ಜಾತಿ-ಒಂದು ಅಧ್ಯಯನ
‘ಜಾತಿ- ಸಾಮಾಜಿಕ ಪ್ರತ್ಯೇಕತೆ ಮತ್ತು ಬಡತನ’ ಇದು ಸುಖದೇವ್ ಥೋರಟ್ ಅವರು ಮಂಡಿಸಿದ ಪ್ರಬಂಧ. ಜಾತಿಯ ಕುರಿತ ಶಾಸ್ತ್ರೀಯ ಅಧ್ಯಯನಾತ್ಮಕ ಬರಹ ಇದು. ಪರಿಕಲ್ಪನೆ, ವೌಲ್ಯ ಮಾಪನ ಮತ್ತು ಪ್ರಾಯೋಗಿಕ ಸಾಕ್ಷಿಗಳನ್ನೊಳಗೊಂಡ ಈ ಲೇಖನ ಪೂರ್ತಿಯಾಗಿ ಅಕಾಡಮಿಕ್ ಆಗಿರುವುದು. ಅಥವಾ ವಿದ್ವಾಂಸರಿಗಾಗಿ ಬರೆದಿರುವುದು. ಆದುದರಿಂದಲೇ ಇಲ್ಲಿ ಅನುವಾದಗೊಂಡಿರುವ ಪಾರಿಭಾಷಿಕ ಶಬ್ದಗಳನ್ನು ಜೀರ್ಣಿಸಿಕೊಳ್ಳಲು, ಅದರ ಆಧಾರದಲ್ಲಿ ಈ ಕೃತಿಯನ್ನು ಅರ್ಥೈಸಿಕೊಳ್ಳಲು ಶ್ರೀಸಾಮಾನ್ಯರಿಗೆ ಕಷ್ಟವಾಗಬಹುದು. ಇದೊಂದು ರೀತಿಯಲ್ಲಿ ಸಕ್ಕರೆಯ ರುಚಿಯ ವೈಜ್ಞಾನಿಕ ಸಂಗತಿಗಳನ್ನು ಬರೆದಂತೆ. ಸಕ್ಕರೆಯನ್ನು ಸವಿದವನಿಗೂ ಅದರ ಕುರಿತ ವಿವರಗಳನ್ನು ಅರ್ಥೈಸುವುದು ಕಷ್ಟವಾಗಬಹುದು.
ಈ ಕೃತಿಯ ಪ್ರಸ್ತಾವನೆ ಹೀಗೆ ಹೇಳುತ್ತದೆ ‘‘ಈ ಪ್ರಬಂಧವು ಪರಸ್ಪರ ಸಂಬಂಧಗಳುಳ್ಳ ವಿಷಯಗಳನ್ನು ಕುರಿತು ಸಂಬೋಧಿಸುತ್ತದೆ. ಮೊದಲನೆಯದಾಗಿ ಇಂಡಿಯಾದ ವ್ಯವಸ್ಥೆಯಲ್ಲಿ ಅವಕಾಶ ವಂಚಿತ ತಳ ಸಮುದಾಯಗಳ ಮೇಲೆ ನಡೆಸಲಾಗುತ್ತಿರುವ ‘ಪ್ರತ್ಯೇಕತೆಯನ್ನು ಒಳಗೊಂಡ ದಬ್ಬಾಳಿಕೆ’ಗಳ ಸ್ವರೂಪ ಮತ್ತು ವಿವಿಧ ಆಯಾಮಗಳನ್ನು ಪರಿಕಲ್ಪಿತಗೊಳಿಸುತ್ತದೆ. ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ಅವಕಾಶವಂಚಿತ ತಳಸಮುದಾಯಗಳ ಬಡತನದ ಮೇಲೆ ಅದರ ಪರಿಣಾಮಗಳ ಕುರಿತ ಪರಿಕಲ್ಪನೆ ಮತ್ತು ಅರ್ಥಗಳನ್ನು ಇದೇ ಪ್ರಕ್ರಿಯೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ. ಎರಡನೆಯದಾಗಿ ಮೇಲಿನ ಈ ಸಿದ್ಧಾಂತದ ಹಿನ್ನೆಲೆಯಲ್ಲಿ ಜಾತಿ ಆಧಾರಿತ ಪ್ರತ್ಯೇಕತೆಯ ಆಚರಣೆಗಳು, ಸಾಮಾಜಿಕ, ನಾಗರಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ವಲಯಗಳಲ್ಲಿ ತಳ ಸಮುದಾಯಗಳ ಹಕ್ಕುಗಳನ್ನು ನಿರಾಕರಿಸಿದ ತಾರತಮ್ಯ ನೀತಿಗಳು ಮತ್ತು ಈ ಜಾತೀಯತೆಯ ಕಾರಣದಿಂದಾಗಿ ಬದುಕು ಕಟ್ಟಿಕೊಳ್ಳಲು ಬೇಕಾದಂತಹ ಆರ್ಥಿಕ ವರಮಾನದ ಕೊರತೆ, ವ್ಯವಸಾಯ, ಭೂಮಿ, ಶಿಕ್ಷಣ, ನೌಕರಿ, ನಾಗರಿಕ ಸೌಲಭ್ಯಗಳಾದ ಮನೆ, ನೀರು, ವಿದ್ಯುತ್ ಮುಂತಾದವುಗಳ ಕನಿಷ್ಠ ಸೌಲಭ್ಯಗಳು ಇಲ್ಲದೇ ಇರುವುದರ ಕುರಿತಾದ ಅಂಕಿ ಅಂಶಗಳನ್ನಾಧರಿಸಿದ ಪ್ರಾಯೋಗಿಕ ಸಾಕ್ಷಿಯನ್ನು ಒದಗಿಸಲು ಪ್ರಯತ್ನಿಸಲಾಗಿದೆ’’
ಸಾಮಾಜಿಕ ಪ್ರತ್ಯೇಕತೆಯ ಕುರಿತಾದ ಪರಿಕಲ್ಪನೆಗಳು, ಜಾತಿ ಆಧಾರಿತ ಪ್ರತ್ಯೇಕತೆ ಮತ್ತು ತಾರತಮ್ಯದ ಪರಿಕಲ್ಪನೆ, ಜಾತಿ ಪ್ರತ್ಯೇಕತೆ ಮತ್ತು ತಾರತಮ್ಯ ನೀತಿಯ ಸ್ವರೂಪಗಳು, ಜಾತಿ ಪ್ರತ್ಯೇಕತೆ ಮತ್ತು ತಾರತಮ್ಯ: ಪ್ರಾಯೋಗಿಕ ಸಾಕ್ಷಿಗಳು, ಆರ್ಥಿಕ ಪ್ರತ್ಯೇಕತೆ ಮತ್ತು ತಾರತಮ್ಯ: ಪ್ರಾಯೋಗಿಕ ಸಾಕ್ಷಿಗಳು, ಜಾತಿ ಪ್ರತ್ಯೇಕತೆ ಮತ್ತು ಆಹಾರದ ಹಕ್ಕು, ನಾಗರಿಕ ಮತ್ತು ರಾಜಕೀಯ ವಲಯಗಳಲ್ಲಿ ಪ್ರತ್ಯೇಕತೆ ಮತ್ತು ತಾರತಮ್ಯ, ವಿವಿಧ ರಾಜ್ಯಗಳ ಅಧ್ಯಯನ, ನ್ಯಾಯಕ್ಕಾಗಿ ದಾರಿಯ ಹುಡುಕಾಟ...ಹೀಗೆ ಬೇರೆ ತಲೆಬರಹಗಳಲ್ಲಿ ಜಾತಿಯನ್ನು ಚರ್ಚಿಸಲಾಗಿದೆ. ಲಡಾಯಿ ಪ್ರಕಾಶನ, ಗದಗ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 52. ಮುಖಬೆಲೆ 40 ರೂ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.