ಆರ್ಥಿಕ ಹಿಂಜರಿತದ ಸಮಸ್ಯೆಗೆ 'ನರೇಗಾ' ಉತ್ತರವಾಗಲಿದೆ

Update: 2019-09-16 07:12 GMT

ಕೇಂದ್ರ ಸರಕಾರವು ರಾಜಕೀಯದ ಸುಳಿಗೆ ಸಿಲುಕಿ, ದೇಶದ ಕಾರ್ಪೊರೇಟ್ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆಯೇ ಹೆಚ್ಚು ಗಮನಹರಿಸುವ ಬದಲು, ಗ್ರಾಮೀಣ ಆರ್ಥಿಕತೆ ಹಾಗೂ ಅಲ್ಲಿನ ಜನಸಮುದಾಯಗಳ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಆರ್‌ಬಿಐನಿಂದ ತಾನು ಪಡೆದಿರುವ 1.76 ಲಕ್ಷ ರೂ.ಯನ್ನು ಅದು ನರೇಗಾ ಯೋಜನೆಗಾಗಿ ಬಳಸಿಕೊಳ್ಳಬೇಕಾಗಿದೆ. ಇದರಿಂದ ಉದ್ಯೋಗಗಳು ಸೃಷ್ಟಿಯಾಗಲಿವೆ.

ಕೊನೆಗೂ ಸತ್ಯವೊಂದು ಅನಾವರಣಗೊಂಡಿದೆ. 2018-19ರ ಸಾಲಿನ ವಿತ್ತ ವರ್ಷದಲ್ಲಿ ದೇಶದ ಒಟ್ಟಾರೆ ನಿರುದ್ಯೋಗ ಪ್ರಮಾಣದಲ್ಲಿ ಶೇ.6.1ರಷ್ಟು ಏರಿಕೆಯಾಗಿದೆಯೆಂದು ನಿಯತಕಾಲಿಕ ಕಾರ್ಮಿಕ ಶಕ್ತಿ ಸಮೀಕ್ಷೆ (ಪಿಎಲ್‌ಎಫ್‌ಎಸ್) ಬಹಿರಂಗಪಡಿಸಿದ್ದು, ಇದು ಕಳೆದ 45 ವರ್ಷಗಳಲ್ಲೇ ಗರಿಷ್ಠವಾಗಿದೆ. ಕೇಂದ್ರ ಸರಕಾರವು ಪಿಎಲ್‌ಎಫ್‌ಎಸ್ ಸಮೀಕ್ಷೆಯನ್ನು ಹಳೆಯ ದತ್ತಾಂಶಗಳೊಂದಿಗೆ ಹೋಲಿಸಿದ್ದು, ಸಮೀಕ್ಷೆಯ ಫಲಿತಾಂಶಗಳ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿದೆ. ಆದಾಗ್ಯೂ ಕೇಂದ್ರ ಸರಕಾರದ ಆಂತರಿಕ ಆರ್ಥಿಕ ಸಲಹಾ ಸಮಿತಿಯ ಸದಸ್ಯರು ನಿರ್ದಿಷ್ಟವಾಗಿ ಹತಾಶಗೊಂಡಿರುವ ಆಟೊ ಉದ್ಯಮದ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸರಕಾರವು ಈ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸುವ ಅನಿವಾರ್ಯತೆಗೆ ಸಿಲುಕಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಆರ್ಥಿಕ ಹಿಂಜರಿತದ ಸಮಸ್ಯೆಯನ್ನು ಬಗೆಹರಿಸಲು ಆರು ಕ್ರಮಗಳನ್ನು ಪ್ರಕಟಿಸಿದ್ದರು. ಆದರೆ ಈ ಕ್ರಮಗಳು ಎಷ್ಟರ ಮಟ್ಟಿಗೆ ಫಲನೀಡಲಿದೆಯೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉದಾಹರಣೆಗೆ ಆಟೊಮೊಬೈಲ್ ಉದ್ಯಮದ ಮೇಲೆ ಸರಕಾರದ ಹೂಡಿಕೆಯನ್ನು ಹೆಚ್ಚಿಸಲು ನಿರ್ಮಲಾ ಸೀತಾರಾಮನ್ ಘೋಷಿಸಿದ ಪ್ಯಾಕೇಜ್ ಸೀಮಿತವಾದ ಪರಿಣಾಮವನ್ನಷ್ಟೇ ಬೀರಲಿದೆಯೆಂಬ ಟೀಕೆಗಳು ವ್ಯಕ್ತವಾಗಿದೆ.ಆಟೊಮೊಬೈಲ್ ಉದ್ಯಮವು 10 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಕಳೆದುಕೊಳ್ಳಲಿದೆಯೆಂದು ಎಚ್ಚರಿಕೆ ನೀಡಲಾಗಿದೆ.

 ಇಂತಹ ಅಸ್ಪಷ್ಟ ಪರಿಣಾಮಗಳ ಹೊರತಾಗಿಯೂ ವಿತ್ತ ಸಚಿವರಿಂದ ಆಗಿರುವ ಪ್ರಮುಖ ಲೋಪವೆಂದರೆ ಅವರು ಗ್ರಾಮೀಣ ಆರ್ಥಿಕತೆಯನ್ನು ಕಡೆಗಣಿಸಿರುವುದಾಗಿದೆ. ಅವರ ಪ್ರಸ್ತಾವಿತ ಕ್ರಮಗಳು ಮಾರುಕಟ್ಟೆಗಳು ಹಾಗೂ ಮಹಾನ್ ಶ್ರೀಮಂತರ ಮೇಲಿನ ಹೊಡೆತವನ್ನು ಕಡಿಮೆಗೊಳಿಸುವ ಉದ್ದೇಶದಿಂದಷ್ಟೇ ಕೂಡಿವೆ. ಆದರೆ ಗ್ರಾಮೀಣ ಜನರ ಮೇಲೆ ಆರ್ಥಿಕತೆಯ ಕುಂಠಿತದ ಪರಿಣಾಮವನ್ನು ಕಡಿಮೆಮಾಡಲು ಅಥವಾ ಅರಿತುಕೊಳ್ಳಲು ಯಾವುದೇ ಪ್ರಯತ್ನಗಳನ್ನು ಮಾಡಲಾಗಿಲ್ಲ. ಗ್ರಾಮೀಣ ಭಾರತದ ಇಂದಿನ ಪರಿಸ್ಥಿತಿಯು ಬಂಡೆ ಹಾಗೂ ಪ್ರಪಾತದ ನಡುವೆ ಸಿಕ್ಕಿ ಹಾಕಿಕೊಂಡಂತಾಗಿದೆ. ಕೃಷಿ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಕಡಿತವಾಗಿರುವುದನ್ನು ಪಿಎಲ್‌ಎಫ್‌ಎಸ್ ಸಮೀಕ್ಷೆಯು ಬಹಿರಂಗಪಡಿಸಿದೆ. ದೇಶದಲ್ಲಿ ಕೃಷಿ ಕೂಲಿ ದರಗಳಲ್ಲಿ ಗಣನೀಯ ಕುಸಿತವಾಗಿದೆ. ಕಳೆದ ಆರು ವರ್ಷಗಳಲ್ಲಿ ಹೆಚ್ಚುಕಡಿಮೆ 3.70 ಕೋಟಿ ಮಂದಿ ಕೃಷಿಯನ್ನು ತೊರೆದಿದ್ದಾರೆ. ಆರ್ಥಿಕ ಹಿಂಜರಿತದಿಂದ ಯಾತನೆ ಅನುಭವಿಸುತ್ತಿರುವ ಈ ಜನಸಮೂಹದ ಬಗ್ಗೆ ಸರಕಾರದ ನಿರ್ಲಕ್ಷವನ್ನು ಗಮನಿಸಿದರೆ, ಈ ಕಾರ್ಮಿಕರು ಎಲ್ಲಿಗೆ ತಾನೆ ಹೋಗಬೇಕೆಂಬ ಪ್ರಶ್ನೆ ಉದಯಿಸುವುದು ಸಹಜವಾಗಿದೆ.

ಆದರೆ ನರೇಗಾ ಯೋಜನೆಯಲ್ಲಿ ಈ ಸಮಸ್ಯೆಗೆ ಆಶಾದಾಯಕವಾದ ಉತ್ತರ ದೊರೆಯುತ್ತದೆ. ಸಾಮಾಜಿಕ ರಕ್ಷಣಾ ಯೋಜನೆ ಹಾಗೂ ಗ್ರಾಮೀಣ ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ಅಭಿವೃದ್ಧಿಯ ಸಾಕಾರದ ಗುರಿಯನ್ನು ಹೊಂದಿರುವ ನರೇಗಾ ಯೋಜನೆಯು ಗ್ರಾಮೀಣ ಬದುಕಿನಲ್ಲಿ ಮಹತ್ತರವಾದ ಪರಿವರ್ತನೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ. ಉದಾಹರಣೆಗೆ 2019-20ರ ಸಾಲಿನಲ್ಲಿ 11.9 ಕೋಟಿ ಮಂದಿ ನರೇಗಾ ಕಾರ್ಮಿಕರಿದ್ದರು. ಇದರಿಂದಾಗಿ 3.7 ಕೋಟಿಗೂ ಅಧಿಕ ಕುಟುಂಬಗಳು ಇದರ ಪ್ರಯೋಜನವನ್ನು ಪಡೆದವು. ದುರದೃಷ್ಟವಶಾತ್ ಕೇಂದ್ರ ಸರಕಾರವು ಈ ಯೋಜನೆಯ ಅಗಾಧ ಪ್ರಯೋಜನವನ್ನು ಅರಿತುಕೊಳ್ಳುವಲ್ಲಿ ವಿಫಲವಾಯಿತು. ನೂತನ ಎನ್‌ಡಿಎ ಬಜೆಟ್ ನರೇಗಾಗೆ ಕೇವಲ 60 ಸಾವಿರ ಕೋಟಿ ರೂ. ಅನುದಾನ ನೀಡಿತು. ನರೇಗಾ ಸಂಘರ್ಷ ಮೋರ್ಚಾದಂತಹ ಇತರ ರಾಷ್ಟ್ರೀಯ ಒಕ್ಕೂಟಗಳು ಆಗ್ರಹಿಸಿರುವ ಹಾಗೆ ಆದರೆ ನರೇಗಾವನ್ನು ಕನಿಷ್ಠ ಮಟ್ಟದಲ್ಲಾದರೂ ಕಾರ್ಯನಿರ್ವಹಿಸಬೇಕಿದ್ದರೆ 88 ಸಾವಿರ ಕೋಟಿ ರೂ.ಅಗತ್ಯವಿದೆ.

 ಭಾರತೀಯ ರಿಸರ್ವ್ ಬ್ಯಾಂಕ್ 1.76 ಲಕ್ಷ ಕೋಟಿ ರೂ. ಮೊತ್ತದ ನಿಧಿಯನ್ನು ಕೇಂದ್ರ ಸರಕಾರಕ್ಕೆ ಒದಗಿಸಿರುವುದು ಈ ನಿಟ್ಟಿನಲ್ಲಿ ಒಂದು ಸುವರ್ಣಾವಕಾಶವಾಗಿದೆ. ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿ, ಕೇಂದ ಸರಕಾರಕ್ಕೆ ಒಂದೇ ಕಾರ್ಯದ ಮೂಲಕ ಎರಡು ಅವಶ್ಯಕತೆಗಳನ್ನು ಪೂರೈಸುವ ಅವಕಾಶ ದೊರೆತಿದೆ. ಒಂದನೆಯದಾಗಿ ದೊರೆತಿರುವ ಆರ್‌ಬಿಐ ನಿಧಿಯ ಒಂದು ಭಾಗವನ್ನು ನರೇಗಾ ಯೋಜನೆಗೆ ತಿರುಗಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜನತೆಗೆ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಿದೆ ಹಾಗೂ ಈ ಆರ್ಥಿಕ ಕುಂಠಿತದಿಂದ ಬಾಧಿತರಾದವರಿಗೆ ಗ್ರಾಮೀಣ ಜನತೆಯ ಪ್ರತಿಯೊಬ್ಬರಿಗೂ ಬೃಹತ್ ಸಾಮಾಜಿಕ ಭದ್ರತಾ ಕವಚವನ್ನು ಒದಗಿಸಬಹುದಾಗಿದೆ. ಎರಡನೆಯದಾಗಿ ಕೃಷಿ ಬಿಕ್ಕಟ್ಟನ್ನು ತಗ್ಗಿಸುವ ಸಾಮರ್ಥ್ಯವನ್ನು ಕೂಡಾ ಅದು ಹೊಂದಿದೆ. ಭೂಮಿ ಹಾಗೂ ಜಲ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಮೂಲಕ ಕೃಷಿ ಉತ್ಪಾದಕತೆಯನ್ನು ನರೇಗಾ ಕಾರ್ಯಕ್ರಮ ಉತ್ತೇಜಿಸಿದೆ ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ.

ಕಳೆದ ಹಲವಾರು ವರ್ಷಗಳಿಂದ ‘ನರೇಗಾ ಸಂಘರ್ಷ ಮೋರ್ಚಾ’ದಂತಹ ಸಂಘಟನೆಗಳು ಹಾಗೂ ‘ಸಹಾಯತಾ ಕೇಂದ್ರ’ದಂತಹ ಸ್ವತಂತ್ರ ಸುವಿಧಾ ಸಂಸ್ಥೆಗಳು ಗ್ರಾಮೀಣ ಜನರ ಅಗತ್ಯಗಳ ಬಗ್ಗೆ ಗಮನಹರಿಸುವ ಮೂಲಕ ನರೇಗಾ ಕಾರ್ಯಕ್ರಮದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿವೆ. ಉದಾಹರಣೆಗೆ, ಜಾರ್ಖಂಡ್‌ನಲ್ಲಿ ಸಹಾಯತಾ ಕೇಂದ್ರಗಳು ತಳಮಟ್ಟದ ವ್ಯವಸ್ಥೆಗಳನ್ನು ಸ್ಥಾಪಿಸುವ ಮೂಲಕ ನರೇಗಾ ಕಾರ್ಮಿಕರ ಅಹವಾಲು ಪರಿಹಾರ ವ್ಯವಸ್ಥೆಯನ್ನು ಬಲಪಡಿಸಿತು. ನರೇಗಾ ಕಾರ್ಮಿಕರ ಬೇಡಿಕೆಗಳನ್ನು ದಾಖಲಿಸಿಕೊಳ್ಳುವ ಸಾಮುದಾಯಿಕ ಸಂಸ್ಥೆಗಳು ಈ ಬೇಡಿಕೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಶ್ರಮಿಸುತ್ತವೆ. ಹೀಗಾಗಿ ಈ ವ್ಯವಸ್ಥೆಗಳು ಅಪಾರವಾದ ಯಶಸ್ಸನ್ನು ಸಾಧಿಸುವಲ್ಲಿ ಸಫಲವಾಗಿವೆ. ನಿರುದ್ಯೋಗ ಭತ್ತೆಯಾಗಲಿ, ಕೆಲಸದ ವಿಮೆಯಾಗಲಿ ಅಥವಾ ಬಾಕಿ ವೇತನವಾಗಲಿ ನರೇಗಾ ಕಾರ್ಮಿಕರ ಹಕ್ಕುಗಳು ಹಾಗೂ ಅವಶ್ಯಕತೆಗಳಿಗೆ ಪೂರಕವಾಗಿ ನಡೆದುಕೊಳ್ಳುತ್ತವೆ.

2015ರಲ್ಲಿ ಕೇಂದ್ರ ಸರಕಾರವು ಬರಗಾಲದ ಸಮಯದಲ್ಲಿ ಉದ್ಯೋಗ ಖಾತರಿಯ ಅವಧಿಯನ್ನು 100 ದಿನಗಳಿಂದ 150 ದಿನಗಳಿಗೆ ಏರಿಕೆ ಮಾಡಿರುವುದು ನರೇಗಾ ಯೋಜನೆಯ ಯಶಸ್ಸಿಗೆ ಇನ್ನೊಂದು ನಿದರ್ಶನವಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಕಾರ್ಮಿಕರಿಗೆ ಉದ್ಯೋಗದ ಅಗತ್ಯವಿರುತ್ತದೆ. ಅದೇ ರೀತಿ 2019ರ ಆಗಸ್ಟ್‌ನಲ್ಲಿ ಗ್ರಾಮೀಣ ಜನರು ಕೃಷಿ ವೈಫಲ್ಯದಿಂದ ಹತಾಶರಾಗಿ ನೆರೆಯ ರಾಜ್ಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುವುದನ್ನು ಗಮನಿಸಿದ ಒಡಿಶಾ ಸರಕಾರವು, ವಲಸೆ ಹೋಗುತ್ತಿರುವ ಕುಟುಂಬಗಳ ಸದಸ್ಯರಿಗೆ 200 ದಿನಗಳ ಉದ್ಯೋಗವನ್ನು ಒದಗಿಸುವ ಯೋಜನೆಯನ್ನು ಘೋಷಿಸಿತ್ತು.

ಆರಂಭದ ವರ್ಷಗಳಲ್ಲಿ ಅದು ಕಳಪೆ ಫಲಿತಾಂಶಗಳನ್ನು ತೋರಿತ್ತಾದರೂ ಸಂಪತ್ತಿನ ಸೃಷ್ಟಿಯನ್ನು ಅಂದಾಜಿಸುವುದು ಕೂಡಾ ಅವಶ್ಯಕವಾಗಿರುತ್ತದೆ. ತಮಗೆ ವಿನಿಯೋಗಿಸಲಾದ ಸಂಪತ್ತಿಗೆ ಸಮಾನವಾದ ಸಂಪನ್ಮೂಲವನ್ನು ಉತ್ಪಾದಿಸುವುದು ಇಲ್ಲಿ ಅಗತ್ಯವಾಗಿರುತ್ತದೆ. ಕೇಂದ್ರ ಸರಕಾರವು ಕೃಷಿ, ಇಂದಿರಾ ಆವಾಸ್ ಯೋಜನೆ, ಅಂಗನವಾಡಿಗಳು, ದನದ ಹಟ್ಟಿಗಳು, ಬಾವಿ ನಿರ್ಮಾಣ, ಆಟದ ಮೈದಾನಗಳ ನಿರ್ಮಾಣ ಇವನ್ನು ಸರಕಾರವು ನರೇಗಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿದೆ.

ಕೇಂದ್ರ ಸರಕಾರವು ರಾಜಕೀಯದ ಸುಳಿಗೆ ಸಿಲುಕಿ, ದೇಶದ ಕಾರ್ಪೊರೇಟ್ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆಯೇ ಹೆಚ್ಚು ಗಮನಹರಿಸುವ ಬದಲು, ಗ್ರಾಮೀಣ ಆರ್ಥಿಕತೆ ಹಾಗೂ ಅಲ್ಲಿನ ಜನಸಮುದಾಯಗಳ ಸಮಸ್ಯೆ ಯನ್ನು ಬಗೆಹರಿಸಬೇಕಾಗಿದೆ. ಆರ್‌ಬಿಐನಿಂದ ತಾನು ಪಡೆದಿರುವ 1.76 ಲಕ್ಷ ರೂ.ಯನ್ನು ಅದು ನರೇಗಾ ಯೋಜನೆಗಾಗಿ ಬಳಸಿಕೊಳ್ಳಬೇಕಾಗಿದೆ. ಇದರಿಂದ ಉದ್ಯೋಗಗಳು ಸೃಷ್ಟಿಯಾಗಲಿವೆ. ಕಾರ್ಮಿಕರು ಹಾಗೂ ಸರಕಾರಿ ಉದ್ಯೋಗಿಗಳು ಅವುಗಳ ಅನುಷ್ಠಾನಕ್ಕೆ ಜವಾಬ್ದಾರರಾಗಿರುತ್ತಾರೆ. ಕ್ರಮೇಣ ಆ ಮೂಲಕ ಆರ್ಥಿಕ ಹಿಂಜರಿತಕ್ಕೆ ಕಡಿವಾಣ ಹಾಕಬಹುದಾಗಿದೆ.

ಕೃಪೆ: countercurrents.org

Writer - ಅನೋಜ್ಞ ಪಿ.

contributor

Editor - ಅನೋಜ್ಞ ಪಿ.

contributor

Similar News

ಜಗದಗಲ
ಜಗ ದಗಲ