ಕೆ.ವಿ.ಶಂಕರಗೌಡ ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ನೀಡಿದವರು: ಪಿ.ಜಿ.ಆರ್.ಸಿಂಧ್ಯಾ

Update: 2019-09-17 16:49 GMT

ಮಂಡ್ಯ, ಸೆ.17: ಕೆ.ವಿ.ಶಂಕರಗೌಡ ಎಂದರೆ ಮಾಜಿ ಸಚಿವ, ಮಾಜಿ ಲೋಕಸಭಾ ಸದಸ್ಯ, ಮಾಜಿ ಶಾಸಕ ಎಂದು ಗುರುತಿಸುವುದಕ್ಕಿಂತ ಹೆಚ್ಚಾಗಿ ಅವರನ್ನು ಒಬ್ಬ ಬಹುಮುಖ ವ್ಯಕ್ತಿತ್ವದ ವ್ಯಕ್ತಿಯಾಗಿ ಕಾಣಬಹುದು. ಅದರಲ್ಲೂ ವಿಶೇಷವಾಗಿ  ಶಿಕ್ಷಣ ಕ್ಷೇತ್ರಕ್ಕೆ ಕಾಯಕಲ್ಪ ನೀಡಿದವರು ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅಭಿಪ್ರಾಯಪಟ್ಟಿದ್ದಾರೆ.

ಕೆ.ವಿ.ಶಂಕರಗೌಡರ ಜನ್ಮ ಶತಮಾನೋತ್ಸವದ ಅಂಗವಾಗಿ ನಗರದ ಗಾಂಧಿಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಏರ್ಪಡಿಸಿರುವ ಕೆ.ವಿ.ಶಂಕರಗೌಡ ಕೊಡುಗೆ ಕುರಿತ ವಿಚಾರ ಸಂಕಿರಣ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ಹಳ್ಳಿಹಳ್ಳಿಯ ಜನ ಕೆ.ವಿ.ಶಂಕರಗೌಡರನ್ನು ಆರಾಧಿಸುತ್ತಾರೆ. ಇದರ ಜೊತೆಗೆ ಬೀದರ್, ಉತ್ತರಕನ್ನಡ, ಬಾಗಲಕೋಟೆಯಂತಹ ಜನರೂ ಸಹ ನಿತ್ಯ ಸಚಿವ ಶಂಕರಗೌಡರ ಬಗ್ಗೆ ಅಪಾರ ಅಭಿಮಾನ ಹೊಂದಿರುವುದನ್ನು ನಾನು ಕಂಡಿದ್ದೇನೆ ಎಂದು ಅವರು ಹೇಳಿದರು.

ಶಂಕರಗೌಡರು ಮತ್ತು ಮಾಜಿ ಸಚಿವ ದಿವಂಗತ ಎಚ್.ಜಿ.ಗೋವಿಂದೇಗೌಡರು ಶಿಕ್ಷಣ ಕ್ಷೇತ್ರ ನೆನಪಿಸಿಕೊಳ್ಳುವ ವ್ಯಕ್ತಿತ್ವ ಹೊಂದ್ದಿದ್ದವರು. ತಮ್ಮ ದೂರದೃಷ್ಟಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೊಸ ರೂಪ ತಂದುಕೊಟ್ಟರು. ನೂರಾರು ಶಿಕ್ಷಣ ತರಬೇತಿ ಕೇಂದ್ರಗಳನ್ನು ತೆರೆದು ಲಕ್ಷಾಂತರ ಯುವಕರು ಶಿಕ್ಷಣ ಕ್ಷೇತ್ರ ಪ್ರವೇಶಿಸಲು ಕಾರಣಕರ್ತರಾದರು ಎಂದು ಅವರು ಸ್ಮರಿಸಿದರು.

ಮಂಡ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ತಾಂತ್ರಿಕ ಕಾಲೇಜನ್ನು ತೆರೆದು ಜಿಲ್ಲೆ ಮತ್ತು ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ. ಶಂಕರಗೌಡರು ಶಿಕ್ಷಣದ ಜೊತೆಗೆ ಸಹಕಾರ, ಸಾಹಿತ್ಯ, ರಂಗಭೂಮಿ ಕ್ಷೇತ್ರಗಳಲ್ಲೂ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ಹೇಳಿದರು.

ಶಂಕರಗೌಡರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ತಮ್ಮ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದವರು. ಇಂದಿಗೂ ಮಂಡ್ಯ ಜಿಲ್ಲೆಯ ಜನ ಸ್ವಾಭಿಮಾನಕ್ಕೆ ಹೆಸರಾದವರು. ಕೃತಜ್ಞತಾ ಮನೋಭಾವವನ್ನೂ ಹೊಂದಿದವರು. ಅಧಿಕಾರ, ಹಣ, ಸಂಪತ್ತಿನ ಹಿಂದೆ ಹೋದವರಲ್ಲ. ದೇಶ, ಭಾಷೆ, ಜಿಲ್ಲೆ, ಜನಾಂಗದ ಬಗ್ಗೆ ಅಪಾರ ಸ್ವಾಭಿಮಾನವುಳ್ಳವರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಎಂತಹ ದೊಡ್ಡ ಶಕ್ತಿಯನ್ನೂ ಎದುರಿಸಿ ನಿಲ್ಲಬಲ್ಲವರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ತಂತ್ರಜ್ಞಾನದ ಹಿಂದೆ ಹೋಗದೇ ಸಾರ್ವಕಾಲಿಕವಾದ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಂಡು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಂಕರಗೌಡರಂತಹವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಸಿಂಧ್ಯಾ ಅವರು ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು

ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ ಮಾತನಾಡಿದರು. ಪಿಇಟಿ ಟ್ರಸ್ಟ್ ನ ನಿರ್ದೇಶಕ ಡಾ.ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ, ವರಪ್ರಸಾದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News