ಸುಂದರ ತರುಣಿ ಮತ್ತು ಸನ್ಯಾಸಿ

Update: 2019-09-07 13:34 GMT

ಅದೊಂದು ನದಿ. ಮೈ ದುಂಬಿ ಹರಿಯುತ್ತಿತ್ತು. ಸುಂದರ ಪರಿಸರದಲ್ಲಿ ಹರಿಯುತ್ತಿದ್ದುದರಿಂದ ಅಲ್ಲಿ ಪ್ರಶಾಂತತೆ ಇತ್ತು. ಹಚ್ಚ ಹಸುರಿನ ಹುಲ್ಲಿನಿಂದ ಆ ಜಾಗ ಅಂದವಾಗಿ ಕಾಣುತ್ತಿತ್ತು. ಆ ನದಿಯ ತೀರದಲ್ಲಿ ಇಬ್ಬರು ತರುಣರು ನಿಂತಿದ್ದರು. ಅವರು ಖಾವಿ ಬಟ್ಟೆಯನ್ನು ಧರಿಸಿದ್ದರು. ಉದ್ದನೆಯ ಗಡ್ಡ ಬಿಟ್ಟಿದ್ದರು. ತಲೆಯ ಮೇಲಿನ ಕೂದಲನ್ನು ಗಂಟು ಕಟ್ಟಿಕೊಂಡಿದ್ದರು. ಅವರಿಬ್ಬರೂ ನೋಡಲು ಸನ್ಯಾಸಿಗಳೆಂದು ಗುರುತಿಸುವಷ್ಟರ ಮಟ್ಟಿಗೆ ಚರ್ಯೆ ಅವರಲ್ಲಿತ್ತು. ಅವರು ಆ ನದಿಯನ್ನು ದಾಟಿ ಮತ್ತೊಂದು ದಡಕ್ಕೆ ಹೋಗಬೇಕಾಗಿತ್ತು. ಯಾವುದೋ ವಿಷಯವನ್ನು ವಿಚಾರಿಸುತ್ತಾ ಅವರು ಅಲ್ಲಿ ನಿಂತಿದ್ದರು.

ಅದೇ ಸಮಯಕ್ಕೆ ಒಬ್ಬ ತರುಣಿ ಅಲ್ಲಿಗೆ ಬಂದಳು. ಅವಳು ನೋಡಲು ತುಂಬಾ ಸುಂದರವಾಗಿದ್ದಳು. ತೆಳ್ಳಗೆ ಬೆಳ್ಳಗಿದ್ದು ಬಹಳ ಆಕರ್ಷಕವಾಗಿದ್ದಳು. ಯಾರಾದರೂ ಅವಳನ್ನು ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವಷ್ಟು ಮೋಹಕತೆ ಅವಳಲ್ಲಿತ್ತು. ಅಂತಹ ನಿರ್ಜನ ಪ್ರದೇಶದಲ್ಲಿ ಇಬ್ಬರು ಸನ್ಯಾಸಿಗಳಿರುವೆಡೆಯಲ್ಲಿ ಆ ಸುಂದರ ತರುಣಿ ಅಲ್ಲಿ ಹಾಜರಾದಳು.

ಆ ಇಬ್ಬರು ಸನ್ಯಾಸಿಗಳ ಪೈಕಿ ಒಬ್ಬ ಸನ್ಯಾಸಿ ಅವಳನ್ನು ದಿಟ್ಟಿಸಿ ನೋಡತೊಡಗಿದ. ಮತ್ತೊಬ್ಬ ಸಾಮಾನ್ಯವೆಂಬಂತೆ ಅವಳತ್ತ ಒಮ್ಮೆ ನೋಡಿ ನಂತರ ಯಾವುದೋ ವಿಚಾರದಲ್ಲಿ ತಲ್ಲೀನನಾದ. ಹಾಗೆ ಒಬ್ಬ ಸನ್ಯಾಸಿಯು ಅವಳನ್ನು ಬಿಟ್ಟು ಬಿಡದೇ ನೋಡುತ್ತಿರುವುದು ಅವಳಿಗೆ ಇರಿಸು ಮುರಿಸು ಉಂಟಾದರೂ ಸಹಿಸಿಕೊಂಡು ತನ್ನದೇ ಆದ ಲೋಕದಲ್ಲಿ ಕುಳಿತಿದ್ದ ಇನ್ನೊಬ್ಬ ಸನ್ಯಾಸಿಯ ಹತ್ತಿರ ಬಂದು, ‘‘ಈ ದಡದಿಂದ ಆ ದಡಕ್ಕೆ ಹೋಗಲು ಈಗ ಇಲ್ಲಿಂದ ಯಾವುದೇ ನಾವೆ ಇಲ್ಲವೇ?’’ ಕೇಳಿದಳು. ಪ್ರಶ್ನಿಸುತ್ತಿರುವುದು ತನ್ನನ್ನೇ ಎಂದು ಮನವರಿಕೆಯಾದ ಮೇಲೆಯೇ ಅವನು ಒಮ್ಮೆ ಯೋಚಿಸಿ ‘‘ಇಲ್ಲಿಂದ ಯಾವುದೇ ಸೌಕರ್ಯ ಇಲ್ಲ. ಆಳ ಕಡಿಮೆಯಿರುವುದರಿಂದ ನೀರು ಎದೆಯ ಭಾಗದವರೆಗೂ ಮಾತ್ರ ಬರುತ್ತದೆ. ಹೀಗಾಗಿ ಇಲ್ಲಿಂದ ನೀರಲ್ಲಿ ನಡೆದುಕೊಂಡೇ ಹೋಗಬೇಕು’’ ಎಂದು ಸ್ಪಷ್ಟತೆಯಿಂದ ಹೇಳಿದ. ‘‘ಈಗ ನೀವು ಎಲ್ಲಿಗೆ ಹೊರಟಿದ್ದೀರಿ?’’ ಆ ಯುವತಿ ಮತ್ತೆ ಕೇಳಿದಳು. ‘‘ನಾವು ಆ ದಡಕ್ಕೆ ಹೋಗಬೇಕಾಗಿದೆ. ಆದರೆ ಬಹಳ ಹೊತ್ತು ನಡೆದು ಬಂದು ಆಯಾಸ ಆದುದರಿಂದ ದಣಿವಾರಿಸಿಕೊಳ್ಳಲೆಂದು ಇಲ್ಲಿ ಕುಳಿತಿದ್ದೇವೆ’’ ಹೇಳಿದ ಸನ್ಯಾಸಿ. ‘‘ನಾನು ಕೂಡಾ ಆ ದಡಕ್ಕೆ ಬರಬೇಕಾಗಿತ್ತು. ಆದರೆ ಈ ನದಿ ಹೇಗೆ ದಾಟಬೇಕೋ ಗೊತ್ತಾಗುತ್ತಿಲ್ಲ’’ ಅವಳು ತನ್ನಲ್ಲೇ ಗೊಣಗಿಕೊಂಡಳು. ಅವಳು ತನ್ನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಂಡಿದ್ದರಿಂದ ಅದು ತನಗೆ ಸಂಬಂಧಿಸಿದ್ದಲ್ಲವೆಂಬಂತೆ ಅವನು ಸುಮ್ಮನೇ ಕುಳಿತಿದ್ದ.ಅವನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಮತ್ತೆ ಅವಳೇ ಮಾತನಾಡಿಸಿದಳು. ‘‘ನೀವು ನದಿ ದಾಟುವಾಗ ನನಗೂ ಸಹಾಯ ಮಾಡಬಲ್ಲಿರಾ?’’ ‘‘ಸರಿ ಬನ್ನಿ’’ ಎಂದು ಎದ್ದು ನಿಂತ ಆ ಸನ್ಯಾಸಿ. ಮತ್ತೊಬ್ಬ ಯುವತಿಯು ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿರುವುದನ್ನು ತುಂಬಾ ಮತ್ಸರದಿಂದ ನೋಡುತ್ತಿದ್ದ. ಮೂವರೂ ಮೆಲ್ಲನೆ ನೀರೊಳಗಿಳಿದರು. ಸನ್ಯಾಸಿ ಅವಳ ಕೈ ಹಿಡಿದುಕೊಂಡ. ಸ್ವಲ್ಪ ದೂರ ನಡೆಯುತ್ತಲೇ ಅವಳು ಮುಂದೆ ಬರಲು ಹೆದರ ತೊಡಗಿದಳು. ಕೊನೆಗೆ ಅವಳ ಗೊಂದಲ ನೋಡಲಾಗದ ಸನ್ಯಾಸಿ ಅವಳನ್ನು ತನ್ನ ಹೆಗಲ ಮೇಲೆ ಕುಳಿತುಕೊಳ್ಳುವಂತೆ ಕೇಳಿದ. ಅವಳು ಮೊದಲು ನಿರಾಕರಿಸಿದರೂ ಬೇರೆ ಉಪಾಯ ಕಾಣದಾದಾಗ ಅವನ ಮೊಣಕಾಲ ಮೇಲೆ ಕಾಲಿಟ್ಟು ಭುಜದ ಮೇಲೆ ಹತ್ತಿ ಕುಳಿತಳು. ಮತ್ತೆ ಅವರ ಪ್ರಯಾಣ ಮುಂದುವರಿಯಿತು. ಅವಳ ಕೈ ಹಿಡಿಯುವುದು, ಹೆಗಲ ಮೇಲೆ ಕುಳ್ಳಿರಿಸಿಕೊಳ್ಳುವುದು ಅವನಿಗೆ ತಪ್ಪಿದ್ದಕ್ಕಾಗಿ ಮತ್ತೊಬ್ಬ ಸನ್ಯಾಸಿ ಅಸಹನೆಯಿಂದ ಕುದಿಯತೊಡಗಿದ.

ಸ್ವಲ್ಪ ಸಮಯಕ್ಕೆ ಆ ದಡ ಸೇರಿಕೊಂಡರು. ಅವಳನ್ನು ತನ್ನ ಭುಜದ ಮೇಲಿಂದ ಕೆಳಗಿಳಿಸಿದ. ಅವಳು ಅವನಿಗೆ ವಂದನೆ ಹೇಳಿ ತಾನು ಹೋಗಬೇಕಾದ ದಾರಿಯತ್ತ ಹೆಜ್ಜೆ ಹಾಕಿದಳು. ಸನ್ಯಾಸಿ ಕೂಡಾ ಗಂಭೀರನಾಗಿ ಮುಂದೆ ನಡೆಯತೊಡಗಿದ. ಆದರೆ ಇನ್ನೊಬ್ಬ ಸನ್ಯಾಸಿ ಅವಳನ್ನು ತಿಂದು ಬಿಡುವಂತೆ ನೋಡುವುದನ್ನು ಅವಳು ಕಣ್ಮರೆಯಾಗುವವರೆಗೂ ನಿಲ್ಲಿಸಿರಲಿಲ್ಲ. ಈಗ ಅವನು ಮಾತಿಗೆ ಇಳಿದ. ‘‘ಗೆಳೆಯಾ, ನಾವು ನಮ್ಮ ಆಚರಣೆಗೆ ವಿರುದ್ಧವಾಗಿ ನಡೆದುಕೊಂಡೇವೆನೋ ಎಂದೆನ್ನಿಸುತ್ತಿದೆ. ಎಷ್ಟಾದರೂ ನಾವು ಸನ್ಯಾಸಿಗಳು. ನಾವು ಸನ್ಯಾಸಿಗಳು ಎಂಬುದನ್ನು ಮರೆತು ನೀನು ಆ ಯುವತಿಯ ಕೈ ಹಿಡಿದುಕೊಂಡೆ. ಅವಳನ್ನು ಭುಜದ ಮೇಲೆ ಕುಳ್ಳಿರಿಸಿಕೊಂಡೆ. ಇದು ತಪ್ಪು ಎಂದೆನ್ನಿಸಲಿಲ್ಲವೇ?’’. ಗಂಭೀರ ವದನದ ಸನ್ಯಾಸಿ ಉತ್ತರಿಸಿದ. ‘‘ನಿಜ ಗೆಳೆಯಾ, ನಾವು ಸನ್ಯಾಸಿಗಳು. ಆದರೆ ನಮ್ಮಿಂದ ಸಹಾಯ ಪಡೆದ ಒಬ್ಬ ಮಹಿಳೆ ಅಸಹಾಯಕ ಸ್ಥಿತಿಯಲ್ಲಿದ್ದವಳು. ಅಂತಹ ಸ್ಥಿತಿಯಲ್ಲಿದ್ದವರಿಗೆ ಸಹಾಯ ಮಾಡಬೇಕಾಗಿರುವುದು ಮಾನವೀಯ ಧರ್ಮ. ಹಾಗಾಗಿ ನಾನು ಅವಳ ಕೈ ಹಿಡಿದುಕೊಳ್ಳಬೇಕಾಯಿತು. ಆ ದಡದಿಂದ ಅವಳನ್ನು ಹೊತ್ತುಕೊಂಡು ಬಂದು ಈ ದಡಕ್ಕೆ ಬರುತ್ತಲೇ ನಾನು ಇಳಿಸಿ ಬಿಟ್ಟೆ. ಆದರೆ ನೀನು ಅವಳನ್ನು ಆ ದಡದಲ್ಲಿಯೇ ಹೊತ್ತುಕೊಂಡು ಬಿಟ್ಟಿದ್ದೆ. ಈ ದಡಕ್ಕೆ ಬಂದರೂ ಇನ್ನೂ ಇಳಿಸಲಿಲ್ಲ. ಹೋಗಲಿ, ಅವಳು ಕಣ್ಮರೆಯಾಗಿದ್ದಾಳೆಂದುಕೊಂಡರೂ ಅವಳ ಬಗ್ಗೆ ಯೋಚಿಸುವುದನ್ನು ನೀನು ಬಿಡಲಿಲ್ಲ. ನಾನು ದೈಹಿಕವಾಗಿ ಅವಳನ್ನು ಹೊತ್ತುಕೊಂಡಿದ್ದೆ. ನೀನು ಮಾನಸಿಕವಾಗಿ ಹೊತ್ತುಕೊಂಡಿದ್ದಿಯಾ. ಮೊದಲು ನೀನು ಅವಳನ್ನು ನಿನ್ನ ಮನಸ್ಸಿನಿಂದ ಕೆಳಗಿಳಿಸು. ಆಮೇಲೆ ನಮ್ಮ ಆಚರಣೆಯ ಬಗ್ಗೆ ವಿಚಾರಿಸೋಣ’’.

ಗಂಭೀರ ಸನ್ಯಾಸಿಯ ಮಾತಿನಿಂದ ಮತ್ತೊಬ್ಬ ತಲೆ ತಗ್ಗಿಸಿದ. ಮರಳಿ ತನ್ನ ಸ್ನೇಹಿತನತ್ತ ನೋಡುವ ಪ್ರಯತ್ನ ಮಾಡಲಿಲ್ಲ.

Writer - ಬೋಜರಾಜ ಸೊಪ್ಪಿಮಠ

contributor

Editor - ಬೋಜರಾಜ ಸೊಪ್ಪಿಮಠ

contributor

Similar News