ಕಾಶ್ಮೀರಿಗಳನ್ನು ಆಲಂಗಿಸಬೇಕೆಂದು ಹೇಳುವ ಪ್ರಧಾನಿ ನನ್ನನ್ನೇಕೆ ತಡೆದರು?: ಯಶವಂತ್ ಸಿನ್ಹಾ
ದುರದೃಷ್ಟವಶಾತ್ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದಕ್ಕಿಂತ ಅಲ್ಲಿನ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಜವಾಬ್ದಾರಿಯುತವಾದ ಮಾಧ್ಯಮಗಳು ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಅತಿರೇಕಗಳಿಗೆ ಕುರುಡಾಗಿವೆ. ರಾಷ್ಟ್ರವಾಗಿ ನಾವು ಎದ್ದೇಳಬೇಕು ಹಾಗೂ ಅವನ್ನು ವಿರೋಧಿಸಬೇಕು. ಕಳೆದ 50 ದಿನಗಳಿಂದ 70-80 ಲಕ್ಷ ಮಂದಿ ದಿಗ್ಬಂಧನಕ್ಕೊಳಗಾಗಿದ್ದಾರೆ ಹಾಗೂ ನಾವು ಅದನ್ನು ಸಹಜವೆಂದು ಪರಿಗಣಿಸುತ್ತೇವೆ. ಒಂದು ವೇಳೆ ಇದು ದೇಶದ ಇತರ ಯಾವುದೇ ಭಾಗದಲ್ಲಿ ನಡೆದಿದ್ದಲ್ಲಿ ನಾವು ಅದನ್ನು ಸಹಿಸುತ್ತೇವೆಯೇ?.
ಮಾಜಿ ವಿದೇಶಾಂಗ ಸಚಿವ ಯಶವಂತ್ ಸಿನ್ಹಾ ಅವರನ್ನು ಶ್ರೀನಗರ ವಿಮಾನನಿಲ್ದಾಣದಲ್ಲಿ ತಡೆಹಿಡಿದು, ದಿಲ್ಲಿಗೆ ವಾಪಸ್ ಕಳುಹಿಸಿದಂತಹ ಹೈ ಡ್ರಾಮಾ ಇಡೀ ದೇಶದ ಗಮನಸೆಳೆದಿತ್ತು. ಅದಾದ ಬಳಿಕವೂ ಕಾಶ್ಮೀರ ಕಣಿವೆಗೆ ಭೇಟಿ ನೀಡುವ ಪ್ರಯತ್ನಗಳನ್ನು ತಾನು ಮುಂದುವರಿಸುವುದಾಗಿ ಸಿನ್ಹಾ ಅವರು ಹೇಳಿದ್ದಾರೆ. ಶ್ರೀನಗರ ವಿಮಾನನಿಲ್ದಾಣದಲ್ಲಿ ನಡೆದ ನಾಟಕೀಯ ಘಟನೆಯ ಬಗ್ಗೆ ಔಟ್‌ಲುಕ್ ಪತ್ರಿಕೆಯು ಸಿನ್ಹಾರನ್ನು ಸಂದರ್ಶಿಸಿತ್ತು. ಈ ಸಂದರ್ಶನದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.
ಪ್ರಶ್ನೆ: ‘ನಾವು ಪ್ರತಿಯೊಬ್ಬ ಕಾಶ್ಮೀರಿಯನ್ನು ಆಲಂಗಿಸಿಕೊಳ್ಳಬೇಕು ಹಾಗೂ ಕಾಶ್ಮೀರ ಕಣಿವೆಯಲ್ಲಿ ಹೊಸ ಸ್ವರ್ಗವನ್ನು ಸೃಷ್ಟಿಸಬೇಕೆಂದು ಪ್ರಧಾನಿ ಮೋದಿ ಇತ್ತೀಚೆಗೆ ಹೇಳಿದ್ದಾರೆ. ನೀವು ಅದನ್ನು ನಂಬುವಿರಾ?
ಸಿನ್ಹಾ: ಮೂರು ವರ್ಷಗಳ ಹಿಂದೆ ಮೋದಿಯವರು ಕೆಂಪುಕೋಟೆಯಲ್ಲಿ ನಿಂತುಕೊಂಡು, ಕಾಶ್ಮೀರಿಗಳನ್ನು ದೂಷಿಸುವುದು ಬೇಡ. ಅವರನ್ನು ತಬ್ಬಿಕೊಳ್ಳೋಣ. ಮೊನ್ನೆ (ಗುರುವಾರ) ನಾಸಿಕ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿಯವರು ‘‘ನಾವು ಕಾಶ್ಮೀರಿಗಳನ್ನು ಅಲಂಗಿಸಿಕೊಳ್ಳೋಣ’’ ಎಂದು ಹೇಳಿದ್ದರು. ನಾನು ಅಲ್ಲಿಗೆ ತೆರಳಿ, ಅವರನ್ನು ಆಲಂಗಿಸಿಕೊಳ್ಳಲು ಯತ್ನಿಸಿದೆ. ಆದರೆ ನನ್ನನ್ನು ತಡೆದು ನಿಲ್ಲಿಸಲಾಯಿತು. ಉನ್ನತ ಸ್ಥಾನವನ್ನು ಅಲಂಕರಿಸಿಕೊಂಡಿರುವ ವ್ಯಕ್ತಿಯೊಬ್ಬ, ತನಗೇ ನಂಬಿಕೆಯಿಲ್ಲದ ವಿಷಯಗಳನ್ನು ಹೇಳುತ್ತಿದ್ದಾರೆಂದಾದರೆ, ಅವರ ಬಗ್ಗೆ ನೀವು ಏನೆಂದು ಹೇಳಬೇಕು?. ನೀವು ದಿಲ್ಲಿ ಹಾಗೂ ಮಹಾ ರಾಷ್ಟ್ರದಲ್ಲಿದ್ದುಕೊಂಡು, ನಾವು ಕಾಶ್ಮೀರವನ್ನು ಸ್ವರ್ಗವಾಗಿ ಮಾರ್ಪಡಿಸುತ್ತೇವೆ ಎಂದು ಹೇಳಿಕೊಳ್ಳಬಹುದು. ಆದರೆ ಕಾಶ್ಮೀರಿಗಳು ಇದನ್ನು ಮೆಚ್ಚಿಕೊಳ್ಳಲಾರರು.
ಪ್ರಶ್ನೆ: ಹೈ ಡ್ರಾಮಾ ನಡುವೆ ನಿಮ್ಮನ್ನು ಶ್ರೀನಗರದಿಂದ ದಿಲ್ಲಿಗೆ ಹಿಂದಕ್ಕೆ ಕಳುಹಿಸಲಾಯಿತು. ಈ ಘಟನೆಗಳು ವಿಮಾನನಿಲ್ದಾಣದಲ್ಲಿ ಹೇಗೆ ಅನಾವರಣಗೊಂಡವು ಎಂದು ನೀವು ಹೇಳುವಿರಾ?.
ಸಿನ್ಹಾ: ಕಾಶ್ಮೀರ ಕಣಿವೆಯ ಐದಾರು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ, ಎಲ್ಲವೂ ಸಾಮಾನ್ಯವಾಗಿದೆ ಹಾಗೂ ಅಲ್ಲಿ ಯಾವುದೇ ನಿರ್ಬಂಧಗಳನ್ನು ಹೇರಲಾಗಿಲ್ಲವೆಂದು ಕೇಂದ್ರ ಸರಕಾರವು ಸೆಪ್ಟ್ಟಂಬರ್ 16ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಬಳಿಕ ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ನಿರ್ಧರಿಸಿದೆ. ಕಾಳಜಿ ಹೊಂದಿರುವ ಪೌರರ ಗುಂಪಿನ ಸದಸ್ಯರಾದ ಭರತ್ ಭೂಷಣ್, ಕಪಿಲ್ ಕಾಕ್ ಹಾಗೂ ಸುಶೋಬಾ ಭಾರ್ವೆ ನನ್ನ ಜೊತೆಗಿದ್ದರು. ನಾನು ವಿಮಾನನಿಲ್ದಾಣವನ್ನು ತಲುಪಿದಾಗ, ಬಡ್‌ಗಾಂವ್ ಜಿಲ್ಲೆಯ ಉಪ ಆಯುಕ್ತರು ನನ್ನನ್ನು ಮುಂದೆ ಸಾಗದಂತೆ ತಡೆದರು. ಆದಾಗ್ಯೂ, ಇತರರು ಹೋಗಬಹುದೆಂದು ಅವರು ಹೇಳಿದ್ದರು.
ನಾನು ಶಾಂತಿ ಮಾತುಕತೆಗಾಗಿ ಹಲವಾರು ಬಾರಿ ಕಾಶ್ಮೀರಕ್ಕೆ ಬರುತ್ತಲೇ ಇದ್ದೇನೆ ಎಂದು ನಾನು ಹೇಳಿದರೂ, ಅವರು ಒಪ್ಪಿಕೊಳ್ಳ ಲಿಲ್ಲ. ಹೀಗಾಗಿ, ಲಿಖಿತವಾಗಿ ಆದೇಶವನ್ನು ಬರೆದುಕೊಡುವಂತೆ ಆಗ್ರಹಿಸಿದ್ದೆ. ಎರಡು ತಾಸುಗಳ ಬಳಿಕ ಅವರು ಆದೇಶದೊಂದಿಗೆ ವಾಪಸಾದರು. ಭಾರತೀಯ ದಂಡಸಂಹಿತೆಯ ಸೆಕ್ಷನ್ 144ರಡಿ, ನನ್ನ ಭೇಟಿಯು ಕಾನೂನು ಮತ್ತು ಶಿಸ್ತು ಪರಿಸ್ಥಿತಿಗೆ ಅಡ್ಡಿಯುಂಟು ಮಾಡಲಿದೆ ಎಂಬ ಬಗ್ಗೆ ವಿಶ್ವಸನೀಯ ಮಾಹಿತಿಗಳು ಲಭಿಸಿವೆ ಎಂದು ಆದೇಶವು ತಿಳಿಸಿತ್ತು.
ಪ್ರಶ್ನೆ: ನೀವು ದಿಲ್ಲಿಗೆ ವಾಪಸಾಗು ವಂತೆ ಆಡಳಿತವು ನಿಮ್ಮನ್ನು ಬಲವಂತಪಡಿಸಿತ್ತೆಂದು ಕೂಡಾ ನೀವು ಹೇಳಿದ್ದೀರಿ?
ಸಿನ್ಹಾ: ದಿಲ್ಲಿಗೆ ಹಿಂದಿರುಗುವಂತೆ ಪೊಲೀಸರು ನನ್ನ ಮನವೊಲಿಸಿದರು. ಆದರೆ ನಾನು ಮಣಿಯಲಿಲ್ಲ. ಇನ್ನೊಂದು ಲಿಖಿತ ಆದೇಶವನ್ನು ತೋರಿಸುವಂತೆ ನಾನು ಜಿಲ್ಲಾ ಮ್ಯಾಜಿಸ್ಟ್ರೇಟರನ್ನು ಆಗ್ರಹಿಸಿದೆ. ಸಂಜೆ 5 ಗಂಟೆಗೆ ಪೊಲೀಸ್ ಅಧೀಕ್ಷಕ (ಎಸ್ಪಿ)ರು ಮತ್ತೊಂದು ಆದೇಶದೊಂದಿಗೆ ಮರಳಿ ಬಂದರು. ಅದು ರಕ್ಷಣಾಪಡೆಯ ವಿಮಾನ ನಿಲ್ದಾಣವಾದ್ದರಿಂದ ನಾನು ವಿಮಾನ ನಿಲ್ದಾಣದಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲವೆಂದು ಅವರು ಹೇಳಿದರು. ಈ ಆದೇಶವು ಸಾಂವಿಧಾನಿಕ, ನೈತಿಕ ಅಥವಾ ಕಾನೂನಾತ್ಮಕ ಆದೇಶವೆಂದು ನಾನು ಪರಿಗಣಿಸಲಾರೆನೆಂದು ನಾನು ಅವರಿಗೆ ಹೇಳಿದೆ. ನನ್ನನ್ನು ಬಂಧಿಸಿ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸುವಂತೆ ನಾನು ಆಗ್ರಹಿಸಿದೆ.
ಸಂಜೆ ಸುಮಾರು 5:30ರ ವೇಳೆಗೆ, ಅವರು ಗಾಲಿಕುರ್ಚಿಯೊಂದಿಗೆ ಆಗಮಿಸಿದರು ಹಾಗೂ ನನ್ನನ್ನು ಹೊರಗೆ ಕೊಂಡೊಯ್ಯುವುದಾಗಿ ಅವರು ತಿಳಿಸಿದರು. ಆದರೆ ಅವರು ನನ್ನನ್ನು ಬೋರ್ಡಿಂಗ್ ದ್ವಾರದೆಡೆಗೆ ಕರೆದೊಯ್ದರು. ನಾನು ಪ್ರತಿಭಟಿಸಿದೆ ಹಾಗೂ ಆಗ ಒಂದಿಷ್ಟು ಕೋಲಾಹಲವುಂಟಾಯಿತು. ನಾನು ಎದ್ದೇಳಲು ಯತ್ನಿಸಿದಾಗ ಪೊಲೀಸರು ನನ್ನನ್ನು ಒತ್ತಾಯಪೂರ್ವಕವಾಗಿ ಕುಳ್ಳಿರಿಸಿದರು. ಅವರು ನನ್ನನ್ನು ಬಲವಂತದಿಂದ ದಿಲ್ಲಿ ವಿಮಾನವನ್ನೇರುವಂತೆ ಮಾಡಿದರು. ಆ ವಿಮಾನವು 5:45ಕ್ಕೆ ತೆರಳುವುದರಲ್ಲಿತ್ತು. ಗುಂಪಿನ ಉಳಿದ ಸದಸ್ಯರನ್ನು ಕಾದಿರಿಸಿದ ಲಾಂಜ್‌ನಲ್ಲಿ ಕೂಡಿಹಾಕಲಾಗಿತ್ತು. ಹೀಗಾಗಿ ಅವರಿಗೆ 15 ನಿಮಿಷಗಳ ಘಟನಾವಳಿಯನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ವೀಡಿಯೊಗಳನ್ನು ತೆಗೆಯದಂತೆ ಅವರು ಪ್ರತಿಯೊಬ್ಬರಿಗೂ ಎಚ್ಚರಿಕೆ ನೀಡಿದರು.
ಪ್ರಶ್ನೆ: ಕಾಶ್ಮೀರ ಕಣಿವೆಯಲ್ಲಿ ನಿರ್ಬಂಧ ಹೇರಿ 50 ದಿನಗಳಾದವು. ಸರಕಾರವು ಹೇಳಿಕೊಳ್ಳುವಂತೆ ಪರಿಸ್ಥಿತಿಯು ಸಹಜವಾಗಿದೆಯೆಂದು ನೀವು ಯೋಚಿಸುತ್ತೀರಾ?
ಸಿನ್ಹಾ: ಪರಿಸ್ಥಿತಿ ಸಹಜವಾಗಿದ್ದರೆ ಕನಿಷ್ಠಪಕ್ಷ ವಿಮಾನ ನಿಲ್ದಾಣದಲ್ಲಿನ ಸರಕಾರಿ ಕಚೇರಿಗಳಾದರೂ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಅಲ್ಲಿ ಹಾಗಿಲ್ಲ. ನಾನು ಜಮ್ಮು ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ತೆರಳಿದೆ ಅಲ್ಲಿ ಒಬ್ಬನೇ ಒಬ್ಬ ಮನುಷ್ಯ ಕಾಣ ಸಿಗಲಿಲ್ಲ. ಸಣ್ಣ ಕ್ಯಾಂಟೀನ್ ಒಂದನ್ನು ಹೊರತುಪಡಿಸಿ ಕಚೇರಿಗಳು ಮುಚ್ಚಿದ್ದವು. ವಿಮಾನನಿಲ್ದಾಣದಲ್ಲಿ ಕೆಲವೇ ಕೆಲವು ಪ್ರಯಾಣಿಕರಿದ್ದರು.
ಪ್ರ: ಸಾರ್ವಜನಿಕ ಭದ್ರತಾ ಕಾಯ್ದೆ (ಪಿಎಸ್‌ಎ)ಯಡಿ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ)ಯಡಿ ಇತ್ತೀಚೆಗೆ ಬಂಧಿಸಿರುವುದರಿಂದ ಯಾವ ಪರಿಣಾಮಗಳಾಗಲಿದೆ?
ಸಿನ್ಹಾ: ಫಾರೂಕ್ ರಾಷ್ಟ್ರೀಯವಾದಿಯೆಂದು ನಾನು ಪರಿಗಣಿಸುತ್ತೇನೆ ಹಾಗೂ ಅವರು ಲೋಕಸಭೆಯ ಹಾಲಿ ಸದಸ್ಯರೂ ಹೌದು ಹಾಗೂ ಅವರ ಆರೋಗ್ಯ ಪರಿಸ್ಥಿತಿಯು ಕಳವಳಕಾರಿಯಾಗಿದೆ. ಆದರೆ ಈ ಎಲ್ಲಾ ಅಂಶಗಳು, ಆಡಳಿತಕ್ಕೆ ಅವರನ್ನು ಬಂಧಿಸುವುದಕ್ಕೆ ತಡೆಯಾಗಲಿಲ್ಲ. ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸರಕಾರವು ಕಾಶ್ಮೀರ ಕಣಿವೆಯಲ್ಲಿ ಉಳಿದುಕೊಂಡಿದ್ದ ಭಾರತ ಪರವಾದ ಭಾವನೆಗಳನ್ನು ನಾಶಪಡಿಸಿದೆ ಹಾಗೂ ಭಾರತವನ್ನು ಬೆಂಬಲಿಸಿದವರನ್ನು ಅವರು ನಾಶಪಡಿಸಿದ್ದಾರೆ.
ಪ್ರಶ್ನೆ: ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಹಾಗೂ ಸಿಪಿಎಂ ನಾಯಕ ಸೀತಾರಾಮ ಯಚೂರಿ ಅವರು ಕಾಶ್ಮೀರ ಭೇಟಿಗೆ ಅವಕಾಶ ಕೋರಿ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದಾರೆ. ನೀವು ಕೂಡಾ ಅವರನ್ನೇ ಅನುಸರಿಸುವಿರಾ?
ಸಿನ್ಹಾ: ಎರಡು ಕಾರಣಗಳಿಗಾಗಿ ನಾನು ಸುಪ್ರೀಂಕೋರ್ಟ್‌ಗೆ ಹೋಗಲಾರೆ. ತೀರಾ ಇತ್ತೀಚೆಗೆ ನಾನು ವೈಯಕ್ತಿಕ ಸ್ವಾತಂತ್ರದ ವಿಷಯವಾಗಿ ಸಲ್ಲಿಸಿದ ಅರ್ಜಿಯ ಆಲಿಕೆಯ ವೇಳೆ ಸುಪ್ರೀಂಕೋರ್ಟ್ ನೀಡಿದ ಆದೇಶವು ಸರಕಾರಕ್ಕೆ ಪರಮೋನ್ನತ ಅಧಿಕಾರವನ್ನು ನೀಡಿತೇ ಹೊರತು ದೇಶದ ಪೌರನ ಮೂಲಭೂತ ಹಕ್ಕುಗಳ ಕುರಿತಾಗಿ ಅಲ್ಲ. ಸರಕಾರವು ಮುಖ್ಯವೇ ಹೊರತು, ಓರ್ವ ವ್ಯಕ್ತಿ ಅಥವಾ ಆತನ ಮೂಲಭೂತ ಹಕ್ಕುಗಳು ಮುಖ್ಯವಾಗಲಾರದು.
ಕಾಶ್ಮೀರಕ್ಕೆ ಭೇಟಿ ನೀಡಲು ಸುಪ್ರೀಂಕೋರ್ಟ್ ವೀಸಾ ನೀಡುವ ಪ್ರಾಧಿಕಾರವಲ್ಲವೆಂಬುದು ಎರಡನೆ ಕಾರಣವಾಗಿದೆ. ಹೀಗಾಗಿ ಕಾಶ್ಮೀರಕ್ಕೆ ಭೇಟಿ ನೀಡುವುದಕ್ಕಾಗಿ ಅನುಮತಿ ಕೋರಲು ಸುಪ್ರೀಂಕೋರ್ಟ್‌ನ ಮೆಟ್ಟಲೇರಬೇಕೆಂದು ನಾನು ಯಾರಿಗೂ ಅನುಮೋದನೆ ನೀಡಲಾರೆ.
ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಯಚೂರಿಯವರಿಗಿದ್ದ ಕಾರಣಗಳು ವಿಭಿನ್ನವಾಗಿದ್ದವು. ಯಾಕೆಂದರೆ ಅವರಿಗೆ ಸಿಪಿಎಂ ನಾಯಕ ತಾರಿಗಾಮಿ ಅವರನ್ನು ಚಿಕಿತ್ಸೆಗಾಗಿ ದಿಲ್ಲಿಗೆ ಕರೆತರಬೇಕಾಗಿತ್ತು. ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಬಾರದು ಎಂಬ ಶರತ್ತಿನೊಂದಿಗೆ ಗುಲಾಂ ನಬಿ ಆಝಾದ್ ಅವರಿಗೆ ಕಾಶ್ಮೀರದ ನಾಲ್ಕು ಜಿಲ್ಲೆಗಳನ್ನು ಸಂದರ್ಶಿಸಲು ಅನುಮತಿ ನೀಡಲಾಗಿತ್ತು. ಸರಕಾರವು ಬಯಸಿದ್ದನ್ನು ಹೊರತುಪಡಿಸಿ ಉಳಿದ ಎಲ್ಲಾ ರಾಜಕೀಯ ಚಟುವಟಿಕೆಗಳನ್ನು ತಡೆಯಲು ಸುಪ್ರೀಂಕೋರ್ಟ್ ಸರಕಾರಕ್ಕೆ ಅಧಿಕಾರ ನೀಡಿತ್ತು. ಸುಪ್ರೀಂ ಕೋರ್ಟ್‌ನಿಂದ ಅಂತಹ ನಿರ್ಬಂಧವನ್ನು ನಾವು ಯಾಕೆ ನಿರೀಕ್ಷಿಸಬೇಕು?. ಸ್ವತಂತ್ರ ದೇಶವೊಂದರ ಸ್ವತಂತ್ರ ನಾಗರಿಕನೊಬ್ಬನು ದೇಶದ ಯಾವುದೇ ಭಾಗಕ್ಕೆ ಪ್ರಯಾಣಿಸಲು ಸುಪ್ರೀಂಕೋರ್ಟ್ ಅನುಮತಿ ಯಾಕೆ ಬೇಕು?.
ಪ್ರಶ್ನೆ: ಕಾಶ್ಮೀರ ವಿವಾದವನ್ನು ವಿಭಿನ್ನವಾಗಿ ನಿಭಾಯಿಸಬಹುದೆಂದು ನೀವು ಭಾವಿಸಿದ್ದೀರಾ?
ಸಿನ್ಹಾ: ಕಾಶ್ಮೀರ ಕಣಿವೆಗೆ ನಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಯುವಜನತೆ ದೇಶದ ಉಳಿದ ಭಾಗದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ವಾಜಪೇಯಿ ಏನನ್ನು ಹೇಳಿದ್ದರೋ ಆ ರೀತಿಯಾಗಿ ನಾವು ಸಮಸ್ಯೆಗಳನ್ನು ನಿಭಾಯಿಸಿದಲ್ಲಿ ಭರವಸೆಯ ಬೆಳಕು ಇರಬಹುದಾಗಿತ್ತು. ಈ ಸರಕಾರವು ಕೇವಲ ಇನ್ಸಾನಿಯತ್, ಕಾಶ್ಮೀರಿಯತ್ ಹಾಗೂ ಜಮೂರಿಯತ್ ನಂತಹ ಘೋಷಣೆಗಳನ್ನು ಮೊಳಗಿಸುವುದರಲ್ಲಷ್ಟೇ ಆಸಕ್ತವಾಗಿದೆ. ಆದರೆ ಅದನ್ನು ಅನುಷ್ಠಾನಗೊಳಿಸಲು ಅದು ಆಸಕ್ತವಾಗಿಲ್ಲ. ಕಾಶ್ಮೀರಿಗಳನ್ನು ಮಾತುಕತೆಯ ಪ್ರಕ್ರಿಯೆಯಲ್ಲಿ ತೊಡಗಿಸಬೇಕೆಂಬ ನಮ್ಮ ಶಿಫಾರಸುಗಳಿಗೆ ಸರಕಾರ ಕಿವುಡಾಗಿ ವರ್ತಿಸುತ್ತಿದೆ. ಕಾಶ್ಮೀರಿ ಜನರು ಹಿಂದೆಂದಿಂಗಿಂತಲೂ ಇಂದು ಹೆಚ್ಚು ದೂರವಾಗಿದ್ದಾರೆ ಹಾಗೂ ಅವರು ಈಗ ದೀರ್ಘ ಸಮರಕ್ಕೆ ಸಿದ್ಧವಾಗಿದ್ದಾರೆಂಬ ವರದಿಗಳು ಬರುತ್ತಿವೆ.
ಪ್ರ: ಕಣಿವೆಯಲ್ಲಿ ಮಕ್ಕಳನ್ನು ಬಂಧಿಸಲಾಗುತ್ತಿದೆ ಹಾಗೂ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂಬ ಆರೋಪಗಳು ಬಂದಿವೆ. ಅಲ್ಲಿಂದ ನೀವು ಯಾವ ಸಂಗತಿಯನ್ನು ಕೇಳಿದ್ದೀರಿ?
ಸಿನ್ಹಾ: ದುರದೃಷ್ಟವಶಾತ್ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದಕ್ಕಿಂತ ಅಲ್ಲಿನ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಜವಾಬ್ದಾರಿಯುತವಾದ ಮಾಧ್ಯಮಗಳು ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಅತಿರೇಕಗಳಿಗೆ ಕುರುಡಾಗಿವೆ. ರಾಷ್ಟ್ರವಾಗಿ ನಾವು ಎದ್ದೇಳಬೇಕು ಹಾಗೂ ಅವನ್ನು ವಿರೋಧಿಸಬೇಕು. ಕಳೆದ 50 ದಿನಗಳಿಂದ 70-80 ಲಕ್ಷ ಮಂದಿ ದಿಗ್ಭಂಧನಕ್ಕೊಳಗಾಗಿದ್ದಾರೆ ಹಾಗೂ ನಾವು ಅದನ್ನು ಸಹಜವೆಂದು ಪರಿಗಣಿಸುತ್ತೇವೆ. ಒಂದು ವೇಳೆ ಇದು ದೇಶದ ಇತರ ಯಾವುದೇ ಭಾಗದಲ್ಲಿ ನಡೆದಿದ್ದಲ್ಲಿ ನಾವು ಅದನ್ನು ಸಹಿಸುತ್ತೇವೆಯೇ?. ಆದರೆ ಬಹುಸಂಖ್ಯೆಯ ಜನರು ಈ ಬಗ್ಗೆ ಧ್ವನಿಯೆತ್ತಲು ಆಸಕ್ತರಾಗಿಲ್ಲವೆಂಬುದಕ್ಕೆ ಸಾಕಷ್ಟು ಕಾರಣಗಳಿವೆ.
ಪ್ರ: ಕಾಶ್ಮೀರಕ್ಕೆ ಮತ್ತೊಮ್ಮೆ ತೆರಳುವಿರಾ?
ಸಿನ್ಹಾ: ಕಣಿವೆಯಿಂದ ಈಗಷ್ಟೇ ವಾಪಸಾದ ನನ್ನ ತಂಡದ ಸದಸ್ಯರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಈ ಬಗ್ಗೆ ಅವರು ಸದ್ಯದಲ್ಲೇ ವರದಿ ಸಿದ್ಧಪಡಿಸಲಿದ್ದಾರೆ. ಕಾಶ್ಮೀರಕ್ಕೆ ಮತ್ತೊಮ್ಮೆ ಭೇಟಿ ನೀಡುವ ಸಾಧ್ಯತೆಯನ್ನು ನಾನು ತಳ್ಳಿಹಾಕಲಾರೆ.
ಕೃಪೆ: ಔಟ್‌ಲುಕ್