ಆತ್ಮಾವಲೋಕನ

Update: 2019-09-21 13:54 GMT

ಒಮ್ಮೆ ಒಂದು ಕಾಗೆ ಹಾರುತ್ತ ಹೋಗುವಾಗ ಕೋಗಿಲೆಯು ಮರದಲ್ಲಿ ಕುಳಿತು ಹಾಡುವುದು ಕಾಣಿಸಿತು. ಆಗ ಕೋಗಿಲೆ ಬಳಿ ಹೋಗಿ, ‘‘ನೀನೆಷ್ಟು ಸುಂದರವಾಗಿ, ಇಂಪಾಗಿ ಹಾಡುವೆ. ನಿನ್ನ ದನಿಗೆ ಮನಸೋಲದವರೇ ಇಲ್ಲ. ನಾನು ಹಾಡಿದರೆ ಎಲ್ಲರೂ ಶು..ಶು.. ಎಂದು ಓಡಿಸಿ ಬಿಡುವರು. ನನಗೂ ನಿನ್ನ ಹಾಗೆಯೇ ಹಾಡಬೇಕು ಏನು ಮಾಡಲಿ?’’ ಎಂದಿತು.

ಆಗ ಕೋಗಿಲೆಯು ‘‘ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು’’ ಎಂದಿತು.

ಕಾಗೆಗೆ ಬೇಸರವಾಗಿ .. ‘‘ಹೋಗು.. ನಿನ್ನ ಜೊತೆ ಮಾತನಾಡೋದಿಲ್ಲ..’’ ಎಂದು ಹಾರಿಹೋಯಿತು.

ಹೀಗೆ ಮುಂದಕ್ಕೆ ಹೋಗುವಾಗ ಚಿವ್..ಚಿವ್.. ಅಳಿಲು ಹಾಡುತ್ತ ಮರದಲ್ಲಿ ಅತ್ತಿಂದಿತ್ತ, ಇತ್ತಿಂದತ್ತ ಕುಣಿಯುತ್ತಿತ್ತು. ಆಗ ಕಾಗೆಯು ಅಳಿಲಿನ ಬಳಿ ಹೋಗಿ ‘‘ಅಳಿಲಣ್ಣ , ಅಳಿಲಣ್ಣ, ನಿನ್ನ ಬೆನ್ನ ಮೇಲೆ ಅದೆಷ್ಟು ಸುಂದರ ಗೆರೆಗಳಿವೆ. ಆ ಮೂರು ಗೆರೆಗಳು ಎಷ್ಟು ಚೆನ್ನಾಗಿ ಹೊಳೆಯುತ್ತಲಿವೆ. ಎಲ್ಲರ ಕಣ್ಣುಗಳ ಸೆಳೆಯುತ್ತಲಿವೆ. ನನಗೂ ಆ ಮೂರು ಗೆರೆಗಳು ಬೇಕು. ನನ್ನ ಬೆನ್ನಿಗೂ ಹಚ್ಚುವೆಯಾ..’’ ಎಂದಿತು. ಆಗ ಅಳಿಲು ‘‘ಅಯ್ಯೋ.. ಹುಚ್ಚಿ!! ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು’’ ಎಂದಿತು.

ಕಾಗೆಗೆ ಬೇಸರವಾಗಿ ‘‘ಹೋಗು.. ನಿನ್ನ ಜೊತೆ ಮಾತನಾಡೋದಿಲ್ಲ..’’ ಎಂದು ಹಾರಿಹೋಯಿತು.

ಮತ್ತೆ ಹಾರುತ್ತ ಮುಂದೆ ಹೋಗುವಾಗ ನವಿಲೊಂದು ಗರಿಬಿಚ್ಚಿ ನರ್ತನ ಮಾಡುತ್ತಲಿತ್ತು. ಅದನ್ನು ನೋಡಿ ಕಾಗೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ‘‘ನನಗೂ ಈ ರೆಕ್ಕೆ ಕೊಡು. ನಾನೂ ಕುಣಿಯುವೆ..’’ ಎಂದು ಓಡಿಓಡಿ ಹೋಗಿ ನವಿಲನ್ನು ಕೇಳಿತು. ಆಗ ನವಿಲು ‘‘ನಿನಗೆ ಈ ಗರಿಗಳು ಹೊಂದುವುದಿಲ್ಲ. ಅಂಟಿಸಿದರೂ ಅದೂ ಬಿದ್ದು ಹೋಗಿ ನಗೆಪಾಟಲಿಗೆ ಬೀಳುವೆ. ಬೇಡ ಬಿಡು. ಮುಂದಕ್ಕೆ ಹೋಗು’’ ಎಂದಿತು. ಆಗ ಕಾಗೆಗೆ ಕಣ್ಣೀರು ಉಕ್ಕಿ ಬಂತು. ಅಳಲು ಶುರುಮಾಡಿತು.

ಹೀಗೆ ಮುಂದೆ ಹೋಗುವಾಗ ಊರಿನ ಹಾದಿ ಬಂದಿತು. ಅಲ್ಲಿ ಒಬ್ಬ ಪುಟ್ಟ ಹುಡುಗ ತಾನು ತಿನ್ನುತ್ತಿದ್ದ ಆಹಾರವನ್ನು ಕೋಳಿಗಳಿಗೆ ಎಸೆದು ಮನೆಯೊಳಗೆ ಓಡಿದ. ಆಗ ಒಂದೆರಡು ಕೋಳಿಗಳು ‘‘ಅದು ನನಗೆ ಬೇಕು.. ನನ್ನ ಆಹಾರ.. ಕೊಡು..’’ ಎಂದು ಜಗಳ ಮಾಡಿಕೊಳ್ಳಲು ಆರಂಭಿಸಿದವು. ನಾಯಿಗಳು ಓಡೋಡಿ ಬಂದು ಗುರ್...ಗುರ್.. ಎಂದು ಹೆದರಿಸಿ ಕೋಳಿಗಳ ಓಡಿಸಿಬಿಟ್ಟು ತಾವು ತಿನ್ನಲು ಶುರುಮಾಡಿದವು. ಬೆಕ್ಕೊಂದು ಅಲ್ಲೇ ಮೂಲೆಯಿಂದ ಮಿಯಾವ್.. ಮಿಯಾವ್.. ಎಂದು ಮೆಲು ದನಿಯಲ್ಲೇ ನನಗೂ ಕೊಡು.. ಎಂದು ಹೇಳುತ್ತಿತ್ತು.

ಇದನ್ನೆಲ್ಲ ದೂರದಿಂದಲೇ ನೋಡಿದ ಕಾಗೆಗೆ ಇನ್ನೊಂದು ಅಚ್ಚರಿಯ ವಿಷಯ ಕಣ್ಣಿಗೆ ಬಿತ್ತು. ಅದೇನೆಂದರೆ ತನ್ನ ಬಳಗದ ಕಾಗೆಯೊಂದು ಆಹಾರ ಸಿಕ್ಕಿದೆ ಬೇಗ ಬನ್ನಿ ಎಲ್ಲ, ಇಲ್ಲದಿದ್ದರೆ ಈ ನಾಯಿಗಳು ಖಾಲಿ ಮಾಡಿಯಾವು... ಕಾವ್..ಕಾವ್.. ಎಂದು ಎಲ್ಲರನ್ನೂ ಕೂಗಿ ಕರೆಯುತ್ತಲಿತ್ತು.

ಆಗ ಕಾಗೆಗೆ ಉಳಿದ ಸ್ನೇಹಿತರು ಹೇಳಿದ ಮಾತು ನೆನಪಿಗೆ ಬಂದಿತು. ದೇವರು ಒಬ್ಬೊಬ್ಬರಿಗೆ ಒಂದೊಂದು ವಿಶೇಷತೆ ನೀಡಿರುವನು. ನಮ್ಮ ಪಾಲಿನದನ್ನು ನಾವು ಸ್ವೀಕರಿಸಬೇಕು.. ಎಂದು. ಕಾಗೆಗಳ ವಿಶೇಷ ಗುಣವೇ ಆಹಾರ ನೋಡಿದಾಗ ತನ್ನ ಬಳಗದವರನ್ನೆಲ್ಲ ಕೂಗಿ ಕರೆದು ಜೊತೆಗೂಡಿ ಸೇವಿಸುವುದು. ನೀತಿ : ನೋಡಿದಿರಾ ಮಕ್ಕಳೇ. ಎಲ್ಲರಿಗೂ ಅವರದೇ ಆದ ವಿಶೇಷತೆ ಇರುತ್ತದೆ. ಅವರಿವರನ್ನು ನೋಡಿ ಬೇಸರ ಮಾಡಿಕೊಳ್ಳಬಾರದು.

Writer - ಸಿಂಧು ಭಾರ್ಗವ್. ಬೆಂಗಳೂರು

contributor

Editor - ಸಿಂಧು ಭಾರ್ಗವ್. ಬೆಂಗಳೂರು

contributor

Similar News