ಶಿವಮೊಗ್ಗ: ಜಡ್ಡುಗಟ್ಟಿದ್ದ ಜಿಪಂ ಆಡಳಿತಕ್ಕೆ ಚುರುಕು ಮುಟ್ಟಿಸುತ್ತಿರುವ ನೂತನ ಸಿಇಓ
ಶಿವಮೊಗ್ಗ, ಸೆ.23: ಕಳೆದ ಕೆಲ ವರ್ಷಗಳಿಂದ ಜಡ್ಡುಗಟ್ಟಿದ್ದ, ಅಕ್ಷರಶಃ ನಿಂತ ನೀರಾಗಿದ್ದ ಇಲ್ಲಿನ ಜಿಲ್ಲಾ ಪಂಚಾಯತ್ ಆಡಳಿತ ಯಂತ್ರಕ್ಕೆ, ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಎಂ.ಎಲ್.ವೈಶಾಲಿ 'ಮೇಜರ್ ಸರ್ಜರಿ' ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ನಿರ್ಧಾಕ್ಷಿಣ್ಯ ಕ್ರಮಗಳ ಮೂಲಕ, ಚುರುಕು ಮುಟ್ಟಿಸಲಾರಂಭಿಸಿದ್ದಾರೆ.
ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ವಿಫಲವಾಗಿರುವ, ಅಧಿಕಾರಿ-ಸಿಬ್ಬಂದಿ ವಿರುದ್ದ ಶಿಸ್ತುಕ್ರಮ ಜರುಗಿಸಲಾರಂಭಿಸಿದ್ದಾರೆ. ಈಗಾಗಲೇ ಹಲವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ನಿರ್ವಹಿಸಿದ ಕಾಮಗಾರಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಗುತ್ತಿಗೆದಾರ ಹಾಗೂ ಏಜೆನ್ಸಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಲಾರಂಭಿಸಿದ್ದಾರೆ.
ಇದೆಲ್ಲದರ ಜೊತೆಗೆ ಜಿಲ್ಲೆಯ ವಿವಿಧೆಡೆ ಕಚೇರಿ, ಹಾಸ್ಟೆಲ್, ಗ್ರಾಮ ಪಂಚಾಯ್ತಿಗಳಿಗೆ ದಿಢೀರ್ ಭೇಟಿಯಿತ್ತು ಪರಿಶೀಲಿಸುತ್ತಿದ್ದಾರೆ. ಹಲವೆಡೆ ಕಂಡುಬಂದ ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಆಡಳಿತ ವ್ಯವಸ್ಥೆಯಲ್ಲಿ, ಭಾರೀ ಸಂಚಲನ ಸೃಷ್ಟಿಸಿದೆ. ಸಾಕಷ್ಟು ಬದಲಾವಣೆ ಕಂಡುಬಂದಿದೆ.
ನೋಟಿಸ್: ಗ್ರಾಮ ಪಂಚಾಯತ್ ಗಳಲ್ಲಿ 'ಸ್ವಚ್ಚ ಭಾರತ ಮಿಷನ್' ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಜಿಲ್ಲೆಯ ವಿವಿಧ ತಾಲೂಕುಗಳ 20 ಕ್ಕೂ ಅಧಿಕ ಪಿ.ಡಿ.ಓ.ಗಳಿಗೆ ನೋಟೀಸ್ ಜಾರಿಗೊಳಿಸಿದ್ದಾರೆ. ಕಚೇರಿಗೆ ಸಮಸ್ಯೆ ಹೇಳಿಕೊಂಡು ಬರುವ ನಾಗರಿಕರಿಗೆ ಸಕಾಲದಲ್ಲಿ ಸ್ಪಂದಿಸುವಂತೆ, ನೆಪ ಹೇಳಿ ಕಳುಹಿಸದಂತೆ ನಿರ್ದೇಶನ ನೀಡಿದ್ದಾರೆ.
'ಸರ್ವರ್ ಡೌನ್' ಇದೆ ಎಂದು ಸುಳ್ಳು ಹೇಳಿ ಗ್ರಾಮಸ್ಥರಿಗೆ ಸತಾಯಿಸಬಾರದು. ಆ ರೀತಿಯ ದೂರುಗಳೇನಾದರೂ ಸಾರ್ವಜನಿಕರಿಂದ ತಮ್ಮ ಬಳಿ ಬಂದರೇ, ಕಾನೂನು ರೀತ್ಯ ಕ್ರಮ ಅನಿವಾರ್ಯ. ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆಗಳೇನಾದರೂ ಇದ್ದಲ್ಲಿ ಸಕ್ಷಮ ಅಧಿಕಾರಿ ಅಥವಾ ತಮ್ಮ ಗಮನಕ್ಕೆ ನೇರವಾಗಿ ತರಬೇಕು ಎಂದು ಗ್ರಾ.ಪಂ. ಅಧಿಕಾರಿ-ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.
ಅಸ್ತವ್ಯಸ್ತ: ಜಿ.ಪಂ. ಕಚೇರಿಯ ನಾನಾ ವಿಭಾಗಗಳ ಕೆಲ ಅಧಿಕಾರಿ-ಸಿಬ್ಬಂದಿಗಳು ಸಮರ್ಪಕವಾಗಿ ಕಡತ ವಿಲೇವಾರಿ ಹಾಗೂ ನಾಗರೀಕರ ಸಮಸ್ಯೆಗಳಿಗೆ ಸ್ಪಂದಿಸದಿರುವ ಹಲವು ಆರೋಪಗಳು ಈ ಹಿಂದಿನಿಂದಲೂ ಕೇಳಿಬರುತ್ತಿವೆ. ಸಿಇಓ ಎಂ.ಎಲ್.ವೈಶಾಲಿಯವರು ವಿಭಾಗಗಳಿಗೆ ಖುದ್ದು ಭೇಟಿಯಿತ್ತು ಇಂತಹ 'ಅಧಿಕಾರಿ-ಸಿಬ್ಬಂದಿ'ಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಎ.ಸಿ. ಆಗಿದ್ದರು: ಕೆ.ಎ.ಎಸ್. ಅಧಿಕಾರಿಯಾದ ಎಂ.ಎಲ್.ವೈಶಾಲಿಯವರು ಈ ಹಿಂದೆ ಶಿವಮೊಗ್ಗ ಉಪ ವಿಭಾಗದ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತದನಂತರ ಹಲವೆಡೆ ಎ.ಸಿ.ಯಾಗಿ, ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅನುಭವ ಅವರಿಗಿದೆ. ಒಟ್ಟಾರೆ ಹಳ್ಳ ಹಿಡಿದಿದ್ದ ಜಿ.ಪಂ. ಆಡಳಿತ ಯಂತ್ರಕ್ಕೆ ನೂತನ ಸಿಇಓ ಎಂ.ಎಲ್.ವೈಶಾಲಿಯವರು 'ಮೇಜರ್ ಸರ್ಜರಿ' ನಡೆಸಲಾರಂಭಿಸಿದ್ದಾರೆ. ಇದು ಆಡಳಿತ ಯಂತ್ರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಜೊತೆಗೆ ಹಲವು ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿರುವುದಂತೂ ಸತ್ಯ.
ನೀರಿನ ಘಟಕಗಳ ನಿರ್ವಹಣೆ ಲೋಪ : ಕಠಿಣ ಕ್ರಮಕ್ಕೆ ಸೂಚನೆ
ಸೋಮವಾರ ಜಿ.ಪಂ. ಕಚೇರಿ ಸಭಾಂಗಣದಲ್ಲಿ ಸಿ.ಇ.ಓ. ವೈಶಾಲಿಯವರು ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ನಡೆಸುತ್ತಿರುವ ಏಜೆನ್ಸಿ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು. ಗ್ರಾಮೀಣ ಭಾಗದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಘಟಕಗಳ ದುರಸ್ತಿಗೆ ಕಾಲಮಿತಿಯಲ್ಲಿ ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೊತೆಗೆ ಘಟಕಗಳ ಸಮರ್ಪಕ ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವ ಏಜೆನ್ಸಿ, ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಹಾಗೂ ಮುಂಗಡ ಠೇವಣಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗೆ ಕಟ್ಟುನಿಟ್ಟಿನ ನಿರ್ದೇಶನ ಕೂಡ ನೀಡಿದ್ದಾರೆ.
ಕಚೇರಿಗಳಿಗೆ ದಿಢೀರ್ ಭೇಟಿ
ಸಿಇಓರವರು ಜಿಲ್ಲೆಯ ಹಲವೆಡೆ ಸರ್ಕಾರಿ ಕಚೇರಿ, ಹಾಸ್ಟೆಲ್, ಗ್ರಾ.ಪಂ. ಕಚೇರಿಗಳಿಗೆ ದಿಢೀರ್ ಭೇಟಿಯಿತ್ತು ತಪಾಸಣೆ ನಡೆಸುತ್ತಿದ್ದಾರೆ. ಹಾಗೆಯೇ ವಿವಿಧ ಇಲಾಖೆಗಳಡಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲಿಸುತ್ತಿದ್ದಾರೆ. ಇದು ಸಂಚಲನ ಸೃಷ್ಟಿಸಿದೆ. ತಮ್ಮ ಕೆಲಸ ಏನೆಂಬುವುದೇ ಮರೆತ್ತಿದ್ದ, ಕಚೇರಿಗೆ ಮನಸ್ಸಾದಾಗ ಬರುತ್ತಿದ್ದ ಅಧಿಕಾರಿ-ಸಿಬ್ಬಂದಿಗಳ ನಿದ್ದೆಗೆಡುವಂತೆ ಮಾಡಿದೆ. ಕಚೇರಿಗಳಲ್ಲಿ ಕಾಣ ಸಿಗುವುದೇ ಅಪರೂಪವಾಗಿದ್ದವರು ಇದೀಗ ನಾಗರೀಕರ ಕೈಗೆ ಸಿಗಲಾರಂಭಿಸಿದ್ದಾರೆ.