ಕೊಡಗಿನಲ್ಲಿ ಮುಂದುವರಿದ ಮಳೆ: ಭಾಗಮಂಡಲದಲ್ಲಿ ರಸ್ತೆಗಳು ಜಲಾವೃತ

Update: 2019-09-09 17:26 GMT

ಮಡಿಕೇರಿ, ಸೆ.9: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಸುರಿದ ಭಾರೀ ಮಳೆಗೆ ತ್ರಿವೇಣಿ ಸಂಗಮ ಉಕ್ಕಿ ಹರಿದಿದೆ. ನಾಪೋಕ್ಲು ರಸ್ತೆ ಮುಳುಗಡೆಯಾಗಿ ಗ್ರಾಮೀಣರು ಹಾಗೂ ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಿದರು.

ತಲಕಾವೇರಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಸೋಮವಾರ ಬೆಳಗ್ಗೆ ಭಾಗಮಂಡಲದ ತ್ರಿವೇಣಿ ಸಂಗಮ ಉಕ್ಕಿ ಹರಿಯಿತು. ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಅಯ್ಯಂಗೇರಿ ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿತ್ತು. ತಕ್ಷಣ ಜಿಲ್ಲಾಡಳಿತ ಪರಿಸ್ಥಿತಿಗಳಿಗೆ ಸ್ಪಂದಿಸಿ ಗ್ರಾಮೀಣರ ಸಂಚಾರಕ್ಕೆ ಅನುಕೂಲವಾಗುವಂತೆ  ‘ಬೋಟ್’ ವ್ಯವಸ್ಥೆಯನ್ನು ಕಲ್ಪಿಸಿದೆ. ಪ್ರವಾಹದಿಂದ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಸ್ಥಳದಲ್ಲಿ  ಅಗ್ನಿಶಾಮಕ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ. 

ಹವಾಮಾನ ಮುನ್ಸೂಚನೆಯಂತೆ ಈ ಭಾಗಗಳಲ್ಲಿ ಇಂದಿನಿಂದ ಮಳೆ ಕಡಿಮೆಯಾಗುವ ನಿರೀಕ್ಷೆ ಇದ್ದು, ಸಾರ್ವಜನಿಕರು ಮತ್ತು ಸ್ಥಳೀಯ ನಿವಾಸಿಗಳು ಯಾವುದೇ ಭಯ, ಆತಂಕ ಪಡುವ ಅಗತ್ಯ ಇಲ್ಲವೆಂದು ಜಿಲ್ಲಾಡಳಿತ ತಿಳಿಸಿದೆ.

ಕಾವೇರಿ ನದಿ ಪಾತ್ರದ ನಾಪೋಕ್ಲುವಿನಲ್ಲಿ ಕಳೆದ ಒಂದು ದಿನದ ಅವಧಿಯಲ್ಲಿ 4 ಇಂಚು ಮಳೆ ದಾಖಲಾಗಿದ್ದರೆ, ಮೂರ್ನಾಡು ಬಲಮುರಿ, ಸಿದ್ದಾಪುರ ವಿಭಾಗದಲ್ಲಿ ಸಾಧಾರಣ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ವೀರಾಜಪೇಟೆ ತಾಲೂಕಿನ ಹುದಿಕೇರಿ, ಬಾಳೆಲೆ, ಶ್ರೀಮಂಗಲ ವಿಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನಜೀವನ ಇನ್ನೂ ಕೂಡ ಯಥಾಸ್ಥಿತಿಗೆ ಮರಳಿಲ್ಲ. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಮಡಿಕೇರಿಯಲ್ಲಿ ಮಳೆ ಕಡಿಮೆಯಾಗಿದೆಯಾದರೂ ಗಾಳಿ ಮತ್ತು ಚಳಿಯ ವಾತಾವರಣ ಮುಂದುವರೆದಿದೆ.

ಪರಿಹಾರ ಪೂರ್ಣ
ಕೊಡಗು ಜಿಲ್ಲೆಯಲ್ಲಿ 2019-20 ನೇ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಶೇ.15 ರಿಂದ 25 ರಷ್ಟು ಹಾನಿಗೊಳಗಾದ ಮೂರು ತಾಲೂಕಿನ 1032 ಮನೆಗಳ ಸಂತ್ರಸ್ಥ ಕುಟುಂಗಳಿಗೆ ಸರ್ಕಾರದ ಆದೇಶದಂತೆ 25 ಸಾವಿರ ರೂ.ಗಳು ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಹಾನಿಗೊಳಗಾದ 30 ಗುಡಿಸಲುಗಳ ಬಾಬ್ತು ಸಂಬಂಧಪಟ್ಟ ಸಂತ್ರಸ್ಥ ಕುಟುಂಗಳಿಗೆ ಪ್ರಕೃತಿ ವಿಕೋಪ ಮಾರ್ಗಸೂಚಿಯಂತೆ ನಾಲ್ಕು ಸಾವಿರದ ನೂರು ರೂ.ಗಳ ಪರಿಹಾರದ ಚೆಕ್ ಗಳನ್ನು ವಿತರಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೊಡಗು ಜಿಲ್ಲೆಯ ಮಳೆ ವಿವರ
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 48.22 ಮಿ.ಮೀ. ಕಳೆದ ವರ್ಷ ಇದೇ ದಿನ 1.16 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2562.14 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3788.51 ಮಿ.ಮೀ ಮಳೆಯಾಗಿತ್ತು.                             

ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 66.05 ಮಿ.ಮೀ. ಕಳೆದ ವರ್ಷ ಇದೇ ದಿನ 2.21 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3412.67 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 5483.54 ಮಿ.ಮೀ. ಮಳೆಯಾಗಿತ್ತು.    
ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 46.28 ಮಿ.ಮೀ. ಕಳೆದ ವರ್ಷ ಇದೇ ದಿನ 1 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2531.52 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2862.98 ಮಿ.ಮೀ. ಮಳೆಯಾಗಿತ್ತು.   
ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 32.33 ಮಿ.ಮೀ. ಕಳೆದ ವರ್ಷ ಇದೇ ದಿನ 0.27 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1742.24 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 3019.01 ಮಿ.ಮೀ. ಮಳೆಯಾಗಿತ್ತು.   

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 28, ನಾಪೋಕ್ಲು 92.60, ಸಂಪಾಜೆ 95, ಭಾಗಮಂಡಲ 48.60, ವಿರಾಜಪೇಟೆ ಕಸಬಾ 33, ಹುದಿಕೇರಿ 35, ಶ್ರೀಮಂಗಲ 71.20, ಪೊನ್ನಂಪೇಟೆ 54, ಅಮ್ಮತ್ತಿ 34.50, ಬಾಳೆಲೆ 50, ಸೋಮವಾರಪೇಟೆ ಕಸಬಾ 30.60, ಶನಿವಾರಸಂತೆ 25.40, ಶಾಂತಳ್ಳಿ 98.20, ಕೊಡ್ಲಿಪೇಟೆ 17, ಕುಶಾಲನಗರ 7.60, ಸುಂಟಿಕೊಪ್ಪ 15.20 ಮಿ.ಮೀ. ಮಳೆಯಾಗಿದೆ.        

ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.96 ಅಡಿಗಳು, ಕಳೆದ ವರ್ಷ ಇದೇ ದಿನ 2855.83 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 12.20 ಮಿ.ಮೀ., ಇಂದಿನ ನೀರಿನ ಒಳಹರಿವು 8170 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 2230 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 5874 ಕ್ಯುಸೆಕ್. ನಾಲೆಗೆ 1000 ಕ್ಯುಸೆಕ್. ಕಳೆದ ವರ್ಷ ಇದೇ ಅವಧಿಯಲ್ಲಿ ನದಿಗೆ 0, ನಾಲೆಗೆ 1675 ಕ್ಯುಸೆಕ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News