ಸಾಹಿತ್ಯ ಲೋಕದ ರೋಚಕ ಸುತ್ತಾಟ....

Update: 2019-09-24 18:30 GMT

‘ಎಂಟು ದಿಕ್ಕು, ನೂರೆಂಟು ಕಥೆ’ ಡಾ. ಬಿ. ಆರ್. ಮಂಜುನಾಥ್ ಅವರ ಸಾಹಿತ್ಯ ಲೋಕದ ಸುತ್ತಾಟಗಳಾಗಿವೆ. ಇದು ಬರೇ ಸುತ್ತಾಟ ಅಲ್ಲ. ಸಾಹಿತಿಗಳು, ಲೇಖಕರ ಪರಿಚಯ ಲೇಖನಗಳೂ ಅಲ್ಲ. ಅವರ ಬದುಕಿನ ರೋಚಕತೆಗಳನ್ನು ಕಥನ ರೂಪದಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ನಮ್ಮ ಮೇಲೆ ಪ್ರಭಾವ ಬೀರಬಹುದಾದ ಲೇಖಕರ ಉಜ್ವಲ ವ್ಯಕ್ತಿತ್ವಗಳು, ಸಿನೆಮಾಗಳು, ಹೋರಾಟಗಳು ನೂರೆಂಟು ಬಗೆಯಾಗಿ ಇಲ್ಲಿ ದಾಖಲಾಗಿವೆ. ‘ಮಂಕಾದ ಗ್ರಹಕ್ಕಿಂತ ಪ್ರಜ್ವಲಿಸುವ ಉಲ್ಕೆಯಾಗುವುದು ಮೇಲು’ ಎಂದ, ಅದರಂತೆಯೇ ಬದುಕಿದ ಲೇಖಕ ಜಾಕ್ ಲಂಡನ್, ಮಂದೆಯಲ್ಲಿ ಒಂದಾಗಲೊಲ್ಲದ, ಸ್ವಂತಿಕೆ ಬಂದಾಗಲೂ ಬಿಡದ ಇಬ್ಸೆನ್, ಮನುಷ್ಯ ದ್ವೀಪವಲ್ಲ ಎಂದ ಹೆಮಿಂಗ್‌ವೇ, ಜನತೆಯ ಕಥೆ-ವ್ಯಥೆಯೇ ಚರಿತ್ರೆ ಎಂದ ಹೊವರ್ಡ್ ಫಾಸ್ಟ್, ಗುರಜಾಡ ಎಂಬ ಮಾರ್ಗಕಾರ, ವಿಡಂಬನೆಯ ವಿಕ್ಷಪ್ತ ವ್ಯಕ್ತಿತ್ವದ ಗೊಗೊಲ್, ಬದುಕ ಬಿಂಬಿಸಿದ ಬಾಲ್ಜಾಕ್, ಜಾಣ ಮಾತಿನ ಬಾದಶಹ ಬರ್ನಾಡ್ ಶಾ, ಸವಾಂಟೆಸ್ ಮತ್ತು ಡಾನ್ ಕಿಹೋಟೆ ಎಂಬ ಮೊದಲ ಆಧುನಿಕ ಕಾದಂಬರಿ, ಬೇವಿನ ಕಹಿ ಬಾಳಿನಲ್ಲಿ ಹೂವಿನ ನರುಗಂಪು ತಂದ ಗಾರ್ಕಿ, ಬುದ್ಧಿಭಾವಗಳ ಔನ್ನತ್ಯ ಜಾರ್ಜ್ ಎಲಿಯಟ್, ಗೋದಾನ ಎಂಬ ಆಧುನಿಕ ಮಹಾಕಾವ್ಯ....ಹೀಗೆ ವಿಷಯ ವೈವಿಧ್ಯಗಳ 40 ಅಪರೂಪದ ಲೇಖನಗಳು ಇಲ್ಲಿವೆ.

‘‘...ಈ ಲೇಖನಗಳಲ್ಲಿ ಪುಸ್ತಕ ಪರಿಚಯದಂತೆಯೇ ಪುಸ್ತಕ ವಿಮರ್ಶೆಯೂ ಇದೆ. ವಿಮರ್ಶೆಯು ಕೊನೆಗೂ ಪರಿಭಾಷೆಯ ಕಸರತ್ತಲ್ಲ, ಅದು ಬುದ್ಧಿವಂತನೂ ಸಂವೇದನಾ ಶೀಲನೂ ಆದ ಪ್ರತಿಯೊಬ್ಬ ಓದುಗನಲ್ಲೂ ನಡೆಯುವ ಕ್ರಿಯೆ. ಮಂಜುನಾಥ್ ಅವರು ತಾವು ಬಾಲ್ಯದಿಂದಲೂ ಬೆಳೆಸಿಕೊಂಡ ಅಭಿರುಚಿಯ ನೆರವಿನಿಂದ ಈ ಕೆಲಸವನ್ನು ಮಾಡಿದ್ದಾರೆ. ಅಷ್ಟೇ ಅಲ್ಲ, ಅವರ ವಿಮರ್ಶೆಯು ಖಚಿತವಾದ ಮಾರ್ಕ್ಸ್‌ವಾದಿ ಪರಿಕರಗಳನ್ನು ಬಳಸಿಕೊಂಡಿದೆ...’’ ಎಂದು ಎಚ್. ಎಸ್. ರಾಘವೇಂದ್ರರಾವ್ ಬೆನ್ನುಡಿಯಲ್ಲಿ ಬರೆಯುತ್ತಾರೆ. ಹೊಸ ತಲೆಮಾರು ಸಾಹಿತ್ಯ ಮತ್ತು ಜಾಗತಿಕ ಸೃಜನಶೀಲ ಬರಹಗಳ ಕುರಿತಂತೆ ಆಸಕ್ತಿ ಹೊಂದಬೇಕು ಎನ್ನುವ ದೃಷ್ಟಿಯಿಂದಲೂ ಲೇಖಕರು ಈ ಕೃತಿಯನ್ನು ರಚಿಸಿದ್ದಾರೆ. ಭಾರತೀಯರಷ್ಟೇ ಅಲ್ಲದೆ ಇಂಗ್ಲಿಷ್, ಫ್ರೆಂಚ್, ರಶ್ಯನ್, ಅಮೆರಿಕನ್ ಲೇಖಕರ ಬದುಕು, ಬರಹಗಳ ಸಾರವನ್ನು ಒಂದು ಬೊಗಸೆಯಲ್ಲಿ ಹಿಡಿದುಕೊಡುವ ಪ್ರಯತ್ನ ಇಲ್ಲಿದೆ. ಇದರ ರುಚಿಯನ್ನು ಹಿಡಿದು ಈ ಲೇಖಕರನ್ನು ಬೆನ್ನು ಹತ್ತುವ ಕೆಲಸ ಯುವ ತಲೆಮಾರಿನ ಓದುಗರಿಂದ ನಡೆಯಬೇಕಾಗಿದೆ. ಅಂಕಣದ ಭಾಗವಾಗಿ ಹೊರಹೊಮ್ಮಿರುವುದರಿಂದ ಪದಗಳ ಮಿತಿಯು ಲೇಖಕರಿಗೆ ಕೆಲವೊಮ್ಮೆ ತೊಡಕಾಗಿರಬಹುದು. ‘‘ನಾನೊಪ್ಪಿಕೊಂಡಿರುವ ಜೀವನ ದರ್ಶನದ ದೊಂದಿ ಹಿಡಿದು ನಾನು ಮೆಚ್ಚಿದ ಸಾಹಿತ್ಯದ ಕುರಿತು ನನ್ನ ಓದುಗರೊಂದಿಗೆ ಸಂವಾದ ನಡೆಸಲು ಯತ್ನಿಸಿದೆ...’’ ಎಂದು ಲೇಖಕರು ಹೇಳಿಕೊಳ್ಳುತ್ತಾರೆ.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 192. ಮುಖಬೆಲೆ 190 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News