'ಹಿಂದಿ' ಬಲವಂತದ ಹೇರಿಕೆ ಏಕತೆಗೆ ಮಾರಕ!

Update: 2019-09-22 06:01 GMT

ಅಮಿತ್‌ಶಾ ಅವರು ಭಾಷೆಗಳ ವಿಚಾರ ಸೇರಿದಂತೆ ದೇಶದಲ್ಲಿ ಏಕರೂಪತೆಯನ್ನು ಹೇರುವ ತನ್ನ ಸರಕಾರದ ಕಾರ್ಯಸೂಚಿಯನ್ನು ಅನಾವರಣಗೊಳಿಸಿರುವ ಈ ಸನ್ನಿವೇಶದಲ್ಲಿ, ಎಲ್ಲಾ ಹಿಂದಿಯೇತರ ರಾಜ್ಯಗಳ ಭಾವನೆಗಳು ಹಾಗೂ ಆಶೋತ್ತರಗಳ ಕುರಿತಾಗಿ ಪ್ರಸಕ್ತ ಇರುವ ಗೌರವಾದರಗಳು ಮುಂದೆಯೂ ಉಳಿದುಕೊಳ್ಳಲಿ ಹಾಗೂ ರಾಷ್ಟ್ರೀಯ ಭಾಷಾ ನೀತಿಯನ್ನು ನಿರ್ಧರಿಸುವಲ್ಲಿ ಅವುಗಳಿಗೂ ಪ್ರಾಶಸ್ತ್ಯ ದೊರೆಯಲಿದೆ ಎಂದು ಆಶಿಸೋಣ.

ರಡನೆಯ ಅವಧಿಯಲ್ಲಿ ಮೋದಿ ಸರಕಾರವು ಅತ್ಯಂತ ಬಲಿಷ್ಠವಾಗಿ ಹೊರಹೊಮ್ಮಿದೆ. ಮೋದಿ ಸರಕಾರವು ಲೋಕಸಭೆಯಲ್ಲಿ ಸಂಖ್ಯಾತ್ಮಕವಾದ ಬಹುಮತವನ್ನು ಹೊಂದಿರುವಂತೆಯೇ, ಇನ್ನೊಂದೆಡೆ ಪ್ರತಿಪಕ್ಷಗಳು ದುರ್ಬಲಗೊಂಡಿವೆ ಹಾಗೂ ವಿಭಜಿತವಾಗಿವೆ. ಜನಸಾಮಾನ್ಯರ ಅಭಿಪ್ರಾಯಗಳನ್ನು ಲೆಕ್ಕಿಸದೆಯೇ ಕೇಂದ್ರ ಸರಕಾರವು ಆರೆಸ್ಸೆಸ್-ಬಿಜೆಪಿಯ ಹಿಂದೂ ರಾಷ್ಟ್ರವಾದದ ಕಾರ್ಯಸೂಚಿಯನ್ನು ರಾಜಾರೋಷವಾಗಿ ಹೇರ ತೊಡಗಿದೆ. ಒಂದೆಡೆ ಮೋದಿ ಸರಕಾರವು ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದರೆ, ಇನ್ನೊಂದೆಡೆ ಸಂವಿಧಾನದ 370ನೇ ವಿಧಿಯನ್ನು ಅದು ರದ್ದುಪಡಿಸಿದೆ. ಈ ಸುಲಭವಾದ ಯಶಸ್ಸಿನಿಂದ ಉತ್ತೇಜಿತವಾಗಿರುವ ಸರಕಾರವು, ತನ್ನ ಇತರ ಕಾರ್ಯಸೂಚಿಗಳನ್ನು ಒಂದರ ಆನಂತರ ಒಂದರಂತೆ ಜಾರಿಗೊಳಿಸಲು ಹೊರಟಿರುವಂತೆ ಕಾಣುತ್ತದೆ.

     ಹಿಂದಿ ದಿನಾಚರಣೆಯ ಪ್ರಯುಕ್ತ ಆಯೋಜಿಸ ಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಹೇರುವ ತನ್ನ ಪಕ್ಷದ ಇಂಗಿತವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ‘‘ಜಗತ್ತಿನಲ್ಲಿ ಭಾರತವನ್ನು ಪ್ರತಿನಿಧಿಸುವಂತಹ ಒಂದು ಭಾಷೆ ಇರಬೇಕಾಗಿದೆ. ಹಿಂದಿ ಭಾಷೆಯನ್ನು ವ್ಯಾಪಕವಾಗಿ ಮಾತನಾಡಲಾಗುತ್ತದೆ ಹಾಗೂ ಅದು ದೇಶವನ್ನು ಏಕತೆಯಿಂದ ಇರಿಸಬಹುದಾಗಿದೆ. ನಮ್ಮ ಪುರಾತನ ತತ್ವಜ್ಞಾನ, ನಮ್ಮ ಸಂಸ್ಕೃತಿ ಹಾಗೂ ಸ್ವಾತಂತ್ರ ಹೋರಾಟದ ನೆನಪುಗಳನ್ನು ಸಂರಕ್ಷಿಸಲು ಕನಿಷ್ಠ ಪಕ್ಷ ಹಿಂದಿ ಭಾಷೆಯಾದರೂ ಅತ್ಯಗತ್ಯ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಒಂದು ವೇಳೆ ಹಿಂದಿ ಭಾಷೆಯನ್ನು ನಮ್ಮ ಸ್ವಾತಂತ್ರ ಹೋರಾಟದಿಂದ ಹೊರಗಿಟ್ಟಲ್ಲಿ, ಆ ಹೋರಾಟದ ಆತ್ಮವೇ ಕಳೆದುಹೋಗಲಿದೆ’’ ಎಂದವರು ಹೇಳಿದ್ದರು. ತನ್ನ ಅನಿಸಿಕೆಗೆ ಪುಷ್ಟಿ ನೀಡುವಂತೆ ಅವರು ಟ್ವೀಟ್ ಸಂದೇಶವೊಂದನ್ನು ಕೂಡಾ ಪ್ರಸಾರ ಮಾಡಿದ್ದರು. ‘‘ಸ್ಥಳೀಯ ಭಾಷೆಯನ್ನು ಪ್ರೋತ್ಸಾಹಿಸುವ ಜೊತೆಗೆ ಒಂದು ದೇಶ, ಒಂದು ಭಾಷೆಯೆಂಬ ಬಾಪೂಜಿ ಹಾಗೂ ಸರ್ದಾರ್ ಪಟೇಲ್ ಅವರ ಕನಸನ್ನು ನನಸಾಗಿಸಲು ಹಿಂದಿಯನ್ನು ಕೂಡಾ ಬಳಕೆ ಮಾಡಬೇಕೆಂದು ನಾನು ಜನರಿಗೆ ಮನವಿ ಮಾಡಲು ಬಯಸಿದ್ದೇನೆ’’ ಎಂದವರು ಟ್ವೀಟಿಸಿದ್ದರು.

  ಅವರು ಯಾವುದೇ ಮುಚ್ಚುಮರೆ ಯಿಲ್ಲದೆ ತನ್ನ ಇಂಗಿತವನ್ನು ವ್ಯಕ್ತಪಡಿಸಿ ದ್ದಾರೆ ಮತ್ತು ಜಾಣ್ಮೆಯಿಂದಲೇ ಪದಗಳನ್ನು ಪ್ರಯೋಗಿಸಿದ್ದಾರೆ. ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳನ್ನು ಮೂಲೆಗುಂಪು ಮಾಡಿ, ಹಿಂದಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಅವರ ಚಿಂತನೆಯಾಗಿದೆ. ದಕ್ಷಿಣ ಭಾರತದ ಹಲವಾರು ನಾಯಕರಾದ ಎಂ.ಕೆ. ಸ್ಟಾಲಿನ್, ಶಶಿ ತರೂರ್, ಪಿಣರಾಯಿ ವಿಜಯನ್ ಹಾಗೂ ಕಮಲ್‌ಹಾಸನ್ ಅವರು ಶಾ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಟ್ವೀಟ್‌ನಲ್ಲಿ ಈ ವಿಷಯದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ‘‘ಆ ಭಾಷೆ (ಹಿಂದಿ) ಬಹುತೇಕ ಭಾರತೀಯರ ಮಾತೃ ಭಾಷೆಯಾಗಿಲ್ಲ. ಅವರ ಮೇಲೆ ಹಿಂದಿಯನ್ನು ಹೇರುವುದೆಂದರೆ, ಅವರನ್ನು ಗುಲಾಮಗಿರಿಗೆ ಒಳಪಡಿಸುವುದಕ್ಕೆ ಸರಿಸಮಾನವಾದುದಾಗಿದೆ’’ ಎಂದಿದ್ದರು. ಕಮಲ್‌ಹಾಸನ್ ತನ್ನ ಟ್ವಿಟರ್‌ಖಾತೆಯಲ್ಲಿ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ಅಶೋಕ ಸ್ತಂಭದ ಪಕ್ಕದಲ್ಲೇ ನಿಂತುಕೊಂಡಿದ್ದ ಅವರು, ‘‘ಭಾರತವು ಜನತೆೆಯ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಭರವಸೆಯೊಂದಿಗೆ 1950ರಲ್ಲಿ ಗಣರಾಜ್ಯವಾಗಿ ರೂಪುಗೊಂಡಿತು. ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟನಿಗೆ ಹಠಾತ್ತನೆ ಭರವಸೆಗಳನ್ನು ಮುರಿದುಹಾಕುವ ಸ್ವಾತಂತ್ರವಿಲ್ಲ. ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ, ಆದರೆ ತಮಿಳು ಎಂದೆಂದಿಗೂ ನಮ್ಮ ಮಾತೃಭಾಷೆಯಾಗಿರುತ್ತದೆ. ನಮ್ಮ ಭಾಷೆಗಾಗಿ ನಡೆಯುವ ಸಮರವು ಘಾತಕವಾದ ರೀತಿಯಲ್ಲಿ ದೊಡ್ಡದಾಗುತ್ತಾ ಹೋಗುತ್ತಿದೆ.’’

 ಭಾಷೆ, ಸಂಸ್ಕೃತಿ, ಧರ್ಮ ಹಾಗೂ ಜನಾಂಗೀಯತೆಗೆ ಸಂಬಂಧಿಸಿದ ವಿಷಯಗಳಲ್ಲಿ ನಮ್ಮ ದೇಶವು ತುಂಬಾ ವೈವಿಧ್ಯವನ್ನು ಹೊಂದಿದೆ. ಸ್ವಾತಂತ್ರ ಚಳವಳಿಯು ಈ ವೈವಿಧ್ಯದ ನೈಜ ಪ್ರತಿಬಿಂಬವಾಗಿದೆ. ಸ್ವಾತಂತ್ರ ಚಳವಳಿಯಲ್ಲಿ ದೇಶದ ಜನತೆ ಎಲ್ಲಾ ರೀತಿಯ ಭೇದಭಾವಗಳನ್ನು ಮೀರಿ, ಒಂದೇ ತಾಯಿಯ ಮಕ್ಕಳಂತೆ ಹೋರಾಡಿದರು. ವಿಶೇಷವಾಗಿ ವಿವಿಧ ಧರ್ಮಗಳು ಹಾಗೂ ಭಾಷೆಗಳ ಮೂಲಕ ಹೊರಹೊಮ್ಮುವ ದೇಶದ ವಿವಿಧತೆ ಹಾಗೂ ಶ್ರೀಮಂತ ಪರಂಪರೆಯನ್ನು ಗೌರವಿಸುತ್ತಲೇ ಅವರು ಸ್ವಾತಂತ್ರಕ್ಕಾಗಿ ಹೋರಾಡಿದರು. ಎಲ್ಲಾ ಭಾಷೆಗಳಲ್ಲಿಯೂ ಭಾರತವು ಏಕರಾಷ್ಟ್ರವಾಗಿ ರೂಪುಗೊಳ್ಳುವ ಆಶೋತ್ತರಗಳು ಅಭಿವ್ಯಕ್ತಗೊಂಡಿದ್ದವು. ಇತರ ಪ್ರಾದೇಶಿಕ ಭಾಷೆಗಳ ಜೊತೆಗೆ ಹಿಂದಿಯು ಭಾರತೀಯ ಸಮಾಜದ ಕನ್ನಡಿಯಾಗುವ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಹಿಂದಿ ಭಾಷೆಯ ಜೊತೆಗೆ ಇತರ ಪ್ರಾದೇಶಿಕ ಭಾಷೆಗಳು ಕೂಡಾ ಭಾರತೀಯ ಸಮಾಜದ ಕನ್ನಡಿಯಾಗುವ ಶ್ರೀಮಂತ ಪರಂಪರೆಯನ್ನು ಹೊಂದಿವೆ. ಇಂಗ್ಲಿಷ್ ಭಾಷೆಯನ್ನು ಪ್ರಾಥಮಿಕವಾಗಿ ಆಡಳಿತಾತ್ಮಕ ಭಾಷೆಯಾಗಿ ಪರಿಚಯಿಸಲಾಯಿತಾದರೂ, ಶೀಘ್ರದಲ್ಲೇ ಅದು ಭಾರತೀಯ ಸಂಸ್ಕೃತಿಯ ಭಾಗವಾಯಿತು ಹಾಗೂ ಇವೆಲ್ಲವೂ ಭಾರತೀಯ ಸಮಾಜ ಹಾಗೂ ಅದರ ಅಶೋತ್ತರಗಳ ಕನ್ನಡಿಯಾಯಿತು.

   ಬ್ರಿಟಿಷರ ದಾಸ್ಯದಿಂದ ವಿಮೋಚನೆಗೊಳ್ಳಲು ನಡೆದ ರಾಷ್ಟ್ರೀಯ ಚಳವಳಿಯು ಎಲ್ಲಾ ಭಾಷೆಗಳಲ್ಲಿಯೂ ಪ್ರತಿಬಿಂಬಿತಗೊಂಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಮುಸ್ಲಿಂ ಕೋಮುವಾದವು ‘ಉರ್ದು, ಮುಸ್ಲಿಂ, ಪಾಕಿಸ್ತಾನ್’ ಎಂಬ ಘೋಷಣೆಯನ್ನು ಚಲಾವಣೆಗೆ ತಂದರೆ, ಅದಕ್ಕೆ ಪರ್ಯಾಯವಾಗಿ ಹಿಂದೂ ಕೋಮುವಾದಿಗಳು ‘ಹಿಂದಿ, ಹಿಂದೂ, ಹಿಂದೂಸ್ತಾನ್’ ಎಂಬ ಘೋಷಣೆಯನ್ನು ಮೊಳಗಿಸಿದರು. ಮುಸ್ಲಿಮರು ಬಹುಸಂಖ್ಯಾತರಾಗಿದ್ದ ಪ್ರದೇಶಗಳನ್ನು ಒಳಗೊಂಡ (ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾ) ಪಾಕಿಸ್ತಾನವು ಸ್ಥಾಪನೆಯಾದಾಗ ಅವರ ಭಾಷೆಗಳು ವೈವಿಧ್ಯಮಯವಾಗಿದ್ದವು. ಆದರೆ ಮುಸ್ಲಿಮ್ ಲೀಗ್ ಉರ್ದು ಭಾಷೆಯೇ ಪಾಕಿಸ್ತಾನದ ರಾಷ್ಟ್ರ ಭಾಷೆಯಾಗಬೇಕೆಂದು ಪಟ್ಟು ಹಿಡಿಯಿತು. ಇದರಿಂದಾಗಿ ಪೂರ್ವ ಪಾಕಿಸ್ತಾನದಲ್ಲಿ ಪ್ರತ್ಯೇಕತೆಯ ಭಾವನೆ ಬೆಳೆಯಲಾರಂಭಿಸಿತು. ಅಂತಿಮವಾಗಿ ಬಂಗಾಳಿ ಭಾಷೆಯು ಮುಖ್ಯ ಭಾಷೆಯಾಗಿರುವ ಬಾಂಗ್ಲಾ ದೇಶದ ಸೃಷ್ಟಿಗೆ ಕಾರಣವಾಯಿತು.

ಕುತೂಹಲಕರವೆಂದರೆ ನಮ್ಮ ಸಂವಿಧಾನ ನಿರ್ಮಾತೃಗಳು ದೇವನಾಗರಿ ಅಥವಾ ಪರ್ಶಿಯನ್ ಲಿಪಿಯಲ್ಲಿ ಬರೆಯಲಾಗುವ ಹಿಂದೂಸ್ತಾನಿಗೆ ರಾಷ್ಟ್ರೀಯ ಭಾಷೆಯ ಮಾನ್ಯತೆ ನೀಡಬೇಕು ಹಾಗೂ ಅದು ಭಾರತ ಗಣರಾಜ್ಯದ ಪ್ರಥಮ ಅಧಿಕೃತ ಭಾಷೆಯಾಗಬೇಕು. ಇಂಗ್ಲಿಷ್ ಎರಡನೇ ಅಧಿಕೃತ ಭಾಷೆಯಾಗಿ ಒಕ್ಕೂಟವು ಕಾನೂನು ರೂಪಿಸಬೇಕು ಎಂದು ಸಲಹೆ ನೀಡಿದ್ದರು. ತ್ರಿಭಾಷಾ ಸೂತ್ರವು ಹಿಂದಿ, ಇಂಗ್ಲಿಷ್ ಹಾಗೂ ಆಯಾ ಪ್ರಾದೇಶಿಕ ಭಾಷೆಯನ್ನು ಶಿಕ್ಷಣದ ಕ್ರಮವಾಗಿ ರೂಪಿಸಿತ್ತು. 60ರ ದಶಕದಲ್ಲಿ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಗಳಾಗಿದ್ದವು. ಇದು ದೇಶಾದ್ಯಂತ ಭಾರೀ ಪ್ರತಿಭಟನೆಯ ಕಿಡಿಯನ್ನು ಹಚ್ಚಿತ್ತು. ಇದರ ಪರಿಣಾಮವಾಗಿ ಹಿಂದಿಯ ಕಡ್ಡಾಯ ಹೇರಿಕೆಯನ್ನು ತಡೆಹಿಡಿಯಲಾಯಿತು. ಮತ್ತೆ ಜಾರಿಗೊಳಿಸಲಾದ ನೂತನ ಶಿಕ್ಷಣ ನೀತಿ ಕೂಡಾ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿತು. ದೇಶದ್ಯಾಂತ ಶೇ.25 ಮಂದಿ ಭಾರತೀಯರ ಮಾತೃಭಾಷೆ ಹಿಂದಿಯಾಗಿದೆ ಹಾಗೂ ಶೇ.44 ಮಂದಿ ಭಾರತೀಯರು ತಮಗೆ ಹಿಂದಿ ತಿಳಿದಿರುವುದಾಗಿ ಹೇಳುತ್ತಾರೆ.

 ನೂತನ ಶಿಕ್ಷಣ ನೀತಿಯ ಭಾಗವಾಗಿ ಹಿಂದಿಯ ಕಡ್ಡಾಯ ಹೇರಿಕೆಯ ವಿರುದ್ಧ ಭಾರೀ ಪ್ರತಿಭಟನೆ ಭುಗಿಲೆದ್ದಿತು. ಇದರಿಂದಾಗಿ ಮತ್ತೊಮ್ಮೆ ಕೇಂದ್ರ ಸರಕಾರವು ಹಿಂದಿಯನ್ನು ಶಿಕ್ಷಣದಲ್ಲಿ ಕಡ್ಡಾಯಗೊಳಿಸುವುದನ್ನು ತಡೆಹಿಡಿಯಿತು. 1940ರ ದಶಕದಲ್ಲಿ ಕೂಡಾ ಕಾಂಗ್ರೆಸ್ ಸರಕಾರವು ತಮಿಳುನಾಡಿನಲ್ಲಿ (ಆಗಿನ ಮದ್ರಾಸ್ ಪ್ರಾಂತ) ಅಧಿಕಾರಕ್ಕೇರಿದಾಗ, ಹಿಂದಿಯನ್ನು ಪರಿಚಯಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಅದರ ವಿರುದ್ಧ ದ್ರಾವಿಡ ಚಳವಳಿಯ ನಾಯಕ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಬಲವಾದ ಹೋರಾಟವನ್ನೇ ರೂಪಿಸಿದ್ದರು. ‘ತಮಿಳುನಾಡು ತಮಿಳರಿಗಾಗಿ’ ಎಂಬ ಘೋಷಣೆಯನ್ನು ಅವರು ಮೊಳಗಿಸಿದರು ಮತ್ತು ದ್ರಾವಿಡರ ಸಂಸ್ಕೃತಿಯ ಮೇಲೆ ಅತಿಕ್ರಮಣ ಮಾಡಲು ಹಿಂದಿಯನ್ನು ಆರ್ಯರು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆಂದು ಅವರು ಆಪಾದಿಸಿದರು.

  ಸಂಕೀರ್ಣವಾದ ಭಾಷಾ ವಿಷಯವನ್ನು ನಿಭಾಯಿಸುವಾಗ ಸರಕಾರವು ಎಚ್ಚರಿಕೆಯಿಂದ ವರ್ತಿಸಬೇಕಾಗಿದೆ. ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳನ್ನು ವಿಭಿನ್ನವಾದ ಹಂತಗಳಲ್ಲಿ, ಬೇರೆಬೇರೆ ಪ್ರಮಾಣಗಳಲ್ಲಿ ಬಳಸಿಕೊಳ್ಳುತ್ತಲೇ ದೇಶದ ಶಿಕ್ಷಣ ಪದ್ಧತಿಯು ಬಹುಮಟ್ಟಿಗೆ ಚೆನ್ನಾಗಿಯೇ ಸಾಗುತ್ತಿತ್ತು. ದಕ್ಷಿಣದ ರಾಜ್ಯಗಳಲ್ಲಿ ಹಿಂದಿಯನ್ನು ಹರಡಲು ಪ್ರಜ್ಞಾಪೂರ್ವಕವಾದ ಪ್ರಯತ್ನಗಳು ನಡೆಯುತ್ತಿವೆಯಾದರೂ, ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ.

 ಇಂದು ದಕ್ಷಿಣ ಭಾರತ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಹಿಂದಿ ಭಾಷೆಯು ದೊಡ್ಡ ದೊಡ್ಡ ಹೆಜ್ಜೆಗಳನ್ನಿಡುತ್ತಲೇ ಮುನ್ನಡೆಯುತ್ತಿದೆ. ಆದರೆ ಇದು ಸಾಧ್ಯವಾಗಿರುವುದು ಕೇಂದ್ರ ಸರಕಾರದ ಹಿಂದಿ ಹೇರಿಕೆಯಿಂದಲ್ಲ. ಹಿಂದಿ ಭಾಷೆಯನ್ನು ಪ್ರೋತ್ಸಾಹಿಸುತ್ತಿರುವ ಸಂಘಟನೆಗಳ ಪ್ರಯತ್ನದ ಜೊತೆಗೆ ಜನಪ್ರಿಯವಾಗುತ್ತಿರುವ ಹಿಂದಿ ಚಿತ್ರಗಳು ಹಾಗೂ ಹಿಂದಿ ಟಿವಿ ಧಾರಾವಾಹಿಗಳಿಂದಾಗಿ, ಆ ಭಾಷೆ ದೇಶದ ಉದ್ದಗಲಕ್ಕೂ ಜನತೆಗೆ ಹತ್ತಿರವಾಗುತ್ತಿದೆ.

ಉರ್ದುವನ್ನು ರಾಷ್ಟ್ರೀಯ ಭಾಷೆಯಾಗಿಸಲು ನಡೆಸಲಾದ ಪ್ರಯತ್ನವು ಪಾಕಿಸ್ತಾನದ ವಿಭಜನೆಗೆ ಕಾರಣವಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಭಾರತವು ಭಾಷೆಗಳ ವಿಷಯವಾಗಿ ಅಮೋಘವಾದ ಸಂತುಲಿತವಾದ ಧೋರಣೆಯನ್ನು ಪ್ರದರ್ಶಿಸುತ್ತಾ ಬಂದಿದೆ. ಭಾಷೆಗಳ ಆಧಾರದಲ್ಲಿ ರಾಜ್ಯಗಳ ಪುನಾರಚನೆಯು ನಮಗೆ ವಿಶಿಷ್ಟವಾದ ಶಕ್ತಿಯನ್ನು ನೀಡಿದೆ.

ಅಮಿತ್‌ಶಾ ಅವರು ಭಾಷೆಗಳ ವಿಚಾರ ಸೇರಿದಂತೆ ದೇಶದಲ್ಲಿ ಏಕರೂಪತೆಯನ್ನು ಹೇರುವ ತನ್ನ ಸರಕಾರದ ಕಾರ್ಯಸೂಚಿಯನ್ನು ಅನಾವರಣಗೊಳಿಸಿರುವ ಈ ಸನ್ನಿವೇಶದಲ್ಲಿ, ಎಲ್ಲಾ ಹಿಂದಿಯೇತರ ರಾಜ್ಯಗಳ ಭಾವನೆಗಳು ಹಾಗೂ ಆಶೋತ್ತರಗಳ ಕುರಿತಾಗಿ ಪ್ರಸಕ್ತ ಇರುವ ಗೌರವಾದರಗಳು ಮುಂದೆಯೂ ಉಳಿದುಕೊಳ್ಳಲಿ ಹಾಗೂ ರಾಷ್ಟ್ರೀಯ ಭಾಷಾ ನೀತಿಯನ್ನು ನಿರ್ಧರಿಸುವಲ್ಲಿ ಅವುಗಳಿಗೂ ಪ್ರಾಶಸ್ತ್ಯ ದೊರೆಯಲಿದೆ ಎಂದು ಆಶಿಸೋಣ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News

ಜಗದಗಲ
ಜಗ ದಗಲ