಿದಾಸ್ ಬಳಸಿದ್ದ ಒಂದು ಕ್ಲೀಷೆ. ಅವರು ಯಾವ ದೇವಾಲಯದ ಮುಂದೆ ಹಾಡುತ್ತಿದ್ದರೂ ಅದು ಅಸ್ಪೃಶ್ಯತೆಯ ಉಯ್ಯಿಲೆಯಲ್ಲಿ ತೂಗಾಡುತ್ತಿತ್ತು. ಅದು ಯಾವುದೇ ದಿನ ಧ್ವಂಸಗೊಳ್ಳುವ ಸಾಧ್ಯತೆಯಿತ್ತು ಅಥವಾ ಯಾವುದೇ ದಿನ ಸರಕಾರ ಅದನ್ನು ಕೆಡವಲು ತನ್ನ ಪಡೆಯನ್ನು ಕಳುಹಿಸಬಹುದಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರತಿಭಟನೆಯಾಗಿ ರವಿದಾಸ್ ಪಂಥದ ಸಿಟ್ಟಾದ ಸದಸ್ಯರು ಇವರಲ್ಲಿ ಬಹುತೇಕ ದಲಿತ ಚಮಾರ್ ಜಾತಿ ಸೇರಿದವರು ಉತ್ತರ ಭಾರತದಾದ್ಯಂತ ಪ್ರತಿಭಟಿಸಲು ಸಜ್ಜಾಗುತ್ತಿದ್ದರು. ಅವರು ಹಾಡುತ್ತಿದ್ದ ಭಜನೆ ಹೀಗಿತ್ತು:
‘‘ಬೇಗಂಪುರ ಸಹರ್ ಕೋ ನಾವ್
ದುಃಖು ಐದೋಹು ನಹಿ ತಿಹಿ ತಾವ್
ಕಹಿ ರವಿದಾಸ್ ಖಲಸಾ ಚಮಾರ್
ಜೊ ಹಮ ಸೆಹರಿ ಸೊ ಮಿತು ಹಮಾರ’’
(‘‘ನನ್ನ ನಗರದ ಹೆಸರು ದುಃಖವಿಲ್ಲದ ಊರು
ಅಲ್ಲಿ ಸಂಕಷ್ಟಗಳಿಲ್ಲ, ಅಸಂತೋಷವೂ ಇಲ್ಲ.
ಸ್ವತಂತ್ರನಾಗಿರುವ ಚಮಾರ್, ರವಿದಾಸ್ ಹೀಗೆ ಹೇಳುತ್ತಾನೆ
ಅಲ್ಲಿ ಪ್ರತಿಯೊಬ್ಬ ನಾಗರಿಕನೂ ನನ್ನ ಗೆಳೆಯ’’)
ಕೇಂದ್ರ ಸರಕಾರ ನಿಯಂತ್ರಿತ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು ಈ ರವಿದಾಸ ದೇವಸ್ಥಾನವನ್ನು ಕೆಡವಲು ಹಲವು ದಶಕಗಳಿಂದ ಹೋರಾಡುತ್ತಿತ್ತು. ದಿಲ್ಲಿಯಲ್ಲಿ ನಗರ ಯೋಜನೆ ಮತ್ತು ಅಭಿವೃದ್ಧಿಗೆ ಜವಾಬ್ದಾರಿಯಾಗಿರುವ ಸಂಸ್ಥೆ ಈ ಪ್ರಾಧಿಕಾರ. ದೇವಸ್ಥಾನವನ್ನು ಕೆಡಹುವ, ಧ್ವಂಸಗೊಳಿಸುವ ಸರಕಾರದ ಪ್ರಯತ್ನವನ್ನು ತಡೆಯುವ ಒಂದು ಪ್ರಯತ್ನವಾಗಿ ದೇವಸ್ಥಾನದ ಆಡಳಿತ ಮಂಡಳಿಯು 33 ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಆದರೂ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು (ಡಿಡಿಎ) ದೇವಸ್ಥಾನವು ಅದರ ಆಡಳಿತ ಮಂಡಳಿಯ ಮಾಲಕತ್ವಕ್ಕೆ ಸೇರಿದ್ದು ಎಂದು ಸಾಬೀತು ಪಡಿಸುವ ದಾಖಲೆಗಳಿಲ್ಲವೆಂದು ವಾದಿಸಿತು.
ರವಿದಾಸಿಗಳು ಮೊಕದ್ದಮೆಯಲ್ಲಿ ಸೋತರು. ಪೊಲೀಸರ ನೆರವು ಪಡೆದು ದೇವಸ್ಥಾನ ಇರುವ ನಿವೇಶನವನ್ನು ತೆರವುಗೊಳಿಸಿ ದೇವಸ್ಥಾನವನ್ನು ಕೆಡಹುವಂತೆ ಆಗಸ್ಟ್ 9ರಂದು ಸುಪ್ರೀಂಕೋರ್ಟ್ ಡಿಡಿಎಗೆ ಸೂಚನೆ ನೀಡಿತು. ಮರುದಿನವೇ ದೇವಸ್ಥಾನವನ್ನು ಕೆಡವಲಾಯಿತು. ಹಲವು ರೀತಿಗಳಲ್ಲಿ ಇದು ಮೊದಲೇ ತಿಳಿದಿದ್ದ ತೀರ್ಮಾನ. ಬಡತನ ಮತ್ತು ಜಾತಿಯ ಒತ್ತಡದಿಂದಾಗಿ ರವಿದಾಸಿಗಳಿಗೆ ದೇವಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಸರಕಾರದ ಶಕ್ತಿಗಳ ಮುಂದೆ ಅವರು ಸೋಲಲೇ ಬೇಕಾಯಿತು.
ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನವನ್ನು 1959ರಲ್ಲಿ ನಿರ್ಮಿಸಲಾಗಿತ್ತು ಎಂದು ನ್ಯಾಯಾಲಯದಲ್ಲಿ ವಾದಿಸಿತು. ಆದರೆ ದಲಿತರು ಅದು ಆರು ಶತಮಾನಗಳ ಹಿಂದೆ ಕಟ್ಟಲಾಗಿದ್ದ ದೇವಸ್ಥಾನ ಎಂದು ಹೇಳುತ್ತಾ ಒಟ್ಟಾದರು. ದೇವಸ್ಥಾನದ ಆಡಳಿತ ಮಂಡಳಿಯ ಓರ್ವ ಸದಸ್ಯ ರಿಷಿಪಾಲ್ ‘‘ನಮಗೆ ಈ ಜಮೀನು ನೀಡಿದ್ದು ಸುಲ್ತಾನ್ ಸಿಕಂದರ್ ಲೋದಿ, ಹೀಗಿರುವಾಗ ದೇವಸ್ಥಾನವನ್ನು ಅಷ್ಟೊಂದು ಸುಲಭವಾಗಿ ಕೆಡಹುವುದು ಹೇಗೆ ಸಾಧ್ಯ?’’ ಎಂದು ಕೇಳಿದ್ದಾರೆ.
ರಾಜಕೀಯ ಪ್ರತಿಕ್ರಿಯೆ
ಆಗಸ್ಟ್ 10ರಂದು ನಡೆದ ದೇವಾಲಯ ಧ್ವಂಸ ಪ್ರಕರಣ ಉತ್ತರ ಭಾರತದಾದ್ಯಂತ ರವಿದಾಸ ಸಮುದಾಯಕ್ಕೆ ಆಘಾತ ಉಂಟು ಮಾಡಿತು. ಆಗಸ್ಟ್ 13ರಂದು ಪಂಜಾಬ್‌ನಲ್ಲಿ ಹರತಾಳ ನಡೆಸಲಾಯಿತು. (ಅಲ್ಲಿಯ ಜನಸಂಖ್ಯೆಯ ಸುಮಾರು ಹತ್ತು ಶೇಕಡಾ ರವಿದಾಸಿಗಳು) ಒಂದು ವಾರದ ಬಳಿಕ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.
ಆಗಸ್ಟ್ 21ರಂದು ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯ ರವಿದಾಸಿಗಳು ಭಾಗವಹಿಸಿದ್ದರು. ಪಂಜಾಬ್, ಹರ್ಯಾಣ ಹಾಗೂ ಉತ್ತರ ಪ್ರದೇಶದಿಂದ ರವಿದಾಸಿ ಸಮುದಾಯದಿಂದ ಸದಸ್ಯರು ಆಗಮಿಸಿದ್ದರು. ಅಂದು ನಡೆದ ಪ್ರತಿಭಟನಾ ಮೆರವಣಿಗೆ, ರ್ಯಾಲಿ ಏಕಕಾಲದಲ್ಲಿ ಧಾರ್ಮಿಕವೂ, ರಾಜಕೀಯವೂ ಆಗಿತ್ತು. ಅದು ದೇವಾಲಯವೊಂದನ್ನು ಮರಳಿ ಪಡೆಯಲು ಮತ್ತು ದಲಿತ ಹಕ್ಕುಗಳನ್ನು ಪಡೆಯಲು ರವಿದಾಸಿಗಳು ನಡೆಸಿದ ಒಂದು ಹೋರಾಟವಾಗಿತ್ತು.
ರಾಮಲೀಲಾ ಮೈದಾನದಲ್ಲೇ ಪ್ರಕರಣ ಕೊನೆಗೊಳ್ಳಲಿಲ್ಲ. ಆ ದಿನ ಹಲವಾರು ದಲಿತರು ದೇವಸ್ಥಾನವನ್ನು ಕೆಡವಿದ ನಿವೇಶನದ ಕಡೆಗೆ ಸಾಗಿದರು. ಪೊಲೀಸರು ಅವರನ್ನು ತಡೆಯಲು ಬಲ ಪ್ರಯೋಗ ಮಾಡಿದರು. ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಪೊಲೀಸರು ಟಿಯರ್ ಗ್ಯಾಸ್‌ನ್ನು ಕೂಡ ಬಳಸಿದರು.
ತುಘಲಕಾಬಾದ್‌ನಲ್ಲಿ ತಮ್ಮ ಮೇಲೆ ರಬ್ಬರ್ ಬುಲೆಟ್‌ಗಳನ್ನು ಹಾರಿಸಲಾಯಿತೆಂದು ಕೆಲವು ಮಂದಿ ಪ್ರತಿಭಟನಾಕಾರರು ಹೇಳಿದ್ದಾರೆ. ನೂರಾರು ಮಂದಿಯನ್ನು ಬಂಧಿಸಲಾಯಿತು. ಉತ್ತರ ಪ್ರದೇಶದ ಒಂದು ದಲಿತ ಹಕ್ಕುಗಳ ಸಂಘಟನೆಯಾಗಿರುವ ಭೀಮ್ ಸೇನೆಯ ಅದ್ಭುತ ಭಾಷಣಕಾರ ಹಾಗೂ ನಾಯಕ ಚಂದ್ರಶೇಖರ್ ಆಝಾದ್ ಕೂಡ ಬಂಧಿತರಲ್ಲಿ ಒಬ್ಬರು. ಇದಕ್ಕೆ ಪ್ರತಿಕ್ರಿಯೆಯಾಗಿ ದೇವಸ್ಥಾನದ ಜಮೀನನ್ನು ರವಿದಾಸಿ ಸಮುದಾಯಕ್ಕೆ ಮರಳಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಆಮ್ ಆದ್ಮಿ ನಿಯಂತ್ರಿತ ದಿಲ್ಲಿಯ ಅಸೆಂಬ್ಲಿ ಒಂದು ನಿಲುವಳಿಯನ್ನು ಅಂಗೀಕರಿಸಿತು.
ಈ ರಾಜಕೀಯ ಪ್ರತಿಕ್ರಿಯೆ ನಿರೀಕ್ಷಿತವೇ ಆಗಿತ್ತು. ಚಮಾರ್ ಸಮುದಾಯವು ಉತ್ತರ ಭಾರತದ ಅತಿದೊಡ್ಡ ದಲಿತ ಸಮುದಾಯವಾಗಿದೆ. ಈ ಸಮುದಾಯದ ಸದಸ್ಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅತ್ಯಂತ ಸ್ಪಷ್ಟವಾದ ಅರಿವು ಇದೆ. ಅವರ ರಾಜಕೀಯ ಪ್ರಜ್ಞೆ ಹಾಗೂ ರವಿದಾಸಿ ಧಾರ್ಮಿಕ ಅಸ್ಮಿತೆ ಒಂದರಿಂದ ಒಂದನ್ನು ಬೇರ್ಪಡಿಸಲಾಗದ ರೀತಿಯಲ್ಲಿ ಪರಸ್ಪರ ತಳಕು ಹಾಕಿಕೊಂಡಿದೆ.
ರವಿದಾಸಿ ಸಮುದಾಯ ಇಂದು ಸಾಕಷ್ಟು ಶಕ್ತಿಶಾಲಿಯಾಗಿದೆ ಯಾದರೂ ಅದು ಬಹಳ ಹಳೆಯ ಕಾಲದ ಸಮುದಾಯವಲ್ಲ. ‘‘ಮಧ್ಯಯುಗದಲ್ಲಿ ರವಿದಾಸಿಗಳಿದ್ದರೆಂಬುದು ಸ್ಪಷ್ಟವಿದೆ ಆದರೆ ಆಗ ಅವರು ಸಂಘಟಿತರಾಗಿರಲಿಲ್ಲ. ನಿಜವಾಗಿ ರವಿದಾಸ ಸಮುದಾಯದ ಇತಿಹಾಸವನ್ನು ಅವರು ಸೃಷ್ಟಿಸಲು ಆರಂಭಿಸಿದ್ದು 19ನೇ ಶತಮಾನದ ಕೊನೆಯ ಭಾಗದಲ್ಲಿ’’ ಎನ್ನುತ್ತಾರೆ. ರವಿದಾಸ ಪಂಥದ ಕುರಿತು ಸಂಶೋಧನೆ ನಡೆಸಿದವರಲ್ಲಿ ಅಗ್ರಗಣ್ಯರಾಗಿರುವ ಪೀಟರ್ ಫ್ರೀಡ್‌ಲ್ಯಾಂಡರ್
ರವಿದಾಸಿ ಅನನ್ಯತೆ, ಅಸ್ಮಿತೆ ಇಪ್ಪತ್ತನೇ ಶತಮಾನದಲ್ಲಿ ರಾಜಕೀಯ ಸ್ಥಿತಿಯಾಯಿತು ಮತ್ತು ಅದನ್ನು ಅಂಬೇಡ್ಕರ್‌ವಾದಿ ಚಳವಳಿಯಂತಹ ಇತರ ವಾಹಿನಿಗಳೊಂದಿಗೆ ದಲಿತರ ಹಕ್ಕುಗಳ ಹೋರಾಟಕ್ಕಾಗಿ ಬಳಸಿಕೊಳ್ಳಲಾಯಿತು. ಉದಾಹರಣೆಗೆ 1950ರ ದಶಕದಲ್ಲಿ ಉತ್ತರ ಪ್ರದೇಶದ ಚಮಾರ್ ಸಮುದಾಯದವರು ಸಾರ್ವಜನಿಕ ಹುದ್ದೆಗಳನ್ನು, ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ಹಕ್ಕಿಗಾಗಿ ಒಂದು ದೊಡ್ಡ ಚಳವಳಿ ನಡೆಸಿದರು. ರವಿದಾಸರ ಜನ್ಮದಿನವನ್ನು, ರವಿದಾಸ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ಅವರು ತಮ್ಮ ಈ ಹಕ್ಕನ್ನು ಜಾಹೀರು ಪಡಿಸಿದ್ದರು.
1940ರ ದಶಕದಿಂದ 1970ರ ದಶಕದವರೆಗೆ ಹಿಂದಿ ಬೆಲ್ಟಿನ ಅತ್ಯಂತ ಪ್ರಬಲ ದಲಿತ ನಾಯಕರಾಗಿದ್ದ ಜಗಜೀವನ್ ರಾಮ್ ಚಮಾರ್ ಜಾತಿಗೆ ಸೇರಿದವರು. ರವಿದಾಸ ಪಂಥದ ಅನುಯಾಯಿಗಳಾಗಿ ಸ್ಥಾಪನೆಗೊಂಡ ರವಿದಾಸ್ ಮಹಾಸಭಾದ ಸ್ಥಾಪನೆಗೆ ಕಾರಣರಾದವರು ಹಾಗೂ ಜವಾಬ್ದಾರರು ಜಗಜೀವನ್ ರಾಮ್. ರವಿದಾಸರ ಜನ್ಮಸ್ಥಳವಾದ ಬನಾರಸ್‌ನಲ್ಲಿ ರವಿದಾಸ್ ದೇವಾಲಯವನ್ನು ನಿರ್ಮಿಸಿದವರು ಕೂಡ ಜಗಜೀವನ್‌ರಾಮ್. ತುಘಲಕಾ ಬಾದ್‌ನ ದೇವಾಲಯದ ಆಡಳಿತ ಮಂಡಳಿಯು ಅಲ್ಲಿಯ ದೇವಾಲಯವನ್ನು ಜಗಜೀವನ್‌ರಾಮ್ ಉದ್ಘಾಟಿಸಿದ್ದಾರೆಂಬುದನ್ನು ತನ್ನ ದಾಖಲೆಗಳಲ್ಲಿ ಒಂದು ದಾಖಲೆಯಾಗಿ ವಾದಿಸಿತು.
ಅದೇನಿದ್ದರೂ, ಜನಸಾಮಾನ್ಯರ ನೆಲೆಯಲ್ಲಿ ತುಘಲಕಾ ಬಾದ್‌ಜಮೀನು ತಮಗೆ ಸೇರಿದ್ದೆಂದು ಹೇಳಲು ರವಿದಾಸಿಗಳು 1489ರಿಂದ 1517ರವರೆಗೆ ದಿಲ್ಲಿಯನ್ನಾಳಿದ ಪಠಾನ್ ದೊರೆ ಸಿಕಂದರ್ ಲೋಧಿಯ ಹೆಸರನ್ನು ಉಲ್ಲೇಖಿಸುತ್ತಾರೆ. ‘‘ಅಂದಿನ ಸುಲ್ತಾನ್ ಸಿಕಂದರ್ ಲೋದಿ ಇದೇ ಜಮೀನಿನಲ್ಲಿ ಸಂತ ರವಿದಾಸರನ್ನು ಅವರು ದಿಲ್ಲಿಗೆ ಬಂದಿದ್ದಾಗ ಬಂಧಿಸಿ ಜೈಲಿನಲ್ಲಿಟ್ಟಿದ್ದ’’ಎನ್ನುತ್ತಾರೆ ದೇವಾಲಯ ಆಡಳಿತ ಮಂಡಳಿಯ ಓರ್ವ ಸದಸ್ಯ ರಿಷಿ ಪಾಲ್. ‘‘ಆದರೆ ಆತ ಹಾಗೆ ಮಾಡಿದಾಗ ಜೈಲು ಕೋಣೆಯ ಬಾಗಿಲಿನ ಬೀಗಗಳೇ ಅದೃಶ್ಯವಾದವು. ತನ್ನ ವಶದಲ್ಲಿರುವವ ಒಬ್ಬ ಸಂತ, ಮಹಾತ್ಮನೆಂದು ಆಗ ಸುಲ್ತಾನನಿಗೆ ತಿಳಿಯಿತು. ಆತ ರವಿದಾಸರ ಭಕ್ತನಾದ ಮತ್ತು ಈ ಜಮೀನನ್ನು ದೇವಾಲಯಕ್ಕೆ ನೀಡಿದ.’’
ಈ ಕಥೆಯನ್ನು ಆಗಸ್ಟ್ 21ರಂದು ರಾಮಲೀಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಹಲವರು ಪುನರುಚ್ಚರಿಸಿದರು. ಪಂಜಾಬಿನ ಸಮಾನದಿಂದ ಬಂದ ಗುರುಪ್ರೀತ್‌ಸಿಂಗ್, ‘‘ಸುಲ್ತಾನರು ಈ ಜಮೀನನ್ನು ನಮಗೆ ಕೊಟ್ಟಿದ್ದರಿಂದ ಇದು (ಜಮೀನು) ನಮ್ಮ ಹಕ್ಕು’’ ಎಂದು ಹೇಳಿದರು.
ಫ್ರೀಡ್ ಲ್ಯಾಂಡರ್ ಈ ಕಥೆಯನ್ನು ರವಿದಾಸ ರಾಮಾಯಣದ ಒಂದು ಭಾಗವಾಗಿ ಗುರುತಿಸುತ್ತಾರೆ. ಈ ರಾಮಾಯಣವು ರವಿದಾಸರ ಜೀವನದ ಉತ್ಪ್ರೇಕ್ಷಿತವಾದ ಒಂದು ಆಧುನಿಕ ರಚನೆ. 1900 ಸುಮಾರಿಗೆ, ಮೊದಲಾಗಿ ಬರೆಯಲ್ಪಟ್ಟ ಇದು ಹಳೆಯ ಮೌಖಿಕ ಪರಂಪರೆಗಳನ್ನು ಆಧರಿಸಿದೆ. ಪಠ್ಯದ ಒಂದು ಆವೃತ್ತಿಯ ಪ್ರಕಾರ ಸನ್ಯಾಸಿಯೊಬ್ಬ ಸಿಕಂದರ್ ಲೋಧಿಗೆ ದೂರು ನೀಡಿದ. ರವಿದಾಸರನ್ನು, ಅವರ ಪಂಥವನ್ನು ಆಚರಿಸಿದಂತೆ ತಡೆಯುವುದಕ್ಕಾಗಿ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು ಆದರೆ ಸ್ವಲ್ಪವೇ ಸಮಯದೊಳಗಾಗಿ ರವಿದಾಸರು ತನ್ನ ಅಸಾಮಾನ್ಯ ಶಕ್ತಿಯಿಂದ ಜೈಲಿನಿಂದ ತಪ್ಪಿಸಿಕೊಂಡರು. ಇದರಿಂದ ಮೂಕವಿಸ್ಮಿತನಾದ ಸುಲ್ತಾನ್ ರವಿದಾಸರ ಭಕ್ತನಾದ.
ಈಗ ರವಿದಾಸ ದೇವಾಲಯಕ್ಕಾಗಿ ಹೋರಾಟ ನಡೆಸುತ್ತಿರುವ ಕಾರ್ಯಕರ್ತರು ಈ ಕತೆಗೆ ಇನ್ನೂ ಒಂದು ವಿವರವನ್ನು ಸೇರಿಸುತ್ತಾರೆ: ಈಗ ಕೆಡವಲಾಗಿರುವ ದೇವಸ್ಥಾನವಿದ್ದ ಅದೇ ಜಾಗದಲ್ಲಿ ರವಿದಾಸ ರನ್ನು ಜೈಲಿನಲ್ಲಿಡಲಾಗಿತ್ತು ಮತ್ತು ಸುಲ್ತಾನ ಯಾವಾಗ ರವಿದಾಸರ ಒಬ್ಬ ಅನುಯಾಯಿಯಾದನೋ ಆಗ ಆತ ಜಮೀನನ್ನು ರವಿದಾಸಿ ಪಂಥದವರಿಗೆ ಉಡುಗೊರೆಯಾಗಿ ನೀಡಿದ.
ಜಮೀನಿನ ಹಕ್ಕುಗಳ ಕುರಿತಾದ ಹೋರಾಟದಲ್ಲಿ ದಲಿತರಿಗೆ ಈ ಕಥೆ ಇತಿಹಾಸದ ಒಂದು ಭಾಗವಾಗಿ ನೆರವಾಗುತ್ತದೆ. ‘‘ತಾವು ದಾಖಲೆಗಳ ಒಂದು ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ದಲಿತರಿಗೆ ತಿಳಿದಿದೆ. ಆದರೆ ಅವರ ಬಳಿ ತಮ್ಮ ದಾಖಲೆಗಳಿರುವುದು ಅಪರೂಪ. ಆದ್ದರಿಂದ ಅವರು ಗತಕಾಲದ ಮರುಶೋಧದಲ್ಲಿ ದೊರಕಬಹುದಾದ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಾರೆ. ಇದು ಅವರಿಗೆ ಹೆಚ್ಚು ಶಕ್ತಿ ನೀಡುತ್ತದೆ’’ ಎಂದಿದ್ದಾರೆ ಅಲಹಾಬಾದ್‌ನ ಜೀವಿ ಪಂತ್ ಸೋಷಿಯಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಇತಿಹಾಸಕಾರ ಹಾಗೂ ಮಾನವ ಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಬದ್ರಿನಾರಾಯಣ್.
ಆದ್ದರಿಂದ ತುಘಲಕಾಬಾದ್‌ನಲ್ಲಿ ದೇವಾಲಯ ಮರು ನಿರ್ಮಾಣ ಆಗಬೇಕೆಂದು ಹೋರಾಟ ನಡೆಸುತ್ತಿರುವ ದಲಿತರು ಇತಿಹಾಸದ ಮೌಖಿಕ ಪರಂಪರೆಯ ಈ ಕಥಾನಕವನ್ನು ತಮ್ಮ ಕಾನೂನಾತ್ಮಕ ಹೋರಾಟದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ತಾರ್ಕಿಕವಾದ ಇತಿಹಾಸಕ್ಕೆ ಸವಾಲೊಡ್ಡುತ್ತಿದ್ದಾರೆ.
ಆಗಸ್ಟ್ 21ರ ಚಳವಳಿಯಲ್ಲಿ ದಲಿತರು ಇತಿಹಾಸಕ್ಕೆ ತಮ್ಮದೇ ಆದ ವಾದವನ್ನು ಸೇರಿಸುತ್ತಿದ್ದಾಗ, ಸಿಕಂದರ್ ಲೋಧಿಯ ಕಥೆಯನ್ನು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ನಿವೇಶನದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ಹಕ್ಕೊತ್ತಾಯದೊಂದಿಗೆ ಹೋಲಿಸಲಾಯಿತು. 21ರ ಪ್ರತಿಭಟನೆ ಸಂಘಟಕರಲ್ಲೊಬ್ಬರಾದ ಸುಶೀಲ್ ಗೌತಮ್ ಹೇಳಿದರು: ‘‘ಅವರು ಆ ನಿವೇಶನವನ್ನು ತಮ್ಮ ದೇವರ ಜನ್ಮಸ್ಥಾನವೆಂದು ಪರಿಗಣಿಸುವುದರಿಂದ ಸರಕಾರ ಮತ್ತು ನ್ಯಾಯಾಲಯಗಳು ಅವರ ವಾದಗಳನ್ನು ಎಪ್ಪತ್ತು ವರ್ಷಗಳಿಂದ ಕೇಳಿಸಿಕೊಳ್ಳುತ್ತಿವೆ ಆದರೆ ಐತಿಹಾಸಿಕವಾಗಿ ಇದ್ದ ಓರ್ವ ದೊರೆ (ಲೋದಿ) ನಮಗೆ ಈ ಜಮೀನನ್ನು ನೀಡಿದ್ದ ಎಂದು ನಾವು ವಾದಿಸಿದರೂ ಅವರು ನಮ್ಮ ದೇವಾಲಯವನ್ನು ಎಪ್ಪತ್ತು ದಿನಗಳೊಳಗಾಗಿ ಕೆಡವಿದರು. ಈ ಇಬ್ಬಗೆಯ ನೀತಿಯನ್ನು, ಎರಡು ಮಾನದಂಡಗಳನ್ನು ಗಮನಿಸಿ.’’
ದೇವಾಲಯವನ್ನು ಕೆಡವಿದ ಕೆಲವು ದಿನಗಳ ಬಳಿಕ ಉತ್ತರಪ್ರದೇಶದಿಂದ ದೊಣ್ಣೆ, ಸರಳು ಹಾಗೂ ತಮ್ಮ ಹಕ್ಕುಗಳನ್ನು ಸ್ಥಾಪಿಸುವ ದೃಢ ನಿರ್ಧಾರದೊಂದಿಗೆ ದಿಲ್ಲಿಗೆ ಲಗ್ಗೆ ಇಟ್ಟ ದಲಿತರ ಒಂದು ದಂಡು ‘ಜೈಭೀಮ್’ ಘೋಷಣೆಯೊಂದಿಗೆ ನುಗ್ಗಿಬಂತು. ಭೀಮ್ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಹತ್ತು ತಲೆಯ ರಾವಣನಂತೆ ಕಂಡು ಬಂದರು. ಆಧುನಿಕ ಭಾರತದ ರಾಜಕಾರಣದಲ್ಲಿ ದಲಿತರು ಸಾಮಾಜಿಕ ಚಳವಳಿಯನ್ನು ಕ್ರಾಂತಿಕಾರಕವಾಗಿ ಮಾಡುವ ಅವರು ದಲಿತ ರಾಜಕಾರಣದ ಅತ್ಯಂತ ದೊಡ್ಡ ನಾಯಕಿ ಮಾಯಾವತಿಗೆ ಪ್ರತಿಸ್ಪರ್ಧಿಯಾಗಿ ಮೂಡಿಬರುತ್ತಿದ್ದಾರೆ.
ಕೃಪೆ: scroll.in