ಸಿದ್ದರಾಮಯ್ಯ ವಿರುದ್ಧದ ಅಕ್ರಮ ಡಿನೋಟಿಫಿಕೇಶನ್ ಪ್ರಕರಣ: ವಿಚಾರಣೆಗೆ ನಾಲ್ಕು ವಾರ ತಡೆ ನೀಡಿದ ಹೈಕೋರ್ಟ್

Update: 2019-09-23 15:00 GMT

ಬೆಂಗಳೂರು, ಸೆ.23: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಜಮೀನಿನ ಅಕ್ರಮ ಡಿನೋಟಿಫಿಕೇಶನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿ, ಪ್ರತಿವಾದಿ ಗಂಗರಾಜುಗೆ ನೋಟಿಸ್ ನೀಡಿದೆ. 

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಜನಪ್ರತಿನಿಧಿಗಳ ನ್ಯಾಯಾಲಯ ಸೆ.23ರಂದು ಖುದ್ದು ಹಾಜರಾಗುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಪೀಠವು ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿ ಆದೇಶ ಹೊರಡಿಸಿತು. 

ಪ್ರಕರಣದ ವಿವರ: 1988ರಲ್ಲಿ ಮೈಸೂರಿನ ವಿಜಯನಗರ 2ನೆ ಹಂತದ ಬಡಾವಣೆ ನಿರ್ಮಾಣಕ್ಕೆ ಹಿನಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದ 535ಎಕರೆ ಪ್ರದೇಶವನ್ನ ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ ವಶಪಡಿಸಿಕೊಂಡಿತ್ತು. 10 ವರ್ಷಗಳ ಬಳಿಕ ಬಡಾವಣೆ ರಚಿಸಿ ನಿವೇಶನ ಹಂಚಿಕೆಯಾದ ನಂತರ ಸಿದ್ದರಾಮಯ್ಯ ಅವರ ಆಪ್ತ ಪಾಪಣ್ಣ ಅವರು ತಮ್ಮ ಸಂಬಂಧಿಕರಿಗೆ ಸೇರಿದ 30 ಗುಂಟೆ ಜಮೀನನ್ನು ಕೈ ಬಿಡುವಂತೆ ಮುಡಾಗೆ ಅರ್ಜಿ ಸಲ್ಲಿಸಿದ್ದರು. ನಂತರ ಮುಡಾ ಜಾಗವನ್ನು ಡಿನೋಟಿಫೈ ಮಾಡಿತ್ತು. ಡಿನೋಟಿಫೈ ಮಾಡಿದ್ದಾರೆನ್ನಲಾದ ಜಮೀನಿನಲ್ಲಿ ಪಾಪಣ್ಣ ಅವರ ಚಿಕ್ಕಮ್ಮ ಸಾಕಮ್ಮ ಅವರಿಗೆ ಸೇರಿದ್ದ 10ಗುಂಟೆ ನಿವೇಶನವನ್ನು ಸಿದ್ದರಾಮಯ್ಯ ಖರೀದಿಸಿದ್ದಲ್ಲದೇ ಪಕ್ಕದ ಜಮೀನನ್ನು ಅತಿಕ್ರಮಿಸಿ ಮನೆ ಕಟ್ಟಿ ಬೇರೆಯವರಿಗೆ ಮಾರಾಟ ಮಾಡಿದ್ದರು. ನೋಟಿಫೈ ಮಾಡಿದ ಜಾಗವನ್ನ ಸಿದ್ದರಾಮಯ್ಯ ಮಾರಾಟ ಮಾಡಿದ್ದಾರೆಂದು ಗಂಗರಾಜು ಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ಕಳೆದ ವರ್ಷ 2018ರಲ್ಲಿ ನವೆಂಬರು 3ರಂದು ಪೊಲೀಸರು ನ್ಯಾಯಾಲಯಕ್ಕೆ ಬಿ ರೀಪೋರ್ಟ್ ಸಲ್ಲಿಕೆ ಮಾಡಿದ್ದರು. ಹೀಗಾಗಿ ಇದನ್ನ ಪ್ರಶ್ನಿಸಿ ಗಂಗರಾಜು ಕೋರ್ಟ್ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News