ಕಾಫ್ಕ ಮತ್ತು ಸಮಕಾಲೀನ ಜಗತ್ತು
ಫ್ರಾನ್ಜ್ ಕಾಫ್ಕ
ಪ್ರಸಕ್ತ ವಿದ್ಯಮಾನಗಳನ್ನ ಸೂಕ್ಷ್ಮವಾಗಿ ಅವಲೋಕಿಸಿದರೆ, ನಮ್ಮ ಬದುಕು ಹೇಗೆ ತನ್ನ ತರೇವಾರಿ ವಿವರಗಳ ದುಸ್ವಪ್ನದಲ್ಲೇ ವಿಜೃಂಭಿಸುವ ಹಂತ ತಲುಪಿದೆ ಅನ್ನೋದು ಗೊತ್ತಾಗುತ್ತದೆ. ನಮ್ಮ ಸಮಕಾಲೀನ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂದರ್ಭ ಅಂತಹದೊಂದು ಅವಸ್ಥೆಯನ್ನು ಅವಾಂಛಿತವಾಗಿ ನಮ್ಮ ಮುಂದೆ ದುತ್ತಂತ ತೆರೆದಿಟ್ಟಿದೆ. ಅದಕ್ಕೆ ಪ್ರತಿಕ್ರಿಯಿಸುವ ಸಮಯ ಕೂಡ ಬಹಳ ಕಿರಿದಾಗಿದೆ. ಇದಕ್ಕೆ ಸಂವಾದಿಯಾಗಿ ಒದಗಿ ಬರುವ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಕಥನಗಳಲ್ಲಿ ಪೂರಕವಾಗಿ ಸೃಷ್ಟಿಯಾಗಿರುವ ಲೋಕಗಳಲ್ಲಿ ಮತ್ತೊಮ್ಮೆ ಇಣುಕಿ ನೋಡುವ ಮುಖಾಂತರವೇ ನಾವು ಇಂತಹದೊಂದು ಪರಿಸ್ಥಿತಿಗೆ ನಮ್ಮನ್ನು ಒಡ್ಡಿಕೊಳ್ಳುವ ಅನಿವಾರ್ಯ ಉಂಟಾಗಿದೆ. ಹಾಗಂತ ಈ ಸಂಕಥನಗಳ ಹೊರತಾದ ಡಿಸ್ಕೋರ್ಸ್ ಅಸಾಧ್ಯ ಅನ್ನೋದು ಈ ಲೇಖಕನ ವಾದವಲ್ಲ. ಆದರೆ ಈ ಎಲ್ಲವನ್ನೂ ಒಳಗೊಳ್ಳುವ ಒಂದು ಮೆಗಾ ಡಿಸ್ಕೋರ್ಸಿನ ಜರೂರು ನಮ್ಮೆಲ್ಲ ಪ್ರಗತಿಪರ ಚಿಂತನೆಗೆ ಹೊಸ ಮುನ್ನುಡಿಯೊಂದನ್ನು ಬರೆಯುವ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಬೇಕಿದೆ.
ಇದಕ್ಕೆ ಪೀಠಿಕೆಯಾಗಿ ಜರ್ಮನ್ ಲೇಖಕ ಫ್ರಾನ್ಜ್ ಕಾಫ್ಕನ ಸಾಹಿತ್ಯವನ್ನು ಪರಿಶೀಲಿಸಬಹುದು. 20ನೇ ಶತಮಾನದ ಅಗ್ರಗಣ್ಯ ಸಾಹಿತಿಗಳಲ್ಲಿ ಈತ ಒಬ್ಬ. ಇಡೀ ಬದುಕೇ ಆತನಿಗೆ ದುಸ್ವಪ್ನವಾಗಿ ಕಾಡಿತ್ತು. ಅವನ ‘ಟ್ರಯಲ್’ ಕಾದಂಬರಿ ವ್ಯಕ್ತಿ ಮತ್ತು ವ್ಯವಸ್ಥೆಯ ಮಧ್ಯದ ವಿಘಟಣೆಯನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸುತ್ತದೆ. ಈ ಕಾದಂಬರಿಯ ನಾಯಕ ಜೋಸೆಫ್ ಕೇ ಒಬ್ಬ ಬ್ಯಾಂಕ್ ಗುಮಾಸ್ತ. ಈತನನ್ನು ಅವನ ಮನೆಯಿಂದ ಆತನ 30ನೇ ಹುಟ್ಟುಹಬ್ಬದ ದಿನ ಇಬ್ಬರು ಅಘೋಷಿತ ಅಧಿಕಾರಿಗಳು ಬಂಧಿಸಿ ಬಿಡುತ್ತಾರೆ. ಯಾಕೆ, ಏನು, ತಾವು ಯಾರ ಯಾವ ಅಧಿಕಾರಿಗಳು ಅನ್ನೋ ಸೂಚನೆಯನ್ನೇ ನೀಡದೆ ಕೇ ನನ್ನು ಬಂಧಿಸಲಾಗುತ್ತದೆ. ಜೋಸೆಫ್ ನನ್ನು ಎಲ್ಲಿಗೂ ಕರೆದೊಯ್ಯದೆ ಮೇಲಧಿಕಾರಿಗಳ ಸೂಚನೆಗೆ ಕಾಯುವಂತೆ ತಿಳಿಸಿ ಹೊರಡುತ್ತಾರೆ.
ಕೇ ಒಬ್ಬ ನ್ಯಾಯಾಧೀಶನನ್ನು ಕಾಣುತ್ತಾನೆ. ಆದರೆ ಅಲ್ಲಿಯ ಅಟೆಂಡರನ ಹೆಂಡತಿಯನ್ನು ನೋಡಲು ಆತನಿಗೆ ತಿಳಿಸಲಾಗುತ್ತದೆ. ಈ ನ್ಯಾಯಾಧೀಶನ ಕಪಾಟಿನಲ್ಲಿ ಬರೀ ಅಶ್ಲೀಲ ಪುಸ್ತಕಗಳೇ ತುಂಬಿರುವುದನ್ನು ಕೇ ಗಮನಿಸುತ್ತಾನೆ. ಹೀಗೆ ಕೇ ಇಡುವ ಪ್ರತಿ ಹೆಜ್ಜೆ ಅನರ್ಥ,ಅತಾರ್ಕಿಕ ನೆಲೆಗಳನ್ನೇ ತೆರೆದಿಡುತ್ತಾ ಸಾಗುತ್ತದೆ. ತನಗೆ ಸಂಬಂಧಿಸದ ಸಂಗತಿಗಳಿಗೆ ಸಾಮಂತನಾಗುತ್ತಲೇ ಕೇ ಸಾಗುತ್ತಾನೆ. ವಿದಿಯ ಅದೃಶ್ಯದಾಟದ ಬೆನ್ನಲ್ಲೇ ಕೇ ಸಾದೃಶ್ಯದ ವೈಪರೀತ್ಯಗಳನ್ನು ಎದುರಿಸುವ ಹಾಗಾಗುತ್ತದೆ!
ಕೇ ತನ್ನ ಚಿಕ್ಕಪ್ಪನ ಆಶಯದಂತೆ ಆತನ ಸ್ನೇಹಿತ ಲಾಯರ್ ನನ್ನು ಭೇಟಿ ಮಾಡಿದರೂ ಏನೂ ಪ್ರಯೋಜನವಾಗುವುದಿಲ್ಲ. ಆತ ಮಹಾ ಪಿರ್ಕಿ. ಆತನಿಗೊಬ್ಬ ಲೆನಿ ಎಂಬ ಅಟೆಂಡರ್ ಇದ್ದಾಳೆ. ಆಕೆ ಈ ವಕೀಲನ ಪ್ರೇಯಸಿ ಅಂತ ಕೇ ನ ಚಿಕ್ಕಪ್ಪ ತಿಳಿಯುತ್ತಾನೆ. ಆ ವಕೀಲನ ಹಾಗೂ ಕೋರ್ಟಿನ ಮುಖ್ಯ ಗುಮಾಸ್ತನ ಜತೆ ಕೇ ನ ಚಿಕ್ಕಪ್ಪ ಮಾತಾಡುತ್ತಿರುವಾಗಲೆ, ಕೇ ಲೆನಿ ಜತೆ ಲೈಂಗಿಕ ಸಂಪರ್ಕ ಹೊಂದುತ್ತಾನೆ. ಇದರಿಂದ ಚಿಕ್ಕಪ್ಪ ಕೋಪಿಸಿಕೊಳ್ಳುತ್ತಾನೆ ಮತ್ತು ಆ ವಕೀಲ ಇವನಿಗೆ ಯಾವುದೇ ಸಹಾಯ ನೀಡುವಂತೆ ತೋರುವುದಿಲ್ಲ. ಹೀಗೆ ಕೇ ನ ಕೇಸು ಮತ್ತಷ್ಟು ಹಾಳಾಗುತ್ತದೆ. ಕೋರ್ಟಿನ ಪೈಂಟರ್‌ನನ್ನು ಭೇಟಿ ಮಾಡಲು ಕೇ ಗೆ ಸೂಚಿಸಲಾಗುತ್ತದೆ. ಆದರೆ ಕೇ ಮೇಲಿನ ಅಪವಾದವಾದರೂ ಏನು ಎಂಬುದು ಗೊತ್ತಾಗಲಾರದೆ ಆತನೂ ಏನೂ ಮಾಡಲು ಆಗುವುದಿಲ್ಲ.
ಕೇ ತನ್ನ ಹಣೆಬರಹವನ್ನು ತಾನೇ ನಿರ್ವಹಿಸಲು ನಿರ್ಧರಿಸಿ ಆ ಲಾಯರ್ ನನ್ನು ತನ್ನ ಕೇಸ್ ನಡೆಸದೆ ಇರಲು ಕೇಳಲು ಆತನ ಆಫೀಸಿಗೆ ಹೋದಾಗ ಅಲ್ಲಿ ತೀರ ಕೆಳಸ್ತರದ ಬ್ಲಾಕ್ ಎಂಬ ವ್ಯಕ್ತಿಯನ್ನು ಭೇಟಿ ಮಾಡುತ್ತಾನೆ. ಆ ವ್ಯಕ್ತಿಯ ಕೇಸು 5 ವರ್ಷಗಳಿಂದ ಕೊಳೀತಾ ಬಿದ್ದಿರೋದು ಗೊತ್ತಾಗುತ್ತದೆ. ಇದು ಆ ಲಾಯರ್‌ನ ಅರ್ಥಹೀನ ಬಳುವಳಿ ಎಂಬುದು ಕೇ ಗೆ ಗೊತ್ತಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಕೇ ಎದುರಿಗೇ ಬ್ಲಾಕ್ ನನ್ನು ಅವನ ನಾಯಿ ಪಾಡಿಗಾಗಿ ಲಾಯರ್ ನಿಂದಿಸುತ್ತಾನೆ. ಕೇ ಲಾಯರ್ ಬಗ್ಗೆ ತನ್ನೆಲ್ಲ ಭರವಸೆಗಳನ್ನು ಕಳೆದುಕೊಳ್ಳುತ್ತಾನೆ.
ಆ ಲಾಯರ್ ನನ್ನು ಅಷ್ಟು ಬೇಗ ಕಳಚಿಕೊಳ್ಳಲು ಕೇ ಗೆ ಆಗುವುದಿಲ್ಲ. ಇಟಲಿಯ ತನ್ನ ಗಿರಾಕಿಯೊಬ್ಬನನ್ನು ಸ್ಥಳೀಯ ಸಾಂಸ್ಕೃತಿಕ ಮಹತ್ವವುಳ್ಳ ಜಾಗಗಳನ್ನು ತೋರಿಸಲು ಆ ಲಾಯರ್ ಕೇ ಗೆ ಹೇಳುತ್ತಾನೆ. ಆದರೆ ಯಾವುದೋ ಕೆಥೆಡ್ರಲ್ ಮಾತ್ರ ನೋಡಲು ಆ ಗಿರಾಕಿ ಬಯಸುತ್ತಾನೆ. ಆದರೆ ಕೇ ಅಲ್ಲಿಗೆ ಹೋಗಿ ಎಷ್ಟು ಹೊತ್ತು ಕಾದರೂ ಆ ಗಿರಾಕಿ ನಾಪತ್ತೆ. ಆ ಕೆಥೆಡ್ರಲ್‌ನಲ್ಲಿ ಒಬ್ಬ ಪಾದ್ರಿ ಸರ್ಮನ್ ಹೇಳುವಂತೆ ತೋರುತ್ತದೆ. ಆ ಪಾದ್ರಿ ಕೋರ್ಟಿಗೆ ಕೆಲಸ ಮಾಡುವಾತ. ಒಬ್ಬ ಮುದುಕಿ ಹಾಗೂ ಏಕಮೇವ ಚರ್ಚ್ ಅಧಿಕಾರಿ ಬಿಟ್ಟರೆ ಅಲ್ಲಿ ಯಾರೂ ಇಲ್ಲ. ಸರ್ಮನ್ ಶುರುಮಾಡುವಂತೆ ತೋರುವ ಪಾದ್ರಿ ಕೇ ಹೆಸರು ಕರೆಯುತ್ತಾನೆ, ಅವನಿಗೆ ಕೇ ವೈಯಕ್ತಿಕವಾಗಿ ಗೊತ್ತಿಲ್ಲದಿದ್ದರೂ ಸಹ! ಕೇ ಗೆ ಆತನ ಕತೆಗೇ ಸಂವಾದಿಯಂತೆ ಕಾಣುವ ನೀತಿಕತೆ ಬೋಧಿಸಲು ತೊಡುಗುತ್ತಾನೆ. ಇಬ್ಬರ ಮಧ್ಯೆ ವಿಶ್ಲೇಷಣಾತ್ಮಕ ಚರ್ಚೆ ನಡೆದ ಬಳಿಕ ಕೇ ಗೆ ಗೊತ್ತಾಗಿದ್ದೆಂದರೆ ತನ್ನ ಕೇಸು ಬಹಳ ಜಟಿಲವಾಗಿದೆ ಎಂಬುದು. ತೀರ ಆಯಾಸಗೊಂಡಂತೆ ತೋರುವ ಕೇ ಗೆ ತನ್ನ ಲೌಕಿಕ ಜಗತ್ತಿಗೆ ವಿದಾಯ ಹೇಳುವ ಕಾಲ ಹತ್ತಿರ ಬಂದ ಹಾಗೆ ಅನ್ನಿಸುತ್ತದೆ.
ಕೇ ತನ್ನ 31ನೇ ವರ್ಷದ ಕೊನೆಯ ದಿನ ಇಬ್ಬರು ಅಧಿಕಾರಿಗಳು ತನ್ನನ್ನು ಮುಗಿಸಲು ಬಂದಾಗ ಅತ್ಯಂತ ನಿರ್ಲಿಪ್ತ ರೀತಿಯಲ್ಲಿ ಸಾಯಲು ಸಿದ್ಧನಾಗುತ್ತಾನೆ. ಕೇ ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ಆ ಅಧಿಕಾರಿಗಳು ತಿಳಿಯುತ್ತಾರೆ. ಆದರೆ ಕೇ ಆ ಪೈಕಿಯವನಲ್ಲ. ಆತನ ಪದಗಳಲ್ಲೆ ಹೇಳುವುದಾದರೆ ಕೇ ‘‘ನಾಯಿ ತರ’’ ಸಾಯುತ್ತಾನೆ.
ಕಾಫ್ಕನ ಇನ್ನೊಂದು ಕಥನ ‘‘ಮೆಟಮಾರ್ಫಸಿಸ್’’ (ರೂಪಾಂತರ) ನಲ್ಲಿ ಒಬ್ಬ ಬೆಳಗ್ಗೆ ಏಳುವಷ್ಟರಲ್ಲಿ ಒಂದು ದೊಡ್ಡ ಹುಳವಾಗಿ ರೂಪಾಂತರ ಹೊಂದುತ್ತಾನೆ. ಗ್ರೇಗರ್ ಸಂಸ ಅನ್ನುವ ಈತ ಇದರಿಂದ ವಿಚಲಿತನಾಗದೆ ತನ್ನ ಜಂಗಮ ವ್ಯಾಪಾರಿ ಹುದ್ದೆಯನ್ನು ಹೇಗೆ ನಿಭಾಯಿಸುವುದೆಂದು ತಿಳಿಯದೆ ದುಃಖಿಸುತ್ತಾನೆ. ಅವನ ತಂದೆ ತಾಯಿ ಮತ್ತು ಆತನ ಸಹೋದರಿ ಗ್ರೀಟೆ ಇರುವ ಮನೆಯಲ್ಲಿ ಅವನೊಬ್ಬನೇ ದುಡಿಯುವಾತ. ಸಂಸ ಕೆಲಸಕ್ಕೆ ಹೋಗದೇ ಇದ್ದಾಗ ಆತನ ಸೂಪರ್ವೈಸರ್ ಅವನ ಮನೆಗೇ ಬಂದು ಹೊರ ಬರುವಂತೆ ಸಂಸನಿಗೆ ಆಜ್ಞಾಪಿಸುತ್ತಾನೆ. ಸಂಸ ತೆವಳಿಕೊಂಡು, ರೂಮಿನ ಬಾಗಿಲು ತೆಗೆದು ಹೊರಗೆ ಬಂದಾಗ ಆ ಸೂಪರ್‌ವೈಸರ್ ಮತ್ತು ಮನೆಯವರು ಹೌಹಾರುತ್ತಾರೆ. ಆತನ ಸ್ಥಿತಿ ನೋಡಿ ಸೂಪರ್ವೈಸರ್ ಓಡಿ ಹೋಗುತ್ತಾನೆ. ಸಂಸ ಅವನನ್ನು ಅಟ್ಟಿಸಿಕೊಂಡು ಹೋದಾಗ ಗ್ರೀಟೆ ಮತ್ತು ಅವನ ತಂದೆ ತಾಯಿ ಅವನನ್ನು ರೂಮಿಗೆ ತಳ್ಳುತ್ತಾರೆ. ಗ್ರೀಟೆ ಸಂಸನಿಗೆ ಹಾಲು ಹಳಸಿದ, ಕೊಳೆತ ಊಟ ಕೊಟ್ಟು ಉಪಚರಿಸುತ್ತಾಳೆ. ಈಗ ಹುಳವಾಗಿರುವ ಸಂಸನಿಗೆ ಬೇಕಾದದ್ದು ಅದೇ- ಹಳಸಿದ, ಕೊಳೆತ ಆಹಾರ! ಈಗ ರೂಮಲ್ಲೇ ಬಿದ್ದಿರುವ ಸಂಸನಿಗೆ ಬೇರೆ ಹುಳಗಳ ಹೆದರಿಕೆ ಶುರುವಾಗುತ್ತದೆ. ಆ ಹುಳಗಳ ಕಾಲೆಳೆಯುವ ಸದ್ದು, ಅವುಗಳ ಪಿರಿ ಪಿರಿ, ಚಿರಿ ಚಿರಿ ಅವನನ್ನು ಬಾಧಿಸುತ್ತವೆ. ಆದರೂ ಒಬ್ಬ ವಿನಯವಂತ ಮಗನಾಗಿ, ಯಾರಾದರು ಬಂದಾಗ ಸೋಫಾದಡಿ ಅಡಗಿಕೊಳ್ಳುತ್ತ, ಒಬ್ಬನೇ ಇದ್ದಾಗ ಗೋಡೆಗಳ ಮೇಲೆ ಹರಿದಾಡುತ್ತ, ಹೊರಗಿನ ಪ್ರಪಂಚವನ್ನು ವೀಕ್ಷಿಸುತ್ತ ಕಾಲ ಕಳೆಯುತ್ತಾನೆ.
ಕ್ರಮೇಣ ಸಂಸನ ಬಗ್ಗೆ ಮನೆಯವರಿಗಿದ್ದ ಕರುಣೆ ಮಾನವೀಯತೆಗಳೆಲ್ಲ ಮಾಯವಾಗಿ ವಿಷಾದದ ಛಾಯೆ ಆವರಿಸುತ್ತದೆ. ಬದುಕು ಸಾಗಿಸಲು ಈಗ ಗ್ರೀಟೆ ದುಡಿಯಬೇಕು. ಸಂಸನ ಬಗ್ಗೆ ಕಾಳಜಿಗೆ ಆಕೆಗೆ ಸಮಯವಿಲ್ಲ. ಒಮ್ಮೆ ಸಂಸ ತನ್ನ ರೂಮಿನ ಹೊರಗೆ ತೆವಳಿದ್ದನ್ನು ನೋಡಿದ ಅವನ ತಂದೆ ಸಿಟ್ಟಿನಿಂದ ಕೈಯಲಿದ್ದ ಸೇಬನ್ನು ಸಂಸನ ಮೇಲೆ ಎಸೆಯುತ್ತಾನೆ. ಇದರಿಂದ ಗಾಯಗೊಂಡ ಸಂಸ ಮೈಯಲ್ಲ ನಂಜಾಗಿ ಚಲಿಸಲೂ ಆಗದೆ ಒದ್ದಾಡುತ್ತಾನೆ. ‘ಆತ ಸತ್ತರೆ ಸಾಕಪ್ಪ’ ಅನ್ನೋ ಹತಾಶೆ ಅಸಹಾಯಕತೆ ಮನೆ ತುಂಬ ಆವರಿಸುತ್ತದೆ.
ಈಗ ಸಂಸನ ಕೋಣೆ ಲಂಬರ್ ರೂಮಾಗಿ ಪರಿವರ್ತಿತಗೊಂಡಿದೆ. ಬೇಡದ ವಸ್ತುಗಳನ್ನೆಲ್ಲ ಅಲ್ಲಿ ಎಸೆಯಲಾಗುತ್ತದೆ. ಸಂಸ ನಿತ್ರಾಣದಿಂದ ಅಲ್ಲೇ ಬಿದ್ದಿರಬೇಕು. ಒಮ್ಮೆ ಗ್ರೀಟೆ ಬಾಡಿಗೆದಾರರ ಖುಷಿಗೋಸ್ಕರ ವಯೋಲಿನ್ ಬಾರಿಸುವುದನ್ನು ಕೇಳಿಸಿಕೊಂಡ ಸಂಸ ರೂಮಿಂದ ತೆವಳುತ್ತ ಅಲ್ಲಿಗೆ ಬರುತ್ತಾನೆ. ಬಾಡಿಗೆದಾರರು ಸಂಸನನ್ನು ನೋಡಿ ಮನೆ ಖಾಲಿ ಮಾಡುವುದಕ್ಕೆ ನೋಟಿಸ್ ನೀಡಿ ಆತನನ್ನು ಮನೇಲಿ ಇರಿಸಿಕೊಂಡಿದ್ದಕ್ಕೆ ಅವರನ್ನು ಕೋರ್ಟಿಗೆ ಎಳೆಯುವುದಾಗಿ ಹೇಳುತ್ತಾರೆ. ಗ್ರೀಟೆಗೆ ಎಲ್ಲಿಲ್ಲದ ಸಿಟ್ಟು. ಆತ ರಾಕ್ಷಸಗಾತ್ರದ ಹುಳ ಮಾತ್ರ. ತನಗೆ ಸಂಬಂಧವೆ ಇಲ್ಲದ ತರ ‘ಸಂಸ ಸತ್ತರೆ ಸಾಕು’ ಎಂದು ತಿಳಿಯುತ್ತಾಳೆ. ಸಂಸ ಮತ್ತೆ ತೆವಳಿ ತನ್ನ ರೂಮು ಸೇರುತ್ತಾನೆ. ನರಳಿ, ನರಳಿ ಸಾಯುತ್ತಾನೆ.
ಕಾಫ್ಕನ ಕಥಾಲೋಕ ಬೀಭತ್ಸ, ಬರ್ಬರ. ಲೌಕಿಕ ತರ್ಕಗಳಿಗೆ ಮೀರಿದ್ದು. ಮಾನವೀಯ ತುಡಿತಗಳು ಕ್ರಮೇಣ ಕರಗಿಹೋಗುತ್ತವೆ ಇಲ್ಲಿ. ಕನ್ನಡದಲ್ಲೂ ಇಂತ ಕಥನಗಳಿಗೆ ಕೊರತೆ ಇಲ್ಲ. ನಾವು ನಿಂತ ನೆಲವೇ ಕುಸಿದು ನಮ್ಮನ್ನು ನುಂಗಿ ಬಿಡುವ, ಅಭಿವೃದ್ಧಿ ಹೆಸರಲ್ಲಿ ಪ್ರಭುತ್ವ ನಮ್ಮನ್ನು ದೋಚುವ ರೂಪಕಗಳು ಸಾಕಷ್ಟಿವೆ. ಯಶವಂತ ಚಿತ್ತಾಲರ ‘ಶಿಕಾರಿ’, ತೇಜಸ್ವಿಯವರ ‘ತಬರನ ಕತೆ’ ಪ್ರಭುತ್ವ ನಮ್ಮನ್ನು ಶೋಷಿಸುವ ಪರಿಯನ್ನು ನಿರ್ಭಿಡೆಯಿಂದ ಚಿತ್ರಿಸುತ್ತವೆ. ಬಿನಾಯಕ ಸೇನರ ಸ್ಥಿತಿ ಕೇವಲ ನೆಪ ಮಾತ್ರ. ಅವರಂತೆ ಅನ್ಯಾಯಕ್ಕೆ ಒಳಗಾದ ಜೈಲಿನಲ್ಲೇ ಕೊಳೆಯುತ್ತಾ ಇರುವ ಸಾವಿರಾರು ವಿಚಾರಣಾಧೀನ ಕೈದಿಗಳಿದ್ದಾರೆ. ಕಾಫ್ಕನ ಲೋಕವನ್ನೇ ಅಣಕಿಸುವ ಮಟ್ಟಿಗೆ ಕ್ಲಿಪ್ತ ರೀತಿಯಿಂದಲೇ ಘಟನೆಗಳು ಸಂಭವಿಸುತ್ತಿವೆ.
ಇವತ್ತಿನ ಕ್ಷುದ್ರ ರಾಜಕೀಯ ಷಡ್ಯಂತ್ರದ ಸಂಕಥನಕ್ಕೆ ಪ್ರತಿರೋಧವನ್ನು ನೀಡಬಲ್ಲಂತ ಮೂರು ಡಿಸ್ಕೋರ್ಸ್‌ಗಳು ನಮ್ಮೆದುರಿಗಿವೆ. ಸಾಹಿತ್ಯ, ಸಂಸ್ಕೃತಿ ಹಾಗೂ ನೇರ ಹೋರಾಟದ ಕಥನಗಳು. ಮೇಲ್ನೋಟಕ್ಕೆ ಗೋಚರಿಸೋ ಹಾಗೆ ಇವೆಲ್ಲ ಬೇರೆ ಬೇರೆ ದಿಕ್ಕುಗಳಲ್ಲಿ ಸರಿಯುತ್ತಿವೆ. ಒಂದು ಕಾಲದಲ್ಲಿ ದೇಶದ ರಾಜಕಾರಣದ ಹೊಣೆ ಹೊತ್ತ ಅನೇಕರು ಈ ಸಂಕಥನಗಳ ಜತೆ ನೇರ ಅನುಸಂಧಾನ ನಡೆಸುತ್ತಿದ್ದರು. ಗಾಂಧಿ, ನೆಹರೂ, ಲೋಹಿಯಾ ಸ್ವತಃ ಸಾಹಿತ್ಯಕ, ಸಾಂಸ್ಕೃತಿಕ ಸಂಕಥನಗಳ ಸೃಷ್ಟಿಕರ್ತರಾಗಿದ್ದವರು. ನಮ್ಮಲ್ಲಿನ ಆಧುನಿಕ ರಾಜಕಾರಣದ ಬಹಳ ಜನ, ಅವರ ಮಿತಿಗಳೇನೇ ಇರಲಿ, ಏಕಕಾಲಕ್ಕೆ ಸಾಹಿತ್ಯ ಸಂಸ್ಕೃತಿಗಳ ಪಠ್ಯಗಳನ್ನು ಓದಿಕೊಂಡಿದ್ದರು. ತಮ್ಮ ರಾಜಕೀಯ ನಿಷ್ಠೆಯ ಜತೆ ಜತೆಗೆ ಈ ಪಠ್ಯಗಳ ಪಿಸುಮಾತನ್ನು ಕೇಳಿಸಿಕೊಳ್ಳುತ್ತ ಆ ಕಥನಗಳ ಮುಖಾಂತರ ಸಾಮಾಜಿಕ ಸತ್ಯಗಳನ್ನು ಅರಿಯುವ ಪ್ರಜ್ಞೆಯನ್ನು ಬೆಳೆಸಿಕೊಂಡಿರುತ್ತಿದ್ದರು. ರೂಪಕಗಳ ಮುಖಾಂತರ ಕಂಡ ಸತ್ಯಗಳ ಜತೆ ನಮ್ಮ ಲೋಕದ ಸಾದೃಶ್ಯದ ತರೇವಾರಿ ಕಥನಗಳು ಸುದೀರ್ಘ ಅನುಸಂಧಾನದಲ್ಲಿ ತೊಡಗಿರುತ್ತಿದ್ದವು. ಜತೆಯಲ್ಲೇ ನಮ್ಮ ಪುರಾಣ ಪ್ರತಿಮೆಗಳು, ಸಂತ, ಸ್ವಾಮೀಜಿಗಳ ಲೋಕ ನೀತಿಗಳು, ಹರಿಹರಸುತರ ನ್ಯಾಯ ನಿಷ್ಠೆ, ನಮ್ಮ ಆದಿಕಥನಗಳ ದೇವಾದಿ ದೇವತಗಳ ಜತೆಗಿನ ಅನುಸಂಧಾನದ ಪರಿ- ಎಲ್ಲವೂ ರಾಜಕೀಯ ಜಿಜ್ಞಾಸೆಯ ಭಾಗವಾಗಿದ್ದವು. ಲೋಹಿಯಾ, ಗಾಂಧಿ ಅವರೆಲ್ಲ ತಮ್ಮ ಸಾಂಸ್ಕೃತಿಕ ಪಠ್ಯಗಳಲ್ಲಿ ಪುರಾಣಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದರು.
ಇವತ್ತಿನ ತೀವ್ರತರವಾದ ಬಿಕ್ಕಟ್ಟು ಸೃಷ್ಟಿಯಾಗಿರುವುದು ಇಲ್ಲೇ. ಸಮಕಾಲೀನ ರಾಜಕೀಯ ಸಂಸ್ಕೃತಿ ಈ ಎಲ್ಲ ಅನುಸಂಧಾನಗಳಿಗೂ ಹೊರತಾದ ಲೋಕವನ್ನು ಪ್ರವೇಶಿಸಿ ಬಿಟ್ಟಿದೆ. ಜಾಗತೀಕರಣದ ಸಂಕಥನ ಇದೆಯಲ್ಲ, ಇದು ನಮ್ಮ ಎಲ್ಲ ಡಿಸ್ಕೋರ್ಸ್‌ಗಳಿಗೆ ಪ್ರತಿರೋಧವನ್ನುಂಟು ಮಾಡುವ ಏಕೈಕ ಷಡ್ಯಂತ್ರವಾಗಿದೆ. ಇದು ಏಕಕಾಲಕ್ಕೆ ಬಲಪಂಥೀಯವೂ, ಪುರುಷಪ್ರಧಾನವೂ ಆಗಿರುವ ಹಾಗೆ ಸಮಾಜ ಮತ್ತು ಲೋಕ ಕಂಟಕವೂ ಆಗಿದೆ.
ಇದನ್ನು ಬಹಳ ಇತ್ಯಾತ್ಮಕವಾಗಿ ವಿರೋಧಿಸುವ ಹೊಸ ವ್ಯಾಕರಣವನ್ನೊಳಗೊಂಡ ಸಂಕಥನದ ಅಗತ್ಯ ಇವತ್ತಿನ ತುರ್ತು. ಈ ಅನಿವಾರ್ಯ ಸ್ಥಿತಿಯಲ್ಲಿ ನಮ್ಮೆಲ್ಲರ ಆಯ್ಕೆಗಳನ್ನು ಪುನರ್ ಪರಿಶೀಲಿಸಿಕೊಳ್ಳುವ ಅಗತ್ಯ ಇದೆ. ನಾನು ಈ ಮೊದಲು ಹೆಸರಿಸಿದ ಮೂರು ಡಿಸ್ಕೋರ್ಸ್ ಗಳ ಜತೆ ಮತೀಯವಲ್ಲದ ಧಾರ್ಮಿಕ ಸಂಕಥನವನ್ನೂ ಸೇರಿಸಿಕೊಳ್ಳಬೇಕು. ಪಶ್ಚಿಮದ ‘ಲೋಕ ವಾದ’ ಅರ್ಥಾತ್ ಕ್ಯುಲರಿಸಂ ಇದೆಯಲ್ಲ ಇದಕ್ಕೂ ಸಾಟಿಯಾಗಬಲ್ಲಂತಹ ಮೇಲಿನ ಎಲ್ಲ ಸಂಕಥನಗಳು ಪರಸ್ಪರ ಅನುಸಂಧಾನದಲ್ಲಿ ತೊಡಗಿರುವ, ಬೇರೆ ಬೇರೆ ಅದೃಶ್ಯ ನೆಲೆಗಳ ನಡೆಯಲ್ಲಿನ ಪ್ರತ್ಯೇಕ ಅನುಪಾಥಗಳಾಗಿಲ್ಲದ ಒಂದು ಕ್ರೋಢಿಕೃತ ಸಂಕಥನದ ದಾರಿಯಲ್ಲಿ ಸಾಗುವುದು ಅವಶ್ಯವೆಂಬಂತೆ ಕಾಣುತ್ತದೆ. ಇದಕ್ಕೆ ಪೂರಕವಾಗಿ ನಮ್ಮ ಸಾಹಿತ್ಯಕ ಪಠ್ಯಗಳಿಂದ ಮೊದಲ್ಗೊಂಡು ಸಾಂಸ್ಕೃತಿಕ, ಧಾರ್ಮಿಕ, ಪೌರಾಣಿಕಗಳ ಮುಖೇನ ನೇರ ಹೋರಾಟದ ಸಂಕಥನವನ್ನು ಸೇರಿಕೊಳ್ಳುವ ಹೊಸ ಭಾಷೆಯನ್ನು ಶೋಧಿಸಬೇಕಾಗಿದೆ.