ಸೇಕ್ರೆಡ್ ಗೇಮ್ಸ್ ಮತ್ತು ವರ್ತಮಾನ

Update: 2019-09-15 07:22 GMT

ಅಮೆರಿಕ ಮೂಲದ ನೆಟ್ ಫ್ಲಿಕ್ಸ್ ಚಿತ್ರ ನಿರ್ಮಾಣ ಸಂಸ್ಥೆ ತಯಾರಿಸಿರುವ, ಭಾರತೀಯ ಮೂಲದ ವಿಕ್ರಂ ಚಂದ್ರ ಕಾದಂಬರಿ ಆಧಾರಿತ ‘ಸೇಕ್ರೆಡ್ ಗೇಮ್ಸ್’ ಎಂಬ ವೆಬ್ ಸೀರೀಸ್ ಸದ್ಯಕ್ಕೆ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಅದರ ಒಂದೊಂದು ಸಂಭಾಷಣೆಯೂ, ಒಂದೊಂದು ದೃಶ್ಯವೂ, ನೋಡುಗರ ಮನಸ್ಥಿತಿಗೆ ತಕ್ಕಂತೆ ಬದಲಾಗಿ; ವ್ಯಂಗ್ಯ, ಲೇವಡಿ, ಹಾಸ್ಯದ ರೂಪ ಪಡೆದು ವೈರಲ್ ಆಗುತ್ತಿದೆ. ‘ಸೇಕ್ರೆಡ್ ಗೇಮ್ಸ್’ ಮೊದಲ ಕಂತು ಪ್ರಸಾರವಾದಾಗ ಪ್ರೇಕ್ಷಕರು ಹುಚ್ಚೆದ್ದು ನೋಡಿದರು. ಪ್ರಜ್ಞಾವಂತ ಪ್ರೇಕ್ಷಕರು ಎರಡನೇ ಕಂತು ಪ್ರಸಾರವಾಗುವುದು ಕಷ್ಟ ಎಂದರು. ಅವರು ಹೇಳಿದಂತೆ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಯಿತು. ಅಷ್ಟರೊಳಗೆ ದೇಶದ ಲೋಕಸಭಾ ಚುನಾವಣೆ ಮುಗಿದಿತ್ತು. ಚುನಾವಣೆಗೂ ಈ ವೆಬ್ ಸೀರೀಸ್ ಗೂ ಏನು ಸಂಬಂಧ? ಹಾಗಾದರೆ ಅದರಲ್ಲೇನಿದೆ?

‘ಸೇಕ್ರೆಡ್ ಗೇಮ್ಸ್’ನಲ್ಲಿ ಮುಂಬೈ ಭೂಗತ ಲೋಕದ ಕತೆ ಇದೆ. ಭೂಗತ ಜಗತ್ತಿನೊಂದಿಗೆ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮಿಲಾಕತ್ತಿದೆ. ಹಿಂದೂ-ಮುಸ್ಲಿಂ ಕೋಮುಗಲಭೆ ಥಳಕು ಹಾಕಿಕೊಂಡಿದೆ. ಜೊತೆಗೆ ರಾಜ ಕಾರಣ ದೊಂದಿಗೆ ಧರ್ಮವೂ ಬೆಸೆದುಕೊಂಡಿದೆ. ಇದೆಲ್ಲಕ್ಕೂ ಮೀರಿ ಕಲಿಯುಗವನ್ನು ಮುಗಿಸಿ ಸತ್ಯಯುಗವನ್ನು ಪ್ರತಿಷ್ಠಾಪಿ ಸಲು ಬಾಂಬ್ ಸ್ಫೋಟಿಸುವ ಹುನ್ನಾರವಿದೆ. ಆ ಹುನ್ನಾರಕ್ಕೆ ಕೆಲ ಕಿಡಿಗೇಡಿಗಳು ಕೈ ಜೋಡಿಸುವ ವಿಚಿತ್ರ ಷಡ್ಯಂತ್ರವಿದೆ. ಅದು ನೇರವಾಗಿ ಬಿಜೆಪಿಯನ್ನು ಗುರಿ ಮಾಡಿದೆ. ಆ ಕಾರಣದಿಂದ ಬಿಜೆಪಿ, ಚುನಾವಣೆ ಮುಗಿದ ಮೇಲೆ ಎರಡನೇ ಕಂತನ್ನು ಬಿಡುಗಡೆ ಮಾಡಲು ಅನುಮತಿ ನೀಡಿತು. ಅಥವಾ ಆ ವೆಬ್ ಸೀರೀಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ರಿಲಯನ್ಸ್ ಮಾರ್ಕೆಟಿಂಗ್ ಸಂಸ್ಥೆಗೆ ತಾಕೀತು ಮಾಡಿತು. ಅದರಂತೆ, ಮೋದಿ ಅಧಿಕಾರಕ್ಕೆ ಏರಿದ ಮೇಲೆ, ಆಗಸ್ಟ್ 15ರಂದು ‘ಸೇಕ್ರೆಡ್ ಗೇಮ್ಸ್ ಭಾಗ-2’ ಬಿಡುಗಡೆಯಾಯಿತು. ಇದು ಕೂಡ ಸಾಕಷ್ಟು ಸುದ್ದಿ ಮಾಡಿತು. ಹಾಗೆ ನೋಡಿದರೆ, 2006ರಲ್ಲಿ ಬಂದ ವಿಕ್ರಂ ಚಂದ್ರ ಅವರ ‘ಸೇಕ್ರೆಡ್ ಗೇಮ್ಸ್’ ಕಾದಂಬರಿ ದೇಶದ ಸದ್ಯದ ಸ್ಥಿತಿಯನ್ನು ಕಟ್ಟಿಕೊಡುವ ಕೃತಿಯಾಗಿತ್ತು. ಹಾಗೆಯೇ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳ ನಿಜಬಣ್ಣವನ್ನು ಬಯಲಿಗಿಟ್ಟಿತ್ತು. ಆ ಮುಖಾಂತರ ವಿವಾದ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿತ್ತು. ಸಾಹಿತ್ಯ ಲೋಕ ಸಲೀಸಾಗಿ ಸ್ವೀಕರಿಸಿದ ಈ ಕಾದಂಬರಿಯನ್ನು ಭಾರತೀಯ ಸಿನಿಜಗತ್ತು ಕಡೆಗಣ್ಣಿನಿಂದ ಕಂಡು ನಿರ್ಲಕ್ಷಿಸಿತ್ತು. ಆದರೆ ಜಾಗತೀಕರಣದ ಫಲವೋ ಅಥವಾ ವೆಬ್ ಸೀರೀಸ್‌ಗೆ ಸೆನ್ಸಾರ್‌ನ ಸಮಸ್ಯೆ ಇಲ್ಲವೆಂಬ ಭಂಡ ಧೈರ್ಯವೋ ಅಥವಾ ಎಲ್ಲರನ್ನು ಎಲ್ಲವನ್ನು ಕೊಳ್ಳಬಹುದಾದ ಕೋಟಿಗಟ್ಟಲೆ ವಿದೇಶಿ ಹಣವೋ, ಅಮೆರಿಕ ಮೂಲದ ನೆಟ್ ಫ್ಲಿಕ್ಸ್ ಚಿತ್ರನಿರ್ಮಾಣ ಸಂಸ್ಥೆ ‘ಸೇಕ್ರೆಡ್ ಗೇಮ್ಸ್’ ಕತೆಯನ್ನು ವೆಬ್ ಸೀರೀಸ್‌ಗೆ ಅಳವಡಿಸಲು ಮುಂದಾಯಿತು. ಆಗ ಭಾರತೀಯ ಚಿತ್ರಜಗತ್ತಿನ ದಿಗ್ಗಜರು ಹುಬ್ಬೇರಿಸಿದ್ದರು. ‘ಸೇಕ್ರೆಡ್ ಗೇಮ್ಸ್’ ಹೇಳಿಕೇಳಿ ಭೂಗತ ಜಗತ್ತು, ಸೆಕ್ಸ್, ಕ್ರೈಮ್ ನ ರೋಚಕತೆಯುಳ್ಳ ಕತೆ. ಇದರಲ್ಲಿ ಕಲಿಯುಗವನ್ನು ಕೊನೆಗೊಳಿಸಿ ಸತ್ಯಯುಗ ಸ್ಥಾಪಿಸಲು ಗುರೂಜಿಯನ್ನು ಸೃಷ್ಟಿಸಲಾಗಿದೆ. ಆ ಗುರೂಜಿಗೆ ರಾಜಕಾರಣಿಗಳು, ಅಧಿಕಾರಿಗಳು, ಭೂಗತ ದೊರೆಗಳು, ಮಾದಕದ್ರವ್ಯದ ಕಳ್ಳ ಸಾಗಣೆ, ಲೈಂಗಿಕತೆ, ಧರ್ಮ.. ಹೀಗೆ ಎಲ್ಲವನ್ನೂ ಲಿಂಕ್ ಮಾಡಲಾಗಿದೆ. ಹಾಗೆಯೇ ಎಲ್ಲದಕ್ಕೂ ಧರ್ಮವೇ ದಿಕ್ಕು ತೋರಲಿದೆ ಎಂಬುದನ್ನು ಗುರೂಜಿಯಿಂದ ಹೇಳಿಸಲಾಗಿದೆ. ಇಂತಹ ಕಥಾವಸ್ತುವಿನ ಚಿತ್ರಗಳನ್ನು ಭಾರತೀಯ ಚಿತ್ರರಂಗ ಈ ಹಿಂದೆಯೂ ಮಾಡಿದೆ. ಧರ್ಮ ಮತ್ತು ರಾಜಕಾರಣವನ್ನು ಸೂಕ್ಷ್ಮವಾಗಿ ತೆರೆಯ ಮೇಲೆ ತಂದಿದೆ. ಹೇಳಬೇಕಾದ್ದನ್ನು ಪರೋಕ್ಷವಾಗಿ ಹೇಳಿದೆ. ಆದರೆ ಈಗ ಈ ‘ಸೇಕ್ರೆಡ್ ಗೇಮ್ಸ್’ ವೆಬ್ ಸೀರೀಸ್‌ನಲ್ಲಿ ಎಲ್ಲವನ್ನು ಯಾವ ಅಡೆತಡೆಯೂ ಇಲ್ಲದೆ ತೋರಿಸಲಾಗಿದೆ. ಬಾಲಕನೊಬ್ಬ ಅನೈತಿಕ ಸಂಬಂಧ ಬೆಳೆಸಿದ ಅಮ್ಮನನ್ನೇ ಕೊಲ್ಲುವ ದೃಶ್ಯ, ಭೂಗತ ದೊರೆಯೊಬ್ಬ ಹುಡುಗಿಯೊಂದಿಗೆ, ಮಂಗಳಮುಖಿಯೊಂದಿಗೆ ಮತ್ತು ಪುರುಷನೊಂದಿಗೆ ಬೆತ್ತಲೆಯಾಗಿ ಕೂಡುವ ದೃಶ್ಯ, ಕಾನೂನನ್ನು ಕಸಕ್ಕಿಂತ ಕಡೆಯಾಗಿ ಕಾಣುವ ದೃಶ್ಯ, ಸಂತನ ಮುಖವಾಡ ಹೊತ್ತ ಧರ್ಮಗುರುವೇ ವಿನಾಶಕ್ಕೆ ಸ್ಕೆಚ್ ಹಾಕುವ ದೃಶ್ಯ.. ಯಾವುದಕ್ಕೂ ಕಡಿವಾಣವಿಲ್ಲ, ಸೆನ್ಸಾರ್ ಮಂಡಳಿಯ ಭಯವಿಲ್ಲ, ವಿದೇಶಿ ಸೀರೀಸ್‌ಗಳ ಮುಂದುವರಿಕೆಯೇ ಎಲ್ಲ. ಇಂತಹ ವಿವಾದಾತ್ಮಕ ವೆಬ್ ಸೀರೀಸ್‌ನ ಮೊದಲ ಭಾಗವನ್ನು ವಿಕ್ರಮಾದಿತ್ಯ ಮೋಟ್ವಾನೆ ಮತ್ತು ಎರಡನೇ ಭಾಗವನ್ನು ನೀರಜ್ ಘಾಯ್ವಾನ್ ಜೊತೆ ಸೇರಿ ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಮುಖ್ಯಪಾತ್ರದಲ್ಲಿ ಸೈಫ್ ಅಲಿ ಖಾನ್, ನವಾಝುದ್ದೀನ್ ಸಿದ್ದೀಕಿ, ಪಂಕಜ್ ತ್ರಿಪಾಠಿ, ಕಲ್ಕಿ ಕೋಲ್ಹಿನ್, ರಣವೀರ್ ಶೋರೆ, ರಾಧಿಕಾ ಆಪ್ಟೆ, ಕುಕು ನಟಿಸಿದ್ದಾರೆ. ಇವರಷ್ಟೇ ಅಲ್ಲದೆ, ಹೆಸರು ಮಾಡದ, ತೆರೆಯ ಮರೆಯಲ್ಲಿದ್ದ ಹಲವಾರು ಪ್ರತಿಭಾವಂತ ನಟ-ನಟಿಯರು ಈ ಧಾರಾವಾಹಿಯಲ್ಲಿ ನಟಿಸುವ ಮೂಲಕ, ನಾವೂ ನಟಿಸುತ್ತೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ‘ಸೇಕ್ರೆಡ್ ಗೇಮ್ಸ್’ ಎಂದಾಕ್ಷಣ ನೆನಪಿಗೆ ಬರುವ ಗಣೇಶ್ ಗಾಯ್ತ್‌ಂಡೆ ಪಾತ್ರವನ್ನು ನಿರ್ವಹಿಸಿರುವ ನವಾಝುದ್ದೀನ್ ಸಿದ್ದೀಕಿ, ತಾನೊಬ್ಬ ಅಪ್ರತಿಮ ಕಲಾವಿದ ಎಂಬುದನ್ನು ಪ್ರತಿ ದೃಶ್ಯಲ್ಲೂ ಸಾಬೀತು ಮಾಡಿದ್ದಾರೆ. ನೇಮ ನಿಷ್ಠೆಯ ಬ್ರಾಹ್ಮಣ ಕುಟುಂಬದ ಬಾಲಕನಾಗಿ, ಮುಂಬೈನ ಸ್ಲಮ್ಮಿನ ಪುಡಿ ರೌಡಿಯಾಗಿ, ಕ್ಷಣಾರ್ಧದಲ್ಲಿ ಎದುರಾಳಿಯ ರುಂಡ ಚೆಂಡಾಡುವ ಭಾವನೆಗಳೇ ಇಲ್ಲದ ಭಂಡನಾಗಿ, ಪೋಲಿ ಮಾತುಗಳಿಗಾಗಿ, ಹಸಿಬಿಸಿ ಬೆತ್ತಲೆ ದೃಶ್ಯಗಳಿಗಾಗಿ, ಭೂಗತ ದೊರೆಯಾಗಿ ಮೆರೆದಿದ್ದಾರೆ. ಮುಂಬೈ, ಕೆನ್ಯಾ, ಕ್ರೋವೇಶಿಯಾಗಳಲ್ಲಿ ಓಡಾಡಿದ್ದಾರೆ.

ಗಣೇಶ್ ಗಾಯ್ತಂಡೆ ಪಾತ್ರಕ್ಕೆ ಪ್ರತಿಸ್ಪರ್ಧಿಯಾಗಿ ಪೊಲೀಸ್ ಅಧಿಕಾರಿ ಸರ್ತಾಜ್ ಸಿಂಗ್ ಪಾತ್ರ ಸೃಷ್ಟಿಸಲಾಗಿದೆ. ರೌಡಿ ಮತ್ತು ಪೊಲೀಸ್ ಪಾತ್ರಗಳನ್ನು ಮುಖಾಮುಖಿಯಾಗಿಸಲಾಗಿದೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸೈಫ್ ಅಲಿ ಖಾನ್, ಧೈರ್ಯಸ್ಥ ಅಧಿಕಾರಿಯಾಗಿ, ಕರುಣೆ-ಕಠೋರತೆಗಳ ಸಂಗಮವಾಗಿ, ಪಾಪ-ಪಾಪಿಗಳ ಪ್ರಾಯಶ್ಚಿತ್ತದಲ್ಲಿ ಒದ್ದಾಡುವ ವ್ಯಕ್ತಿಯಾಗಿ, ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದ ಅಧಿಕಾರಿಯಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಟರ್ಬನ್ ಸುತ್ತಿದ ಸಿಂಗ್ ಪಾತ್ರವೇ ಅವರಾಗಿದ್ದಾರೆ. ಈ ಪಾತ್ರದ ನಟನೆಗಾಗಿ ಮೊದಲ ಕಂತಿಗೆ ಮೂರು ಕೋಟಿ ರೂ. ಸಂಭಾವನೆ ಪಡೆದ ಸೈಫ್, ಎರಡನೇ ಕಂತಿಗೆ ಆರು ಕೋಟಿ ರೂ. ಪಡೆದ ಸುದ್ದಿ ಇದೆ. ಮುಖ್ಯಪಾತ್ರಗಳಾದ ಸೈಫ್ ಅಲಿ ಖಾನ್ ಮತ್ತು ನವಾಝುದ್ದೀನ್ ಸಿದ್ದೀಕಿ- ಇವರಿಬ್ಬರಿಗೂ ಸಡ್ಡು ಹೊಡೆಯುವಂತೆ ಗುರೂಜಿ ಪಾತ್ರ ನಿರ್ವಹಿಸಿರುವ ಪಂಕಜ್ ತ್ರಿಪಾಠಿಯಂತೂ, ಯಾವುದೇ ಪಾತ್ರ ಕೊಟ್ಟರೂ ಸೈ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇವರಿಗಷ್ಟೇ ಅಲ್ಲ, ಹೆಸರಿಲ್ಲದ ನಟ-ನಟಿಯರಿಗೂ ಕೇಳಿದಷ್ಟು ದುಡ್ಡು ಕೊಡಲಾಗಿದೆ. ಅವರೂ ಕೂಡ ಕೊಟ್ಟ ದುಡ್ಡಿಗೆ ಮೋಸ ಮಾಡದೆ, ಪಾತ್ರಗಳನ್ನು ಆವಾಹಿಸಿಕೊಂಡು, ಮೈಮೇಲೆ ದೆವ್ವ ಬಂದಂತೆ ಅಭಿನಯಿಸಿದ್ದಾರೆ. ಉದಾಹರಣೆಗೆ ಪೊಲೀಸ್ ಪೇದೆ ಪಾತ್ರಧಾರಿ ಕಾಟೇಕರ್ ಆಗಿ ಜಿತೇಂದ್ರ ಜೋಷಿ, ಗಲ್ಲಿ ರೌಡಿ ಬಂಟಿಯಾಗಿ ಜತಿನ್ ಸರ್ನ, ಪೊಲೀಸ್ ಅಧಿಕಾರಿ ಪಾರೂಲ್ಕರ್ ಆಗಿ ನೀರಜ್ ಕಬಿ, ಮಂಗಳಮುಖಿಯಾಗಿ ಕುಕು, ಸುಭದ್ರ ಪಾತ್ರಧಾರಿ ರಾಜಶ್ರೀ ದೇಶಪಾಂಡೆ, ತ್ರಿವೇದಿಯಾಗಿ ಚಿತ್ತರಂಜನ್ ತ್ರಿಪಾಠಿ, ಟೀ ಸ್ಟಾಲ್ ಮಾಲಕಿ ಶಾಂತಾ ಭಾಯ್ ಆಗಿ ಶಾಲಿನಿ ವತ್ಸ, ಮಿನಿಸ್ಟರ್ ಬ್ಹೋಂಸ್ಲೆಯಾಗಿ ಗಿರೀಶ್ ಕುಲಕರ್ಣಿ, ಮಾತು ಆಗಿ ವಿಕ್ರಂ ಕೋಚಾರ್, ಡಾನ್ ಇಸಾ ಆಗಿ ಸೌರಬ್ ಸಚ್ದೇವ, ರಾ ಏಜೆಂಟ್ ಜೋಜೋ ಆಗಿ ಅಮೃತಾ ಸುಭಾಷ್- ಇವರೆಲ್ಲರೂ ಭವಿಷ್ಯದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವ ಸುಳಿವು ನೀಡುತ್ತಾರೆ. ಕುತೂಹಲಕರ ಸಂಗತಿ ಎಂದರೆ, ‘ಸೇಕ್ರೆಡ್ ಗೇಮ್ಸ್’ ಎಂಬ ಕಾದಂಬರಿಯನ್ನು ವೆಬ್ ಸೀರೀಸ್ ಮಾಡಲು ಮುಂದಾದಾಗ, ಭಾರತೀಯ ಚಿತ್ರರಂಗದ ಅತಿರಥ ಮಹಾರಥರು ಹುಬ್ಬೇರಿಸಿದ್ದರು. ಅಮೆರಿಕದ ನೆಟ್ ಫ್ಲೆಕ್ಸ್ ಸಂಸ್ಥೆ ಭಾರತೀಯ ಕಲಾವಿದರು, ತಂತ್ರಜ್ಞರನ್ನೇ ಬಳಸಿಕೊಂಡು ಧಾರಾವಾಹಿ ನಿರ್ಮಿಸಿದಾಗ, ಹುಬ್ಬೇರಿಸಿದವರೇ ‘ಅವಕಾಶ’ ಎಂದು ವ್ಯಾಖ್ಯಾನಿಸಿದರು. ಆ ವೆಬ್ ಸೀರೀಸ್‌ಗೆ ಭಾರತೀಯರೇ ಪ್ರೇಕ್ಷಕರಾದಾಗ, ಜನರೆ ಮನರಂಜನೆಯ ಮಂತ್ರ ಜಪಿಸಿದರು. ಅಂಬಾನಿಯ ರಿಲಯನ್ಸ್ ಮಾರ್ಕೆಟಿಂಗ್ ಜವಾಬ್ದಾರಿ ಹೊತ್ತುಕೊಂಡಾಗ, ಕಾಸು ನಮ್ಮವರಿಗೇ ಹೋಗುತ್ತದಲ್ಲ ಎಂದು ತಮಗೆ ತಾವೇ ಸಮಾಧಾನಿಸಿಕೊಂಡರು. ಇದೆಲ್ಲ ಹೇಗಿದೆ ಎಂದರೆ, ಆರಿಸಿ ಕಳಿಸಿದ ಮೋದಿಯಿಂದ ದೇಶ ದಿಕ್ಕೆಟ್ಟ ಸ್ಥಿತಿಗೆ ಜಾರುತ್ತಿದ್ದರೂ, ಬಾಯಿ ಕಳೆದು ಮಾತನಾಡದ ಸ್ಥಿತಿ ತಲುಪಿರುವ ಭಾರತೀಯರಂತೆ ಅಥವಾ ಗೆದ್ದಾಗ ಮೋದಿ ಅಕೌಂಟಿಗೆ, ಸೋತಾಗ ನೆಹರೂ ಮೇಲೆ ಗೂಬೆ ಕೂರಿಸುವಂತೆ ಅಥವಾ ಮೋದಿ ಮೌನವಾಗಿದ್ದು, ಪರ-ವಿರೋಧ ಎರಡನ್ನೂ ಜನರೇ ಮಾತನಾಡುವಂತೆ!

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News