ಗಾಂಧೀಜಿ ಎಂಬ ರೂಪಕ
2018 ಅಕ್ಟೋಬರ್ 2ರಿಂದ ಪ್ರಾರಂಭಗೊಂಡು 2019ರ ಅಕ್ಟೋಬರ್ 2ರ ವರೆಗಿನ ಗಾಂಧೀಜಿ ಮತ್ತು ಕಸ್ತೂರ್ಬಾರವರ 150ನೆಯ ಹುಟ್ಟು ಹಬ್ಬದ ವರ್ಷಾಚರಣೆ ಇದೀಗ ಮುಗಿಯುತ್ತಿದೆ. ಗಾಂಧೀಜಿ ಬರೇ ಭಾರತಕ್ಕೆ ಮಾತ್ರ ಸಲ್ಲುವ ವ್ಯಕ್ತಿಯಾಗಿರದೇ ಇಡಿಯ ವಿಶ್ವಕ್ಕೆ ಸಲ್ಲುವ ವ್ಯಕ್ತಿಯಾಗಿದ್ದಾರೆ. ಗಾಂಧೀಜಿಯ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಅವರ ಕುರಿತು ಬರೆದವರು ಬೇರೆ ಬೇರೆ ದೇಶಗಳಲ್ಲಿ ಸಿಗುತ್ತಾರೆ. ಅವರು ಒಮ್ಮೆಯೂ ಅಮೆರಿಕಕ್ಕೆ ಭೇಟಿ ನೀಡದಿದ್ದರೂ ಅವರ ನಿಲುವುಗಳಿಂದ ಪ್ರೇರಿತಗೊಂಡು ಅವರ ಕುರಿತಾದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಹಳಷ್ಟು ಜನರು ಅಮೆರಿಕದಲ್ಲಿದ್ದಾರೆ. ಭಾರತದಲ್ಲೂ ಅಷ್ಟೆ. ಅವರ ಕುರಿತಾಗಿ ಸಾಕಷ್ಟು ಪುಸ್ತಕಗಳು ಇಲ್ಲಿ ಭಾರತದಲ್ಲಿ ಪ್ರಕಟವಾಗಿವೆ. ಸಮಾಜ ಸೇವೆ ಗಾಗಿ ಕೇಂದ್ರಾಡಳಿತದ ತನ್ನ ಉನ್ನತ ಹುದ್ದೆಯನ್ನು ತೊರೆದ ರಜನಿ ಬಕ್ಷಿ ಎಂಬಾಕೆ ಬರೆದ ‘ಬಾಪುಕುಟಿ’ ಎಂಬ ಗಾಂಧೀಜಿ ಕುರಿತಾದ ಅಧ್ಯಯನ ಕೃತಿ ಕೂಡ ಈ ಸಾಲಿ ನಲ್ಲಿ ಸೇರುತ್ತದೆ. ಅಹಿಂಸಾ ಚಳವಳಿಯನ್ನು ತನ್ನ ದೇಶದ ಸ್ವಾತಂತ್ರ ಹೋರಾಟದ ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಂಡ ನೆನಪಿನಲ್ಲಿ ಗಾಂಧೀಜಿಯ ಜನ್ಮ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ವಿಶ್ವ ಸಂಸ್ಥೆ ಘೋಷಣೆ ಮಾಡಿದೆ.
ಲಂಡನ್‌ನಲ್ಲಿ ಕಾನೂನು ವ್ಯಾಸಂಗ ಮಾಡಿದ ಗಾಂಧೀಜಿ ಸ್ವಂತ ನಾಡಾದ ಭಾರತದ ರಾಜ ಕೋಟದಲ್ಲಿ ವಕೀಲಿ ವೃತ್ತಿಯನ್ನಾರಂಭಿಸಿದರೂ ಅವರಿಗೆ ಸಾಕಷ್ಟು ಯಶಸ್ಸು ಸಿಗಲಿಲ್ಲ. ಅಂದಿನ ದಿನಗಳಲ್ಲಿ ಆಫ್ರಿಕಾ ದಲ್ಲಿ ನೆಲೆಸಿದ್ದ ಭಾರತದ ಮೂಲದ ಉದ್ಯಮಪತಿ ಅಬ್ದುಲ್ಲಾ ಶೇಕ್ ಎಂಬವರ ಕಾನೂನು ಮೊಕದ್ದಮೆ ಗಾಗಿ ಗಾಂಧೀಜಿಯವರಿಗೆ ಆಫ್ರಿಕಾಕ್ಕೆ ಹೋಗಬೇಕಾಗಿ ಬಂತು. ಅಲ್ಲಿನ ರೈಲು ಪ್ರಯಾಣದ ವೇಳೆ ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಬಿಳಿಯನೊಬ್ಬ ನಿರ್ದಾಕ್ಷಿಣ್ಯವಾಗಿ ಮೂರನೆಯ ದರ್ಜೆ ಬೋಗಿಯಲ್ಲಿ ಪಯಣಿ ಸಲು ಗಾಂಧೀಜಿಗೆ ಹೇಳಿದಾಗ ಅದಕ್ಕೆ ಒಪ್ಪದ ಗಾಂಧೀಜಿ (ಆಗ ಅವರು ಮೋಹನದಾಸ ಕರಮ ಚಂದ ಗಾಂಧಿ) ಆ ಬಿಳಿಯನಿಂದ ಅನಾಮತ್ತಾಗಿ ಬೋಗಿಯಿಂದ ಹೊರಗೆ ತಳ್ಳಲ್ಪಟ್ಟರು. ಇದು ನಡೆದುದು ಮೆರಿಟ್ಸ ಬರ್ಗ್‌ನಲ್ಲಿ .
ಈ ಘಟನೆಯೇ ಮುಂದೆ ಭಾರತದ ಸ್ವಾತಂತ್ರ ಹೋರಾ ಟಕ್ಕೆ ಕಾರಣವಾಯಿತು. ಆಗಲೇ ಗಾಂಧೀಜಿಯವರು ದ. ಆಫ್ರಿಕಾ ದಲ್ಲಿದ್ದ ಭಾರತೀಯರನ್ನು ಈ ನಿಟ್ಟಿನಲ್ಲಿ ಜಾಗೃತ ಗೊಳಿಸಲು ಸಜ್ಜಾದರು. ಇದರ ಸಲುವಾಗಿ ‘‘ನೆಟಾಲ್ ಇಂಡಿಯನ್ ಕಾಂಗ್ರೆಸ್’’ ಎಂಬ ಸಂಸ್ಥೆಯನ್ನು ಹುಟ್ಟು ಹಾಕುವುದರ ಜತೆ ‘ಇಂಡಿಯನ್ ಒಪೀನಿಯನ್’ ಎಂಬ ಪತ್ರಿಕೆಯನ್ನೂ ಶುರು ಮಾಡಿ ಭಾರತೀಯರನ್ನು ಹೋರಾಟಕ್ಕೆ ಸಜ್ಜುಗೊಳಿಸತೊಡಗಿದರು. ಈ ಮಧ್ಯೆ ಗಾಂಧೀಜಿಯ ಹೋರಾಟ ಗಳಲ್ಲಿ ಅವರಿಗೆ ಜೊತೆಯಾಗಿದ್ದ ಹೆನ್ರಿ ಪೋಲಕ್ ಎಂಬ ಯುವಕ ಗಾಂಧೀಜಿಗೆ ನೀಡಿದ ಲೇಖಕ, ಚಿಂತಕ ಜಾನ್ ರಸ್ಕಿನ್ ಬರೆದ ಪುಸ್ತಕ ‘ಅನ್ ಟು ದ ಲಾಸ್ಟ್’ (Un to the last) ಓದಿದ ಮೇಲೆ ಗಾಂಧೀಜಿಗೆ ಅದರಿಂದ ಒಂದು ಹೊಸ ಹೊಳಪು ದೊರಕಿತು. ಅವರ ಈ ಪುಸ್ತಕದ ಓದಿನಿಂದ ಮುಂದಿನ ಚಿಂತನೆಗಳಿಗೆ ಹೊಸ ಅರ್ಥ ಬರುವಂತಾಯಿತು. ಅದನ್ನು ಅವರು ಅನುವಾದಿಸಿ ಅದಕ್ಕ್ಕೆ ಸರ್ವೋದಯ ಎಂಬ ಶೀರ್ಷಿಕೆ ನೀಡಿದರು. ನಂತರ ‘‘ಹಿಂದ್ ಸ್ವರಾಜ್’’ ಎಂಬ ಕೃತಿಯನ್ನೂ ಅವರು ಬರೆದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂದು ಅವರು ಪ್ರತಿಪಾದಿಸುತ್ತಾ ಬಂದರು. ಹಾಗೆಯೇ ಡರ್ಬಾನಿನ 14 ಮೈಲಿಗಳ ಅಂತರದಲ್ಲಿ ಫೀನಿಕ್ಸ್ ಎಂಬ ಹೆಸರಿನ ಪ್ರಯೋಗಾತ್ಮಕ ಆಶ್ರಮ ಶಾಲೆಯನ್ನು ಸ್ಥಾಪಿಸಿ ಗುಜರಾತಿ ಕವಿ ನರಸಿ ಮೆಹತಾ ಬರೆದ ಕವಿತೆ ‘ವೈಷ್ಣವ ಜನತೋ’ ಇದನ್ನು ಆಶ್ರಮದ ಪ್ರಾರ್ಥನಾ ಗೀತೆಯನ್ನಾಗಿ ಮಾಡಿದರು.
ಗಾಂಧೀಜಿಯವರ ಕಾರ್ಯಾಚರಣೆಯ ಮುಂದಿನ ಹಂತ ಭಾರತದಲ್ಲಿ:
1915ರಲ್ಲಿ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧಿ ತನ್ನ ಹೋರಾಟದ ಅಸ್ತ್ರಗಳನ್ನಾಗಿ 18 ರಚನಾತ್ಮಕ ಅಂಶಗಳನ್ನು ಮುಂದಿಟ್ಟು ಕೊಳ್ಳುತ್ತಾರೆ. ಕೋಮುಸೌಹಾರ್ದ, ಮದ್ಯಪಾನ ನಿಷೇಧ, ಅಸ್ಪಶ್ಯತಾ ನಿವಾರಣೆ, ಮಹಿಳಾ ಸಬಲೀಕರಣ, ಪರಿಸರ ನೈರ್ಮಲ್ಯ, ಮುಂತಾದವುಗಳು ಅವುಗಳಲ್ಲಿ ಕೆಲವು. ಈ ಅಂಶಗಳನ್ನು ಸ್ವತಃ ತನ್ನ ಜೀವನದಲ್ಲಿ ಪಾಲಿಸಿ ಅವರು ಇತರರಿಗೆ ಮಾದರಿಯಾಗುತ್ತಾರೆ. ಅಸ್ಪಶ್ಯತಾ ನಿವಾರಣೆಗಾಗಿ ತಾನೇ ಸ್ವತಃ ಒಬ್ಬ ಅಸ್ಪಶ್ಯ ಬಾಲಕಿಯನ್ನು ದತ್ತು ಪಡೆದು ಆಕೆಗೆ ಲಕ್ಷ್ಮೀ ಎಂದು ನಾಮಕರಣ ಮಾಡಿ ಆಕೆಯ ಪಾಲನೆ ಪೋಷಣೆ ಮಾಡುತ್ತಾರೆ. ಇನ್ನು ಪರಿಸರ ನೈರ್ಮಲ್ಯದ ವಿಷಯಕ್ಕೆ ಬರುವಾಗ ರೋನಾಲ್ಡ್ ಡಂಕನ್ ಎಂಬ ಯುವಕ ಗಾಂಧೀಜಿಯನ್ನು ನೋಡಲು ವಾರ್ಧಾ ಆಶ್ರಮಕ್ಕೆ ಬಂದ ಸಂದರ್ಭ ನೆನಪಾಗುತ್ತದೆ. ತನ್ನಲ್ಲಿ ಬಂದ ರೋನಾಲ್ಡ್‌ಗೆ ತನ್ನ ಹಳ್ಳಿಯನ್ನು ತೋರಿಸಲು ಗಾಂಧೀಜಿ ಆತನೊಡನೆ ಆಶ್ರಮದಿಂದ ಹೊರಡುತ್ತಾರೆ. ಆಗ ಅವನಿಗೆ ಕಾಣಿಸಿದ್ದು ಏನು? ಅರೆಬರೆ ಬಟ್ಟೆ ತೊಟ್ಟ ಬಡತನ ತಮ್ಮ ಮುಖಗಳಲ್ಲಿ ಮೆತ್ತಿಕೊಂಡಂತಿರುವ ಬಡಕಲು ದೇಹಗಳ ಜನರು. ತಮ್ಮ ಗುಡಿಸಲುಗಳ ಆಸುಪಾಸಿನಲ್ಲಿಯೇ ಮಲಮೂತ್ರ ವಿರ್ಸಜನೆ ಮಾಡುತ್ತಿದ್ದ ಅವರನ್ನು ಆಕ್ಷೇಪಿಸದೆ ಗಾಂಧೀಜಿಯವರು ಅವರು ವಿಸರ್ಜಿಸಿದ ಮಲವನ್ನು ತಾನೇ ಸ್ವತಃ ಕೈಗಳಿಂದ ಬದಿಗೆ ತಳ್ಳಿ ಅದರ ಮೇಲೆ ಮಣ್ಣುಮುಚ್ಚ್ಚುತ್ತಾರೆ. ಅದನ್ನು ನೋಡಿದ ರೋನಾಲ್ಡ್ ಕೂಡ ಗಾಂಧೀಜಿಯವರನ್ನು ಅನುಸರಿಸುತ್ತಾನೆ. ಕ್ರಮೇಣ ಹಳ್ಳಿಗರೂ ಇವರಿಬ್ಬರನ್ನೂ ಅನುಸರಿಸುತ್ತಾರೆ. ಹೀಗೆ ಬೋಧನೆಯಿಂದ ಮಾಡಲಾಗದ್ದನ್ನು ತಾನೇ ಸ್ವತಃ ಮಾಡಿ ಗಾಂಧೀಜಿ ಇತರರಿಗೆ ಮಾದರಿಯಾಗುತ್ತಾರೆ. ತನ್ನ ವಿಶ್ವವಿದ್ಯಾನಿಲಯದಲ್ಲಿ ಕಲಿತ ವಿಷಯಕ್ಕಿಂತ ಗಾಂಧೀಜಿ ಒಡನಾಟದಿಂದ ತಾನು ಹೆಚ್ಚಿನದನ್ನು ಕಲಿತು ಕೊಂಡಿದ್ದೇನೆ ಎಂದು ಆನಂತರ ರೋನಾಲ್ಡ್ ಹೇಳಿಕೊಂಡಿದ್ದಾನೆ. ತನ್ನ ರಚನಾತ್ಮಕ ಕಾರ್ಯಕ್ರಮಗಳಲ್ಲಿ ಒಂದಾದ ಕೋಮು ಸೌಹಾರ್ದದ ಬಗ್ಗೆ ಗಾಂಧೀಜಿಯವರು ಅಚಲವಾದ ನಿಲುವನ್ನು ಹೊಂದಿದ್ದರು. ಅದು 1929ರ ಲಾಹೋರ್ ಕಾಂಗ್ರೆಸ್ ಅಧಿವೇಶನದ ಸಮಯ. ಅಧಿವೇಶನದ ಅಧ್ಯಕ್ಷತೆಯನ್ನು ಜವಾಹರಲಾಲ್ ನೆಹರೂರವರೇ ವಹಿಸಿಕೊಳ್ಳಬೇಕು ಎಂಬ ಸೂಚನೆಗಳು ಬಂದಿದ್ದರೂ ಅವನ್ನೆಲ್ಲ ಬದಿಗೆ ತಳ್ಳಿ ಗಾಂಧೀಜಿಯವರು ಆ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸುವ ಕಾರ್ಯಭಾರವನ್ನು ಮುಸ್ಲಿಂ ಸಮುದಾಯದ ಎ.ಎಂ. ಅನ್ಸಾರಿಯವರಿಗೆ ವಹಿಸಿ ನೆಹರೂರವರನ್ನು ಕಾರ್ಯದರ್ಶಿಯನ್ನಾಗಿ ಮಾಡುತ್ತಾರೆ.
ಸ್ವಾತಂತ್ರ ಚಳವಳಿಯ ಅಂಗವಾಗಿ ಗಾಂಧೀಜಿ ದೇಶದ ಉದ್ದಗಲಕ್ಕೂ ಸಂಚರಿಸಿ ಬಡವ ಬಲ್ಲಿದರೆನ್ನದೆ ಎಲ್ಲರನ್ನೂ ಸಮ್ಮೋಹನ ಗೊಳಿಸುತ್ತಾರೆ. ಗಾಂಧೀಜಿ ಹೋದ ಕಡೆಯಲ್ಲೆಲ್ಲ ಜನರು ಗಾಂಧೀಜಿಯನ್ನು ನೋಡಲು ತಂಡೋಪತಂಡವಾಗಿ ಜಮಾಯಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗೂ ಅವರು ಭೇಟಿ ಕೊಟ್ಟ ಸಂದರ್ಭವನ್ನು ಇಲ್ಲಿ ದಾಖಲಿಸಬೇಕು. ಇದರ ವಿವರಗಳನ್ನು ಹಿರಿಯ ಪತ್ರಕರ್ತ ಪ್ರಸಾರಭಾರತಿಯ ಮಾಜಿ ಅಧ್ಯಕ್ಷ ದಿವಂಗತ ಎಂ.ವಿ. ಕಾಮತರು ತಾನು ಬರೆದ ‘‘ದ ಕ್ಲೋಸ್ ಎನ್‌ಕೌಂಟರ್ಸ್’’ (the close encounters)
ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಗಾಂಧೀಜಿಯವರ ಕರಾವಳಿ ಭೇಟಿಯ ಹೊಣೆಯನ್ನು ಹೊತ್ತವರು ಎಂ.ವಿ. ಕಾಮತರ ತಂದೆ ಉಡುಪಿಯ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ವಿಠಲ ಕಾಮತ್ ಅವರು. ಅದು ಕಳೆದ ಶತಮಾನದ ಮೂವತ್ತರ ದಶಕದ ಮಧ್ಯಭಾಗ. ಮಂಗಳೂರು ಕಾರ್ಯಕ್ರಮ ಮುಗಿಸಿದ ಗಾಂಧೀಜಿ ಉಡುಪಿ ಕಡೆ ಹೊರಡುತ್ತಾರೆ. ಆಗ ಸಿಗುವ ಮೂರು ನಾಲ್ಕು ನದಿಗಳನ್ನು ದಾಟಿ ಉಡುಪಿಗೆ ಬರಬೇಕಿತ್ತು. ಆಗೆಲ್ಲ ನದಿಗಳಿಗೆ ಸೇತುವೆ ಇಲ್ಲದ ಕಾರಣ ಪಯಣ ದೋಣಿಯ ಮೂಲಕ. ಗಾಂಧೀಜಿ ಪಯಣಿಸುವ ಕಾರನ್ನು ಜಂಗಲ್ ಮೂಲಕ ತರುವ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯವಾಗಿ ಭಾರವಾದ ಜಂಗಲ್‌ಗೆ ಹುಟ್ಟು ಹಾಕಿ ದಾಟಿಸುವ ಕೆಲಸ ಕಷ್ಟಕರವಾದುದರಿಂದ ಹುಟ್ಟು ಹಾಕುವ ಅಂಬಿಗರು ಒಂದಿಷ್ಟು ಗುಂಡು ಹೊಟ್ಟೆಗೆ ಇಳಿಸುವುದು ಸಾಮಾನ್ಯ. ಆದರೆ ಅಂದು ಮಾತ್ರ ಗಾಂಧೀಜಿ ಮೇಲಣ ಗೌರವದಿಂದ ಮದ್ಯಪಾನ ನಿಷೇಧದ ಅವರ ತತ್ವಾದರ್ಶನದಂತೆ ಒಂದು ತೊಟ್ಟು ಮದ್ಯ ಅವರ ಗಂಟಲಲ್ಲಿ ಇಳಿದಿರಲಿಲ್ಲ. ಗಾಂಧೀಜಿಯ ಕಾರನ್ನು ಜಂಗಲ್ ಮೂಲಕ ರವಾನಿಸುವ ಇಂಥ ಅವಕಾಶದಿಂದ ಅವರು ಪುಳಕಿತರಾಗಿದ್ದರು. ಆಗ ಗಾಂಧೀಜಿ ಈ ಒಂದು ಅವಕಾಶಕ್ಕಾಗಿ ಕಾದುಕೊಂಡು ಕೂತಿದ್ದವರ ಹಾಗೆ ಅಂಬಿಗರಿಗೆ ಮದ್ಯಪಾನದ ಕೆಡುಕುಗಳನ್ನೆಲ್ಲ ಹೇಳಿ ಮದ್ಯಪಾನ ಸೇವನೆ ಸಂಪೂರ್ಣವಾಗಿ ತ್ಯಜಿಸಿದರೆ ಮಾತ್ರ ಜಂಗಲ್‌ಗೆ ಹುಟ್ಟು ಹಾಕಬಹುದೆಂದು ತಿಳಿಸಿದಾಗ ಗಾಂಧೀಜಿಯವರ ಸಾಮೀಪ್ಯ ತಮ್ಮ ಜೀವಮಾನದ ಒಂದು ಅಪರೂಪದ ಸಂದರ್ಭ ಎಂದು ಭಾವಿಸಿದ ಅವರು ಮುಂದೆ ತಾವೆಂದೂ ಮದ್ಯ ಸೇವಿಸುವುದಿಲ್ಲವೆಂದು ಗಾಂಧೀಜಿಗೆ ಮಾತು ಕೊಟ್ಟರು ಮತ್ತು ಹಾಗೆ ನಡೆದುಕೊಂಡರು ಕೂಡಾ. ಇದು ಗಾಂಧೀಜಿಯ ಒಂದು ವಿಕ್ರಮ. ಗಾಂಧೀಜಿ ಉಡುಪಿ ತಲುಪಿದ್ದು ನಿಗದಿತ ಸಮಯಕ್ಕಿಂತ ನಾಲ್ಕು ಗಂಟೆ ತಡವಾಗಿ, ಆದರೂ ಗಾಂಧೀಜಿಯನ್ನು ನೋಡುವ ತವಕದಿಂದ ದಾರಿಯುದ್ದಕ್ಕೂ ಇಕ್ಕೆಲಗಳಲ್ಲೂ ಆಸುಪಾಸು ಹಳ್ಳಿಗಳಿಂದ ಸಾವಿರಾರು ಜನ ಕಾದು ನಿಂತಿದ್ದರು. ಜನರ ವಂದನೆಗಳನ್ನು ಸ್ವೀಕರಿಸುತ್ತಾ ಗಾಂಧೀಜಿ ಸಾಗುತ್ತಿದ್ದಂತೆ ಜನರ ಜಯಕಾರ ಮುಗಿಲು ಮುಟ್ಟಿತು.
ಉಡುಪಿ ತಲುಪಿದ ಗಾಂಧಿ ನೆರೆದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಮೆಲೆ ವಿಠಲ ಕಾಮತರು ಗಾಂಧೀಜಿಯವರ ಸ್ವಾತಂತ್ರ ನಿಧಿಗೆ ಇಷ್ಟಪಟ್ಟವರು ದೇಣಿಗೆ ನೀಡ ಬಹುದೆಂದು ಘೋಷಿಸಿದರು. ತಕ್ಷಣವೇ ಜನರು ಮುಗಿಬಿದ್ದು ತಾವು ಉಳಿಸಿದ ಅಷ್ಟಿಷ್ಟು ಹಣ ಮತ್ತು ಬಂಗಾರದ ಒಡವೆಗಳನ್ನು ಗಾಂಧೀಜಿಗೆ ಅರ್ಪಿಸಿ ಧನ್ಯತಾಭಾವ ತಾಳಿದರು. ಅಲ್ಲೇ ನಿಂತಿದ್ದ ಅಚ್ಚ ಬಿಳಿಯ ಫ್ರಾಕ್ ತೊಟ್ಟ ಬಾಲೆಯೊಬ್ಬಳು ತನ್ನ ಕೈಗಳಲ್ಲಿದ್ದ ಬಂಗಾರದ ಬಳೆಗಳನ್ನು ನಿಧಿಗೆ ನೀಡಿದಳು. ಆಗ ಗಾಂಧೀಜಿಯ ದೃಷ್ಟಿ ಆಕೆಯ ಕೊರಳಲ್ಲಿದ್ದ ಬಂಗಾರದ ಸರದೆಡೆ ಹೋಯಿತು. ಅದನ್ನು ಕೊಡುವಂತೆ ಗಾಂಧೀಜಿ ಸನ್ನೆ ಮಾಡಿದಾಗ ಹುಡುಗಿ ಯಾವುದೋ ಸಮ್ಮೋಹನಕ್ಕೊಳಗಾದವಳಂತೆ ಕೊರಳಲ್ಲಿದ್ದ ಸರ ಮತ್ತು ಕಿವಿಯ ಒಂಟಿಗಳನ್ನು ಕೊಟ್ಟು ಬಿಟ್ಟಳು.
25 ಫೆಬ್ರವರಿ 1934ರಲ್ಲಿ ಮಹಾತ್ಮಾ ಗಾಂಧಿ ಉಡುಪಿಗೆ ಭೇಟಿ ನೀಡಿದ ಕ್ಷಣ...
ಗಾಂಧೀಜಿ ಆಗ ಆ ಬಾಲೆಯ ಬೆನ್ನ ಮೇಲೆ ಕೈ ಆಡಿಸುತ್ತಾ ಹೇಳಿದರು. ‘‘ನೋಡು ಮಗು ನಮ್ಮದು ಬಡದೇಶ. ಹೆಚ್ಚಿನವರಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಿರುವಾಗ ನೀನು ಇಷ್ಟು ಬೆಲೆ ಬಾಳುವ ಆಭರಣ ಧರಿಸುವುದು ತಪ್ಪಲ್ಲವೇ, ನನಗೆ ಮಾತು ಕೊಡು. ನೀನು ಇನ್ನು ಮುಂದೆ ಯಾವುದೇ ಸಂದರ್ಭದಲ್ಲಿ ಚಿನ್ನ ಧರಿಸಬಾರದು, ಆಯಿತೆ?’’ ಹುಡುಗಿ ಹಿಂದೆ ಮುಂದೆ ನೋಡದೆ ತಲೆಯಾಡಿಸಿದಳು. ಮತ್ತೆ ಮಾತು ಕೊಟ್ಟಂತೆ ಜೀವಮಾನದಲ್ಲಿ ಎಂದೂ ಚಿನ್ನ ಧರಿಸಲೇ ಇಲ್ಲ. ಆಕೆ ಮತ್ತೆ ಯಾರೂ ಅಲ್ಲ. ದೇಶಕ್ಕೆ ಐದಾರು ಸ್ವಾತಂತ್ರ ಹೋರಾಟಗಾರರನ್ನು ನೀಡಿದ ಉಡುಪಿಯ ಬಳಿಯ ಪ್ರಸಿದ್ಧ ಕಟಪಾಡಿ ನಾಯಕ್ ಕುಟುಂಬದ ಕುಡಿ. ಅದೇ ಹುಡುಗಿ ದೊಡ್ಡವಳಾಗಿ ವೈದ್ಯಕೀಯ ಕುರಿತು ಪಾಂಡಿಚೇರಿ ಸಹಿತ ಹಲವೆಡೆ ಸೇವೆ ಸಲ್ಲಿಸಿ ಖ್ಯಾತ ಸ್ತ್ರೀರೋಗ ತಜ್ಞೆಯೆಂದು ಹೆಸರುಗಳಿಸಿದ ನಿರುಪಮಾ ನಾಯಕ್. ಅವಿವಾಹಿತಳಾಗಿಯೇ ಉಳಿದ ಆಕೆ ಕೆಲವೇ ವರ್ಷಗಳ ಹಿಂದೆ ತನ್ನ ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನಿಧನರಾದರು.
ಮತ್ತೆ ಗಾಂಧೀಜಿ ಕೂಡಿಸಿದ ಸ್ವಾತಂತ್ರ ನಿಧಿಗಾಗಿ ಜನರು ನೀಡಿದ ಬಂಗಾರದ ಒಡವೆಗಳ ಕತೆ ಏನಾಯಿತು? ಗಾಂಧೀಜಿ ಬಂಗಾರದ ಒಡವೆಗಳ ಹರಾಜಿಗೆ ನಿಂತಾಗ ಜನ ಮುಗಿಬಿದ್ದು ಹರಾಜಿನಲ್ಲಿ ಒಡವೆಗಳನ್ನು ಖರೀದಿಸಿದರು. ಆಗ ಗಾಂಧೀಜಿ ವಿಠಲ ಕಾಮತರಿಗೆ ಸವಾಲೊಡ್ಡಿದರು.‘‘ನೀವು ಇನ್ನೊಮ್ಮೆ ಹರಾಜು ಕೂಗಿ ನಿಮ್ಮ ಹರಾಜಿಗೆ ಜನರು ಇನ್ನೂ ಜಾಸ್ತಿ ಸ್ಪಂದಿಸಬಹುದು’’. ಕಾಮತರು ಹರಾಜಿಗೆ ನಿಂತರು. ಜನರ ಈಗಿನ ಪ್ರತಿಕ್ರಿಯೆ ಇನ್ನೂ ಜಾಸ್ತಿ ಉತ್ಸಾಹದಾಯಕವಾಗಿತ್ತು. ಜನರು ಕಾಮತರ ಮೇಲೆ ಇರಿಸಿದ ಅಭಿಮಾನ ನೋಡಿ ಗಾಂಧೀಜಿಯವರ ಮನಸ್ಸು ತುಂಬಿತು. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಗೆದ್ದದ್ದು ನೀವೇ ಕಾಮತರೆ ಎಂದು ಗಾಂಧೀಜಿ ಮುಗುಳ್ನಕ್ಕರು.