ಅನ್ನಪೂರ್ಣ ಯೋಜನೆಗೆ ಸರಕಾರದಿಂದ ಹೆಚ್ಚಿನ ಸಹಕಾರ: ಸಚಿವ ಸುರೇಶ್‌ ಕುಮಾರ್

Update: 2019-09-28 16:56 GMT

ಕಲಬುರಗಿ, ಸೆ.28: ಇಲ್ಲಿನ ಸರಕಾರಿ ಶಾಲೆಯ 10 ಸಾವಿರ ಮಕ್ಕಳಿಗೆ ಬೆಳಗಿನ ಉಪಾಹಾರ ನೀಡುವ ಅನ್ನಪೂರ್ಣ ಬೆಳಗಿನ ಉಪಾಹಾರ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಅದಮ್ಯ ಚೇತನ ಸಂಸ್ಥೆಯ ಜೊತೆಗೂಡಿ ಮುದ್ದೇನಹಳ್ಳಿಯ ಶ್ರೀಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಕಲಬುರಗಿಯ 10 ಸಾವಿರ ಸರಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಅನ್ನಪೂರ್ಣ ಯೋಜನೆಯೊಂದಿಗೆ ಸರಕಾರ ಕೈಜೋಡಿಸಲಿದೆ ಎಂದು ತಿಳಿಸಿದರು.

ಮಕ್ಕಳಿಗೆ ಬೆಳಗಿನ ಪೌಷ್ಠಿಕ ಆಹಾರವನ್ನು ನೀಡಬೇಕು ಎನ್ನುವ ಉದ್ದೇಶದಿಂದ ಪ್ರಾರಂಭವಾಗಿರುವ ಶ್ರೀಸತ್ಯ ಸಾಯಿ ಟ್ರಸ್ಟಿನ ಈ ಕಾರ್ಯಕ್ರಮ ಬಹಳ ಅಗತ್ಯವಾದದ್ದು. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಕರೆಯೋಲೆಯ ಮೇಲೆ ಇಂತಹ ಒಳ್ಳೆಯ ಕಾರ್ಯಕ್ರದಲ್ಲಿ ಭಾಗಿಯಾಗಿದ್ಧೇನೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಗಿನ ಉಪಾಹಾರ ಬಹಳ ಪ್ರಮುಖವಾದ ಆಹಾರ. ಆದರೆ, ಬಹಳ ಜನರಿಗೆ ಅದು ಸಿಗುವುದಿಲ್ಲ. ಮಕ್ಕಳು ರಾತ್ರಿ ಸರಿಯಾಗಿ ತಿಂದಿರುತ್ತಾರೋ ಇಲ್ಲವೋ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹೇಗೆ ಪಾಠ ಕಲಿಯುವುದಕ್ಕೆ ಸಾಧ್ಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು ಎನ್ನುವ ಸದುದ್ದೇಶದಿಂದ ಬೆಂಗಳೂರಿನ ಕೆಂಗೇರಿಯಲ್ಲಿ ಬೆರಳೆಣಿಕೆಯಷ್ಟು ಜನರಿಂದ ಪ್ರಾರಂಭವಾಗಿರುವ ಈ ಕಾರ್ಯಕ್ರಮ ಇಂದು 15 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 2 ಲಕ್ಷ ಮಕ್ಕಳನ್ನು ತಲುಪಿದೆ ಎಂದು ಅವರು ಹೇಳಿದರು.

ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳೂ ಈ ಯೋಜನೆಯ ಜೊತೆ ಹೇಗೆ ಜೊತೆಗೂಡಿವೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಈ ಕಾರ್ಯಕ್ರಮದ ಜೊತೆಗೆ ನಮ್ಮ ರಾಜ್ಯ ಸರಕಾರ ಯಾವ ರೀತಿಯಲ್ಲಿ ಪಾಲುದಾರರಾಗಬಹುದು ಎನ್ನುವುದರ ಬಗ್ಗೆ ಚಿಂತನೆ ನಡೆಸಲಾಗುವುದು ಹಾಗೂ ಈ ಕಾರ್ಯಕ್ರಮಕ್ಕೆ ರಾಜ್ಯ ಸರಕಾರದ ವತಿಯಿಂದ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಲಬುರ್ಗಿ ಸಂಸದ ಉಮೇಶ್ ಜಾಧವ್, ಮಧುಸೂದನ್ ಸಾಯಿ ಸ್ವಾಮೀಜಿ, ಶಾಸಕರಾದ ಬಸವರಾಜ್ ಮತ್ತಿಮೂಡ್, ಸುಭಾಷ್ ಬಿರಾದರ್, ವಿಧಾನಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಕಲಬುರ್ಗಿ ಅದಮ್ಯ ಚೇತನದ ಟ್ರಸ್ಟಿಗಳಾದ ದೇವ್‌ಸುಧಾಕರ್ ಪಾಟೀಲ್, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟಿನ ಕುಲಪತಿ ಬಿ.ಎಂ.ನರಸಿಂಹಮೂರ್ತಿ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News