ಬೇಕು, ನಿಜ ಸಂಘಟಕರು

Update: 2019-09-09 18:31 GMT

ಅತ್ತ ಕಾಡಿನೊಳಗಿನ ಆತ್ಮವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಂತಹ, ಇತ್ತ ನಾಡಿನ ಭಾಷೆಯನ್ನು ಇನ್ನೂ ಕಲಿಯದಂತಹ ಬುಡಕಟ್ಟು ಜನರು ನಾಡ ಭಾಷೆಯಲ್ಲಿ, ನಾಡ ಕಾನೂನಿಗನ್ವಯವಾಗುವಂತೆ ಮಾತನಾಡಿ ತಮ್ಮ ಕುರುಹುಗಳನ್ನು ದಾಖಲಿಸಬೇಕೆಂದರೆ ನಾಡಿನವರೇ ಅವರಿಗೆ ಸಹಾಯ ಮಾಡದ ಹೊರತು ಸಾಧ್ಯವಿಲ್ಲ. ಅವರ ಪರಂಪರಾಗತ ಸಂಸ್ಕೃತಿಯನ್ನು ಗೌರವಿಸುವಂತಹ, ಅವರ ಭೂಮಿ ಹಕ್ಕನ್ನು ಕೊಡಿಸಲು ಬದ್ಧರಾಗಿರುವಂತಹ ಸಂಘಟಕರು ಬೇಕಾಗಿದ್ದಾರೆ.

ಅರಣ್ಯದೊಳಗೆ ತಮ್ಮ ಬದುಕನ್ನು ರಚಿಸಿಕೊಂಡಿದ್ದ ಬುಡಕಟ್ಟು, ಆದಿವಾಸಿ, ಮೂಲ ನಿವಾಸಿಗಳಿಗೆ ನೂರಾರು ವರ್ಷಗಳಿಂದ ನಾಗರಿಕ ಸಮಾಜವು ಮಾಡಿದ ಅನ್ಯಾಯವನ್ನು ಸರಿಪಡಿಸುವ ಉದ್ದೇಶವಿಟ್ಟುಕೊಂಡು ಅರಣ್ಯ ಹಕ್ಕು ಕಾನೂನನ್ನು ರಚಿಸಲಾಯಿತು. ತಮ್ಮ ಮೂಲ ಆವಾಸ ಸ್ಥಾನವನ್ನು ಕಳೆದುಕೊಂಡ ಗಿರಿಜನರಿಗೆ ಅವು ಪುನಃ ದೊರಕಬೇಕು ಎಂದು ಬಹುದಿನಗಳಿಂದ ಮಾಡುತ್ತಿದ್ದ ಹೋರಾಟದ ಫಲವಿದು. ಈ ಕಾನೂನಿನ ಹಿಂದೆ ಲಕ್ಷಾಂತರ ಅರಣ್ಯವಾಸಿಗಳ ಮತ್ತು ಅವರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟಕರ ಅವಿರತ ಪರಿಶ್ರಮವಿತ್ತು. ವರ್ಷಾಂತರಗಳಿಂದ ಮುಂದಕ್ಕೆ ತಳ್ಳಲ್ಪಡುತ್ತಿದ್ದ ಮಸೂದೆ ಮಂಡನೆಯಾಗಲೇಬೇಕೆಂದು 2006ರಲ್ಲಿ 15,000 ಆದಿವಾಸಿಗಳು ಪಾರ್ಲಿಮೆಂಟ್ ಮುಂದೆ ಧರಣಿ ಕುಳಿತಿದ್ದಾಗ ಅದು ಮಂಡನೆಯಾಗಿ ಪಾಸಾಯಿತು.
ಬುಡಕಟ್ಟು ಜನರು ತಮ್ಮ ವನವಾಸವನ್ನು ಕಳೆದುಕೊಳ್ಳುವುದಕ್ಕೂ, ಅದನ್ನು ಮರಳಿ ಪಡೆಯುವುದಕ್ಕೂ ದೊಡ್ಡ ಇತಿಹಾಸವೇ ಇದೆ. ಭಾರತದ ಅಪಾರವಾದ ವನ್ಯ ಸಂಪತ್ತು ಬ್ರಿಟಿಷರ ಕಣ್ಣು ಕುಕ್ಕಿತ್ತು. ಬೇಕಾದಷ್ಟು ಪ್ರಮಾಣದಲ್ಲಿ ಮರಮಟ್ಟುಗಳನ್ನು ದೋಚಿದ ಅಂದಿನ ಆ ನಾಡಪ್ರಭುಗಳು ಇನ್ನುಳಿದುದನ್ನೂ ದೋಚಲಿಕ್ಕಾಗಿ ಇಲಾಖೆಯೊಂದನ್ನು ಸೃಷ್ಟಿಸಿ, ತಮಗೆ ಗುಲಾಮರಂತೆ ದುಡಿಯಬಲ್ಲ ಕೆಲವರನ್ನು ಮಾತ್ರ ಅರಣ್ಯದೊಳಗೆ ಇರಲು ಬಿಟ್ಟು ಉಳಿದವರನ್ನು ಕಾಡುಗಳ್ಳರೆಂದು ಹೆಸರಿಸುವ ಕಾಯ್ದೆಗಳನ್ನು ರಚಿಸಿತು. ಆದರೀ ಜನಾಂಗಕ್ಕೆ ವನವೇ ಮನೆ, ಜೀವನ ಎಲ್ಲ. ಹೊರ ಹಾಕಿದರೂ ಕಾಡಿನೊಳಗೆ ಹೋಗಿ ತಮ್ಮ ದೇವಸ್ಥಾನಕ್ಕೆ, ಹಿರಿಯರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ಬರುತ್ತಿದ್ದ, ಕಟ್ಟಿಗೆ ಪುರಲೆಗಳನ್ನು ಆರಿಸಿ ತರುತ್ತಿದ್ದ ಜನರನ್ನು ಸ್ವಾತಂತ್ರ್ಯಾನಂತರ ಇನ್ನಷ್ಟು ಬಿಗಿ ನಿಯಮಗಳಿಂದ ಒಳ ಬಾರದಂತೆ ಇಲಾಖೆಯು ತಡೆಯಿತು. ‘ಅರಣ್ಯ ಸಂರಕ್ಷಣಾ ಕಾಯ್ದೆ’, ‘ವನ್ಯ ಜೀವಿ ಕಾಯ್ದೆಗಳು’ ಬುಡಕಟ್ಟು ಜನರನ್ನು ಮನುಷ್ಯರಾಗಿರುವ ಒಂದೇ ಕಾರಣಕ್ಕೆ ಸರಿಯಾದ ಪರಿಹಾರವನ್ನೂ ಕೊಡದೆ ಕಾಡಿನಿಂದ ಹೊರಹಾಕಿತು.
ಅಂದಿನಿಂದಲೂ ಬುಡಕಟ್ಟು ಜನರ ಅರಣ್ಯದ ಹಕ್ಕಿಗಾಗಿ ಹೋರಾಟ ನಡೆದೇ ಇತ್ತು. 2006ರ ಕಾನೂನಿನ ಬೆಂಬಲ ಬಂದಾಗ ಆದಿವಾಸಿಗಳು ತಾವು ಮೊದಲು ಕಾಡ ಒಳಗಡೆಯೇ ಇದ್ದುದೆಂದು ತಮಗೆ ತಮ್ಮ ಆವಾಸ ಸ್ಥಾನಗಳಿಗೆ ಪುನಃ ಮರಳಲು ಅವಕಾಶ ಕೊಡಬೇಕೆಂದು ಹಕ್ಕು ಪತ್ರಗಳಿಗೆ ದೇಶಾದ್ಯಂತ ಅರ್ಜಿಗಳನ್ನು ಹಾಕಿದರು. ಕರ್ನಾಟಕದಲ್ಲಿಯೇ ಸುಮಾರು 3 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾದವು. ಆದರೆ ಅವುಗಳಲ್ಲಿ ಒಂದೂ ಮುಕ್ಕಾಲು ಲಕ್ಷದಷ್ಟು ಅರ್ಜಿಗಳು ತಿರಸ್ಕೃತವಾದವು. ಈ ಜನರು ಒಳನುಗ್ಗಿಬಿಟ್ಟರೆ ಕಾಡೆಲ್ಲ ಸರ್ವನಾಶವಾಗಿ ಹೋಗುತ್ತದೆಂದು ಕೆಲವು ಹಳೆಯ ಅರಣ್ಯಾಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ದಾವೆ ಹಾಕಿದ್ದು, ಅದಕ್ಕೆ ಇತ್ತೀಚೆಗೆ ಸುಪ್ರೀಂ ಕೋರ್ಟು ತೀರ್ಪಿತ್ತಿದ್ದುದು ಇತಿಹಾಸದ ಇನ್ನೊಂದು ಪುಟ. ಅರ್ಜಿ ತಿರಸ್ಕೃತವಾದ ಎಲ್ಲಾ ಬುಡಕಟ್ಟು ಜನರನ್ನೂ ಅರಣ್ಯದಿಂದ ಹೊರ ಹಾಕಬೇಕೆಂದು ಬರೆದ ಅತ್ಯುಚ್ಚ ನ್ಯಾಯಾಲಯದ ಆದೇಶ ದೇಶಾದ್ಯಂತ 11 ಲಕ್ಷ ಆದಿವಾಸಿಗಳನ್ನು ಕಾಡಿನಿಂದಾಚೆ ನೂಕುವ ಪರಿಣಾಮವನ್ನು ಹೊಂದಿದೆ.
ಬುಡಕಟ್ಟು ಜನರಿಗೆ ಮತ್ತು ಅವರ ಹಕ್ಕುಗಳಿಗಾಗಿ ಬಡಿದಾಡುತ್ತಿರುವ ಸಂಘಟಕರಿಗೆ ದೊಡ್ಡದೊಂದು ಆಘಾತವುಂಟುಮಾಡಿದ ತೀರ್ಪಿದು. ಯಾಕೆಂದರೆ ಬಹುತೇಕ ಅರ್ಜಿಗಳು ತಿರಸ್ಕೃತವಾಗಿರುವುದಕ್ಕೆ ಕಾರಣ ಸರಕಾರ ಅವರ ಅರ್ಜಿಗಳ ಸರಿಯಾದ ವಿಲೇವಾರಿ ಮಾಡಿಲ್ಲವೆಂಬುದೇ ಆಗಿದೆ ಹೊರತು ಆದಿವಾಸಿಗಳ ಬೇಡಿಕೆಯಲ್ಲಿ ಸುಳ್ಳಿದೆಯೆಂದಲ್ಲ. ತಾಂತ್ರಿಕ ಕಾರಣಗಳವು. ಅಲ್ಲದೆ ಅರಣ್ಯ ಹಕ್ಕಿನ ಅರ್ಜಿ ತಿರಸ್ಕೃತವಾದರೆ ಅವರನ್ನು ಕಾಡಿನಿಂದ ಹೊರನೂಕುವಂತಿಲ್ಲ ಎಂದು ಅರಣ್ಯ ಹಕ್ಕು ಕಾಯ್ದೆಯು ಸ್ಪಷ್ಟವಾಗಿ ಹೇಳುತ್ತದೆ.
ಈ ತಾಂತ್ರಿಕ ಕಾರಣಗಳು ಏನೇನಿವೆ ನೋಡಿ. ಅರಣ್ಯಾವಲಂಬೀ ಜನರ ಅರ್ಜಿಗಳು, ದಾಖಲೆಗಳು 3 ಹಂತದ ಪ್ರಾಧಿಕಾರಗಳನ್ನು ಹಾದು ಒಪ್ಪಿಗೆ ಪಡೆದು ಬರಬೇಕು. ಮೊದಲನೆಯದು ಸ್ಥಳೀಯ ಅರಣ್ಯ ಹಕ್ಕು ಸಮಿತಿ, ಅದರಲ್ಲಿ ಬುಡಕಟ್ಟು ಜನರೇ ಮುಖ್ಯರು. ಎರಡನೆಯದು ಉಪ ವಿಭಾಗ ಮಟ್ಟದ ಸಮಿತಿ, ಮೂರನೆಯದು ಜಿಲ್ಲಾ ಮಟ್ಟದ ಸಮಿತಿ. ಉಪವಿಭಾಗ ಮಟ್ಟದ ಸಮಿತಿಯಲ್ಲಿ ಉಪವಿಭಾಗಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಇವರ ಜೊತೆಗೆ ತಾಲೂಕು ಮಟ್ಟದ ಸಮಾಜ ಕಲ್ಯಾಣಾಧಿಕಾರಿ, ತಾಲೂಕು ಪಂಚಾಯತ್ ಸದಸ್ಯರಿರುತ್ತಾರೆ. ಬುಡಕಟ್ಟು ಜನರು, ಬುಡಕಟ್ಟು ಮಹಿಳೆ ಕೂಡ ಇರುತ್ತಾರೆ. ಇಲ್ಲಿಯವರೆಗೆ ಆಚರಣೆಯಲ್ಲಿ ಬಂದಿರುವುದೆಂದರೆ ಅರಣ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಅರಣ್ಯ ಇಲಾಖೆಯದ್ದೇ ಅಂತಿಮ ನುಡಿ. ಅದು ಅವರ ಆಸ್ತಿ ಎಂಬಂತೆ. ಅರಣ್ಯ ಅಧಿಕಾರಿಗಳಿರುವ ಸಭೆಯಲ್ಲಿ ಉಳಿದವರು ಬಾಯಿ ಬಿಡುವುದಿಲ್ಲ. ಬುಡಕಟ್ಟು ಜನರ ಪರವಾಗಿ ಮಾತನಾಡಬೇಕಾದ ಗಿರಿಜನ ಕಲ್ಯಾಣಾಧಿಕಾರಿಗಳು ಗೋಣಾಡಿಸುವುದನ್ನು ಬಿಟ್ಟು ಮತ್ತೇನನ್ನೂ ಮಾಡುವುದಿಲ್ಲ. ಅರಣ್ಯ ಇಲಾಖೆಯೊಳಗೂ ಕೂಡ ಮೇಲಿಂದ ಬಂದಿದ್ದೇ ತೀರ್ಥ ಎಂಬ ನೀತಿ ಬ್ರಿಟಿಷರ ಕಾಲದಿಂದಲೂ ಗಟ್ಟಿಯಾಗಿ ಕುಳಿತಿದ್ದುದು ಇನ್ನೂ ವರೆಗೆ ಅಲುಗಾಡಿಸಲು ಆಗುತ್ತಿಲ್ಲ. ಕಾಡಿನ ಜೊತೆ ನಿಜವಾದ ಸಂಬಂಧ ಇರುವಂತಹ, ಬುಡಕಟ್ಟು ಜನರ ಬಗ್ಗೆ ಜ್ಞಾನವುಳ್ಳ ಗಾರ್ಡ್, ಫಾರೆಸ್ಟರ್, ವಾಚರ್ ಇವರ ಮಾತಿಗೆ ಹೆಚ್ಚಿನ ಮಾನ ಇರಬೇಕಾಗಿತ್ತು. ಆದರೆ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಪಾಸಾಗಿ ಬಂದಿರುವಂತಹ ಅಧಿಕಾರಿಗಳ ಮಾತಿಗೆ ಆದ್ಯತೆ. ವರ್ಷ, ಮೂರು ವರ್ಷಕ್ಕೆ ವರ್ಗವಾಗಿ ಹೋಗುವ ಈ ಅಧಿಕಾರಿಗಳಿಗೆ ಸಹಜವಾಗಿ ಸ್ಥಳೀಯ ಸಮಸ್ಯೆಗಳ ಅರಿವಾಗಲೀ ಕಳಕಳಿಯಾಗಲೀ ವಾಚರ್‌ಗಿರುವಷ್ಟು ಇರಬೇಕೆಂದು ನಿರೀಕ್ಷಿಸುವುದು ತಪ್ಪು. ಮೂಲ ನಿವಾಸಿಗಳ ಜೀವನದ ಪರಿಕಲ್ಪನೆ, ಸ್ಥಳೀಯರೊಂದಿಗೆ ಅನ್ಯೋನ್ಯ ಸಂಬಂಧಗಳ ಕೊರತೆ ಇರುವ ಮೇಲಧಿಕಾರಿಗಳೇ ಅವರ ಅರಣ್ಯ ಹಕ್ಕಿಗೆ ಸಂಬಂಧಿಸಿದ ವರದಿಯನ್ನು ತಯಾರಿಸಬೇಕು. ಇಲಾಖೆಯಲ್ಲಿ ಸ್ಥಳೀಯ ಜ್ಞಾನ ಇರುವಂಥವರಿಗೆ ಕಡೆಯ ಆದ್ಯತೆ, ಇಲಾಖೆ ಇಲಾಖೆಗಳು ಕೂಡಿದಾಗಲೂ ಅರಣ್ಯಾಧಿಕಾರಿಗಳಿಗೇ ಹೆಚ್ಚಿನ ಆದ್ಯತೆ ಇರುವಂಥ ಸನ್ನಿವೇಶದಲ್ಲಿ ಕಟ್ಟ ಕಡೆಯ ಮನುಷ್ಯನ ಭೂಮಿ ಹಕ್ಕಿನ ಮೇಲಿನ ತೀರ್ಮಾನಗಳೆಂತಾಗಬಹುದು? ಇದರ ಪರಿಣಾಮವೇ ಈ ಪ್ರಮಾಣದ ತಿರಸ್ಕೃತ ಅರ್ಜಿಗಳು.


ಬಹುತೇಕ ಅರಣ್ಯವಾಸಿಗಳಿಗೆ ನಾಡು ತಮಗಾಗಿ ಒಂದು ಒಳ್ಳೆಯ ಕಾನೂನನ್ನು ತಯಾರಿಸಿದೆ ಎನ್ನುವುದು ಗೊತ್ತಿಲ್ಲ. ಬುಡಕಟ್ಟು ಜನರ ಸಂಘಟಕರಿಗೂ ಇವರ ಅರ್ಜಿಗಳು ಯಾಕೆ ತಿರಸ್ಕೃತವಾದವು ಎನ್ನುವುದು ತಿಳಿಯುತ್ತಿಲ್ಲ. ಅಧಿಕಾರಿ ವರ್ಗದಲ್ಲಾಗಲೀ, ಸಂಘಟಕರಲ್ಲಾಗಲೀ, ಎಲ್ಲಾ ಕಡೆ ಕಾಣುತ್ತಿರುವುದು ಅರಣ್ಯ ಹಕ್ಕು ಕಾಯ್ದೆಯ ಪೂರ್ಣ ಪಾಠ ಇಲ್ಲದಿರುವುದು. ದಾಖಲೆಗಳ ಸಹಿತ ಅರ್ಜಿ ಹಾಕುವುದು, ದೊಡ್ಡ ಅಧಿಕಾರಿಗಳು ಇರುವಂತಹ ಸಭೆಗಳಲ್ಲಿ ತಮ್ಮ ಅಹವಾಲನ್ನು ಮಂಡಿಸುವುದು, ವಾದಮಾಡಿ ಗೆಲ್ಲುವುದು ಗಿರಿಜನರಿಗೆ ಎಂದಾದರೂ ಸಾಧ್ಯವೇ? ಕಾನೂನನ್ನು ಬಲ್ಲ, ಮಾನವೀಯತೆ ಇರುವಂತಹ ಸಂಘಟನೆಗಳು ಕೈ ಹಿಡಿದು ನಡೆಸಿದರಷ್ಟೇ ಅವರ ಹಕ್ಕುಗಳು ಅವರಿಗೆ ಸಿಗಬಹುದು. ಮಹಾರಾಷ್ಟ್ರದಲ್ಲಿ ಬಹುತೇಕ ಅರಣ್ಯ ಹಕ್ಕಿನ ಅರ್ಜಿಗಳು ಅಲ್ಲಿನ ಸಂಘಟನೆಗಳ ಬಲದಿಂದಲೇ ಪುರಸ್ಕೃತವಾಗಿವೆ. ಆದರೆ ಕರ್ನಾಟಕದಲ್ಲಿ ಅರಣ್ಯ ಹಕ್ಕಿನ ಅರ್ಜಿಗಳನ್ನು ಹಾಕಿಸಿರುವಂತಹ ಸಂಘಟನೆಗಳೂ ಕೂಡ ಅರ್ಜಿಗಳು ತಿರಸ್ಕೃತವಾದಾಗ ಮುಂದೆ ದಾರಿ ತೋಚದೆ ಸುಮ್ಮನಾಗಿಬಿಟ್ಟಿವೆ.
ಸಮಾಜ ಕಲ್ಯಾಣ ಇಲಾಖೆ ಇದೆ. ಬುಡಕಟ್ಟು ಜನರ ಬಗ್ಗೆ ಅವರ ಜೀವನ ಪದ್ಧತಿಯ ಬಗ್ಗೆ ಅರಿವಿರುವಂತಹ ಅಧಿಕಾರಿಗಳು ಇಲ್ಲಿರಬೇಕಾಗಿತ್ತು. ಅದನ್ನೊಂದು ಶಾಸ್ತ್ರವಾಗಿ ಅಭ್ಯಾಸ ಮಾಡಿದವರು, ಬುಡಕಟ್ಟು ಜನರ ಬಗ್ಗೆ ಕುತೂಹಲ, ಪ್ರೀತಿ ಇರುವಂತಹವರು, ಆಸಕ್ತಿಯಿಂದ ಬುಡಕಟ್ಟು ಜೀವನ ಪದ್ಧತಿಯನ್ನು ಅಧ್ಯಯನ ಮಾಡಿದವರಿರಬೇಕಿತ್ತು. ಆದರೆ ಇಂದು ಬುಡಕಟ್ಟು ಅಧಿಕಾರಿ ಆಗಿರುವವರು ನಾಳೆ ಕಂದಾಯ ಅಧಿಕಾರಿ ಆಗಬಹುದು, ಮುಂದಿನ ವರ್ಷ ಶಿಕ್ಷಣಾಧಿಕಾರಿ ಆಗಬಹುದು. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗವಾಗಿ ಹೋಗುವಂತಹ ಇವರು ಬುಡಕಟ್ಟು ವಿಶಿಷ್ಟವಾದ ಅಭ್ಯಾಸವನ್ನು ಮಾಡಿಯೇ ಇರುವುದಿಲ್ಲ. ಇನ್ನು ಅವರಿಗೆ ತರಬೇತಿಯೋ, 2008ರ ನಂತರ ಈ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ಎಂಬುದೇ ಆಗಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಒಬ್ಬ ಅಧಿಕಾರಿ.
ನಮ್ಮ ಅರಣ್ಯ ಇಲಾಖೆ ಅರಣ್ಯದೊಳಗಿನ ಪಶು, ಪಕ್ಷಿ, ಗಿಡಮರಗಳನ್ನೆಲ್ಲ ಒಪ್ಪಿಕೊಳ್ಳುತ್ತದೆ, ಆದರೆ ಅದರ ಒಂದು ಭಾಗವೇ ಆಗಿದ್ದ ಮನುಷ್ಯರನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಅರಣ್ಯ ಹಕ್ಕು ಸಮಿತಿಯಲ್ಲಿ ಅರಣ್ಯದ ಪರವಾಗಿ ಮಾತನಾಡುವ ಅಧಿಕಾರಿಗಳ ಎದುರು ಗಿರಿಜನ ಕಲ್ಯಾಣಾಧಿಕಾರಿಗಳು ಬುಡಕಟ್ಟು ಜನರ ಪ್ರತಿನಿಧಿಯೋ ಎಂಬಂತೆ ಸಮರ್ಥವಾಗಿ ವಾದ ಮಂಡಿಸಬೇಕಾಗುತ್ತದೆ. ಆದರೆ ಹಾಗಾಗುತ್ತಿಲ್ಲ. ಅಧ್ಯಯನವಿಲ್ಲದವರು, ಕಳಕಳಿ ಇಲ್ಲದವರು, ನಾಲಿಗೆ ಹೊರಳದ ಇವರು ಬುಡಕಟ್ಟು ಜನರನ್ನು ಪ್ರತಿನಿಧಿಸಿ ಮಾತನಾಡಬಹುದೇ? ಸಮಿತಿಯಲ್ಲಿ ಅರಣ್ಯಾಧಿಕಾರಿಗಳು ಹೇಳಿದ್ದೇ ಅಂತಿಮವಾಗಿ ಅರ್ಜಿಗಳು ತಿರಸ್ಕೃತವಾಗುತ್ತವೆ. ಆಗುತ್ತಿವೆ.
ಅರಣ್ಯ ಹಕ್ಕು ಕಾಯ್ದೆಯು ಈ ಕತ್ತಲೆಯಲ್ಲೂ ಬೆಳಕಿನ ಕಿರಣವನ್ನು ತೋರಿಸಿದೆ. ಕಾಯ್ದೆಯ ಸೆಕ್ಷನ್ 3(1) ಎಂ. ಇದರ ಪ್ರಕಾರ ಸ್ಥಳೀಯ ಅರಣ್ಯ ಹಕ್ಕು ಸಮಿತಿಗಳದ್ದು ಪ್ರಧಾನ ಪಾತ್ರ. 15 ಸದಸ್ಯರ ಈ ಸಮಿತಿಯಲ್ಲಿ ಬುಡಕಟ್ಟು ಜನರು, ಮಹಿಳೆಯರು ಇರಬೇಕು. ಅರ್ಜಿ ಹಾಕಿದ ಜನರು ತಮ್ಮ ಅಜ್ಜ ಮುತ್ತಜ್ಜಂದಿರು ವಾಸಿಸುತ್ತಿದ್ದ ತಾಣಗಳನ್ನು ಗುರುತಿಸಬೇಕು. ಕುರುಹುಗಳನ್ನು ತೋರಿಸಬೇಕು. ಇದನ್ನು ಅರಣ್ಯ ಹಕ್ಕು ಸಮಿತಿಯು ಪರಿಶೀಲಿಸಿ ಒಪ್ಪಬೇಕು. ಅಕಸ್ಮಾತ್ ತಾನು ಅರಣ್ಯವಾಸಿಯಾಗಿದ್ದೆ ಎಂದು ಅವರಿಗೆ ಸಿದ್ಧಮಾಡಲು ಸಂಬಂಧಿತ ಕಾಗದ ಪತ್ರಗಳಿರಲಿಲ್ಲವೆಂದರೆ, ‘‘ಇವರು ಇಲ್ಲಿಯೇ ವಾಸವಿದ್ದುದು ಎಂದು ಕೆಲವು ಬುಡಕಟ್ಟು ಜನರು ‘ಚಕ್‌ಬಂದಿ’ ಮಾಡಿ ಸಹಿ ಮಾಡಿದರೆ ಸಾಕು’’ ಎಂದೂ ಅರಣ್ಯ ಹಕ್ಕು ಕಾಯ್ದೆ ಹೇಳುತ್ತದೆ.
ಮುಂದಿನ ಹಂತ ಅರಣ್ಯ ಹಕ್ಕು ಗ್ರಾಮ ಸಭೆಯದ್ದು. ಗ್ರಾಮ ಸಭೆಗಳು ನಡೆಯುತ್ತಿವೆಯೇ? ಅಲ್ಲಿ ಜನಪರ ನಿರ್ಣಯಗಳು ಆಗುತ್ತಿವೆಯೇ? ಅರಣ್ಯ ಹಕ್ಕು ಕಾಯ್ದೆಯನ್ನು ಅಧ್ಯಯನ ಮಾಡುತ್ತಿರುವ ಸಂಶೋಧಕಿಯೊಬ್ಬರು ಹೇಳುವ ಪ್ರಕಾರ ಕಾನೂನಿನಂತೆ ಅರಣ್ಯ ಹಕ್ಕಿನ ಗ್ರಾಮಸಭೆಗಳೇ ಆಗುತ್ತಿಲ್ಲ. ಗ್ರಾಮ ಸಭೆಯ ನಿರ್ಣಯಗಳು ದಾಖಲಾಗುತ್ತಿಲ್ಲ. ಅಲ್ಲಿಯೂ ಕೂಡ ಅಧಿಕಾರಿಗಳದ್ದೇ ನಿರ್ಣಯ. ಎಲ್ಲಿ ಸಂಘಟನೆಗಳಿವೆಯೋ ಅಲ್ಲಿ, ಎಲ್ಲಿ ರಾಜಕೀಯ ಹಿತಾಸಕ್ತಿ ಇದೆಯೋ ಅಲ್ಲಿ ಮಾತ್ರ ಆಯಾ ಜನಪರ ನಿರ್ಣಯಗಳು ದಾಖಲಾಗಿರುತ್ತವೆ. ಮಹಾರಾಷ್ಟ್ರದಲ್ಲಿ ಸಂಘಟನೆಗಳು ಹಿಂದೆ ನಿಂತು ಗ್ರಾಮ ಸಭೆಗಳು ಸರಿಯಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಮಾಡಿದವು, ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಕಾಗೋಡು ತಿಮ್ಮಪ್ಪಗಟ್ಟಿಯಾಗಿ ನಿಂತು ತಮ್ಮ ಜನರ ಅರಣ್ಯ ಹಕ್ಕುಗಳು ದಾಖಲಾಗುವಂತೆ ಮಾಡಿದರು. ಆದರೆ ಅತಿ ದೊಡ್ಡ ಅರಣ್ಯ ಪ್ರದೇಶವಿರುವ ಉತ್ತರ ಕನ್ನಡದಲ್ಲಿ ಗ್ರಾಮಸಭೆಯ ನಿರ್ಣಯವೊಂದೂ ದಾಖಲಾಗಿಲ್ಲ ಎಂದರೆ ಆಶ್ಚರ್ಯವೆನಿಸಬಹುದು, ಆದರಿದು ನಿಜ ಎನ್ನುತ್ತಾರೆ ಈ ಸಂಶೋಧಕಿ. ಅರಣ್ಯ ಹಕ್ಕು ಸಮಿತಿ ಮತ್ತು ಗ್ರಾಮ ಸಭೆಯಲ್ಲಿ ಆದ ನಿರ್ಣಯಗಳನ್ನು ವಿಭಾಗ ಮಟ್ಟದ ಸಮಿತಿ ಪುನರ್ ಪರಿಶೀಲನೆಗೆ ಕಳಿಸಬಹುದೇ ಹೊರತು ತಿರಸ್ಕರಿಸುವಂತಿಲ್ಲ.
ಈ ಕಾಯ್ದೆ ಬಂದಾಗ ಅರಣ್ಯವಾಸಿಗಳೊಂದಿಗೆ ಕೆಲಸ ಮಾಡುತ್ತಿದ್ದ ಕೆಲ ಸಂಘಟಕರು ಆತಂಕ ವ್ಯಕ್ತಪಡಿಸಿದ್ದರು ‘ಇತರ’ ಜನರೇ ಲಾಭ ಪಡೆಯಬಹುದೆಂದು. ಅದು ಆಗಿದ್ದೂ ಹಾಗೆಯೇ. ‘ಪರಿಶಿಷ್ಟ ವರ್ಗ ಹಾಗೂ ಇತರ ಪರಂಪರಾಗತ ಅರಣ್ಯವಾಸಿಗಳ ಅರಣ್ಯ ಹಕ್ಕು ಮಾನ್ಯತೆ ಕಾಯ್ದೆ 2006’ರ ನಿಜವಾದ ಪ್ರಯೋಜನವನ್ನು ಪಡೆದವರು ಶಿವಮೊಗ್ಗ ಮತ್ತು ಉತ್ತರ ಕನ್ನಡದ ಮೇಲ್ವರ್ಗದ ಜನ ಎನ್ನುತ್ತಾರೆ ಅರಣ್ಯಮೂಲ ಬುಡಕಟ್ಟು ಜನರ ಸಂಘಟಕರಲ್ಲೊಬ್ಬರಾದ ಅಶೋಕ ಶೆಟ್ಟಿ. ಬ್ರಿಟಿಷರು ಅರಣ್ಯ ಕಾಯ್ದೆಯನ್ನು ಮಾಡುತ್ತಿರುವಾಗಲೇ ಉತ್ತರ ಕನ್ನಡದ ಅಡಿಕೆ ಕೃಷಿಕರು (ಇತರ ಅರಣ್ಯವಾಸಿ ಜನರು) ತಮ್ಮ ಬಳಕೆಗಾಗಿ ಸುತ್ತಲಿನ ಬೆಟ್ಟಗಳನ್ನು ಕಾಯ್ದಿರಿಸಿಕೊಂಡರು. ಆದರೆ ಮಾತಾಡಲು ಶಕ್ತಿ ಇಲ್ಲದಂತಹ ‘ಪರಿಶಿಷ್ಟ ವರ್ಗ’ದ ಕುಣಬಿ, ಗೌಳಿ, ಹಸಲರು, ಸಿದ್ದಿ ಜನರು ತಮ್ಮ ಅರಣ್ಯ ಹಕ್ಕುಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.
ಅರಣ್ಯ ಹಕ್ಕು ಸಮಿತಿಯಲ್ಲೂ ಗ್ರಾಮಸಭೆಯಲ್ಲೂ ಜನರು ಮಾತಾಡಬೇಕು. ಮಾತಾಡುವ ಸಾಮರ್ಥ್ಯ ಅವರಲ್ಲಿ ಬರಬೇಕು. ಮಾತಾಡುವಂತಹ ವಾತಾವರಣವಿರಬೇಕು. ಅದು ಅವರ ಸಭೆ. ಅವರು ಕೈಗೊಂಡ ನಿರ್ಣಯಗಳು ದಾಖಲಾಗಬೇಕು. ಆ ನಿರ್ಣಯಗಳನ್ನು ಇಲಾಖೆಗಳು ಅಂದರೆ ಸರಕಾರ ಗೌರವಿಸಬೇಕು. ಅಂದಾಗ ಮಾತ್ರ ಅತ್ಯಂತ ಮಹತ್ವಪೂರ್ಣ ಜನಪರ ಕಾನೂನೊಂದು ಜೀವ ತಳೆಯುತ್ತದೆ. ಇಲ್ಲವೆಂದರೆ ಕಾನೂನಿದ್ದೂ ಸತ್ತಂತೆಯೇ. ಆದರೆ ಅದಾಗುವುದು ಹೇಗೆ ಸಾಧ್ಯ? ಅತ್ತ ಕಾಡಿನೊಳಗಿನ ಆತ್ಮವಿಶ್ವಾಸವನ್ನು ಸಂಪೂರ್ಣ ಕಳೆದುಕೊಂಡಂತಹ, ಇತ್ತ ನಾಡಿನ ಭಾಷೆಯನ್ನು ಇನ್ನೂ ಕಲಿಯದಂತಹ ಬುಡಕಟ್ಟು ಜನರು ನಾಡ ಭಾಷೆಯಲ್ಲಿ, ನಾಡ ಕಾನೂನಿಗನ್ವಯವಾಗುವಂತೆ ಮಾತನಾಡಿ ತಮ್ಮ ಕುರುಹುಗಳನ್ನು ದಾಖಲಿಸಬೇಕೆಂದರೆ ನಾಡಿನವರೇ ಅವರಿಗೆ ಸಹಾಯ ಮಾಡದ ಹೊರತು ಸಾಧ್ಯವಿಲ್ಲ. ಅವರ ಪರಂಪರಾಗತ ಸಂಸ್ಕೃತಿಯನ್ನು ಗೌರವಿಸುವಂತಹ, ಅವರ ಭೂಮಿ ಹಕ್ಕನ್ನು ಕೊಡಿಸಲು ಬದ್ಧರಾಗಿರುವಂತಹ ಸಂಘಟಕರು ಬೇಕಾಗಿದ್ದಾರೆ.

Writer - ಶಾರದಾ ಗೋಪಾಲ

contributor

Editor - ಶಾರದಾ ಗೋಪಾಲ

contributor

Similar News

ಜಗದಗಲ
ಜಗ ದಗಲ