ಹುಬ್ಬಳ್ಳಿ-ಚೆನ್ನೈ ವಿಶೇಷ ರೈಲಿಗೆ ಶೀಘ್ರ ಹಸಿರು ನಿಶಾನೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2019-09-08 14:43 GMT

ಹುಬ್ಬಳ್ಳಿ, ಸೆ.8 : ನೈಋತ್ಯ ರೈಲ್ವೆ ಹುಬ್ಬಳ್ಳಿ-ಚೆನ್ನೈ ನಡುವೆ ವಿಶೇಷ ರೈಲು ಸೇವೆ ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಸೆ. 14 ಅಥವ 15ರಂದು ಹುಬ್ಬಳ್ಳಿಯಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗುತ್ತದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಚೆನ್ನೈ ನಡುವೆ ವಾರದಲ್ಲಿ ಒಂದು ದಿನ ವಿಶೇಷ ರೈಲನ್ನು ಓಡಿಸಲು ನೈಋತ್ಯ ರೈಲ್ವೆ ಪ್ರಸ್ತಾವನೆ ಸಿದ್ಧಪಡಿಸಿಕೊಂಡಿತ್ತು. ಇಲಾಖೆಯ ಒಪ್ಪಿಗೆ ಮಾತ್ರ ಸಿಕ್ಕಿರಲಿಲ್ಲ. ಈಗ ಬೆಳಗಾವಿ ಸಂಸದ ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾದ ಬಳಿಕ ರೈಲು ಸಂಚಾರಕ್ಕೆ ಅನುಮೋದನೆ ಸಿಕ್ಕಿದೆ ಎಂದರು.

ಈ ವಿಶೇಷ ರೈಲು ಹುಬ್ಬಳ್ಳಿಯಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಗುಂತಕಲ್ ಮಾರ್ಗದ ಮೂಲಕ ಚೆನ್ನೈ ತಲುಪಲಿದೆ. ಈ ಮಾರ್ಗದ ಮೂಲಕ ಚೆನ್ನೈ ತಲುಪಲು ಸುಮಾರು 710 ಕಿ. ಮೀ. ದೂರವಾಗಲಿದೆ. ಇದರಿಂದ 125 ಕಿ.ಮೀ. ಪ್ರಯಾಣದ ಅವಧಿ ಸಹ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಈಗ ಪ್ರತಿ ಗುರುವಾರ ವಾಸ್ಕೋ-ಚೆನ್ನೈ ಮತ್ತು ಶನಿವಾರ ಹುಬ್ಬಳ್ಳಿ-ಚೆನ್ನೈ ನಡುವೆ ರೈಲು ಸಂಚಾರ ನಡೆಸುತ್ತಿದೆ. ಈ ರೈಲು ದಾವಣಗೆರೆ, ಅರಸೀಕೆರೆ, ತುಮಕೂರು, ಯಶವಂತಪುರ, ಬಂಗಾರಪೇಟೆ ಮಾರ್ಗದ ಮೂಲಕ 835 ಕಿಮೀ ದೂರ ಕ್ರಮಿಸಿ ಚೆನ್ನೈ ತಲುಪಲಿದೆ. ಹೀಗಾಗಿ ಪ್ರಯಾಣಿಕರು ವಿಶೇಷ ರೈಲಿಗೆ ಬೇಡಿಕೆ ಸಲ್ಲಿಸಿದ್ದರು. ಇದಕ್ಕೆ ಕೇಂದ್ರದಿಂದ ಹಸಿರು ನಿಶಾನೆ ಸಿಕ್ಕಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News