ಆದಿವಾಸಿಗಳ ಕುರಿತು ಅಂಬೇಡ್ಕರ್ ರ ಚಿಂತನೆ ಏನಾಗಿತ್ತು?

Update: 2019-09-25 18:31 GMT

ಅಂಬೇಡ್ಕರ್ ಆದಿವಾಸಿಗಳ ಅಭಿವೃದ್ಧಿ ಕುರಿತು ಚಿಂತಿಸುವಾಗ ತಮ್ಮ ಸಮಕಾಲೀನ ಗಾಂಧೀಜಿ ಮತ್ತು ನೆಹರೂ ಅವರಿಗಿಂತ ವಿಭಿನ್ನವಾಗಿದ್ದರು ಎನ್ನುತ್ತದೆ ಚರಿತ್ರೆ. ಆದಿವಾಸಿಗಳ ಸಂಸ್ಕೃತಿಯನ್ನು ರಕ್ಷಿಸಬೇಕು ಎನ್ನುವ ನೆಹರೂ ಅವರ ವಾದಕ್ಕೆ ಪ್ರತಿಯಾಗಿ ಅಂಬೇಡ್ಕರ್ ‘‘ಸಂಸ್ಕೃತಿ ರಕ್ಷಿಸುವ ಮನಸ್ಥಿತಿ ಯಾವುದೇ ಸಮುದಾಯವೊಂದರ ಚಲನಶೀಲತೆಯನ್ನು ಇನ್ನೊಂದು ದಿಕ್ಕಿನಲ್ಲಿ ವಿರೋಧಿಸುತ್ತಲೇ ಇರುತ್ತದೆ’’ ಎಂಬ ಸೂಕ್ಷ್ಮ ಅಂಶವನ್ನು ಜಾಣ್ಮೆಯಿಂದ ಹೊರಗೆಳೆಯುತ್ತಾರೆ.

ವಿಶ್ವರತ್ನ ಡಾ. ಬಿ. ಆರ್. ಅಂಬೇಡ್ಕರ್ ಓರ್ವ ಕಾನೂನು ತಜ್ಞರಾಗಿ, ಸಾಮಾಜಿಕ ಚಿಂತಕರಾಗಿ, ರಾಜಕಾರಣಿಯಾಗಿ ಧರ್ಮ ವಿಮರ್ಶಕರಾಗಿ ಭಾರತದ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಶೋಷಿತ ವರ್ಗದ ಧ್ವನಿಯಾಗಿ ಚರಿತ್ರೆಯಲ್ಲಿ ತಮ್ಮದೇ ಆದ ಹೆಜ್ಜೆಗಳನ್ನು ಬಿಟ್ಟು ಹೋಗಿದ್ದಾರೆ. ಅಂಬೇಡ್ಕರ್ ಓರ್ವ ಅತ್ಯುತ್ತಮ ಸಾಮಾಜಿಕ ನೀತಿ-ನಿರೂಪಕರಾಗಿದ್ದರು. ಅಂತರ್ ವಾಣಿಜ್ಯ, ಅಂತರ್ ರಾಜ್ಯ ನೀರಾವರಿ, ಮಹಿಳಾ ಅಭಿವೃದ್ಧಿ ಹೀಗೆ ಮುಂತಾದ ವಿಚಾರಗಳಲ್ಲಿ ಅಂಬೇಡ್ಕರ್ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದರು. ಲಭ್ಯವಿದ್ದ ತತ್ವಶಾಸ್ತ್ರವನ್ನು ಭಾರತೀಯ ಸಾಮಾಜಿಕ ನೀತಿ-ನಿರೂಪಣೆಗಾಗಿ ಮುಖಾಮುಖಿ ಮಾಡಿದ್ದರು. ಕೇವಲ ಹುಟ್ಟಿನಿಂದ ಆಕಸ್ಮಿಕವಾಗಿ ಬರುವ ಜಾತಿಯಿಂದ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದ ಶೋಷಿತ ಸಮಾಜಕ್ಕೆ ಅಂಬೇಡ್ಕರ್ ಸಾಕ್ಷಿ ಪ್ರಜ್ಞೆ ಆಗಿದ್ದರು. ದುರ್ಬಲ ಮತ್ತು ಶೋ ಷಿತ ವರ್ಗದವರು ಶತಮಾನಗಳಿಂದ ಅನುಭವಿಸುತ್ತಿದ್ದ ಹೀನ ಸ್ಥಿತಿಯ ಕುರಿತು ಸೈದ್ಧಾಂತಿಕವಾಗಿ ಕಾರ್ಲ್ ಮಾರ್ಕ್ಸ್ ಮತ್ತು ಅಂಬೇಡ್ಕರ್ ಮಾತ್ರ ಈ ವಿಶ್ವದಲ್ಲಿ ಸರಿಯಾಗಿ ಚಿಂತಿಸಿ ಅದಕ್ಕೆ ಪರಿಹಾರಗಳನ್ನು ಸೂಚಿಸಿದ್ದಾರೆ ಎನ್ನಬಹುದು. ಶೋಷಿತರ ಮತ್ತು ದುರ್ಬಲ ವರ್ಗದವರ ಅಂದಿನ ಸ್ಥಿತಿಗತಿಗಳಿಗೆ ಅಂಬೇಡ್ಕರ್ ಚರಿತ್ರೆಯಲ್ಲಿ ಕಂಡುಕೊಂಡ ಉತ್ತರಗಳು ಮತ್ತು ಹಿಂದೂ ಧರ್ಮದ ಕುರಿತ ಅವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಇಂದಿಗೂ ಯಾರೂ ನೀಡಲಾರರು.

ಮೂಲನಿವಾಸಿಗಳನ್ನು ನಮ್ಮ ದೇಶದಲ್ಲಿ ‘ಬುಡಕಟ್ಟು ವರ್ಗ’ ಎಂದು ವಿಶಿಷ್ಟವಾಗಿ ಕರೆಯಲಾಗುತ್ತದೆ. ಕೆಲವು ದೇಶಗಳಲ್ಲಿ ಇವರನ್ನು ಮೊದಲ ರಾಷ್ಟ್ರೀಯರು, ಮೂಲನಿವಾಸಿಗಳು ಎಂದೆಲ್ಲ ಕರೆಯುತ್ತಾರೆ. ಬೇರೆ ದೇಶಗಳಲ್ಲಿ ಬುಡಕಟ್ಟು ಜನರು ಒಂದು ಹಂತದ ಅಭಿವೃದ್ಧಿಯ ಫಲವನ್ನು ಈಗಾಗಲೇ ಕಂಡಿದ್ದಾರೆ. ಆದರೆ ನಮ್ಮ ದೇಶದ ಬುಡಕಟ್ಟು ಜನರು ಒಂದು ಹೊತ್ತಿನ ಊಟಕ್ಕಾಗಿ ಕಾಡುಮೇಡು ಅಲೆಯುತ್ತ ತಮ್ಮ ಜೀವನ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಬುಡಕಟ್ಟು ಜನರ ಸ್ಥಿತಿಯಲ್ಲಿ ಯಾವುದೇ ಗುಣಾತ್ಮಕ ಬದಲಾವಣೆ ಆಗಿಲ್ಲ. ಮೊದಲು ಎಲ್ಲಿದ್ದರೋ ಈಗಲೂ ಸಹ ಅಲ್ಲೇ ಇದ್ದಾರೆ. ಇಂತಹ ಒಂದು ಸಂಕ್ರಮಣದ ಸ್ಥಿತಿಯಲ್ಲಿ 60-70 ವರ್ಷಗಳ ಹಿಂದೆ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಈ ದೇಶದ ಆದಿವಾಸಿಗಳನ್ನು ಕುರಿತು, ತಮ್ಮ ಸೈದ್ಧಾಂತಿಕವಾದ ವಿಚಾರಗಳು ಏನಿದ್ದವು ಎಂಬುದನ್ನು ದೇಶದ ಇಂದಿನ ಪೀಳಿಗೆ ಮತ್ತು ಸರಕಾರಗಳು ಹೆಚ್ಚು ಕಮ್ಮಿ ಮರೆತೇ ಬಿಟ್ಟಿವೆ ಎನ್ನಬಹುದು. ಅಂಬೇಡ್ಕರ್ ಹಿಂದೂ ಸಮಾಜವನ್ನು ಮೂರು ಹಂತದಲ್ಲಿ ವಿಂಗಡಿಸುತ್ತಾರೆ; 1. ಸವರ್ಣೀಯರು, 2. ಅವರ್ಣೀಯ ಆದಿಮ ಜನರು ಮತ್ತು 3. ಅಹಿಂದ ಅಸ್ಪಶ್ಯರು. ಶೋಷಿತ ಜನವರ್ಗಗಳ ಸಮಾನ ಶತ್ರುವೆಂದರೆ ಅದು ಹಿಂದೂ ಧರ್ಮ ಎಂಬುವುದು ಅಂಬೇಡ್ಕರ್ ಅವರ ಅನಿಸಿಕೆಯಾಗಿತ್ತು. ಆದಿಮ ಜನಾಂಗಗಳ ಮತ್ತು ಬುಡಕಟ್ಟುಗಳ ಹೀನಸ್ಥಿತಿಗೆ ಭಾರತದ ಸಮಾಜದಲ್ಲಿ ಇದ್ದ ಶ್ರೇಣೀಕೃತ ವ್ಯವಸ್ಥೆಯೇ ಅತಿ ಮುಖ್ಯ ಕಾರಣವೆಂದು ಅಂಬೇಡ್ಕರ್‌ರವರ ಬಲವಾದ ಅಭಿಪ್ರಾಯವಾಗಿತ್ತು.

  ಅಂಬೇಡ್ಕರ್ ಪ್ರಕಾರ ಬುಡಕಟ್ಟು ಜನಾಂಗಗಳು ನಾಗರಿಕತೆಯ ಅಂಚಿಗೆ ಬರದಿರಲು ಮುಖ್ಯಕಾರಣ ವಿದ್ಯಾವಂತ ನಾಗರಿಕ ಪ್ರಪಂಚವೇ ಎಂಬುದನ್ನು ಬಲವಾಗಿ ನಂಬಿದ್ದರು. ಕಾಡಿನೊಳಗೆ ತಮ್ಮ ಬದುಕನ್ನು ಕಟ್ಟಿಕೊಂಡ ಬುಡಕಟ್ಟು ಜನಾಂಗಗಳನ್ನು ಆಧುನಿಕ ಸಮುದಾಯಗಳು ಪಾರಂಪರಿಕ ಹೆಸರು ಮತ್ತು ನಿಯಮಗಳ ಮೂಲಕ ನಿಯಂತ್ರಿಸಲು ಬಯಸುತ್ತಿವೆ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು. ಕಾಡಿನಲ್ಲಿ ಅಕ್ಷರಶಃ ಪ್ರಾಣಿಗಳಂತೆ ಬದುಕುತ್ತಿರುವ ಈ ಬುಡಕಟ್ಟು ಜನಾಂಗಗಳನ್ನು ನಾಗರಿಕ ಸಮಾಜ ಏಕೆ ಜಾಣತನದಿಂದ ಮರೆತುಬಿಟ್ಟಿದೆ ಎಂಬುದು ಅಂಬೇಡ್ಕರ್ ಅವರ ವೈಯಕ್ತಿಕ ಪ್ರಶ್ನೆಯಾಗಿತ್ತು. ಇಂಥ ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರಲು ಹಿಂದೂಧರ್ಮವು ವ್ಯವಸ್ಥಿತವಾಗಿ ಏಕೆ ಮತ್ತು ಹೇಗೆ ನಿಧಾನಿಸಿದೆ ಎಂಬುವುದನ್ನು ಕುರಿತು ಅಂಬೇಡ್ಕರ್ ತಮ್ಮದೇ ಆದ ವಿಚಾರಧಾರೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ತಮ್ಮ ಜಾತಿ ಜನಾಂಗಕ್ಕೆ ಸೇರಿಲ್ಲದ ಯಾರನ್ನೂ ಮುಟ್ಟಿಸಿ ಕೊಳ್ಳುವುದೇ ಮಹಾಪಾಪವೆಂದು ಅಂದುಕೊಳ್ಳುತ್ತಿದ್ದ ಅಂದಿನ ಹಿಂದೂ ಸಮಾಜವು ಬುಡಕಟ್ಟು ಜನರ ಬಗ್ಗೆ ಒಂದು ಹಂತದ ಸಂವೇದನೆ ಬೆಳೆಸಿಕೊಳ್ಳುವುದು ಹೇಗೆ ಸಾಧ್ಯವಾಯಿತು ಎಂಬುದನ್ನು ಅಂಬೇಡ್ಕರ್ ಸೋಜಿಗವಾಗಿ ಪ್ರಶ್ನಿಸುತ್ತಾರೆ. ನಾಗರಿಕ ಸಮಾಜದಿಂದ ಬಹುದೂರ ಕಾಡಿನೊಳಗೆ ಬದುಕುತ್ತಿರುವ ಮತ್ತು ಬದುಕಿಗಾಗಿ ದಿನನಿತ್ಯ ಹೋರಾಡುತ್ತಿರುವ ಬುಡಕಟ್ಟು ಜನರ ಸಮಸ್ಯೆ ಅಸ್ಪಶ್ಯ ಜನರ ಸಮಸ್ಯೆಗಳಿಗಿಂತ ವಿಭಿನ್ನ ಎಂಬುವುದು ಅಂಬೇಡ್ಕರ್ ವಾದವಾಗಿತ್ತು. ಹಿಂದೂ ಧರ್ಮದಲ್ಲಿ ಬುಡಕಟ್ಟುಗಳು ಸ್ಪರ್ಶ ಜನಾಂಗವಾದರೆ ಮಾದಿಗರು ಮಾತ್ರ ಅಸ್ಪಶ್ಯರು ಹೇಗಾಗುತ್ತಾರೆ ಎನ್ನುವುದು ಅಂಬೇಡ್ಕರ್‌ರ ಪ್ರಶ್ನೆಯಾಗಿತ್ತು. ಅಂದರೆ ಹಿಂದೂಧರ್ಮದಲ್ಲಿ ಬುಡಕಟ್ಟು ಜನರಿಗೆ ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ ಎಂಬುವುದು ಇದರ ಅರ್ಥವೇ?. ದೇಶದಲ್ಲಿ ಕೆಲವು ಬುಡಕಟ್ಟು ಜನರು ತಮ್ಮೆಳಗೆ ಅಸ್ಪಶ್ಯತೆಯನ್ನು ಆಚರಿಸಿಕೊಳ್ಳುತ್ತಿವೆ. ಇಂತಹದರಲ್ಲಿ ಹೊಲೆಯರು ಮಾದಿಗರನ್ನು ಕೆಲವು ಬುಡಕಟ್ಟುಗಳು ಅಸ್ಪಶ್ಯರೆಂದು ಭಾವಿಸಿದ್ದರ ಕುರಿತು ಅಂಬೇಡ್ಕರ್ ನಿಜವಾಗಿಯು ಸೋಜಿಗ ವ್ಯಕ್ತಪಡಿಸುತ್ತಾರೆ.

ಅಂಬೇಡ್ಕರ್ ತಮ್ಮ ಬರವಣಿಗೆಯಲ್ಲಿ ಒಂದೆಡೆ ಹೇಳುತ್ತಾರೆ, ‘‘ನಾಗರಿಕ ಸಮಾಜವು ಬುಡಕಟ್ಟು ಜನರನ್ನು ಅನಾಗರಿಕ ಸ್ಥಿತಿಯಲ್ಲಿ ಇಟ್ಟಿರುವುದರ ಕುರಿತು ಹಿಂದೂ ಧರ್ಮದಲ್ಲಿ ಯಾವ ಪಶ್ಚಾತಾಪವು ಇಲ್ಲ, ನಾಚಿಕೆಯೂ ಇಲ್ಲ.’’ ಅಂಬೇಡ್ಕರ್ ಪ್ರಕಾರ ಬುಡಕಟ್ಟು ಜನರು ಮತ್ತು ಒಬ್ಬ ಅಸ್ಪಶ್ಯನ ನಡುವೆ ಸಾಮಾಜಿಕವಾಗಿ ಒಂದು ತೆಳುವಾದ ಗೆರೆ ಇರಬಹುದು ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಅಂಬೇಡ್ಕರ್ ಪ್ರಕಾರ ಆರ್ಥಿಕವಾಗಿ ಅಸ್ಪಶ್ಯನಿಗಿಂತ ಬುಡಕಟ್ಟು ಜನರು ಹಿಂದುಳಿದಿದ್ದರು. ಆದರೆ ಆದಿವಾಸಿಗಳು ಸ್ಪಶ್ಯ ಕಾರಣಕ್ಕೆ ಹಿಂದೂಧರ್ಮದಲ್ಲಿ ಇವರಿಗೆ ಮಾನ್ಯತೆ ಇದೆ ಎಂಬುದು ಅಂಬೇಡ್ಕರ್ ವಾದವಾಗಿತ್ತು. ಅಂದು ಅಸ್ಪಶ್ಯರಿಗೆ ಸಾಮಾಜಿಕ ಮತ್ತು ಆರ್ಥಿಕ ಅಧಿಕಾರಗಳು ಇರಲಿಲ್ಲ. ಆದಿವಾಸಿಗಳಿಗೂ ಸಹ ಇರಲಿಲ್ಲ. ಅಂಬೇಡ್ಕರ್ ಪ್ರಕಾರ ಆರ್ಥಿಕ ಅಸಮಾನತೆ ಎಂಬ ದೋಣಿಯಲ್ಲಿ ಅಸ್ಪಶ್ಯರು ಮತ್ತು ಆದಿವಾಸಿಗಳು ಇಬ್ಬರು ಸಹ ಇದ್ದಾರೆ. ಈ ಕುರಿತು ಇವರಿಬ್ಬರು ಸೈದ್ಧಾಂತಿಕವಾಗಿ ಚಿಂತಿಸಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ಅಂಬೇಡ್ಕರ್ ವ್ಯಕ್ತಪಡಿಸುತ್ತಾರೆ. ಮುಂದುವರಿದು ಅಂಬೇಡ್ಕರ್ ಹೇಳುತ್ತಾರೆ, ‘‘ಸಾಮಾಜಿಕವಾಗಿ ಬುಡಕಟ್ಟು ಜನಾಂಗ ಸ್ಪಶ್ಯ ಕಾರಣಕ್ಕೆ ಸಮಾಜದಲ್ಲಿ ಆತನಿಗೆ ಭಾರೀ ಪ್ರಮಾಣದಲ್ಲಿ ರಿಯಾಯಿತಿಗಳು ಮತ್ತು ಮಾನ್ಯತೆಗಳು ಇಲ್ಲ’’ ಎಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತಾರೆ. ಇದರಿಂದ ಬುಡಕಟ್ಟು ಜನರು ಸಾಂಸ್ಕೃತಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಶತಮಾನಗಳಿಂದ ಹಿಂದುಳಿದಿದ್ದಾರೆ ಎಂಬುದನ್ನು ತುಂಬಾ ಬೇಸರದಿಂದ ಹೇಳುತ್ತಾರೆ.

ಅಂಬೇಡ್ಕರ್ ಪ್ರಕಾರ ಸಂಸ್ಕೃತಿಯೆಂಬುದು ಮಾನವರ ನಡುವೆ ವಿವಿಧ ಕಾರಣಗಳಿಂದ ಕಾಲಾಂತರದಿಂದ ನಿಧಾನವಾಗಿ ರೂಪಗೊಳ್ಳುತ್ತದೆ. ಆದಿವಾಸಿಗಳು ತಮ್ಮ ದಿನನಿತ್ಯ ಜೀವನದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಅವರ ಸಂಸ್ಕೃತಿಯು ಯಾವ ರೀತಿಯಲ್ಲಿಯೂ ಸಹಾಯಕವಾಗುವುದಿಲ್ಲ. ಯಾವ ಸಂಸ್ಕೃತಿಯ ಒಂದು ಸಂಪೂರ್ಣ ಸಮುದಾಯವನ್ನು ಸಾಮಾಜಿಕವಾಗಿ ತುಳಿಯಲು ಪ್ರಯತ್ನಿಸುತ್ತದೋ ಅಂತಹ ಸಂಸ್ಕೃತಿ ಕಾಲ ಕ್ರಮೇಣ ನಾಶವಾಗುತ್ತದೆ ಎಂಬುದು ಅಂಬೇಡ್ಕರ್ ಅವರ ವಾದವಾಗಿತ್ತು. ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ನೆಹರೂ ಅವರು ಯುರೋಪಿನ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರೆ, ಅಂಬೇಡ್ಕರವರು ದೇಶಿಯ ಭಾವನೆಗಳಿಂದ ತಮ್ಮ ಸಿದ್ಧಾಂತವನ್ನು ಕಟ್ಟಿದ್ದರು. ಅಂಬೇಡ್ಕರ್ ಆದಿವಾಸಿಗಳ ಅಭಿವೃದ್ಧಿ ಕುರಿತು ಚಿಂತಿಸುವಾಗ ತಮ್ಮ ಸಮಕಾಲೀನ ಗಾಂಧೀಜಿ ಮತ್ತು ನೆಹರೂ ಅವರಿಗಿಂತ ವಿಭಿನ್ನವಾಗಿದ್ದರು ಎನ್ನುತ್ತದೆ ಚರಿತ್ರೆ. ಆದಿವಾಸಿಗಳ ಸಂಸ್ಕೃತಿಯನ್ನು ರಕ್ಷಿಸಬೇಕು ಎನ್ನುವ ನೆಹರೂ ಅವರ ವಾದಕ್ಕೆ ಪ್ರತಿಯಾಗಿ ಅಂಬೇಡ್ಕರ್ ‘‘ಸಂಸ್ಕೃತಿ ರಕ್ಷಿಸುವ ಮನಸ್ಥಿತಿ ಯಾವುದೇ ಸಮುದಾಯವೊಂದರ ಚಲನಶೀಲತೆಯನ್ನು ಇನ್ನೊಂದು ದಿಕ್ಕಿನಲ್ಲಿ ವಿರೋಧಿಸುತ್ತಲೇ ಇರುತ್ತದೆ’’ ಎಂಬ ಸೂಕ್ಷ್ಮ ಅಂಶವನ್ನು ಜಾಣ್ಮೆಯಿಂದ ಹೊರಗೆಳೆಯುತ್ತಾರೆ. ಬುಡಕಟ್ಟು ಜನರ ಸಂಸ್ಕೃತಿಗಳನ್ನು ರಕ್ಷಿಸಿ ಅವರನ್ನು ಮ್ಯೂಸಿಯಂನಲ್ಲಿ ಇಡುವ ನೆಹರೂ ಅವರ ಚಿಂತನೆಯನ್ನು ಅಂದು ಅಂಬೇಡ್ಕರ್ ಬಲವಾಗಿ ವಿರೋಧಿಸಿದ್ದರು. ಅಂಬೇಡ್ಕರ್ ಪ್ರಕಾರ ಒಂದು ಸಂಸ್ಕೃತಿಯು ನೆಲದ ಸತ್ವವನ್ನು ಹೀರಿ ಬೆಳೆದಿದ್ದರೆ ಅದನ್ನು ನಾಶಮಾಡಲು ಯಾರಿಂದಲೂ ಎಂದಿಗೂ ಸಾಧ್ಯವಿಲ್ಲ ಎಂಬುದು ಅಂಬೇಡ್ಕರ್‌ರವರ ಬಹಳ ಗಟ್ಟಿಯಾದ ನಂಬಿಕೆಯಾಗಿತ್ತು. ಬುಕಟ್ಟು ಜನರ ಸಂಸ್ಕೃತಿಯು ಮಣ್ಣಿನ ಸೊಗಡನ್ನು ಉಳಿಸಿಕೊಂಡು ಬಂದ ಸಂಸ್ಕೃತಿ ಆಗಿರುವುದರಿಂದ ಈ ಜನರು ಕಾಲಕ್ರಮೇಣ ಕಾಡಿನಿಂದ ಹೊರ ಬಂದರೂ ಅವರ ಸಂಸ್ಕೃತಿ ನಾಶವಾಗುವುದಿಲ್ಲ ಮತ್ತು ಅವರು ಕಾಡಿನಿಂದ ಹೊರಬಂದು ನಾಗರಿಕ ಸಮಾಜದಲ್ಲಿ ಸೇರಿಕೊಳ್ಳುವುದು ಉತ್ತಮ ಎಂಬುದು ಅಂಬೇಡ್ಕರ್ ಬಹುಮುಖ್ಯವಾದವಾಗಿತ್ತು.

 ಬುಡಕಟ್ಟು ಜನಾಂಗಗಳಿಗೆ ಅಭಿವೃದ್ಧಿಯ ಸಾಧ್ಯತೆ ಕಡಿಮೆ ಇರುವುದಕ್ಕೆ ಕಾರಣ ಅವರು ಪ್ರತ್ಯೇಕತೆಯಲ್ಲಿಯೇ ಉಳಿಯಲು ಶತಮಾನಗಳಿಂದ ನಿರ್ಧರಿಸಿರುವುದು. ಅವರು ಕಾಡಿನಿಂದ ಹೊರಬಂದು ನಾಗರಿಕ ಪ್ರಪಂಚದಲ್ಲಿ ವಿಲೀನಗೊಂಡರೆ ಅವರಿಗೆ ಮುಂದೆ ಅಭಿವೃದ್ಧಿ ಸಮಸ್ಯೆ ಬರಲಾರದು ಮತ್ತು ಈ ಒಂದು ವಿಚಾರದಲ್ಲಿ ಬುಡಕಟ್ಟು ಜನರು ತಮ್ಮ ನಿಲುವನ್ನು ಬದಲಿಸಿಕೊಳ್ಳುವುದು ತೀರಾ ಅನಿವಾರ್ಯ ಮತ್ತು ಇದು ಅವರ ಮುಂದಿನ ಪೀಳಿಗೆಗೆ ಉತ್ತಮವಾದ ಕೊಡುಗೆ ಸಹ ಎಂಬುದು ಅಂದು ಅಂಬೇಡ್ಕರ್ ಅವರ ವಾದವಾಗಿತ್ತು. ಬುಡಕಟ್ಟು ಜನರು ತಮ್ಮ ಸಂಸ್ಕೃತಿಯ ಹೆಸರಿನಲ್ಲಿ ಕಾಡಿನಿಂದ ಹೊರ ಬರದೆ ಇದ್ದರೆ ಆಧುನಿಕ ಜಗತ್ತಿನಲ್ಲಿ ಹೊಂದಿಕೊಳ್ಳದಿದ್ದರೆ ತಮ್ಮನ್ನು ತಾವು ಬದಲಾವಣೆಗೆ ಒಡ್ಡಿಕೊಳ್ಳದಿದ್ದರೆ ಸಮಾಜದ ಮುಖ್ಯ ಆರ್ಥಿಕ ವಿಚಾರದಲ್ಲಿ ಅವರು ಭಾಗಿಯಾಗದಿದ್ದರೆ ಭವಿಷ್ಯದಲ್ಲಿ ಅವರ ಒಳಗೊಳ್ಳುವಿಕೆ ಬೆಳವಣಿಗೆ ಅಸಾಧ್ಯವೆಂಬುದು ಅಂಬೇಡ್ಕರವರ ಬಹಳ ಗಟ್ಟಿಯಾದ ನಂಬಿಕೆಯಾಗಿತ್ತು. ಬುಡಕಟ್ಟು ಜನರ ಆರ್ಥಿಕ ಸ್ಥಿತಿಗತಿ ಬೆಳವಣಿಗೆ ಕಾಣಬೇಕಾದರೆ ತಾವು ವಾಸಿಸುವ ಅರಣ್ಯ ಪರಿಸದಲ್ಲಿ ಎಂದಿಗೂ ಸಾಧ್ಯವಿಲ್ಲ ಎಂಬುದು ಅಂಬೇಡ್ಕರ್ ಅವರ ಕನಸಾಗಿತ್ತು. ಅಂಬೇಡ್ಕರ್ ಅವರ ಪ್ರಕಾರ ಸಮಸ್ಯೆ ಇರುವುದು ಅವರ ಭೌಗೋಳಿಕ ಪ್ರತ್ಯೇಕತೆಯಲ್ಲಿ ಮತ್ತು ತಾವು ಅಭಿವೃದ್ಧಿಪಥದಲ್ಲಿ ಪಾಲ್ಗೊಳ್ಳಬೇಕು, ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂಬ ಮೂಲ ಹಂಬಲವೇ ಬುಡಕಟ್ಟು ಜನರಲ್ಲಿ ಇಲ್ಲದಿರುವುದನ್ನು ಮಾನವಶಾಸ್ತ್ರಜ್ಞರಾಗಿ ಅಂಬೇಡ್ಕರ್ ಬಲು ಸೂಕ್ಷ್ಮವಾಗಿ ಅರ್ಥೈಸಿಕೊಂಡಿದ್ದಾರೆ ಎನ್ನಬಹುದು. ಈ ಎಲ್ಲಾ ಅಂಶಗಳಿಂದ ಬುಡಕಟ್ಟು ಜನರು ತ್ವರಿತವಾಗಿ ರಾಷ್ಟ್ರದ ಮುಖ್ಯವಾಹಿನಿಯ ಭಾಗವಾಗುವುದು ಮತ್ತು ಅಸ್ಪಶ್ಯರಂತೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ಮುಖ್ಯ ಎಂದು ಅಂಬೇಡ್ಕರ್ ಅಭಿಪ್ರಾಯವನ್ನು ಹೊಂದಿದ್ದರು.

Writer - ಡಾ. ಡಿ. ಸಿ. ನಂಜುಂಡ

contributor

Editor - ಡಾ. ಡಿ. ಸಿ. ನಂಜುಂಡ

contributor

Similar News

ಜಗದಗಲ
ಜಗ ದಗಲ