ಹಿಂದಿ: ಭಾರತದ ಭಾಷೆಗಳನ್ನು ಕರಗಿಸುವ ಪಾತ್ರೆ

Update: 2019-09-21 13:05 GMT

            ರಂಗನಾಥ ಕಂಟನಕುಂಟೆ

ಪ್ರಭುತ್ವದ ಈ ‘ಸೃಷ್ಟಿಶೀಲ’ ಪ್ರಯತ್ನದ ಪರಿಣಾಮವಾಗಿ ಹಿಂದಿ ಪ್ರಭುತ್ವ ಭಾಷೆಯ ಸ್ಥಾನವನ್ನು ಪ್ರಥಮ ಬಾರಿಗೆ ಅಲಂಕರಿಸಿದ್ದು ಸ್ವತಂತ್ರ ಭಾರತದಲ್ಲಿಯೇ. ಈ ಕಾಲವೇ ಹಿಂದಿ ಭಾಷೆಯ ನಿಜವಾದ ಅಧಿಕಾರದ, ಯಾಜಮಾನಿಕೆಯ ಘಟ್ಟ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಿರುವ ಅಂಶವೆಂದರೆ ಬ್ರಿಟಿಷ್ ವಸಾಹತುಶಾಹಿಗಳ ದಾಸ್ಯದಿಂದ ಬಿಡುಗಡೆಗೊಂಡು ‘ಸ್ವತಂತ್ರ ರಾಜಕೀಯ ವ್ಯವಸ್ಥೆ’ ಸ್ಥಾಪಿಸಿದ ಕಾಲಘಟ್ಟದಲ್ಲಿ ಇದು ನಡೆದ ಪ್ರಕ್ರಿಯೆಯಾಗಿದೆ. ಮತ್ತೆ ಸಾಮಾನ್ಯವಾಗಿ ತನಗೆ ಬೇಕಿರುವ ಭಾಷಿಕ ನೆರವನ್ನು ‘ಜೀವಂತ’ವಾಗಿರುವ ಭಾಷೆಯೊಂದರಿಂದ ಆಯಾ ಕಾಲದ ತನ್ನ ಅಗತ್ಯಗಳ ಅನುಸಾರವಾಗಿ ಪ್ರಭುತ್ವ ಪಡೆಯಲು ಬಯಸುತ್ತದೆ. ಆದರೆ ಭಾರತ ಗಣರಾಜ್ಯದ ಆಡಳಿತಾತ್ಮಕ ಭಾಷೆಯಾಗಿ ಸ್ವೀಕರಿಸಲಾಗಿರುವ ಹಿಂದಿ ಭಾಷೆಗೂ ಈ ದೇಶದ ಸಂಸ್ಕೃತಿಗೂ ಅಂತಹ ಅವಿನಾಭಾವ ಸಂಬಂಧವೇನೂ ಇಲ್ಲ. ಅದರ ಚರಿತ್ರೆಯ ಬಗೆಗೆ ಒಂದಿಷ್ಟು ಗಮನಹರಿಸಿದರೆ ನಮಗದು ಅರ್ಥವಾಗುತ್ತದೆ.

‘‘ಆಧುನಿಕ ಭಾರತೀಯ ಭಾಷೆಗಳ ಪೈಕಿ ಹಿಂದಿ ಇಂದಿನ ಉನ್ನತಿಗೆ ಏರಿದ ರೀತಿ ಆಶ್ಚರ್ಯಕರವಾಗಿದೆ. ಅದರ ಬೆಳವಣಿಗೆಯು ನಾಟಕೀಯ ಬದಲಾವಣೆಯನ್ನು ಸೂಚಿಸುತ್ತದೆ. ಒಂದು ಶತಮಾನದ ಹಿಂದಿನವರೆಗೂ ಅದನ್ನು ಹಿಂದುಳಿದ, ಮನ್ನಣೆಯಿಲ್ಲದ, ಹತ್ತಾರು ಪ್ರಬೇಧಗಳಲ್ಲಿ ಹಂಚಿಹೋಗಿರುವ, ಗ್ರಾಮೀಣ ಜನರ ಬಳಕೆಯ ಭಾಷೆಯಾಗಿ, ಸಾಹಿತ್ಯಕವಾಗಿ ಸಾಂಪ್ರದಾಯಿಕತೆಯ ದೂಳು ಹಿಡಿದ ಭಾಷೆಯೆಂದು ಪರಿಗಣಿಸಲಾಗಿತ್ತು. 19ನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ ಹಿಂದಿ ಸಮಗ್ರತೆ ಯೊಂದಿಗೆ ಹೊಸ ಸ್ವರೂಪ ಪಡೆದು ಕೊಳ್ಳಲಾರಂಭಿಸಿತು. ವಿಶೇಷವಾಗಿ ತನ್ನಷ್ಟೇ ಉತ್ತರ ಭಾರತದ ವಿಶಾಲ ಪ್ರದೇಶ ದಲ್ಲಿ ಹರಡಿಕೊಂಡಿದ್ದ ಸೋದರ ಭಾಷೆಯಾದ ಉರ್ದುವಿನೊಂದಿಗೆ ಹೆಚ್ಚು ಆಕ್ರಮಣಶೀಲತೆಯಿಂದ ತನ್ನ ಅಸ್ತಿತ್ವವನ್ನು ಸಮರ್ಥಿಸಿ ಕೊಳ್ಳತೊಡಗಿತು. ನಿರಂತರವಾದ ಸಂಘರ್ಷದ ಪರಿಣಾಮವಾಗಿ ತನ್ನ ಸಾರ್ವಜನಿಕ ಅವಕಾಶವನ್ನು ಅದು ಎಷ್ಟು ವಿಸ್ತರಿಸಿಕೊಂಡಿತು ಎಂದರೆ ಗಾಂಧೀಜಿ ಮತ್ತು ಭಾರತೀಯ ಕಾಂಗ್ರೆಸ್ ಅದನ್ನು ರಾಷ್ಟ್ರಭಾಷೆಯಾಗಿ ಬಳಸಿಕೊಂಡರು. ಇದರಿಂದ ಸ್ವಾತಂತ್ರ ನಂತರ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಪ್ರತಿಷ್ಠಾಪಿಸುವಂತಾಯಿತು. ಸ್ವಾತಂತ್ರ ನಂತರದಲ್ಲಿ ಹಿಂದಿಯನ್ನು ರಾಷ್ಟ್ರದ ಅಧಿಕೃತ ಭಾಷೆ ಎಂದು ಘೋಷಣೆಯಾದ ಮೇಲೆ ರಾಷ್ಟ್ರೀಯವಾದದ ವಿರೋಧಕ್ಕೆ ಒಂದು ಮಾಧ್ಯಮವಾದುದಷ್ಟೇ ಅಲ್ಲದೆ ವೇದಿಕೆಯೂ ಆಯಿತು.’’

ಈ ಹಿಂದೆಯೇ ಹೇಳಿದಂತೆ ಹಿಂದಿ ಭಾಷೆಯ ಬೆಳವಣಿಗೆ ವಸಾಹತುಶಾಹಿಯ ವಿರೋಧಿ ರಾಜಕಾರಣದ ನಡುವೆ ನಿರ್ಮಿತವಾದುದು ಎಂಬುದನ್ನು ತ್ರಿವೇದಿ ಅವರ ಮೇಲಿನ ಅಭಿಪ್ರಾಯ ಸಮರ್ಥಿಸುತ್ತದೆ. ಅದರಲ್ಲಿಯೂ ‘ಭಾರತ ರಾಷ್ಟ್ರೀಯತೆ’ಯ ಸಂಕೇತವಾಗಿ ಬೆಳೆಸಲು ಅದನ್ನು ಅಧಿಕೃತ ಭಾಷೆಯಾಗಿ ಘೋಷಿಸಿದ ನಂತರವೇ ಅದು ತೀವ್ರ ರೂಪದಲ್ಲಿ ಬೆಳವಣಿಗೆಯಾಗಿದೆ. ಅಲ್ಲದೆ ಸ್ವಾತಂತ್ರ ನಂತರದಲ್ಲಿ ಸಂವಿಧಾನ ಬದ್ಧವಾದ ನಿಯಮಗಳನ್ನು ರೂಪಿಸಿ ಅದರ ಅಭಿವೃದ್ಧಿಗೆ ಕೋಟ್ಯಂತರ ರೂ.ವನ್ನು ಕೇಂದ್ರಪ್ರಭುತ್ವ ವ್ಯಯಿಸಿದ ಪರಿಣಾಮವಾಗಿ ಅದರ ಬೆಳವಣಿಗೆ ಸಾಧ್ಯವಾಗಿದೆ. ಹಿಂದಿಯ ಬೆಳವಣಿಗೆಗೆ ಹಣಕಾಸಿನ ನೆರವು ಹೇಗೆ ವಿವಿಧ ಸಂಘ ಸಂಸ್ಥೆಗಳಿಗೆ ಹರಿದು ಹೋಗುತ್ತಿತ್ತು ಎನ್ನುವುದನ್ನು ಜ್ಯೋತಿರಿಂದ್ರ ದಾಸ್ ಗುಪ್ತ ವಿವರವಾಗಿ ಚರ್ಚಿಸಿದ್ದಾರೆ. ಆದರೆ ಯಾವುದೋ ಅಪರಿಚಿತ ಭಾಷೆಯೊಂದನ್ನು ಅನಾಮ ತ್ತಾಗಿ ಆಡಳಿತಾತ್ಮಕ ಭಾಷೆಯೆಂದು ಘೋಷಿಸಲಾ ಗುವುದಿಲ್ಲ. ಯಾವುದೇ ಭಾಷೆಯನ್ನು ಒಂದು ದೇಶದ ಆಡಳಿತಾತ್ಮಕ ಭಾಷೆ ಯೆಂದು ಘೋಷಿಸುವುದರ ಹಿಂದೆ ಆ ಭಾಷೆಗೂ ಮತ್ತು ಆ ದೇಶದ ಜನಸಮುದಾಯದ ಸಾಂಸ್ಕೃತಿಕ ಬದುಕಿಗೂ ಇರುವ ತಾದಾತ್ಮ ಸಂಬಂಧಗಳೇ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳ ಆಧಾರದ ಮೇಲೆಯೇ ಯಾವುದು ವ್ಯಾವಹಾರಿಕ ಅಥವಾ ಆಡಳಿತಾತ್ಮಕ ಭಾಷೆಯಾಗಬೇಕು ಎಂಬುದು ನಿರ್ಧಾರ ಗೊಳ್ಳುತ್ತದೆ. ಆ ರಾಷ್ಟ್ರದ ಜನತೆಯ ಜತೆ ಆ ಭಾಷೆಗೆ ನೇರವಾದ ಅಂತಸ್ಥ ಸಂಬಂಧಗಳು ಇದ್ದಾಗ ಮಾತ್ರ ಅಂತಹ ಭಾಷೆಯನ್ನು ಆಡಳಿತಾತ್ಮಕ ಭಾಷೆಯೆಂದು ಘೋಷಿಸುವುದು ಸಹಜ ಪ್ರಕ್ರಿಯೆ ಆಗಿರುತ್ತದೆ. ಅಂತಹ ಸಂಬಂಧಗಳಿಲ್ಲದ ಭಾಷೆಯನ್ನು ಆಡಳಿತಾತ್ಮಕ ಭಾಷೆಯೆಂದು ಸ್ವೀಕರಿಸುವ ಸಾಧ್ಯತೆಗಳು ಈವರೆಗೂ ಭಾಗಶಃ ಕಡಿಮೆ ಇರುತ್ತಿದ್ದವು. ಆದರೆ ಇಲ್ಲಿ ಹಿಂದಿ ಈ ಹಿಂದೆ ಯಾವತ್ತೂ ವಿಶಾಲ ಭಾರತದ ಜನತೆಯ ಭಾಷೆಯಾಗಿರಲಿಲ್ಲ. ಇದಕ್ಕೆ ಇತರೆ ಭಾರತೀಯ ಭಾಷೆ ಗಳಂತೆ ಸಾಹಿತ್ಯಕ ಮತ್ತು ರಾಜ ಕೀಯ ಇತಿಹಾಸ ಗಳೂ ಇರಲಿಲ್ಲ. ಹಾಗಾಗಿ ಇದು ಪ್ರಭುತ್ವ ದ ನೇರ ಪಾಲ್ಗೊ ಳ್ಳುವಿಕೆಯಿಂದಲೇ ವಿಕಾಸಗೊಳ್ಳ ತೊಡ ಗಿದ್ದು ಈವರೆಗಿನ ಭಾಷೆಯ ವ್ಯಾಖ್ಯಾನ ಗಳನ್ನೇ ಬದಲಿಸಿಬಿಟ್ಟಿದೆ. ಪ್ರಭುತ್ವ ಅಥವಾ ಪ್ರಬಲ ವಾದ ಆಳುವ ವರ್ಗಗಳ ಗುಂಪೊಂದು, ತನ್ನ ಭಾಷಾ ಯೋಜನೆಯ ಮೂಲಕ ಹೊಸ ಭಾಷೆಯನ್ನು ಸೃಷ್ಟಿಸುವ, ಅಥವಾ ಇರುವ ಭಾಷೆಯನ್ನು ಪರಿವರ್ತಿಸುವಂತಹ, ನಿಧಾನ ವಾಗಿ ಕೊಲ್ಲುವಂತಹ ಪ್ರಯತ್ನವನ್ನು ನೆರವೇರಿಸಬಹುದು ಎಂಬುದು ಇದರಿಂದ ವ್ಯಕ್ತಗೊಳ್ಳುತ್ತದೆ. ಮತ್ತೆ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಆಧುನಿಕಗೊಂಡಿದ್ದ ಒಂದು ಸಿದ್ಧ ಭಾಷೆಯನ್ನು ಕೇಂದ್ರದ ನವ ಪ್ರಭುತ್ವ ಬೆಳೆಸಲಿಲ್ಲ. ಬದಲಾಗಿ ಒಂದು ಹೊಸ ಭಾಷೆಯನ್ನೇ ತನ್ನ ಅಗತ್ಯಕ್ಕೆ ತಕ್ಕಂತೆ ಬೆಳೆಸಿಕೊಳ್ಳಲಾಯಿತು. ಮೇಲೆ ವಿವರಿಸಿದಂತೆ ಅಖಂಡ ರಾಷ್ಟ್ರಕ್ಕೊಂದು ಭಾಷೆಯನ್ನು ವ್ಯವಸ್ಥಿತವಾಗಿ ರೂಪಿಸುವ ಸಲುವಾಗಿ ಕಲ್ಪಿತ ಭಾಷೆಗಾಗಿ ಹಲವು ಭಾಷೆಗಳ ಅಸ್ತಿತ್ವವನ್ನೇ ನಿರಾಕರಿಸುತ್ತ ಇದನ್ನು ಸೃಷ್ಟಿಸಲಾಗಿದೆ. ಅವುಗಳಲ್ಲಿ ಬ್ರಜ್ ಭಾಷೆ, ಅವಧಿ, ರಾಜಸ್ಥಾನಿ, ಬೋಜ್‌ಪುರಿ, ಮೈಥಿಲಿ ಹಾಗೂ ಅನೇಕ ಬುಡಕಟ್ಟು ಜನರ ಭಾಷೆಗಳನ್ನು ಹಿಂದಿಯ ಉಪಭಾಷೆಗಳು ಎಂದೆನ್ನುತ್ತಾ ಅದನ್ನು ರೂಪಿಸಲಾಗಿದೆ. ಇಂತಹ ಅಭಿಪ್ರಾಯಗಳನ್ನು ಪ್ರತಿಪಾದಿಸುವವರಿಗಿಂತ ಭಿನ್ನವಾದ ಒಳ ನೋಟವನ್ನು ಸ್ಟುವ ರ್ಟ್ ಮೆಗ್ರಾರ್‌ರ ಈ ಅಭಿಪ್ರಾಯ ನೀಡುತ್ತದೆ. ಸ್ಟುವರ್ಟ್ ಮೆಗ್ರಾರ್ ಅನ್ನುವಂತೆ,

It is historically and linguistically inappropriate to speak of early Brajbhasha and Avadhi as dialects of modern Hindi, Which they long preceded as literary languages: however in the context of an early twenty first century consideration of questions of literary culture in north India, they may properly be regarded as falling within a composite “literary tradition of Hindi.

ಈ ಅಭಿಪ್ರಾಯವು ಹಿಂದಿಯ ರಚನೆಯ ಹಿಂದಿನ ಪ್ರಯತ್ನಗಳ ಅವೈಜ್ಞಾನಿಕತೆಯನ್ನು ಹೊರ ಗೆಡಹುತ್ತದೆ. ಹಾಗಾಗಿ ಹಿಂದಿ ಭಾಷೆಯ ಚರಿತ್ರೆಯೇ ಇಲ್ಲಿ ಪ್ರಶ್ನಾರ್ಹವಾಗುತ್ತದೆ. ಸಾಮಾನ್ಯವಾಗಿ ಯಾವ ವರ್ಗ ಅಥವಾ ಪ್ರಬಲ ಸಮುದಾಯ ರಾಷ್ಟ್ರಪ್ರಭುತ್ವ ವನ್ನು ಸ್ಥಾಪಿಸಲು ಬಯಸುತ್ತಿರುತ್ತದೆಯೋ, ಆ ವರ್ಗದ, ಸಮುದಾಯದ ಭಾಷೆಯನ್ನೇ ರಾಷ್ಟ್ರಪ್ರಭುತ್ವದ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ರಶ್ಯನ್ ಭಾಷಿಕ ರಾಷ್ಟ್ರೀಯ ಸಮುದಾಯ ರಾಷ್ಟ್ರಪ್ರಭುತ್ವ ಸ್ಥಾಪನೆಯ ಮುಂಚೂಣಿಯ ವರ್ಗವಾಗಿದ್ದು, ಅದರ ಭಾಷೆಯನ್ನು ಇಡೀ ಒಕ್ಕೂಟದ ಸಂಪರ್ಕದ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿತು. ಅದೂ ಭಾರತದ ರೀತಿಯಲ್ಲಿ ಅಧಿಕೃತವಾಗಿಯಲ್ಲ, ಅನಧಿಕೃತವಾಗಿ.

ಆದರೆ ಭಾರತದಲ್ಲಿ ಇದಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಆಳುವ ವರ್ಗಗಳು ವರ್ತಿಸಿದವು. ಯಾಕೆಂದರೆ ಇಲ್ಲಿ ರಾಷ್ಟ್ರಪ್ರಭುತ್ವವನ್ನು ಸ್ಥಾಪಿಸಲು ಮುಂದೊಡಗಿದ್ದವರಲ್ಲಿ ಯಾವುದೇ ಪ್ರಬಲ ರಾಷ್ಟ್ರೀಯ ಸಮುದಾಯವೂ ಇರಲಿಲ್ಲ. ಅಂತಹ ಸಮುದಾಯದ ಭಾಷೆಯು ಇರಲಿಲ್ಲ. ಬದಲಿಗೆ ಆ ವರ್ಗವು ವಿಭಿನ್ನ ಭಾಷೆಗಳ, ಸಂಸ್ಕೃತಿಗಳ ಹಿನ್ನೆಲೆಯಿಂದ ಬಂದ ವರ್ಗ ಅದಾಗಿತ್ತು. ಆದರೂ ಹಿಂದಿ ಈ ಯಾವ ವರ್ಗದ, ಸಮುದಾಯದ ಭಾಷೆಯೂ ಆಗಿರಲಿಲ್ಲ. ಆದರೆ ಗಮನಿಸಬೇಕಾದ ಒಂದು ಅಂಶವೆಂದರೆ ಉತ್ತರ ಭಾರತದವರು, ಅದರಲ್ಲಿಯು ಹಿಂದೂ ಸಂಪ್ರದಾಯವಾದಿಗಳ ಸಂಖ್ಯೆ ಹೆಚ್ಚಾಗಿದ್ದು ಭಾಷೆಯನ್ನು ಧರ್ಮದ ಜತೆಗೆ ತಳುಕು ಹಾಕಿ ನೋಡುವ ಕ್ರಮ ಆರಂಭವಾಗಿತ್ತು. ಉರ್ದು ಮುಸ್ಲಿಮರಿಗೆ ಸೇರಿದ್ದು ‘ಭಾರತೀಯ-ಹಿಂದೂ’ ಸೂಚಕವಾದ ಸಾಂಸ್ಕೃತಿಕ ಭಾಷೆ ಒಂದರ ಅಗತ್ಯವಿದ್ದು ಅದನ್ನು ರೂಪಿಸಬೇಕಾದ ಅನಿವಾರ್ಯವಿದೆ ಎಂದು ಭಾವಿಸಿದರು.

ಈ ಗ್ರಹಿಕೆಗಳೇ ಮುಂದೆ ಹಿಂದೂ ಕೋಮುವಾದಿ ಶಕ್ತಿಗಳು ಬೆಳೆಯುವಲ್ಲಿ ನೆರವಾಯಿತು. ಈ ತರಹದ ಗುಂಪೇ 1962 ರಲ್ಲಿ ಹಿಂದಿ ಮತ್ತು ಉರ್ದು ವಾರ್ತೆ ಪ್ರಸಾರಕ್ಕೆ ಸಮಾನವಾದ ಭಾಷೆಯನ್ನು ಬಳಸುವ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ತೀವ್ರವಾಗಿ ವಿರೋಧಿಸಿತು. ಹಾಗೆಯೇ ಕಲ್ಪಿತ ಸ್ವತಂತ್ರ ಭಾರತವನ್ನು ಸಂಕೇತಿಸುವಂತಹ ಮತ್ತು ಅದರ ಸಂಪರ್ಕಕ್ಕೆ ಅಗತ್ಯವಿದ್ದ ಭಾಷೆಯ ವಿಕಾಸಗೊಳಿಸುವ, ಅದನ್ನು ವ್ಯಾಪಕವಾಗಿ ಪ್ರಸಾರ ಮಾಡುವ ಕಾರ್ಯ ನಡೆದಿತ್ತು. ಅದಕ್ಕೆ ಈಗಾಗಲೇ ಪ್ರಬಲವಾಗಿ ಬೆಳೆದಿರುವ ಯಾವುದೋ ಒಂದು ಭಾಷೆ ಈ ಉದ್ದೇಶವನ್ನು ಈಡೇರಿಸಲು ಕಲ್ಪಿತ ಭಾರತ ರಾಷ್ಟ್ರವನ್ನು ಪ್ರತಿನಿಧಿಸಲು ಸಾಧ್ಯವಿರಲಿಲ್ಲ. ಹಾಗೆಯೇ ಭಾಷೆಗಳ ಮೇಲೆ ಹೇರಲು ಪ್ರಯತ್ನಿಸಿದ್ದರೆ ಆಗಲೂ ಅನ್ಯ ಭಾಷಿಕ ಸಮುದಾಯಗಳಿಂದ ವಿರೋಧ ಬರುವ ಸಾಧ್ಯತೆಗಳೇ ಅಧಿಕವಾಗಿದ್ದವು.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಈ ಎಲ್ಲ ಉದ್ದೇಶಗಳನ್ನು ಪೂರೈಸುವ ಭಾಷೆಯೊಂದು ಪ್ರಭುತ್ವಕ್ಕೆ ಬೇಕಾಗಿತ್ತು. ಆಗ ‘ಖಡಿಬೋಲಿ’ಯಂತಹ ಸಾಮಾನ್ಯ ಜನಭಾಷೆಯೊಂದಕ್ಕೆ ಇತರ ಹಲವು ಭಾಷೆಗಳ ಶಬ್ದಗಳನ್ನು ಕೂಡಿಸಿ ಸೃಷ್ಟಿಸಿದ ಹೊಸ ಮಿಶ್ರಭಾಷೆಯೇ ಹಿಂದಿ. ಈ ಹಿನ್ನೆಲೆಯಲ್ಲಿ ಹಿಂದಿಯು ಬೇರೊಂದು ಭಾಷೆಯ ನಿಷ್ಪತ್ತಿಯಾಗಿರುವುದನ್ನು ಕಾಣಬಹುದಾಗಿದೆ. ಜನಭಾಷೆಯಾಗಿದ್ದ ‘ಖಡಿಬೋಲಿ’ಯನ್ನು ಸಂಸ್ಕೃತ ಭೂಯಿಷ್ಠವಾದ ಹಿಂದಿ ಭಾಷೆಯನ್ನಾಗಿ ಪ್ರಮಾಣೀಕರಿಸಿ ಅಭಿವೃದ್ಧಿ ಪಡಿಸಲಾಯಿತು. ಹಾಗೆ ಸಂಸ್ಕೃತದ ಪದಗಳನ್ನು ಅತಿಯಾಗಿ ಬಳಸುವುದು ಭಾರತೀಯತೆಯ ಸಂಕೇತವಾಗಿದೆ ಎನ್ನುವುದನ್ನು ಭಾಷಾ ವಿದ್ವಾಂಸರೂ ಗುರುತಿಸಿದ್ದಾರೆ.

The influence of Sanskritic vocabulary on modern Hindi literary usage remained strong and overt up to and beyond independence in 1947. The use of unfamiliar Sanskrit vocabulary continued to serve as conformation of an Indian, or Hindu, cultural identity throughout this period.

ಹೀಗೆ ಭಾರತೀಯತೆಯ ಸಂಕೇತವಾಗಿ ಕಲ್ಪಿಸಲಾದ ಭಾಷೆಯನ್ನೇ ನಂತರದಲ್ಲ್ಲಿ ಭಾರತ ಒಕ್ಕೂಟದ ಅಧಿಕೃತ ಆಡಳಿತ ಭಾಷೆಯನ್ನಾಗಿ ಘೋಷಿಸಲಾಯಿತು. ಅಂದರೆ ಕೇವಲ ವ್ಯವಹಾರದ ಉದ್ದೇಶಕ್ಕೆ ಮಾತ್ರ ಅದನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸಲಿಲ್ಲ ಎನ್ನುವುದು ತಿಳಿಯುತ್ತದೆ. ಈ ನಡುವೆ ಹಿಂದಿಗೆ ಬದಲಾಗಿ ಹಿಂದೂಸ್ತಾನಿಯಂತಹ ‘ಸಂಕರ ಭಾಷೆ’ ಒಂದನ್ನು ಒಕ್ಕೂಟದ ಅಧಿಕೃತ ಭಾಷೆಯನ್ನಾಗಿ, ರಾಷ್ಟ್ರಭಾಷೆಯನ್ನಾಗಿಸುವ ಪ್ರಯತ್ನಗಳು ನಡೆದವು. ಅಂತಹ ಪ್ರಯತ್ನ ನಡೆಸಿದ ಪ್ರಮುಖರಲ್ಲಿ ಗಾಂಧಿ, ನೆಹರೂ ಮುಂತಾದವರಿದ್ದರು. ಆದರೆ ಅಂದಿನ ಕಾಂಗ್ರೆಸ್ ಪಕ್ಷದ ಒಳಗಡೆಯೇ ಇದ್ದ ಸಂಪ್ರದಾಯವಾದಿ ಹಾಗೂ ಹಿಂದೂವಾದಿ ಮನಸ್ಸುಗಳು ಅದನ್ನು ವಿರೋಧಿಸಿದ್ದವು. ಅದಕ್ಕೆ ನೀಡಿದ ಪ್ರಮುಖ ಕಾರಣವೆಂದರೆ ಅದು ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ. ಅದು ಪರ್ಶಿಯನ್ ಪದಗಳ ಮಿಶ್ರಿತ ಭಾಷೆಯಾಗಿದ್ದು ವಿದೇಶಿ ಭಾಷೆಯಾಗಿದೆ. ಅದರಲ್ಲಿರುವ ಉರ್ದು ಪದಗಳು ಮುಸ್ಲಿಮರ ಆಕ್ರಮಣದ ಮತ್ತು ಮೊಗಲರ ಸಾಮ್ರಾಜ್ಯಶಾಹಿ ರಾಜಕೀಯದ ಸಂಕೇತವಾಗಿವೆ ಎಂದು ಭಾವಿಸಲಾಗಿತ್ತು. ಹಿಂದೂಸ್ತಾನಿಯನ್ನು ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡುವ ಪ್ರಯತ್ನವು ಮುಸ್ಲಿಮರನ್ನು ಓಲೈಸುವ ತಂತ್ರವಾಗಿದೆ ಎಂದೂ ಟೀಕಿಸಿದರು. ಹಾಗಾಗಿ ಭಾರತೀಯತೆಯನ್ನು ಬಿಂಬಿಸುವ ಸಂಸ್ಕೃತ ಭೂಯಿಷ್ಠವಾದ ಹಿಂದಿಯನ್ನೇ ರಾಷ್ಟ್ರಭಾಷೆಯನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್‌ನ ಒಂದು ಬಣ ಪ್ರಬಲವಾಗಿ ಪ್ರತಿಪಾದಿಸಿತು. ಅದರಲ್ಲಿ ಪ್ರಮುಖರಾದವರೆಂದರೆ ಪಿ.ಡಿ. ತಂಡನ್, ಸೇತ್ ಗೋವಿಂದ ದಾಸ್, ಡಾ.ರಘುವೀರ, ಕೆ.ಎಂ ಮುನ್ಷಿ ಮುಂತಾದವರಿದ್ದರು. ಸಂವಿಧಾನಾತ್ಮಕ ಸಭೆಯಲ್ಲಿ ಇವರ ಪ್ರಾಬಲ್ಯವೇ ಅಧಿಕವಾಗಿದ್ದು ನಿರ್ಣಾಯಕ ಶಕ್ತಿಯಾಗಿದ್ದರು. ಹಾಗಾಗಿಯೇ ಹಿಂದಿಗೆ ಪೂರಕವಾದ ಬೆಂಬಲ ಪಡೆಯುವಲ್ಲಿ ಯಶಸ್ಸು ಸಾಧಿಸಿದರು. ಈ ಬಣ ಆಂತರ್ಯದಲ್ಲಿ ಕಾಂಗ್ರೆಸಿನ ಒಳಗಡೆಯೇ ಇದ್ದರೂ ಹಿಂದೂ(ಕೋಮು)ವಾದಿಗಳು ಆಗಿದ್ದುದನ್ನು ಸೂಚಿಸುತ್ತದೆ. ಇವರು ಸಮ್ಮಿಶ್ರ ಸಂಸ್ಕೃತಿಯನ್ನು ವಿರೋಧಿಸುತ್ತಿದ್ದರು. ಅಂದಿನಿಂದಲೂ ಮುಂದುವರಿಯುತ್ತಿರುವ ಈ ಪರಂಪರೆ ಇಂದು ಪಕ್ಕಾ ಕೋಮುವಾದಿಯಾಗಿರುವ ಸಂಘಪರಿವಾರದ ತಳಹದಿಯಂತೆ ಕಾಣುತ್ತದೆ. ಅದನ್ನು 1958ರಷ್ಟು ಹಿಂದೆಯೇ ಸಂವಿಧಾನಾತ್ಮಕ ಸಭೆಯಲ್ಲಿ ಅಲ್ಪಸಂಖ್ಯಾತರ ಪ್ರತಿನಿಧಿಯಾಗಿದ್ದ ಫ್ರಾಂಕ್ ಅಂತೋಣಿಯವರು ಹೊಸ ಹಿಂದಿಯು ಧರ್ಮದ, ಕೋಮುವಾದದ, ಭಾಷಾ ದುರಭಿಮಾನದ ಸಂಕೇತವಾಗಿ ಬೆಳೆಯುತ್ತಿದೆ ಎಂದು ಅಖಿಲ ಭಾರತ ಭಾಷಾ ಸಮಾವೇಶ ಒಂದರಲ್ಲಿ ನೇರವಾಗಿಯೇ ಟೀಕಿಸಿದ್ದರು. ಇಂದಿಗೂ ಕಾಂಗ್ರೆಸ್ ಒಳಗಡೆಯೇ ಇರುವ ಮೃದು ಹಿಂದುತ್ವವಾದ ಆ ಪರಂಪರೆಯ ಮುಂದುವರಿಯುವಿಕೆಯೇ ಆಗಿದೆ. ಇಂತಹ ವರ್ಗವೇ ಹಿಂದಿಯನ್ನು ಅಖಂಡ ಭಾರತದ ರಾಷ್ಟ್ರಭಾಷೆಯಾಗಿ ಬೆಳೆಸಲು ಹರಸಾಹಸ ನಡೆಸುತ್ತಿರುವುದು.

ಇವತ್ತು ಹಿಂದಿಯು ತನ್ನ ಮೂಲ ಆಶಯದ ಒಂದು ಹಂತದ ಯಶಸ್ಸನ್ನು ಸಾಧಿಸಿದೆ. ಅದು ಅಂತಿಮವಾಗಿ ಆಧುನಿಕ ಭಾರತೀಯ ಭಾಷೆಗಳ ನಡುವೆ ಶ್ರೇಣೀಕರಣದ ಅಸಮಾನತೆಯು ಬೆಳೆಯಲು ಕಾರಣವಾಗಿದೆ. ಹಿಂದಿ ಅಧಿಕಾರದ ಭಾಷೆಯಾಗಿ ಗದ್ದುಗೆಗೇರಿದ ತರುವಾಯ ಇತರ ಭಾಷೆಗಳು ವ್ಯಾವಹಾರಿಕವಾಗಿ ಎರಡನೆಯ ದರ್ಜೆಯ ಭಾಷೆಗಳಾದವು. ಭಾರತದ ಆಳುವ ವರ್ಗಗಳು ಹಿಂದಿ ಭಾಷೆಯ ಅಭಿವೃದ್ಧಿಗೆ ಮುಂದಾದಂತೆಲ್ಲ ಅದರ ಜತೆಗಿನ ಜನಭಾಷೆಗಳ ಸಂಘರ್ಷವೂ ವ್ಯಾಪಕವಾಗುತ್ತ ಸಾಗಿತು. ಉದಾಹರಣೆಗೆ ಕನ್ನಡದಂತಹ ರಾಷ್ಟ್ರೀಯತೆಗಳ ಆಶೋತ್ತರಗಳ ಬಗೆಗೆ ಮಾತನಾಡುವುದನ್ನು ಸಂಕುಚಿತವಾದವೆಂದು ಆರೋಪಿಸುತ್ತ ಹಿಂದಿ ಕಲಿಕೆ ಮತ್ತು ಅದರ ಬಳಕೆಯನ್ನು ‘ದೇಶಪ್ರೇಮ’ದ ಸಂಕೇತವೆಂದು ಬಿಂಬಿಸಲಾಗುತ್ತಿದೆ. ಇಂತಹ ಪ್ರಚಾರದ ಪರಿಣಾಮವಾಗಿಯೇ ಇವತ್ತಿಗೂ ಹಿಂದಿ ಭಾಷೆಯನ್ನು ಭಾರತ ರಾಷ್ಟ್ರೀಯತೆಯ ಸಂಕೇತವಾಗಿ ಬಿಂಬಿಸುತ್ತ ಕಲ್ಪಿತ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಸೃಷ್ಟಿಸಲಾಗುತ್ತಿದೆ. ಇದರ ಪರಿಣಾಮವಾಗಿ ಭಾರತದ ಇತರ ಜನಭಾಷೆಗಳ ಪರಿಸ್ಥಿತಿ ತನ್ನ ಮಹತ್ವ ಕಳೆದುಕೊಳ್ಳುವಂತಾಗಿದೆ.

Writer - ರಂಗನಾಥ ಕಂಟನಕುಂಟೆ

contributor

Editor - ರಂಗನಾಥ ಕಂಟನಕುಂಟೆ

contributor

Similar News