ಮಾಯದ ಗಾಯಗಳು

Update: 2019-09-07 13:31 GMT

ಶಾಂತಲ ರಾವ್, ಬೋಳಾರ

ಬೆಂಗಳೂರಲ್ಲಿ ನಾರಾಯಣನ ‘ಗ್ರಹಪ್ರವೇಶ’ದ ಆಮಂತ್ರಣ ಪತ್ರಿಕೆ ಬಂದದ್ದೇ ತಡ ಶುಭತ್ತೆ, ‘‘ನೋಡಿ ಬೇಗ ಟಿಕೇಟ್ ಮಾಡಿ, ಹಾಗೆಯೇ ಶಿವನ ಮನೆಗೂ ಹೋಗಿಬರುವ’’ ಅಂದರು ಗಂಡನಿಗೆ.

‘‘ಅಲ್ವೇ ನಾರಾಯಣ ನಮಗೆ ಸ್ವಲ್ಪ ದೂರದ ಸಂಬಂಧವೇ.. ಮತ್ತೆ ಅದಕ್ಕೆ ಅಷ್ಟು ದೂರ ಬೆಂಗಳೂರಿಗೆ ಹೋಗುವ ಅವಶ್ಯಕತೆಯದರೂ ಏನು?ಅವನೇನು ನಮ್ಮ ಯಾವುದೇ ಸಮಾರಂಭಕ್ಕೆ ಬಂದವನಲ್ಲಾ ಮತ್ಯಾಕೆ?...’’ ಆದರೂ ಪತಿರಾಯರಿಗೆ ಕಾರಣ ಸಿಕ್ಕಿಬಿಟ್ಟಿತ್ತು, ಅದೇ ಕೊನೇಯ ಪದ ‘‘ಶಿವನ ಮನೆ!!’’ ನಿಜ, ಇಬ್ಬರೂ ಒಮ್ಮೆ ಹೋಗಿಯೇ ಬಿಡುವ ಶಿವನ ಮನೆಗೆ ಅನ್ನಿಸಿತ್ತು. ತುಂಬಾ ದಿನದಿಂದ ಅವರಿವರಿಂದ ಶಿವನ ಬವಣೆಯ ಬಗ್ಗೆ ಕೇಳುತ್ತಾ ಬಂದಿದ್ದರೂ, ಈಗ ಕೆಲ ದಿನಗಳ ಹಿಂದೆ ಶಿವನ ಮನೆಗೆ ಹೋಗಿ ಬಂದ ಮಗ ಹೇಳಿದ ಮಾತುಗಳು ಶುಭತ್ತೆಯನ್ನು ಕಾಡಿತ್ತು. ಇಲ್ಲಾ ಈಸಲ ಬೆಂಗಳೂರಿಗೆ ಹೊಗುದೇ...ಮತ್ತೆ ಶಿವನ ಮನೆಗೆ ಹೋಗಿ ಅವನ ಪರಿಸ್ಥಿತಿಯನ್ನೊಮ್ಮೆ ಕಣ್ಣಾರೆ ನೋಡುದು ಅಂತ ಪತಿ ಪತ್ನಿಯರಿಬ್ಬರೂ ನಿಶ್ಚಯಿಸಿದರು.

ಶಿವ, ಶುಭತ್ತೆಯ ಅಕ್ಕನ ಮಗ, ಸೊಗಸುಗಾರ, ಮಾತುಗಾರ. ಆತನ ಪತ್ನಿ ಮಂಜರಿ ಕೂಡ ನಗುಮುಖದ ಸುಶೀಲೆ. ಆದರೆ ಈಗೀಗ ಕೇಳಿ ಬರುತ್ತಿರುವ ಮಾತುಗಳು ಇವರ ಬಗ್ಗೆ ಇರುವ ಅಭಿಪ್ರಾಯವನ್ನೇ ಅಲ್ಲಾಡಿಸುವಂತದ್ದು. ಏನಾಯ್ತು ಮಂಜರಿಗೆ?ಮಗ,ಏನೋ ಕೆಲಸವಿದೆಯೆಂದು ಎರಡು ದಿನ ನಿಲ್ಲಲು ಶಿವನ ಮನೆಗೆ ಹೋಗಿದ್ದನಂತೆ ಆದರೆ ಮರುದಿನವೇ ಹೋಟೆಲ್‌ನ ರೂಮಿಗೆ ತೆರಳಿದನಂತೆ!

‘‘ಅಮ್ಮಾ, ಮಂಜರಿ ಅಕ್ಕನಿಗೆ ಮನೆ ಕಡೆ ಗಮನವೇ ಇಲ್ಲ. ಬೆಳಗ್ಗೆ 8 ಗಂಟೆಗೆಲ್ಲಾ ಮನೆ ಬಿಟ್ಟರೆ ಮತ್ತೆ ರಾತ್ರಿ 8 ಗಂಟೆಗೇ ಬರುವುದು. ಬೆಳಗ್ಗೆ ಒಂದು ಅನ್ನ ಸಾರು ಮಾಡಿ ಹೊರಟು ಬಿಡ್ತಾರೆ. ಶಿವ ಬೇಕಿದ್ರೆ ಅದನ್ನೇ ಬೆಳಗ್ಗೆಗೆ, ಮಧ್ಯಾಹ್ನಕ್ಕೆ, ಸಂಜೆಗೆ ತಿನ್ನಬೇಕು. ಮತ್ತೆ ರಾತ್ರಿಯೂ ಅದೇ! ಬೆಳಗ್ಗೆ ಎದ್ದವರು ಅವನಿಗೆ ಒಂದು ಲೋಟ ಕಾಫಿ ಸಹಾ ಮಾಡಿಕೊಡುವುದಿಲ್ಲ ಮಂಜರಿಯಕ್ಕ!! ರಾತ್ರಿ ಬಂದವರೇ ಊಟ ಮಾಡಿ ಅವರ ರೂಮ್ ಸೇರಿಕೊಂಡರೆ ಮತ್ತೆ ಬೆಳಗ್ಗೆಯೇ ಹೊರಬರುವುದು! ಶಿವ ಇಡೀ ದಿನ ಮನೆಯಲ್ಲಿ ಒಂಟಿ. ಅವನತ್ರ ಮಾತನಾಡಲೂ ಪುರುಸೊತ್ತಿಲ್ಲ ಅವರಿಗೆ. ನನಗಂತು ಸಾಕಾಯ್ತು. ಇನ್ನು... ಶಿವನಿಗೆ ಒಂದು ಲೋಟ ಕಾಫಿ ಬಿಡು ನೀರು ಬೇಕು ಅಂತ ಕೇಳಲೂ ಧೈರ್ಯವಿಲ್ಲ. ನನ್ನಹತ್ರ ತುಂಬಾ ಹೇಳಿದ ಈಗ ಮಂಜರಿ ಅಕ್ಕನಿಗೆ ಹಣದ ಪಿಶಾಚಿ ಹಿಡಿದಿದೆಯಂತೆ, ಒಂದು ಪೈಸೆ ಕೂಡ ಶಿವನಿಗೆ ಕೊಡುವುದಿಲ್ಲವಂತೆ. ಇಡೀ ದಿನ ಬ್ಯಾಂಕು, ಬ್ಯಾಂಕು....ಶನಿವಾರ, ಆದಿತ್ಯವಾರ ಸಹಾ ಹೋಗ್ತಾರಂತೆ. ಕೇಳಿದ್ರೆ.. ‘‘ಮತ್ತೆ, ನಾನು ದುಡಿದ್ರೆ ಮಾತ್ರಾ ಈ ಸಂಸಾರ ಸಾಗುವುದು. ಮಗನ ಹಾಸ್ಟೆಲ್ ಫೀಸ್ ಎಷ್ಟೂಂತ ಗೊತ್ತಿದೆಯ ಅಂತ ಹಂಗಿಸ್ತಾರಂತೆ.’’

ಶುಭತ್ತೆಗೆ ಈಗ ನಿಜವಾಗಿಯೂ ಚಿಂತೆ ಆಯಿತು! ಮದುವೆ ಆಗಿ ಒಂದು ಹತ್ತು ವರ್ಷ ಕಳೆಯುವಷ್ಟರಲ್ಲಿ ಶಿವನಿಗೆ ಹೃದಯದ ತೊಂದರೆ ಕಾಣಿಸಿ, ಹೃದಯದ ಬಡಿತ ನಿಧಾನವಾಗಲು ಶುರುವಾದಾಗ, ವೈದ್ಯರು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದರು. ನಂತರವೇ ಮಂಜರಿಗೆ ಪ್ರೈವೇಟ್ ಬ್ಯಾಂಕಲ್ಲಿ ಕೆಲಸ ಸಿಕ್ಕಿ ಸಂಸಾರ ರಥ ಸ್ವಲ್ಪ ಸರಾಗವಾಗಿ ಉರುಳಲು ಶುರುವಾಗಿತ್ತು. ಶಿವ ಕೆಲಸಕ್ಕೆ ಇದ್ದ ಫ್ಯಾಕ್ಟರಿಯವರು ಅಲ್ಪಸ್ವಲ್ಪ ಹಣ ಕೊಟ್ಟು ಕೈ ತೊಳೆದು ಕೊಂಡಿದ್ದರು.ಶಿವ ದುಂದುಗಾರನೂ ಅಗಿದ್ದುದರಿಂದ ಉಳಿತಾಯವೇನೂ ಇರಲ್ಲಿಲ್ಲ, ಹಾಗಾಗಿ ಮಂಜರಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಆದರೂ... ಗಂಡನನ್ನು ಇಷ್ಟೊಂದು ನಿಕೃಷ್ಟವಾಗಿ ಕಾಣುವುದೇ? ಏನೇ ಆಗಲಿ ಈ ಸಲ ಬಿಸಿ ಮುಟ್ಟಿಸಿ ಬರ್ಬೇಕು ಮಂಜರಿಗೆ!

‘‘ಅಮ್ಮಾ, ನೀವು ಬೆಂಗಳೂರಿಗೆ ಹೋದರೆ ನಂಗೆ ನಾಕು ದಿನ ರಜೆ ಅಲ್ವಾ? ನನ್ನ ಮಗ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗುವಾಂತ ಹೇಳ್ತಾ ಇದ್ದಾನೆ. ನಾನು ಹೋಗಿ ಬರುವಾಂತ....’’ ಕೆಲಸದ ಸರೋಜಳ ಮಾತುಗಳು ಶುಭತ್ತೆಯನ್ನು ಅವರ ಮನೆಗೇ ಎಳೆದುಕೊಂಡು ಬಂದವು.

‘‘ಹಾಂ...ಏನು? ನಾಕು ದಿನ ಹೋಗಿ ಬರ್ತೀಯಾ? ಮತ್ತೆ... ಬಸ್‌ಲ್ಲಿ ಕೂತ ತಕ್ಷಣ ವಾಂತಿ ಮಾಡಿಕೊಳ್ತಿಯಲ್ಲ ಮಾರಾಯ್ತಿ ನೀನು!’’

‘ಬಸ್‌ಲ್ಲಿ ಅಲ್ಲ ಅಮ್ಮ, ಮಗ ಕಾರ್ ಬುಕ್ ಮಾಡ್ತಾನಂತೆ ಆರಾಮವಾಗಿ ಹೋಗಿ ಬರುವಾಂತ ಹೇಳಿದ್ದಾನೆ’’.

ಶುಭತ್ತೆ ಅವಕ್ಕಾಗಿ ಸರೋಜಳನ್ನೇ ನೋಡಿದರು! ಸುಮಾರು ಹತ್ತು ವರ್ಷಗಳಿಂದ ಸರೋಜಳನ್ನು ನೋಡುತ್ತಾ ಬಂದಿದ್ದಾರೆ, ಎಷ್ಟೊಂದು ಬದಲಾವಣೆ. ಆಗಿನ, ದೀನಾವಸ್ಥೆಯಲ್ಲಿದ್ದ, ಹತ್ತು ಇಪ್ಪತ್ತು ರೂಪಾಯಿಗೂ ಗಂಟೆಗಟ್ಟಲೆ ಮೈಬಗ್ಗಿಸಿ ದುಡಿಯುತ್ತಿದ್ದ, ಸಪೂರ ಕಡ್ಡಿ ಸರೊಜಳಿಗೂ.. ಈಗ ಅತ್ಮವಿಶ್ವಾಸದಿಂದ ಹೊಳೆಯುವ ಕಣ್ಣುಗಳು, ಮೈಕೈ ತುಂಬಿ ನಗುತ್ತಾ ಇರುವ, ಸಂತೃಪ್ತಿಯಿಂದ ಬೀಗುತ್ತಿರುವ ಸರೋಜಳಿಗೂ..... ದಿನಕ್ಕೆ 500 ಅಲ್ಲ 600 ಕೊಟ್ಟರೂ ಯಾರ ಮನೆಗೂ ಹೋಗದವಳು, ಶುಭತ್ತೆಯ ಮೇಲಿನ ಗೌರವದಿಂದ ಬರುವವಳು. ಶುಭತ್ತೆಯೂ ಅಷ್ಟು ಚೆಂದದ ಸೀರೆ ಉಡಲಿಕ್ಕಿಲ್ವೆನೋ ಸರೋಜ ಉಡ್ತಾಳೆ!. ಕೈಯಲ್ಲಿ ಒಂದು ಜತೆ ಬಳೆ, ಕಿವಿಗೆ ಸಣ್ಣ ಕಲ್ಲಿನ ಬೆಂಡೋಲೆ ಬಂದಿದೆ.

‘‘ಈಗ ಸ್ವಲ್ಪ ಹಾಯಾಗಿ ಇದ್ದಿ ಅಲ್ವ ಸರೋಜ’’ ಅಂದರು ಶುಭತ್ತೆ ನಗುತ್ತಾ. ಗತ ಕಾಲದ ನೆನಪು ಸರೋಜಳ ಕಣ್ಣಲ್ಲಿ ನೀರು ತುಂಬಿತ್ತು. ಈ ಮನಸು ಎಷ್ಟೊಂದು ವಿಚಿತ್ರ!! ಕೆಲವು ನೆನಪುಗಳನ್ನು ಎಷ್ಟು ವರ್ಷಗಳು ಉರುಳಿದರೂ ಹಸಿರ ಹಸಿರಾಗಿಯೇ ಇರಿಸಿ ತಾನೇ ಕೊರಗಿಕೊಳ್ಳುವಂತೆ ಮಾಡುತ್ತದೆ. ಎಲ್ಲಾ ನೆನಪುಗಳನ್ನು ಮರೆತು ಬಿಡು ಎಂದು ಎಷ್ಟೊಂದು ಆಗ್ರಹಿಸಿ ಬೇಡಿಕೊಂಡರೂ ದಿನವೂ ಅದನ್ನೇ ನೆನಪಿಸಿ ಕಣ್ಣಲ್ಲಿ ನೀರು ಜಿನುಗುವಂತೆ ಮಾಡುವ ನಮ್ಮದೇ ಮನಸು ನಮ್ಮ ವೈರಿಯಂತೆ ನಡೆದುಕೊಳ್ಳುವ ಪರಿ, ವಿಚಿತ್ರ ಅಲ್ಲದೆ ಇನ್ನೇನು?!! ಸರೋಜಳ ಮನಸ್ಸು ಹಿಂದಕ್ಕೋಡಿತ್ತು.

 ಹೆಚ್ಚೇನು ವರ್ಷವಾಗಿಲ್ಲ, ಸುಮಾರು ಹತ್ತು ವರ್ಷಗಳ ಹಿಂದೆ ಹೇಗಿದ್ದೆ ನಾನು! ದಿನ ನಿತ್ಯ ಗಂಡ ನರಕ ತೋರಿಸುತ್ತಿದ್ದ. ದುಡಿದ ಹಣವೆಲ್ಲಾ ಕುಡಿತಕ್ಕೆ ಮೀಸಲಾಗಿರಿಸಿ ಹೆಂಡತಿ ಮಕ್ಕಳನ್ನು ಥಳಿಸಿ, ಎತ್ತರದ ದನಿಯಲ್ಲಿ ಬಯ್ಗಳ ಮಳೆ ಸುರಿಸಿ ಅಕ್ಕಪಕ್ಕದವರಿಗೆಲ್ಲಾ ತಾನೆಂಥಾ ಶೂರ ಧೀರ ಗಂಡ ಎಂದು ಪ್ರದರ್ಶಿಸಿ ಪುಕ್ಕಟೆ ಮನೋರಂಜನೆ ಒದಗಿಸುತ್ತಿದ್ದ ಪರಿ, ತನಗೆ ಎಂದೂ ಮರೆಯಲಾಗದ ಮಾಯದ ಗಾಯಗಳು!! ಇಂದಿಗೂ ಸ್ವಲ್ಪವೇ ಮುಟ್ಟಿದರೂ ಮನಸೆಲ್ಲಾ ಕಣ್ಣೀರಿಂದ ಜಿನುಗುತ್ತದೆ. ಕ್ಷಣ ಮಾತ್ರದಲ್ಲೇ ಎಲ್ಲವನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಕಣ್ಣೀರು ಸುರಿಸುವಂತೆ ಮಾಡುತ್ತದೆ. ಇನ್ನು ಅಮ್ಮನಂತೂ ತನ್ನ ನಂತರ ಹುಟ್ಟಿದ ಗಂಡು ಮಕ್ಕಳಿಗೆಲ್ಲ ನನ್ನನ್ನೇ ಜವಾಬ್ದಾರಿ ಮಾಡಿಬಿಟ್ಟಿದ್ದಳು! ಮನೆ ಕೆಲಸ ಮಾಡಿ ತಮ್ಮಂದಿರನ್ನೆಲ್ಲ ಸ್ನಾನ ಮಾಡಿಸಿ ಬುತ್ತಿ ಕೊಟ್ಟು ಶಾಲೆ ಕಳುಹಿಸುವಲ್ಲಿ ಏನಾದರು ವ್ಯತ್ಯಾಸವಾದರೂ ಅವಳ ಕೈಯಲ್ಲಿ ಕೋಲು ಪ್ರತ್ಯಕ್ಷ ವಾಗಿ ಬಿಡುತ್ತಿತ್ತು. ಸಣ್ಣಪ್ರಾಯದಲ್ಲೇ ಮದುವೆ, ಕುಡುಕ ಕ್ರೂರ ಗಂಡ, ಸಣ್ಣ ಪುಟ್ಟ ಮಕ್ಕಳು!! ಸುತ್ತಮುತ್ತಲಿನ ಮನೆಗಳಿಗೆಲ್ಲಾ ನಾನೇ ಮನೆಗೆಲಸದವಳು. ಸಿಕ್ಕಿದ ಸಂಬಳವೆಲ್ಲ ಗಂಡನ ಪಾಲಾಗುತ್ತಿತ್ತು. ಮಕ್ಕಳಿಗೆ ಇಷ್ಟವೆಂದು ಕಷ್ಟಪಟ್ಟುಮಾಡಿದ ಅಡಿಗೆಯನ್ನೆಲ್ಲಾ ಕಂಠಪೂರ್ತಿ ತಿಂದು ಹೋಗುವಾಗೊಮ್ಮೆ ಮಡಿಕೆಗೆ ಕಾಲಿಂದ ಒದ್ದು ಉಳಿದುದ್ದೆಲ್ಲವೂ ಮಣ್ಣುಪಾಲಾದಾಗ ನಾನು ಅಯ್ಯೋ ಎಂದು ಕಣ್ಣೀರು ಸುರಿಸಿದರೆ ಆತನಿಗೆ ತೃಪ್ತಿಯ ತೇಗು ಬರುತ್ತಿತ್ತು! ಯಾರೂ ಸಹಾಯ ಮಾಡುವವರಿಲ್ಲದಿದ್ದಾಗ ಕಂಗಾಲಾಗಿದ್ದೆ. ಆಗ ಶುಭತ್ತೆ ಚಾಚಿದ ಸಹಾಯ ಹಸ್ತವೇ ಬದುಕಲು ಕಲಿಸಿತ್ತು! ಮಕ್ಕಳಿಗೆಂದು ಆಕೆ ನೀಡುತ್ತಿದ್ದ ಬಟ್ಟೆ, ತಿಂಡಿ, ಪುಸ್ತಕ ಮಾತ್ರವಲ್ಲದೆ ಭರವಸೆಯ ಮಾತುಗಳು... ಸರೋಜ ಇಂದಿಗೂ ಮರೆತಿಲ್ಲ! ಕಾಲ ಉರುಳುತ್ತಿದ್ದಂತೆ ಅನೇಕ ಬದಲಾವಣೆಗಳನ್ನೂ ತಂದಿತ್ತು. ಅದೇ ಗಂಡ ಈಗ ಸಂಜೆ ಬಂದವನೇ ಬಾಲ ಮುದುರಿಸಿ ಮೂಲೆ ಸೇರುತ್ತಾನೆ. ಕುಡಿದು ಬಂದ ದಿನ ಮನೆಯ ಹೊರಗೆ ಮಲಗುತ್ತಾನೆ. ಮನಪರಿವರ್ತನೆ ಏನಾಗಿಲ್ಲ, ಕೇವಲ ಮಗನ ಹೆದರಿಕೆ!ಕುಡಿದು ಬಂದು ಹೆಂಡತಿ ಮಕ್ಕಳನ್ನು ಮನ ಬಂದಂತೆ ಬಡಿಯಲು ಈ ಗಂಡನೆಂಬ ಪ್ರಾಣಿ ಇವತ್ತಿಗೂ ರೆಡಿಯೇ! ಆದರೆ ಪ್ರಾಯಕ್ಕೆ ಬಂದ ಮಗ ಮೀಸೆ ತಿರುವಿ ಮಾಂಸಖಂಡಗಳನ್ನೆೆಲ್ಲಾ ಸೆಟೆಸಿ ನಿಲ್ಲುವ ವೈಖರಿಯೇ ಮೂಲೆಯಲ್ಲಿ ಮುದುರಿ ನಿಲ್ಲಲು ಕಾರಣ! ನಗು ಬಂತು ಸರೋಜಳಿಗೆ! ಆದರೆ ಇವಳ ಹೆಚ್ಚೇನು ಪರಿಚಯವಿಲ್ಲದ ಅಕ್ಕಪಕ್ಕದ ಮನೆಯವರು, ತಂದೆಗೆ ಗೌರವ ಕೊಡುವುದನ್ನು ಕಲಿಸಿಲ್ಲ ಎಂದಾಗ ಕಸಿವಿಸಿಯಾಗುವುದು, ಹೌದೇ ಯೆನ್ನಿಸಿ ಮತ್ತೆ ಕಣ್ಣೀರು ತುಂಬಿದಾಗ, ಮಕ್ಕಳೇ ಸಮಾಧಾನ ಮಾಡುತ್ತಾರೆ.

‘‘ಅಮ್ಮಾ, ನೀವು ಎಂಥಾ ಕಷ್ಟ ಅನುಭವಿಸಿದ್ದೀರಿ ಅಂತ ನಮಗೆ ಗೊತ್ತು. ಅವರಿವರ ಮಾತಿಗ್ಯಾಕೆ ತಲೆಬಿಸಿ ಮಾಡುವುದು? ಅಪ್ಪ ಈಗಾದ್ರೂ ಸ್ವಲ್ಪ ಸರಿದಾರಿಯಲ್ಲಿ ಬರಲಿ’’

ಅದು ಸರಿ ಎಂದು ಸರೋಜ ತಲೆ ಅಲುಗಿಸುತ್ತಾಳೆ. ಸರೋಜಳನ್ನು ನೋಡುತ್ತಿದ್ದಂತೆ ಶುಭತ್ತೆಗೆ ಈಗ ಪಕ್ಕನೆ ಮಂಜರಿಯ ನೆನಪಾಯಿತು. ಇದೇ ಶಿವ ಮಂಜರಿಯ ಕೆನ್ನೆಗೆ ಹೊಡೆದದ್ದು ಅಮ್ಮನ ಮಾತು ಕೇಳಿ, ಶುಭತ್ತೆಗೆ ಚೆನ್ನಾಗಿ ನೆನಪಿದೆ. ಮಂಜರಿ ಅಮ್ಮನಿಗೆ ರಾತ್ರಿ ಹಾಲು ಕೊಡುವುದನ್ನು ಸ್ವಲ್ಪ ತಡ ಮಾಡಿದಳೆಂದು ಎಲ್ಲರ ಎದುರಿಗೇ ಕೆನ್ನೆಗೆ ಬೀಸಿ ಹೊಡೆದಿದ್ದ!! ಮಾತ್ರವಲ್ಲದೆ ಮೊನಚು ಮಾತುಗಳ ಕೂರಂಬುಗಳು!

‘‘ಅಮ್ಮನಿಗೆ ದಿನಾ ರಾತ್ರಿ ಹಾಲು ಕುಡಿದು ಮಲಗುವ ಅಭ್ಯಾಸ ಅಂಥಾ ಗೊತ್ತಿಲ್ಲಾ ನಿನಗೆ? ಹೋಗಿ ಹೋಗಿ ಇಂಥಾ ಒಂದು ಹೆಂಡತಿ ನನಗೆ! ನನ್ನ ಗ್ರಾಚಾರ, ಇನ್ನೆಷ್ಟು ಆಯುಷ್ಯ ಇದೆಯೋ ನಿನಗೆ?’’ ಮತ್ತೆ ಎಲ್ಲರನ್ನು ನೋಡುತ್ತಾ ತಮಾಷೆಯೆಂಬಂತೆ ಗಂಡ ಹೆಂಡತಿಯ ಸಂಬಂಧ ಏಳೇಳು ಜನ್ಮದಂತೆ, ಇದು ಏಳನೆಯ ಜನ್ಮವಾಗಿರಲಿ ದೇವ ನಕ್ಕು ಬಿಟ್ಟಿದ್ದ! ಪತಿಯ ಕ್ರೂರ ಮಾತುಗಳು,ಅತ್ತೆಯ ಮುಖದಲ್ಲಿನ ತೃಪ್ತಿಯ ನಗೆ ಮಂಜರಿಗೆ ಅದೆಷ್ಟು ನೋವು ಕೊಟ್ಟಿರಬಹುದು!! ಇಷ್ಟು ಮಾತ್ರವಲ್ಲದೆ ಶಿವ ಆಫೀಸಿನ ಒಂದು ಹುಡುಗಿಯ ಹಿಂದೆ ಬಿದ್ದು, ಆಕೆಯ ತಂದೆ ಮನೆಗೆ ಬಂದು ಶಿವನಿಗೆ ಛೀಮಾರಿ ಹಾಕುವಾಗ ಶಿವ ಮೆತ್ತಗೆ ತನ್ನ ರೂಮ್ ಸೇರಿ ಬಾಗಿಲು ಹಾಕಿಕೊಂಡಿದ್ದರೆ, ಮಂಜರಿ ಹುಡುಗಿಯ ತಂದೆಯ ಬೆದರಿಕೆಯ ಮಾತುಗಳು, ಹೀನ ಅವಾಚ್ಯ ಬಯ್ಗಳಿಗೆ ನೆಲಕ್ಕೇ ಕುಸಿದಿದ್ದಳು. ಎದೆಯೊಳಗಿನ ಹಾಲಾಹಲ ಅಲ್ಲೇ ಕುದಿಕುದಿದು ಗಟ್ಟಿಯಾಗಿತ್ತು. ಇದೆಲ್ಲಾ ಶುಭತ್ತೆಗೆ ತಿಳಿದಿದ್ದ ವಿಷಯವೇ ಆಗಿತ್ತು. ಇವತ್ತು ಸರೋಜಳ ಬದುಕಿಗೂ ಮಂಜರಿಯ ಬದುಕಿಗೂ ತಾಳೆ ಹಾಕುತಿತ್ತು ಆಕೆಯ ಮನಸ್ಸು. ತನಗೇ ಈ ನೆನಪುಗಳು ಇಷ್ಟೊಂದು ನೋವು ತರುತ್ತಿರಬೇಕಾದರೆ ಅವರಿಬ್ಬರ ಮನಸ್ಸು ಅದೆಷ್ಟು ನರಳುತ್ತಿದೆಯೋ!! ಮಂಜರಿಗಾಗಲಿ, ಸರೋಜಳಿಗಾಗಲಿ ಪತಿಯ ಮೇಲೆ ಪ್ರೀತಿ ಗೌರವ ಬರಲು ಸಾಧ್ಯವೇ?....

ತಿಳಿಯಾದ ನೀರಲ್ಲಿ ಕಾಲದ್ದಿ ಕೆಸರಾಗುವಂತೆ ಕಲಕಿ ‘‘ಹ್ಹೋ.. ನೀರು ಕುಡಿಯಲು ಯೋಗ್ಯವಿಲ್ಲ’’ ಎಂದು ದೂರಿದಂತೆ ತಾನೆ? ಸರಿಯಾದ ಪೋಷಣೆ ಸಿಕ್ಕಿದರೆ ಬೀಜ ಮೊಳಕೆಯೊಡೆದು ಚಿತ್ತ್ತಾಕರ್ಷಕವಾದ ಹೂವೋ, ಹಣ್ಣೋ ಕೊಡುವುದಲ್ಲದೆ ಅದನ್ನು ತುಳಿದು ಹಿಂಸಿಸಿ ಭಾಗ ಮಾಡಿದರೆ ಸಿಗುವುದಾದರೂ ಏನು? ಅಪೇಕ್ಷಿಸುವುದಾದರೂ ಸಾಧುವೇ? ಗೌರವಕ್ಕೆ ಅರ್ಹನಾದರೆ ಮಾತ್ರ ಗೌರವ ಸಿಗುತ್ತದೆಯೇ ವಿನಾಃ ಕೇವಲ ವಯಸ್ಸಿನ, ಹುದ್ದೆಯ, ದುಡ್ಡಿನ ಪ್ರಭಾವದಿಂದ ಸಿಕ್ಕಿದ್ದರೆ ಅದು ಭಯದ ಮೂಲದಿಂದ ಜನಿಸಿದ್ದು ಎಂಬುದೇ ವಾಸ್ತವ ತಾನೇ? ಮಂಜರಿಯಕ್ಕ ಪತಿಯ ಸೇವೆ ಮಾಡುವುದಿಲ್ಲ ಎಂದು ದೂರಿದ ಮಗನ ಧೋರಣೆಗೆ ಶುಭತ್ತೆಯ ಮನ ವ್ಯಗ್ರವಾಯಿತು.

 ಪತಿ, ‘‘ಏನೇ? ಬೆಂಗಳೂರಿಗೆ ಟಿಕೆಟ್ ಬುಕ್ ಮಾಡುದಾ?’’ ಎಂದರೆ ಶುಭತ್ತೆ, ‘‘ಬೇಡ, ಇನ್ನೊಂದು ಸಲ ನೋಡುವ, ಈಗ ಯಾಕೋ ಬೇಡಾಂತ ಕಾಣ್ತದೆ’’ ಅಂದರು. ಮನಸ್ಸಿನ ಭಾವನೆಗಳನ್ನು ಮರೆಮಾಚುತ್ತಾ! ಈ ಹೆಂಗಸರ ಮನಸ್ಸೇ ವಿಚಿತ್ರ ಪತಿಯ ಗೊಣಗುವಿಕೆಗೆ ಗಮನ ಕೊಡದೆ ಶುಭತ್ತೆ ಫೊನ್ ಕೈಗೆತ್ತಿಕೊಂಡರು. ಮೊದಲು ಮಂಜರಿಗೆ ಫೋನ್ ಮಾಡಬೇಕು ನಂತರ ಮಗನಿಗೊಂದು ಕ್ಲಾಸ್ ತೆಗೆದುಕೊಳ್ಳಬೇಕು.

‘‘ಹಲೋ ಮಂಜರಿ ಹೇಗಿದ್ದಿಯಮ್ಮಾ? ನಿನ್ನ ಆರೋಗ್ಯ ನೋಡಿಕೊ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಸಹಿಸಿ ಮಕ್ಕಳನ್ನು ಚೆನ್ನಾಗಿ ಓದಿಸಿ ದಡ ಸೇರಿಸಿರುತ್ತಿರುವಿಯಲ್ಲ? ನೀನು ನಿಜಕ್ಕೂ ಗ್ರೇಟ್!...’’ ಮಾತು ಮುಗಿಸಿದ ಶುಭತ್ತೆಗೆ ಏಕೋ ನಿರಾಳವಾಯಿತು.

Writer - ಶಾಂತಲ ರಾವ್, ಬೋಳಾರ

contributor

Editor - ಶಾಂತಲ ರಾವ್, ಬೋಳಾರ

contributor

Similar News