ಕೇಂದ್ರದ ಭಾಷಾ ವಸಾಹತುವಾದ?
ಬಲಾತ್ಕಾರವಾಗಿ ಒಂದು ಭಾಷೆಯನ್ನು ಇನ್ನೊಂದು ಭಾಷಿಕರ ಮೇಲೆ ಹೇರಿದರೆ ಅತ್ಯಂತ ಕಷ್ಟವಾಗುವುದು ಜನಸಾಮಾನ್ಯರಿಗೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅರ್ಥವಾಗುವ ಭಾಷೆಯಲ್ಲಿ ಸಾರ್ವಜನಿಕ ಸೇವೆಗಳನ್ನು ಪೂರೈಸಬೇಕು. ರೈಲು, ದೂರವಾಣಿ, ಅಂಚೆ, ವಿಮೆ, ಬ್ಯಾಂಕುಗಳು, ಕೇಂದ್ರ ಸರಕಾರಿ ಕಚೇರಿಗಳು-ಇವುಗಳು ಅತಿ ಸಾಮಾನ್ಯರಿಗೆ ತಲುಪಬೇಕಿದ್ದರೆ ಅವರ ಭಾಷೆಯಲ್ಲಿಯೇ ಆ ಸೇವೆಗಳು ದೊರೆಯಬೇಕು.
ಜೇನುಗೂಡಿಗೆ ಕೈಹಾಕಿದ್ದೇವೆಂಬ ತಪ್ಪುಗ್ರಹಿಕೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಣಜದ ಹುಳದ ಗೂಡಿಗೆ ಕೈಹಾಕಿದಂತೆ ಭಾಸವಾಗುತ್ತಿದೆ. ಹಿಂದಿ ದಿವಸದ ಆಚರಣೆಯ ಸಂದರ್ಭದಲ್ಲಿ ಒಂದು ದೇಶಕ್ಕೆ ಒಂದೇ ಭಾಷೆ ಇರಬೇಕೆಂದು ಅವರು ನೀಡಿದ ಹೇಳಿಕೆ ಸ್ವಾಭಾವಿಕವಾಗಿ ಹಿಂದಿಯೇತರ ರಾಜ್ಯಗಳಲ್ಲಿ ಅದರಲ್ಲಿಯೂ ಕರ್ನಾಟಕ ಮತ್ತು ನೆರೆಯ ತಮಿಳನಾಡಿನಲ್ಲಿ ಜನರು ಸಿಡಿದೇಳುವಂತೆ ಮಾಡಿದೆ. ಕೇಂದ್ರದ ನಾಯಕರೂ ಅವರ ಅನುಯಾಯಿಗಳೂ ದೇಶಕ್ಕೆ ಒಂದೇ ಭಾಷೆ ಬೇಕೆಂದು ಅನೇಕ ವರ್ಷಗಳಿಂದ ಒತ್ತಡ ಹೇರುತ್ತಲೇ ಬಂದಿದ್ದಾರೆ. ಒತ್ತಡ ಹೇರುವುದರಲ್ಲಿ ಕಾಂಗ್ರೆಸ್ ಪಕ್ಷ ಪರೋಕ್ಷವಾಗಿ ಕಾರ್ಯವೆಸಗುತ್ತಿದ್ದರೆ ಈಗಿನ ಆಳುವ ಭಾರತೀಯ ಜನತಾ ಪಕ್ಷ ನೇರವಾಗಿ ಹಿಂದಿಯನ್ನು ಹೇರುವ ಪ್ರಯತ್ನಕ್ಕೆ ಮುಂದಾಗಿದೆ. ಇದರ ಪರಿಣಾಮ ಗಂಭೀರವಾಗಬಹುದು.
ತಪ್ಪುಗ್ರಹಿಕೆಗಳು:
ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವುದೇ ಮೂಲಭೂತವಾದ ಒಂದು ತಪ್ಪು ಗ್ರಹಿಕೆಯಿಂದಾಗಿ. 1963ರಲ್ಲಿ ಜಾರಿಗೆ ಬಂದ ಅಧಿಕೃತ ಭಾಷೆಗಳು ಕಾಯ್ದೆ ಹಿಂದಿಯನ್ನಾಗಲೀ ಬೇರೆ ಯಾವುದೇ ಭಾಷೆಯನ್ನಾಗಲೀ ರಾಷ್ಟ್ರಭಾಷೆ ಎಂದು ಪರಿಗಣಿಸಿಲ್ಲ. ಸರಕಾರದ ವ್ಯವಹಾರಕ್ಕೆ ಅಧಿಕೃತವಾಗಿ ಹಿಂದಿ ಮತ್ತು ಇಂಗ್ಲಿಷನ್ನು ಬಳಸಬಹುದೆಂದು ಮಾತ್ರ ಆ ಕಾಯ್ದೆ ಹೇಳುತ್ತದೆ. ಮಾತ್ರವಲ್ಲ, ಹಿಂದಿಯೇತರ ರಾಜ್ಯಗಳು ತಮಗೆ ಬೇಕಾದ ಭಾಷೆಗಳನ್ನು ಅಧಿಕೃತ ಭಾಷೆಯಾಗಿ ಘೋಷಿಸಬಹುದು ಎಂದಿದೆ. ಆ ರಾಜ್ಯಗಳೊಂದಿಗೆ ಸಂವಹನ ನಡೆಸುವಾಗ ಹಿಂದಿ ಭಾಷೆಯ ರಾಜ್ಯಗಳು ಹಿಂದಿಯಲ್ಲಿ ಪತ್ರಗಳನ್ನು ಬರೆಯಬಹುದು, ಆದರೆ ಅವುಗಳೊಂದಿಗೆ ಆ ಪತ್ರಗಳ ಇಂಗ್ಲಿಷ್ ಪ್ರತಿಗಳನ್ನು ಕಳುಹಿಸತಕ್ಕದ್ದು.
ಭಾರತದ ಸಂವಿಧಾನ 22 ದೇಶೀ ಭಾಷೆಗಳನ್ನು ಮಾನ್ಯ ಮಾಡಿದೆ. 1956ರಲ್ಲಿ ಭಾಷಾವಾರು ರಾಜ್ಯಗಳ ರಚನೆ ದೇಶದ ವೈವಿಧ್ಯವನ್ನು ಅಧಿಕೃತವಾಗಿ ಒಪ್ಪಿಕೊಳ್ಳುವ ಒಂದು ಮಹತ್ವದ ನಿರ್ಧಾರವಾಗಿತ್ತು. ಆ ಮೂಲಕ ಆಯಾಯ ರಾಜ್ಯದ ಭಾಷೆಗಳ ರಕ್ಷಣೆ ಮತ್ತು ಪೋಷಣೆಯ ಉದ್ದೇಶವೂ ಅದರಲ್ಲಿ ಅಡಕವಾಗಿತ್ತು.
ವಸ್ತುಸ್ಥಿತಿ ಹೀಗಿರುವಾಗ ದೇಶದಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ ಎಂಬ ತಪ್ಪುಕಲ್ಪನೆಯನ್ನು ವಿಸ್ತರಿಸುವಲ್ಲಿ ಎಲ್ಲ ಮಟ್ಟದಲ್ಲಿಯೂ ವ್ಯವಸ್ಥಿತ ಪ್ರಯತ್ನ ನಡೆಯುತ್ತಾ ಇದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ‘‘ಹಿಂದಿ ನಮ್ಮ ರಾಷ್ಟ್ರಭಾಷೆ’’ ಎಂದು ನೇರವಾಗಿ ಒಂದೆಡೆ ಹೇಳಿದ್ದರು. ಈಗಿನ ನಾಯಕರೂ ಅದೇ ಧಾಟಿಯಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ ಎಂಬುದು ನಿಸ್ಸಂಶಯ.
ಈ ಗ್ರಹಿಕೆಯನ್ನು ಬಲಪಡಿಸಲು ಬಳಸುವ ಇನ್ನೊಂದು ಹೇಳಿಕೆ ದೇಶದ ಸಮಗ್ರತೆಗೆ ಒಂದು ಭಾಷೆ ಬೇಕು ಎಂಬುದಾಗಿ. ಈ ವಾದಕ್ಕೂ ಹುರುಳಿಲ್ಲ.
ಅನುಭವಗಳು:
ದೇಶಕ್ಕೆ ಒಂದೇ ಭಾಷೆ ಇದ್ದರೆ ಸಮಗ್ರತೆಗೆ ಪೂರಕವೆಂಬುದು ಅನುಭವಕ್ಕೆ ವಿರುದ್ಧವಾದುದು. ನಮ್ಮ ದೇಶದಲ್ಲಿ 1956ರಲ್ಲಿ ಆಂಧ್ರ ಪ್ರದೇಶವನ್ನು ರಚಿಸಿದ್ದೇ ತೆಲುಗು ಮಾತೃಭಾಷೆಯಾಗಿರುವ ರಾಜ್ಯ ಬೇಕೆಂದು ಆಮರಣಾಂತ ಉಪವಾಸ ನಡೆಸಿದ ಪೊಟ್ಟಿ ಶ್ರೀರಾಮುಲು ಅವರ ಚಳವಳಿಯ ಒತ್ತಾಯಕ್ಕೆ ಮಣಿದು. ಆದರೆ ಭಾಷೆ ಜನರನ್ನು ಒಂದುಗೂಡಿಸುವುದಾಗಿದ್ದಲ್ಲಿ ಆಂಧ್ರ ಇಂದು ಎರಡಾಗಬೇಕಾಗಿರಲಿಲ್ಲ. ಹಿಂದಿ ಮಾತನಾಡುವ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರಗಳು ಇಂದು ಉತ್ತರಾಖಂಡ, ಜಾರ್ಖಂಡ್ ಮತ್ತು ಛತ್ತೀಸಗಡ ಸೇರಿ ಆರು ರಾಜ್ಯಗಳಾಗಿವೆ. ಆ ರಾಜ್ಯಗಳು ಯಾಕೆ ಪುನಾರಚನೆಗೊಂಡವು?
ರಶ್ಯದಲ್ಲಿ 1917ರ ಕ್ರಾಂತಿಯ ತನಕ ರಶ್ಯನ್ ಭಾಷೆಯನ್ನು ಇಡೀ ದೇಶದಲ್ಲಿ ಹೇರುವ ಯತ್ನ ಝಾರ್ ಅರಸರ ಕಾಲದಲ್ಲಿ ನಡೆದಿತ್ತು. ಆ ವರ್ಷ ಕ್ರಾಂತಿಯಾಗಿ ಸೋವಿಯತ್ ಒಕ್ಕೂಟ ಸ್ಥಾಪನೆಗೊಂಡ ತರುವಾಯ ಒಕ್ಕೂಟದಲ್ಲಿ ಒಂದೇ ಭಾಷೆಯನ್ನು ಬೆಳೆಸಲು ಕಮ್ಯುನಿಸ್ಟ್ ಸರಕಾರಗಳು ನಿರಂತರ ಪ್ರಯತ್ನಿಸಿದವು. ಆ ಯೋಜನೆಯನ್ನು ವಿಶ್ಲೇಷಕರು ರಸ್ಸಿಫಿಕೇಶನ್(Russification) ಎಂದು ಕರೆದರು. ಆದರೆ ಈ ಪ್ರಯತ್ನ ಯಶಸ್ಸು ಗಳಿಸಲಿಲ್ಲ. 1990 ರ ದಶಕದಲ್ಲಿ ಸೋವಿಯೆತ್ ಒಕ್ಕೂಟವೇ ವಿಭಜನೆಗೊಂಡು ಅನೇಕ ಸ್ವತಂತ್ರ ದೇಶಗಳು ಹುಟ್ಟಿಕೊಂಡವು. ಒಂದು ಭಾಷೆ ಒಂದು ದೇಶದ ಸಮಗ್ರತೆಗೆ ಪೂರಕವಾಗಬೇಕಾಗಿಲ್ಲ ಎಂಬುದಕ್ಕೆ ರಸ್ಸಿಫಿಕೇಶನ್‌ಇನ್ನೊಂದು ಜ್ವಲಂತ ನಿದರ್ಶನ.
ಇದಕ್ಕೆ ತದ್ವಿರುದ್ಧವಾಗಿ 22 ಅಧಿಕೃತ ಮತ್ತು ನೂರಾರು ಬೇರೆ ಭಾಷೆಗಳನ್ನು ಒಳಗೊಂಡ ಭಾರತದಲ್ಲಿ ಯಾವುದೇ ಒಂದು ಪ್ರದೇಶದ ಸಾಧಕರು ಅಂತರ್‌ರಾಷ್ಟ್ರೀಯ ಅಥವಾ ರಾಷ್ಟ್ರೀಯ ಮನ್ನಣೆ ಪಡೆದಾಗ ಅವರ ಭಾಷೆ ಅಡ್ಡ ಬರಲಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ರವೀಂದ್ರನಾಥ ಟಾಗೋರರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿದ್ದು ಅವರ ಬಂಗಾಳಿ ರಚನೆ ‘ಗೀತಾಂಜಲಿ’ಯ ಮೂಲಕ. ಸರ್ ಸಿ.ವಿ. ರಾಮನ್ ಕನ್ನಡಿಗರಾದರೂ ಅವರ ಸಾಧನೆ ಇಡೀ ದೇಶಕ್ಕೆ ಹೆಮ್ಮೆ ತಂದಿತ್ತು. ಅಮರ್ತ್ಯ ಸೇನರಿಗೆ ಅರ್ಥಶಾಸ್ತ್ರದ ನೊಬೆಲ್ ಲಭಿಸಿದ್ದು ಪ್ರಜಾಪ್ರಭುತ್ವ ಮತ್ತು ಬರಗಾಲದ ಕುರಿತಾದ ಅವರ ಸಂಶೋಧನೆಗೆ, ಅದನ್ನು ಅವರು ಇಂಗ್ಲಿಷಿನಲ್ಲಿ ಬರೆದಿದ್ದು. ದೇಶದ ಚಲನಚಿತ್ರರಂಗದ ದಿಗ್ಗಜರೆನಿಸಿದ ಸತ್ಯಜಿತ್ ರೇ, ಗಿರೀಶ್ ಕಾಸರವಳ್ಳಿ, ಅಡೂರು ಗೋಪಾಲಕೃಷ್ಣನ್ ಮುಂತಾದವರು ಹೆಸರು ಸಂಪಾದಿಸಿದ್ದು ತಮ್ಮ ತಮ್ಮ ಭಾಷೆಯಲ್ಲಿ ನಿರ್ಮಿಸಿದ ಚಲನಚಿತ್ರಗಳಿಂದ. ಅವೆಲ್ಲಾ ದೇಶಕ್ಕೆ ಹೆಸರು ತಂದಿವೆ, ಆ ಸಾಧನೆಗೆ ಭಾಷೆ ತಡೆಯಾಗಿರಲಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡಕ್ಕೆ ಏಕೆ ಅತಿ ಹೆಚ್ಚು ಜ್ಞಾನಪೀಠ ಪುರಸ್ಕಾರಗಳು ಬಂದವು?
ಸೃಜನಶೀಲತೆಗೆ ಅವರವರ ಭಾಷೆಯೇ ಹೊಲ; ರಾಷ್ಟ್ರದ ಸಮಗ್ರತೆಗೆ ಪೂರಕವಾಗುತ್ತದೆ ಎಂದು ಅವರ ಮೇಲೆ ಇನ್ನೊಂದು ಭಾಷೆಯನ್ನು ಹೇರಿದ್ದರೆ ಈ ಸೃಜನಶೀಲತೆಗೆ ಪ್ರೋತ್ಸಾಹ ಸಿಗುತ್ತಿತ್ತೇ? ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಂತರ್‌ರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಿಂದಿಯಲ್ಲಿ ಮಾತನಾಡಲು ಕಾರಣ ಆ ಭಾಷೆಯಲ್ಲಿ ಅವರಿಗಿರುವ ಪ್ರಾವೀಣ್ಯ; ಅದೇ ತರ್ಕ ಹಿಂದಿಯಂತೆ ಉಳಿದ ದೇಶೀ ಭಾಷೆಗಳಿಗೂ ಅನ್ವಯವಾಗಬೇಕೆಂದು ಅಪೇಕ್ಷಿಸುವುದು ಸ್ವಾಭಾವಿಕ.
ದೇಶೀ ಭಾಷೆಗಳ ಅವನತಿಗೆ ದಾರಿ:
ಹಿಂದಿ ಸಂಪರ್ಕ ಭಾಷೆಯೆಂದು ಹೇರಿದಾಗ ಪ್ರಾದೇಶಿಕ ಭಾಷೆಗಳಿಗೆ ಮಾರಕ ಹೊಡೆತ ಬೀಳುತ್ತದೆ. ನಮ್ಮ ದೇಶದ ಓರ್ವ ಶ್ರೇಷ್ಠ ಭಾಷಾ ವಿದ್ವಾಂಸರಾದ ಗಣೇಶ ದೇವಿ ಅವರ ಸಂಶೋಧನೆಯ ಪ್ರಕಾರ ಹೋದ 50 ವರ್ಷಗಳಲ್ಲಿ (1961-2010) ಭಾರತದ ಭಾಷೆಗಳ ಸಂಖ್ಯೆ 1,652ರಿಂದ 780ಕ್ಕೆ ಇಳಿದಿದೆ. ಯುನೆಸ್ಕೋದ ವರದಿಯಂತೆ ಅವುಗಳಲ್ಲಿ 197 ಅಳಿವಿನಂಚಿಗೆ ಸಮೀಪವಾಗಿವೆ. ದೇವಿಯವರ ಪ್ರಕಾರ ಹಿಂದಿಯ ಬಲವಂತವಾದ ಹೇರುವಿಕೆ ಭಾರತದ ಬಹುಭಾಷಿಕತೆಗೆ ನೇರವಾದ ಹೊಡೆತವಾಗಲಿದೆ.
16ನೇ ಶತಮಾನದಲ್ಲಿ ಅಮೆರಿಕಕ್ಕೆ ಐರೋಪ್ಯದೇಶಗಳಿಂದ ವಲಸೆ ಬಂದ ಬಳಿಕದ 400 ವರ್ಷಗಳಲ್ಲಿ ಅಲ್ಲಿನ ದೇಶೀ ಭಾಷೆಗಳೆಲ್ಲ ನಿರ್ನಾಮವಾಗಿವೆ. ಕೇಂದ್ರ ಸರಕಾರದ ಹೊಸ ಧೋರಣೆಯನ್ನು ಕಾರ್ಯರೂಪಕ್ಕೆ ತಂದರೆ ಅದೇ ಪರಿಸ್ಥಿತಿ ಭಾರತದ ಭಾಷೆಗಳಿಗೆ ಬರಲು 400 ವರ್ಷ ಬೇಡ!
ಹೇರುವಿಕೆಯಿಂದ ಬರುವ ತೊಂದರೆಗಳು:
ಬಲಾತ್ಕಾರವಾಗಿ ಒಂದು ಭಾಷೆಯನ್ನು ಇನ್ನೊಂದು ಭಾಷಿಕರ ಮೇಲೆ ಹೇರಿದರೆ ಅತ್ಯಂತ ಕಷ್ಟವಾಗುವುದು ಜನಸಾಮಾನ್ಯರಿಗೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅರ್ಥವಾಗುವ ಭಾಷೆಯಲ್ಲಿ ಸಾರ್ವಜನಿಕ ಸೇವೆಗಳನ್ನು ಪೂರೈಸಬೇಕು. ರೈಲು, ದೂರವಾಣಿ, ಅಂಚೆ, ವಿಮೆ, ಬ್ಯಾಂಕುಗಳು, ಕೇಂದ್ರ ಸರಕಾರಿ ಕಚೇರಿಗಳು-ಇವುಗಳು ಅತಿ ಸಾಮಾನ್ಯರಿಗೆ ತಲುಪಬೇಕಿದ್ದರೆ ಅವರ ಭಾಷೆಯಲ್ಲಿಯೇ ಆ ಸೇವೆಗಳು ದೊರೆಯಬೇಕು. ಅದೇ ರೀತಿ ಜನರಿಗೋಸ್ಕರ ರೂಪಿತವಾದ ಯೋಜನೆಗಳೂ ಅವರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾದ ಭಾಷೆಯಲ್ಲಿ ಪ್ರಚಾರವಾಗಬೇಕು.
ನಾವು ಈಗ ಏನನ್ನು ಗಮನಿಸುತ್ತೇವೆ? ಮುದ್ರಾ, ಉಜ್ವಲಾ, ಉದಯ್, ಉಡಾನ್, ಆಯುಷ್ಮಾನ್ ಭಾರತ್ ಮುಂತಾದ ಯೋಜನೆಗಳ ಜಾಹೀರಾತುಗಳೂ ಕೂಡ ಸಾಮಾನ್ಯರಿಗೆ ಅರ್ಥವಾಗದ ಹಿಂದಿ ಹೆಸರುಗಳ ಅಥವಾ ಸಂಕ್ಷಿಪ್ತಾಕ್ಷರಗಳ ಮೂಲಕ ಪ್ರಕಟವಾಗುತ್ತವೆ. ರೈಲು ನಿಲ್ದಾಣಗಳಲ್ಲಿ, ಬ್ಯಾಂಕು ಶಾಖೆಗಳಲ್ಲಿ, ವಿಮಾ ಕಚೇರಿಗಳಲ್ಲಿ, ಅಷ್ಟೇಕೆ ಅಂಚೆ ಇಲಾಖೆಗಳಲ್ಲಿಯೂ ಹಿಂದಿಯ ಅರ್ಜಿಗಳು, ನೊಟೀಸುಗಳು, ವಿದ್ಯುನ್ಮಾನದ ಫಲಕಗಳು, ಜಾಹೀರಾತುಗಳು ವಿಜೃಂಭಿಸುತ್ತವೆ. ಹಿಂದಿ, ಇಂಗ್ಲಿಷ್ ಬಾರದ ಕನ್ನಡಿಗರು ಈ ಸೇವೆಗಳನ್ನು ಹೇಗೆ ಬಳಸಿಕೊಳ್ಳಬೇಕು? ಮಂಗಳೂರು ರೈಲು ನಿಲ್ದಾಣದಲ್ಲಿ ಕನ್ನಡ ಬರುವ ಸಿಬ್ಬಂದಿಯ ಸುಳಿವೇ ಇಲ್ಲ.
ರಾಜಕೀಯ ನಾಯಕರ ನಿರ್ಲಕ್ಷ:
ಕನ್ನಡ ರಾಜ್ಯದ ರಾಜಕೀಯ ಧುರೀಣರಿಗೆ ತಮ್ಮ ರಾಜ್ಯ, ಭಾಷೆ, ಸಂಸ್ಕೃತಿ, ಇಲ್ಲಿನ ಅನನ್ಯ ಚರಿತ್ರೆಯ ಬಗ್ಗೆ ದಿವ್ಯ ನಿರ್ಲಕ್ಷ ಹೊಂದಿದ್ದಾರೆ ಅಥವಾ ಕೀಳರಿಮೆ ಇದೆ ಎಂದು ನನಗೆ ಅನಿಸುತ್ತಿದೆ. ದಿ.ಅನಂತ ಕುಮಾರ್ ಕೇಂದ್ರ ಸಚಿವರಾಗಿದ್ದಾಗ ಕರ್ನಾಟಕದಲ್ಲಿ ಸಭೆಗಳನ್ನು ಉದ್ದೇಶಿಸಿ ಅವರು ಹಿಂದಿಯಲ್ಲಿಯೇ ಮಾತನಾಡುತ್ತಿದ್ದುದು ಇದಕ್ಕೆ ಒಂದು ಉದಾಹರಣೆ. ನಮ್ಮ ರಾಜ್ಯದ ಸಂಸದರಿಗೆ, ಇಲ್ಲಿಂದ ಆರಿಸಿ ಬಂದು ಕೇಂದ್ರ ಸಚಿವರಾದ ಮಂದಿಗೆ ಸಂಸತ್ತಿನ ಒಳಗೆ ಕನ್ನಡದಲ್ಲಿಯೂ ಮಾತನಾಡಬಹುದೆಂದು ಗೊತ್ತಿದೆಯೋ ಇಲ್ಲವೋ. ಇಂಗ್ಲಿಷ್ ಕಷ್ಟದ ಭಾಷೆ, ಹಿಂದಿಯಲ್ಲಿ ಪ್ರಾವೀಣ್ಯ ಇಲ್ಲ- ಹಾಗಾಗಿ ಸಂಸತ್ತಿನಲ್ಲಿ ಈ ಪ್ರತಿನಿಧಿಗಳು ನಮ್ಮ ರಾಜ್ಯದ ಬಗ್ಗೆ ಮಾತನಾಡಿದ ಸುದ್ದಿ ಕೇಳಿ ಬರುವುದೇ ಇಲ್ಲ. ನನಗೆ ವೈಯಕ್ತಿಕ ನೆಲೆಯಲ್ಲಿ ತಿಳಿದಂತೆ ಒಬ್ಬ ಜನಪ್ರತಿನಿಧಿ ತಾನು ಮಾತನಾಡದಿರಲು ಹಿಂದಿ ಇಂಗ್ಲಿಷ್ ಎರಡೂ ಭಾಷೆ ಬಾರದ ಕಾರಣ ಎಂದು ತಮ್ಮ ಆತ್ಮೀಯರೊಂದಿಗೆ ಹೇಳಿಕೊಂಡಿದ್ದರು.
ಕೇಂದ್ರ ಸರಕಾರದ ಹೊಸ ಧೋರಣೆಯನ್ನು ಬೆಂಬಲಿಸುವ ಕರ್ನಾಟಕದ ಸಚಿವರೂ ಸಂಸದರೂ ಕನ್ನಡಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎನ್ನದೆ ವಿಧಿಯಿಲ್ಲ. ಈ ಬಗೆಯ ನಿರ್ಲಕ್ಷ್ಯಕ್ಕೆ ತಮಿಳರಂತೆ ಪ್ರತಿಭಟಿಸದೆ ಬೇರೆ ದಾರಿಯೇ ಇಲ್ಲ ಎಂದೂ ನನ್ನ ಅನಿಸಿಕೆ. ಇಲ್ಲದಿದ್ದರೆ ನಮ್ಮ ಮುಂದಿನ ತಲೆಮಾರುಗಳಿಗೆ ಕನ್ನಡವೇ ಪರಕೀಯ ಭಾಷೆಯಾಗುವುದು ನಿಶ್ಚಯ.