ಮಳೆ ಹಾನಿ: ಪರಿಹಾರ ಕೋರಿ ಶಿವಮೊಗ್ಗದಲ್ಲಿ 10 ಸಾವಿರಕ್ಕೂ ಅಧಿಕ ರೈತರಿಂದ ಅರ್ಜಿ ಸಲ್ಲಿಕೆ

Update: 2019-09-09 18:12 GMT
ಫೈಲ್ ಚಿತ್ರ

ಶಿವಮೊಗ್ಗ, ಸೆ. 9: ಇತ್ತೀಚೆಗೆ ಜಿಲ್ಲೆಯಲ್ಲಿ ಬಿದ್ದ ಧಾರಾಕಾರ ಮಳೆ ಹಾಗೂ ನೆರೆ ಸ್ಥಿತಿಯಿಂದ ಪರಿಹಾರ ಕೋರಿ 10 ಸಾವಿರಕ್ಕೂ ಅಧಿಕ ರೈತರು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಪರಿಹಾರ ಹಾಗೂ ದುರಸ್ತಿ ಕಾರ್ಯಕ್ಕೆ, ರಾಜ್ಯ ಸರ್ಕಾರವು ಜಿಲ್ಲಾಡಳಿತಕ್ಕೆ 25 ಕೋಟಿ ರೂ. ಬಿಡುಗಡೆ ಮಾಡಿದೆ. 

ಒಟ್ಟಾರೆ ಇಲ್ಲಿಯವರೆಗೂ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಅನಾಹುತಗಳಲ್ಲಿ 13 ಜನರು ಹಾಗೂ 41 ಜಾನುವಾರುಗಳು ಮೃತಪಟ್ಟಿವೆ. 12 ಸಾವಿರ ಹೆಕ್ಟೇರ್ ಕೃಷಿ ಭೂಮಿ ಹಾಗೂ 5000 ಹೆಕ್ಟೇರ್ ತೋಟಗಾರಿಕಾ ಬೆಳೆಗೆ ಧಕ್ಕೆಯಾಗಿದೆ. 3500 ಮನೆಗಳಿಗೆ ಹಾನಿಯಾಗಿದೆ. ಉಳಿದಂತೆ ಭಾರೀ ಪ್ರಮಾಣದ ರಸ್ತೆ, ಸೇತುವೆ ಸಾರ್ವಜನಿಕ ಕಟ್ಟಡಗಳಿಗೆ ಧಕ್ಕೆಯಾಗಿದೆ. 

'ಮಳೆ ಸಂಬಂಧಿತ ಅನಾಹುತಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ, ನಿಯಮಾನುಸಾರ ಪರಿಹಾರದ ಧನದ ಚೆಕ್‍ಗಳನ್ನು ಜಿಲ್ಲಾಡಳಿತ ವಿತರಿಸಿದೆ. ಪ್ರಸ್ತುತ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ' ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. 

ಮನೆಗಳಿಗೆ ಆಗಿರುವ ಹಾನಿಯ ಕುರಿತಂತೆ ಸೆ.12 ರೊಳಗೆ ಮಾಹಿತಿ ದಾಖಲಿಸುವ ಕಾರ್ಯ ಪೂರ್ಣಗೊಳಿಸಲಾಗುವುದು. ಮನೆಗಳಿಗಾದ ಹಾನಿಯ ಆಧಾರದ ಮೇಲೆ ಮೂರು ರೀತಿಯಲ್ಲಿ ಪರಿಹಾರ ವಿತರಿಸಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ ನೆರೆ ಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಯಾವುದೇ ನೆರೆ ಪರಿಹಾರ ಕೇಂದ್ರಗಳು ಕಾರ್ಯನಿರ್ವಹಸುತ್ತಿಲ್ಲ. ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಸೌಲಭ್ಯ ಕಲ್ಪಿಸುವ ಕಾರ್ಯ ನಡೆಸಲಾಗಿದೆ. ಬೆಳೆ ನಷ್ಟದ ತಪಾಸಣಾ ಕಾರ್ಯ ನಡೆಯುತ್ತಿದೆ. ಪರಿಹಾರ ಕಾರ್ಯಕ್ಕೆ ಅನುದಾನದ ಕೊರತೆಯಿಲ್ಲ. ಈಗಾಗಲೇ 5 ಕೋಟಿ ರೂ.ಗಳನ್ನು ಪರಿಹಾರ ಹಾಗೂ 8 ಕೋಟಿ ರೂ. ದುರಸ್ತಿ ಕಾರ್ಯಗಳಿಗೆ ಬಿಡುಗಡೆಗೊಳಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ. 

'ನೆರೆಯಿಂದ ಮನೆ, ಕಟ್ಟಡಗಳಿಗೆ ನೀರು ನುಗ್ಗಿ ತೊಂದರೆಗೊಳಗಾದ 6400 ಜನರಿಗೆ ತಲಾ 10 ಸಾವಿರ ರೂ. ಮಂಜೂರುಗೊಳಿಸಲಾಗಿದೆ. ಇದರಲ್ಲಿ 5701 ಜನರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಕೂಡ ಆಗಿದೆ. ಸುಮಾರು 500 ಜನರ ಬ್ಯಾಂಕ್ ಖಾತೆ ಸರಿಯಿಲ್ಲದ ಕಾರಣದಿಂದ, ಹಣ ಸಂದಾಯವಾಗಿಲ್ಲ. ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ' ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ

ತಗ್ಗಿದ ಮಳೆ: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಬೀಳುತ್ತಿದ್ದ ಮಳೆಯ ಪ್ರಮಾಣ ಸೋಮವಾರ ಕಡಿಮೆಯಾಗಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಇಳಿಕೆ ಕಂಡುಬಂದಿದೆ. ಉಳಿದಂತೆ ಸೋಮವಾರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ತೀರ್ಥಹಳ್ಳಿಯಲ್ಲಿ ಅತ್ಯದಿಕ 65.20 ಮಿಲಿ ಮೀಟರ್ ಮಳೆಯಾಗಿದೆ. 

ಉಳಿದಂತೆ ಶಿವಮೊಗ್ಗದಲ್ಲಿ 5.80 ಮಿ.ಮೀ., ಭದ್ರಾವತಿ 31.00 ಮಿ.ಮೀ., ತೀರ್ಥಹಳ್ಳಿ 65.20 ಮಿ.ಮೀ., ಸಾಗರ 15.80 ಮಿ.ಮೀ., ಶಿಕಾರಿಪುರ 5.00 ಮಿ.ಮೀ., ಸೊರಬ 5.20 ಮಿ.ಮೀ. ಹಾಗೂ ಹೊಸನಗರ 46.60 ಮಿ.ಮೀ. ಮಳೆಯಾಗಿದೆ. 

25 ಕೋಟಿ ರೂ. ಬಿಡುಗಡೆ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್
ಜಿಲ್ಲೆಯಲ್ಲಿ ಉಂಟಾದ ನೆರೆ ಪರಿಸ್ಥಿತಿ ಹಾಗೂ ಮಳೆ ಸಂಬಂಧಿತ ಅನಾಹುತಗಳ ಪರಿಹಾರ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಜಿಲ್ಲಾಡಳಿತಕ್ಕೆ 25 ಕೋಟಿ ರೂ. ಬಿಡುಗಡೆಯಾಗಿದೆ. ಪರಿಹಾರ ಕಾರ್ಯಕ್ಕೆ 5 ಕೋಟಿ ರೂ., ದುರಸ್ತಿ ಕಾರ್ಯಕ್ಕೆಂದು 8 ಕೋಟಿ ರೂ. ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಹಾರ ಧನ ಬಿಡುಗಡೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಚ್ಚರ ವಹಿಸುವಂತೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆಗಳಿಗೆ ಹಾನಿಯಾದ ಪ್ರಕರಣಗಳಲ್ಲಿ, ಪೂರ್ಣ ಪ್ರಮಾಣದಲ್ಲಿ ಬಿದ್ದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಉಳಿದಂತೆ ಮನೆಗಳಿಗೆ ಹಾನಿಯಾದ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ಬಿಡುಗಡೆಗೊಳಿಸಲಾಗುವುದು' ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ. 

ಗುಂಡಿ ಮುಚ್ಚಲು ಕ್ರಮ: ಉಪ ಮೇಯರ್ ಚೆನ್ನಬಸಪ್ಪ
ಶಿವಮೊಗ್ಗ ನಗರದಲ್ಲಿ ಮಳೆಯಿಂದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿ-ಗೊಟರುಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯೂ ನಗರದ ಹಲವು ರಸ್ತೆಗಳ ಮೇಲ್ದರ್ಜೆಗೇರಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ದುರಸ್ತಿಗೊಳಗಾದ ರಸ್ತೆಗಳ ಅಭಿವೃದ್ದಿಗೆ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ. ಇನ್ನೂ ಕೆಲ ತಿಂಗಳಲ್ಲಿಯೇ ನಗರದ ರಸ್ತೆಗಳ ಸ್ಥಿತಿಗತಿ ಸಂಪೂರ್ಣ ಬದಲಾಗಲಿದೆ' ಎಂದು ಮಹಾನಗರ ಪಾಲಿಕೆ ಉಪ ಮೇಯರ್ ಚೆನ್ನಬಸಪ್ಪರವರು ತಿಳಿಸಿದ್ದಾರೆ. 

ಒಂದು ತಿಂಗಳಾದರೂ ಲಭ್ಯವಾಗದ ಇಬ್ಬರ ಸುಳಿವು!
ಚೋರಡಿ ಸಮೀಪದ ಕುಮದ್ವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಸುಳಿವು, ಘಟನೆ ನಡೆದು ಒಂದು ತಿಂಗಳಾಗುತ್ತಾ ಬಂದರೂ ಇಲ್ಲಿಯವರೆಗೂ ಲಭ್ಯವಾಗಿಲ್ಲ. ಕಳೆದ ಆಗಸ್ಟ್ 10 ರಂದು ತುಂಬಿ ಹರಿಯುತ್ತಿದ್ದ ಕುಮದ್ವತಿ ನದಿ ನೀರಿನ ಹರಿವನ್ನು ಸೇತುವೆ ಮೇಲಿಂದ ಸಾರ್ವಜನಿಕರು ವೀಕ್ಷಿಸುತ್ತಿದ್ದ ವೇಳೆ, ಸರಕು ಸಾಗಾಣೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಈ ವೇಳೆ ಕುಂಸಿಯ ಅಮರನಾಥ್, ನಾಗರಾಜ್, ಸನ್ನಿವಾಸ ಗ್ರಾಮದ ಹರೀಶ್, ರಾಮಪ್ಪ ಎಂಬುವರು ನದಿಗೆ ಬಿದ್ದಿದ್ದರು. ಸ್ಥಳದಲ್ಲಿದ್ದ ನಾಗರಿಕರು ನಾಗರಾಜ್ ಎಂಬುವರನ್ನು ರಕ್ಷಿಸಿದ್ದರು. 

ಆದರೆ ಉಳಿದ ಮೂವರು ನದಿಯಲ್ಲಿ ಕೊಚ್ಚಿ ಹೋಗಿದ್ದರು. ಮರು ದಿನ ರಾಮಪ್ಪರವರ ಶವವು ಸಮೀಪದ ಜಮೀನೊಂದರ ತಂತಿ ಬೇಲಿಯ ಬಳಿ ಪತ್ತೆಯಾಗಿತ್ತು. ಉಳಿದಿಬ್ಬರ ಶೋಧಕ್ಕಾಗಿ ಜಿಲ್ಲಾಡಳಿತ ಸತತ ಕಾರ್ಯಾಚರಣೆ ನಡೆಸಿತ್ತು. ಎನ್.ಡಿ.ಆರ್.ಎಫ್. ತಂಡದ ಮೂಲಕವೂ ಶೋಧ ನಡೆಸಿತ್ತು. ಹಲವು ದಿನಗಳ ಶೋಧದ ನಡುವೆಯೂ ಇಬ್ಬರ ಸುಳಿವು ಪತ್ತೆಯಾಗಿಲ್ಲ.

Writer - ವರದಿ: ಬಿ. ರೇಣುಕೇಶ್

contributor

Editor - ವರದಿ: ಬಿ. ರೇಣುಕೇಶ್

contributor

Similar News