ಒಳಗಿನ ಬೆಂಕಿ ದೀಪವಾಗಿ ಬೆಳಗಲಿ....
‘ನಗ್ನ ದೀಪದ ನೆರಳು’ ಮಿಲನ್ ಎಂ. ಎಚ್. ಅವರ ಮೊತ್ತ ಮೊದಲ ಕವನಸಂಕಲನ. ಶೋಷಿತ ಬದುಕಿನ ಹಿನ್ನೆಲೆಯಿಂದ ಬಂದ ಯುವ ಕವಿಯೊಬ್ಬನ ಒಳಗಿನ ಬೆಂಕಿಯ ಕಾವು ಈ ಸಂಕಲನ. ಕೃತಿಯ ಕುರಿತಂತೆ ಹಿರಿಯ ಕವಯತ್ರಿ ಎಂ. ಆರ್. ಕಮಲ ಅವರು ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ ‘‘ವಾಸ್ತವತೆ ಸೃಷ್ಟಿಸುತ್ತಿರುವ ತಾರತಮ್ಯದ ಲೋಕಕ್ಕೆ ಪ್ರತಿಯಾಗಿ ತಮ್ಮ ಕನಸಿನ ಆದರ್ಶದ ಜಗತ್ತನ್ನು ಕವಿ ಕಟ್ಟುತ್ತಾರೆ. ಲೋಕದ ಅಸ್ತವ್ಯಸ್ತತೆಯಿಂದಲೇ ಇಲ್ಲಿನ ರೂಪಕಗಳು ಮೂಡುತ್ತಿರುವುದರಿಂದ ಕೆಲವೊಮ್ಮೆ ಅವು ನೇರವಾಗಿ ಎದೆಗೆ ಚುಚ್ಚುವಂತೆ ಗೋಚರಿಸುತ್ತದೆ. ಉದ್ವಿಗ್ನಗೊಂಡ ಕವಿಯೊಬ್ಬ ಅಂತಹ ಅಭಿವ್ಯಕ್ತಿಯ ವಿಧಾನವನ್ನು ಬೇಕೆಂದೇ ಆಯ್ಕೆ ಮಾಡಿಕೊಳ್ಳುವುದನ್ನು ನಾವು ಪರಂಪರೆಯಲ್ಲೂ ಕಾಣುತ್ತಲೇ ಬಂದಿದ್ದೇವೆ. ಕೊಳೆಗೇರಿಯಲ್ಲೊಂದು ಹೆಣ, ಅವಳಿಗೂ ಬಣ್ಣದ ಕನಸು ಬೀಳುತ್ತದೆ, ಬಂದಿಖಾನೆಯ ಬಲ್ಬು ಮುಂತಾದ ಕವಿತೆಗಳು ಬಹುಕಾಲ ನಮ್ಮನ್ನು ಕಾಡಬಲ್ಲವು....’’
ಸುಮಾರು ಐವತ್ತು ಕವಿತೆಗಳ ಗೊಂಚಲನ್ನು ಈ ಸಂಕಲನ ಹೊಂದಿದೆ. ‘‘ನನ್ನ ಬೆನ್ನ ಮೇಲೆ ಹಾದಿ ಮೂಡದೆ/ನನ್ನಪ್ಪ, ನನ್ನಜ್ಜ, ಮುತ್ತಜ್ಜ, ವಂಶಜರ ಮೇಲೆ/ಹರಿದ ಹಾದಿ ನನ್ನ ಮೇಲೂ ನಡೆದಿದೆ/ ಧಣಿಗಳ ಕಾಲ ಹೆಜ್ಜೆ ಸವರಿ....ಸವರಿ.../ಹಾದಿ ಮೂಡಿದೆ....’’ ಎಂದು ಬರೆಯುವ ಕವಿಯು, ತನ್ನ ಕವಿತೆ ಹಿಡಿಯ ಬಹುದಾದ ಹಾದಿಯನ್ನು ಮೊದಲೇ ಸೂಚ್ಯವಾಗಿ ಓದುಗರಿಗೆ ತೆರೆದಿಡುತ್ತಾರೆ. ‘‘ಎಣಿಕೆಯಲ್ಲಿ ನೋಂದಣಿಯಾಗದ ಶವ/ಕೊಳಚೆ ನೀರಿನಲ್ಲಿ ಕೂಳು ಕೊಂಡು,/ಎದೆಯ ಮೇಲೆ ಪಕ್ಕೆಲುಬುಗಳಲ್ಲಿ ಮಾಲೆ ನೋಡುತ್ತೇವೆ/ನೊಗ ಕಟ್ಟಿಕೊಂಡು ಉತ್ತುತ್ತಿದ್ದೇವೆ/ಕಬ್ಬಿಣ ಕಲ್ಲಿದ್ದಲು ಕಾರ್ಖಾನೆಗಳಲ್ಲಿ/ ತುಕ್ಕು ಹಿಡಿಯುತ್ತಿದ್ದೇವೆ....’’ ಒಳಗೊಳಗೆ ಸುಡುವ ಬೆಂಕಿಯನ್ನು ದೀಪವಾಗಿ ತನ್ನನ್ನು ಹೊರಗನ್ನು ಬೆಳಗಿಸುವ ಅಗತ್ಯವನ್ನು ಕವಿಗೆ ನಿರ್ದೇಶಿಸುತ್ತದೆ. ‘‘ನನ್ನ ಹದಿನೆಂಟನೇ ವರ್ಷಕ್ಕೆ ನಾನು ಸಿಗರೇಟು ಕಲಿತದ್ದು ಏಕಾಂತಕ್ಕಾಗಿ...’’ ಎನ್ನುವ ಕವಿಯ ಏಕಾಂತದಲ್ಲಿ ಸಿಗರೇಟಿನ ಹೊಗೆಯ ಘಾಟಿಗೆ ಉಸಿರುಗಟ್ಟಿದಂತೆ ಕವಿತೆ ಇಲ್ಲಿ ಏಗುವುದನ್ನು ಕಾಣುತ್ತೇವೆ. ಕವನ ಸಂಕಲನದ ಮುನ್ನುಡಿಯಲ್ಲಿ ಟಿ. ಎಸ್. ಗೊರವರ್ ಹೀಗೆ ಬರೆಯುತ್ತಾರೆ ‘‘...ಭಾಷೆ ಮತ್ತು ಒಬ್ಬ ಕವಿಗಿರಬೇಕಾದ ಸೂಕ್ಷ್ಮ ಸಂವೇದನೆ ಮಿಲನ್ ಅವರಲ್ಲಿದೆ. ಆದರೆ, ಕೆಲ ಪದ್ಯಗಳು ವಾಚ್ಯವೆನಿಸಿ ಗದ್ಯವಾಗಿಯೇ ಉಳಿದು ಸೋಲುತ್ತದೆ. ಘೋಷಣೆಗೂ ರೂಪಕಕ್ಕೂ ವ್ಯತ್ಯಾಸವಿದೆ. ಅನುಭವಗಳನ್ನು ಸಂಯಮದಿಂದ ಶೋಧಿಸುವಂತಾದರೆ ಮತ್ತು ಯಾವ ಭಾರವೂ ಇಲ್ಲದೆ ದಕ್ಕಿದ್ದನ್ನು ಸಹಜವಾಗಿ ಬರೆಯುತ್ತಾ ಹೋದರೆ ಇನ್ನಷ್ಟು ಉತ್ತಮ ಕವಿತೆಗಳನ್ನು ಇವರು ರಚಿಸಬಲ್ಲರು....’’
ಸಾಹಿತ್ಯವನ ಪ್ರಕಾಶನ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 100 ಪುಟಗಳ ಈ ಕೃತಿಯ ಮುಖಬೆಲೆ 80 ರೂಪಾಯಿ. ಆಸಕ್ತರು 97385 36203 ದೂರವಾಣಿಯನ್ನು ಸಂಪರ್ಕಿಸಬಹುದು.