ಸ್ವದೇಶೀಕರಣದ ಹೊಸ್ತಿಲಲ್ಲಿ ಯುಎಇ

Update: 2019-09-19 18:30 GMT

ದೇಶ, ಭಾಷೆ, ಧರ್ಮ, ಪಂಗಡ ಎಂಬ ಭೇದಭಾವವಿಲ್ಲದೆ ವಿಶ್ವದ ನಾನಾ ದೇಶಗಳ ಪ್ರವಾಸಿಗರಿಗೆ ಕೆಲಸವನ್ನಿತ್ತು ಉದ್ಯೋಗಿಗಳ ತವರೂರಾಗಿ ರೂಪುಗೊಂಡಿರುವ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಿಂದೆ 11.48 ಶೇ.ದಷ್ಟು ಮಾತ್ರವೇ ಇದ್ದ ಇಲ್ಲಿನ ಸ್ವದೇಶಿಗರ ಸಂಖ್ಯೆ ಈಗ ವೃದ್ಧಿಸಿದೆ. ಕಡಿಮೆ ಜನಸಂಖ್ಯೆಯ ಹಿನ್ನೆಲೆಯಲ್ಲಿ ಹಿಂದೆ ಸರಕಾರಿ ಕಚೇರಿಗಳೇ ಇಲ್ಲಿನ ಸ್ವದೇಶಿ ಉದ್ಯೋಗಾಕಾಂಕ್ಷಿಗಳ ಬೇಡಿಕೆಗಳನ್ನು ಪೂರೈಸಿಕೊಡುತ್ತಿತ್ತು. ಆದರೆ ಈಗ ಸರಕಾರಿ ಕಚೇರಿಗಳಲ್ಲಿ ಉದ್ಯೋಗದ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಇನ್ನಿತರ ಖಾಸಗಿ ಸಂಸ್ಥೆಗಳ ಕಡೆಗೂ ಅವರು ದೃಷ್ಟಿಯಿಡುತ್ತಿದ್ದಾರೆ. ಈ ಹಿಂದೆ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ವಿದೇಶಿಗಳೇ ಹೆಚ್ಚಾಗಿ ತಮ್ಮ ಕೈವಶಪಡಿಸಿಕೊಳ್ಳುತ್ತಿದ್ದರು. ಅದಕ್ಕೆ ಬೇಕಾದ ಶಿಕ್ಷಣ, ಚಾಕಚಕ್ಯತೆ, ಕೌಶಲ್ಯಗಳನ್ನು ವಿದೇಶಿಗರು ಹೊಂದಿರುತ್ತಿದ್ದರು. ಇದೀಗ ಇಲ್ಲಿನ ಯುವಕರು ಉನ್ನತ ವಿದ್ಯಾನಿಲಯಗಳಿಂದ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಳ್ಳುತ್ತಿದ್ದು, ಖಾಸಗಿ ಕಂಪೆನಿಗಳ ಉನ್ನತ ಹುದ್ದೆಗಳ ಕಡೆಗೆ ದೃಷ್ಟಿ ನೆಟ್ಟಿರುವುದರಿಂದ ಕೆಲವು ವಿಭಾಗಗಳಲ್ಲಿ ಸ್ವದೇಶೀಕರಣ ನಡೆಸುವುದು ಇಲ್ಲಿನ ಸರಕಾರಕ್ಕೆ ಅನಿವಾರ್ಯವಾಗಿಬಿಟ್ಟಿದೆ. ವಲಸಿಗರ ನೇಮಕಾತಿಗೆ ಮುಂಚೆ ಅರ್ಹ ಯುಎಇಗರಿಗೆ ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಕಲ್ಪಿಸಿಕೊಡುವ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲು ಈ ಬಗ್ಗೆ ಇರುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒಕ್ಕೂಟ ರಾಷ್ಟೀಯ ಮಂಡಳಿ(ಎಫ್‌ಎನ್‌ಸಿ)ಯ ದುಬೈ ಪ್ರತಿನಿಧಿ ಹಾಮದ್ ಅಲ್ ರೂಹಿಮಿ ಇತ್ತೀಚೆಗಷ್ಟೆ ಆದೇಶಿಸಿದ್ದರು.
ಏತನ್ಮಧ್ಯೆ ಇಲ್ಲಿನ ವಿಶ್ವವಿದ್ಯಾನಿಲಯಗಳೂ ಸ್ವದೇಶೀಕರಣಕ್ಕಾಗಿ ತಮ್ಮ ಸ್ವದೇಶಿ ವಿದ್ಯಾರ್ಥಿಗಳನ್ನು ಭರ್ಜರಿಯಾಗಿಯೇ ಸಿದ್ಧಗೊಳಿಸುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬೇಕಾದ ಕೌಶಲ್ಯ ಹಾಗೂ ಇನ್ನಿತರ ಅರ್ಹತೆಗಳನ್ನು ವಿದ್ಯಾರ್ಥಿಗಳಲ್ಲಿ ಪಡಿಮೂಡಿಸುತ್ತಿದೆ. ‘‘ಖಾಸಗಿ ಸಂಸ್ಥೆಗಳಲ್ಲಿ ಸ್ವದೇಶಿಗಳ ನೇಮಕಾತಿಯು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಭಾರೀ ಮಹತ್ವವನ್ನು ಹೊಂದಿದೆ’’ ಎಂದು ಅಬುಧಾಬಿಯ ಝಾಯೆದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗಿರುವ ಉದ್ಯೋಗ ಕಚೇರಿಯ ವ್ಯವಸ್ಥಾಪಕ ರಾಶಿದ್ ಅಲ್ ಶಂಸಿ ಹೇಳುತ್ತಾರೆ.


‘‘ಸ್ವದೇಶೀಕರಣದ ಭಾಗವಾಗಿ ಹಲವಾರು ಕಾರ್ಯಕ್ರಮಗಳನ್ನು ಝಾಯೆದ್ ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿದ್ದು, ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಇನ್ನಿತರ ಉನ್ನತ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಲು ಹೆಚ್ಚಿನ ಆಸ್ಥೆ ವಹಿಸಿದೆ.ಖಾಸಗಿ, ಅರೆ ಸರಕಾರಿ ಸಂಸ್ಥೆಗಳೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವದೇಶಿಗಳನ್ನು ನೇಮಕಗೊಳಿಸುವುದೇ ಇದರ ಹಿಂದಿರುವ ಪ್ರಧಾನ ಉದ್ದೇಶ. ಕಾರ್ಯಕ್ರಮ ಜಾರಿಯಾದ ಕೇವಲ 100 ದಿನಗಳಲ್ಲಿ 80ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ’’ ಎಂದು ಅವರು ಹೇಳಿದ್ದಾರೆ.
ಸ್ವದೇಶೀಕರಣವೆನ್ನುವುದು ಪ್ರಸ್ತುತ ಋತುವಿನ ಯುಎಇ ಸರಕಾರದ ಪ್ರಧಾನ ಅಜೆಂಡಾಗಳಲ್ಲಿ ಒಂದಾಗಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಯುಎಇ ಪ್ರಧಾನಿ ಶೇಖ್ ರಾಶಿದ್ ಅಲ್ ಮಖ್ತೂಂ ತಿಳಿಸಿದ್ದಾರೆ. ನಾವು ಪ್ರಕ್ರಿಯೆಯನ್ನು ಪರಿವೀಕ್ಷಿಸುತ್ತಿದ್ದೇವೆ. ನಾಗರಿಕರಿಗೆ ಉದ್ಯೋಗ ಕಲ್ಪಿಸಿಕೊಡುವುದು ತಮ್ಮ ಪ್ರಧಾನ ಗುರಿ ಎಂದು ಅವರು ಹೇಳಿದ್ದಾರೆ. ಹೊಸದಾಗಿ ಪದವಿ ಪೂರ್ತಿಗೊಳಿಸಿದ ಯುಎಇ ನಾಗರಿಕರಿಗೆ ಕೆಲಸ ಗಿಟ್ಟಿಸಿಕೊಡುವ ನೂತನ ಯೋಜನೆಗೆ ಶಾರ್ಜಾ ದೊರೆ ಹಾಗೂ ಯುಎಇ ಸುಪ್ರೀಂ ಕೌನ್ಸಿಲ್ ಸದಸ್ಯ ಶೇಖ್ ಡಾ.ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಇತ್ತೀಚೆಗೆ ಚಾಲನೆ ನೀಡಿದ್ದರು. ಹೊಸ ಯೋಜನೆಯ ಅನುಸಾರ ಖಾಸಗಿ ಶಾಲೆಗಳಲ್ಲಿ ಸುಮಾರು 400 ಉದ್ಯೋಗವನ್ನು ಯುಎಇ ಸರಕಾರ ಕಲ್ಪಿಸಿಕೊಡಲಿದೆ. ದುಬೈ ರಾಜಕುಮಾರ ಹಾಗೂ ದುಬೈ ಕಾರ್ಯಕಾರಿಣಿ ಮಂಡಳಿಯ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಂ ಸ್ವದೇಶೀಕರಣ ಸಂಬಂಧ ಕಾರ್ುಪಡೆಯೊಂದನ್ನು ರಂಗಕ್ಕಿಳಿಸಿದ್ದಾರೆ.


ವರ್ಷಾಂತ್ಯದೊಳಗೆ ಯುಎಇ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸ್ವದೇಶಿಗರನ್ನು ಉದ್ಯೋಗಕ್ಕೆ ನೇಮಕಗೊಳಿಸಿ ನಿಗದಿತ ಗುರಿ ತಲುಪುವಂತೆ ಇಲ್ಲಿನ ಕೇಂದ್ರಬ್ಯಾಂಕ್ ಎಲ್ಲಾ ಅಧೀನ ಬ್ಯಾಂಕ್‌ಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ.
ಖಾಸಗಿ ಸಂಸ್ಥೆಗಳಲ್ಲಿ ಯುಎಇಯ ಪುರುಷ-ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವ ಸಂಬಂಧ ಸ್ವದೇಶೀಕರಣ ಪ್ರಕ್ರಿಯೆಗಳನ್ನು ಅಲ್ಲಿನ ಸರಕಾರ ಹಲವು ವರ್ಷಗಳ ಹಿಂದೆಯೇ ಕಾನೂನು ಜಾರಿಗೊಳಿಸಿತ್ತು. 1980ರ ಒಕ್ಕೂಟ ಕಾನೂನು ಸಂಖ್ಯೆ 8 (ಕಾರ್ಮಿಕ ಕಾನೂನು)ರ ಪ್ರಕಾರ, ಮಾನವ ಸಂಪನ್ಮೂಲ ಹಾಗೂ ಸ್ವದೇಶೀಕರಣ ಸಚಿವಾಲಯವು ರಾಷ್ಟ್ರದ ಯುವಕರಿಗೆ ವಿವಿಧ ರೀತಿಯ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡುವ ಸಂಬಂಧ ವಿಶೇಷ ಇಲಾಖೆಯನ್ನು ರಚಿಸುವಂತೆ ಸೂಚಿಸಿತ್ತು.
ಸ್ವದೇಶೀಕರಣದ ಭಾಗವಾಗಿ 2018ರಲ್ಲಿ ಇಲ್ಲಿನ ನಾಗರಿಕರಿಗೆ 20,000ದಷ್ಟು ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 6,10,000ದಷ್ಟು ಗುರಿ ಸಾಧಿಸುವುದಾಗಿ ಸರಕಾರ ಹೇಳುತ್ತಿದೆ. ಏನೇ ಆದರೂ ಸ್ವದೇಶೀಕರಣದಿಂದಾಗಿ ಪ್ರವಾಸಿಗರ ಉದ್ಯೋಗಗಳ ಮೇಲೆ ಕೊಂಚಮಟ್ಟಿನ ವ್ಯತಿರಿಕ್ತ ಪರಿಣಾಮ ಬೀರುವುದು ಗ್ಯಾರಂಟಿ.

ಯುಎಇ ಜನಸಂಖ್ಯೆ
ಯುಎಇ ನಾಗರಿಕರು-ಶೇ. 11.48
ಭಾರತೀಯರು-ಶೇ. 27.49
ಪಾಕಿಸ್ತಾನೀಯರು-ಶೇ. 12.69
ಈಜಿಪ್ಟಿಯನ್ನರು-ಶೇ. 4.23
ಫಿಲಿಪ್ಪೀನ್ಸ್-ಶೇ. 5.56
ಇತರರು-ಶೇ. 38.55

Writer - ಸಿರಾಜ್ ಅರಿಯಡ್ಕ

contributor

Editor - ಸಿರಾಜ್ ಅರಿಯಡ್ಕ

contributor

Similar News

ಜಗದಗಲ
ಜಗ ದಗಲ