ಸೋತದ್ದು ‘ಚಂದ್ರಯಾನ’ವಲ್ಲ, ‘ಮೋದಿಯಾನ’!

Update: 2019-09-15 07:36 GMT

ಭಾರತವನ್ನು ಶೋಕಾಚರಣೆಗೆ ತಳ್ಳುವಷ್ಟು ಕರಾಳ ವೈಫಲ್ಯ ಇದಾಗಿರಲಿಲ್ಲ. ಆದರೆ ಲ್ಯಾಂಡರ್ ಮೂಲಕ ಚಂದ್ರನಲ್ಲಿ ಇಳಿಯಲಿದ್ದ ರೋವರ್ ಕಳುಹಿಸಲಿದ್ದ ಚಂದ್ರನೆದೆಯ ಮೊದಲ ಫೋಟೊವನ್ನು ತುತ್ತೂರಿ ಮಾಧ್ಯಮಗಳ ಮುಂದೆ ತಾನೇ ಅನಾವರಣ ಮಾಡಿ, ಸ್ವತಃ ಕ್ಲಿಕ್ಕಿಸಿಕೊಂಡು ಬಂದಂತೆ ವಿಜ್ಞಾನಿಗಳ ಯಶಸ್ಸನ್ನು ಹೈಜಾಕ್ ಮಾಡಲು ಹವಣಿಸಿದ್ದ ಪ್ರಧಾನಿಯವರಿಗೆ ಖಂಡಿತ ನಿರಾಸೆ ಆಗಿದೆ.

ಹೀಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ದೇಸಿ ಕ್ರೀಡಾಕೂಟ ನಡೆದಿರುತ್ತೆ. ಸುತ್ತಲ ಹತ್ತು ಹಳ್ಳಿಯ ತಲಾ ಒಬ್ಬೊಬ್ಬ ಓಟಗಾರ ಪಂದ್ಯಕ್ಕೆ ಅಣಿಯಾಗಿ ನಿಂತಿರುತ್ತಾನೆ. ಆತಿಥೇಯ ಊರಿನ ಜನರಿಗೆ ತಮ್ಮ ಕಟ್ಟಾಳು ಗೆದ್ದೇ ಗೆಲ್ಲುತ್ತಾ ನೆನ್ನುವ ವಿಶ್ವಾಸ. ಅದೇ ವಿಶ್ವಾಸ ಊರಿನ ಗ್ರಾಮ ಪಂಚಾಯತ್ ಪ್ರೆಸಿಡೆಂಟ್‌ಗೂ ಇರುತ್ತೆ. ಹಾಗಾಗಿ ಆ ಗೆಲುವನ್ನು ತನ್ನ ಕಬ್ಜಾ ಮಾಡಿಕೊಳ್ಳಲು ಬೇರೆಲ್ಲ ಕೆಲಸಗಳನ್ನು ಬದಿಗೊತ್ತಿ ಅಲ್ಲಿ ಠಳಾಯಿಸಿರುತ್ತಾನೆ. ಗೆಲ್ಲುವ ತನ್ನೂರಿನ ಆಟಗಾರನಿಗೆ ತಾನೇ ಪ್ರಶಸ್ತಿ ಕೊಟ್ಟು, ಆ ಗೆಲುವು ದಕ್ಕಿಸಿಕೊಟ್ಟಿದ್ದೇ ತಾನೆಂಬ ಬಿಟ್ಟಿ ಪ್ರಚಾರ ಪಡೆಯುವುದು ಆತನ ಲೆಕ್ಕಾಚಾರ. ಅವನ ತುತ್ತೂರಿ ಪಡೆಯೂ ಅದಕ್ಕೆ ಸಜ್ಜಾಗಿ ತಮ್ಮ ಮೊಬೈಲ್ ಕ್ಯಾಮರಾಗಳನ್ನು ಸಾಣೆ ಹಿಡಿದುಕೊಂಡು ಕೂತಿದ್ದಾರೆ.
ಪಂದ್ಯ ಶುರುವಾಯ್ತು. ಎಲ್ಲರ ನಿರೀಕ್ಷೆಯಂತೆ ಆ ಊರಿನ ಓಟಗಾರ ಎಲ್ಲರಿಗಿಂತ ಮುಂದೆ ದೌಡಾಯಿಸಿ ಅಂತಿಮ ಗೆರೆ ಮುಟ್ಟಿ ಮೊದಲಿಗನಾಗಿ ಗೆದ್ದೇ ಬಿಡುತ್ತಾನೆ. ವಿಜಯೋತ್ಸವ ಮುಗಿಲು ಮುಟ್ಟುತ್ತೆ. ದುರದೃಷ್ಟವಶಾತ್ ಆ ವೇಗ ತಗ್ಗಿಸಿಕೊಳ್ಳಲಾರದೆ ಆಯ ತಪ್ಪಿ ಮಕಾಡೆ ಬಿದ್ದು ಮೂಗಿಗೆ ಏಟು ಮಾಡಿಕೊಳ್ಳುತ್ತಾನೆ. ರಕ್ತ ಜಿನುಗಲು ಶುರುವಾಗುತ್ತೆ. ಕೂಡಲೇ ಅವನನ್ನು ಅನಿವಾರ್ಯವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಇತ್ತ ಗೆದ್ದವನ ಜೊತೆ ನಿಂತು, ತಾನೇ ಗೆಲ್ಲಿಸಿದವನೆಂಬಂತೆ ಫೋಜು ಕೊಡಲು ಅಣಿಯಾಗಿದ್ದ ಪ್ರೆಸಿಡೆಂಟ್‌ಗೆ ದೊಡ್ಡ ನಿರಾಸೆ! ಅವನ ತುತ್ತೂರಿ ಪಡೆಗೂ!!
ಕೂಡಲೇ ಆತ ತನಗಾದ ನಿರಾಸೆ ಇಡೀ ಕ್ರೀಡಾಂಗಣಕ್ಕಾದ ಮಹಾದುರಂತ ಎಂಬಂತೆ, ಆಯೋಜಕರೆ ಗಲಿಬಿಲಿಗೊಳ್ಳುವ ವಾತಾವರಣ ಸೃಷ್ಟಿಸಿ, ಆ ವಾತಾವರಣಕ್ಕೆ ತಾನೇ ಸಂತೈಸಿ, ಸಮಾಧಾನ ಮಾಡಿ ಸಮಸ್ತ ಮೈದಾನವನ್ನೇ ಸೂತಕದ ಛಾಯೆಗೆ ತಳ್ಳಿ ಜಾಗ ಖಾಲಿ ಮಾಡುತ್ತಾನೆ. ಅತ್ತವನ ತುತ್ತೂರಿಗಳು ಸಹ ಆಟಗಾರನಿಗಾದ ಸಣ್ಣ ಗಾಯವನ್ನು ಆತನ ‘ವೀರಮರಣ’ ಎಂಬಂತೆ ಸಂತಾಪದ ಅಲೆ ಎಬ್ಬಿಸಿ ಜನರನ್ನು ಶೋಕಾಚರಣೆಗೆ ಸಜ್ಜುಗೊಳಿಸುತ್ತಾರೆ.
ಆಟಗಾರನಿಗೆ ಆದ ದುರ್ದೈವಕ್ಕೆ ಖಂಡಿತ ಮರುಗೋಣ, ಹಾಗಂತ ಗುರಿ ಮುಟ್ಟಿದ ಅವನ ಗೆಲುವು ಗೆಲುವಲ್ಲವೇ! ಯಾರೋ ಒಬ್ಬಾತನಿಗೆ ವಿಜೃಂಭಿಸಲು ಅವಕಾಶ ಸಿಗಲಿಲ್ಲ ಎಂಬ ವೈಯಕ್ತಿಕ ನಿರಾಸೆಗೆ ಗೆಲುವನ್ನೇ ಸೋಲಿನ ಸೂತಕವಾಗಿಸುವುದು, ಮೊದಲೇ ನೋವಿನಲ್ಲಿರುವ ಆ ಆಟಗಾರನಿಗೆ ಮಾಡಿದ ಅವಮಾನ ಆಗುವುದಿಲ್ಲವೇ?
ಚಂದ್ರಯಾನ-2 ಯೋಜನೆಯಲ್ಲಿ ಆದದ್ದು ಇದೇ ಕಥೆ. ಪ್ರಧಾನಿ ಮೋದಿಯವರ ಪ್ರಚಾರದ ಹಪಾಹಪಿಗೆ ನಮ್ಮ ಇಸ್ರೋ ವಿಜ್ಞಾನಿಗಳ ಮಹತ್ಸಾಧನೆಯೊಂದು ಸೋಲಿನ ಸೂತಕವಾಗಿ ರೂಪಾಂತರವಾಯಿತು. ಹೌದು, ಚಂದ್ರನ ನೆಲ ಸ್ಪರ್ಷಿಸುವ ಕೊನೇ ಹದಿನೈದು ನಿಮಿಷಗಳಲ್ಲಿ ‘ವಿಕ್ರಂ’ ಲ್ಯಾಂಡರ್ ಸಂಪರ್ಕ ಕಡಿದುಕೊಂಡದ್ದು ನಿಜ. ಆದರೆ ವಾಸ್ತವದಲ್ಲಿ ಚಂದ್ರಯಾನ-2 ಯೋಜನೆ ವಿಕ್ರಂ ಲ್ಯಾಂಡರ್‌ಗಷ್ಟೇ ಸೀಮಿತವಾಗಿರಲಿಲ್ಲ. ಡಿಡಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದಂತೆ ಇಡೀ ಯೋಜನೆಯಲ್ಲಿ ಅದು ಕೇವಲ ಶೇ.5ರಷ್ಟು ಪ್ರಾಮುಖ್ಯತೆ ಅಷ್ಟೇ ಪಡೆದುಕೊಂಡಿತ್ತು. ಆದರೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಭಾರತದ ಪ್ರಯತ್ನ ಇದೇ ಮೊದಲಾದ್ದರಿಂದ, ಆ ‘ಫಸ್ಟ್ ಅಚೀವ್‌ಮೆಂಟ್’ ಕ್ರೆಡಿಟನ್ನು ತಾನು ಹೈಜಾಕ್ ಮಾಡಲು ಮೋದಿಯವರು ಲ್ಯಾಂಡರ್ ಮೇಲೆ ವಿಪರೀತ ಮುತುವರ್ಜಿ ವಹಿಸಿದ್ದರಿಂದ ಯೋಜನೆಯ ಶೇ.5ರಷ್ಟಿದ್ದ ಅದಕ್ಕೆ ಶೇ.100ರಷ್ಟು ಪ್ರಾಮುಖ್ಯತೆ ಬಂದಿತ್ತು. ಅದು ಯಶಸ್ವಿಯಾಗದೆ ಹೋದಾಗ ಶೇ.5ರಷ್ಟಾಗಬೇಕಿದ್ದ ಸೋಲು, ಶೇ.100ರಷ್ಟಾಗಿ ಇನ್ನುಳಿದ ಶೇ.95ರಷ್ಟು ನೈಜ ಗೆಲುವಿನ ಖುಷಿಯನ್ನೇ ನಾಶ ಮಾಡಿದೆ.
ಚಂದ್ರಯಾನ-2 ಯೋಜನೆ ಮುಖ್ಯವಾಗಿ ನಾಲ್ಕು ಅಂಶಗಳನ್ನು ಒಳಗೊಂಡಿತ್ತು. ಮೊದಲನೆಯದ್ದು ಜಿಎಸ್‌ಎಲ್‌ವಿ ಮಾರ್ಕ್-3 ಉಡ್ಡಯನ ವಾಹನ (ರಾಕೆಟ್). ಎರಡನೆಯದ್ದು ಲೂನಾರ್ ಆರ್ಬಿಟರ್ ಉಪಗ್ರಹ. ಮೂರನೆಯದ್ದು ವಿಕ್ರಂ ಲ್ಯಾಂಡರ್. ನಾಲ್ಕನೆಯದ್ದು ‘ಪ್ರಜ್ಞಾನ್’ ಹೆಸರಿನ ರೊಬೊಟಿಕ್ ರೋವರ್. ರಾಕೆಟ್‌ನ ಕೆಲಸ ಮಿಕ್ಕಳಿದ ಮೂರು ಯಂತ್ರಗಳನ್ನು ಚಂದ್ರನ ಕಕ್ಷೆಗೆ ಸೇರಿಸುವುದು. ಅದನ್ನದು ಯಶಸ್ವಿಯಾಗಿ ನಿಭಾಯಿಸಿದೆ. ಇನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿರುವ ಆರ್ಬಿಟರ್ ಉಪಗ್ರಹ 100 ಕಿ.ಮೀ. ಎತ್ತರದಿಂದಲೇ ಚಂದ್ರನನ್ನು ಅಧ್ಯಯನ ಮಾಡಲು ಶುರು ಮಾಡಿದೆ. ಸಂಪರ್ಕ ಕಡಿದುಕೊಂಡ ಲ್ಯಾಂಡರ್‌ನ ಲೊಕೇಷನ್ ಅನ್ನು ಥರ್ಮಲ್ ಸೆನ್ಸಾರಿಂಗ್ ಮೂಲಕ ಇಸ್ರೋ ವಿಜ್ಞಾನಿಗಳು ಪತ್ತೆ ಹಚ್ಚಿದ್ದೇ ಈ ಆರ್ಬಿಟರ್ ಬಳಸಿಕೊಂಡು. ಅಲ್ಲಿಗೆ ಅದರ ಉಡ್ಡಯನವೂ ಯಶಸ್ವಿಯಾದಂತಾಯಿತು. ಇನ್ನು ಲ್ಯಾಂಡರ್‌ನ ಕೆಲಸ ಕಕ್ಷೆಯಲ್ಲಿರುವ ಆರ್ಬಿಟರ್‌ನಿಂದ ಬೇರ್ಪಟ್ಟು ತನ್ನೊಳಗೆ ಇರಿಸಲಾಗಿದ್ದ ‘ಪ್ರಜ್ಞಾನ್‌ರೋವರ್ ಅನ್ನು ಜೋಪಾನವಾಗಿ ಚಂದ್ರನ ಮೇಲೆ ಇಳಿಸುವುದು. ಅದರಿಂದ ಹೊರಬರುವ ರೋವರ್ ಚಂದ್ರನ ನೆಲದ ಮೇಲೆ ಓಡಾಡಿ ಅಲ್ಲಿನ ಮಣ್ಣು, ಖನಿಜಗಳ ಮಾಹಿತಿಯ ಜೊತೆಗೆ ಫೋಟೊ ತೆಗೆದು ಆರ್ಬಿಟರ್ ಮೂಲಕ ವಿಜ್ಞಾನಿಗಳಿಗೆ ರವಾನಿಸುವ ಹೊಣೆ ಹೊತ್ತಿತ್ತು. ಈಗ ಲ್ಯಾಂಡರ್ ಸುರಕ್ಷಿತವಾಗಿ ಕೆಳಗಿಳಿಯದ ಕಾರಣ ರೋವರ್ ಹೊರಬಂದು ಈ ಕೆಲಸ ಮಾಡಲು ಸಾಧ್ಯವಾಗಿಲ್ಲ.ಲ್ಯಾಂಡರ್ ಮತ್ತು ರೋವರ್‌ಗಳು ಚಂದ್ರನ ಮೇಲೆ ಕೆಲಸ ಮಾಡುತ್ತಿದ್ದುದು 14 ದಿನಗಳು ಮಾತ್ರ. ಆಮೇಲೆ ಅವು ಡೀ-ಆಕ್ಟಿವೇಟ್ ಆಗುತ್ತಿದ್ದವು. ಆ ಹದಿನಾಲ್ಕು ದಿನಗಳು ಯಶಸ್ವಿಯಾಗದಿರುವುದಕ್ಕೆ ಬೇಸರಿಸಿಕೊಳ್ಳೋಣ, ಆದರೆ ಚಂದ್ರಯಾನದ ಮುಖ್ಯ ಘಟಕ ಇದ್ದದ್ದು ಮುಂದಿನ ಏಳೂವರೆ ವರ್ಷಗಳವರೆಗೆ ನಿರಂತರವಾಗಿ ಚಂದ್ರನನ್ನು ಅಧ್ಯಯನ ಮಾಡಿ ಮಾಹಿತಿ ಕಳುಹಿಸಲಿರುವ ಆರ್ಬಿಟರ್‌ನ ಯಶಸ್ಸಿನಲ್ಲಿ. ಅದೀಗ ಯಶಸ್ವಿಯಾಗಿಯೇ ಕೆಲಸ ಮಾಡುತ್ತಿದೆ. ಕೆ. ಶಿವನ್ ‘‘ಶೇ.95ರಷ್ಟು ಮಿಷನ್ ಯಶಸ್ವಿಯಾಗಿದೆ’’ ಎಂದು ಹೇಳಿದ್ದೇ ಈ ಕಾರಣಕ್ಕೆ!


ಈ ಯೋಜನೆಯ ಮೊದಲು ಯಶಸ್ಸು ಶುರುವಾಗುವುದು ನಮ್ಮ ಇಸ್ರೋ ವಿಜ್ಞಾನಿಗಳ ಧೈರ್ಯದಿಂದ. 2007ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಚಂದ್ರಯಾನ-2 ಯೋಜನೆಗೆ ಅನುಮೋದನೆ ಕೊಟ್ಟಾಗ ಭಾರತ ಮತ್ತು ರಶ್ಯ (ಆರ್‌ಎಎಸ್‌ಸಿಒಎಸ್‌ಎಂಒಎಸ್ -ರಾಸ್ಕೋಸ್‌ಮಾಸ್ ಬಾಹ್ಯಾಕಾಶ ಸಂಸ್ಥೆ) ಜಂಟಿಯಾಗಿ ಈ ಯೋಜನೆಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದವು. ಉಡ್ಡಯನ ವಾಹನ ಮತ್ತು ರೋವರ್ ಅಭಿವೃದ್ಧಿಯ ಜವಾಬ್ದಾರಿ ಭಾರತದ್ದಾದರೆ (ಇಸ್ರೋ), ಲ್ಯಾಂಡರ್ ಅನ್ನು ರಶ್ಯ ನಿರ್ಮಿಸಿಕೊಡಬೇಕು ಎಂಬ ಕಾರ್ಯ ಹಂಚಿಕೆಯೂ ಆಗಿತ್ತು. ಆದರೆ ಕೊನೇ ಹಂತದಲ್ಲಿ ರಶ್ಯ ಹಿಂದೆ ಸರಿಯಿತು. ಆಗ ಇಸ್ರೋ ವಿಜ್ಞಾನಿಗಳು ತಾವೇ ಲ್ಯಾಂಡರ್ ತಯಾರಿಸಿ ಯೋಜನೆ ಮುಂದುವರಿಸುವ ಪಣ ತೊಟ್ಟರು. ಹಾಗಾಗಿ 2015ರಲ್ಲಿ ಉಡಾವಣೆಯಾಗಬೇಕಿದ್ದ ಯೋಜನೆ ವಿಳಂಬವಾಗುತ್ತಾ ಬಂತು. ಆದರೂ ಸಂಪೂರ್ಣ ಸ್ವದೇಶಿ ಯೋಜನೆಯಾಗಿ ಇದು ಬದಲಾಯಿತು. ದೇಶಿ ತಂತ್ರಜ್ಞಾನ ಬಳಸಿ ಲ್ಯಾಂಡರ್ ಅಭಿವೃದ್ಧಿ ಪಡಿಸುವಲ್ಲಿ ನಮ್ಮ ವಿಜ್ಞಾನಿಗಳು ಯಶಸ್ವಿಯಾದದ್ದು ನಾವೆಲ್ಲ ಹೆಮ್ಮೆ ಪಟ್ಟುಕೊಳ್ಳಬೇಕಾಗಿದ್ದ ಮೊದಲ ಗೆಲುವಾಗಿತ್ತು.
ಇನ್ನು ಬಜೆಟ್‌ಗೆ ಹೋಲಿಸಿದಾಗಲೂ ಯೋಜನೆಯ ಶೇ.25ರಷ್ಟು ವೆಚ್ಚ ಮಾತ್ರ ವಿಫಲವಾಗಿದ್ದು, ಶೇ.75ರಷ್ಟು ಹೂಡಿಕೆ ಯಶಸ್ವಿಯಾಗಿ ಫಲ ಕೊಡುತ್ತಿದೆ. ಯೋಜನೆಯ ಒಟ್ಟು ಬಜೆಟ್ ಗಾತ್ರ ರೂ.978 ಕೋಟಿ. ಇದರಲ್ಲಿ ಉಡ್ಡಯವ ವಾಹನ (ರಾಕೆಟ್) ಅಭಿವೃದ್ಧಿ ವೆಚ್ಚವೇ ರೂ.375 ಕೋಟಿ. ಅದಂತೂ ಯಶಸ್ವಿಯಾಗಿದೆ. ಇನ್ನುಳಿದ ರೂ.603 ಕೋಟಿಯಲ್ಲಿ ಶೇ.60ರಷ್ಟು ಖರ್ಚಾಗಿರೋದು ಆರ್ಬಿಟರ್ ಅಭಿವೃದ್ಧಿಗೆ. ಯಾಕೆಂದರೆ ಏಳೂವರೆ ವರ್ಷಗಳ ಸುದೀರ್ಘ ಕಾಲ ಕಾರ್ಯನಿರ್ವಹಿಸುವ ಆರ್ಬಿಟರ್‌ನಲ್ಲಿ ಎಂಟು ತಂತ್ರಜ್ಞಾನ ಸಲಕರಣೆಗಳನ್ನು ಅಳವಡಿಸಲಾಗಿದೆ. ಲ್ಯಾಂಡರ್ ಮತ್ತು ರೋವರ್‌ಗಳಿಂದ ಒಟ್ಟಾಗಿ ಜೋಡಿಸಲ್ಪಟಿರುವುದು ಕೇವಲ ಆರು ವೈಜ್ಞಾನಿಕ ಸಲಕರಣೆಗಳು ಮಾತ್ರ, ಅವೂ ಅಲ್ಪಾವಧಿಯವು. ಹಾಗಾಗಿ ದೀರ್ಘಾವಧಿ ಆರ್ಬಿಟರ್ ಅಭಿವೃದ್ಧಿಗೇ ಹೆಚ್ಚು ಹೂಡಿಕೆ ಮಾಡಲಾಗಿತ್ತು. ಅಂದರೆ ಬಜೆಟ್‌ನ ದೃಷ್ಟಿಯಿಂದ ನೋಡಿದಾಗಲೂ ರೋವರ್-ಲ್ಯಾಂಡರ್‌ಗಳ ನಿರ್ಮಾಣಕ್ಕೆ ಖರ್ಚಾದ ಶೇ.25ರಷ್ಟು ಮಾತ್ರ ವಿಫಲವಾಗಿದೆ.
ಈಗ ಸೇವೆಗಳ ವಿಚಾರಕ್ಕೆ ಬರೋಣ. ಲ್ಯಾಂಡರ್‌ನಂತೆ ಚಂದ್ರನ ಮೇಲೆ ಇಳಿಯದೆ ಹೋದರೂ ಅವು 14 ದಿನಗಳಲ್ಲಿ ಮಾಡಬಹುದಾಗಿದ್ದ ಸೇವೆಗಳನ್ನು ಎಂಟು ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ಆರ್ಬಿಟರ್ ಉಪಗ್ರಹದಿಂದ ಮುಂದಿನ ಏಳೂವರೆ ವರ್ಷಗಳ ಅವಧಿಯಲ್ಲಿ ಪಡೆದುಕೊಳ್ಳಬಹುದು. ಆರ್ಬಿಟರ್‌ನಲ್ಲಿ ಅಳವಡಿಸಲಾಗಿರುವ ‘ಡ್ಯುಯೆಲ್ ಫ್ರೀಕ್ವೆನ್ಸಿ ಎಲ್ ಆ್ಯಂಡ್ ಎಸ್ ಬ್ಯಾಂಡ್ ಸಿಂಥೆಟಿಕ್ ಅಪೆರ್ಚರ್ ರೆಡಾರ್‌ಗೆ (ಡಿಎಫ್‌ಎಸ್‌ಎಆರ್) ಚಂದ್ರನ ನೆಲದ 5 ಮೀಟರ್ ಆಳದವರೆಗೆ ತೂರಿ ಸ್ಕ್ಯಾನ್ ಮಾಡುವ ಸಾಮರ್ಥ್ಯ ಇರುವುದರಿಂದ, ಅಲ್ಲಿನ ನೀರುಗಡ್ಡೆ ಹಾಗೂ ಖನಿಜಗಳ ಮಾಹಿತಿಯನ್ನು ಪಡೆಯಬಹುದು. ಜೊತೆಗೆ ‘ಟೆರ್ರೈನ್ ಮ್ಯಾಪಿಂಗ್ ಕ್ಯಾಮರಾ-2’ (ಟಿಎಂಸಿ-2) ಹಾಗೂ ‘ಆರ್ಬಿಟರ್ ಹೈ-ರೆಸೊಲ್ಯೂಷನ್ ಕ್ಯಾಮರಾ’ (ಒಎಚ್‌ಆರ್‌ಸಿ)ಗಳು ಆರ್ಬಿಟರ್ ಬಳಿ ಇರುವುದರಿಂದ ಚಂದ್ರನ ಮೇಲ್ಮೈನ ತ್ರಿ-ಡಿ ಫೋಟೊಗಳನ್ನು ತೆಗೆಯಬಹುದು. 14 ದಿನಗಳ ಅವಧಿಯಲ್ಲಿ ರೋವರ್ ಮಾಡುತ್ತಿದ್ದುದು ಇದೇ ಕೆಲಸವನ್ನು!
ಇವುಗಳನ್ನೆಲ್ಲ ಗಮನಿಸಿದರೆ ಭಾರತವನ್ನು ಶೋಕಾಚರಣೆಗೆ ತಳ್ಳುವಷ್ಟು ಕರಾಳ ವೈಫಲ್ಯ ಇದಾಗಿರಲಿಲ್ಲ. ಆದರೆ ಲ್ಯಾಂಡರ್ ಮೂಲಕ ಚಂದ್ರನಲ್ಲಿ ಇಳಿಯಲಿದ್ದ ರೋವರ್ ಕಳುಹಿಸಲಿದ್ದ ಚಂದ್ರನೆದೆಯ ಮೊದಲ ಫೋಟೊವನ್ನು ತುತ್ತೂರಿ ಮಾಧ್ಯಮಗಳ ಮುಂದೆ ತಾನೇ ಅನಾವರಣ ಮಾಡಿ, ಸ್ವತಃ ಕ್ಲಿಕ್ಕಿಸಿಕೊಂಡು ಬಂದಂತೆ ವಿಜ್ಞಾನಿಗಳ ಯಶಸ್ಸನ್ನು ಹೈಜಾಕ್ ಮಾಡಲು ಹವಣಿಸಿದ್ದ ಪ್ರಧಾನಿಯವರಿಗೆ ಖಂಡಿತ ನಿರಾಸೆ ಆಗಿದೆ. 1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಭಾರತದ ಮೊದಲ ಗಗನಯಾತ್ರಿಯಾದ ರಾಕೇಶ್ ಶರ್ಮಾ ಅವರ ಜೊತೆ ಬಾಹ್ಯಾಕಾಶ ನಿಲ್ದಾಣದಿಂದಲೇ ನೇರವಾಗಿ ಟೆಲಿವಿಷನ್ ಮಾತುಕತೆ ನಡೆಸಿ ‘‘ಅಂತರಿಕ್ಷದಿಂದ ಭಾರತ ಹೇಗೆ ಕಾಣಿಸುತ್ತಿದೆ’’ ಅಂತ ಕೇಳಿದ್ದು, ಅದಕ್ಕೆ ರಾಕೇಶ್ ಶರ್ಮಾ ‘‘ಸಾರೇ ಜಹಾಂಸೆ ಅಚ್ಛಾ’’ ಅಂತ ಉತ್ತರ ಕೊಟ್ಟ ಲೆಜೆಂಡ್ರಿ ಸಂಭಾಷಣೆ ಮೋದಿಯವರನ್ನೂ ಚಂದ್ರನ ಮೊದಲ ಫೋಟೊಕ್ಕಾಗಿ ಕಾತುರಗೊಳಿಸಿತ್ತೇನೊ. ಆ ಕಾತರ ಶೇ.5ರ ವೈಫಲ್ಯದಿಂದ ನಿರಾಸೆಯಾಯ್ತು. ಆ ನಿರಾಸೆಯನ್ನೇ ಅವರು ಇಡೀ ಯೋಜನೆಯ ವೈಫಲ್ಯ ಎಂದು ಬಿಂಬಿತವಾಗುವಂತೆ ವರ್ತಿಸಿದರು. ಇಲ್ಲದೇ ಹೋಗಿದ್ದರೆ, ಅಂತಹ ಸಂದರ್ಭದಲ್ಲಿ ತನ್ನ ತಂಡದ ಜೊತೆ ನಿಂತು ವಿಶ್ವಾಸ ತುಂಬುವ ಕೆಲಸ ಮಾಡಬೇಕಿದ್ದ, ಇಸ್ರೋ ಅಧ್ಯಕ್ಷರೇ ಪ್ರಭುತ್ವದ ಮುಂದೆ ಕಣ್ಣೀರಿಡಬೇಕಾದ ಒತ್ತಡದ ವಾತಾವರಣ ಇಸ್ರೋ ಆವರಣದಲ್ಲಿ ಸೃಷ್ಟಿಯಾಗುತ್ತಿರಲಿಲ್ಲ.
ಅಂದಹಾಗೆ, ಇಸ್ರೋದಲ್ಲಿ ಶೋಕ ಮಡುಗಟ್ಟುವುದಕ್ಕೆ ಸುಮಾರು ಐದು ತಿಂಗಳ ಹಿಂದೆ, 11 ಜುಲೈ 2019ರಂದು, ಇಸ್ರೇಲ್‌ನ ಬಾಹ್ಯಾಕಾಶ ಸಂಸ್ಥೆ (ಇಸ್ರ್-ಐ.ಎಲ್) ಉಡಾಯಿಸಿದ್ದ ‘ಬೇರ್‌ಶೀಟ್’ ಎಂಬ ಲ್ಯಾಂಡರ್ ಕೂಡಾ ಸಾಫ್ಟ್ ಲ್ಯಾಂಡಿಂಗ್ ಮಾಡಲಾಗದೆ, ಚಂದ್ರನ ನೆಲಕ್ಕೆ ಅಪ್ಪಳಿಸಿ ಪತನವಾಗಿತ್ತು. ಅಷ್ಟೇ ಅಲ್ಲ, ಅಮೆರಿಕ, ಚೀನಾ, ರಶ್ಯ ಹೊರತಾಗಿ ಮತ್ತ್ಯಾವ ದೇಶಗಳ ಲ್ಯಾಂಡರ್‌ಗಳೂ ಚಂದ್ರನಲ್ಲಿ ಯಶಸ್ವಿಯಾಗಿ ಇಳಿದಿಲ್ಲ. ಇಂತಹ ಸಂಗತಿಗಳೂ ಅವತ್ತು ನಮ್ಮ ವಿಜ್ಞಾನಿಗಳ ಬಹುಪಾಲು ಯಶಸ್ವಿ ಸಾಹಸವನ್ನು ಸಂಭ್ರಮಿಸಲು ನಮಗೆ ಪ್ರೇರಣೆಯಾಗಬೇಕಿತ್ತು. ಆದರೆ ‘ಮೋದಿಯಾನ’ದ ಸೋಲಿನಿಂದಾಗಿ ನಾವು ‘ಚಂದ್ರಯಾನ’ದ ಬಹುಪಾಲು ಗೆಲುವಿನಿಂದಲೂ ವಂಚಿತರಾದೆವು.

Writer - ಪ್ರತಾಪ್ ಸೂರ್ಯತೇಜ್

contributor

Editor - ಪ್ರತಾಪ್ ಸೂರ್ಯತೇಜ್

contributor

Similar News

ಜಗದಗಲ
ಜಗ ದಗಲ