ಹೆಣ್ಣು ಮನಸ್ಸಿನ ಕವಿತೆಗಳು....

Update: 2019-09-06 19:03 GMT

‘‘ನನ್ನ ಮೊದಲ ಸಂತೃಪ್ತ ಕವಿತೆ ಅಮ್ಮ ಮಾತ್ರ. ಅಮ್ಮನ ಬದುಕಿನ ಪಾಡನ್ನು ಕಟ್ಟಲು ಸಾಗಿದ ಪದಗಳ ಹುಡುಕಾಟ ‘ಕಣ್ಣೀರು’ ಕವನ ಸಂಕಲನ ತರುವವರೆಗೂ ಕಾಡಿದೆ, ಕಾಡುತ್ತಲೇ ಇರಲಿ ಎಂಬುದೇ ನನ್ನ ಆಶಯ. ಇಂದಿಗೂ ನಾನು ಸಂಪೂರ್ಣವಾಗಿ ಕಾವ್ಯದ ಒಡಲಾಳ ತಿಳಿದವನಲ್ಲ. ಅದು ಸಾಧ್ಯವೂ ಇಲ್ಲ. ಕನ್ನಡ ಸಾಹಿತ್ಯವನ್ನು ಈಗೀಗ ಆಸ್ವಾದಿಸುತ್ತಿರುವ ನನಗೆ ಬಹುವಾಗಿ ಕಾಡಿದ್ದು ಕಾವ್ಯ. ಇಡೀ ಭಾವನೆಗಳನ್ನು ಒಂದೆರಡು ಸಾಲಲ್ಲಿ ಹೇಳುವ ಪ್ರಕ್ರಿಯೆ ಅಮೋಘವಾದುದು. ಕೃತಿಯಲ್ಲಿರುವ ಕವಿತೆಗಳೆಲ್ಲಾ ನನ್ನ ಅಂತರಂಗದ ಆಂತರ್ಯ ಕದಡಿದವೇ ಆಗಿವೆ. ಅವು ಎಂದಿಗೂ ಬಲವಂತವಾಗಿ ಮೂಡಿದವಲ್ಲ. ಹಾಗಾಗಿಯೇ ನನ್ನ ಕವಿತೆಗಳ ಮೇಲೆ ನನ್ನ ನಂಬಿಕೆ ನಿಮ್ಮನ್ನೂ ಸಹ ಕಾಡಬಲ್ಲವೆಂದು...’’ ತನ್ನ ‘ಕಣ್ಣೀರು’ ಕವನ ಸಂಕಲನದ ಆಶಯದ ಕುರಿತಂತೆ ಕವಿ ಚಲಪತಿ ವಿ. ಹೀಗೆ ತೋಡಿಕೊಳ್ಳುತ್ತಾರೆ.
 ಈ ಸಂಕಲನದಲ್ಲಿ ಒಟ್ಟು 50 ಕವನಗಳಿವೆ. ಮೊದಲ ಕವಿತೆಯೇ ‘ಅವ್ವ’ನ ಮೇಲೆ ಬರೆಯಲಾಗಿದೆ. ಅವ್ವ ಎಂದಾಗ ನೆನಪಾಗುವುದು ಲಂಕೇಶರು ತನ್ನ ತಾಯಿಯ ಕುರಿತಂತೆ ಬರೆದ ಕವಿತೆ. ಹಾಗೆಯೇ ಹಲವು ಹಿರಿ-ಕಿರಿ ಕವಿಗಳು ತಮ್ಮ ಗೆಳತಿಯ ಬಳಿಕ ಬರೆದದ್ದು ತಾಯಿಯ ಬಗ್ಗೆಯೇ. ತಾಯಿ ಬೇರೆ ಬೇರೆ ರೂಪಕಗಳಲ್ಲಿ ಅಭಿವ್ಯಕ್ತಿಗೊಂಡಿದ್ದಾಳೆ. ಜನ್ಮ ಕೊಟ್ಟ ತಾಯಿ, ಮಣ್ಣು, ನಾಡು, ದೇಶ, ಭೂಮಿ, ಬ್ರಹ್ಮಾಂಡ ಹೀಗೆ ತಾಯಿಯ ಅಗಾಧತೆ ಬೆಳೆಯುತ್ತಾ ಹೋಗುತ್ತದೆ. ಇಲ್ಲಿ ಕವಿ ತನ್ನ ತಾಯಿ ಬದುಕಿನಲ್ಲಿ ಅನುಭವಿಸಿದ ನೋವು ದುಮ್ಮಾನಗಳನ್ನು ಕಟ್ಟಿಕೊಡಲು ಯತ್ನಿಸುತ್ತಾರೆ. ಇವರ ಹೆಚ್ಚಿನ ಕವಿತೆಗಳು ಮನುಷ್ಯನ ನೋವು, ದಾರಿದ್ರ, ಬಡತನ, ಸಂಕಟಗಳಿಗೆ ಧ್ವನಿಯಾಗುತ್ತವೆ.
‘ಚಿಂದಿ ಆಯುವವರು’ ಕವಿತೆಯಲ್ಲಿ ‘ಯಾರದೋ ಚಪ್ಪಲಿಗೆ ಪಾದ/ಬಟ್ಟೆಗೆ ದೇಹ, ಎಂಜಲಿಗೆ ಮೃಷ್ಟಾನ್ನ/ತಾರೆಗಳ ಒಯ್ಯಾರದಲಿ ಮಿನುಗುವ/ಗಗನವೇ ಮಹಲು, ಚಂದ್ರನೇ ನಾಳೆಯ ಬದುಕಿಗೊಂದು ಆಶಾದೀಪ’ ಎಂದು ಅವರ ಬದುಕಿನೊಳಗೂ ಬಚ್ಚಿಟ್ಟುಕೊಂಡಿರುವ ಸೌಂದರ್ಯದ ಚಿಂದಿಗಳನ್ನು ಆಯ್ದು ಓದುಗರ ಮುಂದಿಡುತ್ತಾರೆ. ಹಲವು ಕವಿತೆಗಳು ನವೋದಯ ಕಾಲದ ಗೇಯತೆಯನ್ನು ತನ್ನಾಗಿಸಿಕೊಂಡು ಬರೆಯಲ್ಪಟ್ಟಿವೆ. ಪ್ರಾಸಗಳಿಗೆ ಹೊಂದಿಕೊಳ್ಳಲು ತಿಣುಕಾಡಿವೆ. ಇವುಗಳ ನಡುವೆಯೂ ‘ತರಕಾರಿ ಮಾರುವವಳು’ ಕವಿತೆಯಲ್ಲಿ ಬರುವ ‘ಆರಿಸಿ ಬಿಸಾಡಿದ ಬದುಕಲ್ಲಿ /ಹೊಸತೆಲ್ಲಾ ಗುಡ್ಡೆಯಾಯಿತು /ಮಿಕ್ಕಿದೆಲ್ಲಾ ಇನ್ಯಾರೋ ಬುಟ್ಟಿಗೆ ಸೇರಿತು /ಅದಕ್ಕೂ ಬೆಲೆಯಿತ್ತು...’ ಎಂಬಂತಹ ಸಾಲುಗಳು ನಮ್ಮ್ನು ಕ್ಷಣ ಕಾಲ ಹಿಡಿದು ನಿಲ್ಲಿಸುತ್ತವೆ.
ನೌಟಂಕಿ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 80. ಮುಖಬೆಲೆ 80 ರೂ. ಕೃತಿಯು ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರಿಂದ ಧನಸಹಾಯ ಪಡೆದಿದೆ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News