ವಿಶ್ವ ಆಹಾರ ಸರಬರಾಜು: ಗಂಭೀರ ಅಪಾಯದಲ್ಲಿ
ವಿಶ್ವ ಸಂಸ್ಥೆಯ ಒಂದು ಹೊಸವರದಿಯ ಪ್ರಕಾರ ವಿಶ್ವದ ನೆಲ ಹಾಗೂ ಜಲ ಸಂಪನ್ಮೂಲಗಳನ್ನು ಈ ಹಿಂದೆಂದೂ ಬರಿದುಮಾಡದ ದರದಲ್ಲಿ’’ ಬರಿದುಮಾಡಲಾಗುತ್ತಿದೆ. ಇದರ ಜತೆಗೆ ವಿಶ್ವದ ಹವಾಮಾನ ಬದಲಾವಣೆಯೂ ಸೇರಿಕೊಂಡು ತನ್ನ ಹೊಟ್ಟೆಯನ್ನು ತಾನು ಹೊರೆದುಕೊಳ್ಳುವ ಮನುಕುಲದ ಸಾಮರ್ಥ್ಯದ ಮೇಲೆ ಗಂಭೀರ ಸ್ವರೂಪದ ಒತ್ತಡಬೀಳುತ್ತಿದೆ.
52 ದೇಶಗಳ ಒಂದು ನೂರಕ್ಕೂ ಹೆಚ್ಚು ತಜ್ಞರು ಸಿದ್ಧಪಡಿಸಿರುವ ವರದಿ ಹೇಳುವಂತೆ, ಈ ಬೆದರಿಕೆಯಿಂದ ಪಾರಾಗುವ ಹಾದಿ ಬಹಳ ಶೀಘ್ರಗತಿಯಲ್ಲಿ ಮುಚ್ಚಿಕೊಳ್ಳುತ್ತಿದೆ. ಈಗಾಗಲೇ ಮರುಭೂಮಿಗಳಾಗಿ ಬದಲಾಗುತ್ತಿರುವ ಪ್ರದೇಶಗಳಲ್ಲಿ ಅರ್ಧ ಬಿಲಿಯನ್ ಜನರು ವಾಸಿಸುತ್ತಿದ್ದಾರೆ. ಮಣ್ಣು ರಚನೆಯಾಗುವುದಕ್ಕಿಂತ 10ರಿಂದ 100 ಪಟ್ಟು ವೇಗದಲ್ಲಿ ಭೂಮಿಯ ಮೇಲಿನ ಮಣ್ಣು ನಾಶವಾಗುತ್ತಿದೆ.
ಹವಾಮಾನ ಬದಲಾವಣೆ ಈ ಬೆದರಿಕೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಪ್ರವಾಹಗಳು, ಬರ, ಬಿರುಗಾಳಿ, ಚಂಡಮಾರುತಗಳು ಹಾಗೂ ಇತರ ರೀತಿಯ ಹವಾಮಾನ ವೈಪರೀತ್ಯಗಳು ಜಾಗತಿಕ ಆಹಾರ ಸರಬರಾಜನ್ನು ಅಸ್ತವ್ಯಸ್ತಗೊಳಿಸಿ, ಆಹಾರೋತ್ಪನ್ನಗಳ ಪ್ರಮಾಣವನ್ನೇ ಕುಂಠಿತಗೊಳಿಸುವ ಬೆದರಿಕೆ ಒಡ್ಡುತ್ತಿವೆ.
ವಿಶ್ವದ ಜನಸಂಖ್ಯೆಯ ಶೇ. 10ಕ್ಕಿಂತಲೂ ಹೆಚ್ಚು ಮಂದಿ ಈಗಾಗಲೇ ಸಾಕಷ್ಟು ಆಹಾರವಿಲ್ಲದೆ ಬಳಲುತ್ತಿದ್ದಾರೆ. ಆಹಾರದ ಕೊರತೆ ಗಡಿ ಭಾಗಗಳಿಂದ ಜನರು ವಲಸೆ ಹೋಗುವುದಕ್ಕೆ ಕಾರಣವಾಗಿ ಗಂಭೀರ ಸ್ವರೂಪದ ವಲಸಿಗರ ಸಮಸ್ಯೆಗೆ ಕಾರಣವಾಗಬಹುದು. ಈಗಾಗಲೇ ಈ ಸಮಸ್ಯೆ ಹಲವು ದೇಶಗಳನ್ನು ಕಾಡುತ್ತಿದೆ.
ಹಲವಾರು ಖಂಡಗಳಲ್ಲಿ ಆಹಾರದ ಬಿಕ್ಕಟ್ಟು ಏಕಕಾಲದಲ್ಲಿ ಉಂಟಾಗಬಹುದು ಎಂಬುದೇ ಒಂದು ದೊಡ್ಡ ಅಪಾಯ. ಈ ಆಹಾರದ ಬಿಕ್ಕಟ್ಟನ್ನು ಪರಿಹರಿಸಬೇಕಾದರೆ ವಿಶ್ವದಾದ್ಯಂತ ಭೂಮಿಯ ಬಳಕೆ ಹಾಗೂ ಕೃಷಿಯ ಬೃಹತ್ತಾದ ಮರುವೌಲ್ಯಮಾಪನ ನಡೆಯಬೇಕು. ಅಲ್ಲದೆ, ಗ್ರಾಹಕರ ವರ್ತನೆ ಹಾಗೂ ಮನೋಧರ್ಮದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಬೇಕಾಗುತ್ತದೆ.
ಆಹಾರದ ಕೊರತೆಗಳು ವಿಶ್ವದ ಶ್ರೀಮಂತ ಭಾಗಗಳಿಗಿಂತ ಹೆಚ್ಚಾಗಿ ಬಡ ಭಾಗಗಳ ಮೇಲೆ ಪರಿಣಾಮಬೀರುತ್ತದೆ. ಇದು ಉತ್ತರ ಅಮೆರಿಕ, ಯುರೋಪ್ ಮತ್ತು ವಿಶ್ವದ ಇತರ ಭಾಗಗಳಲ್ಲಿ ರಾಜಕಾರಣವನ್ನು ಮರು ವ್ಯಾಖ್ಯಾನಿಸುತ್ತಿರುವ ವಲಸೆಯ ಪ್ರವಾಹವನ್ನು ಇನ್ನಷ್ಟು ಹೆಚ್ಚುವಂತೆ ಮಾಡಬಹುದು. 2010 ಮತ್ತು 2015ರ ನಡುವೆ ಎಲ್ ಸಾಲ್ವಡೊರ್, ಗ್ವಾಟೆಮಾಲ ಮತ್ತು ಹೊಂಡುರಾಸ್‌ನಿಂದ ವಲಸೆ ಹೋದವರ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದೆ. ಇದರ ಜತೆಗೆ ಬರಗಾಲದಿಂದಾಗಿ ಎಷ್ಟೊಂದು ಬೃಹತ್ ಸಂಖ್ಯೆಯ ಜನ ಆಹಾರವಿಲ್ಲದೆ ಬಳಲಿದ್ದಾರೆಂದರೆ, ಇದು ಹವಾಮಾನ ಬದಲಾವಣೆಯ ವೈಪರೀತ್ಯದ ಸೂಚನೆ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು.
ವ್ಯಾಪಕವಾದ ತುರ್ತುಕ್ರಮ ಕೈಗೊಳ್ಳದಿದ್ದಲ್ಲಿ ಹವಾಮಾನ ಬದಲಾವಣೆಯು ತೀವ್ರ ಆಹಾರ ಕೊರತೆಗಳ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದಿದೆ ವಿಶ್ವಸಂಸ್ಥೆಯ ವರದಿ. ಈ ಅಪಾಯದ ಮುನ್ನೆಚ್ಚರಿಕೆಯಾಗಿ ವಾತಾವರಣವು ವಿಶ್ವದ ಬರಗಾಲಗಳನ್ನು, ನೆರೆಹಾವಳಿಯನ್ನು, ಬಿಸಿ ಅಲೆಗಳನ್ನು, ಕಾಡ್ಗಿಚ್ಚುಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ; ಇನ್ನಷ್ಟು ತೀವ್ರವಾಗಿಸುತ್ತದೆ. ಈಗಾಗಲೇ ಭೂಸವೆತ ಮತ್ತು ಭೂಭಾಗ ನಷ್ಟವಾಗುತ್ತಿರುವ ರೀತಿಯಲ್ಲಿ ತೀವ್ರವಾದ ವೇಗ ಕಾಣಿಸುತ್ತಿದೆ.
ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣ ಹೆಚ್ಚಾದಂತೆ ಆಹಾರದ ಪೌಷ್ಟಿಕಾಂಶ ಗುಣ ಕಡಿಮೆಯಾಗುತ್ತಾ ಹೋಗುತ್ತದೆ. ವಾತಾವರಣದ ಉಷ್ಣಾಂಶ ಏರಿದಂತೆ ಆಹಾರ ಬೆಳೆಗಳಿಂದ ಬರುವ ಫಸಲು ನಷ್ಟವಾಗಿ, ಜಾನುವಾರುಗಳಿಗೂ ತೊಂದರೆಯಾಗುತ್ತದೆ.
ಒಟ್ಟಿನಲ್ಲಿ, ಗ್ರೀನ್‌ಹೌಸ್ ಅನಿಲಗಳ ಹೊರಸೂಸುವಿಕೆ ಹೆಚ್ಚುತ್ತ ಹೋದಂತೆ ಆಹಾರ ವಸ್ತುಗಳ ಬೆಲೆಯೂ ಹೆಚ್ಚುತ್ತದೆ. ಇದರಿಂದಾಗಿ ವಿಶ್ವದಾದ್ಯಂತ ಜನರ ದೈನಿಂದಿನ ಜೀವನದ ಮೇಲೂ ನೇತ್ಯಾತ್ಮಕ ಪರಿಣಾಮಗಳಾಗುತ್ತವೆ.
ತೋಟಗಳನ್ನು ಮಾಡುವುದಕ್ಕಾಗಿ ಒದ್ದೆ ಜಮೀನುಗಳನ್ನು ಒಣಗಿಸುವಂತಹ ಕ್ರಮಗಳಿಂದ ವಾತಾವರಣದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮವಾಗುತ್ತದೆ. ಉದಾಹರಣೆಗೆ, ಜಾಗತಿಕವಾಗಿ 530 ಬಿಲಿಯದಿಂದ 694 ಬಿಲಿಯ ಟನ್‌ಗಳಷ್ಟು ಕಾರ್ಬನ್ ಡೈ ಆಕ್ಸೈಡ್‌ನ್ನು ದಾಸ್ತಾನು ಇಟ್ಟು ಕೊಂಡಿರುವ ಒದ್ದೆ ಜಮೀನುಗಳ ನೀರನ್ನು ಖಾಲಿ ಮಾಡಿದಾಗ ಅವುಗಳು ಅದನ್ನು ವಾತಾವರಣಕ್ಕೆ ಮರಳಿ ಬಿಡುಗಡೆ ಮಾಡುತ್ತವೆ. ಅದು ಒಂದು ಬಹುಮುಖ್ಯ ಗ್ರೀನ್‌ಹೌಸ್ (ಹಸಿರು ಮನೆ) ಅನಿಲ. ಅದು ಭೂಮಿಯ ಮೇಲಿನ ಉಷ್ಣವನ್ನು ಹೆಚ್ಚಿಸುತ್ತದೆ. ಪ್ರತಿ 2.5 ಎಕ್ರೆ ಒದ್ದೆ ಜಮೀನು 6,000 ಗ್ಯಾಲನ್ ಗ್ಯಾಸೊಲಿನ್‌ನನ್ನು ಉರಿಸಿದಾಗ ಬಿಡುಗಡೆಯಾಗುವ ಕಾರ್ಬನ್ ಡೈ ಆಕ್ಸೈಡ್‌ಗೆ ಸಮಾನವಾದ ಕಾರ್ಬನ್ ಡೈ ಆಕ್ಸೈಡನ್ನು ಬಿಡುಗಡೆ ಮಾಡುತ್ತದೆ.ಹಾಗೆಯೇ, ಜಾನುವಾರುಗಳು ಕೂಡ ಇನ್ನೊಂದು ಹಾನಿಕಾರಕವಾದ ಹಸಿರುಮನೆ ಅನಿಲವಾಗಿರುವ ಮಿಥೇನ್ ಅನ್ನು ಉತ್ಪಾದಿಸುತ್ತವೆ. ಮಾಂಸಗಳಿಗೆ ಜಾಗತಿಕವಾಗಿ ಹೆಚ್ಚಿರುವ ಬೇಡಿಕೆಯಿಂದಾಗಿ ಇವುಗಳ ಸಂಖ್ಯೆ ಹೆಚ್ಚಾಗುತ್ತಿದೆ; ಇದು ಆಮೆಜಾನ್‌ನಂತಹ ಆಯಕಟ್ಟಿನ ಅರಣ್ಯ ವ್ಯವಸ್ಥೆಗಳ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ. ಪ್ರತಿ ವರ್ಷ ಎಷ್ಟೊಂದು ಅರಣ್ಯನಾಶವಾಗುತ್ತಿದೆ ಎಂದರೆ ಅದರಿಂದಾಗಿ ವಾತಾವರಣಕ್ಕೆ ಬಿಡುಗಡೆಯಾಗುವ ಅನಿಲಗಳ ಪ್ರಮಾಣ 600 ಮಿಲಿಯ ಕಾರುಗಳನ್ನು ಚಲಾಯಿಸಿದಾಗ ಉಂಟಾಗುವ ವಾಯುಮಾಲಿನ್ಯಕ್ಕೆ ಸಮನಾಗಿದೆ.
ಆದರೆ ನಮ್ಮ ಆಹಾರ ವ್ಯವಸ್ಥೆಗಳನ್ನು ಇನ್ನಷ್ಟು ದಕ್ಷಗೊಳಿಸುವ ಮೂಲಕ ಈ ಪರಿಸರ ಬೆದರಿಕೆಗಳನ್ನು ದೂರಮಾಡಲು ಸಾಧ್ಯವಿದೆ. ಅದೇ ರೀತಿಯಾಗಿ, ವಿಶ್ವಾದ್ಯಂತ ಈಗ ವ್ಯರ್ಥವಾಗುತ್ತಿರುವ ಒಟ್ಟು ಆಹಾರದ ನಾಲ್ಕನೇ ಒಂದು ಭಾಗ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವ ಮೂಲಕ ಕೂಡ ಈ ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಸಾಧ್ಯವಾದಷ್ಟು ಹೆಚ್ಚು ಮರಗಳನ್ನು ಬೆಳೆಸುವುದರಿಂದ ಪ್ರತಿ ವರ್ಷ ವಾತಾವರಣದಲ್ಲಿ 9 ಗಿಗಾಟನ್‌ಗಳಷ್ಟು ಅನಿಲಗಳನ್ನು ಕಡಿಮೆ ಮಾಡಬಹುದು. ವಿಶ್ವ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಜಾಸ್ತಿಯಾಗದಂತೆ ತಡೆಯುವ ಮೂಲಕ ಆಹಾರೋತ್ಪಾದನೆಯ ಮೇಲೆ ಬೀಳುವ ಒತ್ತಡವನ್ನು ತಗ್ಗಿಸಬಹುದು.
ಇಲ್ಲವಾದಲ್ಲಿ ಈ ಒತ್ತಡ ಹೆಚ್ಚಿ ಬರ, ಹಸಿವಿನ ವಿಷವೃತ್ತ ಸೃಷ್ಟಿಯಾಗುತ್ತದೆ. ‘‘ಜಾಗತಿಕ ತಾಪಮಾನ 2 ಡಿಗ್ರಿಗಿಂತ ಜಾಸ್ತಿಯಾದಲ್ಲಿ ಆಹಾರವಿಲ್ಲದೆ ಹಸಿವಿನಿಂದ ಬಳಲುವವರ ಸಂಖ್ಯೆ 100 ಮಿಲಿಯ ಅಥವಾ ಇದಕ್ಕಿಂತಲೂ ಹೆಚ್ಚಾಗಬಹುದು’’ ಎನ್ನುತ್ತಾರೆ, ಸಂಶೋಧಕ ಎಡ್ವರ್ಡ್ ಡೇವಿನ್, ‘‘ನಾವು ತುರ್ತಾಗಿ ಕ್ರಮ ಕೈಗೊಳ್ಳಬೇಕಾಗಿದೆ.’’
ಕೃಪೆ: ಇಂಟರ್‌ನ್ಯಾಶನಲ್ ನ್ಯೂಯಾರ್ಕ್ ಟೈಮ್ಸ್