ಕಾಡುಹಂದಿ ಬೇಟೆ: ಇಬ್ಬರ ಬಂಧನ

Update: 2019-09-24 11:38 GMT

ಮಡಿಕೇರಿ, ಸೆ.24: ಸೋಮವಾರಪೇಟೆ ಸಮೀಪದ ಸೂರ್ಲಬಿಯಲ್ಲಿ ಕಾಡುಹಂದಿಯನ್ನು ಬೇಟೆಯಾಡಿ, ಮಾಂಸವನ್ನಾಗಿ ಪರಿವರ್ತಿಸಿ ಸಾಗಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. 

ಕುಂಬಾರಗಡಿಗೆ ಗ್ರಾಮದ ನಿವಾಸಿ ಯು.ಬಿ.ಸುಬ್ರಮಣಿ ಹಾಗೂ ಸೂರ್ಲಬಿ ಗ್ರಾಮದ ಎನ್.ಪಿ.ಗಣೇಶ್ ಬಂಧಿತ ಆರೋಪಿಗಳು. ಸೂರ್ಲಬಿ ಗ್ರಾಮದ ಸರ್ಕಾರಿ ಶಾಲೆ ಬಳಿ ವನ್ಯಜೀವಿಯ ಮಾಂಸ ಸಾಗಾಟ ಯತ್ನದ ಖಚಿತ ಮಾಹಿತಿ ದೊರೆತ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದರು.  

ಕಡವೆಯನ್ನು ಬೇಟೆಯಾಡಿರುವ ಬಗ್ಗೆ ಮಾಹಿತಿ ದೊರೆತಿತ್ತಾದರೂ ಆರೋಪಿಗಳು ಕಾಡುಹಂದಿಯನ್ನು ಬೇಟೆಯಾಡಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ ವಶಪಡಿಸಿಕೊಂಡ ಮಾಂಸವನ್ನು ಹೈದರಾಬಾದಿನ ಸಿ.ಸಿ.ಎಂ.ಬಿ. ಪ್ರಯೋಗಾಲಕ್ಕೆ ಕಳುಹಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಬಂಧಿತರಿಂದ ಮಾಂಸ, 2 ಬಂದೂಕು, ಟಾರ್ಚ್, ಕತ್ತಿಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‍ನ್ನು ವಶಕ್ಕೆ ಪಡೆಯಲಾಗಿದೆ.

ಸೋಮವಾರಪೇಟೆ ಎಸಿಎಫ್ ನೆಹರು ಮತ್ತು ಆರ್‍ಎಫ್‍ಓ ಶಮಾ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಾಮಾಜಿಕ ಅರಣ್ಯಾಧಿಕಾರಿ ನಮನ್, ಉಪ ವಲಯ ಅರಣ್ಯಾಧಿಕಾರಿಗಳಾದ ಚಂದ್ರೇಶ್, ಬಿ.ಎಸ್.ಶಶಿ, ಮನು, ಅರಣ್ಯ ರಕ್ಷಕ ಭರಮಪ್ಪ, ಯತೀಶ್, ಚಾಲಕ ನಂದೀಶ್ ಅವರುಗಳು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News