ಲ್ಯಾಪ್‌ಟಾಟ್ ಪರದೆಯಾಚೆಗಿನ ಮುಖಾಮುಖಿ
ಸಾಮಾಜಿಕ ಜಾಲತಾಣಗಳು, ವೆಬ್‌ಸೈಟ್‌ಗಳು ಹೊಸ ತಲೆಮಾರಿನ ಬರಹಗಾರರ ಪ್ರಮುಖ ಮಾಧ್ಯಮವಾಗಿದೆ. ಕಳೆದ ಒಂದೆರಡು ದಶಕದಲ್ಲಿ ಈ ಮೂಲಕವೇ ಬರಹಗಳನ್ನು ನಿತ್ಯವಾಗಿಸಿಕೊಂಡು, ಪುಸ್ತಕಗಳನ್ನು ಹೊರತಂದ ಹಲವು ಯುವ ಲೇಖಕರಿದ್ದಾರೆ. ಅವರ ಸಾಲಿನಲ್ಲಿ ಸಂಯುಕ್ತಾ ಪುಲಿಗಲ್ ಸೇರುತ್ತಾರೆ. ‘ಅವಧಿ’ ವೆಬ್‌ಸೈಟ್‌ನಲ್ಲಿ ಅವರು ಬರೆದ ಅಂಕಣಗಳು ಇದೀಗ ‘ಲ್ಯಾಪ್‌ಟಾಪ್ ಪರದೆಯಾಚೆಗೆ’ ಹೆಸರಿನಲ್ಲಿ ಪುಸ್ತಕ ರೂಪ ಪಡೆದಿದೆ. ಈ ಕೃತಿಯಲ್ಲಿರುವ ವಿಷಯ ವೈವಿಧ್ಯವನ್ನು ಅವಧಿಯ ಮುಖ್ಯಸ್ಥರಾಗಿರುವ ಪತ್ರಕರ್ತ ಜಿ. ಎನ್. ಮೋಹನ್ ಕಾವ್ಯಾತ್ಮಕವಾಗಿ ವಿವರಿಸುತ್ತಾರೆ. ‘‘....ಕೇಳಿದ ಒಂದು ಪದ್ಯ, ಆಡಿದ ಒಂದು ಆಟ, ನೋಡಿದ ಒಂದು ದೇಗುಲ, ಗೈಡ್ ಹೇಳಿದ ಒಂದು ಮಾತು, ಸೀಟಿನ ಪಕ್ಕದಲ್ಲಿ ಕುಳಿತ ವ್ಯಕ್ತಿ, ಮಕ್ಕಳಾಗಲಿಲ್ಲ ಎಂದು ಕಟ್ಟೆ ಸುತ್ತುವ ಸಾಫ್ಟ್‌ವೇರ್ ಹುಡುಗಿ, ಓದಿದ ಜಾನಪದ ಕಥೆಗಳು ಎಲ್ಲದರಲ್ಲಿಯೂ ಸಂಯುಕ್ತಾ ಪ್ರಶ್ನೆ ಮಾಡುವ ಆಸಕ್ತಿಯನ್ನು ಬಿಟ್ಟುಕೊಟ್ಟಿಲ್ಲ....ಅವರು ದೇಗುಲಗಳ ಕಥೆ ಹೇಳುವಾಗ ಅದರ ಹೆಸರುಗಳ ಬೆನ್ನು ಹತ್ತಿ ಹೋಗುವ ಪರಿ, ಪುರಾಣಗಳ ಕಥೆಗಳನ್ನು ಹೇಳುವಾಗ ಅದನ್ನು ಇಂದಿನೊಂದಿಗೆ ಜೋಡಿಸಿದವರಾರು? ಯಾಕಾಗಿ? ಎಂದು ಕೇಳಿಕೊಳ್ಳುವ ರೀತಿ ಸಂಯುಕ್ತಾ ಅವರ ಬರಹಗಳು ಇಂದಿನ ದಿನಗಳಲ್ಲಿ ಒಂದು ವಿಶ್ವಾಸವನ್ನು ಉಳಿಸುವಂತಿದೆ...’’
ಈ ಕೃತಿಯಲ್ಲಿ ಒಟ್ಟು 22 ಪ್ರಬಂಧಗಳಿವೆ. ಇವು ಪೂರ್ಣ ಪ್ರಮಾಣದಲ್ಲಿ ಪ್ರಬಂಧ ರೂಪದಲ್ಲಿ ಕಟ್ಟಿಕೊಡಲ್ಪಟ್ಟಿದೆ ಎನ್ನುವಂತಿಲ್ಲ. ದೀರ್ಘ ಟಿಪ್ಪಣಿಗಳಂತಿರುವ ಬರಹಗಳು ಒಂದು ಬೆಳಕಿನ ಹೊಳಹನ್ನು ಕೊಟ್ಟು ಮರೆಯಾಗುವ ಮಿಂಚಿನಂತೆ ನಮಗೆ ಭಾಸವಾಗುತ್ತವೆ. ಸಾಮಾಜಿಕ ತಾಣಗಳಲ್ಲಿ ಬರೆಯುವ ಬಹಳಷ್ಟು ಬರಹಗಾರರ ಮಿತಿಗಳೂ ಹೌದು. ಇದೇ ಸಂದರ್ಭದಲ್ಲಿ ಈ ಮಿತಿಗಳೇ ಅವರಿಗೆ ಅತಿ ಹೆಚ್ಚು ಓದುಗರನ್ನು ಕೂಡ ಕೊಟ್ಟಿವೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಪ್ರಾಸಗಳ ಎಳೆಯನ್ನು ಹಿಡಿದು ಅದರ ಬೇರೆ ಬೇರೆ ಮಗ್ಗುಲನ್ನು ಮುಟ್ಟಿ ನೋಡಲು ಪ್ರಯತ್ನಿಸುವ ‘ನಾವು ಗಮನಿಸದ ರೈಮ್ ಜಗತ್ತು’ನ್ನು ಓದಿ ಎಲ್ಲವೂ ಅಷ್ಟೇ ಸರಳವಾಗಿವೆ ಎಂದು ಭಾವಿಸುವಂತಿಲ್ಲ. ‘ನಾವು ಜನರಲ್‌ನವರು ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ...’ ಎನ್ನುವ ಗಂಭೀರ ವಸ್ತುವನ್ನಿಟ್ಟು ಲೇಖಕಿ ಬರೆಯುತ್ತಾರೆ. ಜನರಲ್ ಕೆಟಗರಿ ಅಥವಾ ಮೇಲ್ಜಾತಿಯ ಯುವಕರೊಳಗಿನ ಸಂಕಟ, ತಲ್ಲಣಗಳನ್ನು ವಿವರಿಸುತ್ತಲೇ ‘‘ನಾವು ಜನಲ್ ಕೆಟಗರಿಯವರು ಆಲೋಚಿಸಬೇಕಾದ ವಿಷಯ ಎಂದರೆ, ಈ ರೀತಿಯಾದ, ಇಂದು ನಾವು ಅನುಭವಿಸುತ್ತಿರುವ ಮಿಸ್ಸಿಂಗ್ ಆಪರ್ಚುನಿಟಿಗಳು ಏನಿವೆ ಅವನ್ನು ನಾವು ಸಾವಿರಾರು ವರ್ಷಗಳಿಂದ ಕಸಿದುಕೊಂಡು, ನಮ್ಮದೇ ಆಗಿಸಿಕೊಂಡು, ನಮ್ಮ ಬುಟ್ಟಿಯಲ್ಲೇ ಹಾಕಿ ಬೀಗ ಜಡಿದಿದ್ದೇವೆ.....’’ ಎನ್ನುವ ವಾಸ್ತವವನ್ನು ಮುಖಾಮುಖಿಯಾಗಲು ಲೇಖಕಿ ಅಂಜುವುದಿಲ್ಲ. ಬೆನ್ನುಡಿಯಲ್ಲಿ ಹೇಳುವಂತೆ, ‘ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡಾಡಿ’ ಎನ್ನುತ್ತಾನೆ ಬ್ರೆಕ್ಟ್. ಆ ಬ್ರೆಕ್ಟ್‌ನ ಆಲೋಚನೆಯಿಂದಲೇ ಒಂದು ಹಾಳೆ ಇಳಿಸಿಕೊಂಡರೇನೋ ಎನ್ನುವಂತೆ ಸಂಯುಕ್ತಾ ಪ್ರಶ್ನಿಸುವ ಮನೋಭಾವವನ್ನು ತಮ್ಮಲ್ಲಿ ಉಳಿಸಿಕೊಂಡಿರುವುದು ಈ ಕೃತಿಯಲ್ಲಿ ಎದ್ದು ಕಾಣುತ್ತದೆ.
ಬಹುರೂಪಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 128. ಮುಖಬೆಲೆ 140 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.