ಶಿವಮೊಗ್ಗ ತಾಲೂಕು ವಿಭಜನೆಗೆ ಹೆಚ್ಚುತ್ತಿರುವ ಒತ್ತಡ: ಪ್ರತ್ಯೇಕ ನಗರ-ಗ್ರಾಮಾಂತರ ತಾಲೂಕು ರಚನೆಗೆ ಆಗ್ರಹ

Update: 2019-09-14 18:40 GMT

ಶಿವಮೊಗ್ಗ, ಸೆ. 14: ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಶಿವಮೊಗ್ಗ ತಾಲೂಕು ವಿಭಜಿಸಿ, ಪ್ರತ್ಯೇಕ ನಗರ ಹಾಗೂ ಗ್ರಾಮಾಂತರ ತಾಲೂಕು ರಚಿಸಬೇಕೆಂಬ ಕೂಗು ದಿನದಿಂದ ದಿನಕ್ಕೆ ಕಾವೇರಲಾರಂಭಿಸಿದೆ. ಪ್ರಸ್ತುತ ಜಿಲ್ಲೆಯವರೇ ಆದ ಬಿ.ಎಸ್.ಯಡಿಯೂರಪ್ಪ ಸಿಎಂ ಆದ ನಂತರ, ಪ್ರತ್ಯೇಕ ತಾಲೂಕು ರಚನೆ ಪ್ರಸ್ತಾಪ ಮತ್ತೆ ಚರ್ಚೆಯ ಮುನ್ನೆಲೆಗೆ ಬರುವಂತಾಗಿದೆ. 

ಶಿವಮೊಗ್ಗ ನಗರ ಹಾಗೂ ತಾಲೂಕಿನ ಜನಸಂಖ್ಯೆ, ಸರಿಸುಮಾರು 4 ರಿಂದ 5 ಲಕ್ಷದ ಆಜುಬಾಜಿನಲ್ಲಿದೆ. ಶಿವಮೊಗ್ಗ ನಗರದಲ್ಲಿಯೇ 3.50 ಲಕ್ಷಕ್ಕೂ ಹೆಚ್ಚು ಜನದಟ್ಟಣೆಯಿದೆ. 9 ಹೋಬಳಿ ಕೇಂದ್ರಗಳಿದ್ದು, ಇದರಲ್ಲಿ 5 ಕಡೆ ನಾಡ ಕಚೇರಿಗಳಿವೆ. ವಿಶಾಲ ವ್ಯಾಪ್ತಿ ಹೊಂದಿದೆ. ತಾಲೂಕು ವ್ಯಾಪ್ತಿಯ ಕೆಲ ಗ್ರಾಮಗಳು ಪಟ್ಟಣಗಳ ರೀತಿಯಲ್ಲಿ ಅಭಿವೃದ್ದಿ ಹೊಂದುತ್ತಿವೆ. ಆರ್ಥಿಕ, ಕೈಗಾರಿಕಾ, ಕೃಷಿ ಸೇರಿದಂತೆ ಹಲವು ವಾಣಿಜ್ಯ-ಉದ್ಯಮದಲ್ಲಿ ಮುಂದಿದೆ. 

ಇಷ್ಟೊಂದು ಜನದಟ್ಟಣೆ, ಕಾರ್ಯಭಾರದ ಒತ್ತಡವಿರುವ ಶಿವಮೊಗ್ಗ ತಾಲೂಕಿನ ಜವಾಬ್ದಾರಿಯನ್ನು ಓರ್ವ ತಹಶೀಲ್ದಾರ್ ನಿರ್ವಹಿಸಬೇಕಾಗಿದೆ. ಇದರಿಂದ ಸಹಜವಾಗಿಯೇ ಇಲ್ಲಿನ ತಹಶೀಲ್ದಾರ್ ಮೇಲೆ ಕಾರ್ಯಭಾರದ ಒತ್ತಡ ಹೆಚ್ಚಿರುತ್ತದೆ. ಹಲವು ಆಡಳಿತಾತ್ಮಕ ಸಮಸ್ಯೆಗಳು ಸೃಷ್ಟಿಯಾಗುವಂತಾಗುತ್ತದೆ. ಇದರ ನೇರ ಪರಿಣಾಮ ಜನಸಾಮಾನ್ಯರ ಮೇಲೆ ಬೀರುತ್ತದೆ. 

ನಗರ - ಗ್ರಾಮಾಂತರ ಪ್ರತ್ಯೇಕ ತಾಲೂಕು ರಚನೆಯಾದರೆ, ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ಸುಗಮ ಆಡಳಿತ ನಿರ್ವಹಣೆ ಸಾಧ್ಯವಾಗಲಿದೆ. ಸರ್ಕಾರದಿಂದ ಲಭ್ಯವಾಗುವ ಅನುದಾನ, ಸೌಲಭ್ಯಗಳು ಹೆಚ್ಚಾಗಲಿದೆ. ವಿವಿಧ ಯೋಜನೆಗಳಡಿ, ಇನ್ನಷ್ಟು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕುತ್ತದೆ ಎಂಬುವುದು ಆಡಳಿತ ವರ್ಗದವರೇ ಅಭಿಪ್ರಾಯಪಡುತ್ತಾರೆ. 

ಶಿವಮೊಗ್ಗ ತಾಲೂಕು ವಿಭಜನೆಗೆ ಸಂಬಂಧಿಸಿದಂತೆ ನಗರ ಹಾಗೂ ಗ್ರಾಮೀಣ ಭಾಗದ ವಿವಿಧ ರಾಜಕೀಯ ಪಕ್ಷ, ಸಂಘಸಂಸ್ಥೆಗಳ ಪ್ರಮುಖರು ಪ್ರತ್ಯೇಕ ನಗರ-ಗ್ರಾಮೀಣ ತಾಲೂಕು ರಚನೆಯತ್ತ ಒಲವು ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಸರ್ಕಾರ ಆದ್ಯ ಗಮನಹರಿಸಬೇಕು ಎಂದು ಆಗ್ರಹಿಸುತ್ತಾರೆ. 

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ರವರು ಕೂಡ ತಾಲೂಕು ವಿಭಜನೆ ಪ್ರಸ್ತಾಪದ ಪರ ನಿಲುವು ಹೊಂದಿದ್ದಾರೆ. ಪ್ರತ್ಯೇಕ ಗ್ರಾಮಾಂತರ ತಾಲೂಕು ರಚಿಸಬೇಕೆಂದು ಹಾಗೂ ಪ್ರತ್ಯೇಕ ತಾಲೂಕು ರಚನೆ ಮಾಡುವವರೆಗೂ, ಶಿವಮೊಗ್ಗ ನಗರ ಮತ್ತು ಗ್ರಾಮಾಂತರಕ್ಕೆ ಪ್ರತ್ಯೇಕ ತಹಶೀಲ್ದಾರ್ ಗಳ ನೇಮಕ ಮಾಡಬೇಕೆಂದು ಪತ್ರ ಬರೆಯಲು ಮುಂದಾಗಿದ್ದಾರೆ. 

ಒಟ್ಟಾರೆ ಜಿಲ್ಲೆಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ, ಶಿವಮೊಗ್ಗ ತಾಲೂಕು ವಿಭಜನೆ ಪ್ರಸ್ತಾಪ ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವ ಕ್ರಮಕೈಗೊಳ್ಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. 

ಗ್ರಾಮಾಂತರ ತಾಲೂಕು ಅವಶ್ಯಕ: ಜಿ.ಪಂ. ಸದಸ್ಯ ವೀರಭದ್ರಪ್ಪ ಪೂಜಾರ್
ಶಿವಮೊಗ್ಗ ತಾಲೂಕು ವಿಭಜಿಸಿ ಪ್ರತ್ಯೇಕ ನಗರ ಹಾಗೂ ಗ್ರಾಮಾಂತರ ತಾಲೂಕು ರಚನೆ ಮಾಡುವುದು ಅತ್ಯಂತ ಅಗತ್ಯವಾಗಿದೆ. ಇದರಿಂದ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಪ್ರಸ್ತುತ ಶಿವಮೊಗ್ಗ ತಾಲೂಕಿನ ಜನಸಂಖ್ಯೆ-ವಿಸ್ತೀರ್ಣ ಗಮನಿಸಿದರೆ, ತಾಲೂಕು ವಿಭಜನೆ ಎಷ್ಟು ಅವಶ್ಯಕ ಎಂಬುವುದರ ಅರಿವಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಗಮನದಲ್ಲಿಟ್ಟುಕೊಂಡು ತಾಲೂಕು ರಚನೆಯಾದರೆ ಸಾಕಷ್ಟು ಅನುಕೂಲವಾಗಲಿದೆ. ಸೌಲಭ್ಯ ಪಡೆಯಲು ನಾಗರೀಕರು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಆದ್ಯ ಗಮನಹರಿಸಬೇಕು. ಕಾಲಮಿತಿಯಲ್ಲಿ ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು' ಎಂದು ಜಿಲ್ಲಾ ಪಂಚಾಯತ್ ಸದಸ್ಯ ವೀರಭದ್ರಪ್ಪ ಪೂಜಾರ್ ಅಭಿಪ್ರಾಯಪಟ್ಟಿದ್ದಾರೆ. 

ಶಿವಮೊಗ್ಗ ನಗರ ತಾಲೂಕಾಗಬೇಕು : ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್
ಶಿವಮೊಗ್ಗ ನಗರದ ಜನಸಂಖ್ಯೆ 3.50 ಲಕ್ಷಕ್ಕೂ ಅಧಿಕವಿದೆ. ನಗರವನ್ನೇ ಕೇಂದ್ರವಾಗಿಟ್ಟುಕೊಂಡು ತಾಲೂಕು ರಚನೆಗೆ ಅಗತ್ಯವಾದ ಎಲ್ಲ ಅರ್ಹತೆಯೂ ಇದೆ. ತಾಲೂಕು ವಿಭಜಿಸಿ ನಗರ ಹಾಗೂ ಗ್ರಾಮಾಂತರ ಪ್ರತ್ಯೇಕ ತಾಲೂಕು ರಚಿಸಿದರೆ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಹೆಚ್ಚಾಗಲಿದೆ. ನಾಗರೀಕರು ಕಚೇರಿಗೆ ಅಲೆದಾಡುವುದು ತಪ್ಪಲಿದೆ. ಕಾಲಮಿತಿಯಲ್ಲಿ ಕೆಲಸಕಾರ್ಯ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ' ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ ರವರು ತಿಳಿಸುತ್ತಾರೆ.

Writer - ವರದಿ: ಬಿ.ರೇಣುಕೇಶ್

contributor

Editor - ವರದಿ: ಬಿ.ರೇಣುಕೇಶ್

contributor

Similar News